SUBSCRIBE

ದ ಪಾಲಿಟಿಕ್

ಪಾದಯಾತ್ರೆಯ ಹಿಂದೆ ಕುರ್ಚಿ ರಾಜಕಾರಣ ಇದೆಯೇ?

ಅದು ಜುಲೈ ೨೫, ೨೦೨೩ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೆಡ್ಡಿ ಸಹೋದರರ ಪಂಥಾಹ್ವಾನ ಸ್ವೀಕರಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಈ ಪಾದಯಾತ್ರೆಗೆ ರೆಡ್ಡಿ ಸಹೋದರರು ಅಲ್ಲಾಡಿ ಹೋಗಿದರು. ಅವರು ಜೈಲಿಗೆ ಹೋಗಲು ಈ ಯಾತ್ರೆ ಪೀಠಿಕೆ ಹಾಕಿತ್ತು ಮತ್ತು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು, ಸಿಎಂ ಕುರ್ಚಿ ಮೇಲೆ ಕೂತರು. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅದೇ ದಾರಿ ತುಳಿದಿದ್ದಾರೆ. ಆಗ ಮತ್ತು ಈಗ ಕಾಲ, ಸಮಯ, ಸಂದರ್ಭ, ವಾತಾವರಣ, ಬೀಸುತ್ತಿರುವ ರಾಜಕೀಯ ಗಾಳಿಯ ದಿಕ್ಕು ಬೇರೆ ಬೇರೆ ಇದೆ. ಇದನ್ನು ವಿಜಯೇಂದ್ರ ಸರಿಯಾಗಿ ಗ್ರಹಿಸಿಲ್ಲ ಅನಿಸುತ್ತಿದೆ.

ಮೊದಲನೆಯದಾಗಿ, ಅಕ್ರಮವಾಗಿ ಗಣಿ ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಬಾಚಿದ ರೆಡ್ಡಿ ಸಹೋದರರ ವಿರುದ್ಧ ಸಮಾಜದಲ್ಲಿ ಜನಾಕ್ರೋಶ ಒಳಗೊಳಗೆ ಕುದಿಯುತ್ತಿತ್ತು. ಎರಡನೆಯದಾಗಿ, ಜನಾರ್ಧನ ರೆಡ್ಡಿಯವರು ಸಿದ್ದರಾಮಯ್ಯನವರಿಗೆ ಪಂಥಾಹ್ವಾನ ನೀಡಿದರು. ಮೂರನೆಯದಾಗಿ ರಾಜಕೀಯ ಗಾಳಿ ಬಿಜೆಪಿಯ ವಿರುದ್ಧ ದಿಕ್ಕಿನೆಡೆಗೆ ಬೀಸುತ್ತಿತ್ತು. ನಾಲ್ಕನೆಯದಾಗಿ, ಸಿದ್ದರಾಮಯ್ಯ ಮಾಸ್‌ ಲೀಡರ್‌ ಆಗಿದ್ದರು. ಐದನೆಯದಾಗಿ, ಬಹಳ ಮುಖ್ಯವಾಗಿ ಅಂದಿನ ಕಾಂಗ್ರೆಸ್‌ ಪಕ್ಷ ಸಂಘಟಿತವಾಗಿತ್ತು.

ಈಗ ಮೊದಲನೆಯದಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ  ಬಿ. ನಾಗೇಂದ್ರ ಅವರ ವಿರುದ್ಧ ಜನರಲ್ಲಿ ಮುಖ್ಯವಾಗಿ ವಾಲ್ಮೀಕಿ ಸಮುದಾಯದಲ್ಲಿ ಅಂತಹ ಆಕ್ರೋಶ ಕಂಡುಬರುತ್ತಿಲ್ಲ. ಆಮೇಲೆ ಈಗಾಗಲೇ ಸರ್ಕಾರ ಅವರ ರಾಜೀನಾಮೆ ಪಡೆದಿದೆ. ಎರಡನೆಯದಾಗಿ, ವಿಜಯೇಂದ್ರ ಅವರಿಗೆ ಯಾರೂ ಪಂಥಾಹ್ವಾನ ನೀಡಿಲ್ಲ. ಮೂರನೆಯದಾಗಿ, ರಾಜ್ಯದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿರುವ ಕಾಂಗ್ರೆಸ್‌ ವಿರುದ್ಧ ರಾಜಕೀಯ ಗಾಳಿ ಬೀಸುತ್ತಿದೆ. ನಾಲ್ಕನೆಯದಾಗಿ, ಆ ಗಾಳಿಯನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ವಿಜಯೇಂದ್ರ ಮಾಸ ಲೀಡರ್‌ ಅಲ್ಲ.  ಅವರ ತಂದೆಯ ನಾಮಬಲವೇ ಅವರಿಗೆ ಆಶ್ರಯವಾಗಿದೆ. ಐದನೆಯದಾಗಿ, ಬಿಜೆಪಿ ಒಡೆದ ಮನೆಯಂತಾಗಿದೆ.

ಬಿಜೆಪಿ ಪಕ್ಷದಲ್ಲಿ ಎರಡು ಗುಂಪುಗಳು ಬಹಳ ಪ್ರಬಲವಾಗಿವೆ.  ವಿಜಯೇಂದ್ರ ವಿರೋಧಿ ಬಣದ ಆದ್ಯತೆ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತಲೂ, ವಿಜಯೇಂದ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಾಗಿದೆ. ಹಾಗಾಗಿಯೇ ಈ ಪಾದಯಾತ್ರೆಯ ಕಡೆಗೆ ಪಕ್ಷದ ಹಲವು ನಾಯಕರು ತಲೆಯೇ ಹಾಕುತ್ತಿಲ್ಲ. ಮೊದಲನೆಯ ದಿನ ಆರ್‌ ಅಶೋಕ್‌ ಮತ್ತಿತರರು ಪಾದಯಾತ್ರೆಗೆ ಚಾಲನೆ ನೀಡಿ, ವೇದಿಕೆಯಿಂದ ಕೆಳಗಿಳಿದು ಬೆಂಗಳೂರು ದಾರಿ ಹಿಡಿದವರು ಮತ್ತೇ ಯಾತ್ರೆಯ ದಾರಿಯಲ್ಲಿ ಕಾಣಲೇ ಇಲ್ಲ. ಈ ಪಾದಯಾತ್ರೆ ಯಶಸ್ವಿಯಾದರೆ ವಿಜಯೇಂದ್ರ ಹತ್ತಿದ ಕುದುರೆಯನ್ನು ನಾವು ತಡೆಯಲು ಆಗುವುದಿಲ್ಲವೆಂದು ಭಾವಿಸಿ ಅನೇಕರು ದೂರವೇ ಉಳಿದಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೇಂದ್ರ ಸಚಿವ ವಿ. ಸೋಮಣ್ಣನವರು ʼಈ ಪಾದಯಾತ್ರೆಯ ಬಗ್ಗೆ ನನಗೇನು ಮಾಹಿತಿ ಇಲ್ಲʼ ಎಂದಿದ್ದು

ನವೆಂಬರ್‌ ೨೦೨೬ಕ್ಕೆ ವಿಜಯೇಂದ್ರ ಅವಧಿ ಮುಗಿಯುತ್ತದೆ. ಮತ್ತೇ ಎರಡನೆಯ ಬಾರಿ ಪಕ್ಷದ ಅಧ್ಯಕ್ಷರಾಗಲು ಈ ಪಾದಯಾತ್ರೆ ಮಾಡುತ್ತಿದ್ದಾರೆʼ ಎಂದು ಅವರ ಪಕ್ಷದವರೇ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಅವರ ಪಕ್ಷದ ಕೆಲ ನಾಯಕರು ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್‌ ನಾಯಕ ಕುಮಾರಸ್ವಾಮಿ ʻಈಗಾಗಲೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯಾತ್ರೆಯ ಅವಶ್ಯಕತೆ ಇಲ್ಲʼ ಎಂದಿದ್ದರು.  ಆದಾಗ್ಯೂ ವಿಜಯೇಂದ್ರ ಅವರು ಹಠಕ್ಕೆ ಬಿದ್ದು ಪಾದಯಾತ್ರೆಗೆ ಹೊರಟು, ಇಂದು ಬಳ್ಳಾರಿಗೆ ತಲುಪಿದ್ದಾರೆ.

ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯುವುದು ಬಿಜೆಪಿಯ ಕೆಲವರಿಗೆ ಮಾತ್ರವಲ್ಲ ಜೆಡಿಎಸ್‌ ಪಕ್ಷದ ಕುಮಾರಸ್ವಾಮಿಯವರಿಗೂ ಇಷ್ಟವಿಲ್ಲ. ಏಕೆಂದರೆ, ಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಸಹಜವಾಗಿ ಸಿಎಂ ಆಗಲು ವಿಜಯೇಂದ್ರ ಕ್ಲೇಮ್ ಮಾಡುತ್ತಾರೆ. ಮಗನ ಪರವಾಗಿ ಯಡಿಯೂರಪ್ಪನವರು ಹಠಕ್ಕೆ ಬೀಳುತ್ತಾರ. ಆಗ ಅನಿವಾರ್ಯವಾಗಿ ಬಿಜೆಪಿ ಹೈಕಮಾಂಡ್‌ ವಿಜಯೇಂದ್ರನನ್ನು ಸಿಎಂ ಕುರ್ಚಿ ಮೇಲೆ ಕೂರಿಸುತ್ತದೆ ಎಂಬ ದುರಾಲೋಚನೆ ಕುಮಾರಸ್ವಾಮಿಯವರಿಗೂ ಇದ್ದಂತೆ ಕಾಣುತ್ತದೆ. ಹಾಗಾಗಿಯೇ ಯಾತ್ರೆಯಲ್ಲಿ ಅವರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಣಿಸಲಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ಸರ್ಕಾರಿ ಮನೆಗಾಗಿ ಸಚಿವರ ಕಿತ್ತಾಟ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಸಿದ್ದರಾಮಯ್ಯನವರು ಸಿಎಂ ಕುರ್ಚಿ ಸುಲಭವಾಗಿ ಬಿಟ್ಟುಕೊಟ್ಟಿದ್ದಕ್ಕಾಗಿ   ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಡಿಕೆಶಿ ಬಣ ನಿರಾಳವಾಗಿತ್ತು. ಈಗ ಸರ್ಕಾರಿ ನಿವಾಸಕ್ಕಾಗಿ ಸಂಪುಟದ ಸಹೋದ್ಯೋಗಿಗಳ ಜಗಳ ಬೀದಿಗೆ ಬಂದಿದೆ.  ಮೇಲ್ನೋಟಕ್ಕೆ ಇದು ಮಾಜಿ ಸಚಿವ ಎಸ್‌. ಸಿ. ಮಹಾದೇವಪ್ಪ ಮತ್ತು ಸಿದ್ದರಾಮಯ್ಯನವರ ಆಪ್ತ ಹಾಲಿ ಸಚಿವ ಭೈರತಿ ಸುರೇಶ್‌ ನಡುವಿನ ಜಗಳ ಅನಿಸುತ್ತದೆ.

ಆದರೆ, ಪ್ರಸ್ತುತ ಸಿದ್ದರಾಮಯ್ಯನವರ ಮತ್ತು ಮಹಾದೇವಪ್ಪ, ಜಮೀರ್‌ ಅಹ್ಮದ್‌, ಸತೀಶ್‌ ಜಾರಕಿಹೊಳಿ ನಡುವಿನ ಸಂಬಂಧ ಹಳಸಿದೆ. ಅದರ ಒಂದು ಭಾಗವೇ ಈ ಬೀದಿ ಜಗಳ. ಇಲ್ಲದಿದ್ದರೆ ಇಷ್ಟು ಸಣ್ಣ ವಿಷಯಕ್ಕೆ  ಹೀಗೆ ಬೀದಿ ರಂಪಾಟ ನಡೆಯುತ್ತಿರಲಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಎಸ್‌ಐಆರ್‌ ಆಟ: ಹೈರಾಣಾದ ಮತದಾರ!

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read
ಎಸ್‌ಐಆರ್‌ ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗ

ಎಸ್‌ಐಆರ್‌ ಆಟ ಈಗ ಮತದಾರರು ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚುನಾವಣಾ ಆಯೋಗದ ಇತಿಹಾಸದಲ್ಲಿ ಅದು ಜನರಿಂದ ಈ ಪರಿ ಟೀಕೆಗೆ ಒಳಗಾಗಿದ್ದು ಇದೆ ಮೊದಲು. ಇದೊಂದು ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆಯಾಗಿದೆ.  ಮತದಾರರ ಪಟ್ಟಿ ಸಿದ್ಧಮಾಡುವುದು ಮತ್ತು ಕಾಲಕಾಲಕ್ಕೆ ಚುನಾವಣೆ ನಡೆಸುವುದು ಅದರ ಮುಖ್ಯ ಕೆಲಸವಾಗಿದೆ. ಈಗದು ತನ್ನ ಕೆಲಸಗಳನ್ನು  ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮತದಾರರಿಗೆ ಕಾಡುತ್ತಿದೆ. ಮೊದಲು ದೇಶದ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುವ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಜತೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಿದ್ದರು. ಈಗ ಸಮಿತಿಯಿಂದ ನ್ಯಾಯಾಧೀಶರನ್ನು ತೆಗೆದು, ಆ ಜಾಗಕ್ಕೆ ಆಡಳಿತ ಪಕ್ಷದ ಸಚಿವ ಸಂಪುಟದ ಸಚಿವರೊಬ್ಬರನ್ನು ತಂದು ಕೂಡಿಸಿದ್ದಾರೆ.

ಇದಕ್ಕೆ ಕಾರಣವೇನೆಂದು 2023ರಿಂದ ಪ್ರಧಾನಮಂತ್ರಿಯವರಿಗೆ ನಾಗರಿಕರು ಮತ್ತು ಪತ್ರಕರ್ತರು ಪ್ರಶ್ನೆಗಳನ್ನು  ಕೇಳುತ್ತಿದ್ದಾರೆ. ಆದರೆ ಅವರಿಂದ ಯಾವುದೇ ಉತ್ತರ ಬರುತ್ತಿಲ್ಲ. ಅಟ್‌ಲೀಸ್ಟ್ ಅವರಾಡುವ ಮನ್‌ ಕಿ ಬಾತ್‌ನಲ್ಲಾದರೂ ಈ ವಿಷಯ ಮಾತಾಡಬಹುದೆಂದು ಮೂರು ವರ್ಷದಿಂದ ದೇಶ ಎದುರು ನೋಡುತ್ತಿದೆ. ಅಲ್ಲೂ ಮಾತಾಡುತ್ತಿಲ್ಲ. ಅವರ ಈ ಮೌನ ಜನರ ಅನುಮಾನ ಮತ್ತಷ್ಟು ಹೆಚ್ಚಿಸಿದಂತಾಗಿದೆ.

ಈಗ ದಿಢೀರ್‌ನೆ ಚುನಾವಣಾ ಆಯೋಗ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬಿರುಸಿನಿಂದ ಎಸ್‌ಐಆರ್‌ ನಡೆಸಿ, ಸುಮಾರು 13ಕೋಟಿ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದೆ {ಇನ್ನೂ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಎಸ್‌ಐಆರ್‌ ನಡೆಸುವುದಿದೆ}. ಈ ಪರಿ ಮತದಾರರನ್ನು ಒಂದೇ ಸಲ ಕೈಬಿಟ್ಟಿದ್ದು ಪ್ರಾಯಶಃ ಭಾರತದಲ್ಲಿ ಮಾತ್ರ. ಪ್ರಜಾಪ್ರಭುತ್ವ ಒಪ್ಪಿಕೊಂಡಿರುವ ಯಾವುದೇ ದೇಶದಲ್ಲಿ ಹೀಗೆ ಹೆಸರು ತೆಗೆದು ಹಾಕಿರುವ ಉದಾಹರಣೆ ನಮಗೆ ಕಂಡು ಬರುವುದಿಲ್ಲ.

ಕರ್ನಾಟಕದಲ್ಲಿ ಎಸ್‌ಐಆರ್‌: ಮತದಾರರ ಪಟ್ಟಿಯ ಸವಾಲು

ಕರ್ನಾಟಕದಲ್ಲಿ 1.07ಕೋಟಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ. ಈಗ ಮತ್ತೆ ಹೆಸರು ತಾಳೆಯಾಗುತ್ತಿಲ್ಲ, ವಯಸ್ಸು ತಾಳೆಯಾಗುತ್ತಿಲ್ಲ, ಎಸ್‌ಐಆರ್‌ನಲ್ಲಿ ಮ್ಯಾಪಿಂಗ್‌ ಆಗಿಲ್ಲ…ಇತ್ಯಾದಿ ಕಾರಣಗಳನ್ನು ನೀಡಿ ಈಗ 43.81ಲಕ್ಷ ಮತದಾರರಿಗೆ ನೋಟಿಸ್‌ ನೀಡಿದ್ದಾರೆ. ಇವರು ಸರಿಯಾದ ದಾಖಲೆಗಳನ್ನು, ನಿಗದಿತ ಅವಧಿಯಲ್ಲಿ ಒದಗಿಸದಿದ್ದರೆ, ಇವರ ಹೆಸರೂ ಮತದಾರರ ಪಟ್ಟಿಯಿಂದ ಮಾಯವಾಗುತ್ತವೆ.

1960ರ ದಶಕದಲ್ಲಿ ಹಳ್ಳಿಗಳಲ್ಲಿ ಜನಿಸಿದ ಬಹಳಷ್ಟು ಜನರ ಹತ್ತಿರ ಜನನ ಪ್ರಮಾಣ ಪತ್ರವಾಗಲಿ, ಶಾಲಾ ದಾಖಲಾತಿಯಾಗಲಿ ಇಲ್ಲ. ಈಗ ಆ ತಲೆಮಾರಿನ ಜನರ ಬಳಿ ಇರುವುದು ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌, ರೇಷನ್‌ ಕಾರ್ಡ್‌ ಮಾತ್ರ. ಇವು ಆಯೋಗದ ಪ್ರಕಾರ ದಾಖಲೆಗಳಲ್ಲ. ಆಯೋಗವೇ ನೀಡಿದ ವೋಟರ್‌ ಐಡಿ ಕೂಡ ಈಗವರ ಕೆಲಸಕ್ಕೆ ಬರುತ್ತಿಲ್ಲ.

ಚುನಾವಣಾ ಆಯೋಗ ಪ್ರತಿವರ್ಷ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಹೆಸರನ್ನು ಸೇರಿಸುವ ಮತ್ತು ಸತ್ತವರ ಹಾಗೂ ಸ್ಥಳಾಂತರವಾದವರ ಹೆಸರನ್ನು ಕೈಬಿಡುತ್ತಾ ಬಂದಿದೆ. ಹಾಗಾದರೆ 2002ರಿಂದ ಆಯೋಗ ಏನು ಕೆಲಸ ಮಾಡಿದೆ? ಯಾವುದೇ ಒಬ್ಬ ಮತದಾರನ ಹೆಸರನ್ನು ಕೈ ಬಿಟ್ಟಾಗ ಯಾವ ಕಾರಣಕ್ಕಾಗಿ ಅವನ ಹೆಸರು ಕೈಬಿಟ್ಟಿದ್ದೇವೆ ಎಂಬುದನ್ನು ಆಯೋಗವೇ ದಾಖಲೆ ಸಮೇತ ಹೇಳಬೇಕು. ಇದು ಆಯೋಗದ ಕೆಲಸವೇ ವಿನಾ ಮತದಾರರ ಕೆಲಸವಲ್ಲ. ಈಗ ಅದು ತನ್ನಿ, ಇದು ತನ್ನಿ ಎಂದಿದ್ದರೆ ಇಲ್ಲದಿರುವ ದಾಖಲೆಗಳನ್ನು ಹಳ್ಳಿಗರು, ಅಲೆಮಾರಿಗಳು ಎಲ್ಲಿಂದ ತರಬೇಕು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಾವೇಶದಿಂದ ಒಬ್ಬನೇ ಒಬ್ಬ ಅರ್ಹ ಮತದಾರರ ಹೆಸರನ್ನು ನಾವು ಡಿಲೀಟ್‌ ಆಗಲು ಬಿಡುವುದಿಲ್ಲವೆಂದು ಹೇಳಿದರು. ಮುಂದುವರಿದು ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ಜನರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದಿದ್ದರು. ಮನೆ ಬಾಗಿಲಿಗೆ ಬರುವುದು ದೂರವೇ ಉಳಿಯಿತು, ಜನರೇ ಅರ್ಜಿ ಹಾಕೋಣವೆಂದು ಹೊದರೆ ಸರ್ವರ್‌ ಇಲ್ಲ. ಇದು ಒಂದು ಚುನಾಯಿತ ಸರ್ಕಾರದ ಬೇಜವಾಬ್ದಾರಿ ಮತ್ತು ಜನರ ಹಕ್ಕಿನ ಕುರಿತಾದ ನಿಷ್ಕಾಳಜಿ ಎತ್ತಿ ತೋರಿಸುತ್ತದೆ.

ಕೇಂದ್ರ ಸರ್ಕಾರಕ್ಕೆ ಮತ್ತು ಅದರ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಯಾವುದಾದರೂ ರೀತಿಯಲ್ಲಿ  ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶವಿದ್ದಂತ್ತಿದೆ. ರಾಜ್ಯ ಸರ್ಕಾರಕ್ಕೂ ಈಗ ಮತದಾನದ ಹಕ್ಕು ಆದ್ಯತೆಯ ವಿಷಯವಾಗಿ ಉಳದಿಲ್ಲ.

ಎಸ್‌ಐಆರ್‌ ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗ
ಎಸ್‌ಐಆರ್‌ ಆಟ – ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿ

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ಮಂಗಳೂರಿನಲ್ಲೇಕೆ?

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಈವರೆಗೆ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ಸಚಿವ ಸಂಪುಟ ಸಭೆಗಳು ನಡೆಯುತ್ತಿದ್ದವು.  ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ  ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಕರಾವಳಿಯ ಯು.ಟಿ.ಖಾದರ್‌ ಅವರಿಗೆ ಸಚಿವ ಸ್ಥಾನ ನೀಡಿ,  ಆ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯವೂ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ವಿಕಾಸದ ಜತೆಗೆ ರಾಜಕೀಯ ಲೆಕ್ಕಾಚಾರವೂ ಇದರ ಹಿಂದಿದೆ.

ಮೊದಲು ಇಲ್ಲಿ ಕಾಂಗ್ರೆಸ್‌ ಹಿಡಿತವಿತ್ತು. ಈಗ ಬಿಜೆಪಿ ಪ್ರಾಬಲ್ಯವಿದೆ. ಪ್ರಸ್ತುತ ಈ ಭಾಗ ಕೋಮುಗಲಭೆಗಳ ಅಡ್ಡೆಯಾಗಿದೆ. ಎಲ್ಲೆಡೆ ಹಣದ ರಾಜಕೀಯ ನಡೆದರೆ, ಇಲ್ಲಿ ಹೆಣದ ರಾಜಕೀಯ ನಡೆಯುತ್ತದೆ. ಇದರ ಬದಲಾವಣೆಗೆ ಈ ಸಭೆ ಮುನ್ನಡಿ ಬರೆಯುತ್ತದೋ ಅಥವಾ ಇದೊಂದು ತೋರಿಕೆಯ, ಪ್ರಚಾರದ ಸಭೆಯಾಗುತ್ತದೋ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಕೆಪಿಎಸ್‌ಸಿ ಹಗರಣ: ಈ ಬಾರಿಯಾದರೂ ಶಿಕ್ಷೆಯಾಗುತ್ತದೆಯೇ?

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ಕೆಪಿಎಸ್‌ಸಿಯಲ್ಲಿ ಯಾವುದಾದರೂ ಹಗರಣದ ಸುದ್ದಿಯಾದರೆ ನಾಲ್ಕು ದಿನ ಬ್ರೇಕಿಂಗ್‌ ನ್ಯೂಸ್‌, ಸಿಐಡಿ ಎಂಟ್ರಿ, ಎಫ್‌ಐಆರ್‌, ತನಿಖೆ, ಬಂಧನ, ವಿಚಾರಣೆ ಮತ್ತು ತಥಾಕಥಿತ ರಾಜಕಾರಣಿಗಳ ಆರೋಪ – ಪ್ರತ್ಯಾರೋಪಗಳು…..ಹೀಗೆ ನಡೆಯುತ್ತದೆ ವಿನಾ ಶಿಕ್ಷೆಯಾದ ಒಂದೂ ಉದಾಹರಣೆ ಇಲ್ಲ.  ಇದಕ್ಕೆ ಕಾರಣ ತನಿಖಾ ಸಂಸ್ಥೆಗಳಲ್ಲ, ರಾಜಕಾರಣಿಗಳಾಗಿದ್ದಾರೆ.

ಮೊದಲು ಪ್ರಾಮಾಣಿಕರನ್ನು ಮಾತ್ರ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು. ಆದರೀಗ….? ಕೆಲ ಅಧ್ಯಕ್ಷರ ಹಾಗೂ ಕೆಲ ಸದಸ್ಯರ ಹಿನ್ನೆಲೆಯೇ ಎಲ್ಲಾ ಹೇಳುತ್ತದೆ. ಮೊದಲು ಅಧ್ಯಕ್ಷರು ಮತ್ತು ಇಬ್ಬರೇ ಸದಸ್ಯರಿದ್ದರು. ಈಗ ಅಧ್ಯಕ್ಷರು ಸೇರಿ ಹದಿನಾರು ಜನ ಸದಸ್ಯರಿದ್ದಾರೆ.  ಮೊದಲು ಕಾರ್ಯದರ್ಶಿ ಮಾತ್ರವಿದ್ದರು. ಈಗ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರಿದ್ದಾರೆ. ಈ ಸಂಖ್ಯೆಗಳು ಹೆಚ್ಚಿಸಿದ್ದು ಯಾವ ಪುರುಷಾರ್ಥಕ್ಕಾಗಿ? ಯಾವ ಸಾಧನೆಗಾಗಿ? ಯಾರ ಅನುಕೂಲಕ್ಕಾಗಿ?

ಈ ಆಯೋಗದಲ್ಲಿ ಬದಲಾವಣೆ ತರಬೇಕೆಂದು ಅನೇಕ ಸಮಿತಿಗಳನ್ನು ಕಾಲಕಾಲಕ್ಕೆ ರಚಿಸಿದ್ದಾರೆ. ಅದರಲ್ಲಿ ಪಿ. ಸಿ. ಹೋಟಾ ಕಮಿಟಿ ಮತ್ತು ಟಿ. ಎಂ. ವಿಜಯ ಭಾಸ್ಕರ್‌ ಸಮಿತಿ ಮುಖ್ಯವಾಗಿವೆ. ಈ ಸಮಿತಿಗಳು ನೀಡಿದ ಶಿಫಾರಸುಗಳ ಕಡತಗಳು ಧೂಳಲ್ಲಿ ಬಿದ್ದಿವೆ. ಒಂದಿಷ್ಟು ಜಾರಿಗೆ ತಂದು, ಕೈತೊಳೆದುಕೊಂಡರು. ಹಾಗಾಗಿಯೇ ಮತ್ತೆ ಯಥಾಪ್ರಕಾರ ಭ್ರಷ್ಟಾಚಾರದ ರಾಮಾಯಣ ಮುಂದುವರೆದಿದೆ. ಆ ಸಮಿತಿಗಳ ಶಿಫಾರಸು ಯಥಾವತ್ತಾಗಿ ಜಾರಿಗೆ ತಂದಿದ್ದರೆ ಇಂದು ಎಷ್ಟೋ ವಿದ್ಯಾರ್ಥಿಗಳ ಬದುಕು ಕತ್ತಲೆಯಾಗುತ್ತಿರಲಿಲ್ಲವೇನೋ.

1951ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಇದೊಂದು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿದೆ. ಇದು ೧೯೯೦ರವರೆಗೆ ಅತ್ಯಂತ ಗೌರವಾನ್ವಿತ ಸಂಸ್ಥೆಗಳಲ್ಲಿ ಒಂದಾಗಿತ್ತು. ಸ್ವತಂತ್ರವಾಗಿ ಮತ್ತು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿತ್ತು. ಆ ನಂತರ ಸಾಲುಸಾಲು ಹಗರಣಗಳು, ಆರೋಪಗಳು ಮೈಗೆ ಅಂಟಿಸಿಕೊಂಡೇ ಬದುಕುತ್ತಿದೆ.

ಇದನ್ನೂ ಓದಿ – ಬಸವರಾಜ ಕನ್ನಾಳೆ: ಅಸಲಿ ಕಥೆ

ಆಯೋಗವು ರಾಜಕೀಯ ಒತ್ತಡಕ್ಕೆ ಮಣಿಯದೆ ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲಿ ಎಂಬ ಉದ್ದೇಶದಿಂದ ಸಂವಿಧಾನವು ಕಠಿಣ ನಿಯಮಗಳನ್ನು ರೂಪಿಸಿತ್ತು. ಆದರೆ ಈ ನಮ್ಮ ತಥಾಕಥಿತ ರಾಜಕಾರಣಿಗಳು ತಿದ್ದುಪಡಿ ಮಾಡಿ  ಮಾಡಿಕೊಂಡಿದ್ದಾರೆ ಮತ್ತು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೋಟಿ ಕೋಟಿ ದುಡ್ಡಿರುವ ತಮ್ಮ ಆಪ್ತರನ್ನೇ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಿದ್ದಾರೆ.  ಹಾಗಾಗಿಯೇ ಹಗರಣಗಳು ನಿಲ್ಲುತ್ತಿಲ್ಲ. ಶಿಕ್ಷೆಯೂ ಯಾರಿಗೂ ಆಗುತ್ತಿಲ್ಲ.

2011ರಲ್ಲಿ ಡಾ. ಎಚ್. ಎನ್‌ ಕೃಷ್ಣ  ಅಧ್ಯಕ್ಷರಾಗಿದ್ದಾಗ ಆಯೋಗದಲ್ಲಿ ನಡೆದ ಹಗರಣ ಬೆಳಕಿಗೆ ಬಂದಿತ್ತು. ತಕ್ಕಮಟ್ಟಿಗೆ ಸದ್ದು ಮಾಡಿತು. ಆಗಲೂ ಸುದ್ದಿಯಾಯಿತು, ಸಿಐಡಿ ಬಂತು, ಅಧ್ಯಕ್ಷರು, ಉನ್ನತ ಅಧಿಕಾರಿಗಳು, ಸಿಬ್ಬಂದಿ, ಲಂಚ ನೀಡಿ ಹುದ್ದೆ ಪಡೆದ ಅಧಿಕಾರಿ ಸೇರಿ 07 ಪ್ರಮುಖ ಆರೋಪಿಗಳ ಬಂಧನವಾಯಿತು, ತನಿಖೆಯಾಯಿತು, ವಿಚಾರಣೆ ನಡೆಯಿತು. ಆದರೆ, 44 ದಿನದಲ್ಲಿ ಎಲ್ಲರೂ ಜಾಮೀನಿನ ಮೇಲೆ ಹೊರಬಂದರು, ನ್ಯಾಯಾಲಯಕ್ಕೆ ವಿಶ್ವಾಸಾರ್ಹ ಪುರಾವೆಗಳು ಒದಗಿಸದ ಮತ್ತು ಮೂವರು ಮುಖ್ಯ ಸಾಕ್ಷಿಗಳು ಉಲ್ಟಾ ಹೊಡೆದು ಪ್ರಾಸಿಕ್ಯೂಷನ್‌ ವಿರುದ್ಧವಾಗಿ ಹೇಳಿಕೆ ನೀಡಿದರ ಫಲವಾಗಿ ಮೊನ್ನೆ ಏಪ್ರಿಲ್‌ 30, 2026 ರಂದು ಎಲ್ಲರೂ ಖುಲಾಸೆಯಾದರು.

2013ರಲ್ಲಿ ಗೋನಾಳ ಭೀಮಪ್ಪ ಅವಧಿಯಲ್ಲಿ ಬೆಳಕಿಗೆ ಬಂದ ಹಗರಣ ದೊಡ್ಡ ಸದ್ದೇ ಮಾಡಿತ್ತು. ಆಗಲೂ ಮೊದಲಿನಂತೆ ಸುದ್ದಿಯಾಯಿತು, ಸಿಐಡಿ ಬಂತು, 08 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ತನಿಖೆಯಾಯಿತು, ಹಲವರು ಜೈಲಿಗೂ ಹೋದರು [ಮಧ್ಯಂತರ ಜಾಮೀನು ಪಡೆದು ಗೋನಾಳ ಭೀಮಪ್ಪ ಜೈಲಿಗೂ ಹೋಗಲಿಲ್ಲ].  ರಾಷ್ಟ್ರಪತಿಗಳಿಂದ ಪೂರ್ವಾನುಮತಿ ಪಡೆಯದೆ ವಿಚಾರಣೆ ನಡೆಸಿದರಿಂದ 2017ರಲ್ಲಿ  ಕರ್ನಾಟಕ ಹೈಕೋರ್ಟ್‌ ಗೋನಾಳ್ ಭೀಮಪ್ಪ ವಿರುದ್ಧದ ಕ್ರಿಮಿನಲ್‌ ವಿಚಾರಣೆಯನ್ನೇ ರದ್ದುಪಡಿಸಿತು. ಸುಪ್ರೀಂಕೋರ್ಟ್‌ ಕೂಡ ಹೈಕೋರ್ಟ್‌ ಆದೇಶ ಎತ್ತಿಹಿಡಿದಿತು. ರಾಷ್ಟ್ರಪತಿಗಳ ಪೂರ್ವಾನುಮತಿ ಸಿಗದ ಕಾರಣ ಮೊನ್ನೇ ಮೇ 2025ರಲ್ಲಿ ಕರ್ನಾಟಕ ಸರ್ಕಾರ ಈ ಪ್ರಕರಣವನ್ನೇ ಅಧಿಕೃತವಾಗಿ ಕೈ ಬಿಟ್ಟಿದೆ.

ಈಗ ಸಾಹುಕಾರ್‌ ಶಂಕರೆಪ್ಪ ಅವಧಿಯಲ್ಲಾದ ಹಗರಣ ಹೆಚ್ಚು ಸದ್ದು ಮಾಡುತ್ತಿದೆ. ಹಿಂದಿನ ಎರಡು ಪ್ರಕರಣಗಳಲ್ಲಿ ಕೇವಲ ಸಿಐಡಿ ಮಾತ್ರ ತನಿಖೆ ಮಾಡಿತ್ತು. ಈಗ ಸಿಐಡಿ ಜತೆಗೆ ʻಈಡಿʼಯೂ ತನಿಖೆ ಮಾಡುತ್ತಿದೆ. ರಾಷ್ಟ್ರಪತಿಗಳಿಂದ ಪೂರ್ವಾನುಮತಿಯೂ ಪಡೆದಿದ್ದಾರೆ. ಪರೀಕ್ಷಾ ನಿಯಂತ್ರಕನ ಜೊತೆಗೆ ಇದೇ ಮೊದಲ ಬಾರಿಗೆ ಮಧ್ಯವರ್ತಿಯೊಬ್ಬನನ್ನು [ಬಸವರಾಜ ಕನ್ನಾಳೆ] ಅರೆಸ್ಟ್‌ ಮಾಡಿದ್ದಾರೆ. ಸರ್ಕಾರದ ಕೆಲ ಸಚಿವರು ಜೋರಾಗಿ ಮಾತಾಡುತ್ತಿದ್ದಾರೆ. ಇದು ಸಹ ಮತ್ತೊಂದು ವಿಚಾರಣೆ, ತನಿಖೆ, ಖುಲಾಸೆ ಪ್ರಕರಣ ಆಗುತ್ತದೋ ಅಥವಾ ಪ್ರಬಲ ಪುರಾವೆಗಳು ನ್ಯಾಯಾಲಯಕ್ಕೆ ಒದಗಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುತ್ತಾರೋ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ರಜತ ಮಹೋತ್ಸವ: ಜಾರಕಿಹೊಳಿಗೆ ಆಹ್ವಾನವೇ ಇಲ್ಲ.

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ನಿನ್ನೆ [ಸೆಪ್ಟೆಂಬರ್‌ 6, 2026] ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ತಮ್ಮ  ಸಂಘಟನೆಗೆ ೨೫ ವರ್ಷ ವಯಸ್ಸಾದ ನಿಮಿತ್ತ  ರಜತ ಮಹೋತ್ಸವ ಆಚರಿಸಿದರು. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಆಪ್ತ ಸಚಿವರು, ಶಾಸಕರು, ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಮಾತ್ರ ಇದ್ದರು. ಇದು ರಜತ ಮಹೋತ್ಸವಗಿಂತಲೂ ಸಿದ್ದರಾಮ್ಯಯನವರ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು.

ಹಿಂದುಳಿದ ಸಮುದಾಯದ ಬಿ. ಕೆ. ಹರಿಪ್ರಸಾದ್‌, ಎಚ್‌ ಸಿ  ಮಹಾದೇವಪ್ಪ ಮತ್ತು ಇತರರು ಸಮಾವೇಶದಿಂದ ದೂರವೇ ಉಳಿದರು. ಹಿಂದುಳಿದ ಸಮುದಾಯದ ಸತೀಶ ಚಾರಕಿಹೊಳಿಗೆ ಆಹ್ವಾನವೇ ನೀಡಿಲ್ಲ. ಈ ಮೂಲಕ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲವೆಂದು ಹಾಗೂ ಒಕ್ಕೂಟ ಕೇವಲ ಸಿದ್ದರಾಮಯ್ಯನವರ ಅಣತಿಯಂತೆ ಕೆಲಸ ಮಾಡುತ್ತದೆ ಎಂಬ ಸಂದೇಶ ರವಾನಿಸಿದೆಯೆ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್