SUBSCRIBE

ದ ಪಾಲಿಟಿಕ್

ಕಾಂಗ್ರೆಸ್‌ನಲ್ಲಿ ಮಹಿಳೆಯರಿಗಿಲ್ಲ ಜಿಲ್ಲಾಧ್ಯಕ್ಷ ಭಾಗ್ಯ

ಇಂದು ಆಡಳಿತ ಪಕ್ಷ ಕಾಂಗ್ರೆಸ್‌ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. 35 ಜನರ ಪಟ್ಟಿಯಲ್ಲಿ ಒಬ್ಬರೂ ಮಹಿಳೆಯರಿಲ್ಲ. ಈ ಪಕ್ಷದ ನಾಯಕರು ಮಾತೆತ್ತಿದ್ದರೆ ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ, ಸಂವಿಧಾನದ ಬಗ್ಗೆ ಗಂಟೆಗಟ್ಟಲೇ ಪುಂಗಿ ಊದುತ್ತಾರೆ. ಆದರೆ ಆಚರಣೆಯ ವಿಷಯ ಬಂದಾಗ ಮಾತ್ರ ಅವರ ವರಸೆ ಬದಲಾಗುತ್ತದೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ.  ಅವರ ಪಕ್ಷದಲ್ಲಿ  ರಾಜ್ಯದ ಒಂದು ಜಿಲ್ಲೆಯಲ್ಲೂ ಒಬ್ಬರೂ ಸಮರ್ಥ ಮಹಿಳೆಯರು ಇಲ್ಲವೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಜನರ ಮಾತಿಗೆ, ಪ್ರಶ್ನೆಗೆ ಕಾಂಗ್ರೆಸ್‌ ನಾಯಕರ ಬಳಿ ಉತ್ತರ ಇದೆಯೇ?

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಕೆ. ಎನ್‌. ರಾಜಣ್ಣನಿಗೆ ಮತ್ತೆ ರಾಜಕೀಯ ಹಿನ್ನಡೆ

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ಕಾಂಗ್ರೆಸ್‌ ಪಕ್ಷದ ಹೈಕಮಾಂಡ್ ಆಗಸ್ಟ್‌ 11, 2025ರಂದು ಮಾಜಿ ಸಚಿವ ಕೆ. ಎನ್‌. ರಾಜಣ್ಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ತೀರಾ ಅವಮಾನಕಾರಿಯಾಗಿ ವಜಾ ಮಾಡಿತ್ತು. ಅಟ್‌ಲಿಸ್ಟ್‌ ಅವರಿಗೆ ರಾಜೀನಾಮೆ ನೀಡಲು ಒಂದು ತಾಸು ಸಮಯ ನೀಡಿರಲಿಲ್ಲ. ಅದು ರಾಹುಲ್ ಗಾಂಧಿ ಬಿಜೆಪಿಯ ವೋಟ್‌ ಚೋರಿ ಬಗ್ಗೆ ಮಾತನಾಡಲು ಆರಂಭಿಸಿದ ಸಮಯ. 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹಾದೇವಪುರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿತ್ತು ಎಂದು ಗಟ್ಟಿಯಾಗಿ ದೆಹಲಿಯಲ್ಲಿ ಮಾಧ್ಯಮಗಳ ಎದುರಿಗೆ ರಾಹುಲ್‌ ಮಾತನಾಡಿದರು.

ಮರುದಿನ ಕೆ. ಎನ್‌. ರಾಜಣ್ಣನವರು ʻಮತದಾರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ರಾಹುಲ್‌ ಗಾಂಧಿಯವರು ದೆಹಲಿಯಲ್ಲಿ ಮಾತನಾಡುತ್ತಿದ್ದಾರೆ. ಅಕ್ರಮ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ನಾಯಕರು ಆಗೇನು ಮಾಡುತ್ತಿದ್ದರುʼ ಎಂಬರ್ಥದಲ್ಲಿ ಮಾತನಾಡಿದರು. ಅವರ ಮಾತುಗಳು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರಿಂದ ಕೆರಳಿದ ರಾಹುಲ್‌ ಗಾಂಧಿ ಈ ಕ್ಷಣವೇ ತಮ್ಮ ಸಂಪುಟದಿಂದ ಅವರನ್ನು ಡಿಸ್‌ಮಿಸ್‌ ಮಾಡಲು ಸಿದ್ದರಾಮಯ್ಯನವರಿಗೆ ತಾಕೀತು ಮಾಡಿದರು.

ಪೇಚಿಗೆ ಸಿಲುಕಿದ ಸಿದ್ದರಾಮಯ್ಯನವರು ಅಸಹಾಯಕರಾಗಿ ರಾಜಣ್ಣನವರನ್ನು ಡಿಸ್‌ಮಿಸ್‌ ಮಾಡಿದರು. ʻಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಬಹುದಿತ್ತು. ಆದರೆ, ಅವರಿಗೆ ತಮ್ಮ ಕುರ್ಚಿ ಮುಖ್ಯವಾಗಿತ್ತು. ಹಾಗಾಗಿ, ರಾಜಣ್ಣನವರ ಪರವಾಗಿ ಅವರು ಗಟ್ಟಿಯಾಗಿ ನಿಲ್ಲಲಿಲ್ಲʼ ಎಂದು ರಾಜಣ್ಣನವರ ಅಭಿಮಾನಿಗಳು ಸಿದ್ದರಾಮಯ್ಯನವರ ಮೇಲೆ ಅಸಮಾಧಾನಗೊಂಡಿದ್ದರು. ರಾಜಕೀಯದಲ್ಲಿ ʻನೀನು ನನಗಾದರೆ, ನಾನು ನಿನಗೆʼ ಅಂತ ಒಂದು ಸಿಂಪಲ್‌ ನಿಯಮವಿದೆ. ಆದರೆ, ರಾಜಣ್ಣನವರ ವಿಷಯದಲ್ಲಿ ಆ ನಿಯಮ ಕೆಲಸಕ್ಕೆ ಬರಲಿಲ್ಲ.

ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಿತ್ತು. ಆ ಸಮಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಬಿರುಸಾಗಿಯೇ ನಡೆಯುತ್ತಿತ್ತು. ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿ ಆಗುತ್ತಿದೆ. ಹಾಗಾಗಿ ಯಾರು ಈ ಕುರಿತು ಮಾತನಾಡಬಾರದು ಎಂದು ಪಕ್ಷದ ಹೈಕಮಾಂಡ್‌ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆಗ ಬಹುತೇಕರು ಈ ಕುರಿತು ಉಸಿರು ಬಿಡಲಿಲ್ಲ. ಆದರೆ, ರಾಜಣ್ಣ ಮಾತ್ರ ಅಗಲೂ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್‌ ಮುಂದುವರಿಸಿದರು. ಇದು ಪಕ್ಷದ ವರಿಷ್ಠರಿಗೆ ಇರಿಸು ಮುರಿಸು ಉಂಟುಮಾಡಿತ್ತು. ಹಾಗಾಗಿ ಅವರನ್ನು ಸಂಪುಟದಿಂದ ತೆಗೆಸಲು ಒಂದು ಅವಕಾಶಕ್ಕಾಗಿ ವಿರೋಧಿ ಗುಂಪು ಕಾಯತ್ತಿತ್ತು. ಆ ಅವಕಾಶವೂ ಸಿಕ್ಕಿತ್ತು. ಹಾಗಾಗಿ ಅವರನ್ನು ವಜಾ ಮಾಡಿಸಿದರು.

ಮತ್ತೊಂದು ಕಡೆ ಅವರದ್ದೇ ಸಮುದಾಯದ (ವಾಲ್ಮೀಕಿ ಸಮುದಾಯದ) ಬಿ. ನಾಗೇಂದ್ರ ಅವರಿಂದ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದಿದ್ದರು. ಹಾಗಾಗಿ ಕಾಂಗ್ರೆಸ್‌ ಪಕ್ಷ ಈಗ ಮತ್ತೊಂದು ಅವಧಿಗೆ ವಾಲ್ಮೀಕಿ ಸಮುದಾಯದ ರಾಜಣ್ಣನವರನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರ ಸಹಕಾರಿ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು.  ರಾಜಣ್ಣನವರು ಮತ್ತೊಂದು ಅವಧಿಗೆ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಲು ಸುರ್ಜೇವಾಲಾ, ವೇಣುಗೋಪಾಲ್‌, ಸಿದ್ದರಾಮಯ್ಯ, ಪರಮೇಶ್ವರ ಅವರ ಮನೆ ಬಾಗಿಲು ತಟ್ಟಿದರು.

ಮುಖ್ಯಮಂತ್ರಿಗಳು ಯಾರ ಹೆಸರು ಸೂಚಿಸುತ್ತಾರೋ ಅವರು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರಾಗಿ ಸಾಮಾನ್ಯವಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಇದಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದರಿಂದಾಗಿ ನಾಲ್ಕು ತಿಂಗಳ ಹಿಂದೆ ನಡೆಯಬೇಕಿದ್ದ ಚುನಾವಣೆ ನಡೆಯಲಿಲ್ಲ. ಈ ಬಾರಿ ಸಿದ್ದರಾಮಯ್ಯನವರು ರಾಜಣ್ಣನವರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಹಾಗಾಗಿ ಅವರೇ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಬಹುತೇಕರು ಭಾವಿಸಿದರು. ಆದರೆ, ಡಿ.ಕೆ. ಶಿವಕುಮಾರ್‌ ಅವರು ತಮ್ಮ ಆಪ್ತ ಮತ್ತು ಸೋದರಸಂಬಂಧಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಅವರಿಗೆ ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ಯಶಸ್ವಿಯಾದರು.

ಇದು ಕೇವಲ ಕೆ. ಎನ್‌. ರಾಜಣ್ಣನವರ ಹಿನ್ನಡೆ ಮಾತ್ರವಲ್ಲ, ಸಿದ್ದರಾಮಯ್ಯನವರದ್ದೂ ಕೂಡ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ಬೀದರ ಜಿಲ್ಲಾಧ್ಯಕ್ಷ ಆಯ್ಕೆ: ಖಂಡ್ರೆಗೆ ಶಾಕ್

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಬೀದರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಿಂದ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದೇ ಮಾತು, ನಡೆದದ್ದೇ ದಾರಿಯಾಗಿತ್ತು. ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ʼಖಂಡ್ರೆ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆʼ ಎಂದು ಆರೋಪಿಸಿದರು. ಅವರ ವಿರುದ್ಧ ರಾಜಧಾನಿಯಲ್ಲಿ ಸಾಲುಸಾಲು ಸಭೆಗಳು ಮಾಡಿದರು. ಜತೆಗೆ ʼಬಸವರಾಜ್‌ ಜಾಬಶೆಟ್ಟಿ ರಬ್ಬರ್‌ ಸ್ಟಾಂಪ್‌ ಇದ್ದಾರೆ. ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲೇಬೇಕೆಂದುʼ ಪಕ್ಷದ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದರು. ಆಗ ಪಕ್ಷದ ಹೈಕಮಾಂಡ್‌ ಬಂಡಾಯ ಸಾರಿದ ಗುಂಪಿಗೆ ಸಮಾಧಾನ ಪಡಿಸಿತು.

ಖಂಡ್ರೆಯವರು ಈ ಬಾರಿಯೂ ತಮಗೆ ಆಪ್ತರಾದ ಶಿವರಾಜ್‌ ಹಾಸನಕರ್‌, ನಿಸಾರ್‌ ಅಹಮದ್‌, ಅಥವಾ ಪೂಜಾ ಜಾರ್ಜ್‌ ಪೈಕಿ ಯಾರನ್ನಾದರೂ ಒಬ್ಬರನ್ನು ಜಿಲ್ಲಾಧ್ಯಕ್ಷ ಮಾಡಲು ತೀವ್ರ ಕಸರತ್ತು ನಡೆಸಿದರು. ಆದರೆ, ಪಕ್ಷದ ವರಿಷ್ಠರು ಇವರ ಬೇಡಿಕೆಗೆ ಮಣೆ ಹಾಕದೆ, ಮುಸ್ಲಿಂ ಸಮುದಾಯದ ಅಬ್ದುಲ್‌ ಮನ್ನಾರ್‌ ಸೇಠ್‌ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ʼನಿಮಗಿಂತ ಪಕ್ಷ ಮುಖ್ಯʼ ಎಂಬ ಸಂದೇಶವನ್ನು ಖಂಡ್ರೆಯವರಿಗೆ ನೀಡಿದೆ.

ಖಂಡ್ರೆಯವರ ವಿರುದ್ಧ ಬಂಡಾಯ ಸಾರಿದ ಗುಂಪಿನ ನಾಯಕತ್ವ ವಹಿಸಿದ ರಾಜಶೇಖರ್‌ ಪಾಟೀಲ್‌ ಅವರು ನೂತನ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಫೇಸ್‌ಬುಕ್‌ ಮೂಲಕ ಶುಭಾಶಯ ತಿಳಿಸಿದ್ದಾರೆ. ಕರೆದು ಸನ್ಮಾನಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆಯವರ ಸಾಮಾಜಿಕ ಜಾಲತಾಣಗಳಲ್ಲಿ  ಶುಭಾಶಯ ಕೋರಿದ ಒಂದೂ ಪೋಸ್ಟ್ ಕಾಣುತ್ತಿಲ್ಲ. ನಿನ್ನೆಯಿಂದ ಈ ವಿಷಯದಲ್ಲಿ ಖಂಡ್ರೆಯವರು ಮಾತನಾಡಿಲ್ಲ. ಆದರೆ, ಅವರ ಸಾಮಾಜಿಕ ಜಾಲತಾಣಗಳೇ ಎಲ್ಲಾ ಹೇಳುತ್ತಿವೆ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಇ.ಡಿ ದಾಳಿಗೆ ಬೆಚ್ಚಿಬಿದ್ದ ಜಾರಕಿಹೊಳಿ

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ನಿನ್ನೆ (ಸೆಪ್ಟೆಂಬರ್‌ 09) ಸಚಿವ ಸತಿಶ್‌ ಜಾರಕಿಹೊಳಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಹಠಾತ್ತಾಗಿ ದಾಳಿ ಮಾಡಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದರೆ, ಬಿಜೆಪಿ ಈ ದಾಳಿ ಸ್ವಾಗತಿಸಿದೆ. ಆದರೆ, ವಾಸ್ತವ ಇವೆರಡರ ನಡುವೆ ಇದೆ.ಇಂದು ಇ.ಡಿ ಮೇಲೆ ಮುಗಿಬಿದ್ದ ಇದೆ ಕಾಂಗ್ರೆಸ್‌ ಪಕ್ಷ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ  ಹಾಗೂ ಕೇರಳದಲ್ಲಿ ಸಿಪಿಎಂ ನಾಯಕರ ಮನೆಯ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಿದಾಗ ಸಂಭ್ರಮಿಸಿತ್ತು. ದಾಳಿಗೆ ಗುರಿಯಾಗಿದ್ದ ಆ ಪಕ್ಷಗಳ ನಾಯಕರ ವಿರುದ್ಧ ಅಪಪ್ರಚಾರ ಮಾಡಿತ್ತು. ಈಗದು ಮರೆತಂತಿದೆ. ಈಗ ಕರ್ನಾಟಕದಲ್ಲಿ ತಮ್ಮ ಪಕ್ಷದ ಪ್ರಭಾವಿ ಸಚಿವರ ಮನೆಗೆ ಇ. ಡಿ ಬಂದಾಗ ದೇಶದ ತುಂಬೆಲ್ಲ ಬೊಬ್ಬೆ ಹೊಡೆಯುತ್ತಿದೆ.  ಕಾಂಗ್ರೆಸ್‌ ಪಕ್ಷದ ಈ ಇಬ್ಬಂದಿತನವನ್ನು ದೇಶವೇ ನೋಡುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿರುವ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ರಾಜಕಾರಣಿಗಳ ಮನೆ ಮೇಲೆ ಮಾತ್ರ ಇತ್ತೀಚೆಗೆ ದಾಳಿಯಾಗುತ್ತಿವೆ. ಇದು ಬಿಜೆಪಿ ಪಕ್ಷಕ್ಕೆ ಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮುಳ್ಳಾಗಬಹುದು. ನಮ್ಮ ಸಮುದಾಯದ ರಾಜಕಾರಣಿಗಳು ಮಾತ್ರ ಅಪ್ರಾಮಾಣಿಕರೆ ಎಂಬ ಚರ್ಚೆ ವಾಲ್ಮೀಕಿ ಸಮುದಾಯದೊಳಗೆ ಆರಂಭವಾಗಿ, ಅದು ಮತವಾಗಿ ಪರಿವರ್ತನೆಗೊಳ್ಳಬಹುದು. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಾದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ವಿರೋಧ ಪಕ್ಷದ ನಾಯಕರ ಮನೆಯ ಮೇಲೆ ಮಾತ್ರ ದಾಳಿ ಮಾಡುತ್ತಿವೆ. ಅವುಗಳಿಗೆ ಬಿಜೆಪಿ ಪಕ್ಷದ ನಾಯಕರ ಮನೆಗಳು ಮರೆತು ಹೋದಂತಿದೆ. ಈ ತನಿಖಾ ಸಂಸ್ಥೆಗಳು ಯಾರ ಮನೆಗೆ ಕಾಲಿಡುತ್ತವೋ, ಆ ಮನೆಯ ಮಾಲೀಕ ಬಿಜೆಪಿ ಪಕ್ಷಕ್ಕೆ ಸೇರಿದರೆ ಆ ಮನೆಯಲ್ಲಿ ಮತ್ತೆಂದೂ ಅವು ಕಾಲಿಡುತ್ತಿಲ್ಲ.

ತನಿಖಾ ಸಂಸ್ಥೆಗಳೆಂಬ ಗೌರವ ಕೂಡ ಅವೀಗ ಉಳಿಸಿಕೊಂಡಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಹೇಳಿದಂತೆ ಅಥವಾ ಹೇಳಿದಷ್ಟು ಮಾತ್ರ ಕೆಲಸ ಮಾಡುವುದು ತನಿಖಾ ಸಂಸ್ಥೆಗಳ ಕೆಲಸವಾಗಿದೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷದ ನಾಯಕರು ರಾತ್ರಿ ತೋರಿಸಿದ ಮನೆಗಳ ಮೇಲೆ ಬೆಳಿಗ್ಗೆ ದಾಳಿ ಮಾಡುತ್ತಿದ್ದವು. ಬೆಳಿಗ್ಗೆ ತೋರಿಸಿದ ಮನೆಗಳ ಮೇಲೆ ರಾತ್ರಿ ದಾಳಿ ಮಾಡುತ್ತಿದ್ದವು. ಈಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ನಾಯಕರು ತೋರಿಸಿದ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಆಗ ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಬೀದಿಗೆ ಇಳಿಯುತ್ತಿದ್ದರು. ಈಗ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಇಳಿಯುತ್ತಿದ್ದಾರೆ.

ತನಿಖಾ ಸಂಸ್ಥೆಗಳು ಯಾರ್ಯಾರ ಮನೆಯ ಮೇಲೆ ದಾಳಿ ಮಾಡುತ್ತದೋ ಅದರ ಆಧಾರದ ಮೇಲೆ ಅವರೆಲ್ಲ ಭ್ರಷ್ಟರು ಎಂದಾಗಲಿ ಅಥವಾ ಪ್ರಾಮಾಣಿಕರು ಎಂದಾಗಲಿ ಜನರು ನಿರ್ಧಾರ ಮಾಡುವುದಿಲ್ಲ.  ಯಾರು ಪ್ರಾಮಾಣಿಕರು, ಯಾರು ಪ್ರಾಮಾಣಿಕರಲ್ಲ ಎಂಬುದು ಜನರಿಗೆ ಗೊತ್ತಿರುತ್ತದೆ. ಈಗ ತನಿಖಾ ಸಂಸ್ಥೆಗಳು ಯಾರ ಮನೆಯ ಮೇಲೆ ದಾಳಿ ಮಾಡುತ್ತವೋ ಅವರು ಅಮಾಯಕರಂತೆ, ಅದು ರಾಜಕೀಯ ಪ್ರೇರಿತ ದಾಳಿಯಂತೆ ಪುಕಾರಾಗುತ್ತಿದೆ. ಇದು ಕೆಲವು ಪ್ರಕರಣಗಳಲ್ಲಿ ನಿಜವೂ ಇರಬಹುದು. ಈ ತನಿಖಾ ಸಂಸ್ಥೆಗಳು ಆರಂಭದಿಂದಲೇ ತಮ್ಮ ವೃತ್ತಿಧರ್ಮ ಪಾಲಿಸಿಕೊಂಡು ಬಂದಿದ್ದರೆ, ಇಂದು ಈ ಗುಲ್ಲು ಕೇಳಿಬರುತ್ತಿರಲಿಲ್ಲವೇನೋ. ಜತೆಗೆ ರಾಜಕಾರಣಿಗಳು ಒಂದು ಈ ಸಂಸ್ಥೆಗಳನ್ನು ಮುಚ್ಚುತ್ತಿದ್ದರು. ಇಲ್ಲವೇ ಈ ದೇಶದ ಎಲ್ಲಾ ಪಕ್ಷದ ಬಹುತೇಕ ರಾಜಕಾರಣಿಗಳು ಜೈಲಿನ ಕಂಬಿಗಳ ಹಿಂದೆ ಇರುತ್ತಿದ್ದರು.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
ಆ ಮುಖ

ಪಾದಯಾತ್ರೆಯ ಹಿಂದೆ ಕುರ್ಚಿ ರಾಜಕಾರಣ ಇದೆಯೇ?

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
2 min read

ಅದು ಜುಲೈ ೨೫, ೨೦೨೩ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೆಡ್ಡಿ ಸಹೋದರರ ಪಂಥಾಹ್ವಾನ ಸ್ವೀಕರಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಈ ಪಾದಯಾತ್ರೆಗೆ ರೆಡ್ಡಿ ಸಹೋದರರು ಅಲ್ಲಾಡಿ ಹೋಗಿದರು. ಅವರು ಜೈಲಿಗೆ ಹೋಗಲು ಈ ಯಾತ್ರೆ ಪೀಠಿಕೆ ಹಾಕಿತ್ತು ಮತ್ತು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು, ಸಿಎಂ ಕುರ್ಚಿ ಮೇಲೆ ಕೂತರು. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅದೇ ದಾರಿ ತುಳಿದಿದ್ದಾರೆ. ಆಗ ಮತ್ತು ಈಗ ಕಾಲ, ಸಮಯ, ಸಂದರ್ಭ, ವಾತಾವರಣ, ಬೀಸುತ್ತಿರುವ ರಾಜಕೀಯ ಗಾಳಿಯ ದಿಕ್ಕು ಬೇರೆ ಬೇರೆ ಇದೆ. ಇದನ್ನು ವಿಜಯೇಂದ್ರ ಸರಿಯಾಗಿ ಗ್ರಹಿಸಿಲ್ಲ ಅನಿಸುತ್ತಿದೆ.

ಮೊದಲನೆಯದಾಗಿ, ಅಕ್ರಮವಾಗಿ ಗಣಿ ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಬಾಚಿದ ರೆಡ್ಡಿ ಸಹೋದರರ ವಿರುದ್ಧ ಸಮಾಜದಲ್ಲಿ ಜನಾಕ್ರೋಶ ಒಳಗೊಳಗೆ ಕುದಿಯುತ್ತಿತ್ತು. ಎರಡನೆಯದಾಗಿ, ಜನಾರ್ಧನ ರೆಡ್ಡಿಯವರು ಸಿದ್ದರಾಮಯ್ಯನವರಿಗೆ ಪಂಥಾಹ್ವಾನ ನೀಡಿದರು. ಮೂರನೆಯದಾಗಿ ರಾಜಕೀಯ ಗಾಳಿ ಬಿಜೆಪಿಯ ವಿರುದ್ಧ ದಿಕ್ಕಿನೆಡೆಗೆ ಬೀಸುತ್ತಿತ್ತು. ನಾಲ್ಕನೆಯದಾಗಿ, ಸಿದ್ದರಾಮಯ್ಯ ಮಾಸ್‌ ಲೀಡರ್‌ ಆಗಿದ್ದರು. ಐದನೆಯದಾಗಿ, ಬಹಳ ಮುಖ್ಯವಾಗಿ ಅಂದಿನ ಕಾಂಗ್ರೆಸ್‌ ಪಕ್ಷ ಸಂಘಟಿತವಾಗಿತ್ತು.

ಈಗ ಮೊದಲನೆಯದಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ  ಬಿ. ನಾಗೇಂದ್ರ ಅವರ ವಿರುದ್ಧ ಜನರಲ್ಲಿ ಮುಖ್ಯವಾಗಿ ವಾಲ್ಮೀಕಿ ಸಮುದಾಯದಲ್ಲಿ ಅಂತಹ ಆಕ್ರೋಶ ಕಂಡುಬರುತ್ತಿಲ್ಲ. ಆಮೇಲೆ ಈಗಾಗಲೇ ಸರ್ಕಾರ ಅವರ ರಾಜೀನಾಮೆ ಪಡೆದಿದೆ. ಎರಡನೆಯದಾಗಿ, ವಿಜಯೇಂದ್ರ ಅವರಿಗೆ ಯಾರೂ ಪಂಥಾಹ್ವಾನ ನೀಡಿಲ್ಲ. ಮೂರನೆಯದಾಗಿ, ರಾಜ್ಯದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿರುವ ಕಾಂಗ್ರೆಸ್‌ ವಿರುದ್ಧ ರಾಜಕೀಯ ಗಾಳಿ ಬೀಸುತ್ತಿದೆ. ನಾಲ್ಕನೆಯದಾಗಿ, ಆ ಗಾಳಿಯನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ವಿಜಯೇಂದ್ರ ಮಾಸ ಲೀಡರ್‌ ಅಲ್ಲ.  ಅವರ ತಂದೆಯ ನಾಮಬಲವೇ ಅವರಿಗೆ ಆಶ್ರಯವಾಗಿದೆ. ಐದನೆಯದಾಗಿ, ಬಿಜೆಪಿ ಒಡೆದ ಮನೆಯಂತಾಗಿದೆ.

ಬಿಜೆಪಿ ಪಕ್ಷದಲ್ಲಿ ಎರಡು ಗುಂಪುಗಳು ಬಹಳ ಪ್ರಬಲವಾಗಿವೆ.  ವಿಜಯೇಂದ್ರ ವಿರೋಧಿ ಬಣದ ಆದ್ಯತೆ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತಲೂ, ವಿಜಯೇಂದ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಾಗಿದೆ. ಹಾಗಾಗಿಯೇ ಈ ಪಾದಯಾತ್ರೆಯ ಕಡೆಗೆ ಪಕ್ಷದ ಹಲವು ನಾಯಕರು ತಲೆಯೇ ಹಾಕುತ್ತಿಲ್ಲ. ಮೊದಲನೆಯ ದಿನ ಆರ್‌ ಅಶೋಕ್‌ ಮತ್ತಿತರರು ಪಾದಯಾತ್ರೆಗೆ ಚಾಲನೆ ನೀಡಿ, ವೇದಿಕೆಯಿಂದ ಕೆಳಗಿಳಿದು ಬೆಂಗಳೂರು ದಾರಿ ಹಿಡಿದವರು ಮತ್ತೇ ಯಾತ್ರೆಯ ದಾರಿಯಲ್ಲಿ ಕಾಣಲೇ ಇಲ್ಲ. ಈ ಪಾದಯಾತ್ರೆ ಯಶಸ್ವಿಯಾದರೆ ವಿಜಯೇಂದ್ರ ಹತ್ತಿದ ಕುದುರೆಯನ್ನು ನಾವು ತಡೆಯಲು ಆಗುವುದಿಲ್ಲವೆಂದು ಭಾವಿಸಿ ಅನೇಕರು ದೂರವೇ ಉಳಿದಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೇಂದ್ರ ಸಚಿವ ವಿ. ಸೋಮಣ್ಣನವರು ʼಈ ಪಾದಯಾತ್ರೆಯ ಬಗ್ಗೆ ನನಗೇನು ಮಾಹಿತಿ ಇಲ್ಲʼ ಎಂದಿದ್ದು

ನವೆಂಬರ್‌ ೨೦೨೬ಕ್ಕೆ ವಿಜಯೇಂದ್ರ ಅವಧಿ ಮುಗಿಯುತ್ತದೆ. ಮತ್ತೇ ಎರಡನೆಯ ಬಾರಿ ಪಕ್ಷದ ಅಧ್ಯಕ್ಷರಾಗಲು ಈ ಪಾದಯಾತ್ರೆ ಮಾಡುತ್ತಿದ್ದಾರೆʼ ಎಂದು ಅವರ ಪಕ್ಷದವರೇ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಅವರ ಪಕ್ಷದ ಕೆಲ ನಾಯಕರು ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್‌ ನಾಯಕ ಕುಮಾರಸ್ವಾಮಿ ʻಈಗಾಗಲೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯಾತ್ರೆಯ ಅವಶ್ಯಕತೆ ಇಲ್ಲʼ ಎಂದಿದ್ದರು.  ಆದಾಗ್ಯೂ ವಿಜಯೇಂದ್ರ ಅವರು ಹಠಕ್ಕೆ ಬಿದ್ದು ಪಾದಯಾತ್ರೆಗೆ ಹೊರಟು, ಇಂದು ಬಳ್ಳಾರಿಗೆ ತಲುಪಿದ್ದಾರೆ.

ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯುವುದು ಬಿಜೆಪಿಯ ಕೆಲವರಿಗೆ ಮಾತ್ರವಲ್ಲ ಜೆಡಿಎಸ್‌ ಪಕ್ಷದ ಕುಮಾರಸ್ವಾಮಿಯವರಿಗೂ ಇಷ್ಟವಿಲ್ಲ. ಏಕೆಂದರೆ, ಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಸಹಜವಾಗಿ ಸಿಎಂ ಆಗಲು ವಿಜಯೇಂದ್ರ ಕ್ಲೇಮ್ ಮಾಡುತ್ತಾರೆ. ಮಗನ ಪರವಾಗಿ ಯಡಿಯೂರಪ್ಪನವರು ಹಠಕ್ಕೆ ಬೀಳುತ್ತಾರ. ಆಗ ಅನಿವಾರ್ಯವಾಗಿ ಬಿಜೆಪಿ ಹೈಕಮಾಂಡ್‌ ವಿಜಯೇಂದ್ರನನ್ನು ಸಿಎಂ ಕುರ್ಚಿ ಮೇಲೆ ಕೂರಿಸುತ್ತದೆ ಎಂಬ ದುರಾಲೋಚನೆ ಕುಮಾರಸ್ವಾಮಿಯವರಿಗೂ ಇದ್ದಂತೆ ಕಾಣುತ್ತದೆ. ಹಾಗಾಗಿಯೇ ಯಾತ್ರೆಯಲ್ಲಿ ಅವರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಣಿಸಲಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic
50 ಪದ

ಸರ್ಕಾರಿ ಮನೆಗಾಗಿ ಸಚಿವರ ಕಿತ್ತಾಟ

ದ ಪಾಲಿಟಿಕ್ ಸ್ಟಾಪ್‌
ದ ಪಾಲಿಟಿಕ್ ಸ್ಟಾಪ್‌
1 min read

ಸಿದ್ದರಾಮಯ್ಯನವರು ಸಿಎಂ ಕುರ್ಚಿ ಸುಲಭವಾಗಿ ಬಿಟ್ಟುಕೊಟ್ಟಿದ್ದಕ್ಕಾಗಿ   ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಡಿಕೆಶಿ ಬಣ ನಿರಾಳವಾಗಿತ್ತು. ಈಗ ಸರ್ಕಾರಿ ನಿವಾಸಕ್ಕಾಗಿ ಸಂಪುಟದ ಸಹೋದ್ಯೋಗಿಗಳ ಜಗಳ ಬೀದಿಗೆ ಬಂದಿದೆ.  ಮೇಲ್ನೋಟಕ್ಕೆ ಇದು ಮಾಜಿ ಸಚಿವ ಎಸ್‌. ಸಿ. ಮಹಾದೇವಪ್ಪ ಮತ್ತು ಸಿದ್ದರಾಮಯ್ಯನವರ ಆಪ್ತ ಹಾಲಿ ಸಚಿವ ಭೈರತಿ ಸುರೇಶ್‌ ನಡುವಿನ ಜಗಳ ಅನಿಸುತ್ತದೆ.

ಆದರೆ, ಪ್ರಸ್ತುತ ಸಿದ್ದರಾಮಯ್ಯನವರ ಮತ್ತು ಮಹಾದೇವಪ್ಪ, ಜಮೀರ್‌ ಅಹ್ಮದ್‌, ಸತೀಶ್‌ ಜಾರಕಿಹೊಳಿ ನಡುವಿನ ಸಂಬಂಧ ಹಳಸಿದೆ. ಅದರ ಒಂದು ಭಾಗವೇ ಈ ಬೀದಿ ಜಗಳ. ಇಲ್ಲದಿದ್ದರೆ ಇಷ್ಟು ಸಣ್ಣ ವಿಷಯಕ್ಕೆ  ಹೀಗೆ ಬೀದಿ ರಂಪಾಟ ನಡೆಯುತ್ತಿರಲಿಲ್ಲ.

ನಿಖರ ವಿಶ್ಲೇಷಣೆಯ ದಿಟ್ಟ ಡಿಜಿಟಲ್ ಮಾಧ್ಯಮ‌ ಫಾಲೋ ಮಾಡಿ

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್