ದ ಪಾಲಿಟಿಕ್

ಅಧಿಕಾರದಾಹಿ ನಿತೀಶ್ ಮತ್ತೆ ಬಿಜೆಪಿಯ ಸಖ್ಯ  ತೊರೆದಿದ್ದೇಕೆ? 

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಇಂದು ಜೆಡಿ(ಯು) ಮುಖಂಡ ನಿತೀಶ್ ಕುಮಾರ್ RJD ನೇತೃತ್ವದ ಮಹಾಮೈತ್ರಿ ಕೂಟದಿಂದ ಬಿಹಾರದದಲ್ಲಿ 8ನೇ ಬಾರಿಗೆ ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಕಡಿದುಕೊಂಡಿದ್ದಾರೆ. ಈ ಹಿಂದೆ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ನರೇಂದ್ರ ಮೋದಿಯನ್ನು ಬಿಜೆಪಿ ಘೋಷಣೆ ಮಾಡಿದ್ದಾಗ ಬಿಜೆಪಿಯ ಜತೆ ಮುನಿಸುಕೊಂಡು  2015 ರಲ್ಲಿ ನಂಟನ್ನು ಕಡೆದುಕೊಂಡಿದ್ದರು. ಮತ್ತೆ ಈಗ ಸಖ್ಯ ತೊರೆದದ್ದು ಹೊರತು ಪಡಿಸಿದರೆ ಬಿಜೆಪಿ – ನಿತೀಶ್ ಮೈತ್ರಿ ಬಹಳ ಗಟ್ಟಿ ಇತ್ತು.

2017 ರಲ್ಲಿ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಅಂದಿನ ಮಹಾಮೈತ್ರಿ ತೊರೆದು ಬಿಜೆಪಿ ನೇತೃತ್ವದ NDA ಜತೆ ಸೇರಿ ಸರ್ಕಾರ ರಚಿಸಿದ್ಧರು. ಇಂದು ಅದೇ ವ್ಯಕ್ತಿಯ ಜೊತೆಗೆ ಸೇರಿ ಸರ್ಕಾರ ರಚಿಸುತ್ತಿರುವುದರ ಹಿಂದೆ ಚಾಣಾಕ್ಷ ರಾಜಕಾರಣಿ ನಿತೀಶ್ ಅವರ ರಾಜಕೀಯ ಲೆಕ್ಕಾಚಾರದ ಜೊತೆಗೆ ಏನೇ ಆದರೂ ಬಿಹಾರ ಮುಖ್ಯಮಂತ್ರಿ ನಾನೇ ಇರಬೇಕು ಎನ್ನುವ ಅಧಿಕಾರದ ದಾಹವೂ ಇದೆ. 

ಕಳೆದ ವರ್ಷದಲ್ಲಿ ಜಾತಿ ಸಮೀಕ್ಷೆ, ಅಗ್ನಿಪಥ ಯೋಜನೆ, ಜನಸಂಖ್ಯಾ ನಿಯಂತ್ರಣದಂತಹ ವಿಚಾರದಲ್ಲಿ ಎರಡೂ ಪಕ್ಷಗಳು (ಬಿಜೆಪಿ – ಜೆಡಿಯು) ಭಿನ್ನ ಭಿನ್ನ ನಿಲುವು ಪ್ರದರ್ಶಿಸಿವೆ. ಇವೆರಡೂ ಪಕ್ಷಗಳು ಕೂಡಿಕೊಂಡು ಸರ್ಕಾರ ರಚಿಸಿದಾಗಿನಿಂದಲೂ ಎರಡರ ಮಧ್ಯೆ ಅಂತಹ ಬಾಂಧವ್ಯವೇನು ಏರ್ಪಟ್ಟಿಲ್ಲ. ತದ್ವಿರುದ್ಧವಾಗಿ ಮೊದಲಿದ್ದ ಹೊಂದಾಣಿಕೆಯ ಮಧುರ ಸಂಬಂಧವೂ ಹಳಸಿದೆ. ತತ್ಪರಿಣಾಮವಾಗಿ ನಿತೀಶ್ ಬಿಜೆಪಿ ಜತೆಗಿನ ತನ್ನ ಸಖ್ಯವನ್ನ ಕೊನೆಗಾಣಿಸಿದ್ದಾರೆ. ತೇಜಸ್ವಿ ಯಾದವ್ ಜತೆಗಿನ ನಿತೀಶ್ ಗೆಳೆತನ ಎಷ್ಟು ದೂರ ಸಾಗುತ್ತದೆ ಎನ್ನುವುದು ಕಾಲುವೆ ಉತ್ತರಿಸಬೇಕು. 

ಇದನ್ನೂ ಓದಿ : ಫೈರ್ ಬ್ರ್ಯಾಂಡ್ ತೋಂಟದಾರ್ಯ ಸ್ವಾಮೀಜಿ ಇವತ್ತಿಗೆ ಏಕೆ ಮುಖ್ಯ?

ಪ್ರಶಕ್ತ ನಿತೀಶ್ ಬಿಜೆಪಿಯ ಸಖ್ಯ ತೊರೆಯಲು ಕೆಲವು ಬಲವಾದ ರಾಜಕೀಯ ಕಾರಣಗಳಿವೆ. ಒಂದನೆಯದಾಗಿ, ಬಿಜೆಪಿಯು ಜೆಡಿಯು ಮಾಜಿ ನಾಯಕ ಆರ್.ಪಿ.ಸಿಂಗ್ ಬಳಸಿಕೊಂಡು ತನ್ನನ್ನು ದುರ್ಬಲಗೊಳಿಸಲು ಸತತವಾಗಿ ಪ್ರಯತ್ನಿಸುತ್ತಿದೆ ಎನ್ನುವುದು  ನಿತೀಶ್ ಗೆ ಮನದಟ್ಟಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಗೆ ಆದ್ಯತೆ ನೀಡಿ, ನಮ್ಮ ಪಕ್ಷಕ್ಕೆ ಕಡಿಮೆ ಸೀಟು ಬರುವಂತೆ ಬಿಜೆಪಿ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿತ್ತು ಎನ್ನುವ ಅಸಮಾಧಾನ ಕಾಡುತಿತ್ತು.

ಎರಡನೆಯದಾಗಿ, ಬಿಹಾರದಲ್ಲಿ ಬಿಜೆಪಿಗೆ ಯಾವುದೇ ಭದ್ರ ನೆಲೆಯಿಲ್ಲ. ಅದು ತನ್ನ ಹೆಸರನ್ನು ಬಳಸಿಕೊಂಡು ಬೆಳೆಯುತ್ತಿದೆ ಎನ್ನುವ ಅನುಮಾನವೂ ಸಖ್ಯ ತೊರೆಯಲು ಒಂದು ಕಾರಣವಾಗಿದೆ. ಬಿಜೆಪಿಯ ಮೇಲ್ಜಾತಿಯ ಮತಗಳ ಜತೆಗೆ  ಜೆಡಿಯು ಪಕ್ಷದ ಯಾದವೇತರ ಇತರ ಹಿಂದುಳಿದ ವರ್ಗಗಳ ಮತ್ತು ಅತಿ ಹಿಂದುಳಿದ ವರ್ಗಗಳ ವೋಟ್ ಬ್ಯಾಂಕ್ ನ್ನು ಹಂತಹಂತವಾಗಿ ತನ್ನದಾಗಿಸಿಕೊಳ್ಳುತ್ತಿದೆ ಎನ್ನುವ ಆತಂಕ ಅವರಲ್ಲಿ ಮನೆಮಾಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಕಳೆದ ಚುನಾವಣೆಯಲ್ಲಿ ಜೆಡಿಯು ಕೇವಲ 15.4% ಪ್ರತಿಶತ ಮತ ಪಡೆದು 43 ಸೀಟುಗಳನ್ನು ಮಾತ್ರ ಗೆದ್ದಿತ್ತು. ಆದರೆ ಬಿಜೆಪಿ 19.5% ಪ್ರತಿಶತ ಮತ ಕಬಳಿಸಿ 74 ಸೀಟು ತನ್ನದಾಗಿಸಿಕೊಂಡಿದ್ದು ನಿತೀಶ್ ಗೆ ನಿದ್ದೆಗೆಡಸಿತ್ತು. ಬಿಜೆಪಿ ತನ್ನ ಹೆಸರಿನಲ್ಲಿ ರಾಜ್ಯದಲ್ಲಿ ಗಟ್ಟಿಯಾಗಿ ಬೆಳೆಯುತ್ತಿದೆ ಎನ್ನುವುದು ಕೇವಲ ನಿತೀಶ್ ಕುಮಾರ್ ಅವರ ಅಭಿಪ್ರಾಯ ಮಾತ್ರ ಆಗಿರದೆ ಪಕ್ಷದ ಅನೇಕ ಶಾಸಕರ ಮತ್ತು ಮುಖಂಡರ ಅಭಿಪ್ರಾಯವೂ ಆಗಿತ್ತು.

ಇವೆಲ್ಲಕ್ಕಿಂತ ಮುಖ್ಯವಾಗಿ ಮೂರನೆಯದಾಗಿ, ಬಿಜೆಪಿಯೂ ಪ್ರಬಲಗೊಳ್ಳುವುದು ಅದರ ಪ್ರಾದೇಶಿಕ ಮಿತ್ರ ಪಕ್ಷಗಳಿಗೆ ಕೆಟ್ಟ ಸುದ್ದಿಯಾಗಿದೆ ಎನ್ನುವ ಕಠೋರ ಸತ್ಯವನ್ನು ನಿತೀಶ್ ತಡವಾಗಿ ಆದರೂ ಅರಿತುಕೊಂಡಿದ್ದು.  

ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿವಾಗಿಯೋ ಬಿಜೆಪಿಯಿಂದಾಗಿಯೇ ಮಹಾರಾಷ್ಟ್ರ ದಲ್ಲಿ  ‘ಶಿವಸೇನೆ’ಯು ವಿಭಜನೆಯಾಗಲು; ಪಂಜಾಬಿನಲ್ಲಿ ‘ಅಕಾಲಿದಳ’ ದುರ್ಬಲವಾಗಲು; ತಮಿಳುನಾಡಿನಲ್ಲಿ ‘ಎಐಎಡಿಎಂಕೆ’ ವಿಭಜನೆ ಆಗಲು;  ಆಂಧ್ರಪ್ರದೇಶದಲ್ಲಿ ‘ಟಿಡಿಪಿ’ ಇಂದು ದುರ್ಬಲವಾಗಲು; ಗೋವಾದಲ್ಲಿ ಇಂದು ‘ಎಂಜಿಪಿ’ ಅವನತಿಯ ಹಾದಿ ಹಿಡಿಯಲು;  ಆಸ್ಸಾಂ ರಾಜ್ಯದಲ್ಲಿ ‘ಎಜಿಪಿ’ ಪಕ್ಷ ಅಂಚಿಗೆ ಸರಿಯಲು;  ಬಿಹಾರದಲ್ಲಿ ‘ಎಲ್.ಜೆ.ಪಿ’ ವಿಭಜನೆ ಆಗಲು; ಹರಿಯಾಣಾದಲ್ಲಿ ‘ಐಎನ್‌ಎಲ್ ಡಿ’ ದುರ್ಬಲಗೊಳ್ಳಲು; ಜಮ್ಮುಕಾಶ್ಮೀರದಲ್ಲಿ ‘ಪಿಡಿಪಿ’ ತನ್ನ ಉಳಿವಿಗಾಗಿ ಹೋರಾಡುತ್ತಿರುವುದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿಯೇ ಮೂಲಕಾರಣವಾಗಿದೆ ಎನ್ನುವ ವಾಸ್ತವಿಕತೆಯನ್ನು ಅರಿತುಕೊಂಡು, ಅದನ್ನು ತನ್ನ ಪಕ್ಷದ ಶಾಸಕರಿಗೂ ಮತ್ತು ಮುಖಂಡರಿಗೂ ಮನವರಿಕೆ ಮಾಡಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಮೇಲೆಯೇ ಬಿಜೆಪಿಯ ಸಖ್ಯ ತೊರೆಯುವ ಕಾರ್ಯಕ್ಕೆ ಅವರು ಕೈಹಾಕಿದ್ದಾರೆ.

ನಾಲ್ಕನೆಯದಾಗಿ, ಬಿಜೆಪಿಯ ವಿರುದ್ಧ ಸಿಡಿದೆದ್ದು, ಮೈತ್ರಿ ತೊರೆದು ಗಟ್ಟಿಯಾಗಿ ತಮ್ಮ ರಾಜ್ಯದಲ್ಲಿ ಇಂದು ನೆಲೆನಿಂತು, ಉಳಿದು, ಬೆಳೆದಿರುವ ಪಶ್ಚಿಮ ಬಂಗಾಳದ ‘ಟಿಎಂಸಿ’ ಮತ್ತು ಒಡಿಸಾದ  ‘ಬಿಜೆಡಿ’ ಪಕ್ಷದಂತೆ ಜೆಡಿಯು ಪಕ್ಷವೂ ಬಿಜೆಪಿಯ ಸಖ್ಯ ತೋರಿದರೆ ಮಾತ್ರ ಬಿಹಾರದಲ್ಲಿ ಗಟ್ಟಿಯಾಗಿ ಬೆಳೆಯಬಹುದು; ಇಲ್ಲದಿದ್ದರೆ ಈ ಸಖ್ಯ ಹೀಗೆ ಮುಂದುವರೆಸಿದರೆ ಬಿಜೆಪಿ ಮಿತ್ರ ಪ್ರಾದೇಶಿಕ ಪಕ್ಷಗಳಂತೆ ನಾವೂ ಸಹ ದುರ್ಬಲಗೊಳ್ಳಬಹುದು, ಇಲ್ಲವೇ ಅಳಸಿಹೋಗಬಹುದು ಎನ್ನುವ ವಿವೇಕವೂ ಅವರನ್ನು ಬಿಜೆಪಿಯಿಂದ ಕಾಲ್ಕೆತ್ತಲು ಪ್ರೆರಣೆ ನೀಡಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!