ದ ಪಾಲಿಟಿಕ್

ಫೈರ್ ಬ್ರ್ಯಾಂಡ್ ತೋಂಟದಾರ್ಯ ಸ್ವಾಮೀಜಿ ಇವತ್ತಿಗೆ ಏಕೆ ಮುಖ್ಯ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ನಾಡಿನ ‘ಪ್ರಗತಿಪರ’ ಮತ್ತು ‘ಹೋರಾಟ’ದ ಸ್ವಾಮೀಜಿಗಳೆಂದೆ ಖ್ಯಾತರಾಗಿದ್ದ ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ 2018ರಲ್ಲಿ ಹಠಾತ್ತನೇ ನಿರ್ಗಮಿಸಿದ್ದು ಇಡೀ ಸಮಾಜಕ್ಕೆ, ಅದರಲ್ಲೂ ಲಿಂಗಾಯತ ಹೋರಾಟಕ್ಕೆ ದೊಡ್ಡ ಹೊಡೆತ ಬಿದ್ದದ್ದು ಈಗ ಢಾಳಾಗಿ ಎದ್ದು ಕಾಣುತ್ತಿದೆ. ಅವರು ಈಗಿದ್ದಿದ್ದರೆ ಲಿಂಗಾಯತ ಹೋರಾಟದ ನದಿಯೂ ಅದೇ ರಭಸದಿಂದ ಹರಿಯುತ್ತಿತ್ತು ಎನ್ನುವುದು ನಿರ್ವಿವಾದ.

ಆದರೀಗ, ಒಂದೆಡೆ ಸರ್ಕಾರದ ಅನುದಾನಕ್ಕೆ ಬಾಯ್ದೆರೆದು ಲಿಂಗಾಯತ ಹೊರಾಟವನ್ನು ಮುಂದುವರೆಸುವುದು ತಮ್ಮ ಪ್ರಥಮ ಆದ್ಯತೆ ಎನ್ನುವುದನ್ನು ಮರೆತು, ಮಳೆ ಬಂದಾಗ ಕೊಡೆ ಹಿಡಿಯುವ ಚಾಳಿಯನ್ನು ಕರಗತಮಾಡಿಕೊಂಡಿರುವ ಬಹುತೇಕ ಮಠಾಧೀಶರು; ಇನ್ನೊಂದೆಡೆ, ಅಂದು ಹೋರಾಟದ ಮುಂಚೂಣಿಯಲ್ಲಿದ್ದ ರಾಜಕಾರಣಿಗಳ ಅವಕಾಶವಾದಿತನ; ಮತ್ತೊಂದೆಡೆ, ರಾಜಕೀಯ ಪ್ರಜ್ಞೆ ಇಲ್ಲದೆ ಜಾತಿ ಕಾರಣಕ್ಕಾಗಿ ಹಾವಿಗೆ ಹಾಲೆರೆಯುತ್ತಿರುವ ಲಿಂಗಾಯತ ಸಮುದಾಯ; ಮಗದೊಂದೆಡೆ, ನಾಡಿನ  ಬಸವಾನುಯಾಯಿಗಳ  ಏಕತೆಯ  ಕೊರತೆಯಿಂದಾಗಿ ಇಂದು ಲಿಂಗಾಯತ ಹೋರಾಟದ ಕಳೆ ಗುಂದಿದೆ.

ಗದಗ ಶ್ರೀಗಳು ಈ ನಾಡಿನ ಬಹುತೇಕ ಶ್ರೀಗಳಂತೆ  ಜೀವಗಳ್ಳರಾಗಿ ಬದುಕುತ್ತಾ, ಅನುದಾನದ ಆಮಿಷಕ್ಕೆ  ಜೊತುಬಿದ್ದು, ರಾಜಕಾರಣಿಗಳಿಗೆ ಗೊಡ್ಡು ಸಲಾಂ ಹೊಡೆದು, ಸರ್ಕಾರಕ್ಕೆ  ನಡುಬಗ್ಗಿದವರಲ್ಲ.  ಕನ್ನಡ ನಾಡು, ನುಡಿ,ಜಲ,ಭಾಷೆ ವಿಚಾರದಲ್ಲಿ ಜನರ ಧ್ವನಿಯಾಗಿದ್ದರು. 

ಅವರು, ‘ಪೊಸ್ಕೋ’ ಕಂಪನಿಗಾಗಿ ರೈತರ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ಯೋಜನೆಯ ವಿರುದ್ಧ ನಡೆಸಿದ ಹೋರಾಟ; ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡುವುದರ ವಿರೋಧಿ ಚಳವಳಿಯನ್ನು ಮುನ್ನೆಡಿಸಿದ್ದು ಸೇರಿದಂತೆ ಲಿಂಗಾಯತ ಹೋರಾಟಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದು ಈಗಿನ ಮಠಾಧೀಶರಿಗೆ ದಿಕ್ಸೂಚಿಯಾಗಿದೆ.

ತೋಂಟದಾರ್ಯ ಮಠದ ಜಾತ್ರೆಯನ್ನು ಜನಮುಖಿಗೊಳಿಸಿದ್ದಲ್ಲದೆ, ಸರ್ವಧರ್ಮದವರು ಪಾಲ್ಗೊಳ್ಳುವಂತೆ ಮಾಡಿದ್ದರು. ಅನ್ನ, ಅಕ್ಷರ, ಪುಸ್ತಕ, ಸಂಸ್ಕೃತಿ ದಾಸೋಹದ ಪರಂಪರೆಯನ್ನು ಹುಟ್ಟು ಹಾಕಿದ ಶ್ರೀಗಳು ಸರ್ವಧರ್ಮ ಸಹಿಷ್ಣುತೆಗೆ ಹೆಸರಾಗಿದ್ದರು. ಇವರ ಬಸವಪರ ನಿಲುವಿನಿಂದಾಗಿ ದಲಿತರು, ಅಲ್ಪಸಂಖ್ಯಾತರು ಮಠದ ಅವಿಭಾಜ್ಯ ಅಂಗವಾಗಿದ್ದರು. 

ಇಂದು ನಾಡಿನ ಕೆಲ ಛೋಟಾ-ಮೋಟಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಕೆಲವು ಕಾವಿಧಾರಿಗಳು ತಮ್ಮ ಸಂಸ್ಥೆಯ ಅಥವಾ ಮಠಪೀಠದ  ಸಮಾಜದ ಆಸ್ತಿಯನ್ನು ಲಪಟಾಯಿಸಲು ಹೊಂಚುಹಾಕಿ ತುದಿಗಾಲಲ್ಲಿ ನಿಂತಿದ್ದರೆ, ಕೆಲವರು ತಮ್ಮ ಪ್ರಚಾರದ ತೇವಲಿಗೆ ಮಠದ ಆಸ್ತಿಯನ್ನು ಕರಗಿಸುತ್ತಿದ್ದಾರೆ. ಇಂತಹವರಿಗೆ ಗದಗ ಶ್ರೀಗಳು ‘ಶೀವಾನಂದ ಪಟ್ಟಣಶೆಟ್ಟಿ’ ಎಂಬ ಪ್ರಾಮಾಣಿಕ ಆಡಳಿತಾಧಿಕಾರಿಯ ನೆರವಿನಿಂದ ಶ್ರೀಮಠದ ಆಸ್ತಿಯನ್ನು ಕಾನೂನು ಹೋರಾಟದ ಮೂಲಕ ಮರಳಿ ಪಡೆದು, ಅದನ್ನು ಉಳಿಸಿ, ಬೆಳೆಸಿದ್ದನ್ನು ಕಿವಿಹಿಂಡಿ ತೋರಿಸಬೇಕು. 

ಇಂತಹ ಜನಪರ- ಪ್ರಗತಿಪರ ಸ್ವಾಮೀಜಿಗಳ  ಅವಶ್ಯಕತೆ ಈ ನಾಡಿಗಿದೆಯೇ ವಿನಾ ಜಾತಿಯತೆಯ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ಜಾತಿ-ಉಪಜಾತಿ ಶ್ರೀಗಳಲ್ಲ. ಇಂದು ಈ ನಾಡಿನ ಬಹುತೇಕ ಮಠಗಳು ತಮ್ಮ ಕುಲಬಾಂಧವರ ಮತ್ತು ರಕ್ತಸಂಬಂಧಿಗಳ ಆಡಂಬೋಲವಾಗಿವೆ. ನಾಡಿನ ಯಾವುದೇ ಮಠಕ್ಕೂ ಕಾಲಿಟ್ಟರೂ ಜಾತಿ/ಉಪಜಾತಿಯ ವಾಸನೆ ಮೂಗಿಗೆ ಬಡಿಯುತ್ತದೆ. ಇದಕ್ಕೆ ಅಪವಾದವೆಂಬಂತೆ ಅಲ್ಲೊಂದು ಇಲ್ಲೊಂದು ಮಠಗಳು ಈಗಲೂ ಜಾತ್ಯತೀತವಾಗಿರುವುದು ಸಖೇದಾಶ್ಚರ್ಯವಾಗಿದೆ.

 ನಮ್ಮ ನಡುವೆ ಗದಗ ಶ್ರೀಗಳ ಸ್ಥಾನವನ್ನು ತುಂಬುವ ಕೆಲ ಸಮರ್ಥ ಸ್ವಾಮೀಜಿಗಳು ಈಗಲೂ ಇದ್ದಾರೆ. ಆದರೆ, ಅವರು ಒಂದಡಿ ಹೆಜ್ಜೆಯೂ ಮುಂದೆ ಇಡದೆ ಹಿಂದೆಟು ಹಾಕುತ್ತಿರುವುದು ಈ ನಾಡಿನ ಬಹುದೊಡ್ಡ  ದುರಂತವಾಗಿದೆ. ಈಗ ಸಮಾಜಕ್ಕೆ ಗದಗ ಶ್ರೀಗಳ ಹೋರಾಟದ ಬದ್ಧತೆ, ಜನ ನಿಷ್ಠೆ, ಸಮಾನತೆ ಮತ್ತು ಸಹಬಾಳ್ವೆಯಲ್ಲಿದ್ದ ಅವರ ಅಚಲ ನಂಬಿಕೆಯೊಂದೆ ದಾರಿದೀಪವಾಗಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!