”ಮೋದಿಯವರನ್ನು ನೋಡುವುದೇ ಸೌಭಾಗ್ಯ; ಇಂತಹ ಪ್ರಧಾನಿ ದೊರೆತದ್ದು ದೇಶದ ಸುದೈವ; ದೇಶ ಕಂಡ ಬಹಳ ಅಪರೂಪದ ಪ್ರಧಾನಿ….” ಎಂದು ಹೊಗಳಿದ್ದು ಯಾರೋ ಬಿಜೆಪಿಯ ರಾಜಕಾರಣಿಗಳಲ್ಲ ಅಥವಾ ಅವರ ಆಸ್ಥಾನದ ಸಾಹಿತಿಗಳೂ ಅಲ್ಲ. ಹೊಗಳಿದ್ದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಗಳು. ನಿನ್ನೆ ಅವರು ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಿರ್ಮಿಸಿರುವ ಕೆಎಸ್ಎಸ್( ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ) ಸಂಸ್ಕೃತ ಪಾಠಶಾಲೆ-ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮೋದಿಯವರೇ ಮುಜುಗರ ಪಡುವಂತೆ ಹಲವು ವಿಶೇಷಣಗಳನ್ನು ಪೋಣಿಸಿ ಹೊಗಳಿದ್ದಾರೆ.
ಈ ನೆಲದ ನೀಜದನಿಗಳಾದ ಬಸವಣ್ಣ, ಬುದ್ಧ, ಅಂಬೇಡ್ಕರ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದರ ಸಮಾಧಿಯ ಮೇಲೆ ಹಿಂದೂ ರಾಷ್ಟ್ರ ಅರ್ಥಾತ್ ಬ್ರಾಹ್ಮಣ್ಯ ರಾಷ್ಟ್ರ ಕಟ್ಟಲು ಶ್ರಮಿಸುತ್ತಿರುವ ಮತ್ತು ಈ ದೇಶದ ಇಂಚಿಂಚೂ ಭೂಮಿಯನ್ನು ಹಾಗೂ ದೇಶದ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆಗಳನ್ನು ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ಖೂಳರ ಪಾದಕ್ಕೆ ಅರ್ಪಿಸುತ್ತಿರುವ ಮೋದಿಯವರನ್ನು ಸಿದ್ದೇಶ್ವರ ಸ್ವಾಮೀಜಿಗಳು ಹೊಗಳಿದ್ದು ಕೆಲವರು ಆಶ್ಚರ್ಯವೂ ಮತ್ತು ವಿಷಾದವೂ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಇದೇ ವಾಸ್ತಿವಿಕತೆ. ವೈಯಕ್ತಿಕವಾಗಿ ನನಗಂತೂ ಅವರ ಮಾತುಗಳನ್ನು ಕೇಳಿ ಆಶ್ಚರ್ಯವೇನು ಆಗಲಿಲ್ಲ. ಯಾರೇ ಆಗಲಿ ಒಮ್ಮೆಯಾದರೂ ಅವರ ಪ್ರವಚನ ಆಲಿಸಿದರೆ ಮತ್ತು ಅವರ ಸುತ್ತಲಿನ ವಾತವರಣ ಸೂಕ್ಷ್ಮ ವಾಗಿ ಗಮನಿಸಿದರೆ ನಿನ್ನೆಯ ಅವರ ಮಾತುಗಳನ್ನು ಕೇಳಿ ಆಶ್ಚರ್ಯವಾಗಲಿ, ವಿಷಾದವಾಗಲಿ ಖಂಡಿತಾ ವ್ಯಕ್ತಪಡಿಸುವುದಿಲ್ಲ. ಸಿದ್ದೇಶ್ವರ ಸ್ವಾಮಿಗಳು ಚಾತುರ್ವರ್ಣ ವ್ಯವಸ್ಥೆಯ ಪ್ರತಿಪಾದಕರು. ತಮ್ಮ ಅನೇಕ ಪ್ರವಚನದ ವೇದಿಕೆಯಲ್ಲಿ ಚಾತರ್ವರ್ಣ ವ್ಯವಸ್ಥೆಯನ್ನು ಗಟ್ಟಿಯಾಗಿ ಸಾರುವ ‘ಭಗವತ್ ಗೀತೆ’ಯನ್ನು ಜಗತ್ತಿನ ಸರ್ವಶ್ರೇಷ್ಠ ಗ್ರಂಥವೆಂದು ಸಾರಿ ಸಾರಿ ಮೇಲಿಂದ ಮೇಲೆ ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಾರೆ. ಕರುನಾಡಿನ ಶ್ರೇಷ್ಠ ಕೊಡುಗೆಯಾದ, ಜನ-ಜೀವಪರವಾಗಿರುವ ‘ವಚನ ಸಾಹಿತ್ಯ’ ಜಗತ್ತಿನ ಉತ್ಕೃಷ್ಟ ಸಾಹಿತ್ಯವೆಂದು ಅಪ್ಪಿತಪ್ಪಿಯೂ ಹೇಳುವುದಿಲ್ಲ.
ಇವರು ಆರೂಢ ಸಂಪ್ರದಾಯವನ್ನು ಬಳಸಿಕೊಂಡು ‘ಮಾಯಾ ಸಂಪ್ರದಾಯ’ವನ್ನು ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದ ಮಧ್ಯೆ ಹುಲುಸಾಗಿ ಬೆಳೆಸುತ್ತಿದ್ದಾರೆ. ಬಸವಾದಿ ಶರಣರು ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ವೆಂದು ಸಾರಿ ಈ ಮಾಯಾ ಸಂಪ್ರದಾಯದಿಂದ ನಮ್ಮನ್ನು ವಾಸ್ತವಿಕತೆಯೆಡೆಗೆ ತಂದಿದ್ದಾರೆ. ಈ ‘ಮಾಯಾ ಸಂಪ್ರದಾಯ’ ಎಲ್ಲೆಲ್ಲಿ ಚಿಗುರುತ್ತದೆಯೋ ಅಲ್ಲಿ ಲಿಂಗಾಯತ ತತ್ವ ಉಸಿರು ಗಟ್ಟಿ ಸಾಯುತ್ತದೆ ಎನ್ನುವ ಸಣ್ಣ ಪ್ರಜ್ಞೆ ಲಿಂಗಾಯತ ಸಮುದಾಯದ ಕೆಲ ವಿರಕ್ತ ಮಠಾಧೀಶರಲ್ಲಿ, ಜನರಲ್ಲಿ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ.
ಬಸವಾದಿಗಳು ಹಚ್ಚಿದ ಲಿಂಗಾಯತ ತತ್ವವೆನ್ನುವ ಅರ್ಥಾತ್ ಷಟಸ್ಥಲ ಸಿದ್ಧಾಂತವೆನ್ನುವ ಜ್ಯೋತಿಯನ್ನು ಆರದಂತೆ ಕಾಪಾಡುತ್ತಿರುವ ಈ ನೆಲದ ಬಸವ ತತ್ವದ ಪ್ರವಚನಕಾರರು, ಮಠಾಧೀಶರು ಮತ್ತು ಸ್ವಾಮೀಜಿಗಳು, ಸಿದ್ದೇಶ್ವರ ಸ್ವಾಮೀಜಿಗಳಿಗಿಂತ ಸಾವಿರ ಪಾಲು ಮೇಲು ಎನ್ನುವುದು ನನ್ನ ಖಚಿತ ಅಭಿಪ್ರಾಯವಾಗಿದೆ. ಆದರೆ ಈ ಸುಡುವಾಸ್ತವವನ್ನು ಮತ್ತು ಕಹಿ ಸತ್ಯವನ್ನು ನಮ್ಮ ಕೆಲ ಲಿಂಗಾಯತ ಮಠಾಧೀಶರು ಅರಿಯದೇ ಇರುವುದು ಸಖೇದಾಶ್ಚರ್ಯವಾಗಿದೆ.
ಇದನ್ನೂ ಓದಿ: ಬಸವರಾಜ ಪಾಟೀಲ್ ಸೇಡಂ ಅವರಿಗೊಂದು ಬಹಿರಂಗ ಪತ್ರ
ಹಿಂದೊಮ್ಮೆ ಬೀದರ ಜಿಲ್ಲೆಯ ‘ಅಮರೇಶ್ವರ ಪದವಿ ಮಹಾವಿದ್ಯಾಲಯ’ದಲ್ಲಿ ‘ಜ್ಞಾನ-ವಿಜ್ಞಾನ ಸಮಿತಿ’ ಇವರ ಪ್ರವಚನವನ್ನು ಆಯೋಜಿಸಿತ್ತು. ಆಗ ನಾನು ಅಮರೇಶ್ವರ ಕಾಲೇಜಿನಲ್ಲೇ (ಬಿಎ ಪದವಿ) ಓದುತ್ತಿದ್ದೆ. ಇವರ ಸಮ್ಮೋಹನಕ್ಕೆ ಒಳಗಾಗಿ ತದೇಕಚಿತ್ತದಿಂದ ಇಡೀ ಒಂದು ವಾರ ಇವರ ಪ್ರವಚನವನ್ನು ಆಲಿಸಿದೆ. ಪ್ರವಚನದ ಆರಂಭಕ್ಕೂ ಮುನ್ನ ಸಂಸ್ಕೃತ ಶ್ಲೋಕದಲ್ಲಿ ಪ್ರಾರ್ಥನೆ, ಇವರ ಅನಸ್ತೇಷಿಯಾ ಮಾದರಿಯ ಬ್ರಾಹ್ಮಣ್ಯದ ಮಾತುಗಳು, ಹುಸಿ ಸರಳತೆ ನನಗೆ ಕಿರಿಕಿರಿ ಉಂಟು ಮಾಡಿತ್ತು.
ನನ್ನೊಳಗೆ ಆಗತಾನೆ ಪ್ರವೇಶಿಸಿದ ಬಸವಣ್ಣ ಆಡಿದ ಮಾತುಗಳೆ ಬೇರೆ, ಇವರಾಡುತ್ತಿರುವ ಮಾತುಗಳೆ ಬೇರೆ ಎಂದೆನಿಸಿತು. ಅವರ ಪ್ರವಚನದಲ್ಲಿ ಓತಪ್ರೋತವಾಗಿ ವೇದ,ಆಗಮ,ಪುರಾಣ, ಭಗವತ್ ಗೀತೆ ಹರಿದಾಡುತ್ತಿತ್ತು. ಮಧ್ಯೆ-ಮಧ್ಯೆ ಆಗೊಮ್ಮೆ ಈಗೊಮ್ಮೆ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣನ ವಚನಗಳು ಬರುತ್ತಿದ್ದವು, ಆದರೆ, ಮಾಯಾ ಸಂಪ್ರದಾಯವನ್ನು ಪರಿಣಾಮಕಾರಿಯಾಗಿ ಜನರಿಗೆ ದಾಟಿಸಲು/ಮನವರಿಕೆ ಮಾಡಿಸಲು ಬಸವಾದಿಗಳ ವಚನಗಳನ್ನು ಬಳಸುತ್ತಾರೆ ಎನ್ನುವುದು ಸ್ಪಷ್ಟವಾಯಿತು. ಆವೋತ್ತೆ ಕೊನೆ ಅಂದಿನಿಂದ ಅವರ ಪ್ರವಚನ ಕೇಳುವ,ಅವರ ಬರೆಹಗಳನ್ನ ಓದುವ ಗೋಜಿಗೆ ನಾನು ಹೋಗಲಿಲ್ಲ. ಜತೆಗೆ ನನ್ನ ವಿದ್ಯಾರ್ಥಿ ಜೀವನದಲ್ಲಿ ಅವರ ಬಗ್ಗೆ ನಾನು ಕಟ್ಪಿಕೊಂಡಿದ್ದ ನನ್ನ ಭ್ರಮೆಯ ಪೋರೆ ಸ್ವಲ್ಪ ದಿನದಲ್ಲೇ ಕಳಚಿತು.
ಇವರ ಮಾತುಗಳು ಹೊಟ್ಟೆ ತುಂಬಿದವರಿಗೆ ರುಚಿಸುತ್ತವೆಯೇ ವಿನಾ ರೈತ,ಕಾರ್ಮಿಕ,ದಲಿತ ಮತ್ತು ಬಡಶೋಷಿತರನ್ನಲ್ಲ. ಪ್ರಶಕ್ತ ತಮ್ಮ ಕಣ್ಣೆದುರೇ ಈ ದೇಶ ಜಾತಿ,ವರ್ಗ,ಧರ್ಮ,ಪ್ರಾದೇಶಿಕತೆ ಮತ್ತು ಭಾಷೆ ಅಸಮಾನತೆಯಿಂದ ನಲುಗುತ್ತಿದೆ. ಆದಾಗ್ಯೂ ಇವುಗಳ ಬಗ್ಗೆ ತಮ್ಮ ಪ್ರವಚನದಲ್ಲಿ ಸೂಚ್ಯವಾಗಿಯೂ ಉಲ್ಲೇಖಿಸುವುದಿಲ್ಲ. ತನ್ನ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸದ ಸಿದ್ದೇಶ್ವರ ಸ್ವಾಮೀಜಿಯಂತವರು ಮೋದಿಯನ್ನು ಹೊಗಳಿ, ಪ್ರಭುತ್ವದ ಪರವಾಗಿ ತುತ್ತೂರಿ ಊದದೆ, ಸಮಾನತೆಗಾಗಿ ತನ್ನಿಡಿ ಬದುಕನ್ನೇ ಸವೆಸಿದ ಬಸವಣ್ಣನನ್ನ ಹೊಗಳಲು ಸಾಧ್ಯವೇ?