ಮೊನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಯಡಿಯೂರಪ್ಪ ಸರಳವಾಗಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೆದುರು ಮತ್ತೊಮ್ಮೆ ರಾಜ್ಯದಲ್ಲಿ ಭಾಜಪ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತೇನೆಂದು ಪುನರುಚ್ಚರಿಸಿದ್ದು, ರಾಜಕೀಯ ಪಡಸಾಲೆಯಲ್ಲಿ ತರೇಹವಾರಿ ಚರ್ಚೆಗಳು ಹುಟ್ಟು ಹಾಕಿದೆ.
ಪಕ್ಷದ ಹೈಕಮಾಂಡ್ ಯಡಿಯೂರಪ್ಪನನ್ನ ಸಿಎಂ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದು ಏಕೆಂದು ಸರಿಯಾದ ವಿವರಣೆ-ಕಾರಣಗಳನ್ನು ರಾಜ್ಯದ ಜನರಿಗೆ ಇಲ್ಲಿಯವರೆಗೂ ತಿಳಿಸಿಲ್ಲ. ಮುಂದೆಯೂ ತಿಳಿಸುವುವ ಸಾಧ್ಯತೆಯೂ ಇಲ್ಲ. ರಾಜೀನಾಮೆ ನೀಡುವ ಮುನ್ನ ಗದ್ಗದಿತರಾಗಿ ಅಳುತ್ತಲೇ, ಒಲ್ಲದ ಮನಸ್ಸಿನಿಂದಲೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು.
ಆದಾದ ಕೆಲ ದಿನದಲ್ಲೇ “ಮೂರು ತಿಂಗಳ ಕಾಲ ರಾಜ್ಯ ಪ್ರವಾಸ ಮಾಡಿ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದಿದ್ದರು. ಈ ದಿಶೆಯಲ್ಲಿ ಚಟುವಟಿಕೆಗಳು ಗದಿಗೆರಿದವು. ಆದರೆ, ದೇಹಲಿ ಹೈಕಮಾಂಡ್ ರಾಜ್ಯ ಪ್ರವಾಸಕ್ಕೆ ಬ್ರೇಕ್ ಹಾಕುವ ಮೂಲಕ ನಿಮ್ಮ ಅವಶ್ಯಕತೆ ಈಗ ಪಕ್ಷಕ್ಕಿಲ್ಲ ಎಂದು ಪರೋಕ್ಷವಾಗಿ, ಖಡಕ್ ಆಗಿಯೇ ಹೇಳಿತು.
ತದನಂತರ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಮತ್ತು ತನ್ನ ಮೇಲೆ ಪಕ್ಷ ಮಾಡಿದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು, ತಮ್ಮ ಸುಪುತ್ತ ವಿಜೇಂದ್ರನ್ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಹುಟ್ಟು ಹಾಕುವ ತನ್ನ ಆಪ್ತರ ಜೊತೆಗೆ ಚರ್ಚೆಯೂ ನಡೆಸಿದರು. ಆದರೆ, ಕೇಂದ್ರ ಸರ್ಕಾರ ಯಡಿಯೂರಪ್ಪನ ಆಪ್ತರ ಮೇಲೆ ಐಟಿ ದಾಳಿ,ಇಡಿ ದಾಳಿ ಮಾಡಿಸುವ ಮೂಲಕ ಬೇದರಿಕೆಯ ಅಸ್ತ್ರ ಪ್ರಯೋಗಿಸಿದರು. ಜತೆಗೆ ಅದೇ ಸಂದರ್ಭದಲ್ಲಿ ಅವರ ಪಿಎ ಸಂತೋಷ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಯಡಿಯೂರಪ್ಪನನ್ನ ಹಣಿಯಲು ದೇಹಲಿ ಹೈಕಮಾಂಡ್ ಗೆ ಹೊಸ ಅಸ್ತ್ರ ಸಿಕ್ಕಿತ್ತು. ಇದರಿಂದಾಗಿ ಪ್ರಾದೇಶಿಕ ಪಕ್ಷ ಕಟ್ಟುವ ಅವರ ವೇಗಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು.
ಇದನ್ನೂ ಓದಿ : ಸುಮೋಟೋ ಕೇಸ್ ಬೇಡದವರ ಮೇಲೆ ಬಳಸಲು ಇರೋ ಅಸ್ತ್ರವೆ?!
ತನ್ನ ಆಪ್ತರ ಮೇಲೆ ಐಟಿ-ಇಡಿ ದಾಳಿ ಆದನಂತರ ಮೂರು-ನಾಲ್ಕು ತಿಂಗಳಿನಿಂದ ಪಕ್ಷದ – ಸರ್ಕಾರದ ಎಲ್ಲಾ ಚಟುವಟಿಕೆಗಳಿಂದ ಒಂದು ಅಂತರ ಕಾಪಾಡಿಕೊಂಡಿದ್ದರು. ಬಿಟ್ ಕಾಯಿನ್ ಪ್ರಕರಣ, ನಲವತ್ತು ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಬಂದಾಗಲೂ, ರಾಷ್ಟ್ರಧ್ವಜದ ವಿರುದ್ಧ ಅಗೌರವವಾಗಿ ಮಾತಾಡಿರುವ ಈಶ್ವರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ಸದನದಲ್ಲಿ ಪ್ರತಿಭಟಸಿದ್ದಾಗಲೂ ಪಕ್ಷದ ಅಥವಾ ಈಶ್ವರಪ್ಪನ ನೆರವಿಗೂ ಬಂದಿಲ್ಲ. ಮೊನ್ನೆ ತಮ್ಮ ಜಿಲ್ಲೆಯಲ್ಲೇ ಕೋಮು ಗಲಭೆ ಭುಗಿಲೆದ್ದಾಗಲೂ ಸಂಪೂರ್ಣ ಮೌನಕ್ಕೆ ಜಾರಿದರು(ನೇಪಮಾತ್ರಕ್ಕೆ ಒಂದು ಟ್ವೀಟ್ ಮಾಡಿದರು).
ಪ್ರಶಕ್ತ ಯಡಿಯೂರಪ್ಪನ ಪರಿಸ್ಥಿತಿ ಇತ್ತ ಧರಿ,ಅತ್ತ ಪುಲಿ ಎಂಬಂತಾಗಿದೆ. ತನ್ನ ಮಗನ ರಾಜಕೀಯ ಭವಿಷ್ಯ ಭದ್ರಪಡಿಸಲು ಬಿಜೆಪಿಯಲ್ಲೇ ಮುಂದುವರೆಯಬೇಕೇ ಅಥವಾ ತಮ್ಮ ಪುತ್ರನ ಮಹತ್ವಾಕಾಂಕ್ಷಿಯಂತೆ ಹೊಸ ಪ್ರಾದೇಶಿಕ ಪಕ್ಷ ಕಟ್ಞಬೇಕೇ ಎನ್ನುವ ಗೊಂದಲದಲ್ಲಿದ್ದಂತಿದೆ. ಪಕ್ಷದಲ್ಲೇ ಮುಂದುವರೆದರೆ ಮಗನಿಗೆ ರಾಜಕೀಯ ಭವಿಷ್ಯ ಖಂಡಿತಾ ಇಲ್ಲ ಎನ್ನುವ ಮುನ್ಸೂಚನೆ ಈಗಾಗಲೇ ಅವರಿಗೆ ಸಿಕ್ಕಿದೆ. ಹೊಸ ಪ್ರಾದೇಶಿಕ ಪಕ್ಷ ಕಟ್ಟಿದರೆ ತನ್ನ ಮೇಲೆ – ತಮ್ಮ ಆಪ್ತರ ಮೇಲೆ ಐಟಿ-ಇಡಿ ದಾಳಿ ಆಗುವ ಸಾಧ್ಯತೆ ಹೆಚ್ಚಿವೆ. ಅವೆಲ್ಲವೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಜತೆಗೆ ತಮ್ಮ ಮೇಲಿರುವ ಕೆಲ ಕೇಸ್ ಗಳನ್ನು ದುರುದ್ದೇಶದಿಂದ ರಿ-ಓಪನ್ ಮಾಡಿಸಹುದು, ಇದನ್ನೂ ಎದುರಿಸಬೇಕು ಎಂಬ ಲೆಕ್ಕಚಾರದಲ್ಲಿ ಬಿದ್ದಂತೆ ಕಂಡುಬರುತ್ತಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯನಂತೆ ಮಾಸ್ ಲೀಡರ್ ಆಗಿರುವ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ಭಾಜಪದ ಭವಿಷ್ಯ ನಿರ್ಧಾರ ಆಗುವುದು ಸುಳ್ಳಲ್ಲ. ಒಂದು ವೇಳೆ ಹೊಸ ಪಕ್ಷ ಕಟ್ಟಿದರೆ ಭಾಜಪ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಆದರೆ, ಯಡಿಯೂರಪ್ಪ ಅಷ್ಟೊಂದು ಸುಲಭವಾಗಿ ತನಗಾದ ಅವಮಾನವನ್ನು ಮರೆಯುವ ಆಸಾಮಿಯಲ್ಲ ಎನ್ನುವ ಕಠೋರ ಸತ್ಯ ಅವರನ್ನ ಬಲ್ಲ ರಾಜ್ಯದ ಜನತೆಗೂ ಅವರ ಪಕ್ಷಕ್ಕೂ ಗೊತ್ತಿರುವಂತಹದು. ಜತೆಗೆ, ತನ್ನ ಕಣ್ಣೆದುರೇ ತನ್ನ ಮಗನ ರಾಜಕೀಯ ಭವಿಷ್ಯಕ್ಕೆ ಮಬ್ಬು ಕತ್ತಲು ಆವರಿಸುತ್ತಿರುವುದನ್ನು ನೋಡಿಕೊಂಡು ಅವರು ಸುಮ್ಮನೆ ಕೂಡುವ ಸಾಧ್ಯತೆಯೂ ಇಲ್ಲ.
ರಾಜಕೀಯದಲ್ಲಿ ಯಾವುದು ಅಸಂಭವವಲ್ಲ. ಕಾದು ನೋಡೋಣ!