ಜಗದೀಶ್ ಶೆಟ್ಟರ್ ಬಿಜೆಪಿ ಜೊತೆಗಿನ ತನ್ನ ಮೂವತ್ತು ವರ್ಷದ ನಂಟು ಕಳಚಿಕೊಂಡು ಕಾಂಗ್ರೆಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ‘ಹುಬ್ಬಳಿ ಸೆಂಟ್ರಲ್ ಕ್ಷೇತ್ರದಿಂದ ನಿಮ್ಮ ಕುಟುಂಬದವರೊಬ್ಬರಿಗೆ ಟಿಕೆಟ್ ನೀಡುತ್ತೇವೆ ಹಾಗೂ ನಿಮ್ಮನ್ನು ರಾಜ್ಯಸಭಾ ಸದಸ್ಯನಾಗಿ ಮಾಡುತ್ತೇವೆಂದು ಪಕ್ಷ ಅವರಿಗೆ ನೀಡಿದ ಎರಡು ಬಿಗ್ ಆಫರ್ ನಿರಾಕರಿಸಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದೇಳಿ ಬಿಜೆಪಿಗೆ ಗುಡ್ ಬೈ ಹೇಳಿ, ನನ್ನ ಈ ಸ್ಥಿತಿಗೆ ‘ಬಿ.ಎಲ್. ಸಂತೋಷ’ ಕಾರಣವೆಂದು ನೇರವಾಗಿ ಆರೋಪಿಸುತ್ತಿದ್ದಾರೆ.
ಬಿಜೆಪಿಯ ಎರಡೂ ಆಫರ್ ತಿರಸ್ಕರಿಸಿ ಕಾಂಗ್ರೆಸ್ ಸೇರಿದ್ದು ಅಧಿಕಾರದ ಆಶೆಯಿಂದಲೋ ಅಥವಾ ಸ್ವಾಭಿಮಾನಕಾಗಿಯೋ ಎನ್ನುವುದು ಕಾಲುವೆ ನಿರ್ಧರಿಸುತ್ತದೆ. ಅವರಿಗೆ ಅಧಿಕಾರದ ಆಶೆ ಇದ್ದಿದ್ದರೆ ಆಫರ್ ಗಳು ಒಪ್ಪಿಕೊಂಡು ಬಿಜೆಪಿಯಲ್ಲೇ ತೆಪ್ಪಗೆ ಇರುತ್ತಿದ್ದರೇನೋ?
ಒಂದಂತೂ ಸ್ಪಷ್ಟ, ಒಂದು ಹಿಡನ್ ಅಜೆಂಡಾ ಇಟ್ಟುಕೊಂಡೆ ಬಿಜೆಪಿಯೆಂದರೆ ಲಿಂಗಾಯತರ ಪಕ್ಷ ಎಂಬ ನಂಬುಗೆಯ ಜಾಗದಲ್ಲಿ ಪ್ರಖರ ಹಿಂದುತ್ವವಾದಿ ಪಕ್ಷವೆಂದು ಬಿಂಬಿಸುವ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಬಿಜೆಪಿ ಲಿಂಗಾಯತರದಲ್ಲ, ಇದು ಹಿಂದುತ್ವವಾದಿಗಳ ಪಕ್ಷ ಎಂಬುದನ್ನು ಸಾರುತ್ತಿರುವ ಯತ್ನದ ಹಿಂದೆ ಬಿ.ಎಲ್.ಸಂತೋಷ್, ಮತ್ತವರಿಗೆ ಊರುಗೋಲಾಗಿ ಪ್ರಹ್ಲಾದ ಜೋಶಿ ಇರುವುದು ರಹಸ್ಯವೇನಲ್ಲ.
ಈ ಸುಡು ಸತ್ಯ ಪಕ್ಷದಲ್ಲಿರುವ ಯಡಿಯೂರಪ್ಪ ಆದಿಯಾಗಿ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಯಡಿಯೂರಪ್ಪ ‘ಶೆಟ್ಟರ್ – ಸವದಿ ಎಲ್ಲಾ ಅಧಿಕಾರ ಅನುಭವಿಸಿಯೂ ಮಾತೃ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅವರನ್ನು ಸೋಲಿಸುತ್ತೇವೆ’ ಎಂದು ಠೇಂಕರಿಸುತ್ತಿದ್ದಾರೆ. ಇದೇ ಯಡಿಯೂರಪ್ಪನವರು 2013 ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಆಡಿದ ಮಾತುಗಳನ್ನೆ, ತೋಡಿಕೊಂಡ ನೋವುಗಳನ್ನೆ ಇಂದು ಜಗದೀಶ್ ಶೆಟ್ಟರ್ ಆಡುತ್ತಿದ್ದಾರೆ, ನೋವು ತೋಡಿಕೊಳ್ಳುತ್ತಿದ್ದಾರೆ ಅಷ್ಟೇ.
ಕಣ್ಣೀರಿಡುತ್ತಲೇ ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳದಿದ್ದು,ಅದಾದ ಬಳಿಕ ಎಷ್ಟೇ ಪ್ರಯತ್ನಿಸಿದರು ಮಗ ಬಿ.ವೈ.ವಿಜಯೇಂದ್ರನನ್ನು ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಿಸಬೇಕೆಂಬ ಅವರ ಆಶೆ ಈಡೇರದಿದ್ದದು ಯಡಿಯೂರಪ್ಪ ಮರೆಯಲು ಮತ್ತು ಇಷ್ಟು ಬೇಗ ಆ ನೋವು ಮಾಸಲು ಹೇಗೆ ಸಾಧ್ಯ?
ಈ ಬಾರಿ ಟಿಕೆಟ್ ಕೊಡುವುದರಲ್ಲಿ ಬಿ.ಎಲ್. ಸಂತೋಷ ನಿರ್ಣಾಯಕ ಪಾತ್ರ ವಹಿಸಿದ್ದು ಢಾಳಾಗಿ ಎದ್ದು ಕಾಣುತ್ತಿದೆ. ದೆಹಲಿಯಲ್ಲಿ ಯಡಿಯೂರಪ್ಪನವರಿಗೆ ಹೊರಗಿಟ್ಟು ಟಿಕೆಟ್ ಫೈನಲ್ ಮಾಡಿರುವುದು ಸ್ವತಃ ಅವರೇ ಕಂಡು ಕೋಪಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ಧಾವಿಸಿದರು. ಬಂದ ಮರುದಿನವೇ ಅವರ ಮನೆಯ ಮೇಲೆ ‘ಐಟಿ’ ದಾಳಿ ನಡೆದಿತ್ತು ಎಂದು ಬಲ್ಲ ಸುದ್ದಿ ಮೂಲಗಳು ಹೇಳುತ್ತಿವೆ. ಇದು ನಿಜವೋ, ಸುಳ್ಳೋ ಎಂಬುದು ಖಚಿತವಾಗಬೇಕಷ್ಟೆ!
ಒಂದಂತೂ ಸತ್ಯ, ಯಡಿಯೂರಪ್ಪನವರು ಐಟಿ – ಇಡಿ ಭಯದಿಂದಲೋ ಅಥವಾ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿಯೋ ಆಗುತ್ತಿರುವ ಅವಮಾನವೆಲ್ಲ ಸಹಿಸಿ, ನೋವುಗಳನ್ನೆಲ್ಲಾ ನುಂಗಿ ಬಿಜೆಪಿಯಲ್ಲೇ ಕಾಲ ದೂಡುತ್ತಿದ್ದಾರೆ. ರೇಡ್‌ನ ಭಯ ಅಥವಾ ಪುತ್ರ ವಾತ್ಸಲ್ಯದಿಂದಲ್ಲದೇ ಬೇರೆ ಇನ್ನೇನು ಕಾರಣವಿರಲು ಸಾಧ್ಯ? ಅವರಿಗೆ ಬಿಜೆಪಿ ಮೇಲೆ ನಿಷ್ಠೆ ಹಾಗೂ ಹಿಂದೂತ್ವದ ಮೇಲೆ ನಂಬಿಕೆ ಎಷ್ಟಿದೆ ಎಂದು 2013 ರಲ್ಲಿ ಅವರೆ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ.
ಯಡಿಯೂರಪ್ಪನವರನ್ನೂ ಸಹ ವಿಧಾನಸಭೆ ಮತ್ತು ಬರುವ ಲೋಕಸಭಾ ಚುನಾವಣೆಯ ನಂತರ ಬಳಸಿ ಟಿಶ್ಯೂ ಪೇಪರನಂತೆ ಬಿಸಾಡುತ್ತಾರೆಂದು ರಾಜ್ಯಾದ್ಯಂತ ಜನರು ಮಾತನಾಡುತ್ತಿದ್ದಾರೆ. ಜನರಾಡುತ್ತಿರುವ ಮಾತು ‘ಸಂತೋಷ’ ನಿಜಮಾಡಿದರೆ ಮುಂದೆ ಅವರಿಗೂ, ಅವರ ಮಕ್ಕಳಿಗೂ ಮತ್ತು ಅವರ ಪಕ್ಷಕ್ಕೂ ಕೇಡುಗಾಲ ತಪ್ಪಿದ್ದಲ್ಲ. ಹೀಗಾಗಲ್ಲ ಎಂಬ ವಿಶ್ವಾಸದ ಮೇಲೆ ಯಡಿಯೂರಪ್ಪನವರಿಗೂ ವಿಶ್ವಾಸವಿಲ್ಲ.