ಭವ್ಯ ಭಾರತದ ಸೌಂದರ್ಯವೇ ಬಹುತ್ವ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶ ಅನೇಕ ಧರ್ಮ, ಜನಾಂಗ, ಸಂಸ್ಕೃತಿ ಮತ್ತು ಆಚರಣೆಗಳನ್ನು ಒಳಗೊಂಡಿದೆ. ನೂರಾರು ಜನಾಂಗಗಳು, ಸಾವಿರಾರು ಮಾತೃ ಭಾಷೆಗಳು, ಹಲವಾರು ಸಂಸ್ಕೃತಿ, ಹತ್ತಾರು ಲಿಪಿಗಳನ್ನು ಭಾರತ ಹೊಂದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ಜನಾಂಗಗಳು ಮತ್ತು ಭಾಷೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅವುಗಳಲ್ಲಿ ಬಂಜಾರ ಜನಾಂಗ ಮತ್ತು ಬಂಜಾರರು ಮಾತನಾಡುವ ‘ಗೋರ್ ಬೋಲಿ'(ಲಂಬಾಣಿ) ಭಾಷೆಯೂ ಒಂದಾಗಿದೆ. ಬಂಜಾರ ಜನಾಂಗಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎನ್ನುವುದು ಕೆಲವರ ಅಭಿಪ್ರಾಯವಾದರೆ ಅದರ ಪುರಾತನದಲ್ಲೂ ಬಂಜಾರ ಜನಾಂಗದ ಅಸ್ತಿತ್ವವಿತ್ತು ಎನ್ನುವುದು ಇನ್ನು ಕೆಲವರ ಅಭಿಪ್ರಾಯ.
ದನಕರುಗಳು, ಕುರಿ, ಮೇಕೆ ಇವುಗಳ ಸಾಕಾಣಿಕೆ/ಲಾಲನೆ ಪಾಲನೆ ಮಾಡುತ್ತ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದ ಬಂಜಾರ ಜನಾಂಗವು ಕಾಲ ಕಳೆದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸರಕು ಸರಂಜಾಮುಗಳನ್ನು ತಾವು ಸಾಕುತ್ತಿದ್ದ ಗೋವುಗಳ ಮೂಲಕ ಸಾಗಾಟ ಮಾಡುತ್ತಾ ಮುಂದುವರೆದು ಸಂಚಾರಿ ವ್ಯಾಪಾರಿಗಳಾಗಿ ಜೀವನ ಸಾಗಿಸಿದರು. ಬಂಜಾರರಿಗೆ ವಾಸವಿರುವುದಕ್ಕೆ ನಿರ್ದಿಷ್ಟವಾಗಿ ಇಂಥದ್ದೇ ಸ್ಥಳ ಅಥವ ಗ್ರಾಮ ಎನ್ನುವುದು ಇರಲಿಲ್ಲ. ಬುಡಕಟ್ಟು ಜನಾಂಗಕ್ಕೆ ಸೇರಿದ ಬಂಜಾರರು ಮೂಲತಃ ಅಲೆಮಾರಿಗಳು. ಗುಡ್ಡ ಬೆಟ್ಟ ಕಾಡುಮೇಡುಗಳಲ್ಲಿ ಪ್ರಕೃತಿದತ್ತವಾಗಿ ಜೀವಿಸುತ್ತಿದ್ದ ಇವರು ಪ್ರಕೃತಿಯ ಆರಾಧಕರಾಗಿದ್ದರು. ಬಂಜಾರ ಜನಾಂಗವು ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿತ್ತು. ಪ್ರಕೃತಿಯ ಜೊತೆಗೆ ನೇರವಾದ ಸಂಬಂಧವನ್ನು ಹೊಂದಿದ್ದರು ಮತ್ತು ಪ್ರಕೃತಿಯ ಪೋಷಣೆ ತಮ್ಮ ಜವಾಬ್ದಾರಿ ಎಂದುಕೊಂಡಿದ್ದರು.
ಬಂಜಾರರು ತಮ್ಮದೇ ಆದ ಜೀವನಶೈಲಿ, ಹಬ್ಬ ಹರಿದಿನಗಳು, ಉಡುಗೆ ತೊಡುಗೆ ಮತ್ತು ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಕಾಡುಮೇಡುಗಳಲ್ಲಿ ಅಲೆಯುತ್ತಾ ಕತ್ತಲೆ ಕಂಡಲ್ಲೇ ನೆಲೆಯೂರುತ್ತ ಇದ್ದಂತಹ ಈ ಜನಾಂಗವು ಮುಖ್ಯವಾಹಿನಿಯಿಂದ ದೂರ ಉಳಿದಿತ್ತು ಅಥವ ಕಡೆಗಣಿಸಲಾಗಿತ್ತು. ಕ್ರಮೇಣ ಗುಡ್ಡ ಬೆಟ್ಟಗಳಲ್ಲಿ, ಕಾಡು ಮೇಡುಗಳಲ್ಲಿ ತಮ್ಮದೇ ಆದ ಬದುಕನ್ನು ಕಟ್ಟಿಕೊಂಡು ವಾಸಿಸುವ ಕಡೆಯೆಲ್ಲ ಅವರದ್ದೇ ಆದ ಒಂದು ಪ್ರತ್ಯೇಕ ಜೀವನ ಶೈಲಿ ಮತ್ತು ಅದಕ್ಕೊಂದು ಆಡಳಿತ ವ್ಯವಸ್ಥೆಯನ್ನು ರಚಿಸಿಕೊಂಡಿದ್ದರು. ಅವರಲ್ಲಿ ನಾಯಕ್(ಗ್ರಾಮದ ಮುಖ್ಯಸ್ಥ ‘ಪ್ರಧಾನಿ’) ಡಾವೋ(ಗ್ರಾಮದ ಹಿರಿಯ), ಕಾರಭಾರಿ(ಕಾರ್ಯದರ್ಶಿ) ಹೀಗೆ ತಮ್ಮ ಗ್ರಾಮ ಅಥವಾ ತಂಡದಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸುವುದು ಅಥವಾ ಅವರ ತಂಡ ಮತ್ತು ಗ್ರಾಮದಲ್ಲಿ ಆಗುವಂತಹ ಯಾವುದೇ ಅಹಿತಕರ ಘಟನೆಗಳು ಮತ್ತು ಬದಲಾವಣೆಗಳಿಗೆ ಇವರು ಜವಾಬ್ದಾರಿ ಹೊತ್ತು ಸರಿಪಡಿಸುವುದು, ಹೀಗೆ ಅನೇಕ ಪ್ರಜಾಪ್ರಭುತ್ವದಂತಹ ಅಂಶಗಳನ್ನು ಹೊಂದಿದ್ದವು.
ಬಂಜಾರ ಜನಾಂಗದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿತ್ತು. ಮನೆಯ ಮುಖ್ಯಸ್ಥೆ ಹೆಣ್ಣುಮಕ್ಕಳೆ ಆಗಿರುತ್ತಿದ್ದರು. ಬಂಜಾರರಲ್ಲಿ ಲಿಂಗತಾರಾತಮ್ಯ ಇರಲಿಲ್ಲ ಎನ್ನುವುದಕ್ಕೆ ಮುಖ್ಯ ಸಾಕ್ಷಿ ಎಂದರೆ ಬಂಜಾರರಲ್ಲಿ ಸೇವಾಲಾಲ್ ರವರ ಪೂರ್ವದಲ್ಲಿ ಯಾವುದೇ ಪುರುಷ ದೇವರುಗಳು ಕಂಡುಬರುವುದಿಲ್ಲ. ಅನೇಕ ಸುಧಾರಕರುಗಳು, ದಾರ್ಶನಿಕರು ಇತಿಹಾಸದಲ್ಲಿ ಕಂಡುಬರುತ್ತಾರೆಯೇ ಹೊರತು ದೇವರ ಸ್ಥಾನದಲ್ಲಿ ಇದ್ದದ್ದು ಮಾರಿಯಮ್ಮ, ಮಾತಂಗಿ, ಸಾತು ಭವಾನಿ, ತೊಳಜಾ ಭವಾನಿ ಹೀಗೆ ಹೆಣ್ಣು ದೇವತೆಗಳೇ ಇದ್ದರು. ಇಂಥಹ ನಿದರ್ಶನಗಳು ಬಂಜಾರರಲ್ಲಿ ಲಿಂಗ ತಾರತಮ್ಯ ಇರಲಿಲ್ಲವ
ಹೀಗೆ ಪ್ರಕೃತಿದತ್ತವಾಗಿ ಜೀವನ ಸಾಗಿಸುತ್ತಿದ್ದ ಮತ್ತು ವೃತ್ತಿಗಾಗಿ ಸರಕು ಸರಂಜಾಮುಗಳನ್ನು ಸಾಗಾಣಿಕೆ ಮಾಡುತ್ತಾ ಸಂಚಾರಿ ವ್ಯಾಪಾರಿಗಳೆಂದು ಗುರುತಿಸಲ್ಪಟ್ಟಿದ್ದ ಬಂಜಾರ ಜನಾಂಗ ಭಾರತ ದೇಶದ ಅರ್ಥವ್ಯವಸ್ಥೆಯ ಭಾಗವಾಗಿದ್ದರು.
ಅವರ ಮೇಲೆ ಅಕ್ರಮಣಕಾರರು ಮತ್ತು ವ್ಯಾಪಾರಕ್ಕೆಂದು ಬಂದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಇಂಗ್ಲೀಷರ ಕಣ್ಣು ಬೀಳಲು ಶುರುವಾಯಿತು. ಬ್ರಿಟೀಷರು ಬಂಜಾರರ ಸಂಚಾರಿ ವ್ಯಾಪಾರವನ್ನು ಕುಸಿತಗೊಳಿಸಲು ಅನೇಕ ಹುನ್ನಾರಗಳನ್ನು ರೂಪಿಸಿದರು. ಅರ್ಥವ್ಯವಸ್ಥೆಯ ಕೇಂದ್ರವೇ ಆಗಿದ್ದ ಮಾರುಕಟ್ಟೆಗಳು, ಸಂತೆಗಳಲ್ಲಿ ಬಂಜಾರರು ವ್ಯಾಪಾರ ಮಾಡದಂತೆ ಕಡಿವಾಣ ಹಾಕಿದರು, ಕ್ರಮೇಣ ಅವರ ವ್ಯಾಪಾರದ ಮೇಲೆ ತೆರಿಗೆಯನ್ನು ಹಾಕಲು ಶುರುಮಾಡಿದರು. ರಸ್ತೆಗಳ ನವೀಕರಣ, ಯಂತ್ರಗಳು, ಹೀಗೆ ವಸಾಹತುಶಾಹಿಗಳು ಮಾಡಿದ ಅನೇಕ ಆಧುನಿಕ ಅಭಿವೃದ್ಧಿಗಳು ಬಂಜಾರರಿಗೆ ಮುಳ್ಳಾದವು. ಸಂಚಾರಿ ವ್ಯಾಪಾರದ ಮೇಲೆಯೇ ಅವಲಂಬಿತರಾಗಿದ್ದ ಬಂಜಾರರಿಗೆ ಜೀವನ ಸಾಗಿಸುವುದು ಕಷ್ಟಕರವಾಯಿತು.
ಶತಮಾನಗಳಿಂದ ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದ ಮತ್ತು ಉತ್ತಮ ಜೀವನಶೈಲಿಯನ್ನು ಹೊಂದಿದ್ದ ಬಂಜಾರ ಜನಾಂಗವು 18 ನೇ ಶತಮಾನದೊಳಗೆ ಬೇರೆ ಬೇರೆ ಸಂಸ್ಕೃತಿಗಳು, ಬೇರೆ ಜನಾಂಗದ ಜೀವನ ಪದ್ಧತಿಗಳು, ಮತ್ತು ಫ್ಯುಡಲ್ ವ್ಯವಸ್ಥೆಗಳಿಂದ ಪ್ರಭಾವಗೊಂಡು ತನ್ನ ಜನಾಂಗವು ಕೂಡ ಹಿಮ್ಮುಖವಾಗಿ ಚಲಿಸುವುದಕ್ಕೆ ಶುರುವಾಗಿತ್ತು. ಮುಖ್ಯವಾಹಿನಿಯಿಂದ ದೂರವಿದ್ದ ಈ ಜನಾಂಗಕ್ಕೆ ಇದ್ದಂತದ ವೈಶಿಷ್ಟ್ಯತೆ, ಸಂಸ್ಕೃತಿ, ಭಾಷೆ ಮತ್ತು ಅನೇಕ ವಿಚಾರಗಳನ್ನು ಯಾರೂ ಕೂಡ ದಾಖಲಿಸುವ ಪ್ರಯತ್ನ ಪಟ್ಟಿರುವುದಿಲ್ಲ. ಪ್ರಕೃತಿದತ್ತವಾಗಿ ಬದುಕುತ್ತಿದ್ದ ಒಂದು ಜನಾಂಗವು ಬೇರೆ ಬೇರೆ ಸಂಸ್ಕೃತಿಗಳಿಗೆ/ಜೀವನಶೈಲಿಗಳೊಂದಿಗೆ ಮಿಶ್ರಣಗೊಂಡು ತನ್ನ ವೈಶಿಷ್ಟ್ಯತೆ ಕಳೆದುಕೊಳ್ಳುತ್ತಾ ಹೋಯಿತು
ಹೀಗೆ ಅನೇಕ ಕಾರಣಗಳಿಂದಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತು ಜೀವನ ಪದ್ಧತಿಯು ತನ್ನ ವೈಶಿಷ್ಟ್ಯತೆಯನ್ನು ಕಳೆದುಕೊಂಡು. ಅನೇಕ ಕಾರಣಗಳಿಗಾಗಿ ಸಮುದಾಯ ದಿಕ್ಕುತಪ್ಪಿತ್ತು.
ಅದೇ ಕಾಲಘಟ್ಟದಲ್ಲಿ ಸೇವಾಲಾಲ್ ರವರು 1739 ರಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿರುವ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ್ ಮತ್ತು ಧರ್ಮಿಣಿಬಾಯಿಯವರಿಗೆ ಜನಿಸಿದರು. ತಮ್ಮ ಇಡೀ ಜನಾಂಗದ ಇತಿಹಾಸ ಸಂಸ್ಕೃತಿ ಮತ್ತು ಆಚರಣೆಗಳು ಉಳಿದಿದ್ದು ಮೌಖಿಕ ಸಾಹಿತ್ಯದಲ್ಲಿ ಮಾತ್ರ. ಬಂಜಾರರು ಹಾಡುವ ಲಾವಣಿ ಪದಗಳಲ್ಲಿ, ಜಾನಪದ ಹಾಡುಗಳಲ್ಲಿ, ಕೋಲಾಟ, ವಾಜ, ಮದುವೆ ಹಬ್ಬ ಹರಿದಿನಗಳಲ್ಲಿ ಹಾಡುವ ಹಾಡುಗಳಲ್ಲಿ ಇಡೀ ಜನಾಂಗದ ಇತಿಹಾಸವು ಅಡಗಿತ್ತು, ಅದನ್ನು ಸೇವಾಲಲರು ತಿಳಿದುಕೊಂಡಿದ್ದರು. ಲದೇಣಿ(ಸರಕು ಸಾಗಾಣಿಕೆ) ಮೂಲಕ ಸೇವಾಲಲರು ಕೂಡ ತಮ್ಮದೇ ಸಾವಿರಾರು ಜನರು ಇರುವ ತಂಡವನ್ನು ಕಟ್ಟಿಕೊಂಡು ವಸಾಹತುಶಾಹಿಗಳಿಂದ ಎದುರಾದ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಸಾವಿರಾರು ಗೋವುಗಳೊಂದಿಗೆ ಸಂಚಾರ ಮಾಡುತ್ತಾ ಇಡೀ ದೇಶವನ್ನೇ ಸುತ್ತಿದರು.
ದೂರದೃಷ್ಟಿ ಹೊಂದಿದ್ದ ಸೇವಾಲಲರು ಸಂಚಾರ ಮಾಡುತ್ತಲೇ ಇಡೀ ಜನಾಂಗದ ಇತಿಹಾಸದ ಬಗ್ಗೆ, ಸಂಸ್ಕೃತಿ, ಆಚಾರ ವಿಚಾರಗಳು, ತನ್ನ ಪೂರ್ವಿಕರ ಜೀವನಶೈಲಿಗಳ ಬಗ್ಗೆ ತಿಳಿದುಕೊಳ್ಳುತ್ತ ಹೋದರು. ಸ್ವತಃ ಸೇವಾಲಲರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅದರಿಂದ ದೂರ ಉಳಿದಿದ್ದರು. ದುಶ್ಚಟಗಳಿಗೆ ಬಲಿಯಾಗಿದ್ದ ತನ್ನ ಸಮುದಾಯದ ಜನರಿಗೆ ತಿದ್ದಿ ಬುದ್ದಿ ಹೇಳಿದರು. ಬಂಜಾರರ ಕುಲದೇವತೆಯಾದ ಮರಿಯಮ್ಮ ಯಾಡಿಯನ್ನು(ತಾಯಿ) ಅಪಾರವಾಗಿ ಗೌರವಿಸುತ್ತಿದ್ದರು ಮತ್ತು ಪೂಜಿಸುತ್ತಿದ್ದರು. ಸೇವಾಲಲರು ಮಹಿಳೆಯರ ಮೇಲಾಗುತ್ತಿದ್ದ ದೌರ್ಜನ್ಯ, ಅಸಮಾನತೆಯನ್ನು ಖಂಡಿಸಿದರು. ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ಮತ್ತು ಹಕ್ಕುಗಳನ್ನು ಕೊಡಬೇಕೆಂದು ಹೇಳಿದರು.
ತಮ್ಮ ಧನಾತ್ಮಕ ಚಿಂತನೆಗಳೊಂದಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದ ಸೇವಾಲಾಲರು ಕೆಲವೇ ವರ್ಷಗಳಲ್ಲಿ ನಾಡಿನಾದ್ಯಂತ ಸಮುದಾಯದ ಜನರಿಗೆ ದಾರ್ಶನಿಕರಾಗಿ ಕಂಡರು. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು, ಮೌಢ್ಯ ಕಂದಾಚಾರಗಳಿಗೆ ಬಲಿಯಾಗದೆ ನಮ್ಮ ಪೂರ್ವಿಕರಂತೆ ನಾವೂ ಕೂಡ ಪ್ರಕೃತಿಯನ್ನು ಪೋಷಿಸಬೇಕು ಮತ್ತು ಆರಾಧಿಸಬೇಕು ಎಂದು ಕರೆ ನೀಡಿದರು. ಸಕಲ ಜೀವಜಂತುಗಳಿಗೂ ಒಳಿತು ಬಯಸಬೇಕು ಎನ್ನುವ ವಿಶ್ವಮಾನವತೆಯನ್ನು ಸೇವಾಲಾಲರು ಮರೆದರು. ಯಾವುದೇ ಪವಾಡಗಳನ್ನು ಮತ್ತು ಮಾಟ ಮಂತ್ರಗಳಂತಹ ಅಲೌಕಿಕ ಶಕ್ತಿಯನ್ನು ಸೇವಾಲಲರು ವಿರೋಧಿಸಿದ್ದರು.
ಅಹಿಂಸವಾದಿಯಾಗಿದ್ದ ಸೇವಾಲಲರು ತನ್ನ ಲದೇಣಿ(ಸಂಚಾರಿ ಸಾರಿಗೆ)ಯೊಂದಿಗೆ ಸಾಗುತ್ತಿದ್ದ ಅಮಾಯಕ ಜನರನ್ನು ಕಳ್ಳಕಾಕರಿಂದ, ದರೊಡೆಕೋರರಿಂದ ರಕ್ಷಿಸಲು ಖಡ್ಗವನ್ನು ಹಿಡಿದರು. ಇನ್ನೊಬ್ಬರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಹಿಂಸೆ, ಕಳ್ಳತನ,ಲಿಂಗತಾರಾತಮ್ಯ, ಅಸ್ಪೃಶ್ಯತೆ ಹೀಗೆ ಮನುಷ್ಯ ವಿರೋಧಿ ನಡೆಗಳನ್ನು ಖಂಡಿಸಿ ಮಾಹಾ ಮಾನವತಾವಾದಿ ಎನಿಸಿಕೊಂಡರು. ಬಂಜಾರ ಜನಾಂಗದಲ್ಲಿ ಸೇವಾಲಾಲರು ಜನಿಸುವ ಮುಂಚೆಯೇ ಅನೇಕ ಸಂತರು, ದಾರ್ಶನಿಕರು, ಕ್ರಾಂತಿಕಾರಿಗಳು ಜನಿಸಿದ್ದರೂ ಸೇವಾಲಾಲರು ಮಾತ್ರ ಇಡೀ ಜನಾಂಗದ ಮನೆ ಮನಗಳಲ್ಲಿ ಪೂಜ್ಯನೀಯ ಸ್ಥಾನ ಪಡೆದರು.
18 ನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಸೇವಾಲಾಲರು ಇಡೀ ಜನಾಂಗಕ್ಕೆ ಮಾದರಿಯಾದರು. 19ನೇ ಶತಮಾನದ ಪ್ರಾರಂಭದಲ್ಲಿ ಅಂದರೆ 1806 ರಲ್ಲಿ ಸೇವಾಲಲರು ಮಹಾರಾಷ್ಟ್ರದ ಪೌರಾಘಡ್ ನಲ್ಲಿ ಮರಣಹೊಂದಿದರು ಎನ್ನುವುದಕ್ಕೆ ದಾಖಲೆಗಳಿವೆ.ಸೇವಾಲಾಲರು ಕಾಲವಾದನಂತರ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದ ಬಂಜಾರ ಜನಾಂಗವು ಬೇರೆ ಬೇರೆ ರೀತಿಯ ದೌರ್ಜನ್ಯ ದಬ್ಬಾಳಿಕೆಗಳನ್ನು ಎದುರಿಸಬೇಕಾಯಿತು. ಮುಂದೆ ಸರಕು ಯಂತ್ರಗಳು, ರೈಲು ವ್ಯವಸ್ಥೆಗಳು ಅನುಷ್ಠಾನಗೊಂಡವು. ರಸ್ತೆಗಳು ಅಭಿವೃದ್ಧಿಗೊಂಡವು, ಸಂಚಾರಿ ವ್ಯಾಪಾರವನ್ನೇ ಅವಲಂಬಿಸಿದ್ದ ಬಂಜಾರರ ವೃತ್ತಿ ಬದುಕಿನ ಮೇಲೆ ಬಹಳ ದೊಡ್ಡ ಹೊಡೆತ ಬಿದ್ದಿತು. ಬಂಜಾರರು ನಿರುದ್ಯೋಗಿಗಳಾಗಬೇಕಾಯಿತು. ಅಕ್ಷರಶಃ ಬಂಜಾರರ ಬದುಕು ಆತಂತ್ರವಾಯಿತು. ಕಾಡುವಾಸಿಗಳಾಗಿದ್ದ ಬಂಜಾರರ ಮೇಲೆ ಇದೇ ಸಮಯಕ್ಕೆ ಬ್ರಿಟೀಷರು ಕ್ರಿಮಿನಲ್ ಟ್ರೈಬಲ್ ಆಕ್ಟ್ ಕಾನೂನು ಜಾರಿಮಾಡಿದರು. ಅಭ್ಯಾಸಿತ ಅಪರಾಧಿಗಳು ಎನ್ನುವ ಹಣೆಪಟ್ಟಿ ಬಂಜಾರರಿಗೆ ಅಂಟಿಕೊಂಡಿತು. ಕ್ರಮೇಣ ಬಂಜಾರ ಜನಾಂಗವು ಬ್ರಿಟಿಷರಿಂದ, ಪೊಲೀಸರಿಂದ, ಹಾಗೂ ಮೇಲ್ವರ್ಗದವರಿಂದ ಶೋಷಣೆ/ದೌರ್ಜನ್ಯಕ್ಕೆ ಒಳಪಟ್ಟಿತ್ತು.
ಮೂಲತಃ ಗೋಪಾಲಕರು, ಪ್ರಕೃತಿ ಆರಾಧಕರು ಆಗಿದ್ದ ಬಂಜಾರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದಬ್ಬಾಳಿಕೆ ಮತ್ತು ಶೋಷಣೆಗೆ ಗುರಿಯಾದರೂ, ಅದರ ಹೊರತಾಗಿಯೂ ಸಾಂಸ್ಕೃತಿಕವಾಗಿ ಈಗಲೂ ತನ್ನ ವೈಶಿಷ್ಟ್ಯತೆಯನ್ನು ಜನಾಂಗ ಉಳಿಸಿಕೊಂಡು ಬಂದಿರುವುದು ವಿಶೇಷ. ಎರಡೂವರೆ ಶತಮಾನಗಳು ಕಳೆದರೂ ಸೇವಾಲಾಲ್ ಅವರನ್ನು ಇಡೀ ಬಂಜಾರ ಜನಾಂಗ ಈಗಲೂ ಪೂಜಿಸುತ್ತಿದ್ದಾರೆ ಮತ್ತು ಗೌರವಿಸುತ್ತಾರೆ. ಸೇವಾಲಾಲರನ್ನು ಈಗಲೂ ಅನೇಕ ಲಾವಣಿ ಪದಗಳು, ಲಂಬಾಣಿ ಶೈಲಿಯ ನೃತ್ಯಗಳು, ವಾಜ(ಭಜನೆ) ಹೀಗೆ ಅನೇಕ ಬಂಜಾರ ಸಂಸ್ಕೃತಿಯ ಮೂಲಕ ಸ್ಮರಿಸಲಾಗುತ್ತದೆ. ಪ್ರತಿಯೊಂದು ಬಂಜಾರ ತಾಂಡಗಳಲ್ಲೂ ಸೇವಾಲಾಲ್ ಹಾಗೂ ಮರಿಯಮ್ಮ ದೇವಿಯ ದೇವಸ್ಥಾನವಿರುತ್ತದೆ.
ಸೇವಾಲಾಲ್ ರವರು ಪವಾಡ ಪುರುಷರಾಗಿದ್ದರು ಎಂದು ಅನೇಕರು ಹೇಳುತ್ತಾರೆ ಮತ್ತು ಅನೇಕ ಲಾವಣಿ ಪದಗಳಲ್ಲಿ ಅವರ ಪವಾಡಗಳನ್ನು, ಮಣ್ಣಿನಿಂದ ಪಾಯಸ ಮಾಡಿದ ಕಥೆಯನ್ನು, ಸೇವಾಲಾಲಾರನ್ನು ಪರೀಕ್ಷಿಸಲು ಬಂದ ಒಬ್ಬ ಗಂಡಿಗೆ ತನ್ನ ಶಕ್ತಿಯಿಂದ ಹೆಣ್ಣಾಗಿ ಪರಿವರ್ತಿಸಿದ್ದನ್ನು ಹೀಗೆ ಅನೇಕ ಪವಾಡಗಳನ್ನು ಅವರ ಮೇಲೆ ಹೇಳಲಾಗಿದೆ. ಅವರನ್ನು ಪವಾಡಪುರುಷರು ಎಂದು ಹೇಳುವ ಮೂಲಕ ಅವರಲ್ಲಿದ್ದ ಮಾನವೀಯ ಮೌಲ್ಯಗಳು, ಸಕಲ ಜೀವಿಗಳಿಗೂ ಒಳಿತನ್ನು ಬಯಸುವ ಗುಣವು, ಜನಾಂಗ ಮತ್ತು ಸಂಸ್ಕೃತಿಯ ಮೇಲೆ ಅವರಿಗಿದ್ದ ಅಪಾರವಾದ ಕಾಳಜಿ, ದುಶ್ಚಟಗಳಿಗೆ ಬಲಿಯಾಗದಂತೆ ಜನಾಂಗಕ್ಕೆ ಅವರು ಕೊಟ್ಟ ಸಂದೇಶ, ಮಹಿಳೆಯನ್ನು ಗೌರವಿಸಿ, ದುರ್ಬಲರಿಗೆ ಧ್ವನಿಯಾಗಿ ಎಂದು ಹೇಳಿದ ಅನೇಕ ವಿಷಯಗಳನ್ನು ಕಣ್ಮರೆಗೊಳಿಸಲಾಗುತ್ತಿದೆ.
ನಮ್ಮಂತೆ ಮನುಷ್ಯರಾಗಿಯೇ ಜನಿಸಿದ ಸೇವಾಲಲರು ತಮ್ಮ ಮರಣದ ನಂತರ ಪ್ರತಿಯೊಂದು ಬಂಜಾರ ಹಳ್ಳಿಗಳಲ್ಲೂ ಪೂಜಿಸಲ್ಪಡುತ್ತಿದ್ದಾರೆ. ಬಂಜಾರ ಜನಾಂಗದಲ್ಲಿ ಜನಿಸಿದ ಸೇವಾಲಾಲರ ಬೋಧನೆಗಳು, ಮಾನವತಾವಾದಿ ಚಿಂತನೆಗಳು, ಪ್ರಗತಿಪರ ಆಲೋಚನೆಗಳು, ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣಬೇಕು ಎನ್ನುವ ಅವರ ತತ್ವಗಳ ಮೂಲಕ ನಾವು ಸೇವಾಲಾಲಾರನ್ನು ಸ್ಮರಿಸಬೇಕೇ ವಿನಃ ಆಧಾರರಹಿತ ಪವಾಡಗಳ ಮೂಲಕವಲ್ಲ. ಈ ರೀತಿಯ ವೈಜ್ಞಾನಿಕ ಚಿಂತನೆಗಳು ಮತ್ತು ವಿಶ್ವಮಾನವತೆ ಹೊಂದಿದ್ದ ಸೇವಾಲಾಲರು ಸಮುದಾಯದ ಗಡಿಯನ್ನು ದಾಟಿ ವ್ಯಾಪಿಸುತ್ತಿರುವುದು ಸೇವಾಲಾಲರ ಚಿಂತನೆಗಳಿಗೆ ಇದ್ದಂತಹ ಆಘಾದವಾದ ಶಕ್ತಿ ಎಂದು ಹೇಳಬಹುದು.
ಈಗಿನ ಪೀಳಿಗೆಯ ಜನರು ಸೇವಾಲಾಲರನ್ನು ನಿಜವಾಗಿಯೂ ಪೂಜಿಸುವುದಾದರೆ ಅವರು ಅನುಸರಿಸಿದ ತತ್ವಗಳನ್ನು, ದುಶ್ಚಟಗಳಿಗೆ ಬಲಿಯಾಗದಂತೆ ಸಾರಿದ ಸಂದೇಶವನ್ನು, ಮೌಢ್ಯ ಕಂದಾಚಾರಗಳಿಗೆ ಬಲಿಯಾಗದಂತೆ ಎಚ್ಚರಿಸಿದ ವೈಜ್ಞಾನಿಕ ಮನೋಭಾವವನ್ನು,, ಸಕಲ ಚರಾಚರ ಜೀವಿಗಳಿಗೂ ಒಳಿತಾಗಲಿ ಎಂದು ಹೇಳಿದ ವಿಶ್ವಮಾನವ ತತ್ವವನ್ನು, ಹೆಣ್ಣುಮಕ್ಕಳಿಗೆ ಸಮಾನ ಗೌರವ ಮತ್ತು ಸ್ವಾತಂತ್ರ್ಯ ದಕ್ಕಬೇಕು ಎಂದು ಹೇಳಿದ ಸಮಾನತೆಯ ಅಂಶಗಳನ್ನು ಪಾಲಿಸುವವರಾಗಬೇಕು. ಪರರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಗೌರವಿಸುವುದನ್ನು ಕಲಿಯಬೇಕು. ಅದೇ ನಾವು ಸೇವಾಲಾಲರಿಗೆ ಗೌರವಿಸುವ ಮತ್ತು ಪೂಜಿಸುವ ವಿಧಾನವಾಗಿದೆ.
– ರುದ್ರು ಪುನೀತ್ ಆರ್.ಸಿ.