ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಸುದ್ದಿ, ಬಿವೈ ವಿಜೇಂದ್ರ ವರುಣದಲ್ಲಿ ಸಿದ್ರಾಮಯ್ಯನವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆಂದು. ಟೀವಿ ಮಾಧ್ಯಮಗಳು ವಿಶೇಷವಾಗಿ ಈ ಸುದ್ದಿ ಕವರೇಜ್ ಮಾಡಲು ಮತ್ತು ದಿನಂಪೂರ್ತಿ ಪದೇ ಪದೇ ಅದೊಂದೇ ಸುದ್ದಿ ತೋರಿಸಲು ಕಾರಣವಿದೆ. ಒಂದು, ಇದು TRP ಸುದ್ದಿ, ಇನ್ನೊಂದು ವರುಣಾ ಕ್ಷೇತ್ರವನ್ನು ಹೈವೋಲ್ಟೇಜ್ ಕ್ಷೇತ್ರವೆಂದು ಬಿಂಬಿಸಿ ಸಿದ್ರಾಮಯ್ಯನ ಗಮನವೆಲ್ಲ ವರುಣಾದ ಕಡೆಗೆ ಮಾತ್ರ ಇರುವಂತೆ ನೋಡಿಕೊಳ್ಳುವುದು. ಈ ಹಿಡನ್ ಅಜೆಂಡಾ ಇಟ್ಟುಕೊಂಡೆ ಮಾಧ್ಯಮಗಳು ವರುಣಾ ಕ್ಷೇತ್ರದ ಮೇಲೆ ಮುಗಿ ಬಿದ್ದಿವೆ.
ಸಿದ್ರಾಮಯ್ಯ ಕರ್ನಾಟಕದ ಮಾಸ್ ಲೀಡರ್. ತನ್ನ ಸುದೀರ್ಘವಾದ ರಾಜಕೀಯ ಜೀವನದಲ್ಲಿ ಎಲ್ಲಾ ಪಟ್ಟುಗಳನ್ನು ಕಲಿತ ನಾಯಕ. ಅಹಿಂದ ನಾಯಕನೆಂದೇ ಜನಜನಿತವಾದವರು. ಒಂದು ರೀತಿಯಲ್ಲಿ ಇವತ್ತು ಇಡೀ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಅವರೇ ಆಕ್ಸಿಜನ್ ಇದ್ದಂತೆ. ಇನ್ನೂ ಬಿವೈ ವಿಜೇಂದ್ರ ಇಲ್ಲಿಯವರೆಗೆ ಕನಿಷ್ಠ ಗ್ರಾಂ ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದವರಲ್ಲ. ಸಿದ್ರಾಮಯ್ಯನವರಿಗೂ ಮತ್ತು ವಿಜೇಂದ್ರ ಮಧ್ಯೆ ಮಾಧ್ಯಮಗಳು ಹೋಲಿಕೆ ಮಾಡುತ್ತಿರುವುದೇ ಅಸಂಬದ್ಧ. ತಾನು ಯಡಿಯೂರಪ್ಪನವರ ಮಗ ಮತ್ತು ಲಿಂಗಾಯತ ಸಮುದಾಯವನು ಎಂಬುದೇ ಬಿವೈ ವಿಜೇಂದ್ರನ ಪ್ರಮುಖ ಅಸ್ತ್ರ. ಈ ಅಸ್ತ್ರಗಳನ್ನು ಪ್ರಯೋಗಿಸಿಯೇ ವರುಣಾದಲ್ಲಿ ಸ್ಪರ್ಧಿಸಿ, ಗೆಲ್ಲಬೇಕೆಂಬ ಉಮೇದಿನಲ್ಲಿ ಅವರು ಇದ್ದದ್ದು ಸುಳ್ಳಲ್ಲ.
ಇದನ್ನೂ ಓದಿ : ಪಂಚಮಸಾಲಿಗರು ಈ 2% ಮೀಸಲಾತಿಗಾಗಿಯೇ ಎರಡು ವರ್ಷ ಹೋರಾಡಿದ್ದಾ?
ಬಿಜೆಪಿ ಹೈಕಮಾಂಡ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸಲು ಸಂಚು ರೂಪಿಸಿತು. ವರುಣಾದಲ್ಲಿ ವಿಜೇಂದ್ರನನ್ನ ನಿಲ್ಲಿಸಿದರೆ ಅದೊಂದು ಹೈವೋಲ್ಟೇಜ್ ಕ್ಷೇತ್ರವಾಗಿ ರೂಪುಗೊಳ್ಳುತ್ತದೆ. ಇದರಿಂದ ಸಿದ್ದರಾಮಯ್ಯನ ಬಿರುಸಿನ ರಾಜ್ಯ ಸುತ್ತಾಟಕ್ಕೆ ಸ್ವಲ್ಪ ಕಡಿವಾಣ ಬಿಳಬಹುದು. ಇತ್ತ ಅಹಿಂದ ಮತಗಳ ಬಾಹುಳ್ಯ ವರುಣಾದಲ್ಲಿ ವಿಜೇಂದ್ರ ಸೋಲುತ್ತಾನೆ, ಅತ್ತ ಶಿಕಾರಿಪುರಕ್ಕೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗೆ ಟಿಕೇಟ್ ನೀಡಿ, ಗೆಲ್ಲಿಸಿಕೊಂಡು ಬಂದರೆ ಶಾಸ್ವತವಾಗಿಯೇ ಶಿಕಾರಿಪುರ ಕ್ಷೇತ್ರ ಯಡಿಯೂರಪ್ಪ ಕೈಯಿಂದ ಕಿತ್ತು ಕೊಳ್ಳಬಹುದು. ಇದನ್ನು ಅರಿಯದೇ ವಿಜೇಂದ್ರ ಹೈಕಮಾಂಡ್ ಸೂಚಿಸಿದರೆ ನಿಲ್ಲುವೆ ಎಂದು ಒಲವು ತೋರಿಸಿದರು.
ವರುಣಾದಲ್ಲಿ ವಿಜೇಂದ್ರನನ್ನ ನಿಲ್ಲಿಸಲು ಇಷ್ಟೊಂದು ಉತ್ಸುಕತೆ ತೋರಿಸುತ್ತಿರುವ ಹೈಕಮಾಂಡ್ ನ ನಿಜವಾದ ಉದ್ದೇಶ ಏನೆಂಬುದನ್ನು ಅರಿಯದಷ್ಟು ಯಡಿಯೂರಪ್ಪ ಧಡ್ಡರಲ. ಇವರು ವಿಜೇಂದ್ರನನ್ನ ರಾಜಕೀಯವಾಗಿ ಬಲಿ ಕೊಡಲು ವರುಣಾದಲ್ಲಿ ನಿಲ್ಲಿಸುತ್ತಿದ್ದಾರೆಂದು ಅರಿತು ತಕ್ಷಣ ರಂಗಪ್ರವೇಶ ಮಾಡಿ, ಯಾವುದೇ ಕಾರಣಕ್ಕೂ ವಿಜೇಂದ್ರ ವರುಣಾದಲ್ಲಿ ನಿಲ್ಲುವುದಿಲ್ಲ. ನಿಲ್ಲುವ ಪ್ರಶ್ನೆಯೇ ಇಲ್ಲ. ಅವರು ಶಿಕಾರಿಪುರದಲ್ಲೇ ನಿಲ್ಲುತ್ತಾರೆ ಎಂದು ಖಡಕ್ ಆಗಿಯೇ ಮಾಧ್ಯಮಗಳೆದುರಿಗೆ ಹೇಳುವ ಮೂಲಕ ನಾನಿನ್ನು ಬದುಕಿದ್ದೇನೆ ಎಂದು ಪಕ್ಷದ ದಿಲ್ಲಿ ದೊರೆಗಳಿಗೆ ಹಾಗೂ ರಾಜ್ಯದ ಬಿ ಎಲ್ ಸಂತೋಷ ಹಾಗೂ ಅವರ ಟೀಂ ಗೆ ಸಂದೇಶ ರವಾನಿಸಿದ್ದಾರೆ.
ಅಷ್ಟಕ್ಕೂ ಸಿದ್ದರಾಮಯ್ಯನ ವಿರುದ್ಧ ನಿಲ್ಲಿಸಲು ಪಕ್ಷದಲ್ಲಿ ಆರೆಸ್ಸೆಸ್ ಹಿನ್ನೆಲೆಯ ಘಟಾನುಘಟಿ ನಾಯಕರ ದಂಡೇ ಇದೆ. ಹೈಕಮಾಂಡ್ ಗೆ ಸಿದ್ರಾಮಯ್ಯನಿಗೆ ಸೋಲಿಸಲೇಬೇಕೆಂಬ ಉಮೇದು ಇದ್ದಿದ್ದರೆ ಬಿ.ಎಲ್. ಸಂತೋಷ, ಪ್ರತಾಪ್ ಸಿಂಹ, ಪ್ರಲ್ಹಾದ ಜೋಶಿ ಮತ್ತು ತೇಜಸ್ವಿ ಸೂರ್ಯ ಇವರಲ್ಲಿ ಯಾರಾದರೂ ಒಬ್ಬರನ್ನು ಸಿದ್ದರಾಮಯ್ಯವರ ವಿರುದ್ಧ ನಿಲ್ಲಿಸಿ ಗೆಲ್ಲಿಸಲೆಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.