ದ ಪಾಲಿಟಿಕ್

ಲಿಂಗಾಯತ ಸ್ವಾಮಿಜಿಗಳ ಮೇಲೆ ಮಾತ್ರ ‍ಯಾಕೆ ದಾಳಿ ಅಗುತ್ತಿವೆ? 

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಹೌದು, ಈ ನಾಡಿನಲ್ಲಿ ಅನೇಕ ಲಿಂಗಾಯತೇತರ ಮಠಾಧೀಶರು, ಕಾವಿಧಾರಿಗಳು ಮತ್ತು ಧರ್ಮ ಪ್ರಸಾರಕರಿದ್ದಾರೆ. ಆದರೂ ಕೇವಲ ಲಿಂಗಾಯತ ಸ್ವಾಮಿಜಿಗಳ ಮೇಲೆ ಮಾತ್ರವೇ ಯಾಕೆ ಈ ʼವೈದಿಕ ಪಟಾಲಂʼದಿಂದ ದಾಳಿ ನಡೆಯುತ್ತಿವೆ? ಇವರೇನಾದರೂ ಸಂವಿಧಾನವನ್ನು ಧಿಕ್ಕರಿಸಿ ಬದುಕುತ್ತಿದ್ದಾರೆಯೇ? ವಿರುದ್ಧ ಕೆಲಸ ಮಾಡುತ್ತಿದ್ದಾರೆಯೇ? ಇಲ್ಲವೇ ಈ ನೆಲದ ಕಾನೂನು ಮತ್ತು ಸುವ್ಯವಸ್ಥೆಗೆ ಸವಲಾಗಿದ್ದಾರೆಯೆ? ಅಥವಾ ಜನವಿರೋಧಿ – ದೇಶವಿರೋಧಿ – ಧರ್ಮ ವಿರೋಧಿ ಕೆಲಸದಲ್ಲಿ ಕೈ ಹಾಕಿದ್ದಾರೆಯೇ? ಮತ್ಯಾಕೆ ಲಿಂಗಾಯತ ಸ್ವಾಮಿಜಿಗಳ ಮೇಲೆ ಮಾತ್ರ ದಾಳಿ ಆಗುತ್ತಿವೆ? ಇಡೀ ಸಮುದಾಯವೇ ಸಂಘಟಿತರಾಗಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ದಿನವೇ ಭಟ್ಟರು ಮತ್ತವರ ಪಟಾಲಂ ನಿಂತ ನೆಲವೇ ಕುಸಿಯಲು ಆರಂಭವಾಗುತ್ತದೆ. ಆ ದಿನಗಳೇನು ದೂರವಿಲ್ಲ ಅನಿಸುತ್ತಿದೆ. 

ಇವತ್ತಿಗೂ ಲಿಂಗಾಯತ ಮಠಗಳಲ್ಲಿ ಉಚಿತ ದಾಸೋಹ ಮತ್ತು ಶಿಕ್ಷಣ ವ್ಯವಸ್ಥೆ ಇದೆ.  ಲಕ್ಷಾಂತರ ಬಡ ಮಕ್ಕಳು ತಮ್ಮ ಬದುಕು ಹಸನುಮಾಡಿಕೊಂಡಿದ್ದಾರೆ. ಅಲ್ಲಿ ಯಾರನ್ನೂ ಮಠದ ಹೊಸ್ತಿಲಲ್ಲಿ ನಿಲ್ಲಿಸಿ ʼಇವನಾರವʼ ಎಂದು ಪ್ರಶ್ನೆ ಮಾಡುವುದಿಲ್ಲ. ಎಲ್ಲರನ್ನೂ ʼಇವನಮ್ಮವʼ ಎಂದು ಕೈಬಿಸಿ ಕರೆಯುತ್ತವೆ. ಸಮಾನತೆ ಮತ್ತು ಸೇವೆ ಲಿಂಗಾಯತ ಮಠಗಳ ಅಡಿಪಾಯವಾಗಿವೆ.

ಇದೇ ವಿಶ್ವೇಶ್ವರ ಭಟ್‌ರ ಸಮುದಾಯದ ಮಠಗಳು ಜನರಿಗೆ ಒಂದಾದರೂ ಉಪಯೋಗವಾಗುವ ಕೆಲಸ ಮಾಡಿದ್ದಾವೆಯೇ? ಅವರ ಮಠಾಧೀಶರು ಮನುಷ್ಯ ಪರವಾಗಿ ಒಮ್ಮೆಯಾದರೂ ಮಾತಾಡಿದ್ದಾರೆಯೇ? ಭೇದಭಾವವೇ ಇವರ ಮಠಗಳ ಉಸಿರಾಗಿವೆ. ಅಲ್ಲಿ ಮನುಷ್ಯನ ಘನತೆಗೆ ಕುಂದು ತರುವ ಕೆಲಸಗಳು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಶತಶತಮಾನಗಳಿಂದಲೂ ನಡೆಯುತ್ತಿವೆ. ಇವುಗಳ ವಿರುದ್ಧ ವಿಶ್ವೇಶ್ವರ ಭಟ್‌ರು ಎಂದಾದರೂ ಮಾತಾಡಿದ್ದಾರೆಯೇ?  ತಮ್ಮ ಮಠಗಳ ಬಗ್ಗೆ ಎಂದೂ ಸೊಲ್ಲೆತ್ತದ ಈ ಮನುಷ್ಯ ಜನಮುಖಿಯಾಗಿ ಕೆಲಸ ಮಾಡುತ್ತಿರುವ ಲಿಂಗಾಯತ ಮಠಾಧೀಶರ ವಿರುದ್ಧ ಮಾತಾಡುತ್ತಿದ್ದಾರೆ.

ಲಿಂಗಾಯತರಿಗೆ ಅವರ ಅಸ್ಮಿತೆಯ ಅರಿವಾದರೇ, ಅವರೂ ಸ್ವತಂತ್ರ ಧರ್ಮದವರಾದರೇ ಈ ನಾಡಿನಲ್ಲಿ ನಮ್ಮವರ ಕಾಲಾಳಾಗಿ ದುಡಿಯಲು ಯಾರೂ ಸಿಗುವುದಿಲ್ಲ ಎಂಬ ʼಒಡಲ ಸಂಕಟʼವೇ ಲಿಂಗಾಯತ ಮಠಾಧೀಶರ ಮೇಲಿನ ಇಂತಹ ದಾಳಿಗೆ ಮೂಲ ಕಾರಣವಾಗಿದೆ. ಇದೇ ಭಟ್‌ರ ತಾತ್ವಿಕ ಪೂರ್ವಜರೇ ಬಸವಾದಿ ಶರಣರ ಹತ್ಯಾಕಾಂಡ ಮಾಡಿದ್ದು ಮತ್ತು ಲಿಂಗಾಯತ ಚಳವಳಿ ಹತ್ತಿಕ್ಕಲ್ಲು ಯತ್ನಿಸಿರುವ ಸಂಗತಿ ಗುಟ್ಟಾಗೇನು ಉಳಿದಿಲ್ಲ.  ಅದರ ಭಾಗವಾಗಿಯೇ ಇತೀಚೆಗೆ ಲಿಂಗಾಯತ ಸಮುದಾಯದ ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆ ನಡದದ್ದು. ಯಾವ ಕಾರಣಕ್ಕಾಗಿ ಅವರ ಹತ್ಯೆ ನಡೆದಿದೆಯೇ ಅದರ ಮುಂದುವರೆದ ಭಾಗವಾಗಿಯೇ ಇಂದು ಸಾಣೇಹಳ್ಳಿ ಶ್ರೀಗಳ ಮೇಲೆ ಅಕ್ಷರ ದಾಳಿ ನಡೆಯುತ್ತಿದೆ.

ಇವರ ಮೇಲೆ ದಾಳಿ ನಡೆಯತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಹೀಗೆ ನಡೆದಿತ್ತು. ಅಗಲೂ ಬಸವಾನುಯಾಯಿಗಳು, ಬಸವ ಮಾರ್ಗಿ ಮಠಾಧೀಶರು ಮತ್ತು ನಾಡಿನ ಚಿಂತಕರ ವಲಯ ಶ್ರೀಗಳ ಪರವಾಗಿ ನಿಂತಿತ್ತು. ಸಾಣೇಹಳ್ಳಿ ಶ್ರೀಗಳು ಸಮುದಾಯದಲ್ಲೇ ಅತ್ಯಂತ ಪ್ರಭಾವಶಾಲಿಗಳು. ಇವರ ಮಾತಿಗೆ ಇಡೀ ಸಮಾಜವೆ ತಲೆದೂಗುತ್ತದೆ. ಇವರೊಬ್ಬರ ಮೇಲೆ ದಾಳಿ ನಡೆಸಿದರೆ ಮಿಕ್ಕವರು ತನ್ನಿಂತಾನೇ ತೆಪ್ಪಗಿರುತ್ತಾರೆ, ಆಗ ಲಿಂಗಾಯತ ಹೋರಾಟ ಸಾಯುತ್ತದೆ ಎಂಬ ದೂರಾಲೋಚನೆ – ದುರಾಲೋಚನಯಿಂದ ಶ್ರೀಗಳನ್ನ ಟಾರ್ಗೆಟ್‌ ಮಾಡುತ್ತಿದ್ದಾರೆ. ಈ ತರಹದ ಗೊಡ್ಡು ದಾಳಿಗಳಿಗೆ ಬಗ್ಗುವ, ಕುಗ್ಗುವ ಇಲ್ಲವೇ ಅಂಜಿ ಮೂಗನಾಗಿ ಮಾತು ನಿಲ್ಲಿಸಲು ಸಾಣೇಹಳ್ಳಿ ಶ್ರೀಗಳೇನು ಸಾವರ್ಕರ್‌ ವಂಶಸ್ಥರೆ?

ನಮ್ಮ ಸಮುದಾಯದಲ್ಲಿಯೂ ಸಾಣೇಹಳ್ಳಿ ‍ಶ್ರೀಗಳಂತೆ ಇದ್ದದ್ದು ಇದ್ದಂತೆ ಮಾತಾಡುವ, ಸದಾ ಜನಪರವಾಗಿ – ಜೀವಪರವಾಗಿರುವ ಕೆಲಸ ಮಾಡುವ ಒಬ್ಬ ಸ್ವಾಮೀಜಿಯೂ ಇಲ್ಲವಲ್ಲ ಎಂಬ ʼಹೊಟ್ಟೆ ಉರಿʼ ಭಟ್‌ರಿಗೆ ಇದ್ದದ್ದು ಪದೇಪದೇ ಅವರಾಗಿ ಅವರೇ ಬಹಿರಂಗಪಡಿಸುತ್ತಿದ್ದಾರೆ. ಆ ಹೊಟ್ಟೆ ಉರಿ ತಾಳದೆ ಈ ರೀತಿ ಅಗಾಗ್ಗೆ ವಿಷ ಕಾರುತ್ತಿದ್ದಾರೆ. ಭಟ್‌ನಂತ ಸಾವಿರಾರು ಜನರು ಲಿಂಗಾಯತ ಧರ್ಮದ ವಿರುದ್ಧ, ಲಿಂಗಾಯತ ಹೋರಾಟಗಾರರ – ಮಠಾಧೀಶರ ವಿರುದ್ಧ ಸಾಲಾಗಿ ನಿಂತು ಲಬೋ ಲಬೋ ಎಂದು ಬೊಬ್ಬೆ ಹೊಡೆದುಕೊಂಡರೂ ಲಿಂಗಾಯತ ಹೋರಾಟದ ರಥವಾಗಲಿ, ಮಾತಾಗಲಿ ನಿಲ್ಲುವುದಿಲ್ಲ.

ಈ ರಥವನ್ನು ಹಾಗೂ ಮಾತನ್ನು ನಿಲ್ಲಿಸಲು ಬಸವಣ್ಣನವರ ಕಾಲದಿಂದಲೂ ಭಟ್‌ರ ಸೈದ್ಧಾಂತಿಕ ಪೂರ್ವಜರು ಯತ್ನಿಸುತ್ತಲೇ ಬಂದಿದ್ದಾರೆ. ಆ ಕಾಲದಲ್ಲೇ ಸೀಗದ ಯಶಸ್ಸು, ಲಿಂಗಾಯತ ಯುವಕರು ಎಚ್ಚರವಾಗಿರುವ ಈ ಕಾಲಘಟ್ಟದಲ್ಲಿ ಸಿಗಲು ಸಾಧ್ಯವೇ? ಹಾಗೇ ಯತ್ನಿಸಿದವರೆಲ್ಲರೂ ವಿಫಲವಾಗಿ ಇತಿಹಾಸದ ಕಸದ ಬುಟ್ಟಿಗೆ ಸೇರಿದ್ದು ಇತಿಹಾಸದ ಪುಟಗಳಲ್ಲಿ ಕಾಣಬಹುದು.

ಅಷ್ಟಕ್ಕೂ ಸಾಣೇಹಳ್ಳಿ ಸ್ವಾಮೀಜಿಗಳು ಈಗ ಹೊಸದಾಗಿ ‍ಅಥವಾ ಹೊಸದೇನು ಹೇಳುತ್ತಿಲ್ಲ.  ಈ ಹಿಂದೆ ಸಾವಿರಾರು ಸಲ ಹೇಳಿದ್ದನೇ ಈಗಲೂ ಮಾತಾಡಿದ್ದಾರೆ. ಅವರು ಕಾವಿಧರಿಸಿದಾಗಿನಿಂದ ಲಿಂಗಾಯತ ಧರ್ಮದ ಪರ, ಜನರ ಪರ ಮಾತಾಡುತ್ತಿದ್ದಾರೆ. ಜನರಿಗಾಗಿಯೇ ಬದುಕುತ್ತಿದ್ದಾರೆ. ಇವರೊಬ್ಬರೇ ಅಲ್ಲ, ಈ ನೆಲದಲ್ಲಿ ಬುದ್ದ, ಬಸವಣ್ಣ, ಮಹಾವೀರ, ‍ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಪೇರಿಯಾರ್‌, ಅಂಬೇಡ್ಕರ್… ಮತ್ತಿತರ ಸಾವಿರಾರು ಜನರು ಮನುಷ್ಯ ಪರವಾಗಿ ಮಾತಾಡಿದ್ದಾರೆ. ಹೀಗೆ ಮಾತಾಡಿದ್ದವರೇ ಇಂದು ಜನರ ಮನೆ – ಮನದಲ್ಲಿದ್ದಾರೆ ವಿನಾ ಭಟ್‌ರಂತವರೂ ಇಲ್ಲ ಅಥವಾ ಅವರ ತಾತ್ವಿಕ್‌ ಪೂರ್ವಜರೂ ಅಲ್ಲ.

ಇವತ್ತು ಹಿಂದೂ ಧರ್ಮದ ಗುತ್ತಿಗೆ ಹಿಡಿದಂತೆ ಮಾತನಾಡುತ್ತಿರುವ ಭಟ್‌ರು ಹಿಂದೊಮ್ಮೆ ಅವರದ್ದೇ ಸಮುದಾಯದ ಪೇಜಾವರ್ ಸ್ವಾಮಿಗಳು ಹಿಂದೂ ಧರ್ಮವೇ ಬೇರೆ, ಬ್ರಾಹ್ಮಣ ಧರ್ಮವೇ ಬೇರೆ ಎಂಬರ್ಥದಲ್ಲಿ ಮಾತನಾಡಿದಾಗ ಆಗ ಇವರು ಯಾಕೆ ಬಾಯಿಮುಚ್ಚಿಕೊಂಡಿದ್ದರು? ಅಗ ಎಲ್ಲಿ ಹೋಗಿತ್ತು ಇವರ ಕಾಳಜಿ. ತಮ್ಮ ಸಮುದಾಯದ ಸ್ವಾಮಿಜಿಗಳು ಏನೇ ಮಾತಾಡಿದರು, ಏನೇ ಮಾಡಿದರು ನಡೆಯುತ್ತದೆ. ಜತೆಗೆ ತಮ್ಮದೇ ಸಮುದಾಯದ ಕೆಲ ಸ್ವಾಮಿಗಳ ಭಾನಗಡಿ ಬಗ್ಗೆ ಎಂದೂ ತುಟಿ ಬಿಚ್ಚದ ಈ ಮನುಷ್ಯ ರಾಜ್ಯದಲ್ಲಿ 18 ರಿಂದ 20 ಪ್ರತಿಶತ ಜನರಿರುವ ಒಂದು ಸಮುದಾಯದ ಒಬ್ಬ ಪ್ರಭಾವಶಾಲಿ ಸ್ವಾಮಿಜಿಯ ವಿರುದ್ಧ ವಿಷ ಕಾರುತ್ತಿದ್ದಾರೆ. ಈ ʼವಿಷʼಕ್ಕೆ ಲಿಂಗಾಯತರಿಗೆ ಮದ್ದು ಗೊತ್ತಿದೆ. ಗೊತ್ತಾಗಿಯೇ ದಿನದಿಂದ ದಿನಕ್ಕೆ ಬಸವಣ್ಣನ ಕಡೆಯೇ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅವರೇನೇ ತಿಪ್ಪರಲಾಗ ಹಾಕಿದರೂ ಈ ಪ್ರವಾಹ ತಡೆಯಲು ಸಾಧ್ಯವಾಗುತ್ತಿಲ್ಲ.

ಬಸವಾನುಯಾಯಿಗಳು ಜಾಗೃತರಾಗಿದ್ದಾರೆ. ಅವರಿಗೆ ತಮ್ಮ ಅಸ್ಮಿತೆಯ ಅರಿವಾಗಿದೆ. ನಾವಾರು, ನಮ್ಮ ಸೈದ್ಧಾಂತಿಕ ಶತ್ರುಗಳಾರು, ಮಿತ್ರರಾರು ಎಂಬುದು ತಡವಾಗಿಯಾದರೂ ಅರಿತ್ತಿದ್ದಾರೆ. ಇನ್ನೂ ಬ್ರಾಹ್ಮಣ್ಯದ ಗುಲಾಮಗಿರಿ ಮಾಡಲು ಲಿಂಗಾಯತರಾರು ಸಿದ್ಧರಿಲ್ಲ.  ಸಗಟು ಮಾರುಕಟ್ಟೆಯಲ್ಲಿ ಪುಡಿಗಾಸಿಗೆ ಮಾರಾಟವಾಗುವ ಅಲ್ಲೊಬ್ಬ ಇಲ್ಲೊಬ್ಬ  ಹೊಟ್ಟೆಪಾಡಿನ ಆಸನದ ಗುರುಗಳಂತವರೂ ಸಿಗಬಹುದು. ಅಂತವರು ಹಿಂದೆಯೂ ಇದ್ದರೂ, ಈಗಲೂ ಇದಾರೆ, ಮುಂದೆಯೂ ಇರುತ್ತಾರೆ. ಎಲ್ಲಾ ಕಾಲದಲ್ಲಿಯೂ ಇರುತ್ತಾರೆ.

ಲಿಂಗಾಯತ ಹೋರಾಟದ ರಥ ದಡಕ್ಕೆ ತಲುಪವವರೆಗೂ ಲಿಂಗಾಯತ ತತ್ವದ ಮೇಲೆ, ಚರಿತ್ರೆಯ ಮೇಲೆ ಮತ್ತು ಲಿಂಗಾಯತ ಮಠಾಧೀಶರ ಮೇಲೆ ಈ ದಾಳಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ದಾಳಿಗಳು ಇನ್ನೂ ಹೆಚ್ಚಾಗುತ್ತವೆ. ಅವರು ವಿರೋಧ ಮಾಡಿದಷ್ಟು ಲಿಂಗಾಯತ ಹೋರಾಟ ಪ್ರಖರವಾಗುತ್ತಿದೆ. ಲಿಂಗಾಯತ ಯುವಕರ ಭವಿಷ್ಯವನ್ನೇ ಕತ್ತಲೆಗೆ ದುಡುತ್ತಿರುವವರ ಬಗ್ಗೆ ಜಾಗೃತವಾಗಿರುವ ಸಮುದಾಯದ ಯುವಕರು ಹಾದಿಬೀದಿಯಲ್ಲಿ ಇವರ ಉದ್ಧಟತನವನ್ನೂ, ಕಪಟತನವನ್ನೂ, ಹಿಪಾಕ್ರಸಿಯನ್ನೂ ಪ್ರಶ್ನೆ ಮಾಡುವ ದಿನಗಳು ದೂರವೇನಿಲ್ಲ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!