ಕರ್ನಾಟಕ ರಾಜಕಾರಣದಲ್ಲಿ ದುಡ್ಡಿನ ರಾಜಕಾರಣ, ಜಾತಿ ರಾಜಕಾರಣ, ತೋಳ್ಬಲದ ರಾಜಕಾರಣ ಮಾತ್ರವಲ್ಲ ಹೊಂದಾಣಿಕೆ ರಾಜಕಾರಣವೂ ತುಸು ಜೋರಾಗಿಯೇ ಇದೆ. ಇಂದು ಪಕ್ಷ ನಿಷ್ಠೆ, ಬದ್ಧತೆ, ನೈತಿಕ ರಾಜಕಾರಣ ಎಂಬ ಪದಗಳೆಲ್ಲ ಪದಗಳಾಗಿಯೇ ಮಾತ್ರ ಉಳದಿವೆ. ಈ ಹೊಂದಾಣಿಕೆ ರಾಜಕೀಯ ಯಾವುದೆ ಒಂದು ರಾಜಕೀಯ ಪಕ್ಷಕ್ಕೆ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇದು ಸರ್ವವ್ಯಾಪಿಯಾಗಿ ಹರಡಿದೆ. ಇಂದು ದೇಶದ ಬಹುತೇಕ ಪಕ್ಷಗಳು ಈ ರೋಗದಿಂದಾಗಿ ಸೊರಗಿವೆ. ಕೆಲವರಂತೂ ಹೊಂದಾಣಿಕೆಯಿಂದಲೇ ರಾಜಕೀಯವಾಗಿ ಬದುಕುಳಿದಿದ್ದಾರೆ. ಎದುರಾಳಿ ಪಕ್ಷದ ನಾಯಕರೊಂದಿಗೆ ಒಳಗೊಳಗೆ ದೋಸ್ತಿ ಮಾಡಿಕೊಂಡು ತಮಗಾಗದ ತಮ್ಮದೇ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ ಉದಾಹರಣೆಗಳು ಪ್ರತಿ ಪಕ್ಷದಲ್ಲಿಯೂ ಸೀಗುತ್ತವೆ. ಹೊಸಬರಗಿಂತ, ಬೇರುಬಿಟ್ಟ ಹಳಬರ ದೋಸ್ತಿ ಸಲಿಸಾಗಿ ಏರ್ಪಡುತ್ತದೆ. ಇದು ವಿಚಿತ್ರವಾದರೂ ಸತ್ಯ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ʼಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆʼ ಎಂದು ಆರೋಪಿಸಿ, ʼಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದುʼ ಒತ್ತಾಯಿಸಿ ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ – ಜೆಡಿಎಸ್ ಜೊತೆಗೂಡಿ ʼಮೈಸೂರು ಚಲೋʼ ಪಾದಯಾತ್ರೆ ಹೋರಟಿವೆ. ನಾಳೆ ಆ.10ರಂದು ಅದು ಮೈಸೂರು ತಲುಪಿ ಅಲ್ಲಿ ಸಮಾರೋಪಗೊಳ್ಳಲಿದೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡ ʼಜನಾಂದೋಲನ ಸಭೆʼಗಳು ಮಾಡುತ್ತಿದೆ. ಪಾದಯಾತ್ರೆ ಯಾವ ಊರಿಗೆ ತಲುಪತ್ತದೆಯೋ ಅಲ್ಲಿಗೆ ಒಂದು ದಿನ ಮಂಚಿತವಾಗಿ ಹೋಗಿ ಬಿಜೆಪಿ – ಜೆಡಿಎಸ್ ದೋಸ್ತಿಗಳ ಲಂಚಗುಳಿತನ, ಭ್ರಷ್ಟಾಚಾರವನ್ನು ಬಯಲುಗೊಳಿಸುತ್ತಿದೆ. ಇವತ್ತು ಆ.9ರಂದು ಮೈಸೂರಿನ ಮಹಾರಾಣಿ ಕಾಲೇಜಿನ ಆವರಣದಲ್ಲಿ ಬ್ರಹತ್ ಜನಾಂದೋಲ ಸಮಾವೇಶ ಹಮ್ಮಿಕೊಂಡಿದೆ. ಇದು ಸಿದ್ದರಾಯಮ್ಯನವರ ರಾಜಕೀಯ ಜೀವಮಾನದಲ್ಲಿ ಅವರಿರಾಗಿ ನಡೆಯುತ್ತಿರುವ ಮೂರನೇ ಅತಿ ದೊಡ್ಡ ಸಮಾವೇಶ ಈ ಹಿಂದೆ 2005ರಲ್ಲಿ ಹುಬ್ಬಳಿಯಲ್ಲಿ ಅಹಿಂದ ಸಮಾವೇಶ ಮತ್ತು 2012ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಜರುಗಿತ್ತು.
ಎರಡು ಕಡೆಯವರು ಅಕ್ರಮಕ್ಕೆ ಸಂಬಂಧಿಸಿದ ಸಾರ್ವಜನಿಕವಾಗಿ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದಿದ್ದರೂ ಉಗ್ರವಾಗಿ ಆರೋಪ – ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದರಿಂದ ಅನೇಕ ಆಫ್ ದಿ ರೇಕಾರ್ಡ್ ಮಾತು – ವಿಚಾರಗಳು ಬಹಿರಂಗಗೊಳ್ಳುತ್ತಿರುವುದು ಸತ್ಯ. ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ʼಮಿಸ್ಟರ್ ವಿಜಯೇಂದ್ರ, ನೀನು ಕಳೆದ ಅಸೇಂಬ್ಲಿ ಚುನಾವಣೆಯಲ್ಲಿ ನಮ್ಮ ಪಕ್ಷದ ಭಿಕ್ಷೆಯಿಂದಾಗಿ ಗೆದ್ದಿದ್ದಿಯಾ ಎಂಬುವುದು ಮರೆಯಬೇಡʼ ಎಂದು ಛೇಡಿಸಲು ಹೋಗಿ ಹೊಂದಾಣಿಕೆ ರಾಜಕಾರಣವನ್ನು ಬಹಿರಂಗಪಡಿಸಿದ್ದಾರೆ ಜತೆಗೆ ಬಹಿರಂಗಪಡಿಸಿಕೊಂಡಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ʼಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ್ ನಡುವೆ ಶಿಕಾರಿಪುರ ಮತ್ತು ವರುಣಾ ಮತಕ್ಷೇತ್ರದಲ್ಲಿ ಹೊಂದಾಣಿಕೆಯಾಗಿದೆʼ ಎಂದು ಬಹಿರಂಗವಾಗಿಯೇ ಸದನದ ಹೊರಗೆ – ಒಳಗೆ ಆರೋಪಿಸಿದ್ದಾರೆ. ಅವರ ಆರೋಪಕ್ಕೆ ʼಡಿಕೆಶಿʼಯ ಈ ಮಾತು ಸಾಕ್ಷಿ ಒದಗಿಸುವಂತಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಗರಾಜೇ ಗೌಡ ಅವರಿಗೆ ಟಿಕೆಟ್ ನೀಡಬೇಕಿತ್ತು. ಅದನ್ನು ತಪ್ಪಿಸಿ ಕ್ಷೇತ್ರದಲ್ಲಿ ಜನಪ್ರಿಯನಲ್ಲದ ʼಗೋಣಿ ಮಾಲತೇಶ್ʼ ಎಂಬ ಡಮ್ಮಿ ಆಸಾಮಿಗೆ ಟಿಕೆಟ್ ನೀಡಿತ್ತು. ಈ ಮಹಾಶಯ ಚುನಾವಣೆಯಲ್ಲಿ ಕೇವಲ ಎಂಟು ಸಾವಿರ ಮತಗಳನ್ನು ಪಡೆದು ಹೀನಾಯವಾಗಿ ಸೋತರು.
ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜೇ ಗೌಡ, ವಿಜಯೇಂದ್ರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ ಹನ್ನೊಂದು ಸಾವಿರ ಮತಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿದರು. ವಿಜಯೇಂದ್ರ ಈ ಚುನಾವಣೆಯಲ್ಲಿ ಜಾತಿ ಬಲ, ಹಣ ಬಲದ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಗೆಲುವಿನ ತಡ ತಲುಪಲು ಏದುಸಿರು ಬಿಟ್ಟಿದ್ದರು. ಕಾಂಗ್ರೆಸ್ ಪಕ್ಷ ನಾಗರಾಜೇ ಗೌಡಗೆ ಟಿಕೆಟ್ ನೀಡಿದ್ದರೆ ಅವರು ಗೆಲ್ಲುವ ಎಲ್ಲಾ ಅವಕಾಶಗಳು ಇದ್ದವು.
ವರುಣಾದಲ್ಲಿ ಸಿದ್ದರಾಮಯ್ಯನರು ಲಿಂಗಾಯತ ಮತಗಳನ್ನು ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿತ್ತು. ಹಾಗಾಗಿ ಅವರಿಗೆ ಇವರ ಸಹಾಯ, ಇವರಿಗೆ ಅವರ ಸಹಾಯ ಮಾಡಿಕೊಳ್ಳಲು ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರು. ಇದರಿಂದಾಗಿ ಶಿಕಾರಿಪುರದಲ್ಲಿ ಯಡಿಯೂರಪ್ಪನ ಕುಲಪುತ್ರ ವಿಜಯೇಂದ್ರ ಮತ್ತು ವರುಣಾದಲ್ಲಿ ಸಮಾಜವಾದಿ ಸಿದ್ದರಾಮಯ್ಯ ಗೆದ್ದರು. ಈ ಹೊಂದಾಣಿಕೆ ವರುಣಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ. ಸೊಮಣ್ಣ ಮತ್ತು ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜೇ ಗೌಡಗೆ ರಾಜಕೀಯ ಬಲಿಪಿಠಕ್ಕೆ ಏರಿಸಿತು.
ಡಿಕೆಶಿ ಈ ಮಾತು ವಿಜಯೇಂದ್ರನಿಗೆ ತಟ್ಟಿದೆಯೋ ಇಲ್ಲವೇ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದೆ. ಸಿದ್ದರಾಮಯ್ಯನವರೂ ಹೊಂದಾಣಿಕೆ ಮಾಡಿಕೊಂಡೇ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು ಎಂದು ಚರಿತ್ರೆಯಲ್ಲಿ ದಾಖಲಾಗುತ್ತದೆ.
ಯಡಿಯೂರಪ್ಪ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಪಾಲುದಾರಿಕೆಯ ವ್ಯವಹಾರ ಸ್ನೇಹ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಣ ರಾಜಕೀಯ ಸ್ನೇಹ ಅವರಿಗೆ ವರವಾದರೆ, ಹಲವರಿಗೆ ದುಬಾರಿಯಾಗಿ ಪರಣಮಿಸಿದೆ. ಇತ್ತಿಚಿಗೆ ಯಡಿಯೂರಪ್ಪ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾದಾಗಲೂ ಅವರು ಜೈಲಿಗೆ ಹೋಗದಂತೆ ತಡೆದದ್ದು ಇದೇ ರಾಜಕೀಯ ಸ್ನೇಹ ಮತ್ತು ಪಾಲುದಾರಿಕೆ ವ್ಯವಹಾರ ಸ್ನೇಹ. ಈ ಹಿಂದೆ ಅವರ ಧರ್ಮಪತ್ನಿ ಮೈತ್ರಾದೇವಿ ಅನುಮಾನಸ್ಪದವಾಗಿ ಸಾವನಪ್ಪಿದಾಗಲೂ ಅವರನ್ನು ಕಾಪಾಡಿದ್ದು ಇದೇ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ.
ಇದು ಹೊಂದಾಣಕೆ ರಾಜಕಾರಣದ ಕಾಲ. ಹೊಂದಾಣಿಕೆವೊಂದು ಕಲಿತರೆ ಇಲ್ಲಿ ಎಲ್ಲವೂ ಸಲಿಸು. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿವೆ ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಣ್ಣೋರೆಸುವ ತಂತ್ರವಾಗಿ ಒಂದೆರಡು ಹಗರಣಗಳ ತನಿಖೆ ನಡೆಸಲು ಆದೇಶಿಸಿದೆ. ಆ ಆದೇಶ ಕೇವಲ ಕಾಗದ ಮೇಲಷ್ಟೇ ಉಳದಿದೆ. ಅದು ಮುಂದೇ ಸಾಗುವ ಯಾವ ಸಾಧ್ಯತೆಯೂ ಇಲ್ಲ. ಕಾರಣ ಮತ್ತೇನಿಲ್ಲ ಅದೇ ಹೊಂದಾಣಿಕೆ ರಾಜಕಾರಣ. ಈ ದೇಶದಲ್ಲಿ ಯಾವುದೇ ಭಯವಿಲ್ಲದೇ ಸಾಲುಸಾಲು ಭಾರೀ ಹಗರಣಗಳು ನಡೆಯಲು ಈ ಹೊಂದಾಣಿಕೆ ರಾಜಕಾರಣವೂ ಒಂದು ಪ್ರಧಾನ ಕಾರಣವಾಗಿದೆ.