ವಿಜಯಪುರದ ಸ್ಥಳೀಯ ನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಲು ವಿಫಲರಾದ ಎಂ. ಬಿ. ಪಾಟೀಲರಂತಹ ಮುಖಂಡರು ಕಾಂಗ್ರೆಸ್ ಗೆ ಸೆರಗಿನ ಕೆಂಡದಂತೆ ಎಂದು ಟೀಕಿಸಿದರೆ ಅದು ಕಟುವಾದ ಮಾತಂತೂ ಅಲ್ಲ.
ಒಟ್ಟು 35 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 10ರಲ್ಲಿ ಗೆಲುವು ಪಡೆದಿದೆ. ಮತ್ತು ಬಿಜೆಪಿ 17ರಲ್ಲಿ, ಓವೈಸಿಯ ಎಂಐಎಂ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದಾರೆ. ಎಂ. ಬಿ. ಪಾಟೀಲರಿಗೆ ಉತ್ತರದಾಯಿತ್ವವಿಲ್ಲವೇ? ಈ ಸೋಲಿಗೆ ಸ್ಥಳೀಯ ಕಾರ್ಯಕರ್ತರೊಂದಿಗೆ ಆತ್ಮವಿಮರ್ಶೆ ಮಾಡಿಕೊಂಡರೆ? ಆ ತರಹದ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ
ಶಾಸಕ ಬಸವರಾಜ ಪಾಟೀಲ್ ಯತ್ನಾಳ ದ್ವೇಷದ ಬೆಂಕಿಯುಗುಳುತ್ತಲೇ ಬಿಜೆಪಿಗೆ ಗೆಲುವು ತಂದುಕೊಟ್ಟರು.ಇವರ ವಿರುದ್ಧ ಯಾವುದೇ ಕಾರ್ಯತಂತ್ರ ರೂಪಿಸಲು ವಿಫಲರಾದ ಎಂ. ಬಿ. ಪಾಟೀಲರು ವ್ಯರ್ಥ ಕಾಲಹರಣ ಮಾಡಿದರು. ಅಥವಾ ಇವರಿಗೆ ಇಚ್ಚಾಶಕ್ತಿಯೇ ಇಲ್ಲ. ಇನ್ನೂ ವಿಜಯಪುರದ ರಾಜಕಾರಣದ ಆಳವನ್ನು ಬಗೆದರೆ ಪಕ್ಷಾತೀತವಾಗಿ ಒಳ ಒಪ್ಪಂದಗಳು ನಡೆದಿರುವ ಗುಸುಗುಸು ದಟ್ಟವಾಗಿದೆ.
ಜೊತೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾರೂ ಗಂಭೀರವಾಗಿರಲಿಲ್ಲ. ಇದೂ ಸಹ ಏಟು ಕೊಟ್ಟಿದೆ. ಮುಸ್ಲಿಮರ ನಂಬಿಕೆಯನ್ವು ಸಹ ಕಳೆದುಕೊಂಡಿದೆ. ಮತ್ತು ಪದೇ ಪದೇ ಜೆಡಿಎಸ್, ಎಐಎಂ ಪಕ್ಷಗಳು ಮತ ವಿಭಜನೆ ಮಾಡಿವೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಜಾತಂತ್ರದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕುಗಳಿವೆ. ಮತ್ತು ಇದು ಈ ಕಾಲದ ವಾಸ್ತವ. ಇದನ್ನು ಮೀರುವ ತಂತ್ರಗಾರಿಕೆ, ಬೂತ್ ಹಂತದಲ್ಲಿ ಸಂಘಟನೆ ಮಾಡದ ಹೊರತು ಅನ್ಯ ಮಾರ್ಗವಿಲ್ಲ. ಆದರೆ ಕಾಂಗ್ರೆಸ್ ನಾಯಕರಲ್ಲಿ ಈ ತುರ್ತು ಕಂಡು ಬರುತ್ತಿಲ್ಲ
ಇದು ಕಾಂಗ್ರೆಸ್ ನ ದುರಂತ.ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂತಾದ ಮುಖಂಡರು ಈ ಆರೆಸ್ಸೆಸ್, ಬಿಜೆಪಿ ವಿರುದ್ಧ ಪ್ರಾಮಾಣಿಕವಾಗಿ, ಬದ್ಧತೆಯಿಂದ ಮಾತನಾಡುತ್ತಿದ್ದಾರೆ. ಆದರೆ ಎಂ. ಬಿ. ಪಾಟೀಲರಂತಹ ಸ್ಥಳೀಯ ಮುಖಂಡರು ಬಿಜೆಪಿ ಜೊತೆಗೆ ಒಳ ಒಪ್ಪಂದದ ಆರೋಪಕ್ಕೆ ಒಳಗಾಗುತ್ತಾರೆ. ಉತ್ತರ ಕನ್ನಡದ ಕಡೆ ಆರ್. ವಿ. ದೇಶಪಾಂಡೆ ವಿರುದ್ಧವೂ ಇದೇ ಆರೋಪ ಕೇಳಿ ಬರುತ್ತದೆ. ಇದು ನಿಜವಾಗಿದ್ದರೆ ‘ದ್ವೇಷ ಬಿಟ್ಟು ದೇಶ ಕಟ್ಟುವ’ ಭಾರತ ಜೋಡೋ’ದಂತಹ ಬಹು ಮುಖ್ಯ ಪಾದಯಾತ್ರೆಯ ತಾತ್ವಿಕತೆಗೆ ಗಂಭೀರ ಅಪಚಾರ ಎಸಗಿದಂತಾಗುತ್ತದೆ.
ಈ ಆರೋಪಗಳು ಸಿದ್ದರಾಮಯ್ಯನವರ ಗಮನಕ್ಕೆ ಬಂದಿಲ್ಲವೇ? ಮತ್ತು ನಿರಾಶಾದಾಯಕ ಚುನಾವಣಾ ಫಲಿತಾಂಶದ ನಂತರವೂ ಕಾಂಗ್ರೆಸ್ ನಲ್ಲಿ ಯಾವುದೇ ಆತಂಕ ಕಂಡು ಬರುತ್ತಿಲ್ಲ. ಬಹುತೇಕರು ಪಾದಯಾತ್ರೆ ಮುಗಿತಲ್ಲ ಎಂತಲೋ ಏನೋ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಎಂ. ಬಿ. ಪಾಟೀಲರು ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು ಎಂದು ಹೇಳಿದರೆ ವಿಜಯಪುರ ಕಾಂಗ್ರೆಸ್ ಕಾರ್ಯಕರ್ತರು ವ್ಯಂಗ್ಯದಲ್ಲಿ ನಗುತ್ತಾರೆ. ಅವರಾಗಲೇ ನೀವುಂಟು, ನಿಮ್ಮ ಪಾಟೀಲರುಂಟು ಎನ್ನುವ ನಿರಾಸೆಯಲ್ಲಿದ್ದಾರೆ.
ರಾಜ್ಯದ ನೇತಾರರು 2023ರ ಚುನಾವಣೆಯಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ನಗರಪಾಲಿಕೆ ಚುನಾವಣೆಯಲ್ಲಿಯೇ ದಯನೀಯವಾಗಿ ಸೋತ ಪಕ್ಷದಿಂದ ರಾಜ್ಯ ಚುನಾವಣೆಯಲ್ಲಿ ಯಾವ ರೀತಿ ಫಲಿತಾಂಶ ನಿರೀಕ್ಷಿಸಬಹುದು?
ಖರ್ಗೇಜಿ ಮುಂದೆ ಕಠಿಣ ಸವಾಲುಗಳಿವೆ.
- ಶ್ರೀಪಾದ್ ಭಟ್