ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳು ಭವಿಷ್ಯದ ಭಾರತಕ್ಕೆ ಸ್ಪಷ್ಟ ಸಂದೇಶವೊಂದನ್ನು ನೀಡಿದೆ. ಭಾರತ ಬಲಪಂಥೀಯ ರಾಜಕಾರಣದತ್ತ-ಕಾರ್ಪೋರೇಟ್ ನಿಯಂತ್ರಿತ ಮಾರುಕಟ್ಟೆಯತ್ತ ಸ್ಪಷ್ಟವಾಗಿ ಹೊರಳುತ್ತಿರುವ ಈ ಸಂದೇಶದ ನಡುವೆಯೇ, ಕೋಮುವಾದಿ ಫ್ಯಾಸಿಸ್ಟ್ ರಾಜಕಾರಣದ ಮೂಲ ಧ್ಯೇಯವಾಗಿರುವ ಮುಸ್ಲಿಂ ದ್ವೇಷ ಎಲ್ಲ ಜನಸಮುದಾಯಗಳ ನಡುವೆಯೂ ಒಂದು ಸ್ಪಷ್ಟ ನೆಲೆಯನ್ನು ಗಳಿಸಿಕೊಂಡಿದೆ. ಈ ಬೆಳವಣಿಗೆಯ ಸತ್ಯಾಸತ್ಯತೆಗಳನ್ನು ಸಮರ್ಪಕವಾಗಿ ಗ್ರಹಿಸಲು ಆಳವಾದ ಅಧ್ಯಯನವೇ ಅಗತ್ಯ ಎನಿಸುತ್ತದೆ. ಕಾರ್ಪೋರೇಟ್ ಮಾರುಕಟ್ಟೆ ನಿಯಂತ್ರಿತ ರಾಜಕಾರಣದಲ್ಲಿ ಮೇಲುಗೈ ಸಾಧಿಸಿರುವ ಬಿಜೆಪಿ ಸಹಜವಾಗಿಯೇ ತನ್ನ ಹಿಂದುತ್ವ ರಾಜಕಾರಣದ ಪೋಷಣೆಗೆ ಜಾತಿ ವಿಭಜನೆಗಳನ್ನು, ಅಲ್ಪಸಂಖ್ಯಾತರಲ್ಲಿ ಮಡುಗಟ್ಟಿರುವ ಆತಂಕಗಳನ್ನು ಮತ್ತು ಜಾತಿ ರಾಜಕಾರಣದ ಒಳಬಿರುಕುಗಳನ್ನು ಬಳಸಿಕೊಂಡಿರುವುದು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ.
ಕೋವಿದ್ ನಿರ್ವಹಣೆ, ಗಂಗೆಯಲ್ಲಿ ತೇಲಿದ ಶವಗಳು, ನೂರಾರು ಕರೋನಾ ಪೀಡಿತ ಸಾವುಗಳು, ಅತಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು, ದಲಿತರ ಮೇಲಿನ ಅವ್ಯಾಹತ ದೌರ್ಜನ್ಯ, ಏರುತ್ತಲೇ ಇರುವ ನಿರುದ್ಯೋಗ ಮತ್ತು ಬೆಲೆ ಏರಿಕೆ, ಹೆಚ್ಚಾಗುತ್ತಿರುವ ಹಸಿವಿನ ಪ್ರಮಾಣ, ಯೋಗಿ ಆಡಳಿತದ ಈ ಎಲ್ಲ ದುರಾಡಳಿತದ ಹೊರತಾಗಿಯೂ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿರುವುದು ರಾಜಕೀಯ ವಿಶ್ಲೇಷಕರನ್ನೂ ತಬ್ಬಿಬ್ಬುಗೊಳಿಸಿದೆ. ಈ ಬಾರಿ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಮಹದಾಕಾಂಕ್ಷೆ ಕಾಂಗ್ರೆಸ್, ಸಮಾಜವಾದಿಪಕ್ಷ ಮತ್ತು ಬಿಎಸ್‌ಪಿ ಮೂರೂ ಪಕ್ಷಗಳಿಗೆ ಇದ್ದುದಂತೂ ಸತ್ಯ. ಆದರೆ ಇದು ಅಸಾಧ್ಯ ಎನ್ನುವುದೇನೂ ಗುಟ್ಟಾಗಿರಲಿಲ್ಲ. ಬಿಜೆಪಿಯ ಶೇಕಡಾವಾರು ಮತಗಳಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೂರೂ ಪಕ್ಷಗಳು ತಮ್ಮದೇ ಆದ ಕಾರ್ಯಸೂಚಿಗಳೊಂದಿಗೆ ಸ್ಪರ್ಧಿಸಿದ್ದವು.
ಆದರೆ ಈ ಮೂರೂ ಪಕ್ಷಗಳ ಕಾರ್ಯಸೂಚಿಗಳು ಜನತೆಯ ಮುಂದೆ ಒಂದು ಪರ್ಯಾಯ ಆಡಳಿತ ನೀತಿಯನ್ನು ಮಂಡಿಸಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಆಡಳಿತಾರೂಢ ಪಕ್ಷದ ಲೋಪದೋಷಗಳನ್ನು, ಕೊರತೆ-ನ್ಯೂನತೆಗಳನ್ನು, ತಪ್ಪುಗಳನ್ನು ಎತ್ತಿತೋರುವುದು ಚುನಾವಣಾ ರಾಜಕಾರಣದಲ್ಲಿ ಪರಿಣಾಮಕಾರಿಯಾಗಿ ಕಾಣಬಹುದಾದರೂ, ತಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ಹೇಳುವ ಪರ್ಯಾಯ ಆಡಳಿತ ನೀತಿಯನ್ನು ಮಂಡಿಸುವುದು ನಿರ್ಣಾಯಕವಾಗುತ್ತದೆ. ಯೋಗಿ ಆಡಳಿತದಲ್ಲಿ ಕಂಡುಬರುವ ಎಲ್ಲ ಲೋಪದೋಷಗಳನ್ನು ತುಲನೆ ಮಾಡಿ ನೋಡಿದಾಗ ಮೂರು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದು ಹಿಂದುತ್ವ ಕೋಮುರಾಜಕಾರಣ ಬಿತ್ತಿರುವ ಮುಸ್ಲಿಂ ದ್ವೇಷದ ಬೀಜಗಳು, ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆ ಕೇಂದ್ರಿತ ಆರ್ಥಿಕ ನೀತಿಗಳು ಮತ್ತು ಜಾತಿ ಸಮೀಕರಣಗಳನ್ನೂ ನುಂಗಿಹಾಕುವಂತಹ ಕೋಮು ಧೃವೀಕರಣ.
1991ರಲ್ಲಿ ಆರಂಭವಾದ ಜಾಗತೀಕರಣದ ಫಲಾನುಭವಿಗಳು ಇಂದು ನಾವು ಕಾಣುತ್ತಿರುವ ಮಧ್ಯಮ ವರ್ಗದ ಜನಸಮುದಾಯ. ಜಾತಿ ರೇಖೆಗಳನ್ನು ಮೀರಿದಂತೆ ಈ ಮಧ್ಯಮ ವರ್ಗ ತನ್ನ ಸುತ್ತಲೂ ಸೃಷ್ಟಿಸಿಕೊಂಡಿರುವ ಹಿತವಲಯವೇ ಮತದಾನದ ಸಂದರ್ಭದಲ್ಲಿ ನಿರ್ಣಾಯಕವಾಗುತ್ತದೆ. ಸಾಮಾಜಿಕ ನ್ಯಾಯ, ಸಮಾನತೆಯ ಆಶಯ ಮತ್ತು ಶೋಷಿತ ಜನಸಮುದಾಯಗಳ ನಿರ್ಗತಿಕತೆ ಇದಾವುದೂ ಈ ಹಿತವಲಯದ ವರ್ಗವನ್ನು ಬಾಧಿಸುವುದಿಲ್ಲ. ಹಾಗೆಯೇ ಕೃಷಿ ಕಾಯ್ದೆಯನ್ನೂ ಒಳಗೊಂಡತೆ, ನವ ಉದಾರವಾದಿ ಆರ್ಥಿಕ ನೀತಿಗಳನುಸಾರ ಜಾರಿಗೊಳಿಸಿರುವ ನೂತನ ಕಾಯ್ದೆಗಳು ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಮತ್ತು ಅವಕಾಶವಂಚಿತ ಜನಸಮುದಾಯಗಳಿಗೆ ಎಷ್ಟೇ ಮಾರಣಾಂತಿಕವಾಗಿದ್ದರೂ ಈ ಸಮಸ್ಯೆಗಳು ಹಿತವಲಯದ ಮಧ್ಯಮ ವರ್ಗವನ್ನು ಬಾಧಿಸುವುದಿಲ್ಲ.
ಈ ಜಾಗತೀಕರಣದ ಫಲಾನುಭವಿ ಸಮುದಾಯ ಸಮ ಸಮಾಜದ ಆಶಯಗಳನ್ನು ಹೊತ್ತ ಸಮಾಜವಾದಿ ನೆಲೆಗಳಿಗೆ ಹಿಂದಿರುಗಲೂ ಇಚ್ಚಿಸುವುದಿಲ್ಲ. ಈ ಸಮುದಾಯದ ನಡುವೆ ಭಾರತೀಯ ಸಮಾಜದಲ್ಲಿ ಬೇರೂರುತ್ತಿರುವ ಅಸಮಾನತೆಯ ವಾಸ್ತವಗಳನ್ನು ಮನದಟ್ಟು ಮಾಡುವ ಪ್ರಕ್ರಿಯೆಯಲ್ಲಿ ಎಡಪಕ್ಷಗಳನ್ನೂ ಸೇರಿದಂತೆ ಎಲ್ಲ ಪಕ್ಷಗಳೂ ಸೋತಿವೆ.
ಆದರೆ ಈ ವರ್ಗದ ಯುವ ಮನಸುಗಳಲ್ಲಿ ಕೋಮು ಭಾವನೆಗಳನ್ನು, ಮುಸ್ಲಿಂ ದ್ವೇಷವನ್ನು ಮತ್ತು ಹಿಂದೂ ರಾಷ್ಟ್ರದ ಉತ್ಕಟ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಿತ್ತುವಲ್ಲಿ ಬಿಜೆಪಿ ಮತ್ತು ಯೋಗಿ ಆಡಳಿತ ಯಶಸ್ವಿಯಾಗಿದೆ. ಹಾಗಾಗಿಯೇ ಅತ್ಯಾಚಾರದ ಕೇಂದ್ರಬಿಂದು ಹಥ್ರಾಸ್‌ನಲ್ಲಿ, ಹತ್ಯಾಕಾಂಡದ ಕೇಂದ್ರ ಬಿಂದು ಲಖೀಂಪುರದಲ್ಲಿ ಬಿಜೆಪಿ ದಲಿತ-ಹಿಂದುಳಿದ ವರ್ಗಗಳ ಜಾತಿ ಸಮೀಕರಣವನ್ನು ಮೀರಿ ಅತಿ ಹೆಚ್ಚಿನ ಮತ ಗಳಿಸುತ್ತದೆ.
ಹಿಂದೂ ರಾಷ್ಟ್ರದ ಪರಿಕಲ್ಪನೆ ಎಲ್ಲ ಜಾತಿ ಸಮೀಕರಣಗಳನ್ನೂ ನುಂಗಿಹಾಕುವ ಸಾಮರ್ಥ್ಯ ಹೊಂದಿರುವುದನ್ನು ಗುಜರಾತ್‌ನಲ್ಲಿ ಈಗಾಗಲೇ ಕಂಡಿರುವ ಸೆಕ್ಯುಲರ್ ಪಕ್ಷಗಳಿಗೆ ಉತ್ತರಪ್ರದೇಶ ಒಂದು ಪ್ರಯೋಗಶಾಲೆಯಾಗಿ ಕಾಣಬೇಕಿತ್ತಲ್ಲವೇ ? ಆದರೆ ಹಾಗೆ ಕಂಡಿಲ್ಲ. ದಲಿತ-ಮುಸ್ಲಿಂ ಮತಗಳು ಹೆಚ್ಚಾಗಿರುವ ಕ್ಷೇತ್ರಗಳಲ್ಲೂ ಬಿಜೆಪಿ ಅತಿ ಹೆಚ್ಚಿನ ಮತ ಗಳಿಸಿರುವುದು ಈ ಸವಾಲನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯನ್ನು ಪೋಷಿಸುವ ನಿಟ್ಟಿನಲ್ಲಿ ಯೋಗಿ ಆಡಳಿತ ದಿಟ್ಟ ಕ್ರಮಗಳನ್ನು ಕೈಗೊಂಡಿರುವುದು ಸ್ಪಷ್ಟ. ರಾಜ್ಯದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗವನ್ನೂ ನಿರ್ಲಕ್ಷಿಸಿ, ಮಾರುಕಟ್ಟೆ ಆರ್ಥಿಕತೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಿ, ಕಾರಿಡಾರ್‌ಗಳನ್ನು, ಮೆಟ್ರೋ ನಿಲ್ದಾಣಗಳನ್ನು, ಮೇಲ್ ಸೇತುವೆಗಳನ್ನು ನಿರ್ಮಿಸುವತ್ತ ಯೋಗಿ ಆಡಳಿತ ಸಾಕಷ್ಟು ಶ್ರಮಿಸಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಂಡುಬಂದ ರೈತ ಬಂಡಾಯವನ್ನೂ ಸಹ ಯೋಗಿ ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ.
ಏಕೆಂದರೆ ಕೋವಿದ್ ನಂತರದಲ್ಲಿ ಪ್ರತಿಯೊಂದು ಕುಟುಂಬಕ್ಕೂ 20 ಕಿಲೋ ದವಸವನ್ನು ನಿರಂತರವಾಗಿ ಒದಗಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳ ಮೂಲಕ ಜನರಿಗೆ ಪಾವತಿಯಾಗುವ ಎಲ್ಲ ಸವಲತ್ತುಗಳನ್ನೂ ಖಾತೆಗಳಿಗೆ ನೇರ ಪಾವತಿ ಮಾಡುವ ವ್ಯವಸ್ಥೆಯ ಮೂಲಕ ಜಾರಿಗೊಳಿಸಲಾಗುತ್ತಿದೆ. ನಿರುದ್ಯೋಗದ ಬವಣೆ ಎದುರಿಸುತ್ತಿರುವ ಕುಟುಂಬಗಳಿಗೆ ಈ ನೇರ ನಗದು ಪಾವತಿಯೇ ಸಂಕಷ್ಟ ಕಾಲದ ರಕ್ಷಣೆಯಾಗಿ ಕಂಡುಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಈ ಕಾರಣಗಳಿಂದಲೇ ಕೃಷಿ ಕಾಯ್ದೆಗಳ ವಿರುದ್ಧ ದಿಟ್ಟ ಹೋರಾಟ ಮಾಡಿದ ರೈತಾಪಿ ಕುಟುಂಬಗಳೂ ಈ ಚುನಾವಣೆಗಳಲ್ಲಿ ಯೋಗಿ ಆಡಳಿತಕ್ಕೆ ಸೈ ಎಂದಿರುವುದು ಸ್ಪಷ್ಟ.
ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಪರ್ಯಾಯ ಆರ್ಥಿಕ ನೀತಿಯನ್ನಾಗಲೀ, ಸಾಮಾಜಿಕ ನಿಲುಮೆಗಳನ್ನಾಗಲೀ ಅಥವಾ ರಾಜಕೀಯ ಪ್ರಣಾಳಿಕೆಯನ್ನಾಗಲೀ ಈವರೆಗೂ ಮಂಡಿಸಿಲ್ಲ. ಮೋದಿ-ಯೋಗಿ ವಿರೋಧಿ ಘೋಷಣೆಗಳನ್ನೇ ತನ್ನ ಬಂಡವಾಳವಾಗಿರಿಸಿಕೊಳ್ಳುವ ಮೂಲಕ ಸಂಘಪರಿವಾರದ ಹಿಂದುತ್ವದ ಆಶಯಗಳು, ಸಾಂಸ್ಕೃತಿಕ ದಾಳಿಗಳು ಮತ್ತು ಕಾರ್ಪೋರೇಟ್ ಉದ್ಯಮಿಗಳ ಮಾರುಕಟ್ಟೆ ಕೇಂದ್ರಿತ ಪರೋಕ್ಷ ರಾಜಕಾರಣವನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಸ್ಪಷ್ಟ.
ಸಂಘಪರಿವಾರದ ಹಿಂದುತ್ವ ರಾಜಕಾರಣದಲ್ಲಿ ಮೋದಿ-ಯೋಗಿ-ಶಾ ನಿಮಿತ್ತ ಮಾತ್ರ. ಪರಿವಾರದ ಕಾರ್ಯಸೂಚಿಗಳು ಅನುಷ್ಟಾನಗೊಳ್ಳುವುದು ಜನಸಾಮಾನ್ಯರ ನಡುವೆ, ಬಡತನದಿಂದ ಬಳಲಿದ ಕೇರಿಗಳಲ್ಲಿ, ನಿರುದ್ಯೋಗಕ್ಕೆ ಸಿಲುಕಿದ ಯುವ ಸಮುದಾಯಗಳ ನಡುವೆ, ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳಾ ಸಮುದಾಯಗಳ ನಡುವೆ. ಈ ಆಕ್ರಮಣಕಾರಿ ತಾತ್ವಿಕ ನೆಲೆಗಳಿಗೆ ಪರ್ಯಾಯ ಸೃಷ್ಟಿಸುವ ಬೌದ್ಧಿಕ ಸಾಮರ್ಥ್ಯವನ್ನಾಗಲೀ, ರಾಜಕೀಯ ನೈಪುಣ್ಯವನ್ನಾಗಲೀ ಇಂದಿನ ಕಾಂಗ್ರೆಸ್ ನಾಯಕತ್ವ ಹೊಂದಿಲ್ಲ. ಇದು ಉತ್ತರಪ್ರದೇಶ ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ.
ಹಿಂದುತ್ವ ರಾಜಕಾರಣ ಪ್ರಬಲವಾಗುತ್ತಿರುವ ಹೊತ್ತಿನಲ್ಲಿ ಅಂಬೇಡ್ಕರ್ ಚುನಾವಣೆಯ ಅಸ್ತçವಾಗುವುದಿಲ್ಲ ಆದರೆ ಅಂಬೇಡ್ಕರರ ಸೈದ್ಧಾಂತಿಕ ನೆಲೆಗಳು, ತಾತ್ವಿಕ ನಿಲುವುಗಳು ಮತ್ತು ಸಾಂವಿಧಾನಿಕ-ಪ್ರಜಾತಾಂತ್ರಿಕ ಆಶಯಗಳು ತಳಸಮುದಾಯಗಳನ್ನು ತಲುಪುತ್ತವೆ. ಈ ತಲುಪಿಸುವ ಪ್ರಕ್ರಿಯೆಯಲ್ಲಿ ಮಾಯಾವತಿಯವರ ಬಿಎಸ್‌ಪಿ ಸಂಪೂರ್ಣವಾಗಿ ಸೋತಿದೆ. ಒಂದು ಸ್ಪಷ್ಟ ಆರ್ಥಿಕ ನೀಲನಕ್ಷೆ ಇಲ್ಲದೆ, ಸಾಮಾಜಿಕ ಪ್ರಣಾಳಿಕೆ ಇಲ್ಲದೆ ಅಧಿಕಾರ ರಾಜಕಾರಣವನ್ನೇ ಕೇಂದ್ರೀಕರಿಸುವ ಬಿಎಸ್‌ಪಿಯ ಅವಕಾಶವಾದಿ ರಾಜಕಾರಣಕ್ಕೆ ಈ ಚುನಾವಣೆಗಳು ಸ್ಪಷ್ಟ ಉತ್ತರ ನೀಡಿವೆ.
ಜಾಗತೀಕರಣದ ಫಲಾನುಭವಿ ದಲಿತ ಸಮೂಹವನ್ನೇ ನಂಬಿಕೊಂಡಿರುವ ಪಕ್ಷವೊಂದು, ಇಂದಿಗೂ ಅವಕಾಶವಂಚಿತರಾಗಿರುವ ತಳಸಮುದಾಯಗಳ ಕುಂದುಕೊರತೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಅಂಬೇಡ್ಕರರನ್ನು ಸಾಂಕೇತಿಕವಾಗಿ ವೈಭವೀಕರಿಸುವುದಕ್ಕಿಂತಲೂ, ಅಂಬೇಡ್ಕರರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದು ಸ್ಪಷ್ಟ ಸಾಮಾಜಿಕ ನೀತಿಯನ್ನು ಬಿಎಸ್‌ಪಿ ಅನುಸರಿಸಬೇಕಿದೆ. ಪಕ್ಷದ ಈ ವೈಫಲ್ಯದಿಂದಲೇ ಶೇ 10ರಷ್ಟು ಮತಗಳನ್ನು ಕಳೆದುಕೊಳ್ಳುವಂತಾಗಿದೆ.
ಪರ್ಯಾಯ ರಾಜಕಾರಣವನ್ನು ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ, ಸಮಾಜವಾದಿ ಆರ್ಥಿಕ ನೆಲೆಯಲ್ಲಿ, ಸಮನ್ವಯ ಮತ್ತು ಸೌಹಾರ್ದತೆಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರೂಪಿಸದ ಹೊರತು, ಬಿಜೆಪಿ ಅನುಸರಿಸುತ್ತಿರುವ ಸಂಘ ಪ್ರಣೀತ ಹಿಂದುತ್ವವಾದಿ ರಾಜಕಾರಣವನ್ನು ಹಿಮ್ಮೆಟ್ಟಿಸಲಾಗುವುದಿಲ್ಲ. ಎಸ್‌ಪಿ, ಬಿಎಸ್‌ಪಿ ಮತ್ತಿತರ ಸೆಕ್ಯುಲರ್ ಎನಿಸಿಕೊಳ್ಳುವ ಪಕ್ಷಗಳು ಈ ನಿಟ್ಟನಿಲ್ಲಿ ಯೋಚಿಸಬೇಕಿದೆ. ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವೂ ಈ ದಿಕ್ಕಿನಲ್ಲಿ ಯೋಚಿಸಬೇಕಿದೆ. ಉತ್ತರಪ್ರದೇಶದ ಫಲಿತಾಂಶಗಳು ಇದನ್ನೇ ಕೂಗಿ ಹೇಳುತ್ತಿವೆ.