ದ ಪಾಲಿಟಿಕ್

ಇಂದು ಭಾಲ್ಕಿಯ ಗುರುಬಸವ ಪಟ್ಟದೇವರಿಗೆ ‘ಸಂಯಮ’ ಪ್ರಶಸ್ತಿ ಪ್ರದಾನ

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಮದ್ಯ ಮತ್ತು ಮಾದಕ ವಸ್ತುಗಳಿಂದ ಇಂದು ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇವುಗಳ ಬಳಿಕೆ ಇಂದು ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ವಿಶ್ವದ ಅಂಕಿ ಅಂಶಗಳ ಪ್ರಕಾರ 15 ರಿಂದ 25 ವರ್ಷ ವಯಸ್ಸಿನ ಶೇ. 30 – 40 ಪ್ರತಿಶತ ಯುವಕರು ಇದಕ್ಕೆ ಬಲಿಯಾಗಿದ್ದಾರೆ. ಬಾಳಿ ಬದುಕಬೇಕಾದ ಯುವಜನತೆ ಹೀಗೆ ಚಟಕ್ಕೆ ದಾಸರಾಗಿ ತಮ್ಮ ಅಮೂಲ್ಯ ಬದುಕು ಹಾಳು ಮಾಡುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

ಒಂದು ರೀತಿಯಲ್ಲಿ ಇಂದು ಯಾವುದೇ ಸರ್ಕಾರ ಇರಲಿ ಅದು ನಡೆಯುತ್ತಿರುವುದೇ ಮದ್ಯ ಮಾರಾಟದಿಂದ. ಅದರ ಖಜಾನೆ ತುಂಬುವುದು ಮದ್ಯ ಮಾರಾಟದಿಂದ ಬರುವ ಹಣದಿಂದ. ಕೇಳಿದವರಿಗೂ, ಕೆಳದವರಿಗೂ ‘ಮದ್ಯ ಮಾರಾಟಕ್ಕೆ’ ಲೈಸೆನ್ಸ್ ನೀಡಿದೆ. ಈ ಮೂಲಕ ಪರೋಕ್ಷವಾಗಿ ಮದ್ಯ ಮಾರಾಟಕ್ಕೆ, ಮದ್ಯ ಸೇವನೆಗೆ ಸರ್ಕಾರವೇ ಪ್ರೋತ್ಸಾಹಿಸುತ್ತಿದೆ. ಮತ್ತೊಂದೆಡೆ ಮದ್ಯ – ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ‘ರಾಜ್ಯ ಮದ್ಯಪಾನ ಸಂಯಮ ಮಂಡಳಿ’ ಸ್ಥಾಪಿಸಿದೆ. ಮಂಡಳಿಯ ಅಧ್ಯಕ್ಷ ಹಾಗೂ ಅದರ ಅಧಿಕಾರಿಗಳು ಕಾಟಾಚಾರಕ್ಕೆ ಆಗಾಗ್ಗೆ ಅಲ್ಲಲ್ಲಿ ಮದ್ಯಪಾನದ ವಿರುದ್ಧ ಇತರರ ಜೊತೆಗೂಡಿ ಜಾಗೃತಿಯನ್ನು ಮೂಡಿಸಲು ಕಾರ್ಯಕ್ರಮ ನಡೆಸುತ್ತಾರೆ. ಜತೆಗೆ, ‘ವ್ಯಸನ ಮುಕ್ತ'(ಮದ್ಯ – ಮಾದಕ ವಸ್ತು) ಸಮಾಜಕ್ಕಾಗಿ ದುಡಿಯುತ್ತಿರುವ ಮಹನೀಯರನ್ನು ಗುರುತಿಸಿ ಪ್ರತಿವರ್ಷ ‘ಸಂಯಮ’ ಹೆಸರಿನ ಪ್ರಶಸ್ತಿಯನ್ನು ನೀಡುತ್ತಿದೆ.

ಈ ಹಿಂದೆ ಲಿಂಗೈಕ್ಯ ಇಳಕಲ್ ಮಹಾಂತ ಸ್ವಾಮೀಜಿಗೂ ಈ ಪ್ರಶಸ್ತಿ ನೀಡಿತ್ತು. ಈಗ (2021) ಭಾಲ್ಕಿಯ ಪೂಜ್ಯ ಶ್ರೀ ಗುರುಬಸವ ಪಟ್ಟದೇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. COVID ಕಾರಣದಿಂದ ಪ್ರಶಸ್ತಿ ಪ್ರಧಾನ ಮಾಡಿರಲಿಲ್ಲ. ಇಂದು ಇಳಕಲ್ ಮಠದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ನೀಡುತ್ತಿದೆ. ಇದು ಬಸವ ಭಕ್ತರಿಗೆ, ಶ್ರೀ ಮಠದ ಹಿತೈಷಿಗಳಿಗೆ, ಮಠದ ಹಳೆಯ ವಿದ್ಯಾರ್ಥಿಗಳಿಗೆ ಹರ್ಷ ತಂದಿದೆ. 

ಇದನ್ನೂ ಓದಿ : ‘ಜಾಗತಿಕ ಲಿಂಗಾಯತ ಮಹಾಸಭಾ’ ಸಮಸ್ತ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆ?

ಸರ್ಕಾರಕ್ಕಿಂತಲೂ ಧಾರ್ಮಿಕ ವ್ಯಕ್ತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮುತುವರ್ಜಿಯಿಂದ ಮದ್ಯಪಾನದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಚಟಕ್ಕೆ ದಾಸರಾದ ಯುವಕರನ್ನು ಚಟದಿಂದ ಅವರನ್ನು ಹೊರಗೆ ತರುವುದು ನಿಜವಾದ ಬಸವ ಕಾರ್ಯವಾಗಿದೆ. ಈ ಕಾರ್ಯ ಗುರುಬಸವ ಪಟ್ಟದೇವರು ಒಂದು ತಪಸ್ಸಿನಂತೆ ಮಾಡುತ್ತಿರುವುದು ಶ್ಲಾಘನೀಯ. ಅವರ ಘನ ಸೇವೆಯನ್ನು ಗುರುತಿಸಿ ‘ರಾಜ್ಯ ಮದ್ಯಪಾನ ಸಂಯಮ ಮಂಡಳಿ’ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಗುರುಬಸವ ಪಟ್ಟದೇವರು ಓದಲೆಂದು ಮಠಕ್ಕೆ ಕಾಲಿಟ್ಟಿದಾಗಿನಿಂದಲೂ ಸೇವೆ ಹಾಗೂ ಕಾಯಕವೇ ತನ್ನ ಮಂತ್ರ, ಸಿದ್ಧಾಂತವಾಗಿಸಿಕೊಂಡು ದಣಿವರಿಯದೆ ದುಡಿಯುತ್ತಿರುವ ಜೀವ‌. ಬಸವಣ್ಣ, ಚನ್ನಬಸವ ಪಟ್ಟದೇವರನ್ನ ತನ್ನ ಬೆನ್ನ ಹಿಂದಿನ ಬೆಳಕಾಗಿಸಿಕೊಂಡು, ತಮ್ಮ ಗುರುಗಳಾದ ‘ಅಕ್ಷರಸಂತ’ ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ಪಾದರಸದಂತೆ ಓಡಾಡಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ತನ್ನ ಕಾಯಕ – ಸೇವೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. 

ಕೈಯಲ್ಲಿ ‘ಚನ್ನ ಜೋಳಿಗೆ’ ಹಿಡಿದು ಹಳ್ಳಿಗಳಿಗೆ ಪ್ರವೇಶಿಸಿ ಚಟಕ್ಕೆ ದಾಸರಾದ ಜನರ ದುಶ್ಚಟಗಳನ್ನು ತನ್ನ ಜೋಳಿಗೆಯಲ್ಲಿ ಹಾಕಿಕೊಂಡು, ಅಂಥವರಿಗೆ ಮದ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವರನ್ನು ಚಟದಿಂದ ಮುಕ್ತರಾಗಿಸಿ, ಅವರಿಗೆ ‘ಲಿಂಗ ದೀಕ್ಷೆ’ ನೀಡಿ ಅವರ ಬದುಕಿಗೆ ಬೆಳಕಾಗುತ್ತಿದ್ದಾರೆ. ಇದು ನಿಜಕ್ಕೂ ಮಹಾನ್ ಕಾರ್ಯ. ಯಾವ ವಿಘ್ನವೂ ಇಲ್ಲದೆ ಈ ಸೇವೆ ನಿರಂತರವಾಗಿ ಸಾಗಲೆಂದು ಅನೇಕರು ಹಾರೈಸುತ್ತಿದ್ದಾರೆ.  

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!