ದ ಪಾಲಿಟಿಕ್

ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿಲ್ಲವೆಂದು ವೈದ್ಯಕೀಯ ವರದಿ ಸ್ಪಷ್ಟನೆ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಇನ್ನೂ ಎಫ್ಎ‌ಸ್‌ಎಲ್‌ ವರದಿಯೇ ಬಂದಿಲ್ಲ. ಆದರೂ ಕೆಲ ಮಾಧ್ಯಮಗಳು ಎಫ್ಐಆರ್ ದಾಖಲಿಸಿದ ಸಂತ್ರಸ್ತ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿಲ್ಲವೆಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ ಎಂದು ಗುಲ್ಲೆಬ್ಬಿಸಿವೆ. ಎರಡುವರೆ ತಿಂಗಳ ಹಿಂದೆ ಚಿತ್ರದುರ್ಗದ ವೈದ್ಯಾಧಿಕಾರಿ ತಮ್ಮ ‘ಪ್ರೈಮರಿ ರೀಪೋರ್ಟ್’ ಸಲ್ಲಿಸಿದ್ದನ್ನು ಈಗ ಎತ್ತಿಕೊಂಡು ಕೆಲ ಮಾಧ್ಯಮಗಳು ಅರ್ಧಂಬರ್ಧ ಸುದ್ದಿ ಮಾಡುತ್ತಿವೆ. 

ಇದು ಮಾಧ್ಯಮಗಳು ಬಲ್ಯಾಢರ ಪರ ಹೇಗೆಲ್ಲಾ ಕೆಲಸ ಮಾಡುತ್ತವೆ ಎನ್ನುವುದು ಎತ್ತಿ ತೋರಿಸುತ್ತಿದೆ. ಸ್ವತಃ ಚಿತ್ರದುರ್ಗದ ವೈದ್ಯಾಧಿಕಾರಿಯೇ ‘ಎಫ್ಎ‌ಸ್‌ಎಲ್‌ ವರದಿ ಬಂದ ಮೇಲೆಯೇ ನಿಖರವಾದ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಅವರ ಪ್ರಾಥಮಿಕ ವರದಿಯಲ್ಲೇ ಬಹಳ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇದನ್ನು ಕೆಲ ಮಾಧ್ಯಮಗಳಿಗೆ ಕಣ್ಣೆತ್ತಿ ನೋಡಲು ಸಹ ಪುರುಸೊತ್ತಿಲ್ಲ. 

‘ಬೇಲ್ ಸಿಗದೇ ಒದ್ದಾಡುತ್ತಿರುವ ಸ್ವಾಮೀಜಿಯನ್ನು ಉಳಿಸಲು ‌ಹಾಗೂ ಪ್ರಸಕ್ತ ಅವರನ್ನು ಬೇಲ್ ಮೇಲೆ ಜೈಲಿನಿಂದ ಹೊರಗೆ ತರಲು ದೊಡ್ಡ ದೊಡ್ಡ ಶಕ್ತಿಗಳು ಅನೇಕಾನೇಕ ಬಗೆಯಲ್ಲಿ ಯತ್ನಿಸುತ್ತಿವೆ. ಹಾಗಾಗಿ ಉದ್ದೇಶ ಪೂರ್ವಕವಾಗಿ ಸಮಾಜದಲ್ಲಿ ಇಂತಹ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ’ ಎಂದು ಜನರು ಮಾತನಾಡುತ್ತಿದ್ದಾರೆ. ಜನರ ಮಾತಿನಲ್ಲಿ ಉತ್ಪ್ರೇಕ್ಷೆಯನಿಲ್ಲ. ಹಾಗೆಯೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಎಲ್ಲಾ ಸುದ್ದಿಗಳು ನಿಜವೂ ಅಲ್ಲ. ಅದರಲ್ಲಿ ಮಸಾಲೆ ಹಚ್ಚಿದ ಕೆಲ ಸುದ್ದಿಗಳು ಇವೆ. 

ಕೆಲ ಬೆಳವಣಿಗೆಗಳಿಂದ ಈಗ ಕೆಲವೊಂದಿಷ್ಟು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಒಂದು, ಪೋಕ್ಸೋ ಪ್ರಕರಣದಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳ ಪ್ರಾಥಮಿಕ ವರದಿಗೆ ಮಾನ್ಯತೆ ಇದೆಯೋ ಅಥವಾ ಇಲ್ಲವೋ ಎಂಬುದು. ಇದು ಕಾನೂನು ತಜ್ಞರ ಚರ್ಚಾರ್ಹ ವಿಷಯವಾಗಿದೆ. ಕೇವಲ ಕನ್ಯಾಪೊರೆ ಹರಿದಿಲ್ಲ, ಗುಪ್ತಾಂಗದಲ್ಲಿ ಯಾವುದೇ ಗಾಯವಿಲ್ಲ ಎನ್ನುವುದನ್ನು ಆಧರಿಸಿ ಅತ್ಯಾಚಾರ ಆಗಿಲ್ಲ ಎಂದು ತೀರ್ಮಾನಿಸಲು ಆಗದು. ಅಪೂರ್ಣ ತೂರಿಕೆಯಿಂದಾಗಿಯೂ ಕನ್ಯಾಪೊರೆ ಹರಿದಿರುವುದಿಲ್ಲ. ಜತೆಗೆ,ಸುಪ್ರೀಂ ಕೋರ್ಟ್ ಕೆಲ ಪೋಕ್ಸೋ ಪ್ರಕರಣದಲ್ಲಿ ‘ವೈದ್ಯಕೀಯ ವರದಿಯೇ ಅಂತಿಮ ಏನಲ್ಲ’ ಜತೆಗೆ ‘ಅದು ಕಡ್ಡಾಯವೂ ಅಲ್ಲ’ ಎಂದು ಹೇಳಿದೆ. ಹಾಗೆಯೇ, ‘ಕನ್ಯಾಪೊರೆ ಹರಿದಿಲ್ಲ’ [Intact hymen] ಎಂದ ಮಾತ್ರಕ್ಕೆ ಅದು ಅತ್ಯಾಚಾರ ಆಗಿಯೇ ಇಲ್ಲವೆಂದು ಹೇಳಲಾಗದೆಂದು ಅನೇಕ ತಜ್ಞರು, ವೈದ್ಯರು ಹಲವಾರು ಸನ್ನಿವೇಶಗಳಲ್ಲಿ ಹೇಳಿದ್ದಾರೆ. ಹಾಗೆಯೇ ನ್ಯಾಯಾಲಯಗಳೂ ತೀರ್ಮಾನ ಕೊಟ್ಟಿವೆ.

www.thepolitic.in

ಇನ್ನೊಂದು, ಈ ಪ್ರಕರಣದಲ್ಲಿ ಸ್ಥಳೀಯ ವೈದ್ಯರು ಎರಡುವರೇ ತಿಂಗಳ ಹಿಂದೆ ನೀಡಿರುವ ವರದಿ ನಂಬಲರ್ಹವಾಗಿದೆಯೇ ಎಂಬುವುದು. ಈ ಹಿಂದೆ ಇದೇ ಸ್ಥಳೀಯ ವೈದ್ಯರುಗಳು,’ಸ್ವಾಮೀಜಿಗಳಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ’ ಎಂದು ಹೇಳಿ ಘನ ನ್ಯಾಯಾಲಯದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಹಾಗಾಗಿ ಇವರು ನೀಡುವ ವೈದ್ಯಕೀಯ ವರದಿ ನಿಷ್ಪಕ್ಷಪಾತವಾಗಿಯೇ ಇರುತ್ತದೆ ಎಂದು ಹೇಗೆ ನಂಬುವುದು? ಅತ್ಯಾಚಾರದ ವ್ಯಾಖ್ಯಾನವೂ ಈಗ ಬದಲಾಗಿದೆ. ಒಬ್ಬ ಮಹಿಳೆಯ ಕನ್ಯಾಪೊರೆ ಹರಿದ ಮಾತ್ರಕ್ಕೆ ಅವಳು ಶೀಲವಂತಳಲ್ಲ ಎನ್ನುವುದು ಎಷ್ಟು ಬಾಲಿಶವಾಗಿದೆಯೋ, ಸಂತ್ರಸ್ತ ಮಕ್ಕಳ ಕನ್ಯಾಪೊರೆ ಹರಿದಿಲ್ಲ, ಹಾಗಾಗಿ ಅವರ ಮೇಲೆ ಲೈಂಗಿಕ ಅತ್ಯಾಚಾರವಾಗಲಿ ಅಥವಾ ಲೈಂಗಿಕ ದೌರ್ಜನ್ಯವಾಗಲಿ ನಡದೆಯಿಲ್ಲ ಎಂದು ಸುದ್ದಿ ತೇಲಿ ಬಿಡುವುದು ಸಹ ಅಷ್ಟೇ ಕ್ರೂರವಾಗಿದೆ. 

ಮತ್ತೊಂದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಇರುವುದು ಕೇವಲ ಬಲಾಢ್ಯರಿಗಾಗಿಯೇ ಎಂಬುದು. ಈ ಪ್ರಕರಣದ ಆರಂಭದಿಂದಲೂ ಸರ್ಕಾರ ಮತ್ತು ಅದರ ಇಡೀ ಯಂತ್ರಾಂಗ ಬಲಾಢ್ಯ ಆರೋಪಿತ ಸ್ವಾಮೀಜಿಯನ್ನ ಉಳಿಸಲು ಶ್ರಮಿಸುತ್ತಿರುವ ಸಂಗತಿ ಗುಟ್ಟೇನಿಲ್ಲ. ಸರ್ಕಾರದ ಸಾಲುಸಾಲು ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಒಳಗೊಂಡಂತೆ ಎಫ್ಐಆರ್ ದಾಖಲಾದ ಮೇಲೆ ಮುರುಘಾ ಸ್ವಾಮೀಜಿಯ ಪರವಾಗಿ ಬ್ಯಾಟಿಂಗ್ ಬೀಸಿದ್ದು ಈ ನೆಲದ ಕಾನೂನಿನ ಅಣಕ. ಅವರ ಮಾತುಗಳಿಂದ ಸಂತ್ರಸ್ತ ಮಕ್ಕಳ ಹಾಗೂ ಅವರ ಕುಟುಂಬಸ್ಥರ ಮೇಲೆ ಎಂತಹ ಪರಿಣಾಮ ಬೀರಿರಬಹುದೆಂದು ಊಹಿಸಲು ಕಷ್ಟ. ಆ ಸಂದರ್ಭದಲ್ಲಿ ಈ ವ್ಯವಸ್ಥೆಯ ಮೇಲೆ ಅವರಲ್ಲಿ ಎಂತಹ ರೇಜಿಗೆ ಹುಟ್ಟಿಸಿರಬಹುದು. ಪ್ರಕರಣದ ದಿಕ್ಕು ತಪ್ಪಿಸಲು ಏನೇನು ಬೇಕು ಅದನ್ನು ಸಾಧ್ಯವಾದಷ್ಟು ಮಾಡಿದ್ದಾರೆ. ಸಂತ್ರಸ್ತ ಮಕ್ಕಳಿಗೆ ಭೇಟಿ ಆಗಿ ‘ನಿಮಗೆ ನ್ಯಾಯ ಕೋಡಿಸಲು ನಿಮ್ಮೊಂದಿಗೆ ಸರ್ಕಾರವಿದೆ. ನೀವು ಧೈರ್ಯದಿಂದಿರಿ’ ಎಂದು ಜನತಂತ್ರದ ವ್ಯವಸ್ಥೆಯಲ್ಲಿ ಹೇಳದ ಒಂದು ಸರ್ಕಾರ ಮಕ್ಕಳ ಪಾಲಿಗೆ ಇದ್ದು ಸತ್ತಂತೆ.  

ಪ್ರತಿಕ್ರಿಯೆಗಳು 

ಇದೊಂದು ಅಂತಃಕರಣದ ವಿಷಯವೂ ಹೌದು, ಮಕ್ಕಳ ವಿಷಯವೂ ಹೌದು. ಸಂತ್ರಸ್ತ ಬಡಮಕ್ಕಳು ನ್ಯಾಯ ಕೇಳುತ್ತಿದ್ದಾಗ, ನಿಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ; ಶೀಲವೇ ಹಾಳಾಗಿಲ್ಲವೆಂದು ಮಾಧ್ಯಮಗಳಲ್ಲಿ ಬಿಂಬಿಸಿದರೆ, ಮಕ್ಕಳ ಮೇಲೆ, ಅವರ ಮಾನಸಿಕತೆಯ ಮೇಲೆ ಯಾವ ಪರಿಣಾಮ ಬಿರಬಹುದು. ಮೂರು ತಿಂಗಳ ಹಿಂದಿನ ವರದಿಯನ್ನು ಆಧರಿಸಿ ಈಗ ಸುದ್ದಿ ಮಾಡುತ್ತಿರುವುದೇಕೆಂದು ನಮಗೆ ಅರ್ಥವಾಗುತ್ತಿಲ್ಲ. ಇಂತಹ ಬೆಳವಣಿಗೆಗಳಿಂದ ಸಮಾಜದಲ್ಲಿ ಗೊಂದಲ ಏರ್ಪಡುತ್ತದೆ. ಜತೆಗೆ ತಪ್ಪು ಸಂದೇಶವೂ ರವಾನೆಯಾಗುತ್ತದೆ. ಹೀಗಾಗದಂತೆ ಮಾಧ್ಯಮಗಳು ಮತ್ತು ಸಮಾಜ ನೋಡಿಕೊಳ್ಳಬೇಕು. ಮಾಧ್ಯಮಗಳು ಅನುಭೂತಿಯಿಂದ ವರದಿ ಮಾಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ. 

– ಎಂ.ಎಲ್. ಪರಶುರಾಂ, ಒಡನಾಡಿ ಸಂಸ್ಥೆ ನಿರ್ದೇಶಕ

ಪ್ರಕರಣಕ್ಕೆ ಸಂಬಂಧಿಸಿದಂತೆ ‌ಎಫ್ಎ‌ಸ್‌ಎಲ್‌ ವರದಿ ಹುಬ್ಬಳ್ಳಿಯಿಂದ ಇನ್ನೂ ಬಂದಿಲ್ಲ. ವೈದ್ಯಾಧಿಕಾರಿಯವರೆ ‘ಎಫ್ಎ‌ಸ್‌ಎಲ್‌ ವರದಿ ಬಂದ ಮೇಲೆ ನಿಖರವಾದ ಅಂತಿಮ ವರದಿ ನ್ಯಾಯಾಲಕ್ಕೆ ಸಲ್ಲಿಸುತ್ತೆವೆ’ ಎಂದು ಅವರ ಪ್ರಾಥಮಿಕ ವರದಿಯಲ್ಲೇ ಬಹಳ ಸ್ಪಷ್ಟವಾಗಿ ದಾಖಲಿಸಿದ್ದಾರೆ. ವಸ್ತುಸ್ಥಿತಿ ಹೀಗಿದ್ದರೂ ಸ್ಥಳೀಯ ವೈದ್ಯರ ಪ್ರೈಮರಿ ವರದಿ ಆಧರಿಸಿ, ಕೆಲ ಮಾಧ್ಯಮಗಳು ಇಂದು ವರದಿ ಮಾಡಿವೆ. ಇದು ಹಳೆಯ ವರದಿಯ ಹೊಸ ಸುದ್ದಿ. ಇದು ಈಗೇಕೆ ಸುದ್ದಿ ಆಗಿದೆ ಎನ್ನುವುದು ಸುದ್ದಿ ಮಾಡಿದ ಮಾಧ್ಯಮದವರಿಗೆ ನೀವು ಹೇಳಬೇಕು. 

– ಶ್ರೀ ಶ್ರೀನಿವಾಸ ಡಿಸಿ, ಮಕ್ಕಳ ಪರ ವಕೀಲರು

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!