ಇಡೀ ಜಗತ್ತಿಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರಿದ, ಕ್ರಾಂತಿ ಭೂಮಿ ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಮಾರ್ಚ್ ನಾಲ್ಕು ಮತ್ತು ಐದರಂದು ಎರಡು ದಿನ ‘ಲಿಂಗಾಯತ ರಾಷ್ಟ್ರೀಯ ಪ್ರಥಮ ಅಧಿವೇಶನ’ ನಡೆದು, ನಿನ್ನೇ (ರವಿವಾರ) ಸಾಯಂಕಾಲ ತೆರೆಕಂಡಿದೆ. ಈ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಬೇಕಾಗಿದ್ದ ಅನೇಕ ಪ್ರಗತಿಪರರು ಈ ಅಧಿವೇಶನದಿಂದ ದೂರವೇ ಉಳಿದಿದ್ದು ಅಧಿವೇಶನದುದ್ದಕ್ಕೂ ಎದ್ದು ಕಾಣುತ್ತಿತ್ತು.
ಸಾಮಾನ್ಯವಾಗಿ ಅಧಿವೇಶನದಲ್ಲಿ ಸರ್ವಾಧ್ಯಕ್ಷರು ಆರಂಭದ ದಿನ ಹಾಗೂ ಮುಕ್ತಾಯದ ದಿನ ಎರಡೂ ದಿನ ಮಾತನಾಡಿ ತಮ್ಮ ಸಂದೇಶ ನೀಡುವುದು ಶಿಷ್ಟಾಚಾರ. ಆದರೆ, ಆ ಶಿಷ್ಟಾಚಾರವೇ ಇಲ್ಲಿ ಗಾಳಿಗೆ ತೂರಲಾಗಿದೆ. ಅಧಿವೇಶನದ ಸರ್ವಾಧ್ಯಕ್ಷರಾಗಿದ್ದ ಡಾ. ಗೊ. ರು. ಚನ್ನಬಸಪ್ಪನವರು ಆರಂಭದ ದಿನ ಮಾತ್ರ ಮಾತನಾಡಿದ್ದಾರೆ. ನಿನ್ನೇ ತೆರೆಕಂಡ ಮುಕ್ತಾಯ ಸಮಾರಂಭದಲ್ಲಿ ಅವರಿಗೆ ಕನಿಷ್ಠ ಐದಾರು ನಿಮಿಷವಾದರೂ ಮಾತನಾಡಲು ಅವಕಾಶ ಸಿಗದೇ ತೆರೆಕಂಡಿದೆ. ಮುಖ್ಯವಲ್ಲದ ವ್ಯಕ್ತಿಗಳ ಅನಾವಶ್ಯಕ ಮಾತುಗಳಲ್ಲೇ ಸಮಯ ಹೋಗಿದೆ.
ಸರ್ವಾಧ್ಯಕ್ಷರಿಗೆ ಹಾಗೂ ಸಮಾವೇಶದ ಯಶಸ್ಸಿಗಾಗಿ ಹಗಲಿರುಳು ದುಡಿದಿರುವ, ಮಠಾಧೀಶರ ದಂಡೆ ಕಟ್ಟಿಕೊಂಡು ಸಮಾವೇಶಕ್ಕೆ ಬಂದಿದ್ದ ಸಮಾರೋಪ ಭಾಷಣ ಮಾಡಬೇಕಿದ್ದ ಗದಗಿನ ಶೀಗಳಿಗೂ ಮತ್ತು ಅದೇರೀತಿ ನಾಗನೂರ ಶ್ರೀಗಳಿಗೂ ಹಾಗೂ ಸತತ ಒಂದು ತಿಂಗಳಿನಿಂದ ತಮ್ಮ ಮಠದ ಕಾರ್ಯಗಳೆಲ್ಲವೂ ಬದಿಗೊತ್ತಿ ಬೀದರ ಜಿಲ್ಲಾದಾದಂತ್ಯ ಸಮಾವೇಶದ ಯಶಸ್ವಿಗಾಗಿ ಅನುದಿನವೂ ಬೆವರು ಸುರಿಸಿದ ಭಾಲ್ಕಿ ಶ್ರೀಗಳಿಗೂ ಸಮಾರೋಪ ಸಮಾರಂಭದಲ್ಲಿ ತಮ್ಮ ಸಾನಿಧ್ಯ ನುಡಿಯ ಮಾತನಾಡಲು ಅವಕಾಶ ಸಿಗದಿರುವುದು ಜನರು ಹುಬ್ಬೇರಿಸುವಂತೆ ಮಾಡಿದೆ.
ಈ ಕುರಿತು ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡರಾದ ಜಿ ಬಿ ಪಾಟೀಲ್ ಅವರಿಗೆ ‘ದ ಪಾಲಿಟಿಕ್’ ಮಾತನಾಡಿಸಿದಾಗ ‘ಈ ಅಧಿವೇಶನದ ಮುಖ್ಯ ಆಯೋಜಕರಿಗೆ ಕೇಳಿ. ಇದನ್ನು ಉತ್ತರಿಸಲು ನಾನು ಸಮರ್ಥ ವ್ಯಕ್ತಿಯೂ ಅಲ್ಲ; ಸೂಕ್ತ ವ್ಯಕ್ತಿಯೂ ಅಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಲು ಶಿವಾನಂದ ಜಾಮದಾರ್ ಅವರಿಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ.