ದ ಪಾಲಿಟಿಕ್

ಅಂದು ಗಾಂಧೀಜಿಯನ್ನು ಕಾಡಿದ ಭಯ ಇಂದು ನಮ್ಮೆಲ್ಲರನ್ನೂ ಕಾಡುತ್ತಿದೆ : ಎ ನಾರಾಯಣ

ದ ಪಾಲಿಟಿಕ್

ದ ಪಾಲಿಟಿಕ್

ಯುದ್ಧ ಕಾಲದಲ್ಲಿ ಇಲ್ಲದ ಭಯ ಗಾಂಧೀಜಿಗೆ ಯುದ್ಧ ಮುಗಿದ ಮೇಲೆ ಪ್ರಾರಂಭವಾಗಿತ್ತು. ಬ್ರಿಟಿಷರು ಇನ್ನೇನು ಭಾರತ ಬಿಟ್ಟು ಹೋಗುತ್ತಾರೆ, ಸಂವಿಧಾನದ ತಯಾರಿ ನಡೆಯುತ್ತಿದೆ ಎನ್ನುವಾಗ ಗಾಂಧೀಜಿ ವಿವಿಧ ರೀತಿಯಲ್ಲಿ ಒಬ್ಬಂಟಿಯಾಗತೊಡಗಿದರು. ತನ್ನ ನಿಲುವುಗಳು ತನ್ನ ಕಾರ್ಯಗಳು ತನ್ನನ್ನು ಏಕಾಂಕಿಯನ್ನಾಗಿಸಬಹುದು ಎಂಬ ಭಯ ಯಾವತ್ತೂ ಕಾಡಿರದ ಗಾಂಧೀಜಿಗೆ ಈ ಒಂದು ವಿಷಯದಲ್ಲಿ ಭಯ ಕೊನೆಯವರೆಗೂ ಕಾಡಿತ್ತು. ಅದು ಭಾರತ ಹೊಸದಾಗಿ ಸೃಷ್ಟಿಸಲು ಹೊರಟಿರುವ ಸರಕಾರೀ ವ್ಯವಸ್ಥೆ ಅಥವಾ ಆಡಳಿತ ವ್ಯವಸ್ಥೆಯ (Modern State) ಬಗ್ಗೆ ಗಾಂಧೀಜಿಯನ್ನು ಕಾಡಿದ ಭಯ.

ಇಂಗ್ಲಿಷ್‌ನ ಸ್ಟೇಟ್ ಎನ್ನುವ ಪದಕ್ಕೆ ಯಾವುದೇ ಭಾರತೀಯ ಭಾಷೆಯಲ್ಲಿ ಸಮರ್ಪಕವಾದ ಪರ್ಯಾಯ ಪದ ಇಲ್ಲ. ಆದ ಕಾರಣ ಈ ಲೇಖನದಲ್ಲಿ ಅದನ್ನು ಸ್ಥೂಲವಾಗಿ ಆಡಳಿತ ವ್ಯವಸ್ಥೆ ಅಂತ ಕರೆಯೋಣ. ಈ ಆಡಳಿತ ವ್ಯವಸ್ಥೆ ಆಧುನಿಕತೆಯ ಭಾಗವಾಗಿ ಪಾಶ್ಚಿಮಾತ್ಯ ರಾಜ್ಯಗಳಲ್ಲಿ ಉದಯವಾದಾದ್ದು. ಆಧುನಿಕತೆಯನ್ನು ಗಾಂಧೀಜಿ ವಿರೋಧಿಸುತ್ತಿದ್ದದ್ದು ಅದು ಮನುಷ್ಯನ ಆಂತರಿಕ ಶಕ್ತಿ ಮತ್ತು ಸ್ಥೈರ್ಯಗಳನ್ನು ಕುಗ್ಗಿಸುತ್ತದೆ ಮತ್ತು ಅಪ್ರಸ್ತುತಗೊಳಿಸುತ್ತದೆ ಎನ್ನುವ ಕಾರಣಕ್ಕೆ. ಈ ಆಧುನೀಕರಣದ ಭಾಗವಾಗಿ ಬರುವ ಆಡಳಿತ ವ್ಯವಸ್ಥೆ ಗಾಂಧೀಜಿಯವರ ಪ್ರಕಾರ ಒಂದು ಆತ್ಮರಹಿತ ಯಂತ್ರವಾಗಿತ್ತು (soulless machine).

ಅಗಾಧ ಅಧಿಕಾರ ಅಂತರ್ಗತವಾಗಿರುವ ಈ ವ್ಯವಸ್ಥೆ ಜನರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತದೆ, ಅತ್ಯಂತ ಅಮಾನವೀಯವಾಗಿ ದಮನಿಸುತ್ತದೆ ಎನ್ನುವುದು ಅವರ ಚಿಂತನೆಯಾಗಿತ್ತು. ಈ ಆಧುನಿಕ ಆಡಳಿತ ವ್ಯವಸ್ಥೆ ಒಂದು ಮಾತೃಹೃದಯವನ್ನು ಹೊಂದಲು ಸಾಧ್ಯ ಎನ್ನುವುದರ ಬಗ್ಗೆ ಗಾಂಧೀಜಿಗೆ ಲವಲೇಶ ನಂಬಿಕೆ ಇರಲಿಲ್ಲ, ಪಂಡಿತ್ ನೆಹರೂ, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಸಮಕಾಲೀನ ದೈತ್ಯ ಪ್ರತಿಭೆಗಳನ್ನು ಈ ಸಮಸ್ಯೆ ಕಾಡಿರಲಿಲ್ಲ ಅಂತ ಅಲ್ಲ.

ಆದರೆ ಇವರಿಗೆಲ್ಲಾ ಈ ವ್ಯವಸ್ಥೆ ನಿಯಂತ್ರಣಾಧೀನ ಎನ್ನುವ ಭರವಸೆ ಇತ್ತು. ಅಂದರೆ ಆಧುನಿಕ ಆಡಳಿತ ವ್ಯವಸ್ಥೆಯ ಅಗಾಧ ಶಕ್ತಿಯನ್ನು ಕಾನೂನಿನ ಮೂಲಕ ಅರ್ಥಾತ್ ಸಂವಿಧಾನದ ಮೂಲಕ ಮತ್ತು ಜನಶಕ್ತಿಯ ಮೂಲಕ ಅರ್ಥಾತ್ ಚುನಾವಣಾ ಅಸ್ತ್ರದ ಮೂಲಕ ನಿಯಂತ್ರಿಸಲು ಸಾಧ್ಯ ಅಂತ ಅವರೆಲ್ಲಾ ನಂಬಿದ್ದರು. ಗಾಂಧೀಜಿಗೆ ಆಧುನಿಕ ಪ್ರಜಾಸತ್ತೆ, ಅದರ ಸಂವಿಧಾನ, ಅದರ ಸಂಸತ್ತು ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳು ಇತ್ಯಾದಿಗಳ ಬಗ್ಗೆ ಅಷ್ಟೊಂದು ಭರವಸೆಯೇನೂ ಇರಲಿಲ್ಲ. ಅವರು ತಮ್ಮ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಬ್ರಿಟಿಷ್ ಪಾರ್ಲಿಮೆಂಟ್‍ಅನ್ನು ಬಹಳ ಕಟು ಶಬ್ದಗಳಲ್ಲಿ ಟೀಕಿಸಿದ್ದರು.

ಹಿಂದ್ ಸ್ವರಾಜ್‍ನ ರಚನೆ 20ನೆಯ ಶತಮಾನದ ಆರಂಭದ ಭಾಗದಲ್ಲಿ ಆದದ್ದು. ಭಾರತ ಸಾಂವಿಧಾನಿಕ ಸಂಸತ್ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಹೊತ್ತಿಗೆ ಮತ್ತೊಂದೆರಡು ದಶಕಗಳೇ ಸವೆದಿದ್ದವು. ಆದರೂ ಗಾಂಧೀಜಿಯವರ ಅಭಿಪ್ರಾಯದಲ್ಲಿ ವಿಶೇಷ ಬದಲಾವಣೆಗಳೇನೂ ಆಗಿರಲಿಲ್ಲ. ಅವರ ಭಯ ಮುಂದುವರಿದಿತ್ತು. ಆಧುನಿಕ ಆಡಳಿತ ವ್ಯವಸ್ಥೆ, ಕಾನೂನು, ಕೋರ್ಟು, ಲೆಕ್ಕ ಪರಿಶೋಧನೆ ಇತ್ಯಾದಿಗಳೆಲ್ಲವೂ ಅವರ ಪ್ರಕಾರ ಸಂಪೂರ್ಣ ನಂಬಿಕೆ ಇರಿಸಿಕೊಳ್ಳಬಹುದಾದ ಸಂಸ್ಥೆಗಳಲ್ಲ.

ಅವೆಲ್ಲವುಗಳನ್ನು ಬಲಾಢ್ಯರು ದುರುಪಯೋಗ ಪಡಿಸಿಕೊಳ್ಳುವುದು ಅಥವಾ ಅವುಗಳ ಅಧಿಕಾರವೇ ಅತಿಯಾಗಿ ಅವುಗಳೇ ಅತಿರೇಕದ ಹಾದಿ ಹಿಡಿಯುವುದು ಇತ್ಯಾದಿಗಳೆಲ್ಲಾ ನಿಚ್ಚಳ ಸಾಧ್ಯತೆಗಳಾಗಿದ್ದವು. ಸಂಸತ್ತು, ನ್ಯಾಯಾಂಗ ಹೀಗೆ ಯಾವುದೇ ಸಾಂಸ್ಥಿಕ ಘಟಕ ಅಗಾಧವಾದ ಅಧಿಕಾರವನ್ನು ಹೊಂದಿದ್ದರೆ ಆ ಅಧಿಕಾರ ದುರುಪಯೋಗವಾದಂತೆ ತಡೆಗಟ್ಟುವ ಯಾವ ವಿಧಾನಗಳನ್ನೂ ಮನುಷ್ಯಕೋಟಿ ಆವಿಷ್ಕರಿಸಿಕೊಂಡಿಲ್ಲ ಎನ್ನುವುದು ಅವರ ತತ್ವವಾಗಿತ್ತು.

ವ್ಯಕ್ತಿಗಳನ್ನು ಯಾವುದೋ ಸಂಸ್ಥೆ ಹೊರಗಿನಿಂದ ನಿಯಂತ್ರಿಸುವುದು ಅಥವಾ ಜನರ ಅಭಿವೃದ್ಧಿಯನ್ನು ಸರಕಾರ ಸಾಧಿಸುವುದು ಎರಡೂ ಕೂಡ ವ್ಯರ್ಥ ಮತ್ತು ಅನರ್ಥ ಅಂತ ಅವರ ಭಾವನೆಯಾಗಿತ್ತು. ಯಾಕೆಂದರೆ ಅವರ ಪ್ರಕಾರ ನಿಯಂತ್ರಣ ಮತ್ತು ಉನ್ನತಿ ವ್ಯಕ್ತಿಗಳ ಒಳಗಿನಿಂದ ಆಗಬೇಕಾಗಿರುವುದು. ಬಾಹ್ಯವಾದ ಒಂದು ಸಂಸ್ಥೆ ಇದನ್ನು ಮಾಡುವ ಸಾಧ್ಯತೆಯಲ್ಲಿ ಅವರಿಗೆ ಸಂಬಿಕೆ ಇರಲಿಲ್ಲ. ಗಾಂಧೀಜಿಗೆ ‘ರಾಜನ ಭಯ’ ಮತ್ತು ‘ರಾಜನಿಲ್ಲದ’ ಭಯಗಳ ಬಗ್ಗೆ ವಿಶೇಷ ವತ್ಯಾಸವೇನೂ ಕಾಣಿಸುತ್ತಿರಲಿಲ್ಲ.

ಗಾಂಧೀಜಿಯವರು ಈ ಚಿಂತನೆಗಳನ್ನು ಹೊತ್ತು ಬದುಕುತಿದ್ದಾಗಲೇ, ಭಾರತ ಮಾತ್ರ ಸಂಸದೀಯ ವ್ಯವಸ್ಥೆಯ ಆಧುನಿಕ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡು ಸಂವಿಧಾನದ ಮೂಲಕ ಅದನ್ನು ರೂಪಿಸಿಕೊಳ್ಳುವ ಹಾದಿಯಲ್ಲಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಆ ಮಟ್ಟಿಗೆ ಪ್ರಭಾವ ಬೀರಿದ್ದ ಗಾಂಧೀಜಿ ಅವರ ಭಯ ಅಥವಾ ಚಿಂತನೆಗಳೆಲ್ಲಾ ಸ್ವಾತಂತ್ರ್ಯದ ಫಲ ಲಭಿಸುವ ವೇಳೆಗೆ ಅಥವಾ ಹೊಸ ಆಡಳಿತ ವ್ಯವಸ್ಥೆಯನ್ನು ಕಟ್ಟಲು ದೇಶ ಸಜ್ಜಾಗುತ್ತಿದ್ದ ಯಾಕೆ ಸಂಪೂರ್ಣವಾಗಿ ಅಪ್ರಸ್ತುತರಾಗಿಬಿಟ್ಟವು? ತಮ್ಮ ಕಣ್ಣೆದುರಿಗೆ ತಮಗೆ ಪಥ್ಯವಲ್ಲದ, ತಮಗೆ ಒಪ್ಪಿಗೆಯಿಲ್ಲದ ಒಂದು ವ್ಯವಸ್ಥೆ ಅಸ್ತಿತ್ವಕ್ಕೆ ಬರುವುದನ್ನು ನೋಡಿ ಹಠಮಾರಿ ಗಾಂಧೀಜಿ ಯಾಕೆ ಸುಮ್ಮನಿದ್ದರು? ಗಾಂಧೀಜಿಯ ಎಚ್ಚರಿಕೆ ಯಾಕೆ ಕೆಲಸಕ್ಕೆ ಬರಲಿಲ್ಲ? ಇತ್ಯಾದಿ ಪ್ರಶ್ನೆಗಳನ್ನೆಲ್ಲಾ ಕೇಳಬಹುದು.

ಆದರೆ ಆ ಕಾಲವೇ ಹಾಗಿತ್ತು. ಆ ವೇಳೆಗಾಗಲೇ ಇಡೀ ಪ್ರಪಂಚ ಈ ಆಧುನಿಕ ವ್ಯವಸ್ಥೆಯನ್ನು ರೂಢಿಸಿಕೊಳ್ಳುವ ಹಾದಿಯಲ್ಲಿ ದೂರ, ಬಹುದೂರ ಸಾಗಿ ಆಗಿತ್ತು. ಪ್ರಪಂಚವೇ ಒಂದು ದಿಕ್ಕಿನಲ್ಲಿ ಪ್ರವಹಿಸುತ್ತಿರುವಾಗ ಪ್ರವಾಹದ ವಿರುದ್ಧ ಈಜುವ ಶಕ್ತಿ ಗಾಂಧೀಜಿ ಕಳೆದುಕೊಂಡಿದ್ದರು. ತನ್ನದೇನಿದ್ದರೂ ಅರಣ್ಯ ರೋಧನ ಎನ್ನುವುದು ಅವರಿಗೆ ಮನದಟ್ಟಾಗಿತ್ತು. ಇದಕ್ಕೆ ಇನ್ನೂ ಒಂದು ಕಾರಣವಿದೆ. ಆಧುನಿಕ ಆಡಳಿತ ವ್ಯವಸ್ಥೆಯ ಭವಿಷ್ಯದ ಅಪಾಯಗಳನ್ನು ಜಾಣ್ಮೆಯಿಂದ ಮೊದಲೇ ಊಹಿಸಿದ್ದ ಗಾಂಧೀಜಿಯವರಿಗೆ ಅದಕ್ಕೊಂದು ಪರ್ಯಾಯವನ್ನು ಪ್ರಬಲವಾಗಿ ಪ್ರತಿಪಾದಿಸಲು ಸಾಧ್ಯವಾಗಲಿಲ್ಲ ಅಥವಾ ಸಂದರ್ಭ ಬರಲಿಲ್ಲ.

ಹಾಗಂತ ಗಾಂಧೀಜಿ ಪ್ರಜಾತಂತ್ರ ವಿರೋಧಿಯಲ್ಲ. ಅವರೇನೂ ಅರಾಜಕತೆಯ ಪ್ರತಿಪಾದಕನೂ ಆಗಿರಲಿಲ್ಲ. ವಾಸ್ತವದಲ್ಲಿ ಅವರ ಬಳಿ ಒಂದು ಪರ್ಯಾಯ ಮಾದರಿ ಇತ್ತು. ಅದು ಇನ್ನೂ ಚಿಂತನೆಯ ರೂಪದಲ್ಲೇ ಇತ್ತು ಅಥವಾ ಅದು ಆರಂಭಿಕ ಪ್ರಯೋಗಶೀಲತೆಯ ಹಂತವನ್ನಿನ್ನೂ ದಾಟಿರಲಿಲ್ಲ.‌

ದ ಪಾಲಿಟಿಕ್

ಗಾಂಧೀಜಿಯ ಪರ್ಯಾಯ ಮಾದರಿ ಏನು ಅಂತ ಅರ್ಥ ಮಾಡಿಕೊಳ್ಳಬೇಕಾದರೆ ಅವರ ಆಪ್ತ ಅನುಯಾಯಿ ಶ್ರೀರಾಮನ್ನಾರಾಯಣ ಅಗರವಾಲ್ ಅವರು ಬರೆದ The Gandhian Constitution of Free India ಎಂಬ ಪುಸ್ತಕ ಓದಬೇಕು. ಇದನ್ನು ಗಾಂಧೀಜಿಯವರು ಸ್ವತಃ ಬರೆದಿಲ್ಲವಾದರೂ ಅದಕ್ಕೆ ಅವರು ಬರೆದ ಮುನ್ನುಡಿಯಲ್ಲಿ ‘ಇದನ್ನು ನನ್ನ ಚಿಂತನೆ ಅಂತ ಭಾವಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ. ಈಗಿನ ಸಂವಿಧಾನದ ರಚನೆ ಆರಂಭವಾಗುವ ಮುನ್ನವೇ ಪ್ರಕಟವಾಗಿದ್ದ ಈ ಪುಸ್ತಕದಲ್ಲಿ ಪ್ರತಿಪಾದಿಸಲಾದ ಆಡಳಿತ ಮಾದರಿ ನಾವೀಗ ಅನುಸರಿಸುತ್ತಿರುವ ಮಾದರಿಗಿಂತ ಸಂಪೂರ್ಣ ಭಿನ್ನವಾಗಿದೆ. ಆದರೆ ಇದೇನೂ ಪರೀಕ್ಷಿಸಲ್ಪಟ್ಟ ಮಾದರಿಯಾಗಿರಲಿಲ್ಲ. ಆ ವೇಳೆಗೆ ಬ್ರಿಟಿಷ್ ಪಾರ್ಲಿಮೆಂಟರಿ ಮಾದರಿಯ ಆಡಳಿತ ಪರಿಚಿತವಾಗಿದ್ದ ಮತ್ತು ‘ಯಶಸ್ವೀ’ ಆಗಿದ್ದ ಮಾದರಿಯಾಗಿತ್ತು. ಅದು ಎಲ್ಲರನ್ನೂ ಅದರತ್ತ ಸೆಳೆಯಿತು. ಗಾಂಧೀ ಮಾದರಿ ಅರ್ಧಕ್ಕರ್ಧ ಆವಿಷ್ಕಾರದ ಹಂತದಲ್ಲೇ ಉಳಿದು ಹೋಯಿತು.

ವರ್ತಮಾನಕ್ಕೆ ಬರೋಣ. ಒಮ್ಮೆ ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಗಾಂಧೀಜಿಯವರನ್ನು ಅಂದು ಕಾಡಿದ ಭಯ ಇಂದು ನಮ್ಮೆಲ್ಲರನ್ನೂ ಕಾಡುತ್ತಿದೆ ಅಂತ ಅನ್ನಿಸುತ್ತಿಲ್ಲವೇ. ಬಹುಮತ ಪಡೆದ ಸರಕಾರವೊಂದು ಹೇಗೆ ಯಾರ ಅಂಕೆಗೂ ಸಿಗದೆ, ಯಾವ ಸಂಸ್ಥೆಯ ನಿಯಂತ್ರಣಕ್ಕೂ ನಿಲುಕದೆ ನಡೆದದ್ದೇ ದಾರಿ ಅಂತ ವರ್ತಿಸುತ್ತಾ ಇರುವುದನ್ನು ನೋಡಿದರೆ ಮಾನವೀಯತೆಯ ಕನಿಷ್ಠ ಮೌಲ್ಯಗಳನ್ನೂ ಇನ್ನೂ ಉಳಿಸಿಕೊಂಡಿರುವ ಯಾರಿಗಾದರೂ ಭಯ ಆಗಲೇಬೇಕು. ಇದು ಭಾರತದ ಕತೆ ಮಾತ್ರವಲ್ಲ.

ಒಂದು ಕಾಲಕ್ಕೆ ಪ್ರಪಂಚಕ್ಕೆಲ್ಲಾ ಪ್ರಜಾತಂತ್ರವನ್ನು ಇನ್ನಷ್ಟೂ ಗಟ್ಟಿಗೊಳಿಸುವುದು ಹೇಗೆ, ಇನ್ನಷ್ಟೂ ಆಳಕ್ಕಿಳಿಸುವುದು ಹೇಗೆ ಅಂತ ಪಾಠ ಹೇಳುತಿದ್ದ ಅಮೆರಿಕ ಈಗ ಆಡಳಿತ ವ್ಯವಸ್ಥೆಯ ದೈತ್ಯ ಶಕ್ತಿಯ ಆರ್ಭಟಕ್ಕೆ ಕಂಗೆಟ್ಟು ಹೋಗಿದೆ. ಮತ್ತೆ ಭಾರತಕ್ಕೆ ಬಂದರೆ ಆಳುವವರ ಅಧಿಕಾರದ ಮೇಲೆ ಎಲ್ಲಿದೆ ಸಂಸತ್ತಿನ ನಿಯಂತ್ರಣ? ಎಲ್ಲಿದೆ ನ್ಯಾಯಾಂಗದ ನಿಯಂತ್ರಣ? ಎಲ್ಲಿದೆ ಸಾಂವಿಧಾನಿಕ ಕಾನೂನುಗಳ ನಿಯಂತ್ರಣ? ಎಲ್ಲಿದೆ ಮಾಧ್ಯಮಗಳ ನಿಯಂತ್ರಣ? ಸರ್ವಾಧಿಕಾರಕ್ಕೆ ಮತ್ತು ಪ್ರಜಾತಂತ್ರಕ್ಕೆ ಯಾವುದೇ ವ್ಯತ್ಯಾಸ ಉಳಿಯದ ಹಾಗೆ ನಮ್ಮ ಕಣ್ಣ ಮುಂದೆ ಎಲ್ಲವೂ ನಡೆಯುತ್ತಿದೆ.

ಪ್ರಜಾತಂತ್ರಕ್ಕೆ ಮತ್ತು ಇತರ ವ್ಯವಸ್ಥೆಗಳಿಗೆ ಇರುವ ವ್ಯತ್ಯಾಸವನ್ನು ತಿಳಿಸುವ ಪ್ರಾಥಮಿಕ ಪಠ್ಯದಲ್ಲಿ ಹೇಳುವ ಒಂದಂಶ ಇದೆ. ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರಸ್ಥರನ್ನು ಯಾರು ಬೇಕಾದರೂ ಪ್ರಶ್ನಿಸಲು ಸಾಧ್ಯ ಎನ್ನುವ ಅಂಶ. ಉಳಿದ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಆಳುವವರ ಅಧಿಕಾರ ಪ್ರಶ್ನಿಸಿದರೆ ತಲೆ ಉರುಳೀತು. ಆದರೆ ಪ್ರಜಾತಂತ್ರ ವ್ಯವಸ್ಥೆ ಸದಾ ಪ್ರಶ್ನಿಸಿಕೊಳ್ಳುತ್ತಲೇ ಉಳಿಯಬೇಕು ಎನ್ನುವುದು ಆ ಪ್ರಾಥಮಿಕ ಪಾಠ.

ಈಗ ಸಾಮಾನ್ಯರು ಪ್ರಶ್ನಿಸುವುದು ಹಾಗಿರಲಿ, ಸಂಸತ್ತಿನಲ್ಲಿ ಕೂಡಾ ಪ್ರಶ್ನೆ ಎತ್ತುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ಅಧಿಕಾರದ ನಿರಂಕುಶ ಪ್ರವೃತ್ತಿ ಬೆಳೆದು ನಿಂತಿದೆ. ಸಂಸತ್ತಿನ ಹೊರಗೆ ಆಳುವವರ ಕುರಿತು ಸಣ್ಣದಾಗಿ ಪ್ರಶ್ನೆ ಎತ್ತುವವರನ್ನು ಕೂಡಾ ಕ್ರೂರವಾಗಿ ಹೆಡೆಮುರಿಕಟ್ಟಲಾಗುತ್ತಿದೆ.

ಗಾಂಧೀಜಿಯನ್ನು ಅಂದು ಕಾಡಿದ್ದು ಕೂಡಾ ಇದೇ ಭಯ. ಅವರು ಪ್ರಜಾತಂತ್ರ ವಿರೋಧಿಯೇನೂ ಆಗಿರಲಿಲ್ಲ. ಆದರೆ ಪ್ರಜಾಪ್ರಭುತ್ವವೂ ಒಂದು ಪ್ರಭುತ್ವವೇ ಎನ್ನುವ ಸತ್ಯವನ್ನು ಗಾಂಧೀಜಿ ಮನಗಂಡಷ್ಟು ಸ್ಪಷ್ಟವಾಗಿ, ನಿಖರವಾಗಿ ಯಾರೂ ಮನಗಂಡದ್ದಿಲ್ಲ. ಪ್ರಜಾ ಪ್ರಭುತ್ವದಲ್ಲೂ ‘ಪ್ರಭುತ್ವ’ವನ್ನು ನಿಯಂತ್ರಿಸುವುದು ಹೇಗೆ ಎನ್ನುವುದು ಅವರನ್ನು ಕಾಡಿದ ಒಗಟಿನ ಪ್ರಶ್ನೆ. ಇದಕ್ಕೆ ಉತ್ತರವಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಈ ಭಯ ಮತ್ತು ಅದರ ಕೊರತೆಯ ಬಗ್ಗೆ ಈ ಅರಿವು ಇತರರಿಗೂ ಇತ್ತು.

ಆದ ಕಾರಣವೇ ‘ಪ್ರಜಾಪ್ರಭುತ್ವ ಎನ್ನುವುದು ಅತ್ಯಂತ ಕೆಟ್ಟ ವ್ಯವಸ್ಥೆ, ಆದರೆ ಅದಕ್ಕಿಂತ ಉತ್ತಮ ಪರ್ಯಾಯವೊಂದನ್ನು ಇನ್ನೂ ಮನುಷ್ಯಕೋಟಿ ಆವಿಷ್ಕರಿಸದ ಕಾರಣ ಅದನ್ನು ಒಪ್ಪಲೇಬೇಕಾಗಿದೆ’ ಎನ್ನುವ ರೀತಿಯ ಅರ್ಥದ ಮಾತುಗಳನ್ನು ಬಹುತೇಕ ಚಿಂತಕರು ಆಡಿದ್ದು. ಆದರೆ ಗಾಂಧೀ ಇಲ್ಲೂ ಹಠಮಾರಿ. ಪ್ರಜಾತಂತ್ರದ ಕುರಿತಾದ ಈ ಅಘೋಷಿತ ಬೌದ್ಧಿಕ ಒಪ್ಪಂದಕ್ಕೆ ಅವರ ಮನಸ್ಸು ಸಹಿ ಹಾಕಿರಲೇ ಇಲ್ಲ. ಪ್ರಜಾತಂತ್ರವನ್ನು ಮೀರಿದ ತಂತ್ರವೊಂದಕ್ಕೆ ಅವರ ಮನಸ್ಸು ಹಪಹಪಿಸುತಿತ್ತು.

ಆದರೆ ಅವರ ಚಿಂತನೆಯಲ್ಲಿ ಆಗ ಈ ಸಮಸ್ಯೆಗೆ ಇದ್ದದ್ದು ಆಧ್ಯಾತ್ಮಿಕ ಪರಿಹಾರ. ಅರ್ಥಾತ್ ಮನುಷ್ಯ ಈ ಆಡಳಿತ ವ್ಯವಸ್ಥೆಯ ಮೇಲಿನ ಅವಲಂಬನೆಯಿಂದಲೇ ಹೊರಬರಬೇಕು ಎನ್ನುವ ಸಿದ್ಧಾಂತ ಅದು. ಅಷ್ಟಕ್ಕೂ ಆಡಳಿತ ವ್ಯವಸ್ಥೆ ಅಂತ ಒಂದು ಇರುವುದಾದರೂ ಯಾಕೆ? ಈ ಸಮಾಜವನ್ನು, ಈ ಸಮಾಜದ ವ್ಯಕ್ತಿಗಳನ್ನು ನಿಯಂತ್ರಿಸುವುದಕ್ಕೆ ತಾನೇ. ಆ ನಿಯಂತ್ರಣದ ಅಗತ್ಯವೇ ಇಲ್ಲದಷ್ಟು ಮನುಷ್ಯ ನೈತಿಕವಾಗಿ ಬೆಳೆಯಬೇಕು. ಮನುಷ್ಯನ ನಿಯಂತ್ರಣ ಆತನ ಒಳಗಿನಿಂದಲೇ ಆಗಬೇಕು.

ಆಗ ಹೊರಗಿನಿಂದ ನಿಯಂತ್ರಿಸುವ ಸರ್ಕಾರವೊಂದರ ಅಗತ್ಯ ಇರುವುದಿಲ್ಲ ಎಂದಾಗಿತ್ತು ಗಾಂಧೀ ರಾಜಕೀಯ ಚಿಂತನೆ. ಈ ಪರಿಹಾರದ ಉದಾತ್ತತೆಯು ಅದನ್ನು ಅಪ್ರಾಯೋಗಿಕ ಎನ್ನುವ ನೆಲೆಯಲ್ಲಿ ನಾವು ನೋಡುವಂತೆ ಮಾಡುತ್ತದೆ. ಇದು ರಾಜಕೀಯ ಪರಿಹಾರವಲ್ಲ. ಈ ಪರಿಹಾರಕ್ಕೆ ಮನುಷ್ಯನ ನೈತಿಕ ಪ್ರಜ್ಞೆ ಇನ್ನೊಂದು ಮಟ್ಟದ ಎತ್ತರಕ್ಕೆ ಏರಬೇಕು. ಅದು ವಿಕಾಸವಾದದ ಇನ್ನೊಂದು ಹಂತ. ಅಲ್ಲಿಯವರೆಗೆ ಏನು ಮಾಡುವುದು? ವಿಕಾಸ ಚಕ್ರದ ಗಾಲಿಯ ವೇಗವನ್ನು ಹೆಚ್ಚಿಸುವ ಮಾರ್ಗವೊಂದು ಇದೆಯೇ? ಉತ್ತರ ಗೊತ್ತಿಲ್ಲ. ಗಾಂಧೀಜಿ ಈ ಬಗ್ಗೆ ಏನೂ ಹೇಳಿದ ಹಾಗಿಲ್ಲ. ಆದರೆ ಈ ಚಿಂತನೆ ಏಕಕಾಲದಲ್ಲಿ ಭೂತವನ್ನೂ ಭವಿಷ್ಯವನ್ನೂ ಪ್ರತಿನಿಧಿಸುತ್ತದೆ.

ಈ ಚಿಂತನೆಯ ಮೂಲ ಇರುವುದು ಭಾರತೀಯ ತತ್ವಗಳಲ್ಲೇ. ಮಹಾಭಾರತ ಯುದ್ಧ ಆದ ನಂತರ ಶರಶೈಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ಕಂಡು ಆಶೀರ್ವಾದ ಪಡೆಯಲು ಭಾವೀ ಚಕ್ರವರ್ತಿ ಯುಧಿಷ್ಠಿರ ಬರುತ್ತಾನೆ. ಹಾಗೆ ಬಂದ ಯುಧಿಷ್ಠಿರನಿಗೆ ಭೀಷಾಚಾರ್ಯರು ಆಡಳಿತದ ಕೆಲವು ಸೂಕ್ಷ್ಮಗಳನ್ನು ಹೇಳುತ್ತಾರೆ. ಅದರಲ್ಲಿ ಒಂದು “ನಿನ್ನ ಅಗತ್ಯವೇ ಇಲ್ಲದ ರೀತಿಯಲ್ಲಿ ಪ್ರಜೆಗಳನ್ನು ನೀನು ರೂಪುಗೊಳಿಸು” ಎಂದಾಗಿರುತ್ತದೆ. ಅಂದರೆ ರಾಜನ ಅಗತ್ಯವೇ ಇಲ್ಲದ ಒಂದು ಸಮಾಜ ನಿರ್ಮಿಸು ಅಂತ.

ಗಾಂಧಿ ಚಿಂತನೆ ಕೂಡಾ ಈ ತತ್ವದ ಜಾಡು ಹಿಡು ಸಾಗುತ್ತಿರುವಂತೆ ಕಾಣಿಸುತ್ತದೆ. ಇದು ಭೂತಕಾಲದ ಚಿಂತನೆ ಮಾತ್ರವಾಗದೆ ಭವಿಷ್ಯಕ್ಕೂ ಸಂಬಂಧಿಸಿದ್ದು ಅಂತ ಯಾಕೆ ಹೇಳಿದ್ದು ಅಂದರೆ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆ ಈಗ ಸಾಗುವ ಹಾದಿಯಲ್ಲೇ ಮುಂದುವರಿದರೆ ಅದರ ಭಾರಕ್ಕೇ ಅದು ಮೊಂದೊಂದು ದಿನ ಕುಸಿಯಲಿದೆ. ಆ ಹಂತದಲ್ಲಿ ಅವಿಷ್ಕಾರಗಹುದಾದ ಹೊಸ ಮಾದರಿ ಗಾಂಧೀ ಚಿಂತನೆಗೆ ಹತ್ತಿರವಿರುವ ಒಂದು ಮಾದರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಸಣ್ಣ ಸಣ್ಣ ಪ್ರಮಾಣದಲ್ಲಿ ಸರಕಾರದ ಹಂಗಿಲ್ಲದೆ ಬದುಕುವ ಪ್ರಯೋಗಗಳು ಪ್ರಪಂಚದಾದ್ಯಂತ ತಲೆ ಎತ್ತುತ್ತಿವೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!