ಇದು ತರಳಬಾಳು ಪರಂಪರೆಗೆ ಕಪ್ಪುಚುಕ್ಕೆ?
“ಮಣಿಯನೆಣಿಸಿ ದಿನವ ಕಳೆಯಲುಬೇಡ
ಒಮ್ಮೆಯಾದರೂ ನಿಜದ ನೆನೆಹೇ ಸಾಕು
ಒಂದರೆಗಳಿಗೆಯಾದರೂ ನಿಜದ ನೆನೆಹೇ ಸಾಕು”
-ಅಲ್ಲಮಪ್ರಭು
ತರಳಬಾಳು ಹುಣ್ಣಿಮೆ ಪರಂಪರೆಗೆ ಈ ಸಾರಿ ಕಪ್ಪುಮೋಡ ಮುಸುಕಿದೆ. ಮಸಿ ಮೆತ್ತಿಕೊಂಡಿದೆ. ಅದು ಸಧ್ಯ ಅಳಿಸಲಾರದ ಕಪ್ಪುಮಸಿ.
ದೊಡ್ಡವರು ಜಗತ್ತಿಗೆ ಉಪದೇಶ ಮಾಡೋ ಶಕ್ತಿ ಸಾಮರ್ಥ್ಯವನ್ನು ಹೊಂದಿದ ವಿದ್ವತ್ ಇರೋ ಬೌದ್ಧಿಕ ವ್ಯಕ್ತಿತ್ವದವರು. ನಾಡಿನ ಬಹುತೇಕ ಮಠಾಧೀಶರು ಗೌರವದಿಂದ ಕಂಡವರು. ಜಗದ್ಗುರು ಸ್ಥಾನದಲ್ಲಿ ಇದ್ದು ಬಸವತತ್ವದ ಪರಿಪಾಲನೆ ಮಾಡುವವರು ಇವರು. ಲಿಂಗೈಕ್ಯ ಜಗದ್ಗುರುಗಳವರ ಮನಸ್ಸು, ಭಾವನೆ ಗೆದ್ದ ಬುದ್ದಿವಂತರು. ಕತೆ, ಉಪಕತೆಗಳ ಮೂಲಕ, ಜಗತ್ತಿನ ವಿದ್ಯಮಾನಗಳು ಹಾಗೂ ಬಸವತತ್ವದ ಮೂಲಕ ತುಂಬಿದ ಸಭೆಗೆ ಗಾಂಭೀರ್ಯ ತಂದವರು. ಇಂಥವರು ನಡೆವ ದಾರಿ ಕವಲಾಗಿದೆ. ಅವರ ಈಚಿನ ವರ್ಷಗಳ ನಡೆನುಡಿಯಿಂದ ಅಪಾರ ಭಕ್ತವೃಂದಕ್ಕೆ ಆಘಾತವಾಗಿದೆ.
“ಸದ್ಧರ್ಮ ನ್ಯಾಯಪೀಠ”ದಲ್ಲಿ ಕೂತು, ನ್ಯಾಯಾಲಯದ ಜಡ್ಜ್ ರೀತಿ ನ್ಯಾಯ ತೀರ್ಮಾನ ನೀಡಿದ್ದಾರೆ. ಆದರೆ, ದೀಪದ ಬುಡದಲ್ಲೇ ಕತ್ತಲು ಆವರಿಸಿತೆ? ತಮ್ಮದೇ ಮಾತೃಸಂಸ್ಥೆಯನ್ನು ತಾವೇ ನಾಶ ಮಾಡಿಕೊಳ್ಳುವ ಹಂತಕ್ಕೆ ಜಗದ್ಗುರುಗಳೇ ಹೊರಟುಬಿಟ್ಟರಾ? ಎಂಬೀ ಪ್ರಶ್ನೆಗಳು ಕಾಡುತ್ತಿವೆ. ನಾನು ಲಿಂಗೈಕ್ಯ ಜಗದ್ಗುರು ಅವರ ತರಳಬಾಳು ಹುಣ್ಣಿಮೆಯ ಬಹುತೇಕ ಆಶೀರ್ವಚನದ ಭಾಷಣ ಓದಿ ಪ್ರೇರಣೆ ಪಡೆದಿದ್ದೇನೆ. ಅವರ ಜ್ಞಾನಕ್ಕೆ, ಮಾನವೀಯತೆಗೆ ನಮಿಸಿದ್ದೇನೆ. ಅವರ ಉಪನ್ಯಾಸಗಳಿಗೆ ವಿಮರ್ಶಾ ಲೇಖನ ಬರೆದಿದ್ದೇನೆ.
ಪ್ರಸ್ತುತ ತರಳಬಾಳು ಜಗದ್ಗುರುಗಳ ಸಾಹಿತ್ಯ, ಸಾಂಸ್ಕೃತಿಕ ಬೌದ್ಧಿಕತೆಯ ತಂತ್ರಜ್ಞಾನ ಇತ್ಯಾದಿ ಹಿನ್ನೆಲೆಯಿಂದ ಮನಕ್ಕೆ ತೃಪ್ತಿ ಆಗುವ “ತರಳಬಾಳು ಪರಂಪರೆಯ ಜ್ಞಾನದಾಸೋಹಿ” ಎಂಬ ಧೀರ್ಘ ಲೇಖನ ಬರೆದಿದ್ದೇನೆ. (ತರಳಬಾಳು ಹುಣ್ಣಿಮೆ – ೨೦೧೪, ಶಿಗ್ಗಾಂವ, ಹಾವೇರಿ ಜಿಲ್ಲೆ, ಸ್ಮರಣ ಸಂಚಿಕೆ ಪುಟ ೧೨ – ೧೭) ಅದರಲ್ಲಿನ ಅನೇಕ ಅಂಶದ ಬಗ್ಗೆ ಮಾತಾಡುವುದಿಲ್ಲ. ಒಂದು ವಾಕ್ಯದ ಬಗ್ಗೆ ಗಮನ ಸೆಳೆಯುತ್ತೇನೆ : ನಿಜ ಗುಣಗ್ರಾಹಿ ಗುರುಗಳು ನಮ್ಮ ಸಮಾಜಕ್ಕೊಂದು ಸಾಂಸ್ಕೃತಿಕ ಆಸ್ತಿ (ಪುಟ ೧೬). ಅವತ್ತು ಅದು ನಿಜ. ಆದರೆ, ಈಗ ಅದರ ಅರ್ಥ ಬೇರೆಯೇ ಆದಂತೆ ಕಾಣುತ್ತಿದೆ. ಅವರು ನಿಜವಾದ ಗುಣಗ್ರಾಹಿ ಆಗಿದ್ದರೆ ಈ ರೀತಿ ವಾತಾವರಣ ಸೃಷ್ಟಿ ಆಗುತ್ತಿರಲಿಲ್ಲ.
ನನಗೆ ಹಾಗೂ ನಮ್ಮ ಸಮಾಜಕ್ಕೆ ಡಾ. ಜಗದ್ಗುರುಗಳು ಹಾಗೂ ಸಾಣೇಹಳ್ಳಿ ಶಾಖಾಮಠದ ಶ್ರೀಗಳು ಎರಡು ಕಣ್ಣುಗಳಿದ್ದಂತೆ. ಈ ಇಬ್ಬರ ಬೌದ್ಧಿಕ ಶಕ್ತಿಯಿಂದ, ಸಾಮಾಜಿಕ ಸುಧಾರಣೆಯಿಂದ ಇತರೆ ಮಠಗಳು ಇತ್ತ ನೋಡುವಂತಾಗಿದ್ದು ವಾಸ್ತವ.
ಪೂಜ್ಯರು ಸಮಯ ಸಿಕ್ಕಾಗಲೆಲ್ಲ ನನ್ನ ಜೊತೆ ಸಾಹಿತ್ಯ ವಿಚಾರ ಚರ್ಚೆ ಮಾಡಿ, ಬೌದ್ಧಿಕಶಕ್ತಿ ಹೆಚ್ಚಿಸಿದ್ದಾರೆ. ನನ್ನಲ್ಲಿನ ಹಲವು ಅಪರೂಪದ ಕೃತಿ ತರಿಸಿಕೊಂಡು ಓದಿ, ಅದರ ಬಗ್ಗೆ ತಮ್ಮ ಜನಪ್ರಿಯ ಅಂಕಣ – “ಬಿಸಿಲು ಬೆಳದಿಂಗಳು”ನಲ್ಲಿ ಬರೆದು, ನನ್ನ ಹೆಸರು ದಾಖಲಿಸಿ ತಮ್ಮ ದೊಡ್ಡತನ ಮೆರೆದಿದ್ದಾರೆ. ಆಗ ಹಲವರು ಹುಬ್ಬೇರಿಸಿದ್ದೂ ಇದೆ. ನನ್ನ ಸಂಗ್ರಹದ ಅಪರೂಪದ ಕೃತಿ “ಆಂಡಾಳ್, ಅಕ್ಕಮಹಾದೇವಿ, ಮೀರಾ” – (೧೯೫೬ರಲ್ಲಿ ದೆಹಲಿ ವಿ.ವಿ.ಯಲ್ಲಿ ಪಿ.ಎಚ್.ಡಿ ಪಡೆದ ಕೃತಿ), ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ (ಪೂಜ್ಯ ಜಗದ್ಗುರುಗಳ ಗುರುಗಳು. ಅವರ ಆರೋಗ್ಯ ವಿಚಾರಿಸಲು ಗುರುಗಳು ಹೋದಾಗ ತಮ್ಮ ಜೊತೆಯಲ್ಲಿ ನನ್ನನೂ ಕರೆದೊಯ್ದಿದ್ದಾರೆ.) ಅವರ “ಚತುರಂಗ” ಆತ್ಮಚರಿತ್ರೆ ನನ್ನಿಂದ ತರಿಸಿಕೊಂಡು ಓದಿ, ಭಾವುಕರಾಗಿ ಕೃತಿಯ ಬಗ್ಗೆ, ನನ್ನ ಬಗ್ಗೆಯೂ ಅಭಿಮಾನದಿಂದ ಬರೆದು ಆಶೀರ್ವಾದ ಮಾಡಿದ್ದಾರೆ.
ಮುಂದೆ ನಾನು ಕರ್ನಾಟಕ ವಿಧಾನಮಂಡಲಕ್ಕೆ ಬರೆದ “ಸಂಸದೀಯಪಟು ಎಚ್. ಸಿದ್ದವೀರಪ್ಪ” ಕೃತಿಯನ್ನು ದಾವಣಗೆರೆ ಬಾಪೂಜಿ ಆಡಿಟೋರಿಯಂನಲ್ಲಿ ಬಿಡುಗಡೆ ಮಾಡಿದ್ದಲ್ಲದೆ, ತಮ್ಮ ‘ವಿಜಯ ಕರ್ನಾಟಕ’ ಅಂಕಣದಲ್ಲಿ ಬರೆದಿದ್ದಾರೆ. ಅಲ್ಲೂ ನನ್ನ ಸಾಧನೆ ಬಗ್ಗೆ ಪ್ರಸಂಶೆ ಇದೆ. ಇದು ನನಗೆ ಯಾವತ್ತೂ ಧನ್ಯತೆಯ ಭಾವವನ್ನು ಮೂಡಿಸಿದೆ.
ಇಲ್ಲಿ ಒಂದು ಘಟನೆಯನ್ನು ಸ್ಮರಿಸಲೇಬೇಕು. ದಾವಣಗೆರೆಯ ಬಾಪೂಜಿ ಸಭಾಂಗಣದ ಪುಸ್ತಕ ಬಿಡುಗಡೆಯಲ್ಲಿ ಕವಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಸಾ.ಶಿ. ಮರುಳಯ್ಯ ಅವರ “ಕೊಂಡಜ್ಜಿ ಬಸಪ್ಪ” ಕೃತಿಯೂ ಬಿಡುಗಡೆ ಆಗಿತ್ತು. ಸಮಾರಂಭದ ನಂತರ ಜಗದ್ಗುರುಗಳು “ಬೆಂಗಳೂರು ಹೋಗುವಾಗ ಮಠಕ್ಕೆ ಬಂದು ಹೋಗಿ” ಎಂದು ಸಾ.ಶಿ.ಮ ಅವರಿಗೆ ಹೇಳಿ, ನನ್ನೆಡೆ ತಿರುಗಿ, “ಇವರನ್ನ ಕರೆದುಕೊಂಡು ನೀನೂ ಜತೆಗೆ ಬಾ” ಎಂದರು.
ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ಸಿರಿಗೆರೆ ತಲುಪಿ, ಶಾಂತಿವನದಲ್ಲಿ ಶ್ರೀಗಳನ್ನು ಭೇಟಿಮಾಡಿ, ಅವರ ಜೊತೆ ಒಂದಷ್ಟು ಮಾತುಕತೆಯ ನಂತರ, ಅವರೆ ಗೌರವದಿಂದ ನೀಡಿದ ಸನ್ಮಾನ ಹಾಗೂ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದು ಹೊರಟೆವು. ದಾರಿಯಲ್ಲಿ ಸಾ.ಶಿ.ಮರುಳಯ್ಯನವರು ತುಂಬಾ ಸಂತೋಷದಿಂದ ಜಗದ್ಗುರು ಅವರ ಸರಳ ಸಜ್ಜನಿಕೆ ಬಗ್ಗೆ ಮೆಚ್ಚುಗೆ ಮಾತಾಡಿ, ಇವತ್ತು ನನ್ನ ಜೀವನದ ಮಹತ್ವದ ದಿನಗಳಲ್ಲೊಂದು ಎಂದು ಹೇಳಿದ್ದು ಇನ್ನೂ ಹಸಿರಾಗಿದೆ.
ಇನ್ನೊಂದು ಘಟನೆ: ನಾನು ಫೆಬ್ರುವರಿ ೮, ೨೦೧೯ರಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಿ ಆಯ್ಕೆಯಾದಾಗ, ವಿಶ್ವಬಂಧು ಮರುಳಸಿದ್ದನ ನೆಲೆವೀಡು ಆನಗೋಡುನಲ್ಲಿ ಸಮ್ಮೇಳನ ನಡೆಯಿತು. ಉದ್ಘಾಟನೆಯ ದಿವ್ಯಸಾನ್ನಿಧ್ಯ ವಹಿಸಬೇಕಿದ್ದ ಪೂಜ್ಯರು, ಕೊನೆ ಗಳಿಗೆಯಲ್ಲಿ (ಬಹುಶಃ ಫಿಲಿಫೈನ್ಸ್ ದೇಶ ಇರಬಹುದು) ವಿದೇಶದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿಯೂ, ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಬಗ್ಗೆ ನನ್ನ ಜೊತೆ ಮಾತಾಡಿ, ಇದನ್ನು ಅಧ್ಯಕ್ಷ ವಾಮದೇವಪ್ಪ ಅವರಿಗೆ ತಿಳಿಸು ಎಂದಿದ್ದರು. ಜಗದ್ಗುರುಗಳ ಗೈರುಹಾಜರಿಯ ಈ ವಿಷಯ ತಿಳಿಸಿದಾಗ, ವಾಮದೇವಪ್ಪನವರು “ಜಗದ್ಗುರುಗಳು ನಿಮಗೇಕೆ ಹೇಳಿದರು?” ಎಂದು ಆಶ್ಚರ್ಯದಿಂದ ಕೇಳಿ, ಆ ಕ್ಷಣ ಅದನ್ನು ನಂಬದೇ ಹೋಗಿದ್ದರು! ನಾನು ಸಮ್ಮೇಳನಾಧ್ಯಕ್ಷನಾಗಿದ್ದಾಗ ಪೂಜ್ಯರು ಭಾಗವಹಿಸಿದ್ದರೆ ನನಗೂ ನನ್ನ ಕುಟುಂಬಕ್ಕು, ನನ್ನ ಗ್ರಾಮಸ್ಥರಿಗೂ ಸಂತೋಷವಾಗುತ್ತಿತ್ತು.
ಜನಸಾಮಾನ್ಯರಿಗೆ ನಿಲುಕದ ಜಗದ್ಗುರು ಎಂಬ ಭಾವನೆ ಹೊರಜಗತ್ತಿಗೆ ಇದ್ದರೂ, ನನಗೆ ಅಗತ್ಯ ಬಿದ್ದಾಗಲೆಲ್ಲ ಪೂಜ್ಯರು ಸಿಕ್ಕಿದ್ದಾರೆ. ನನ್ನ ಕನಸನ್ನೂ ಅವರೊಂದಿಗೆ ಹಂಚಿಕೊಂಡಿದ್ದೇನೆ. ಸಂಭಾಷಣೆ ಮಾಡಿದ್ದೇವೆ. ನಿಘಂಟುತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ತರಳಬಾಳು ಸಂಸ್ಥೆ ಹಾಗೂ ಲಿಂಗೈಕ್ಯ ಗುರುಗಳ ಬಗ್ಗೆ ಹೊಂದಿದ್ದ ಪ್ರೀತಿ ಸೌಹಾರ್ದ ಸಂಬಂಧದ ಬಗ್ಗೆ ಲೇಖನ ಬರೆದುಕೊಟ್ಟಿದ್ದೇನೆ.
ನಾನು ಜಾತ್ಯತೀತ ಪರಿಕಲ್ಪನೆ ಹೊಂದಲು ಲಿಂಗೈಕ್ಯ ಗುರುಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಕಾರಣಕರ್ತರಾಗಿದ್ದರು. ನಾನಿದ್ದ ಮೈಸೂರು ಬನ್ನಿಮಂಟಪ ರಸ್ತೆಯ SSV ಹಾಸ್ಟಲ್ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಆಗ ಅವಕಾಶ ಮಾಡಿಕೊಟ್ಟಿತ್ತು. ನನ್ನ ರೂಂ ಮೂರು ಜಾತಿಗಳ ಹುಡುಗರ ಸಂಗಮವಾಗಿತ್ತು. ಒಟ್ಟಿಗೇ ಪ್ರಸಾದ, ಒಟ್ಟಿಗೇ ವಾಕು ಟಾಕು, ಒಟ್ಟಿಗೇ ಪ್ರವಾಸ… ಇಂಥ ಮಾನವೀಯ ಮೌಲ್ಯದ ಜೊತೆ “ತರಳಬಾಳು” ಪತ್ರಿಕೆಯ ವೈಚಾರಿಕ ಬರಹಗಳು… ಒಟ್ಟಾರೆ ಬಸವಣ್ಣನ ಕನಸಿನ ಸಾಕಾರತೆಯನ್ನು ಅನುಭವಿಸಿದವನು ನಾನು.
ಈ ಹಿನ್ನೆಲೆಯಲ್ಲಿ ಬೆಳೆದ ನನಗೆ ತರಳಬಾಳು ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಡಾ. ಜಗದ್ಗುರುಗಳಿಗೆ ತೃಣವೂ ಉಪದೇಶಿಸುವಷ್ಟು ದೊಡ್ಡವನಲ್ಲ. ನನ್ನ ಇಲ್ಲಿನ ಎಲ್ಲಾ ಮಾತಗಳು ನಾನೇ ಗ್ರಹಿಸಿದ್ದು. ಅನುಭವಿಸುತ್ತಿರುವುದು. ಪೂಜ್ಯರ ಯಾವುದೋ ಅಸಹನೆ, ಕೋಪ, ದ್ವೇಷ ಭಾವನೆಯ ಜೊತೆಗೆ ಸೇಡನ್ನು ಹೊಂದಿರುವುದು ಮೇಲ್ನೋಟಕ್ಕೆ ತಿಳಿದಿದ್ದರೂ, ಯಾರೂ ಬಾಯಿಬಿಟ್ಟು ಮಾತಾಡದ ಸಂದರ್ಭ, ಸನ್ನಿವೇಶ ನಿರ್ಮಾಣವಾಗಿದೆ. ತರಳಬಾಳು ಬೃಹನ್ಮಠದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಹೊರಗಿನ ಜಗತ್ತಿಗೆ ಗೊತ್ತಾಗುತ್ತಿದೆ. ಅಂಥ ಸಂದೇಶ ಹೊರಗೆ ಹರಿದಾಡುತ್ತಿದೆ.
ವಿಶ್ವಬಂಧು ಮರುಳಸಿದ್ಧನ ಭವ್ಯ ಪರಂಪರೆಯ ಮಠದಲ್ಲಿ ಹೀಗೇಕೆ ಆಗುತ್ತಿದೆ? ನನಗೂ ಹಲವು ಪ್ರಶ್ನೆಗೆ ಉತ್ತರಿಸಲಾಗದ ಸಂದಿಗ್ಧತೆ ಒದಗಿದೆ. ನೋವು, ದುಃಖ ನನಗಾಗಿದೆ. ಭಾವುಕನಾಗಿ ಕಣ್ಣೀರು ಸುರಿಸಿದ್ದೇನೆ. ಬಸವತತ್ವವನ್ನು ನಿಜ ಅರ್ಥದಲ್ಲಿ ರಾಜ್ಯ, ದೇಶದಾದ್ಯಂತ ಪ್ರಸಾರ ಮಾಡಿ, ತರಳಬಾಳು ಮಠ ಪರಂಪರೆಯ ಕೀರ್ತಿ ಮತ್ತಷ್ಟು ಹೆಚ್ಚಿಸಿದ ಸಾಣೇಹಳ್ಳಿ ಶ್ರೀ ಮಠದ ಪೂಜ್ಯರು ಮಾಡದೇ ಇರುವ ತಪ್ಪಿಗೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.
“ಮತ್ತೆ ಕಲ್ಯಾಣ”ದ ಮೂಲಕ ಬಸವಾದಿ ಶಿವಶರಣರ ತತ್ವ ಸಿದ್ಧಾಂತ, ಜಾತ್ಯತೀತ ಪರಿಕಲ್ಪನೆಯನ್ನು ನಾಡಿನಾದ್ಯಂತ ವಿದ್ಯಾರ್ಥಿಗಳು, ಯುವಜನಾಂಗ, ನಾಗರಿಕರಲ್ಲಿ ಅರಿವು ಮೂಡಿಸಲಾಗಿದೆ. ಅಲ್ಲಿನ ಉಪನ್ಯಾಸಗಳ ಬೃಹತ್ ಸಂಪುಟಗಳೇ ಪುಸ್ತಕ ರೂಪದಲ್ಲಿ ಹೊರಬಂದಿವೆ. ಆ ಕೃತಿಗಳು ಹಾಗೂ ಸಾಣೇಹಳ್ಳಿಯ ಬಸವತತ್ವದ ಉಪನ್ಯಾಸಗಳ ಕೃತಿಗಳು ಬೌದ್ಧಿಕ ಮಟ್ಟ ಹೆಚ್ಚಿಸಿವೆ. ಹಲವು ವಿವಿಗಳ ಪ್ರೊಫೆಸರ್ ಕೂಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಕಾರ ಗ್ರಂಥಗಳಿವು ಎಂದು ನನ್ನ ಬಳಿಯೇ ಹೇಳಿದ್ದಾರೆ.
ಇರಲಿ, “ಮತ್ತೆ ಕಲ್ಯಾಣ”ದಂಥ ಮಹತ್ವದ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಪಾಲುಗೊಳ್ಳದೆ ಇದ್ದಾಗ ಭಕ್ತರಲ್ಲಿ, ಮಾಧ್ಯಮದವರ ಬಾಯಲ್ಲಿ, ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು, ಅನುಮಾನಗಳು ಕಾಡಿದ್ದವು. ಸಾಣೇಹಳ್ಳಿ ಶ್ರೀಗಳು ರಂಗಭೂಮಿ ಮೂಲಕ ಶರಣ ಸಂಸ್ಕೃತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ. ನಾಡಿನ ವೈಚಾರಿಕರು, ವಿಚಾರವಾದಿಗಳು, ಬುದ್ದಿಜೀವಿಗಳು ಎಂದೂ ಮಠಗಳಿಗೆ ಕಾಲಿಡದವರು ಅಲ್ಲಿ ಬಂದು ಅಪಾರ ಮೆಚ್ಚುಗೆ ಸೂಚಿಸಿದ್ದಾರೆ.
ನನಗೆ ತಿಳಿದಂತೆ ಮುಂದೆ ಅಲ್ಲಿನ ಕಾರ್ಯಕ್ರಮಗಳ ಭಾಗವೂ ಆಗಿದ್ದಾರೆ. ಇದು ಮಹತ್ವದ ಬೆಳವಣಿಗೆ. ಹೊಸತನ್ನು ಕಟ್ಟಿ ಬೆಳೆಸುವಲ್ಲಿ ಸಾಣೇಹಳ್ಳಿ ಶ್ರೀಗಳಿಗೆ ಅಪಾರ ನಂಬಿಕೆ ಇದೆ. ಇಂಥವರು ಸರಳ ಸಜ್ಜನಿಕೆಯಿಂದ ಎಲ್ಲರೊಂದಿಗೂ ಬೆರೆತು, ಅವರ ಕಷ್ಟಸುಖ ಆಲಿಸಿದ್ದಾರೆ. ಜನ ಮನದಲ್ಲಿ ತರಳಬಾಳು ಸಂಸ್ಕೃತಿ ಮೇಲೆಕ್ಕೆತ್ತಿದ್ದಾರೆ. ಹೀಗಿದ್ದೂ ಹೊರಜಗತ್ತಿಗೆ ಗೊತ್ತಾಗಿದೆ… ಇಬ್ಬರು ಸ್ವಾಮೀಜಿಗಳ ನಡುವೆ ಅಡ್ಡಗೋಡೆ ಎದ್ದಿದೆ ಎಂದು. ಈಚೆಗೆ ಸಿರಿಗೆರೆಗೆ ಸಾಣೇಹಳ್ಳಿ ಶ್ರೀಗಳು ಬರಬಾರದೆಂದು ಜಗದ್ಗುರುಗಳು ಕಟ್ಟಪ್ಪಣೆ ಮಾಡಿದ್ದಾರೆ! ಇದೆಂಥ ವಿಚಿತ್ರ? ಇದು ಎಂದೂ ಕೇಳರಿಯದ ಆಘಾತಕರ ಸುದ್ದಿ. ಇದರಿಂದ ಸಾಣೇಹಳ್ಳಿ ಶ್ರೀಗಳಷ್ಟೇ ಅಲ್ಲ, ಅಪಾರ ಭಕ್ತರೂ ನೊಂದಿದ್ದಾರೆ. ಜಗದ್ಗುರುಗಳ ಈ ವರ್ತನೆ ಬಗ್ಗೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ.
ನಾನೊಬ್ಬ ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತ, ಸಾಹಿತಿ. ಸರ್ಕಾರದಿಂದ ಪ್ರಶಸ್ತಿ ಪಡೆದ ಅತ್ಯುತ್ತಮ ಪ್ರಕಾಶಕನೂ ಹೌದು. ತರಳಬಾಳು ಮಠಪರಂಪರೆಯ ಕುಟುಂಬದಲ್ಲಿ ಹುಟ್ಟಿ, ಅದನ್ನು ಹೆಮ್ಮೆಯಿಂದ ಸ್ವೀಕರಿಸಿದವನು. ಇಷ್ಟಾಗ್ಯೂ ನನ್ನ ಕುಟುಂಬ ಬಸವಣ್ಣನ ಕಲ್ಪನೆಯ ಜಾತ್ಯತೀತ ತತ್ವವನ್ನು ನಂಬಿಕೊಂಡಿದೆ. ಹಾಗೇ ನಡೆದುಕೊಂಡು ಬಂದು ಸಾಮರಸ್ಯ ಸೌಹಾರ್ದತೆ ಪ್ರೀತಿ ವಿಶ್ವಾಸ ಗಳಿಸಿದೆ.
ಇಷ್ಟೆಲ್ಲ ಹೇಳುವಾಗಲೂ ಅಂತಿಮವಾಗಿ ನಾನು ಏನು? ಎಂಬ ಪ್ರಶ್ನೆ ಎದುರಾಗಿದೆ. ತರಳಬಾಳು ಮಠ ಪರಂಪರೆಯ ಲಕ್ಷಾಂತರ, ಕೋಟ್ಯಾಂತರ ಭಕ್ತರು, ಹಿತೈಷಿಗಳಲ್ಲಿ ಸಾಮಾನ್ಯ ಮಾತ್ರ. ಆದರೂ, ಮಠದ ಮೇಲಿನ ಕಾಳಜಿ, ಪ್ರೀತಿಯಿಂದ ಈ ನಿವೇದನೆಯ ಮಾತು ಬರೆದಿದ್ದೇನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿಗೆ ಬದ್ಧನಾಗಿ ಘಟನೆಗಳನ್ನು ದಾಖಲಿಸಿದ್ದೇನೆ.
ಆಗಲೇ ಹೇಳಿದಂತೆ ಹೊಸತನ್ನು ಕಟ್ಟಿಬೆಳೆಸಿದ ಸಾಣೇಹಳ್ಳಿ ಶ್ರೀಗಳವರ ಅಂತರಂಗದ ಭಾವನೆ, ದುಃಖ ಹಲವರಿಗಾದರೂ ಅರ್ಥವಾಗುತ್ತದೆ. ಸಾಮಾಜಿಕ ಜಾಲತಾಣದ ಒಂದು ಗ್ರೂಪಿನಲ್ಲಿ ತರಳಬಾಳು ಹುಣ್ಣಿಮೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಣೇಹಳ್ಳಿ ಶ್ರೀಗಳ ಹೆಸರು, ಫೋಟೋ ಆಹ್ವಾನ ಪತ್ರದಲ್ಲಿ ಇಲ್ಲದ ಬಗ್ಗೆ ಅಲ್ಲಿ ಮಠದ ಹಲವಾರು ಭಕ್ತರು, ಹಿತೈಷಿಗಳು ಆತಂಕ, ನೋವು, ದುಃಖ ತೋಡಿಕೊಂಡಿರುವುದನ್ನು ಓದಿ, ಇಷ್ಟೆಲ್ಲ ಬರೆಯಬೇಕು ಅನ್ನಿಸಿತು. ತರಳಬಾಳು ಪೂಜ್ಯ ಜಗದ್ಗುರುಗಳು ತಪ್ಪು ಭಾವಿಸಬಾರದು. ತಪ್ಪಿದ್ದರೆ ಕ್ಷಮಿಸಬೇಕು.
ಈ ಸಂದರ್ಭದಲ್ಲಿ ನಾವು ಚಿಕ್ಕವರಿದ್ದಾಗ ಆಡುತ್ತಿದ್ದ ಆಟ ನೆನಪಾಯಿತು. ಮಕ್ಕಳು ವೃತ್ತಾಕಾರವಾಗಿ ತಲೆ ತಗ್ಗಿಸಿ ಕೂತು ಟೊಪ್ಪಿ ಆಟ ಆಡುತ್ತಿದ್ದ ಸಂದರ್ಭವದು. ಕೈಯಲ್ಲಿ ಟೊಪ್ಪಿಗೆ ಹಿಡಿದವನೊಬ್ಬ “ಕಾನ್ ಕಾನ್ ಉತ್ತುತ್ತಿ” ಎಂದು ಸುತ್ತುತ್ತ ಗಟ್ಟಿಯಾಗಿ ಹೇಳುತ್ತಿದ್ದರೆ, ತಲೆ ತಗ್ಗಿಸಿ ಕೂತವರು “ಎಲ್ಲಿಗೆ ಬಂತು ಸಂಗಯ್ಯ?” (“ಕಾನ್ ಕಾನ್ ಉತ್ತುತ್ತಿ ಎಲ್ಲಿಗೆ ಬಂತು ಸಂಗಯ್ಯ?”) ಎಂದು ಎರಡು ಸುತ್ತು ಬರುತ್ತಿದ್ದಂತೆ ಅವನು ಯಾರದೋ ಹಿಂದೆ ಆ ಟೊಪ್ಪಿ ಹಾಕುತ್ತಿದ್ದ. ತಲೆತಗ್ಗಿಸಿ ಕೂತ ಒಬ್ಬನಿಗೆ ಅದು ಗೊತ್ತಾದರೆ ಅವನು ಗಡಿಬಿಡಿಯಲ್ಲಿ ಎದ್ದು ಟೊಪ್ಪಿ ಹಾಕಿದವನಿಗೆ ಬೆನ್ನತ್ತಿ ಹೋಗಿ ಆ ಟೊಪ್ಪಿಗೆಯಿಂದ ಒದೆಯಬೇಕು. ಅಷ್ಟರಲ್ಲಿ ಎದ್ದು ಹೋದವನ ಜಾಗದಲ್ಲಿ ಇವನು ಕೂರಬೇಕು. ಮತ್ತೆ ಟೊಪ್ಪಿ ಆಟ ಮುಂದುವರೆಯುತ್ತದೆ. ಸಿರಿಗೆರೆಯಲ್ಲಿ ನಡೆಯುತ್ತಿರುವುದೂ “ಕಾನ್ ಕಾನ್ ಉತ್ತುತ್ತಿ, ಎಲ್ಲಿಗೆ ಬಂತು ಸಂಗಯ್ಯ?” ಆಟವೆ.
ಪೂಜ್ಯ ಜಗದ್ಗುರು ಅವರು ರೈತಪರ ಕಾಳಜಿಯಿಂದ ಹೊಸ ತಂತ್ರಜ್ಞಾನ ಸೃಷ್ಟಿಸಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಿದವರು. ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಕನಸುಕಂಡು, ಅದನ್ನು ಸಾಕಾರಗೊಳಿಸಿದ ಆಧುನಿಕ ಭಗೀರಥ ಅನ್ನಿಸಿಕೊಂಡವರು. ರಾಜ್ಯದಲ್ಲಿ ಬರ ಬಂದಾಗ ದನಕರುಗಳಿಗೆ ಮೇವು, ಜನರಿಗೆ ದವಸ ಧಾನ್ಯ ನೀಡಿದ ಮಾನವೀಯ ನೆಲೆಯವರು. ಸಾಹಿತ್ಯದ ಗಂಭೀರ ಓದುಗರು, ಅತ್ಯುತ್ತಮ ಗದ್ಯ ಬರಹಗಾರರು. ಎರಡು ದಶಕಗಳಿಂದ ಬರೆಯುತ್ತಿರುವ ಬಹುಧೀರ್ಘ ಕಾಲದ ಅಂಕಣಕಾರರು. ವಚನಗಳನ್ನು ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಜಗತ್ತಿಗೇ ಪರಿಚಯಿಸಿದ ಮೊದಲ ಜಗದ್ಗುರುಗಳು.
ಈಗಿನ ಕಲುಷಿತ ವಾತಾವರಣ ಅವರೆ ತಿಳಿಗೊಸಬೇಕು. ಬಾಯಿಬಿಡದೇ ಒಳಗೊಳಗೇ ನೋವು ತಿನ್ನುತ್ತಿರುವ ಲಕ್ಷಾಂತರ ಭಕ್ತರ ಅಂತರಂಗದ ಭಾವನೆ ಅರ್ಥಮಾಡಿಕೊಳ್ಳಬೇಕು. ಈ ಬರಹ ಬರೆವ ಸಂದರ್ಭಕ್ಕೆ ಸಿರಿಗೆರೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಗೆ ತೆರೆಬೀಳುತ್ತಿದೆ.
ಹುಣ್ಣಿಮೆಗೆ ಕರಿಮೋಡ ಮುಸುಕಿದ್ದನ್ನು ದೂರಮಾಡಿ ಸ್ವಚ್ಛ ಹಾಗೂ ಶುಭ್ರ ನೀಲಾಕಾಶದಲ್ಲಿ ಸೂರ್ಯ ಕಿರಣ ಎಲ್ಲೆಲ್ಲೂ ಪಸರಿಸುವಂತೆ ಮಾಡಲಿ. ಜೊತೆಗೆ ಪೂರ್ಣಿಮೆಯ ಬೆಳದಿಂಗಳ ತಂಪು ಆವರಿಸಿ ಮೊದಲಿನ ಮಧುರ ಬಾಂಧವ್ಯ ಇಬ್ಬರು ಸ್ವಾಮೀಜಿಗಳಲ್ಲಿ ಮೂಡಲಿ ಎಂಬ ಆಶಯದೊಂದಿಗೆ, ಕನಸುಗಳ ಆಶಾಭಾವನೆಯಿಂದ ನನ್ನ ಕೆಲವು ಮಾತಿಗೆ ತೆರೆ ಎಳೆಯುತ್ತೇನೆ.
ಕೊನೆಯದಾಗಿ, ಗಿರೀಶ ಕಾರ್ನಾಡರ ನಾಟಕದ ಈ ಸಾಲುಗಳು ನೆನಪಾಗುತ್ತಿವೆ:
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದಾದರೂ ಹೇಗೆ?”
ಆರ್ ಜಿ ಹಳ್ಳಿ ನಾಗರಾಜ
ಪತ್ರಕರ್ತ – ಸಾಹಿತಿ.