ದ ಪಾಲಿಟಿಕ್

ಅಪಘಾತಕ್ಕೆ ಒಳಗಾಗಿ ಕೊಟ್ಯಾಧಿಪತಿಯಾದ ಚಾಲಾಕಿ ಸ್ವಾಮಿ…

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಈಗ ಅಪಘಾತ ಎಂಬುದು ದಿನನಿತ್ಯದ ವಿದ್ಯಮಾನವಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲೂ ಅಧಿಕಾರಿಗಳ ಲಂಚಗುಳಿತನ, ರಾಜಕಾರಣಿಗಳ ಪಾಲು, ಕಳಪೆ ಕಾಮಗಾರಿ, ಬೇಕಾಬಿಟ್ಟಿ ವಾಹನ ಚಾಲನೆ ಮುಖ್ಯವಾಗಿವೆ. ದೇಶದಲ್ಲಿ ದಿನನಿತ್ಯ ಸಾವಿರಾರು ಅಪಘಾತಗಳು ಘಟಿಸುತ್ತಲೇ ಇರುತ್ತದೆ. ಈ ಘಟನೆಗೆ ಒಳಗಾದ ಜನರು ಒಂದು, ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಇಲ್ಲವೇ ಅಂಗವಿಕಲರಾಗಿ ಅಥವಾ ಆಸ್ಪತ್ರೆಯ ಓಡಾಟದಿಂದ ಮನೆಮಠ ಕಳೆದುಕೊಳ್ಳುತ್ತಾರೆ. ಹಲವರು ಪವಾಡ ಸದೃಶವಾಗಿ ಸಣ್ಣ ಪುಟ್ಟ ಗಾಯವೂ ಆಗದಂತೆ ಬಚಾವ್ ಆಗುತ್ತಾರೆ.  ಇವರಲ್ಲಿ ಬಹುತೇಕರು ʼಇದು ನನ್ನ ಪುನರ್‌ಜನ್ಮʼ ಎಂದು ನಂಬಿ ದೇವರಿಕೆ ಹರಕೆ ತೀರಿಸಲು ನಿರತರಾಗುತ್ತಾರೆ.

ಇನ್ನೂ ಒಂದು ಕೆಟಗರಿ ಜನ ಇದ್ದಾರೆ. ಅವರು ಅಪಘಾತಕ್ಕೆ ಒಳಗಾದಾಗ ಅಥವಾ ಅವರೇನೇ ಮಾಡಿದರೂ, ಅವರ ಸುತ್ತಲೂ ‍ಏನೇ ಘಟಿಸಿದರೂ, ಏನೇ ಆದರೂ ಅದರಿಂದಾಗಿ ಆರ್ಥಿಕವಾಗಿ ಲಾಭ ಪಡೆಯುವುದು ಹಾಗೂ ಜನರ ಅನುಕಂಪ ಗಳಿಸುವುದು ಹೇಗೆಂದು ಯೋಜನೆ ರೂಪಿಸುತ್ತಾರೆ. ಇಂತಹ ಸಾಲಿಗೆ ಸೇರಿದ ಐನಾತಿ ಸ್ವಾಮಿ ಒಬ್ಬ ಅಪಘಾತದಿಂದಾಗಿ ಲಾಭ ಪಡಯಲು ಮುಂದಾಗಿದ್ದಾರೆ. ಈ ಸ್ವಾಮಿ ಜೀವಂತವಾಗಿ ಬದುಕುಳದಿದ್ದಾನೆಂದು ಭಕ್ತರು ಲಕ್ಷಲಕ್ಷ ರೂಪಾಯಿಗಳು ಅವರ ಪಾದಕ್ಕೆ ಅರ್ಪಿಸಿ ಪಾವನವಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ಮಾಮೂಲಿ ಪ್ರಹಸನ ಎಂದೇನಿಸಬಹುದು. ಆದರೆ, ಇದರಲ್ಲೊಂದು ಗಿಮಿಕ್‌ ಇರುತ್ತದೆ.

ಮೊದಲು ತಮ್ಮ ಅತ್ಯಾಪ್ತ ಜನರಿಗೆ ತಾವೇ ತಮ್ಮ ಮಠದಿಂದ ದೊಡ್ಡ ಮೊತ್ತದ ಹಣ ಕೊಟ್ಟು, ಸಾರ್ವಜನಿಕವಾಗಿ ಅದೇ ಹಣ ಕಾಣಿಕೆ ರೂಪದಲ್ಲಿ ವಾಪಸ್‌ ಪಡೆಯುತ್ತಾರೆ. ಈ ಮೂಲಕ ಒಂದು ಸಮೂಹ ಸನ್ನಿ ರೂಪಿಸಿ, ಜನರು ತಾವಾಗಿಯೇ ಹಣ ನೀಡುವಂತಹ ಒಂದು ವಾತಾವರಣ ಸೃಷ್ಟಿಸುತ್ತಾರೆ.  ಆಗ ಜನರು ಅನಿವಾರ್ಯವಾಗಿ ಹಣ ನೀಡಲು ನಾಮುಂದೆ – ತಾಮುಂದೆ ಎಂದು ಬರುತ್ತಾರೆ.  ಸ್ವಾಮಿತ್ವವನ್ನು ಅಥವಾ ಸಂತತನವನ್ನು ಪಕ್ಕದೂರಿನ ಸಂತೆಯಲ್ಲಿ ಮಾರಾಟ ಮಾಡಿದ ನಾಟಕೀಯ ಸ್ವಾಮಿಗಳು ಮಾತ್ರ ಇಂತಹ ನೀಚತನಕ್ಕೆ ಇಳಿಯುತ್ತಾರೆ.  ಕನಿಷ್ಠ ನೈತಿಕತೆ ಇರುವ ಯಾರೂ ಸಹ ಇಂತಹ ಕಣ್ಣಾಮುಚ್ಚಾಲೆ ಆಟಕ್ಕೆ ಕೈಹಾಕುವುದಿಲ್ಲ.

ಇದೇ ತರಹದ ಯಥಾವತ್ ಹೈಡ್ರಾಮಾ ಇಲ್ಲಿ ನಡೆಯತ್ತಿದೆ.‌ ಇದು ಫಿಲಂ ಕಥೆಯಲ್ಲ. ನಡೆದ ನೈಜ ಘಟನೆ. ಈತ ಸಾಮಾನ್ಯ ಸ್ವಾಮಿಯಲ್ಲ ಜನರಿಂದ ನಡೆದಾಡುವ ದೇವರು, ಭಗವಂತನ ಅಪರಾವತಾರ, ದೈವಾಂಶ ಸಂಭೂತ, ಸಾಕ್ಷಾತ್‌ ದೇವರ ಅವತಾರ, ಪವಾಡ ಸ್ವಾಮಿ, ಭಾರಿ ಪವರ್ ಫುಲ್‌ ಸ್ವಾಮಿ ಇತ್ಯಾದಿ ಪದಪುಂಜಗಳಿಂದ ಕರೆಯಿಸಿಕೊಳ್ಳುವ ಈ ಸ್ವಾಮಿ ಮೊನ್ನೆ ಆಕಸ್ಮಿಕವಾಗಿ ಸಣ್ಣ ಅಪಘಾತಕ್ಕೆ ಒಳಗಾಗಿದ್ದಾರೆ. ಅಪಘಾತವಾದರೇ ಜನರು ಆಸ್ಪತ್ರೆಯ ಚಕ್ಕರ್‌ ಹಾಕಿ ಹಾಕಿ ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಹಾಗೂ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಆದರೆ ಇಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಅಪಘಾತ ಆದಮೇಲೆ ಈ ಸ್ವಾಮಿ ಕೋಟ್ಯಾಧಿಪತಿ ಆಗಿದ್ದಾರೆ. ಅದಲ್ಲದೇ ಇವರು ʼಸಾವಿಲ್ಲದ ಇಚ್ಛಾ ಮರಣಿ. ಇವರಿಗೆ ಏನೇನು ಅಗುವುದಿಲ್ಲ. ಇವರು ಬದುಕುಳಿದದ್ದು ಪವಾಡವಲ್ಲ, ಈ ಅಪಘಾತವೇ ಅವರ ಶಕ್ತಿಯ ಒಂದು ಪರೀಕ್ಷೆ ʼ ಎಂದು ಜನರ ವರ್ಣನೆಗೆ ಒಳಗಾಗಿದ್ದಾರೆ. 

ಈ ಸ್ವಾಮಿ ಎಂತಹ ಆಸಾಮಿ ಎಂದರೆ ಅಪಘಾತದಲ್ಲಿ ತನ್ನ ಎದುರಿಗಿದ್ದ ವಾಹನದ ಚಾಲಕ ಬದುಕಿದ್ದಾನೋ, ಇಲ್ಲವೋ ಎಂದು ವಿಚಾರಿಸುವ ಗೋಜಿಗಾಗಲಿ, ತಾನು ಜನರಿಂದ ಪೀಕಿಸಿದ ಹಣದಿಂದ ಆಸ್ಪತ್ರೆಯ ಸಣ್ಣಪುಟ್ಟ ಖರ್ಚಿಗಾಗಿ ಚಿಕ್ಕಾಸಾದರೂ ಆ ಚಾಲಕನಿಗೆ ನೀಡಲು ಈವರೆಗೂ ಮುಂದೆ ಬಂದಿಲ್ಲ. ಕನಿಷ್ಠ ಮಾನವೀಯತೆ ಇಲ್ಲದ ಇಂತವರನ್ನು ತಮ್ಮ ಜಾತಿಯ ಜನರು ದೇವಮಾನವರು, ದೈವಾಂಶ ಸಂಭೂತರು, ಸ್ವಾಮಿಗಳು, ನಡೆದಾಡುವ ದೇವರು…ಮುಂತಾದ ಪದಪುಂಜಗಳಿಂದ ಬಣ್ಣಿಸುತ್ತಾರೆಂದರೇ ಇದು ಕೆಡುಗಾಲವಲ್ಲದೇ ಇನ್ನೇನು?

ಜನರ ಮುಗ್ದತೆ, ಧಾರ್ಮಿಕ ಮೌಢ್ಯತೆಯನ್ನು ತನ್ನ ಬಂಡವಾಳ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸುತ್ತಿರುವ ಈತನ ಮಠಕ್ಕೆ ಕಾಲಿಟ್ಟರೇ ಇದೇನೋ ಮಠವೋ ಅಥವಾ ಐಷಾರಾಮಿ ಬಂಗಲೆಯೋ ಎಂದು ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಆಂತರ್ಯದಲ್ಲಿ ಪಕ್ಕಾ ಜಾತಿ\ಉಪಜಾತಿ ಪ್ರಿಯನಾದ ಈತ ಮಾರುಕಟ್ಟೆ ನೋಡಿಕೊಂಡು ಆಗಾಗ್ಗೆ ಬಸವಣ್ಣನವರ ಬಗ್ಗೆಯೂ ಬಡಬಡಿಸುತ್ತಾರೆ. ಎಷ್ಟೇ ಚಾಲಾಕಿತನ ತೋರಿಸಿದರೂ, ಸರ್ಕಸ್‌ ಮಾಡಿದರೂ ಎರಡ್ಮೂರು ತಾಲೂಕಿಗೆ ಮಾತ್ರ ಇವರ ಕೈಚಳಕ ನಡಯುತ್ತಿದೆ. ಅದು ತಮ್ಮ ಜಾತಿ\ಉಪಜಾತಿಯು ಜನರ ನಡುವೆ ಮಾತ್ರ. ಇದು ಈತನ ಮಿತಿಯೂ ಹೌದು, ಶಕ್ತಿಯೂ ಹೌದು. ಬೇರೆ ಕಡೆ ಜನರು ಇತನ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. 

ಈತ ನಡೆದಾಡುವ ದೇವರೆಂದು [ಕು]ಖ್ಯಾತಿ ಗಳಿಸಿದ್ದಾನೆ. ಜನಸಾಮ್ಯಾನರಂತೆ ಅಪಘಾತಕ್ಕೆ ಒಳಗಾಗುವವನು, ಕನಿಷ್ಠ ಮಾನವೀಯತೆ ಇಲ್ಲದ ಇಂತಹ ಗಿರಾಕಿಗಳು ಅದು ಹೇಗೆ ದೇವಮಾನವನಾಗುತ್ತಾರೋ? ನಡೆದಾಡುವ ದೇವರಾಗುತ್ತಾರೋ? ದೈವಾಂಶ ಸಂಭೂತನಾಗುತ್ತಾನರೋ? ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಅದೇನೇ ಇರಲಿ ಸ್ವಾಮಿಗಳಾಗಲಿ, ಸಾಮಾನ್ಯ ಜನರಾಗಲಿ ಯಾರೂ ಕೂಡ ಅಪಘಾತವೆಂಬ ದುರ್‌ಘಟನೆಗೆ ಒಳಗಾಗಬಾರದು. ದೇಹ – ಜೀವಕ್ಕೆ ಬೆಲೆ ಕಟ್ಟಲಾಗದು. ಪ್ರತಿಯೊಂದು ಜೀವ ಅಮೂಲ್ಯವಾದದ್ದು. ಹಾಗೆಯೇ ಅಚಾನಕ್‌ ಅಪಘಾತಕ್ಕೆ ಒಳಗಾಗಿ ಬದುಕುಳಿದವರು ಅದೇ ವಿಷಯ ಮುಂದುಟ್ಟಿಕೊಂಡು ವ್ಯಾಪಾರ ಮಾಡಬಾರದು. ಈ ಪ್ರಜ್ಞೆ ಜನಸಾಮಾನ್ಯರಲ್ಲಿದೆ. ಆದರೆ ಈ ದೇವಮಾನವರಿಗೆ ಯಾರು ʼಬುದ್ಧಿವಾದʼ ಹೇಳಬೇಕು?

ಸಮಾಜದಲ್ಲಿ ಇಂತಹ ವೇಷಧಾರಿಗಳೆಲ್ಲ ಸ್ವಾಮಿಗಳೆಂದು ಕರೆಯಲಾರಂಭಿಸಿದರೆ, ನಿಜವಾದ ಸ್ವಾಮಿಗಳಿಗೂ ಬೆಲೆ ಇಲ್ಲವಾದೀತು.

ಗಮನಕ್ಕೆ – ಈ ಸ್ವಾಮಿ ಯಾರೆಂದು ಹುಡುಕುವ ಅಥವಾ ಅವರಿವರಿಗೆ ಕೇಳುವ ಸಾಹಸಕ್ಕೆ ಮುಂದಾಗಬೇಡಿ. ಘಟನೆ ಅಥವಾ ಸನ್ನಿವೇಶ ಬೇರೆ ಬೇರೆ ಇರಬಹುದು. ಆದರೆ ನಮ್ಮ ಸುತ್ತಲೂ ಇಂತಹ ಚಾಲಾಕಿತನದ, ಕನಿಷ್ಠ ಮಾನವೀಯತೆಯಾಗಲಿ, ನೈತಿಕತೆಯಾಗಲಿ ಇಲ್ಲದ ಧಾರ್ಮಿಕ ವ್ಯಾಪಾರಿಗಳೇ ತುಂಬಿದ್ದಾರೆ ಎಂಬುದು ದಿಟ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!