ಅದೇನೋ ಗೊತ್ತಿಲ್ಲ ಈ ವ್ಯವಸ್ಥೆಯಲ್ಲಿ ಆಳುವ ವರ್ಗದ ಗುಣವೆ ಹಂಗಿದೆ ಅನಿಸುತ್ತೆ .ಮುಟ್ಟಲಾರದವನ ಒಡಲಾಳದ ನೋವು ಕೇಳಿಸಿಕೊಳ್ಳಲಾದರದ ಆಳುವ ಸರ್ಕಾರಗಳು, ಬಲಾಢ್ಯರ ಧಮ್ಕಿಯನ್ನು ಒಮ್ಮೆಲೇ ಕೇಳಿಸಿಕೊಂಡು ಪರಿಹಾರಕ್ಕೆ ಮುಂದೆ ಆಗುತ್ತವೆ. ಈ ಒಳಮೀಸಲಾತಿಯ ಹೋರಾಟ ಇಂದಿನದಲ್ಲ; ಇದು ಮೂರು ದಶಕಗಳ ಹೋರಾಟ .ಈ ಹೋರಾಟದಲ್ಲಿ ಎಷ್ಟೋ ಜನರ ತ್ಯಾಗವಿದೆ. ಜೀವದ ಹಂಗು ತೊರೆದು, ಹೋರಾಟ ಮಾಡಿ, ಆಳುವ ಸರಕಾರಗಳ ಬೂಟು – ಲಾಟಿ ಏಟು ತಿಂದಿದ್ದಾಗಿದೆ. ಹೋರಾಟಕ್ಕೆಂದು ತಿಂಗಳುಗಟ್ಟಲೆ ಮನೆ – ಮಠ ತೊರೆದು ಬಂದ ಪರಿಣಾಮ ಹಲವರ ಕುಟಂಬ ಇಂದು ಬಿದಿಗೆ ಬಂದಿವೆ . ಕೆಲ ಹೋರಾಟಗಾರರ ಜೀವವು ಹೋಗಿ ಆಗಿದೆ. 30 ವರ್ಷಗಳ ಸುದೀರ್ಘವಾದ ಹೋರಾಟ ಮಾಡಿದ್ದರೂ ಆಳುವ ಸರಕಾರಕ್ಕೆ ಈ ದನಿ ಇಲ್ಲದ ಸಮುದಾಯದ ಮೇಲೆ ಕರುಣೆ ಬರದೇ ಮತ್ತದೆ ಅಸಡ್ಯಭಾವ. ಅದೇಕೊ ಆ ದೇವನೆ ಬಲ್ಲ.
ಮೀಸಲಾತಿ ಅಂದರೆ ಅದು ಬಡತನ ನಿರ್ಮೂಲನೆ ಯೋಜನೆಯೂ ಅಲ್ಲ, ಜಾತಿ ವಿನಾಶ ಕಾರ್ಯಕ್ರಮವೂ ಅಲ್ಲ. ಅದು ಪ್ರಾತಿನಿಧ್ಯತೆಗಾಗಿ ಇರುವುದು. ಚಾತುರ್ವರ್ಣದ ಕಾರಣದಿಂದ ಶತಶತಮಾನಗಳಿಂದ ಈ ನೆಲದಲ್ಲಿ ಅನೇಕ ಸಮುದಾಯಗಳು ಶೋಷಣೆಗೆ ಒಳಗಾಗಿವೆ. ಇಂತಹ ಸಮುದಾಯಗಳಿಗೆ ಪ್ರಾತಿನಿಧ್ಯತೆ ಅರ್ಥಾತ್ ಅಧಿಕಾರದ ಹಂಚಿಕೆಗಾಗಿ ಈ ಮೀಸಲಾತಿ ಜಾರಿಗೆ ತಂದದ್ದು. ಇದಕ್ಕೆ ಸುದೀರ್ಘ 102 ವರ್ಷಗಳ ಇತಿಹಾಸವಿದೆ. ಬ್ರೀಟಿಷರ ಕಾಲದಲ್ಲೇ ಇದು ಜಾರಿಗೆ ತರಲಾಗಿತ್ತು. ಇದು ಈ ದಪ್ಪ ಚರ್ಮದ ಸರಕಾರಕ್ಕೆ ಇಂದಿಗೂ ಅರ್ಥವಾಗುತ್ತಿಲ್ಲ. ಅರ್ಥವಾದರೂ ಸಹ ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮರೆತಂತೆ ನಟಿಸುತ್ತಿದೆ.
ಇದನ್ನೂ ಓದಿ : ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿಲ್ಲವೆಂದು ವೈದ್ಯಕೀಯ ವರದಿ ಸ್ಪಷ್ಟನೆ!
1911ರ ಜನಗಣತಿಯಲ್ಲಿ ಅಸ್ಪ್ರಶ್ಯರನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿ ಆ ಸಮುದಾಯಗಳನ್ನು ಅಸ್ಪ್ರಶ್ಯರೆಂದು, 1921ರಲ್ಲಿ ನಿಮ್ನವರ್ಗವೆಂದು,1931ರಲ್ಲಿ ಪರಿಶಿಷ್ಟ ಜಾತಿಯೆಂದು ಗುರುತಿಸಲಾಗಿದೆ.1972ರಲ್ಲಿ ಕರ್ನಾಟಕದ ಹಾವನೂರು ವರದಿ ಪರಿಶಿಷ್ಟ ಜಾತಿಗೆ ಇನ್ನೂಷ್ಟು ಕೆಲವು ಜಾತಿಗಳನ್ನು ಸೇರಿಸಿ, 1977ರಲ್ಲಿ ಸಂವಿಧಾನಾತ್ಮಕ ತಿದ್ದುಪಡಿ ಮಾಡಿ, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳನ್ನಾಗಿ ಮಾಡಿತು.ಕೊಟ್ಟಿದ್ದು ತಪ್ಪಲ್ಲ. ಆದರೆ ಅದು ಪರಿಶಿಷ್ಟ ಜಾತಿಯಲ್ಲಿರುವ ಸಮುದಾಯಗಳಿಗೆ ಜನಸಂಖ್ಯಾ ಅನುಗುಣವಾಗಿ ಪ್ರಾತಿನಿಧ್ಯತೆ ದೊರೆತ್ತಿಲ್ಲ. ಮೀಸಲಾತಿ ಸಾಮಾಜಿಕ ನ್ಯಾಯದ ಮೊದಲನೇ ಹಂತವಾದರೆ, ಒಳಮೀಸಲಾತಿ ಎರಡನೆ ಹಂತವಾಗಿದೆ. ಒಳಮಿಸಲಾತಿಯ ಪರಿಕಲ್ಪನೆ ಅತ್ಯಂತ ವೈಜ್ಞಾನಿಕವಾಗಿದೆ. ಆದರಿದು ಪರಿಶಿಷ್ಟ ಜಾತಿಯಲ್ಲಿರುವ ಕೆಲ ಸಮುದಾಯಗಳಿಗೆ ಅರ್ಥ ಆಗುತ್ತಿಲ್ಲ. ಕೆಲವು ರಾಜಕೀಯ ಮರಿ ಪುಢಾರಿಗಳು ತಮ್ಮ ರಾಜಕೀಯ ಬೆಳವಣಿಗೆಗಾಗಿ ಕೆಲ ಸಮುದಾಯದ ದಾರಿ ತಪ್ಪುಸುತ್ತಿದ್ದಾರೆ.
ಕರ್ನಾಟಕದಲ್ಲಿ ಒಳಮೀಸಲಾತಿಯ ಹೋರಾಟ ತೀವ್ರವಾದಾಗ 2005ರಲ್ಲಿ ಜಸ್ಟಿಸ್ ಎ. ಜೆ. ಸದಾಶಿವ ಆಯೋಗ ರಚಿಸಿ, 2012ರಲ್ಲಿ ಅದರ ವರದಿ ಸಲ್ಲಿಕೆಯಾಯಿತು. ನಂತರ ಅದರ ಚರ್ಚೆ, ವಾಗ್ವಾದಗಳು ಪ್ರಾರಂಭವಾಗಿದ್ದೆ ತಡ ಆಳುವ ಸರಕಾರಗಳಿಗೆ ಇದೊಂದು ರಾಜಕೀಯ ತಂತ್ರವೆ ಆಗಿ ಹೋಯಿತು. ಅನೇಕ ಸರಕಾರಗಳು ಬಂದು ಹೋದರು ಒಳಮೀಸಲಾತಿಯೂ ಇಂದಿಗೂ ಪ್ರಶ್ನೆಯಾಗಿ ಮತ್ತು ರಾಜಕೀಯ ತಂತ್ರವಾಗಿಯೇ ಉಳಿಯುತು.
ಪರಿಶಿಷ್ಟ ಜಾತಿಯಲ್ಲಿ ಇಂದಿಗೂ ಮೀಸಲಾತಿ ಮುಟ್ಟಲಾರದಂತ ಅನೇಕ ಸಮುದಾಯಗಳಿವೆ. ಅವುಗಳಿಗೆ ಈ ಮೀಸಲಾತಿ ಮುಟ್ಟಿಸುವುದು ಹೇಗೆಂದು ಎಂದೂ ಚಿಂತಿಸಲೆ ಇಲ್ಲ. ಒಗ್ಗಟ್ಟೆ ಬಲ; ಒಡಕೇ ಕೆಡಕು. ನಾವುಗಳು – ನೀವುಗಳು ಒಟ್ಟಾಗಿರೋಣ, ಒಗ್ಗಟ್ಟಾಗಿರೋಣ ಅಂತ ಹೇಳುವ ತೋಳಗಳ ಆ ಕುತಂತ್ರವನ್ನು ಈ ಅಸ್ಪ್ರಶ್ಯ ಕುರಿಗಳು ಅರಿಯಲೇ ಇಲ್ಲ. ಅದರ ಫಲವನ್ನು ಉಂಡವರು ಇನ್ನೂಬ್ಬರ ಪ್ಲೆಟ್ ನಲ್ಲಿರುವ ಅನ್ನವನ್ನು ಕಸಿದುಕೊಳ್ಳುತಿದ್ದೆವೆ ಎಂದು ಗೊತ್ತಿದ್ದರೂ ದಲಿತ ಸಮುದಾಯಗಳನ್ನು ಒಡೆದು ಆಳುವಂತೆ ಮಾಡಿದವು.
ಜನಸಂಖ್ಯೆಯ ಅನುಗುಣವಾಗಿ ಹಂಚಿ ತಿಂದರೆ ಯಾರಿಗೂ ತೊಂದರೆಯಿಲ್ಲ. ಆದರೆ ಸ್ವಾರ್ಥ ಪರವಾದ ಸ್ಪ್ರಶ್ಯ ಸಮುದಾಯಗಳು ಅದು ಆಗದಂತೆ ಆಳುವ ಸರಕಾರದ ಮೇಲೆ ಒತ್ತಡ ಹಾಕುತ್ತಲೆ ಇವೆ. ಆಳುವ ಸರಕಾರಗಳು ಅವರ ಒತ್ತಡಕ್ಕೆ ಮಣಿದು ಅಸ್ಪ್ರಶ್ಯರಿಗೆ ಸದಾಶಿವ ಆಯೋಗ ವರದಿ ಮರೀಚಿಕೆಯಾಗಿದೆ. ಭೂತಗಳಿಗೆ ಕೆಲವೊಂದು ಸಲ ದಯೆ ಬರಬಹುದು. ಸತ್ಯವೂ ಹೇಳಬಹುದು. ಬೇತಾಳಗಳು ಆತ್ಮನಿಗೆ ನಾಚಬಹುದು. ದೇವನಿಗೆ ಅಂಜಬಹುದು. ಆದರೆ ರಾಜಕಾರಣಿಗಳ ಆತ್ಮ ನಾಚಲೇ ಇಲ್ಲ. ದೇವನಿಗೂ ಅಂಜಲೇ ಇಲ್ಲ. ಈ ಸಮುದಾಯಗಳು ಯಾರನ್ನು ಕೇಳಬೇಕು. ಬೆಲಿಯೇ ಎದ್ದು ಹೊಲವನ್ನು ಮೇಯ್ಯುವಾಗ ಯಾರಿಗೆ ದೂರಬೇಕು .
ಬಲಾಢ್ಯ ಸಮುದಾಯಗಳ ಎದುರು ಬಾಗಿ ನಿಂತು ಚಾಕರಿ ಮಾಡುವ ರಾಜಕಾರಣಿಗಳ, ಬೇವರು ಸುರಿಸದೇ ಮೃಷ್ಟಾನ್ನ ಉಣ್ಣುವ ಸ್ವಾಮಿಗಳ ಮುಂದೆ ಮೊಳಕಾಲೂರಿ ಬೇಡುವುದಕ್ಕಿಂತ, ಸ್ವಾಭಿಮಾನದಿಂದ ನಮ್ಮ ಹಕ್ಕು ಸಲುವಾಗಿ ಜೀವತೊರೆದು ಹೋರಾಟ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಒಳಮೀಸಲಾತಿ ದೂರದ ಬೆಟ್ಟವೆ ಸರಿ.