ದ ಪಾಲಿಟಿಕ್

ಶೃಂಗೇರಿ ಕ್ಷೇತ್ರ : ಜೀವ-ರಾಜೇಗೌಡರ ಮಧ್ಯೆ ಸಮಬಲದ ಹೋರಾಟ?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಶೃಂಗೇರಿ ಕ್ಷೇತ್ರ ಗಾಂಧಿವಾದಿ ದಿವಂಗತ ಹೆಚ್‌.ಜೆ.ಗೋವಿಂದೇಗೌಡರು ನಡೆದಾಡಿದ ನೆಲ. ಇದು  ಒಕ್ಕಲಿಗರ  ಪ್ರಾಬಲ್ಯವುಳ್ಳ ಕ್ಷೇತ್ರ; ಆದರೆ ಕ್ಷೇತ್ರದ ತುಂಬೆಲ್ಲಾ ಹಿಂದೂತ್ವದ ರೆಂಬೆಕೊಂಬೆ ಪ್ರಬಲವಾಗಿ ಹರಡಿವೆ.

ಪ್ರಶಕ್ತ “ಜೀವ-ರಾಜೇಗೌಡರ” ನಡುವೆ ಸಮಬಲದ ಸ್ಪರ್ಧೆಯಲ್ಲೇ ಶೃಂಗೇರಿ ಕ್ಷೇತ್ರ ಸಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅದೃಷ್ಟ ಎಂದರೆ ಶೃಂಗೇರಿ ಕ್ಷೇತ್ರದಲ್ಲಿ “ಕಾಂಗ್ರೆಸ್ ಪಕ್ಷದ‌ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಾರೆ”. ಈ ಕ್ಷೇತ್ರ ಹೊರತುಪಡಿಸಿ ಚಿಕ್ಕಮಗಳೂರು ಜಿಲ್ಲೆಯ ಬೇರೆ  ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ “ಟಿಕೆಟ್ ವಂಚಿತ”ರೆಲ್ಲರೂ ತನ್ನ ಆಪ್ತ ಬೆಂಬಲಿಗರೊಂದಿಗೆ ರಾತ್ರಿ ಸಮಯದಲ್ಲಿ ಬಿಜೆಪಿಗೆ ಜಿಗಿದು, ಬಿಜೆಪಿಯವರಿಗಿಂತಲೂ ಹೆಚ್ಚು ನಿಷ್ಠರಾಗಿ ದುಡಿಯುವುದು ಜಿಲ್ಲೆಯಲ್ಲಿ ಮಾಮೂಲಿಯಾಗಿದೆ. ಸದ್ಯ ಶೃಂಗೇರಿಯ ಕಾಂಗ್ರೆಸ್ ಪಕ್ಷಕ್ಕೆ ಈ ಕಾಯಿಲೆ‌ ಇನ್ನೂ ಹತ್ತಿಲ್ಲ

ಶ್ರೀಮಂತಿಕೆ, ಮಡಿವಂತಿಕೆ, ಗೌಡಸ್ತಿಕೆ, ದೊಡ್ಡಸ್ತಿಕೆಗೆ ಬರವಿಲ್ಲದಂತಹ ಕ್ಷೇತ್ರವಿದು. ದಿವಂಗತ ಮಹೇಂದ್ರಕುಮಾರ್ ಅವರ ಆಪ್ತ ಬಳಗವೂ ಸೇರಿದಂತೆ ಸುಧೀರ್ ಕುಮಾರ್ ಮುರೊಳ್ಳಿಯವರ ಟೀಮುಗಳು ತಾವೇ ಕಟ್ಟಿದ್ದ ಹಿಂದುತ್ವದ ಮತಗೋಪುರವನ್ನು ಈಗ ಕಷ್ಟಪಟ್ಟು ಕೆಡಹುತ್ತಿದ್ದಾರೆ. 

ಆಗ ಮುರೊಳ್ಳಿಯವರ ಟೀಂ ಯುವಕರ ರಕ್ತಕ್ಕಷ್ಟೇಯಲ್ಲ, ಕೂದಲು ಸೇರಿದಂತೆ ಯವಕರ ಯಾವ ಅಂಗಾಗಕ್ಕೂ ಬಿಟ್ಟುಬಿಡದೇ ಹಿಂದೂತ್ವದ ರಸವನ್ನು ತುಂಬಿ ಬಂದವರು. ಈಗ ಅವರೇ ಅದರ ನೈತಿಕ ಜವಬ್ದಾರಿ ಹೊತ್ತು, ತಪ್ಪಿಗೆ ಪ್ರಾಯಶ್ಚಿತ್ತ ಪಟ್ಟು ಇಡೀ ಕ್ಷೇತ್ರದಲ್ಲಿ ಹಿಂದೂತ್ವ ನಕಲಿ ಆಟಗಳನ್ನು ಬಯಲಿಗೆಳೆಯುತ್ತಾ  ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಕಳೆದ ಹತ್ತು ವರ್ಷದಿಂದ ವಿಶ್ರಮಿಸದೇ ಬಲ ತುಂಬುತ್ತಿದ್ದಾರೆ. ಇದರ ಫಲಶೃತಿಯಿಂದಾಗಿಯೇ ಕ್ಷೇತ್ರದಲ್ಲಿ  ಪಕ್ಷ ಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. 

ಇದನ್ನೂ ಓದಿ : ಸಿದ್ದರಾಮಯ್ಯನವರ ಮೊದಲ ಶತ್ರು ಬಿಜೆಪಿಯೋ ಅಥವಾ ಜೆಡಿಎಸ್ ಪಕ್ಷವೋ ?

2013ರ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಬೆರಳೇಣಿಕೆಯಷ್ಟು ದಿನ ಬಾಕಿ ಇದ್ದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇದೇ ಟಿ.ಡಿ.ರಾಜೇಗೌಡರ ಮಗಳು ‘ಸೃಜನ’ ತನ್ನ 21ನೇ ವಯಸ್ಸಿನಲ್ಲಿ  ಅಪಘಾತದಲ್ಲಿ ಮೃತರಾದರು. ಮನೆ ತುಂಬಾ ಕಣ್ಣೀರು ವರ್ಷಧಾರೆಯಂತೆ ಹರಿಯುತ್ತಿದ್ದರೂ, ಅಂತಹ ಭೀಕರ ನೋವಿನಲ್ಲೂ‌ ನನ್ನ ನೋವಿನ ಕಾರಣಕ್ಕೆ ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಬಾರದೆಂದು ಚುನಾವಣೆಯನ್ನು ಎದುರಿಸಿ,  ಅತ್ಯಲ್ಪ ಮತಗಳಿಂದ ಸೋತರು. 

ಕಂಡವರ ಮಕ್ಕಳ ಶವದ ಮೇಲೆ ರಾಜಕಾರಣ ಮಾಡುವವರ ನಡುವೆ, ಚುನಾವಣೆಯ ಸಂದರ್ಭದಲ್ಲಿಯೇ ಮರಣ ಹೊಂದಿದ್ದ ತನ್ನ ಮಗಳ ಸಾವನ್ನು ರಾಜಕೀಯ ಲಾಭಕ್ಕಾಗಿ  ಬಳಸಿಕೊಳ್ಳದ ಟಿ.ಡಿ.ರಾಜೇಗೌಡರ ನಡೆ  ಮೆಚ್ಚಲೇಬೇಕು.

ಒಂದೆಡೆ ಚುನಾವಣೆಯ ಸೋಲು ಮತ್ತೊಂದೆಡೆ ಪ್ರೀತಿಯ ಮಗಳ ಅಕಾಲಿಕ ಮರಣ.  ಎರಡನ್ನೂ ಏಕ‌ಕಾಲಕ್ಕೆ ಸಂಭವಿಸಿದಾಗ ಎಂತವರಾದರೂ ಜೀವನೋತ್ಸಾಹ ಕಳೆದುಕೊಂಡು ಸಾರ್ವಜನಿಕ ಬದುಕಿಗೆ ವಿದಾಯ ಹೇಳಬಹುದು! ಆದರೆ, ರಾಜೇಗೌಡರು ಎದೆಗುಂದದೆ ಮತ್ತೆ ಎದ್ದು ನಿಂತು ಕಾರ್ಯಕರ್ತರಿಗೆ ಹುರುದುಂಬಿಸಿದ ಪರಿ  ಸಾಮಾನ್ಯವಲ್ಲ.

 ಟಿ.ಡಿ.ರಾಜೇಗೌಡರು ಮಹಾ  ಭ್ರಷ್ಟರಲ್ಲ, ಸುಳ್ಳು ಹೇಳುವ ಜಾಯಮಾನದವರಲ್ಲ, ಜನರಿಗೆ ಪೊಳ್ಳು ಭರವಸೆ ಕೊಡುವವರಲ್ಲ, ಬಡ ಮಕ್ಕಳನ್ನು ತನ್ನ ರಾಜಕೀಯಕೊಸ್ಕರ ಪ್ರಚೋದಿಸಿ ಅವರ ಶವದ ಮೇಲೆ ರಾಜಕೀಯ ಮಾಡುವವರಲ್ಲ.ಚುನಾವಣೆ ಗೆಲ್ಲಲು ತನ್ನ ಕಾರ್ಯಕರ್ತರನ್ನು  ಜಗಳ, ದೊಂಬಿ, ಗಲಭೆಗೆ ದುಡಿದವರಲ್ಲ.  ಜಾತಿ – ಧರ್ಮ- ದೇವರ ಹೆಸರಲ್ಲಿ ಮತ ಪಡೆದವರಲ್ಲ.ಇದರಿಂದಾಗಿಯೇ ರಾಜಕೀಯವಾಗಿ ತುಸು ಹಿನ್ನಡೆಯಾಗಿದೆ ಎಂದು ಇವರ ರಾಜಕೀಯ ವಿರೋಧಿಗಳು  ಮಾತಾಡಿಕೊಳ್ಳುತ್ತಾರೆ.

ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ಸಿಗೆ ಶಾಸಕ ಸ್ಥಾನ ಇರಬಹುದು; ಆದರೆ ಬಿಜೆಪಿಗೆ ಸರ್ಕಾರವೇ ಇದೆ. ವರ್ಗಾವಣೆ ಸೇರಿದಂತೆ ಎಲ್ಲವೂ ಬಿಜೆಪಿಯದ್ದೇ ಆಟ. ಕಾಂಗ್ರೆಸ್ಸಿಗೆ ತನ್ನ‌ ಮೌನವೇ ಮಾನವಾಗಿದೆ. ಅಭಿವೃದ್ಧಿಗೆ ಹಣ ಬಂದಿಲ್ಲ ಎಂದರೆ ಅದಕ್ಕೆ ಬಿಜೆಪಿಯೂ ಕಾರಣ ಆಗುತ್ತದೆ.

ಕಾಂಗ್ರೆಸ್ ಪಕ್ಷದ ಪರವಾಗಿ ಜಾತಿ ಧರ್ಮದ ಹೆಸರಿನಲ್ಲಿ ಮತ ಪಡೆಯುವುದು ಕಾಂಗ್ರೆಸ್ಸಿಗೆ ತುಸು ಕಷ್ಟ, ಬಿಜೆಪಿಗೆ ಜಾತಿ-ಧರ್ಮವೇ ಅಸ್ತ್ರವಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಮತ್ತೆ ಮೇಲೆದ್ದು ಬರಲು ಸಾಧ್ಯವೇ?

ಶೃಂಗೇರಿ ಕ್ಷೇತ್ರಕ್ಕೆ ಮಾರಕ ಆಗುವ ಕಸ್ತೂರಿ ರಂಗನ್ ವರದಿ ಮತ್ತು ಹುಲಿ ಸಂರಕ್ಷಣಾ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವ ಕೇಂದ್ರ-ರಾಜ್ಯ  ಸರ್ಕಾರದ ನಡೆಯಿಂದಾಗಿ ಕ್ಷೇತ್ರದ ಭಾಜಪದ ಪ್ರಬಲ ನಾಯಕ ಜೀವರಾಜ್ ಅವರು ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಮಾತಾಡಿದರೆ ಒಂದು , ಮಾತಾಡದಿದ್ದರೆ ಇನ್ನೊಂದು ಎಂಬಂತಾಗಿದೆ ಅವರ ಪರಿಸ್ಥಿತಿ. 

ಅಭಿವೃದ್ಧಿಗಳನ್ನು ಮರೆಮಾಚಿ ಕೇವಲ ಧರ್ಮ ಸಂಘರ್ಷಗಳಿಂದಲೇ ಮತ ಪಡೆಯುವುದು ಬಲುಕಷ್ಟ ಎಂಬ ವಾತವರಣವೂ ಇತ್ತೀಚಿಗೆ ಹೆಚ್ಚುತ್ತಿರುವುದು ಬಿಜೆಪಿಯಲ್ಲಿ ತಳಮಳ ಶುರುವಾಗಿದೆ.  

ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸಿದಷ್ಟು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ವೈಯುಕ್ತಿಕ ನಡೆವಳಿಕೆಗಳನ್ನು ಹಿಯಾಳಿಸಲು ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿಗೆ ಕಷ್ಟ. ಅಷ್ಟಕ್ಕೂ ರಾಜೇಗೌಡರಿಗೆ ಹಿಂದೂ ವಿರೋಧಿಯೆಂಬ ಗಟ್ಟಿ ಹಣೆಪಟ್ಟಿಯೂ ಇಲ್ಲ.

ಈ ಸಲ ಡಿಕೆಶಿ ಮುಖ್ಯಮಂತ್ರಿಯ ಪ್ರಬಲ ಅಕಾಂಕ್ಷಿ ಅಭ್ಯರ್ಥಿ ಆಗಿರುವ ಕಾರಣಕ್ಕೆ ಒಕ್ಕಲಿಗರ ಒಲವು ಕಾಂಗ್ರೆಸ್ ಕಡೆ ತಿರುಗುವ ಸಾಧ್ಯತೆ‌ ಹೆಚ್ಚಾಗಿದೆ. ಕ್ಷೇತ್ರದ  ಮುಸಲ್ಮಾನರ ಮತಗಳ ಮೇಲೆ ಜೆಡಿಎಸ್ ಪಕ್ಷದ ಅಂತಹ ಹಿಡಿತವೇನಿಲ್ಲ. ಹಾಗಾಗಿಯೇ  ಕಾರ್ಯಕರ್ತರ ಬಲ ಕುಗ್ಗಿದಂತೆ ಕಾಣುತ್ತಿಲ್ಲ. 

ಇಷ್ಟರ ನಡುವೆ  ಕೆಲವು ಸರ್ವೇ ರಿಪೋರ್ಟುಗಳ ವರದಿ ಪ್ರಕಾರ  ಕಾಂಗ್ರೆಸ್ಸಿನ ಟಿ.ಡಿ.ರಾಜೇಗೌಡರೇ ಬಿಜೆಪಿಯ ಭದ್ರಕೋಟೆ ಶೃಂಗೇರಿ ಕ್ಷೇತ್ರದಲ್ಲಿ ಅಲ್ಪಮತಗಳಿಂದಾದರೂ ಗೆಲ್ಲುತ್ತಾರೆಂಬ ವರದಿ ಹೊರ ಬಿದ್ದಿದೆ.

ರಾಜ್ಯದಲ್ಲಿ ಭಿನ್ನಮತ ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚಿರಬಹುದು. ಆದರೆ ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಇದು ವಿರುದ್ಧವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿಯಲ್ಲೇ ಭಿನ್ನಮತ ಹೆಚ್ಚಿದೆ. ಮಾಜಿ ಸಚಿವರಾದ ಜೀವರಾಜ್ ಅವರನ್ನು ಬದಲಿಸಿ ಬೇರೆಯವರಿಗೆ ಬಿಜೆಪಿ ಟಿಕೆಟನ್ನು ನೀಡಿ ಎಂದು ಕೂಗೆಬ್ಬಿಸುತ್ತಿರುವ ಬಿಜೆಪಿಯ ಮತ್ತೊಂದು ಗುಂಪಿಗೆ ಬಿಜೆಪಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವಷ್ಟು ಶಕ್ತಿ ಇಲ್ಲದಿರಬಹುದು ಆದರೆ ಬಿಜೆಪಿಯ ಜೀವರಾಜ್ ಅವರನ್ನು ಸೋಲಿಸುವಷ್ಟು ಬಿಜೆಪಿ ಭಿನ್ನರಿಗೆ ಶೃಂಗೇರಿ ಕ್ಷೇತ್ರದಲ್ಲಿ ಶಕ್ತಿ ಇದೆ.

ಶೃಂಗೇರಿ ಕ್ಷೇತ್ರದೊಳಗೆ ಹಲವು ಮಠಗಳಿವೆ, ಅವಧೂತರಿದ್ದಾರೆ, ಧರ್ಮ ಕ್ಷೇತ್ರಗಳಿವೆ. ಇವುಗಳು ಶೃಂಗೇರಿ‌ ಕ್ಷೇತ್ರದಲ್ಲಿ ಯಾರ ಪರವಾಗಲಿ, ಯಾರ ವಿರುದ್ಧವಾಗಲಿ ಚುನಾವಣೆಗಳಲ್ಲಿ  ಮೂಗು ತೋರಿಸದೇ ತಮ್ಮ ಪಾವಿತ್ರತೆಯನ್ನು ಉಳಿಸಿಕೊಂಡಿರುವುದು ಸಹ ವಿಶೇಷವಾಗಿದೆ.

ಒಂದುಕಾಲಕ್ಕೆ ಈ ಕ್ಷೇತ್ರ ಸಂಘಪರಿವಾರದ ಆಡಂಬೋಲ ಆಗಿ, ಭಾಜಪದ ಭದ್ರಕೋಟೆ ಆಗಿತ್ತು. ಇಲ್ಲಿ ಭಾಜಪ ಹೊರತು ಪಡಿಸಿ ಬೇರೆ ಪಕ್ಷಗಳು ಗೆಲ್ಲಲು ಕನಸಿನಲ್ಲೂ ಆಲೋಚನೆ ಮಾಡದ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷ ಇಲ್ಲಿ ಗೆಲವು ಸಾಧಿಸುತ್ತಿದೆ. ಇದಕ್ಕೆ ಕಾರಣ   ರಾಜೇಗೌಡರ ವ್ಯಕ್ತಿತ್ವ ಮತ್ತು ಸುಧೀರ್ ಕುಮಾರ್ ಮುರೊಳ್ಳಿ ಹಾಗೂ ಅವರ ಟೀಂ ಎನ್ನುವುದು ನಿರ್ವಿವಾದ. ಈ  ಟೀಂ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಸಂಘಪರಿವಾರದ ಕೋಮುವಾದದ ವಿರುದ್ಧ ಜಾತ್ಯತೀತ ಚಿಂತನೆ ತೆಗೆದುಕೊಂಡು ಹೋಗಿದ್ದಾರೆ. ಜತೆಗೆ ಯುವಕರಿಗೆ ವೈಚಾರಿಕ ತಿಳವಳಿಕೆ ನೀಡಿ, ಸಂಘಪರಿವಾರದಿಂದ ಹೊರಗೆ ತರಲು ಶ್ರಮಿಸುತ್ತಿದ್ದಾರೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!