ದ ಪಾಲಿಟಿಕ್

ಸೋನಿಯಾ ಗಾಂಧಿ, ಖರ್ಗೆಯವರ ಮೌನ : ಡಿಕೆಶಿಗೆ ತಂದ ಆನೆಬಲ 

ನಿನ್ನೇ ಮಧ್ಯಾಹ್ನ ಮಾಧ್ಯಮಗಳಲ್ಲಿ ‘ಸಿದ್ದರಾಮಯ್ಯಗೆ ಸಿಎಂ ಪಟ್ಟ ಫೈನಲ್ ಫೈನಲ್ ‘ ಎಂಬ ಸುದ್ದಿ ಹಬ್ಬಿತ್ತು, ಮತ್ತೊಂದೆಡೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನಕ್ಕೆ ಸಿದ್ಧತೆಗಳೂ ಆರಂಭವಾಗಿತ್ತು. ಇದನ್ನು ಕಂಡು ಡಿಕೆಶಿ ಬಣ ಮತ್ತಷ್ಟು ಚುರುಕಾಗಿ, ಖರ್ಗೆಯವರ ಮನೆಗೆ ತೆರಳಿ, ಅವರ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಅವರಿಂದ ಮಾಧ್ಯಮಗಳಿಗೆ ಇನ್ನೂ ಸಿಎಂ ಹೆಸರು ಫೈನಲ್ ಮಾಡಿಲ್ಲ, ಮುಂದಿನ 48-72 ಗಂಟೆಯೊಳಗೆ ಮಾಡುತ್ತೇವೆ’ ಎಂದು ಸ್ಪಷ್ಟನೆ ನೀಡಿಸಿದ್ದಾರೆ. ಇದು ಡಿಕೆಶಿ ಬಲ ಹೆಚ್ಚಿಸುವಂತೆ ಮಾಡಿದೆ. 

ಚುನಾವಣೆಯ ಸಂದರ್ಭದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಾವಿಬ್ಬರೂ ಜೋಡೆತ್ತುಗಳು ಎಂದೇ ಬಿಂಬಿಸಿಕೊಂಡು ಬಂದಿದ್ದರು. ಫಲಿತಾಂಶ ಬಂದ ಮರುಗಳಿಗೆಯೇ ಹೆಗಲ ಮೇಲಿನ ನೋಗ ಕಳಚಿ, ಒಬ್ಬರನೊಬ್ಬರು ಮುಖ ನೋಡದಷ್ಟೂ ದೂರ ಸರದಿದ್ದಾರೆ. ಈಗ ಡಿಕೆಶಿ ‘ನನಗೆ ಸಿಎಂ ಮಾಡಿ, ಇಲ್ಲವೇ ಖರ್ಗೆಯವರಾಗಲಿ’ ಎಂದು ಪಟ್ಟು ಹಿಡಿದು ಹೊಸ ದಾಳ ಉರುಳಿಸಿದ್ದಾರೆ. ಆದರೆ, ಖರ್ಗೆಯವರು ಸಿಎಂ ಪಟ್ಟ ನಿರಾಕರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.  

ಡಿಕೆಶಿ ‘ಸಿದ್ದರಾಮಯ್ಯನವರಿಗೆ ಶಾಸಕರ ಬೆಂಬಲ ಇರಬಹುದು. ಆದರೆ, ನನಗೆ ಅದರ ಅಗತ್ಯವಿಲ್ಲ. ನನ್ನ ಪರಿಶ್ರಮದಿಂದ ಪಕ್ಷ ಪೂರ್ಣ ಬಹುಮತ ಪಡೆದಿದೆ. ಇದಕ್ಕಾಗಿ ಸಾಕಷ್ಟು ಬೆವರು ಸುರಿಸಿದ್ದೇನೆ, ನನ್ನ ಶ್ರಮಕ್ಕೆ ತಕ್ಕ ಕೂಲಿ ನೀಡಿ’ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇದು ಹೈಕಮಾಂಡಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಜತೆಗೆ ರಾಹುಲ್ ಗಾಂಧಿಯವರ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಡಿಕೆಶಿ ನಿರಾಕರಿಸಿದ್ದು ಎಲ್ಲವೂ ಅಯೋಮಯ ಆದಂತಾಗಿದೆ. 

ಸಿದ್ದರಾಮಯ್ಯನವರು 2006 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದಾಗಿನಿಂದ ಮೂರು ವರ್ಷ ಬಿಟ್ಟರೆ ಅವರೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ಎಂಟು ವರ್ಷ ವಿರೋಧ ಪಕ್ಷದ ನಾಯಕರಾಗಿದ್ದಾರೆ, ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದಾರೆ, ಮೈತ್ರಿ ಸರ್ಕಾರಕದ ಅವಧಿಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈಗ ನನಗೂ ಅವಕಾಶ ನೀಡಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಜತೆಗೆ ಪಕ್ಷ ಕಟ್ಟಲು ತನು,ಮನ, ದಿನದಿಂದ ದುಡಿದಿದ್ದೇನೆ, ಇದರ ಫಲವಾಗಿಯೇ ಇಂದು ನನಗೆ ಬಿಜೆಪಿ ಕಾನೂನಿನ ಕುಣಿಕೆಗೆ ಸಿಲುಕಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ನನಗೆ ಸಿಎಂ ಪಟ್ಟ ಬೇಕೇಬೇಕು ಎಂದು ಹಠ ಹಿಡಿದು ಕೂತಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿಸಿದೆ.  

2013 ರಲ್ಲಿ ಸಿದ್ದರಾಮಯ್ಯವರ ಸರ್ಕಾರದಲ್ಲಿ ಮಂತ್ರಿ ಪದವಿಗಾಗಿ ಗೋಗರೆದಿದ ಡಿಕೆಶಿ ಇಂದು ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರ ಶ್ರಮ, ದುಡಿಮೆ, ಸಂಘಟನಾ ಶಕ್ತಿ ಹಾಗೂ ಪಕ್ಷ ನಿಷ್ಠೆ ಜತೆಗೆ ಸೋನಿಯಾ ಗಾಂಧಿ, ಖರ್ಗೆಯವರ ಬೆಂಬಲವೂ ಕಾರಣವಾಗಿದೆ. 

ಇಬ್ಬರೂ ಪಟ್ಟು ಸಡಿಲಿಸದ ಪರಿಣಾಮ ಕಾಂಗ್ರೆಸ್ ಹೈಕಮಾಂಡ್ ‘ಇತ್ತ ದರಿ ಅತ್ತ ಪುಲಿ’ ಎಂಬ ಸ್ಥಿತಿಗೆ ಸಿಲುಕಿದೆ. ಡಿಕೆಶಿಗೆ ಪಟ್ಟ ಕಟ್ಟಿದರೆ, ಸರ್ಕಾರದಲ್ಲಿ ಸಿದ್ದರಾಮಯ್ಯನವರ ಸ್ಥಾನವೇನು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಹೈರಾಣಾಗಿಸಿದೆ. ಡಿಕೆಶಿಗೆ ಸಿಎಂ ಮಾಡಿದರೆ ಸಿದ್ದರಾಮಯ್ಯವರ ರಾಜಕೀಯ ನಿವೃತ್ತಿ ಘೋಷಣೆ ಮಾಡಬಹುದು, ಇಲ್ಲವೇ ಬಂಡಾಯ ಸಾರಬಹುದು. ಇವೆರಡನ್ನೂ ತಡೆಯುವ ಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲ. ಸಿದ್ದರಾಮಯ್ಯ ಇಲ್ಲದೆ ಬರುವ ಲೋಕಸಭಾ ಚುನಾವಣೆ ಎದುರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಜತೆಗೆ ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಕೂಡಿಸಿದರೆ ಇಡಿ, ಐಟಿ, ಸಿಬಿಐ ರಾಜ್ಯದಲ್ಲೇ ಮೋಕ್ಕಾಂ ಹೂಡಬಹುದು ಎಂಬ ಚಿಂತೆಯೂ ಕಾಡುತ್ತಿದೆ. ಆಕ್ರಮ ಆಸ್ತಿ ಗಳಿಕೆಯ ಕೇಸ್ ನಲ್ಲಿ ಡಿಕೆಶಿ ಜೈಲಿಗೆ ಸೇರಿದರೆ ‘ಕಾಂಗ್ರೆಸ್ ಸಿಎಂ ಜೈಲು ಪಾಲಾಗಿದ್ದಾರೆ’ ಎಂದು ಹೇಳಲು ಬಿಜೆಪಿಗೆ ಅಸ್ತ್ರ ಸಿಕ್ಕಿದಂತಾಗುತ್ತದೆ. ಇದರಿಂದ ಈಗ ಪುಟಿದೇಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಬಿದ್ದಿದೆ. 

ಸಿದ್ದರಾಮಯ್ಯನರಿಗೆ ಅವರ ಜನಪ್ರಿಯತೆ, ಬಹುತೇಕ ಶಾಸಕರ ಬೆಂಬಲ ಹಾಗೂ ರಾಹುಲ್ ಗಾಂಧಿಯವರ ಬೆಂಬಲ ಬಲತುಂಬಿದ್ದರೆ. ಸೋನಿಯಾ ಗಾಂಧಿ ಮತ್ತು ಖರ್ಗೆಯವರ ಮೌನ ಡಿಕೆಶಿಗೆ ಬಲ ತಂದಿದೆ. ಈಗ ನಡೆಯುತ್ತಿರುವುದು ಬೆಳವಣಿಗೆಯಿಂದ ಸಿದ್ದರಾಮಯ್ಯ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. 

 ಜನರು ತಮ್ಮ ಪ್ರತಿನಿಧಿಯನ್ನು ಆರಸಿಕೊಳ್ಳುತ್ತಾರೆ. ಜನಪ್ರತಿನಿಧಿಗಳು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುತ್ತಾರೆ. ಈ ಮಧ್ಯೆ ಹೈಕಮಾಂಡಿಗೆ ಏನು ಕೆಲಸ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹೈಕಮಾಂಡ್ ಸಂಸ್ಕೃತಿಯೇ ಒಂದು ಕಪ್ಪು ಚುಕ್ಕೆ. ಇದು ಶಾಸಕರ ಹಕ್ಕನ್ನು ಕಿತ್ತುಕೊಳ್ಳುವ ಸಂಸ್ಕ್ರತಿ. ಇದು ಕೊನೆಯಾಗಬೇಕು. ಶಾಸಕರ ಬೆಂಬಲ ಯಾರಿಗೆ ಇರುತ್ತದೋ ಅವರು ಶಾಸಕಾಂಗ ಪಕ್ಷದ ನಾಯಕರಾಗಬೇಕು. ಆಗ ಈ ಹಗ್ಗಜಗ್ಗಾಟದ ಪ್ರಸಂಗವೇ ಬರುವುದಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

The Politic
ವಿಶೇಷ ವರದಿ

ಸೇಡಂ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರರಿಗೆ ದೂರು

ದ ಪಾಲಿಟಿಕ್
ದ ಪಾಲಿಟಿಕ್
3 min read

ಬಿಜೆಪಿ ಮಾಜಿ ಸಂಸದ ಹಾಗೂ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ವಿರುದ್ಧ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ,  ಬೀದರ  ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಬಸವಕಲ್ಯಾಣದ  ಬಿಕೆಡಿಬಿ ಕಮೀಷನರ್ ಅವರಿಗೆ ಕಲಬುರ್ಗಿ ಮೂಲದ ಯುವ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ  ದೂರು ಸಲ್ಲಿಸಿದ್ದಾರೆ.

ದೂರುದಾರರು ಬರೆದಿರುವ ಪತ್ರ ‘ದ ಪಾಲಿಟಿಕ್’ ಗೆ ದೊರತಿದೆ.  ಪತ್ರದಲ್ಲಿನ ವಿವರ ಇಂತಿದೆ :

” ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಕಾಯಕ ಜೀವಿಗಳ ಚಳುವಳಿ ಇಂದು ಇಡೀ ಜಗತ್ತಿನ ಎಲ್ಲಾ ಜನಪರ – ಜೀವಪರ ಚಳವಳಿಗಳಿಗೆ ಸ್ಪೂರ್ತಿಯ ಸೆಲೆಯಾಗಿದೆ.   ಬಸವಕಲ್ಯಾಣ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಮತ್ತು ಜಗತ್ತಿನ ಮೊದಲನೇ ಪಾರ್ಲಿಮೆಂಟ್ ಹೊಂದಿದ್ದ ನೆಲ.  ಜಾತಿ , ವರ್ಗ, ವರ್ಣ, ಲಿಂಗ ಮತ್ತು ವಯೋಭೇದದ ವಿರುದ್ಧ ಬಸವಾದಿ ಶರಣರು ಹೋರಾಡಿದರು. ಮನುಷ್ಯನಿಂದ ಮನುಷ್ಯನ ಶೋಷಣೆ ಇಲ್ಲದಂತಹ  ಸಮಾಜ ಕಟ್ಟಲು ಕನಸು ಕಟ್ಟಿಕೊಂಡು ದುಡಿದು, ಅದೇ ನೆಲದಲ್ಲಿ ಹುತಾತ್ಮರಾದರು.ಅವರು ಬಾಳಿ ಬದುಕಿದ ಕಲ್ಯಾಣ ನೆಲ ನಮಗೆಲ್ಲ ‘ಹೋಲಿ ಲ್ಯಾಂಡ್’ ಆಗಿದೆ. ದಿನದಿಂದ ದಿನಕ್ಕೆ ದೇಶ – ವಿದೇಶದಿಂದ ಕಲ್ಯಾಣಕ್ಕೆ  ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.  

ಈ ಸಂದರ್ಭದಲ್ಲಿ ಸಂಘಪರಿವಾರದ ಕಾಲಾಳು ಬಸವರಾಜ ಪಾಟೀಲ್ ಸೇಡಂ ಬಸವಕಲ್ಯಾಣದಲ್ಲಿ ಶರಣರ ಹೆಸರು ಬಳಸಿಕೊಂಡು ಶರಣರ ಚರಿತ್ರೆಯನ್ನು ವಿಕೃತಗೊಳಿಸಲು ಶ್ರಮಿಸುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಶರಣರ ಚರಿತ್ರೆ ಜೊತೆಗೆ ಅವರನ್ನು ಜೋಡಿಸಿ ಬಸವಾದಿಗರ ಬದುಕು – ಚಿಂತನೆಯನ್ನು ಕುಬ್ಜಗೊಳಿಸಲು ಶ್ರಮಿಸುತ್ತಿದ್ದಾರೆ. ಈ ಸೇಡಂ ಅವರು ಸಂಘಪರಿವಾರದ ಹಿಡನ್ ಅಜೆಂಡಾ ಜಾರಿಗೊಳಿಸಲೆಂದೆ ಕಲ್ಯಾಣದಲ್ಲಿ ‘ಬಸವಕಲ್ಯಾಣ ಕ್ಷೇತ್ರ ಸಮಿತಿ’ ಹುಟ್ಟು ಹಾಕಿದ್ದಾರೆ. ಈ ಸಮಿತಿಯ ಮೂಲಕ ಇಡೀ ಕಲ್ಯಾಣದ ಚರಿತ್ರೆಯನ್ನು ಕುಬ್ಜಗೊಳಿಸಲು ಶ್ರಮಿಸುತ್ತಿದ್ದಾರೆ. ಅಷ್ಟಕ್ಕೂ ತನ್ನಿಡೀ ಜೀವನದುದ್ದಕ್ಕೂ ಸಂಘಪರಿವಾರದ ಕಾಲಾಳಾಗಿ ದುಡಿದಿರುವ ಸೇಡಂ ಅವರಿಗೆ ಈ ಇಳಿವಯಸ್ಸಿನಲ್ಲಿ ಶರಣರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಲು ಕಾರಣವೇನು?  ಕಲ್ಯಾಣ ನೆಲದಲ್ಲಿ ಶರಣರ ಹೆಸರಿನಲ್ಲಿ ಅವರಿಗೆ ಕಾರ್ಯಚಟುವಟಿಕೆಗಳನ್ನು ಮಾಡಲು ಯಾವುದೇ ಕಾನೂನಿನ ಹಾಗೂ ನೈತಿಕ ಹಕ್ಕಿಲ್ಲ. 

ಸೇಡಂ ಅವರಿಗೆ ಅಥವಾ ಅವರ ಅಧ್ಯಕ್ಷತೆಯಲ್ಲಿರುವ ಸಂಸ್ಥೆಗೆ ಕಲ್ಯಾಣ ನೆಲದಲ್ಲಿ ಬೋರ್ಡ್ ಹಾಕಿಸಲು ಬಿಟ್ಟಿದ್ದು ತಮ್ಮ ಮೊದಲನೇ ತಪ್ಪು; ತಪ್ಪುತಪ್ಪಾಗಿ ಬೋರ್ಡ್ ಹಾಕಿಸಿದರೂ ಅದನ್ನು ಈವರೆಗೂ ತೆಗೆಸದೆ ಇರೋದು ತಮ್ಮ ಎರಡನೇ ತಪ್ಪು; ಸೇಡಂ ಅವರ ಗಮನಕ್ಕೆ ತಂದರೂ ಹಳಸಲು ನೆಪ ಹೇಳಿ ಅವರು ಜಾರಿಕೊಳ್ಳುತ್ತಿರುವುದು ಮೂರನೇ ತಪ್ಪು; ಅವರು ನಾಲ್ಕನೇ ತಪ್ಪು ಮಾಡುವ ಮುಂಚೆ ತಾವು ಎಚ್ಚೆತ್ತುಕೊಂಡು ಅವರನ್ನು ಕಲ್ಯಾಣ ನೆಲದಿಂದ ದೂರ ಇಡಬೇಕು, ಕಲ್ಯಾಣ ನೆಲದಲ್ಲಿ ಶರಣರ ಹೆಸರಿನಲ್ಲಿ ಅವರು ಯಾವುದೇ ಕಾರ್ಯಚಟುವಟಿಕೆಗಳು ಮಾಡದಂತೆ ಅವರಿಗೆ ನಿರ್ಭಂಧ ಹೇರಬೇಕು ಹಾಗೂ ಸೇಡಂ ಅವರು ದುರುದ್ದೇಶದಿಂದ ಹಾಕಿಸಿರುವ ಎಲ್ಲಾ ಬೋರ್ಡ್ ಗಳನ್ನು ತೆಗೆಯಬೇಕು; ಹೊಸದಾಗಿ ಬಿಕೆಡಿಬಿ ಬೋರ್ಡ್ ಹಾಕಿಸಬೇಕು; ಸೇಡಂ ಮತ್ತವರ ಟೀಂ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಈ ದೂರನ್ನು ತಮಗೆ ಸಲ್ಲಿಸುತ್ತಿದ್ದೇನೆ.

ಸೇಡಂ ಅವರ ಕಿತಾಪತಿಗೆ ತಡೆಯೊಡ್ಡದಿದ್ದರೆ ಮುಂದೆ ಅಲ್ಲೇನಾದರೂ  ಕ್ರಾಂತಿ ಘಟಿಸಿದರೆ ಅದಕ್ಕೆ ತಾವೇ ಹೊಣೆ ಹೊರಬೇಕಾಗುತ್ತದೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ” ಎಂದು ಬರೆದಿದ್ದಾರೆ. 

———————

ಈ ಕುರಿತು ಸಂಬಂಧಿಸಿದ ಕೆಲವರನ್ನು ದ ಪಾಲಿಟಿಕ್ ಮಾತನಾಡಿಸಿದಾಗ :

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೀದರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಬಿಕೆಡಿಬಿ ಕಮೀಷನ್ ಅವರಿಗೆ ಅವರ ಅಧಿಕೃತ ಇಮೇಲ್ ಐಡಿಗೆ ದೂರು ಸಲ್ಲಿಸಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ನಂಬಿದ್ದೇನೆ. ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವೆ.

– ಭೀಮನಗೌಡ ಪರಗೊಂಡ, ಯುವ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ

ಬಸವಕಲ್ಯಾಣದಲ್ಲಿ ಬಸವಣ್ಣನ ಮತ್ತು ಶರಣರ ಹೆಸರು ಬಳಸಿಕೊಂಡು ಅನೇಕ ಖಾಸಗಿ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಉದ್ದೇಶಪೂರ್ವಕವಾಗಿ ಇಲ್ಲದ ಪುರಾಣಗಳನ್ನು, ಕಥೆಗಳನ್ನು ಕಟ್ಟುತ್ತಿದ್ದಾರೆ. ಈ ಮೂಲಕ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ‌ ಖಾಸಗಿ ಸಂಸ್ಥೆಗಳಿಗೆ ಕಡಿವಾಣ ಹಾಕಲು ಬಿಕೆಡಿಬಿ ಮುಂದಾಗಬೇಕು. ಅಷ್ಟೇ ಅಲ್ಲದೆ ಅಧಿಕೃತವಾಗಿ ‘ಬಿಕೆಡಿಬಿಯೇ’ ಸೂಚನ ಫಲಕಗಳನ್ನು ಹಾಕಬೇಕು. ವಾಸ್ತವ ಚರಿತ್ರೆ ಸೂಚನ ಫಲಕದಲ್ಲಿರಬೇಕು.  ಖಾಸಗಿ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಈ ಬೋರ್ಡ್ ಹಾಕಿಸಲು ಅನುಮತಿ ನೀಡಬಾರದು. 

– ಶಿವಾನಂದ ಜಾಮದಾರ್ ಜೆಎಲ್ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಬಿಕೆಡಿಬಿಯವರು ಬೋರ್ಡ್ ಹಾಕಿಸಲು ಹಣ ಕೇಳಿದರು ನನ್ನ ಅವಧಿಯಲ್ಲಿ   ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ದಿಂದ ಹಣ ಕೊಟ್ಟಿದ್ದೇವೆ ಅಷ್ಟೇ. ಮಹೇಶ್ ಪಾಟೀಲ್ ಮತ್ತು ಗಂಗಾಂಬಿಕೆ ಪಾಟೀಲ್ ಸೇರಿಕೊಂಡು 30 ಬೋರ್ಡ್ ಹಾಕಿಸಿದ್ದಾರೆ. ಅದರಲ್ಲಿ ಒಂದೆರಡು ತಪ್ಪಾಗಿರಬಹುದು. ಈಗ ಒಂದು ಕಡೆ ಸರಿ ಪಡಿಸಿದ್ದಾರೆ. ಇನ್ನೂ ಇದ್ದರೆ ಅವನ್ನೂ ಸರಿಪಡಿಸುತ್ತಾರೆ. ಈಗ ಬಿಕೆಡಿಬಿಯವರು ಸರಿ ಪಡಿಸಬೇಕು, ನಾನಲ್ಲ. ಅದರ ಮಾಲಿಕರು ಬಿಕೆಡಿಬಿಯವರು. 

– ಬಸವರಾಜ್ ಪಾಟೀಲ್ ಸೇಡಂ, ಬಿಜೆಪಿ ಮಾಜಿ ಸಂಸದ ಹಾಗೂ ರಾಜ್ಯಾಧ್ಯಕ್ಷ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ದಿಂದ ಕಲ್ಯಾಣದಲ್ಲಿ ಸೂಚನಾ ಫಲಕಗಳು ಹಾಕಿದ್ದು ನಿಜ. ಅವುಗಳಲ್ಲಿ ಏನಾದರೂ ತಪ್ಪುಗಳಿದ್ದರೆ  ಗಮನಿಸಿ ಸರಿಪಡಿಸುತ್ತೆವೆ.

 –  ರಮೇಶ್ ಕೊಳಾರ, ಬಿಕೆಡಿಬಿ ಕಮಿಷನರ್ 

The Politic
ರಾಜಕೀಯ

ಅಥೆಂಟಿಕ್ ಸ್ಕಾಲರ್ – ಡಾ.ಶಿವಾನಂದ ಜಾಮದಾರ

ಸಿದ್ದು ಯಾಪಲಪರವಿ
ಸಿದ್ದು ಯಾಪಲಪರವಿ
3 min read

ನಾಡಿನ ಜನಪ್ರಿಯ ಪತ್ರಕರ್ತರೊಬ್ಬರು ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ.ಎಸ್.ಎಂ. ಜಾಮದಾರ ಅವರ ಕುರಿತು ಕೆಟ್ಟ ಹೋಲಿಕೆಯಿಂದ ಬರೆದಿದ್ದರು. ಮರುದಿನ ಸದರಿ ಪತ್ರಿಕೆಗೆ ಡಾ.ಜಾಮದಾರ ಅವರ ಪರವಾಗಿ ಪ್ರತಿಕ್ರಿಯೆ ನೀಡಿ ನನ್ನ ಜವಾಬ್ದಾರಿ ಮೆರೆದಿದ್ದೆ, ನಂತರ ನಾನವರನ್ನು ಸಂಪರ್ಕಿಸುವ ಗೋಜಿಗೆ ಹೋಗಲಿಲ್ಲ.

ಜಾಗತಿಕ ಲಿಂಗಾಯತ ಮಹಾಸಭಾ ಅನೇಕ ಕಾರಣದಿಂದ ಈಗ ಮುಂಚೂಣಿಯಲ್ಲಿದೆ. ಮುಖ್ಯವಾಗಿ ‘ಲಿಂಗಾಯತ ಎಂಬುದೊಂದು ಸ್ವತಂತ್ರ ಧರ್ಮ, ಲಿಂಗಾಯತರು ಹಿಂದೂಗಳಲ್ಲ’ ಎಂಬ ಮಾತಿಗೆ ಪೂರಕವಾಗುವ ನೂರಾರು ಅಧಿಕೃತ ಸಾಕ್ಷಾಧಾರಗಳನ್ನು ಒದಗಿಸಿದ ಶ್ರೇಯಸ್ಸು ಡಾ. ಜಾಮದಾರ ಅವರಿಗೆ ಸಲ್ಲುತ್ತದೆ. ಒಬ್ಬ ರೆವಿನ್ಯೂ ಅಧಿಕಾರಿಗೆ ಮತ್ತು ಈ ಧರ್ಮಕ್ಕೆ ಎತ್ತಣ ಸಂಬಂಧ ಎಂಬ ಪ್ರಶ್ನೆ ಹುಟ್ಟುವುದು ಸಹಜ.

ಆದರೆ ಡಾ.ಜಾಮದಾರ ಅವರು ಕೇವಲ ಐ.ಎ.ಎಸ್. ಅಧಿಕಾರಿಯಲ್ಲ, ಅದರಾಚೆಗೆ ಅನೇಕ ವಿಷಯಗಳೂ ಇವೆ. ಅವರೊಬ್ಬ ಅಥೆಂಟಿಕ್ ಸ್ಕಾಲರ್, ಅವರಿಗೆ ಬಹುದೊಡ್ಡ, ಸುದೀರ್ಘ ಅಕ್ಯಾಡೆಮಿಕ್ ಹಿನ್ನೆಲೆಯಿದೆ. ಡಾ. ಜಾಮದಾರ ಎಂದ ಕೂಡಲೇ ‘ಅವರೊಬ್ಬ ದಕ್ಷ, ಹಟಮಾರಿ, ಪ್ರಾಮಾಣಿಕ ಅಧಿಕಾರಿ, ಕೂಡಲ ಸಂಗಮ, ಬಸವಕಲ್ಯಾಣ, ಬಾಡ, ಬಸವನಬಾಗೇವಾಡಿ ಹಾಗೂ ಕಾಗಿನೆಲೆಯಂತಹ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಹರಿಕಾರ’ ಎಂಬ ನೆನಪು ಧಾವಿಸುವುದು ಸಹಜ ಮತ್ತು ಸತ್ಯ. ಆದರೆ ಅವರೊಬ್ಬ ಅಥೆಂಟಿಕ್ ಸ್ಕಾಲರ್ ಎಂಬುದು  ಮನವರಿಕೆಯಾಯಿತು. 

ಇತ್ತೀಚೆಗೆ ನಾನು ಮ್ಯಾಕಬೆತ್ ನಾಟಕದ ಕುರಿತು ವಿಡಿಯೋ ಮಾಡಿದ್ದೆ. ಅನೇಕರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದರಾದರೂ ಡಾ. ಜಾಮದಾರ ಅವರ ಪ್ರತಿಕ್ರಿಯೆ ತುಂಬ ಸಂಶೋಧನಾತ್ಮಕವಾಗಿತ್ತು. ಅದಕ್ಕೂ ಮೊದಲು ಕೆಲವು ತಿಂಗಗಳ ಹಿಂದೆ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಬಸವ ಉತ್ಸವದಲ್ಲಿ ಇವರನ್ನು ಭೇಟಿಯಾಗಿದ್ದೆ. ಆಗ ಸದರಿ ಪತ್ರಿಕೆಯ ಪ್ರತಿಕ್ರಿಯೆಯ ಕುರಿತು ಅವರೇ ಪ್ರಸ್ತಾಪಿಸಿದಾಗ ಆಶ್ಚರ್ಯವಾಯಿತು. ಅಂದು ರಾತ್ರಿ ಊಟದ ಬೈಟಕ್ ಸಂದರ್ಭದಲ್ಲಿ ತಮ್ಮ ಬದುಕಿನ ಅನೇಕ ವಿವರಗಳನ್ನು ಹಂಚಿಕೊಂಡರು. ಆಗ ನನಗೆ ಅವರ ಬಗ್ಗೆ ಇದ್ದ ವಿಚಿತ್ರ ಬಗೆಯ ಕಲ್ಪನೆಗಳು ಮಾಯವಾಗಿ ಒಬ್ಬ ಸರಳ, ಪ್ರಾಮಾಣಿಕ, ಸಜ್ಜನ ಸಂಶೋಧಕರ ಪರಿಚಯವಾಯಿತು. ಈಗಲೂ ಅಷ್ಟೇ ಅವರ ಜೊತೆಗೆ ಗಂಟೆಗಟ್ಟಲೆ ಫೋನಿನಲ್ಲಿ ಮಾಹಿತಿ ಪಡೆಯುವಾಗ ಒಬ್ಬ ಸತ್ಯ ಸಂಶೋಧಕನ ವ್ಯಕ್ತಿತ್ವ ಅನಾವರಣವಾಗುತ್ತದೆ. 

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕ್ರಿಮಿನಾಲಜಿ ವಿಷಯದಲ್ಲಿ ಪದವಿ ಪಡೆದ ಡಾ. ಜಾಮದಾರ ವಿದ್ಯಾರ್ಥಿ ದೆಸೆಯಿಂದಲೂ ಹೊಸದನ್ನು ಹುಡುಕುವ ಅನ್ವೇಷಕ. ಆಗ ಅಪರಾಧಶಾಸ್ತ್ರ ವಿಷಯ ಅಷ್ಟೊಂದು ಮಹತ್ವ ಪಡೆದಿರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ಇತರ ಸಮಾಜವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಆದರೆ ಡಾ. ಶಿವಾನಂದರು ವಿಷಯ ಆಯ್ಕೆಯಲ್ಲಿ ತಮ್ಮತನ ಮೆರೆದರು.

ಒಂದು ವೇಳೆ ಅವರು ಕ್ರಿಮಿನಾಲಜಿ ವಿಷಯ ತೆಗೆದುಕೊಳ್ಳದಿದ್ದರೆ ವಿದೇಶದಲ್ಲಿ ಓದುವ ಸೌಭಾಗ್ಯ ಲಭಿಸುತ್ತಿರಲಿಲ್ಲ. ಅಂತಾರಾಷ್ಟ್ರೀಯ ಅಧ್ಯಯನದ ಒಂದು ಕೋಟಿ ಮೊತ್ತದ ವಿಶೇಷ ಸ್ಕಾಲರ್ಶಿಪ್ ಪಡೆದ ಅವರು ಅಮೇರಿಕಾದಲ್ಲಿ ಅಧ್ಯಯನ ಪೂರೈಸಿದ ಹೆಮ್ಮೆ. ಅಲ್ಲಿಯೇ ಸಂಶೋಧನೆಯನ್ನು ಮುಗಿಸಿ, ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಸಂಶೋಧಕರಾಗಿ ಸೇವೆ ಆರಂಭಿಸುತ್ತಾರೆ. ಆಗ ಅವರಲ್ಲಿ ಉಂಟಾದ ಅಕ್ಯಾಡೆಮಿಕ್ ಸಂಶೋಧನಾತ್ಮಕ ಮೌಲ್ಯಗಳು ಈ ಇಳಿ ಪ್ರಾಯದಲ್ಲಿ ಕೂಡ ಜತನವಾಗಿ ಆವರಿಸಿಕೊಂಡಿವೆ. ಸಾಹಿತ್ಯ, ಇತಿಹಾಸ ಮತ್ತು ಅಪರಾಧಶಾಸ್ತ್ರ ಪರಸ್ಪರ ಪೂರಕವಲ್ಲ ಎಂದು ಮೇಲ್ನೋಟಕ್ಕೆ ಗೋಚರವಾದರೂ ಪ್ರತಿಭಾವಂತರಿಗೆ ಎಲ್ಲವೂ ಒಂದೇ. ಇಂಗ್ಲಿಷ್ ಸಾಹಿತ್ಯ, ಕನ್ನಡದ ವಚನಗಳನ್ನು ಜೊತೆ ಜೊತೆಯಾಗಿ ಅಧ್ಯಯನ ಮಾಡಲು ಇವರ ತಂದೆ ಮೂಲ ಪ್ರೇರಣೆ. ಏರು ಯೌವ್ವನದಲ್ಲಿ ವಿಧುರರಾದ ಇವರ ತಂದೆ ಮಲ್ಲೇಶಪ್ಪ ಜಾಮದಾರ, ಮಕ್ಕಳ ಭವಿಷ್ಯದ ಕಾರಣದಿಂದ ಮರು ಮದುವೆಯಾಗದೇ ಇವರ ಅಧ್ಯಯನ ಏಳ್ಗೆಗಾಗಿ ಮತ್ತು ಪ್ರಗತಿಪರ ವಿಚಾರದಲ್ಲಿ ತಮ್ಮ ಬದುಕನ್ನು ಮೀಸಲಿಟ್ಟರು. 

ಅಮೇರಿಕಾ ಮತ್ತು ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಓದಿದ ಇವರಿಗೆ ಅಲ್ಲಿಯೇ ತಮ್ಮ ವೃತ್ತಿ ಬದುಕನ್ನು ಮುಂದುವರೆಸುವ ಇಚ್ಛೆಯಿತ್ತು ಆದರೆ ಕುಟುಂಬದ ಸದಸ್ಯರ ಹಕ್ಕೊತ್ತಾಯದಿಂದಾಗಿ ಐ.ಎ.ಎಸ್. ಪಾಸಾದ ಕೂಡಲೇ ಭಾರತಕ್ಕೆ ಮರಳುತ್ತಾರೆ. ಒಬ್ಬ ಅಕ್ಯಾಡೆಮಿಕ್ ವ್ಯಕ್ತಿ ಯಾವುದೇ ಜವಾಬ್ದಾರಿ ಕೊಟ್ಟರೂ ಅಷ್ಟೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ದಕ್ಷತೆಯ ಜೊತೆಗೆ ಪ್ರಾಮಾಣಿಕತೆ ಇವರ ಅಧಿಕಾರಾವಧಿಯ ಶ್ರೇಯಸ್ಸು.

‘ಹಟಮಾರಿ, ಅಹಂಕಾರಿ, ಲೋಕವಿರೋಧಿ, ಸದಾಕಾಲ ಸರ್ಕಾರ ಮತ್ತು ಕಾನೂನು ಪರ, ಜನ ವಿರೋಧಿ’ ಎಂಬ ಟೀಕೆ ನಿಮ್ಮ ಮೇಲೆ ಇತ್ತಲ್ಲ ಎಂದಾಗ ‘ ಹೌದು ಅದು ಅರ್ಧ ಸತ್ಯ ಆದರೆ ಪೂರ್ಣ ಸತ್ಯವಲ್ಲ, ಕಾನೂನಾತ್ಮಕವಾಗಿ, ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕೆಲಸ ಮಾಡುತ್ತಿದ್ದ ಕಾರಣದಿಂದ ನಾನು ಈ ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುವೆ’ ಎನ್ನುತ್ತಾರೆ. ಒಂದೇ ಹುದ್ದೆಯಲ್ಲಿ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಲು ಎಲ್ಲಾ ಸರಕಾರಗಳು ಅವಕಾಶ ಕಲ್ಪಿಸಲು ಇವರ ಬದ್ಧತೆ ಮತ್ತು ಪ್ರಾಮಾಣಿಕ ನಿಲುವೇ ಕಾರಣ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಹಣ ಪಾವತಿಸಿ ಜನಪರ ಧೋರಣೆಗೆ ಸಾಕ್ಷಿಯಾಗಿ ಟೀಕಿಸಿದವರ ಬಾಯಿ ಮುಚ್ಚಿಸಿದರು. ಕೂಡಲ ಸಂಗಮ ಮತ್ತು ಬಸವಕಲ್ಯಾಣ ಅಭಿವೃದ್ಧಿ ಸಂದರ್ಭದಲ್ಲಿ ಲಿಂಗಾಯತ ಧರ್ಮಕ್ಕೆ ಪೂರಕವಾಗಿರುವ ಎಲ್ಲಾ ಸಾಕ್ಷಾಧಾರಗಳನ್ನು ಆಸ್ಥೆಯಿಂದ ಸಂಗ್ರಹಿಸಿದರು. ನಂತರ ತಮ್ಮ ಸರಕಾರಿ ಸೇವಾ ಅಧಿಕಾರ ಮುಗಿದ ಮೇಲೆ, ನಾಡಿನ ಪತ್ರಿಕೆಗಳಲ್ಲಿ ಲಿಂಗಾಯತ ಧರ್ಮದ ಕುರಿತು ಲೇಖನಗಳನ್ನು ಬರೆದು ಇವರಲ್ಲಿ ಹುದುಗಿದ್ದ ಸಂಶೋಧಕನನ್ನು ಲೋಕಕ್ಕೆ ಪರಿಚಯಿಸಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಲ್ಲಿ ಸಂಚಲನ ಉಂಟು ಮಾಡಿದರು. 

ಜಾಗತಿಕ ಲಿಂಗಾಯತ ಮಹಾಸಭಾದ ಮೂಲಕ ಹೋರಾಟದ ಆಯಾಮ ಬದಲಿಸಿದ ಇವರು, ಈಗಲೂ ನಿತ್ಯ ಅಂತಹ ಸಾವಿರಾರು ಗೆಜಿಟಿಯರ್ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಬಸವಾದಿ ಶರಣರ ಆರ್ಥಿಕ, ಸಾಮಾಜಿಕ, ಮಾನವೀಯ ಮತ್ತು ಧಾರ್ಮಿಕ ನೆಲೆಯ ವೈಶಾಲ್ಯತೆ ಮತ್ತು ಉದ್ದೇಶಗಳನ್ನು ಸವಿಸ್ತಾರವಾಗಿ ಕಟ್ಟಿ ಕೊಡುತ್ತಾರೆ.

ಲಿಂಗಾಯತ ಧರ್ಮದ ಪರಿಪೂರ್ಣತೆಯನ್ನು ಜಗತ್ತಿಗೆ ಪರಿಚಯಿಸಲು ಯುವಕರು, ಪ್ರಗತಿಪರ ಬರಹಗಾರರು, ಸಾಹಿತಿಗಳು, ಸಂಶೋಧಕರು ಹಾಗೂ ವಿರಕ್ತ ಮಠಾಧೀಶರು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮುಂದೊಂದು ದಿನ ಖಂಡಿತವಾಗಿ ಜಾಗತಿಕ ಮಾನ್ಯತೆ ಲಭಿಸುತ್ತದೆ ಎಂಬ ಭರವಸೆ ಇವರದು. 

‘ಜಾಗತಿಕ ಲಿಂಗಾಯತ ಮಹಾಸಭಾ ರಾಜಕೀಯ ಮುಕ್ತವಾಗಬೇಕು, ಯಾಕೆಂದರೆ ಓಟ್ ಬ್ಯಾಂಕ್ ಕಾರಣದಿಂದಾಗಿ ರಾಜಕೀಯ ನಾಯಕರು ಸತ್ಯ ಪ್ರತಿಪಾದನೆ ಮಾಡಲಾಗುವುದಿಲ್ಲ. ಇಲ್ಲಿ ಸತ್ಯ ಪ್ರತಿಪಾದನೆ ಮುಖ್ಯ. ಮಠಾಧೀಶರು, ಚಿಂತಕರು ಮತ್ತು ಸಂಶೋಧಕರು ಈ ಹೋರಾಟದಲ್ಲಿ ಸಕ್ರಿಯರಾಗಿ, ನಿರ್ಭಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಅವರ ಮಾತುಗಳಲ್ಲಿ ಕಳಕಳಿ ಇದೆ. 

ಜನಪರ ಹೋರಾಟಗಳ ಜೊತೆಗೆ ಸಂಶೋಧನಾತ್ಮಕ ದಾಖಲೆಗಳ ಪ್ರತಿಪಾದನೆ ಗೆಲುವು ತರಬಲ್ಲದು. ಜಾತಿ, ವರ್ಗ,ವರ್ಣಗಳ ಮೀರಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಮೌಲ್ಯಗಳು ಆಚರಣೆಗೆ ಬಂದರೆ ನಮ್ಮ ದೇಶ ಮತ್ತು ಜಗತ್ತು ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ಅವರ ಮಾರ್ಗದರ್ಶನ ನಮ್ಮಂತಹ ಓದು-ಬರಹ ಆಸಕ್ತರಿಗೆ ನಿರಂತರ ಲಭಿಸಲಿ ಎಂದು ಆಶಿಸಿ,ಪ್ರಸಕ್ತ ಸಾಲಿನ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪುರಸ್ಕಾರ ಪಡೆದ ಅವರನ್ನು ಸಮಸ್ತ ನಾಡಿನ ಬಸವ ಭಕ್ತರ ಪರವಾಗಿ ಅಭಿನಂದಿಸುತ್ತೇನೆ. 

The Politic
ರಾಜಕೀಯ

ಗಂಗಾ ಮಾತಾಜಿ ಅವರಿಗೊಂದು ಬಹಿರಂಗ ಪತ್ರ : ಬಸವಕುಮಾರ್ ಪಾಟೀಲ್ 

ದ ಪಾಲಿಟಿಕ್
ದ ಪಾಲಿಟಿಕ್
4 min read

ಬಸವ ಧರ್ಮ ಪೀಠದ ಮುಖ್ಯಸ್ಥರಾದ  ಗಂಗಾ ಮಾತಾಜಿ ಅವರಿಗೆ ಬಸವಕುಮಾರ್ ಪಾಟೀಲ್ ಅವರೊಂದು ಬಹಿರಂಗ ಪತ್ರ ಬರೆದಿದ್ದಾರೆ. ಆ ಪತ್ರ ‘ದ ಪಾಲಿಟಿಕ್‘ ಗೆ ದೊರೆತಿದೆ.

ಪತ್ರದಲ್ಲಿರುವ ಸಂಪೂರ್ಣ ವಿವರ ಇಲ್ಲಿದೆ.

ಪೂಜ್ಯ ಶ್ರೀ ಮಾತೆ ಗಂಗಾದೇವಿ ಅವರಿಗೆ ಶರಣಾರ್ಥಿಗಳು, ತಮಗೊಂದು ಬಹಿರಂಗ ಮನವಿ ಪತ್ರ. 

ಪೂಜ್ಯರೆ,

ಪೂಜ್ಯ ಮಾತಾಜಿಯವರು ಲಿಂಗೈಕ್ಯರಾದ ನಂತರ ಬಸವ ಧರ್ಮ ಪೀಠದಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳು ಕಂಡು ಸಂಸ್ಥೆಯ ಹಿತೈಷಿಗಳು ಆತಂಕಿತರಾಗಿದ್ದಾರೆ. ಇಂದಲ್ಲ ನಾಳೆ ಎಲ್ಲವೂ ಸರಿ ಆಗಬಹುದು ಎಂಬ ಆಶಾಭಾವನೆಯನ್ನು ಹೊಂದಿ ನನ್ನಂತೆಯೇ ಅನೇಕ ಬಸವಾನುಯಾಯಿಗಳು ನೋವು ನುಂಗಿಕೊಂಡು ಮೌನಕ್ಕೆ ಜಾರಿದ್ದಾರೆ. ಆದರದು  ದಿನದಿಂದ ದಿನಕ್ಕೆ ಜಗಳ, ವೈಮನಸ್ಸು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ. 

ನಮ್ಮೆಲ್ಲರ ಪ್ರೀತಿಯ ಹಾಗೂ ಅಭಿಮಾನದ ಬಸವ ಧರ್ಮ ಪೀಠದಲ್ಲಿ ದಿನೇ ದಿನೇ ಏನಾಗುತ್ತಿದೆ? ಅದು ಎತ್ತ ಸಾಗುತ್ತಿದೆ? ಎಂಬುದನ್ನು ಕಂಡು ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿಯವರ ಹೆಗಲಿಗೆ ಹೆಗಲು ಕೊಟ್ಟು ಸಂಸ್ಥೆಯನ್ನು ಕಟ್ಟಿದ ಹಿರಿಯರು ಕಣ್ಣೀರು ಸುರಿಸುತ್ತಿದ್ದಾರೆ. ಈಗಿನವರು ಮಾತನಾಡುತ್ತಿರುವಷ್ಟು ಸುಲಭವಾಗಿ ಸಂಸ್ಥೆ ಕಟ್ಟಿದ್ದಲ್ಲ. ಅದರ ಹಿಂದೆ ಸಾವಿರಾರು ಬಸವ ಭಕ್ತರ ದೊಡ್ಡ ತ್ಯಾಗವಿದೆ. ಅಲ್ಲೊಂದು ದೂರದೃಷ್ಟಿಕೊನವಿತ್ತು. ಅಂದು ಅನೇಕರು  ತನು, ಮನ, ಧನ,  ಬೆವರು ಮತ್ತು ರಕ್ತ ಬಸೆದು ಸಂಸ್ಥೆ ಕಟ್ಟಿದ್ದಾರೆ. ಹಲವರು ತಮ್ಮ ಬದುಕೇ ಕೊಟ್ಟಿದ್ದಾರೆ. ಇವೆಲ್ಲವೂ ತಮಗೆ ಗೊತ್ತಿರುವ ಸಂಗತಿಯಾಗಿದೆ. ಇವುಗಳ ಅರಿವಿಲ್ಲದವರು ಮಾತ್ರ  ದಿನೇ ದಿನೇ ಸಂಸ್ಥೆಯ ಹೆಸರು ಮತ್ತು ಭವಿಷ್ಯವನ್ನು ಅರಿತೋ ಅರಿಯದೆಯೋ ಕತ್ತಲೆಗೆ ದೂಡುತ್ತಿದ್ದಾರೆ. ಇದರಿಂದಾಗಿ ಅದರ ಗತವೈಭವ ಈಗಾಗಲೇ ಭಾಗಶಃ ಕಳೆದಿದೆ.

ಸಂಸ್ಥೆಯಲ್ಲಿ ಏನು ನಡೆಯುತ್ತಿದೆ? ಹೀಗೇಕೆ ಆಗುತ್ತಿದೆ? ಇದರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿಯೆಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಕಾರಣವೆಂದರೆ  ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಯಾರಲ್ಲೂ ಇಲ್ಲ.  ‌ಎಲ್ಲೆಡೆ ಇಂದು ಬರೀ ದ್ವೇಷ, ಅಸೂಯೆ, ಅಹಮಿಕೆ, ಜಗಳ, ಕಿರಿಕಿರಿ, ಕೀಳು ಮಟ್ಟದ ಆರೋಪ – ಪ್ರತ್ಯಾರೋಪ, ತಂತ್ರ , ಕುತಂತ್ರ, ದೂಷಣೆ ಮತ್ತು ನಮ್ಮದೇ ಸತ್ಯವೆಂಬ ಉಡಾಫೆ ಮತ್ತು ಉದ್ಧಟತನದ ಮಾತುಗಳನ್ನೇ ಕೇಳುತ್ತಿದ್ದೇವೆ.  ಮೇಲ್ನೋಟಕ್ಕೆ ‘ಇದಕ್ಕೆಲ್ಲಕ್ಕೂ ಸ್ವಾರ್ಥ, ದ್ವೇಷ, ಅಧಿಕಾರ ದಾಹ ಮತ್ತು ಅಹಮಿಕೆಯೆ ಕಾರಣವಾಗಿದೆ’  ಎಂದು  ಜನರು  ಮಾತನಾಡುತ್ತಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ, ಇದರಿಂದ ಯಾರಿಗೂ ಒಳಿತಾಗುವುದಿಲ್ಲ. 

ಪೂಜ್ಯ ಅಪ್ಪಾಜಿ ಮತ್ತು ಮಾತಾಜಿಯವರು ಯಾವುದೇ ಸರ್ಕಾರಕ್ಕೂ ಕೈಚಾಚದೆ, ಶರಣರ ಸಹಾಯ ಸಹಕಾರದಿಂದ ಬಸವ ಧರ್ಮ ಪೀಠ ಕಟ್ಟಿ ಬೆಳೆಸಿದರು. ಆದರೆ ಅದು ಇಂದು ಹಲವು ಗುಂಪುಗಳಾಗಿ ಒಡೆದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಇದರಿಂದಾಗಿ ಸಂಸ್ಥೆ ಈಗಾಗಲೇ ರಚನಾತ್ಮಕ ಕಾರ್ಯಗಳಿಂದ ಬಹುದೂರ ಸರಿದಿದೆ. ಇದನ್ನೆಲ್ಲ ನೋಡುತ್ತಿರುವ ಮಾತಾಜಿ – ಅಪ್ಪಾಜಿಯವರು ಮಮ್ಮಲ ಮರುಗಿ ಕಣ್ಣೀರು ಸುರಿಸುತ್ತಿರಬಹುದು. ಅವರ ಕಣ್ಣೀರು ಒರೆಸುವವರು ಯಾರು? ಅವರ ನೋವು ಅರ್ಥ  ಮಾಡಿಕೊಳ್ಳುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಅವರು ಸಂಸ್ಥೆಗಾಗಿ ಸವೆದು,  ಸರಳವಾಗಿ  ಬಾಳಿ-ಬದುಕಿ ಸಂಸ್ಥೆ ಕಟ್ಟಿ ಬೆಳೆಸಿದ್ದು ಈ ದಿನಕ್ಕಾಗಿಯೇ?  ಈ ಬೀದಿ ರಂಪಾಟಕ್ಕಾಗಿಯೇ?  ಅವರ ತ್ಯಾಗ, ಸಂದೇಶ, ಶ್ರಮ ಯಾರ ಹೃದಯಕ್ಕೂ ತಟ್ಟುತ್ತಿಲ್ಲವೆಂಬುದೇ ಆಶ್ಚರ್ಯಕರವಾಗಿದೆ. ಈ ಅಹಿತಕರ ಬೆಳವಣಿಗೆಗೆ ಕಾರಣಕರ್ತರಾದವರು ಒಂದಲ್ಲ ಒಂದು ದಿನ ಅವರಿಗೆ ಉತ್ತರ ಕೊಡಲೇ ಬೇಕಾಗುತ್ತದೆ. ಇದು ತಪ್ಪಿದ್ದಲ್ಲ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 

ಅಂದು ಸಂಸ್ಥೆ ಕಟ್ಟಲು ದುಡಿದ ಸಾವಿರಾರು ಮನಸ್ಸುಗಳು ಇಂದು ಕೂಡಾ ಬಸವ ಧರ್ಮ ಪೀಠದ ಏಳಿಗೆಯನ್ನು ಬಯಸುತ್ತಿವೆ. ಈಗಲಾದರೂ ಬಿಕ್ಕಟ್ಟಿಗೆ ದಾರಿ ಕಂಡು ಕೊಂಡು ಇವೆಲ್ಲಕ್ಕೂ ಇತಿಶ್ರೀ ಹಾಡಬಹುದಲ್ಲವೇ? ಈಗಾಗಲೇ  ಕಾಲವಂತೂ ಮಿಂಚಿ ಹೋಗಿದೆ. ಅಪಾರ ಹಾನಿಯಾಗಿದೆ. ಹೀಗಿದ್ದರೂ ಕೊನೆಯ ಪ್ರಯತ್ನವೆಂಬಂತೆ ಸಂಸ್ಥೆಯನ್ನು ಉಳಿಸಿಕೊಂಡು ಮತ್ತೆ ಗತವೈಭವಕ್ಕೆ ಮರಳಲು ತಾವೇ ಪ್ರಯತ್ನಿಸಬೇಕಾಗಿದೆ.   ಈ ನಡೆಯಲ್ಲಿ ಸಂಸ್ಥೆಯ ಹಿತದ ಜತೆಗೆ ಎಲ್ಲರ ಹಿತವೂ ಅಡಗಿದೆ. ಈಗ ಸಂಸ್ಥೆ ಉಳಿಸಲು ನಮಗೆ ಇದೊಂದೇ ದಾರಿ ಕಾಣುತ್ತಿದೆ.  

ಯಾವುದೋ ಒಂದು ಬಿಕ್ಕಟ್ಟಾಗಲಿ, ಸಮಸ್ಯೆಯಾಗಲಿ ಉದ್ಭವವಾದರೆ ಅದಕ್ಕೆ ಪರಿಹಾರವೂ ಇರುತ್ತದೆ. ಈ ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ದೇಶ ದೇಶಗಳ ಮಧ್ಯೆ ಆಗಾಗ್ಗೆ ಬರುವ ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೂಡಾ ಸಂಬಂಧಿಸಿದವರು ಒಂದೆಡೆ ಕೂತು ಚರ್ಚಿಸಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇದಕ್ಕೆ ನೂರೆಂಟು ನಿದರ್ಶನಗಳು ನಮ್ಮ ಕಣ್ಣೇದುರಿನಲ್ಲಿವೆ. ಉದ್ವೇಗ, ಅಸಹನೆ, ಕಡುಕೋಪ, ಹಠಮಾರಿತನ,  ದ್ವೇಷ, ಅಸೂಹೆಯಿಂದ ಏನು ಸಾಧಿಸಲು ಆಗುವುದಿಲ್ಲ. ಇದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಇದು ಬಸವ ಧರ್ಮ ಪೀಠದಲ್ಲಿ ನಡೆಯುತ್ತಿರುವ ಜಗಳಕ್ಕೂ ಅನ್ವಯಿಸುತ್ತದೆ! 

ಬಸವ ಧರ್ಮ ಪೀಠವಲ್ಲದೆ ಜಗಕ್ಕೆಲ್ಲ ಬಸವ ತತ್ವದ ಬಗ್ಗೆ ಪಾಠ ಮಾಡುತ್ತಿರುವ ಕೆಲವು ಮಠಗಳಲ್ಲೂ, ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಅಸಹ್ಯಕರ ಘನಂದಾರಿ ಕಾರ್ಯಗಳಿಂದಾಗಿ ಸಮಾಜದಲ್ಲಿ ಬಸವಾನುಯಾಯಿಗಳನ್ನು ಜನರು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ‘ಇವರೆಲ್ಲಾ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ’  ಎಂದು ಜನರು ನಮ್ಮ ಮುಖದ ಮೇಲೆ ಹೊಡೆದಂತೆ ಹೇಳುತ್ತಿದ್ದಾರೆ. ಬಸವ ಭಕ್ತರು ಜನರ ಮಾತಿಗೆ ನಿರುತ್ತರರಾಗಿ ತಲೆತಗ್ಗಿಸುತ್ತಿದ್ದಾರೆ. ಹೊಸ ಪೀಳಿಗೆ ಬಸವ ತತ್ವದ ಕಡೆಗೆ ಮುಖಮಾಡಲು ಈ ಬೆಳವಣಿಗೆಗಳು ತಡೆಗೋಡೆಯಾಗಿವೆ. ಇದು ಯಾವುದೋ ಒಂದು ಮಠ, ಸಂಸ್ಥೆಯಲ್ಲಿ ನಡೆಯುವ ಜಗಳವಾದರೂ ಇದರ ಪರಿಣಾಮ ನೇರವಾಗಿ ಸಮಾಜದ ಮೇಲೆ ಮತ್ತು ಬಸವ ತತ್ವದ ಮೇಲೆ ಬೀಳುತ್ತಿದೆ.

ಈ ಜಗಳಗಳು ಹೀಗೆ ಮುಂದುವರೆದರೆ ಬಸವ ತತ್ವಕ್ಕೆ ಹಿನ್ನಡೆಯಾಗಲಿದೆ. ಇದಕ್ಕೆ ಸೈದ್ಧಾಂತಿಕ ವಿರೋಧಿಗಳು ಬೇಕಾಗಿಲ್ಲ, ನಾವೇ ಸಾಕು, ನಮ್ಮ ಜಗಳವೇ ಸಾಕು. ಇತಿಹಾಸ ಎಲ್ಲವೂ ಗಮನಿಸುತ್ತಿದೆ ಮತ್ತು ದಾಖಲಿಸಿಕೊಳ್ಳುತ್ತಿದೆ. ಯಾರೇ ಮರೆತರು ಇತಿಹಾಸ ಮರೆಯುವುದಿಲ್ಲ. ಮುಂದಿನ ಪೀಳಿಗೆ ನಮ್ಮನ್ನು  ಸ್ವಾರ್ಥಿಗಳು, ಅಧಿಕಾರ – ಆಸ್ತಿಗಾಗಿ ಬಡೆದಾಡಿದವರು ಲೋಭಿ ಮನಸ್ಸುಳ್ಳವರು ಎಂದು ನೆನೆಸಿಕೊಂಡು ನಮ್ಮನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎಂಬುವುದು ನಾವೆಲ್ಲರೂ ಮರೆಯದಿರೋಣ. 

ಈಗಾಗಲೇ ಬಸವ ಧರ್ಮ ಪೀಠದಲ್ಲಿನ ಜಗಳವೂ ಎಲ್ಲಾ ಎಲ್ಲೆಗಳನ್ನು ಮೀರಿ ಈಗ ನ್ಯಾಯಲಯದ ಅಂಗಳದಲ್ಲಿದೆ. ಎಲ್ಲರಿಗೂ ನ್ಯಾಯಾಂಗ ಮೇಲೆ ಅಪಾರ ನಂಬಿಕೆಯಿದೆ. ಹೀಗಿದ್ದರೂ ನ್ಯಾಯ ಪಡೆಯಲು ತುಂಬಾ ವರ್ಷಗಳೇ ಬೇಕಾಗುತ್ತವೆ. ಅಲ್ಲಿಯವರೆಗೆ ಪ್ರಾಯಶಃ ಒಂದು ತಲೆಮಾರು ಹೋಗುತ್ತದೆ. ಬಸವ ತತ್ವ ಪ್ರಸಾರದ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಮನಸ್ಸುಗಳು ರಿಪೇರಿ ಆಗದಷ್ಟು ಇನ್ನೂ ಕಲುಷಿತಗೊಳ್ಳುತ್ತವೆ. ಎಲ್ಲರ ಆಯುಷ್ಯ ಜಗಳ ಆಡುವುದರಲ್ಲೇ ಕಳೆದು ಹೋಗುತ್ತದೆ ಎಂಬ ಆತಂಕ ನಮ್ಮದಾಗಿದೆ. 

ಅದಕ್ಕಾಗಿ ಪೂಜ್ಯ ಮಾತಾಜಿಯವರೇ, ತಮ್ಮಲ್ಲಿ ನಮ್ಮದೊಂದು ಕಳಕಳಿಯ ಮನವಿ, ತಾವು ದೊಡ್ಡವರು ಮತ್ತು ದೊಡ್ಡ ಸ್ಥಾನದಲ್ಲಿರುವವರು, ತಾವು ಮನಸ್ಸು ಮಾಡಿ ಈ ಜಗಳಕ್ಕೆ ಇತಿಶ್ರೀ ಹಾಡಿ. ಇದು ತಮ್ಮ ಜವಾಬ್ದಾರಿಯೂ, ಕರ್ತವ್ಯವೂ ಆಗಿದೆ. ಒಂದು ಮನೆಯ ಜಗಳ ತಾಯಿ ಅಲ್ಲದೆ ಇನ್ನಾರು ಪರಿಹರಿಸಲು ಶಕ್ತರು? ತಮ್ಮಿಂದ ದೂರ ಇರುವ ಸಂಸ್ಥೆಯ ಪೂಜ್ಯರನ್ನು ಮತ್ತು ಬಸವ ಭಕ್ತರನ್ನು ಕರೆದು ತಾವು ಮಾತನಾಡಿಸಿ, ಅವರಲ್ಲಿ ಭರವಸೆ ಮೂಡಿಸಿದರೆ ಎಲ್ಲವೂ ಸುಖಾಂತ್ಯವಾಗಬಹುದು ಎಂಬ ನಂಬಿಕೆ ನಾವೆಲ್ಲಾ ಹೊಂದಿದ್ದೇವೆ. 

ತಾವು ಈ ದಿಶೆಯಲ್ಲಿ ಪ್ರಯತ್ನ ಮಾಡುತ್ತಿರೆಂದು ನಂಬಿದ್ದೇವೆ. ನಮ್ಮ ನಂಬಿಕೆ ಹುಸಿಯಾಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಒಂದು ವೇಳೆ ತಾವು ಪ್ರಯತ್ನಿಸಿದರೂ ಜಗಳಕ್ಕೆ ಫುಲ್ ಸ್ಟಾಪ್ ಇಡಲು ಸಾಧ್ಯವಾಗದಿದ್ದಲ್ಲಿ, ತಾವೇ ಒಂದು ದಿನಾಂಕ ನಿಗದಿ ಮಾಡಿ ಬಸವ ಭಕ್ತರ ಮತ್ತು ಸಂಸ್ಥೆಯ ಹಿತೈಷಿಗಳ ಸಭೆ ಕರೆಯಿರಿ.ತಾವು ಸದರಿ ಸಭೆಯಲ್ಲಿ ಎಲ್ಲರೆದರು ಈ ಜಗಳಕ್ಕೆ ಕಾರಣವೇನೆಂದು ಬಿಚ್ಚಿಡಿ.  ಹಾಗೆಯೇ ತಮ್ಮ ಮೇಲೆ ಅಸಮಾಧಾನದಿಂದ ಇರುವ ಪೂಜ್ಯರಿಗೂ  ಮತ್ತು ಬಸವ ಭಕ್ತರಿಗೂ ಮಾತಾಡಲು ಅವಕಾಶ ಕೊಡಿ. ಅವಶ್ಯಕತೆ ಅನಿಸಿದರೆ ಇದಕ್ಕಾಗಿ ಒಂದು ಕಮೀಟಿಯೂ ಮಾಡೋಣ, ನಿರ್ಣಯವನ್ನು ಈ ಕಮೀಟಿಗೆ ಬಿಡೋಣ. ಇಲ್ಲೂ ಪರಿಹಾರವಾಗದಿದ್ದಲ್ಲಿ ಗೌರವಾನ್ವಿತ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪುನಃ ಮತ್ತೊಂದು ಸಮಿತಿ ಮಾಡೋಣ. ಸತ್ಯಾಸತ್ಯತೆ ಪರಿಶೀಲಿಸಿ ಅವರು ಕೊಡುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗೋಣ. ಈ ಮೂಲಕ ಪೂಜ್ಯ ಲಿಂಗೈಕ್ಯ ಮಾತಾಜಿಯವರು ತಮ್ಮ ಕೊನೆಯ ಶರಣ ಮೇಳದಲ್ಲಿ ಆಡಿದ ಮಾತುಗಳನ್ನು ಉಳಿಸಿಕೊಳ್ಳೋಣ. ಆ ಮೂಲಕ  ಅವರಿಗೆ ಗೌರವಿಸೋಣ. 

ಪೂಜ್ಯರೇ, ತಾವು ಕಳೆದ 50 ವರ್ಷಗಳಿಂದ ಈ ಸಂಸ್ಥೆಗಾಗಿ ದುಡಿದು ಸವೆದಿದ್ದಿರಿ. ತಮ್ಮ ಶ್ರಮ ಮತ್ತು ಸಂಸ್ಥೆಯ ಮೇಲೆ  ತಮಗಿರುವ ಕಾಳಜಿ ಅಪಾರ. ಅದು ತಮ್ಮೆದುರೇ ಹಾಳಾಗಬಾರದು. ಹಾಳಾದರೆ ತಮಗೇ ಮೊದಲು ನೋವಾಗುವುದು. ಯಾವುದೋ ಕೆಟ್ಟ ಗಳಿಗೆಯಲ್ಲಿ ಸಂಸ್ಥೆಯ ಅನೇಕರು ತಮ್ಮ ಮೇಲೆ ಅಸಮಾಧಾನವಾಗಿ, ತಮ್ಮಿಂದ ದೂರ ಉಳಿದಿದ್ದಾರೆ.‌ ಅವರಿಗೂ ಸಹ ಸಂಸ್ಥೆಯ ಮೇಲೆ ಕಾಳಜಿಯಿದೆ. ಸಂಸ್ಥೆ ಕಟ್ಟಿ ಬೆಳೆಸಲು ಅವರದ್ದೂ ಶ್ರಮವಿದೆ ಎಂಬುವುದು ಅಲ್ಲಗಳೆಯಲಾಗದು. ದಿನದಿಂದ ದಿನಕ್ಕೆ ಈ ಕಂದಕ ಹೆಚ್ಚಾಗುತ್ತಿದೆ. ಈ ಜಗಳದಲ್ಲಿ ಕೊನೆಗೊಂದು ದಿನ ಯಾರೇ ಗೆದ್ದರೂ ಇಲ್ಲಿ ಸೋಲುವುದು ಮಾತ್ರ ಸಂಸ್ಥೆ ಮತ್ತು ಲಿಂಗೈಕ್ಯ ಅಪ್ಪಾಜಿ – ಮಾತಾಜಿಯವರ ಆಶಯ ಹಾಗೂ ಕನಸುಗಳು. 

ಕೊನೆಗೊಂದು ವಿನಮ್ರ ಮನವಿ: ನಿತ್ಯ ನಡೆಯುತ್ತಿರುವ ಬೀದಿ ರಂಪಾಟ ನೋಡಿ ನನ್ನ ಮನಸ್ಸು ವ್ಯಾಕುಲಗೊಂಡಿದೆ. ಮನಸ್ಸು ತಡಿಯದೇ ಈ ಪತ್ರವನ್ನು  ತಮಗೆ ಬರೆಯುತ್ತಿದ್ದೇನೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದರಿಂದ ಇದನ್ನು ಬಹಿರಂಗಪಡಿಸಿದ್ದೇನೆ‌.  ಬಸವ ಧರ್ಮ ಪೀಠ, ಅದು ನಮ್ಮ ಮನೆ.  ಅದು ಯಾವಾಗಲೂ ಒಗ್ಗಟ್ಟಾಗಿ ಮತ್ತು ಬಲಿಷ್ಠವಾಗಿ ಇರಬೇಕೆಂಬುವುದು ನಮ್ಮ ಆಶಯವಾಗಿದೆ. ನನ್ನ ಕಳಕಳಿಯನ್ನು ತಾವು ಮತ್ತು ಉಳಿದೆಲ್ಲಾ ಪೂಜ್ಯರು ಅರ್ಥೈಸಿಕೊಂಡು ಎಲ್ಲವೂ ಸರಿಪಡಿಸುತ್ತಿರೆಂದು ನಂಬಿದ್ದೇನೆ.

ಶರಣುಗಳೊಂದಿಗೆ,

ಬಸವಕುಮಾರ್ ಪಾಟೀಲ್, ಬೀದರ.

The Politic
ವಿಶೇಷ ವರದಿ

ಧನ್ನೂರ ರಾಜೀನಾಮೆ ಅಂಗೀಕಾರ : ಗಂಗಾ ಮಾತಾಜಿ

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
1 min read

ರಾಷ್ಟ್ರೀಯ ಬಸವ ದಳದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಧನ್ನೂರ ಅವರು ರಾಜೀನಾಮೆ  ನೀಡಿದ್ದಾರೆ. ಮೊನ್ನೆ ಜಹೀರಾಬಾದಗೆ ಬಂದು ನಮ್ಮ ಕೈಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ನಾವು ಅಂಗೀಕರಿಸಿದ್ದೇವೆ.  ನೂತನ ರಾಷ್ಟ್ರಾಧ್ಯಕ್ಷರನ್ನ ಶರಣ ಮೇಳದಲ್ಲಿ ಆಯ್ಕೆ ಮಾಡುತ್ತೇವೆ ಎಂದು ಬಸವ ಧರ್ಮ ಪೀಠದ ಗಂಗಾ ಮಾತಾಜಿ ದ ಪಾಲಿಟಿಕ್ ತಿಳಿಸಿದ್ದಾರೆ. 

ಧನ್ನೂರ ಅವರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಹೊಸಬರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಅವರು ನೀಡಿರುವ  ರಾಜೀನಾಮೆಯನ್ನು ಸ್ವೀಕರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. 

The Politic
ವಿಶೇಷ ವರದಿ

ಇಂದು ‘ಅಕ್ಷರ ಸಂತ’ನಿಗೆ 73ರ ಸಂಭ್ರಮ..!

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
3 min read

ಇಂದು ಅಕ್ಷರ ಸಂತ ಬಸವಲಿಂಗ ಪಟ್ಟದೇವರ 73ನೇ ಹುಟ್ದಬ್ಬ. ಇವರ ಬದುಕು ಮತ್ತು  ಇವರು ಸಾಗಿ ಬಂದ ದಾರಿ ನಮ್ಮಂತಹ ಆಧುನಿಕ ತಲೆಮಾರಿನ ಯುವಜನೆತೆಗೆ ಮತ್ತು ಮಠಾಧೀಶರಿಗೆ ಒಂದು ರೋಲ್‌ ಮಾಡೆಲ್‌ ಆಗಿದೆ.  ಒಂದೆಡೆ, ಡಾ. ಚನ್ನಬಸವ ಪಟ್ಟದೇವರು ತನ್ನ ಬೆವರು, ರಕ್ತ ಬಸಿದು ಕಟ್ಟಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ  ಅವರ ಬೊಳೆತನ ಹಾಗೂ ಅತಿನಂಬಿಕೆಯಿಂದಾಗಿ ತನ್ನ ಕಣ್ಣೆದುರೆ ಖಂಡ್ರೆ ಕುಟುಂಬದ ಕೈವಶವಾಯಿತು. ಇನ್ನೊಂದೆಡೆ, ತಮ್ಮ ಗುರುಗಳೇ ಸ್ವತಃ ತಮ್ಮ ತಲೆಯಮೇಲೆ ಕಲ್ಲು, ಮಣ್ಣು ಹೊತ್ತಿ ನಿರ್ಮಿಸಿದ ನೂತನ ಅನುಭವ ಮಂಟಪವೂ ಮುರುಘಾಶ್ರೀಗಳು ಕಪಟತನದಿಂದ ಇವರಿಂದ ಕಬಳಿಸಿಕೊಂಡರು. ಮತ್ತೊಂದೆಡೆ,  ಆಗ ಮಠದಲ್ಲಿ ಒಂದು ಸಣ್ಣ ಬಾತ್‌ರೂಂ ಕಟ್ಟಿಸಿಕೊಳ್ಳಲೂ ಇವರಲ್ಲಿ ಆರ್ಥಿಕ ಶಕ್ತಿ ಇರಲಿಲ್ಲ. ಮಗದೊಂದೆಡೆ ತರಳುಬಾಳು ಮಠದಂತೆ ತಮ್ಮ ಮಠಕ್ಕೆ ಯಾವುದೇ ಜಾತಿ\ಉಪಜಾತಿಯ ಬಲವೂ ಇರಲಿಲ್ಲ. ಮೇಲಾಗಿ ಮಠದ ಸುತ್ತಲೂ ಭಯದ ಕಾರ್ಮೋಡ.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಬಸವಲಿಂಗ ಪಟ್ಟದೇವರಲ್ಲದೆ ಬೇರೆ ಯಾರೇ ಆಗಿದ್ದರೂ ಪ್ರಾಯಶಃ ಒಂದೋ ಅವರು ಮಠ ಬಿಟ್ಟು ಓಡಿ ಹೊಗುತ್ತಿದ್ದರು. ಇಲ್ಲವೇ ಪಟ್ಟಭದ್ರ ಶಕ್ತಿಗಳಿಗೆ ಶರಣಾಗಿ ಕೇವಲ ಅವರ ರಬ್ಬರ್‌ ಸ್ಟಾಂಪ್‌ ಆಗಿ ಮೂಲೆಗುಂಪಾಗುತ್ತಿದ್ದರು.  ಆದರೆ, ಇಂದು ಇವರೊಂದು ಚರಿತ್ರೆಯೆ ನಿರ್ಮಿಸಿದ್ದಾರೆ.  ಇಂದು ಭಾಲ್ಕಿಮಠ ಮತ್ತೇ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ತಕ್ಕಮಟ್ಟಿಗೆ ಆರ್ಥಿಕವಾಗಿಯೂ ಬೆಳೆದು ನಿಂತಿದೆ. ಇದರ ಸಂಪೂರ್ಣ ಶ್ರೇಯಸ್ಸು  ಬಸವಲಿಂಗ ಪಟ್ಟದೇವರಿಗೆ ಸಲ್ಲಬೇಕು. ಇಲ್ಲದಿದ್ದರೆ ಅದು ಚರಿತ್ರೆಗೆ ಬಗೆಯುವ ದ್ರೋಹವಾಗುತ್ತದೆ. ಇವರಲ್ಲಿ ಅಂತರ್ಗತವಾಗಿರುವ ಕಾರುಣ್ಯ, ಛಲ ಮತ್ತು ಇವರ ದಣಿವರಿಯದ ಅಪಾರ ದುಡಿಮೆಯಿಂದಾಗಿ ಇದು ಸಾಧ್ಯವಾಗಿದೆ. ಕಬಳಿಸಿದರೊಂದಿಗೆ, ಕಸಿದುಕೊಂಡವರೊಂದಿಗೆ ಜಗಳಕ್ಕಿಳಿಯದೆ, ಅದರ ಉಸಾಬರಿಗೂ ಹೋಗದೆ, ಕಂಗಳಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು 1992 ರಲ್ಲಿ  ʻಹಿರೇಮಠ ಸಂಸ್ಥಾನ ವಿದ್ಯಾಪೀಠʼ ಎಂಬ ಸಸಿ ನೆಟ್ಟಿದರು. ಇಂದು ಈ ಸಂಸ್ಥೆ ಕಡೆ ಇಡೀ ನಾಡೇ ತಿರುಗಿ ನೋಡುವಂತೆ ಬೆಳೆದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಮತ್ತು ಸಾವಿರಾರು ಕುಟುಂಬಕ್ಕೆ ಅನ್ನದ ದಾರಿಯಾಗಿದೆ.

ಪಟ್ಟದೇವರ ಬಸವ ಪ್ರೀತಿ, ಲಿಂಗಾಯತ ಧರ್ಮ ನಿಷ್ಠೆ,  ಇವರ ಸೈದ್ಧಾಂತಿಕ ವಿರೋಧಿಗಳು ಸಹ ಅಲ್ಲಗಳೆಯುದಿಲ್ಲ. ತನ್ನ ಆರೋಗ್ಯವನ್ನು ಲೆಕ್ಕಿಸದೇ ಈ ಇಳಿವಯಸ್ಸಿನಲ್ಲೂ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕರ್ನಾಟಕ ಒಳಗೊಂಡಂತೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಾದಂತ್ಯ ಬಸವ ತತ್ವ ಪಸರಿಸುತ್ತಿದ್ದಾರೆ. ಲಿಂಗಾಯತ ಹೋರಾಟದ ವಿಷಯದಲ್ಲಿ  ಇವರಿಗಿರುವ ಬದ್ಧತೆ ಪ್ರಶ್ನಾತೀತ. ಇಂದು ಬಹುತೇಕ ಸ್ವಾಮಿಗಳೂ ರಾಜಕಾರಣಿಗಳೂ ಹೋರಾಟದ ಕಣದಿಂದ ಮುಖ ತಿರುಗಿಸಿದ್ದಾರೆ. ಆದರೆ ಇವರು ಮಾತ್ರ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆದಿಲ್ಲ. ಅದೇ ಉತ್ಸಾಹ, ಅದೇ ಕಾಳಜಿ, ಅದೇ ಬದ್ಧತೆ, ಅದೇ ನಿಷ್ಠೆಯಿಂದ ಇವತ್ತಿಗೂ ಶ್ರಮಿಸುತ್ತಿದ್ದಾರೆ.  ಧರ್ಮದ  ವಿಷಯ ಬಂದಾಗ ಯಾವ ಮುಲಾಜಿಲ್ಲದೆ ಹೇಳಿಕೆ ನೀಡುತ್ತಾ ಹೋರಾಟದ ಕಾವು ಆರದಂತೆ ನೋಡಿಕೊಳ್ಳುತ್ತಿದ್ದಾರೆ.

ಇವರು ಜಾತಿಯ ಬಲದಿಂದ ಮಠದ ಪೀಠಾಧಿಪತಿ ಆದವರಲ್ಲ; ತತ್ವದ ಬಲದಿಂದ ಸ್ವಾಮೀಜಿಗಳಾದವರು. ಇಂದು ನಾಡಿನ ಬಹುತೇಕ ಮಠಾಧೀಶರು ತಮ್ಮ ಜಾತಿ, ಉಪಜಾತಿಗಳ ಮೋಹದಿಂದ ಇನ್ನೂ ಹೊರಗೆ ಬಂದಿಲ್ಲ. ಅದೆ ಕೊಚ್ಚೆಯಲ್ಲಿ ಹೊರಳಾಡುತ್ತಿದ್ದರೆ. ಮಠಗಳಲ್ಲಿ ಕಾಲಿಟ್ಟ ತಕ್ಷಣ ಜಾತಿ, ಉಪಜಾತಿಯ ಮೋಹಪಾಶದ ಗಬ್ಬುನಾತ ನಮ್ಮ ಮೂಗಿಗೆ ಬಡೆಯುತ್ತದೆ. ವಾಸ್ತವವಾಗಿ ಇವು ಮಠಗಳಲ್ಲ, ಜಾತಿ-ಉಪಜಾತಿಗಳನ್ನ   ಪೋಷಿಸುವ ನರ್ಸರಿ ಸ್ಕೂಲ್ ಗಳಾಗಿವೆ. ಇಂತಹ ಮಠದ ಸ್ವಾಮಿಜಿಗಳು ಲಿಂಗಾಯತ ಸ್ವಾಮೀಜಿಗಳಲ್ಲ. ಅವರು ಕೇವಲ ಯಾವುದೋ ಒಂದು ಜಾತಿ ಮತ್ತು ಉಪಜಾತಿ ಶ್ರೀಗಳು ಅಷ್ಟೇ.  ಭಾಲ್ಕಿ ಮಠಕ್ಕೆ ಭೂತಗನ್ನಡಿ ಹಾಕಿ ಹುಡುಕಿದರೂ ಜಾತಿ, ಉಪಜಾತಿಯ ಕರಿನೆರಳಿನ ಸಣ್ಣ ಛಾಯೆಯೂ ಸಿಗುವುದಿಲ್ಲ.  ಇಂದು ಭಾಲ್ಕಿಮಠ ಹಂತಹಂತವಾಗಿ ಸಮಾಜದ ಕೇಂದ್ರ ಸ್ಥಾನಕ್ಕೆ ಬರುತ್ತಿದೆ. ಇದಕ್ಕೆ ಮಠದ ಈ ಜಾತ್ಯಾತೀತ ನಿಲುವೂ ಕಾರಣವಾಗಿದೆ.

ಇಂದು ಬಸವಕಲ್ಯಾಣದಲ್ಲಿ ಭವ್ಯವಾದ ನೂತನ ಅನುಭವ ಮಂಟಪದ ಕಟ್ಟಣ ಆರಂಭವಾಗಿದೆ. ಈ ಐತಿಹಾಸಿಕ ಕಟ್ಟಡಕ್ಕಾಗಿ  ಪಟ್ಟದೇವರು ಹಾಕಿದ ಶ್ರಮ ಹೇಳತಿರದು. ಇದಕ್ಕಾಗಿ ಬೆಂಗಳೂರಿಗೆ ಅಡ್ಡಾಡಿದ್ದು ಲೆಕ್ಕವೇ ಇಲ್ಲ. ಜತೆಗೆ ತನ್ನ ಅಧೀನದಲ್ಲಿರುವ ನಾಲ್ಕಾರು ಕೋಟಿ ಬೆಲೆಬಾಳುವ ಎಂಟು ಎಕರೆ ಜಮೀನನ್ನು ಯಾವ ಷರತ್ತಿಲ್ಲದೆ ಅನುಭವ ಮಂಟಪ ಕಟ್ಟಲು ಸರ್ಕಾರಕ್ಕೆ ಪುಕ್ಕಟೆಯಾಗಿ ನೀಡಿದ್ದಾರೆ. ಇದು ಇವರ ಬಸವ ನಿಷ್ಠೆಯ ದ್ಯೋತಕ.

ತಾನಿನ್ನು ಗಟ್ಟಿಮುಟ್ಟಾಗಿರುವಾಗಲೇ ತಮ್ಮ ಮಠಕ್ಕೆ ತನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಂಡು, ಅವರಿಗೆ ಮಠದ ಸಂಪೂರ್ಣ ಜವಾಬ್ದಾರಿವಹಿಸಿ, ಅವರ ಬೆಳವಣೆಗೆಯಲ್ಲೇ ತನ್ನ ಬೆಳವಣಿಗೆ ಕಂಡು ಖುಷಿ ಪಡುವದಿದೆಯಲ್ಲ, ಅದು ಸಾಮಾನ್ಯವಲ್ಲ. ಅದು ಬಸವಲಿಂಗ ಪಟ್ಟದೇವರಿಂದಲ್ಲದೆ ಇನ್ಯಾರಿಂದಲೂ ಸಾಧ್ಯವಿಲ್ಲವೇನೋ!  “ಇಂದು ಮಠಗಳಲ್ಲಿ ಬಸವಲಿಂಗ ಪಟ್ಟದೇವರಂತಹ ಗುರು – ಗುರುಬಸವ ಪಟ್ಟದೇವರಂತಹ ಶಿಷ್ಯ ಕಾಣುವುದೇ ಅಪರೂಪವಾಗಿದೆ. ಇವರಿಬ್ಬರ ಜೋಡಿ ನಮಗೆಲ್ಲ (ಮಠಾಧೀಶರಿಗೆ) ಒಂದು ಮಾದರಿಯಾಗಿದೆ”   ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯನಿಲ್ಲ..

ಇವರ ಅಪಾರ ದುಡಿಮೆ, ಸೇವೆ, ಛಲ, ಬಸವ ನಿಷ್ಠೆ, ಕಾರುಣ್ಯ, ಗುರು-ಶಿಷ್ಯರ ಪ್ರಿತಿ ಚರಿತ್ರೆ ದಾಖಲಿಸಿಕೊಳ್ಳುತ್ತದೆ ಮತ್ತು ಅವು  ʼಬಸವಲಿಂಗ ಪಟ್ಟದೇವರ ಪಥʼ ಎಂಬ ಹೆಸರಿನಲ್ಲಿ ಜನಜನಿತವಾಗಿ ಉಳಿಯುತ್ತವೆ.

The Politic

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ಲೇಟೆಸ್ಟ್