ದ ಪಾಲಿಟಿಕ್

ಸಿದ್ಧೇಶ್ವರ ಸ್ವಾಮಿಗಳ ನಿಜರೂಪವನ್ನು ಲಿಂಗಾಯತರು ಅರಿತಷ್ಟು  ಒಳ್ಳೆಯದು : ಶಿವಾನಂದ ಜಾಮದಾರ

ದ ಪಾಲಿಟಿಕ್

ದ ಪಾಲಿಟಿಕ್

ಸಿದ್ಧೇಶ್ವರ ಸ್ವಾಮಿಗಳನ್ನು  ನಾನು ಪ್ರಥಮ ಸಲ ನೋಡಿದ್ದು1999ರ ಸುಮಾರಿಗೆ. ಅದು ಬೀಳಗಿಯ ಬಾಪೂಜಿ ಆಬ೯ನ ಬ್ಯಾಂಕಿನ ಉದ್ಘಾಟನೆಯ ಸಂದರ್ಭದಲ್ಲಿ. ನಾನು ಅವಸರದಲ್ಲಿ ಉದ್ಘಾಟನಾ ಭಾಷಣ ಮುಗಿಸಿ ಹೊರಟುಹೋಗಿದ್ದರಿಂದ ಅವರ ಪರಿಚಯ ನನಗೆ ಆಗಲಿಲ್ಲ.

ಬಿಳಿಯ ಖಾದಿ ಷಟ೯ ಹಾಗೂ ಲುಂಗಿಯಲ್ಲಿ ಕಾಣುವ ಸಣಕಲು ದೇಹದ, ಸಾದಗಪ್ಪು ವಣ೯ದ, ಸಾಧಾರಣ ಎತ್ತರದ, ಕೋಲು ಮುಖ, ಕುರುಚಲ ಗಡ್ಡ ಹಾಗೂ ತಲೆಕೂದಲಿನ ಅವರದು ದೈಹಿಕವಾಗಿ ಅಷ್ಟೊಂದು ಎದ್ದುಕಾಣದ ವ್ಯಕ್ತಿತ್ವ. 

ಕೆಲ ದಿನಗಳ ನಂತರ  ಜಮಖಂಡಿಯ ಅವರ ಪ್ರವಚನದ ಕಾರ್ಯಕ್ರಮಕ್ಕೆ  ಸಂಘಟಕರು ಆಹ್ವಾನಿಸಿದ್ದರೂ ಅಂತಹ ಪ್ರವಚನಗಳಲ್ಲಿ ಆಸಕ್ತಿಯಿಲ್ಲದ ನಾನು ಹೋಗಿರಲಿಲ್ಲ. ಆದರೆ ಅವರ ಭಾಷಣಗಳ ಧ್ವನಿ ಮುದ್ರಿಕೆಯನ್ನು ಕೇಳಿದೆ.

ಮೂರನೆಯ ಸಲ, ಬೆಂಗಳೂರಿನಲ್ಲಿ ನಡೆದ ಸುತ್ತೂರು ಮಠದ ಒಂದು ಕಾಯ೯ಕ್ರಮದಲ್ಲಿ ಸುತ್ತೂರು ಶ್ರೀಗಳು ಅವರ ಪರಿಚಯ ಮಾಡಿಕೊಟ್ಟರು. 

ನಂತರ ಸಿದ್ಧೇಶ್ವರ ಸ್ವಾಮಿಗಳು ಕಾಗವಾಡದ ಅವರ ಶಿವಾನಂದ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋಗಲು ಕೇಳಿಕೊಂಡಿದ್ದರಿಂದ ಹೋಗಿದ್ದೆ.

ಆ ನಂತರ ಆಗಾಗ ಬಹಳ ಜನರು ಅವರ ಸರಳ ಸಾದಾತನ, ಆಳವಾದ ಓದು, ಆಕಷ೯ಕ ಭಾಷಣಗಳ ಬಗ್ಗೆ ಹೇಳಿದ್ದರು. ಬೇರೊಂದು ಕಾಯ೯ಕ್ರಮಕ್ಕೆ ಬಿಜಾಪುರಕ್ಕೆ ಹೋದಾಗ ಅವರ ಆಶ್ರಮವನ್ನು ನೋಡಿದೆ. 

ಅವರ ಆಶ್ರಮದಲ್ಲಿ ನಾಲ್ಕಾರು ಎಕರೆ ಕ್ಷೇತ್ರದಲ್ಲಿ ಬೇರೆ ಬೇರೆ ಕಟ್ಟಡಗಳು ದೊಡ್ಡದಾದ ಒಂದು ಉದ್ಯಾನ ಇವೆ. ಬಹಳಷ್ಟು ಜನರು ಅಲ್ಲಿಗೆ ದಿನನಿತ್ಯ ಬರುತ್ತಾರೆ. ದಾಸೋಹ ವ್ಯವಸ್ಥೆ ಇದೆ. ಅದು ಇತರ ಮಠಗಳಿಗಿಂತ ಅಷ್ಟೇನೂ  ಭಿನ್ನವಾಗಿಲ್ಲ. 

ಅಲ್ಲಿಯ ವಿಶೇಷತೆಯೆಂದರೆ ಸ್ವಾಮಿಗಳು ಕಾವಿಬಟ್ಟೆ ಹಾಕೊಲ್ಲ.  ಪಾದಪೂಜೆ ಮಾಡಿಸಿಕೊಳ್ಳಲ್ಲ. ಅದು ಹೆಸರಿಗೆ ಮಾತ್ರ ಮಠವಲ್ಲ ಆಶ್ರಮ. ಅದನ್ನು ನಡೆಸುವ ಶ್ರಮ ಬೇರೆಯವರದ್ದು! ಈ ಸ್ವಾಮಿಗಳು ಎಲ್ಲಿಯೂ,ಯಾವುದೇ ಜವಾಬ್ದಾರಿಯುತ ಕಾರ್ಯದ ಭಾರ ಹೊರಲ್ಲ. ಬೇರೆಯವರು ಹೊರುತ್ತಾರೆ. ಆಗ ಭಾಷಣಕ್ಕೆ ಮಾತ್ರ ತಪ್ಪಿಸಿಕೊಳ್ಳಲ್ಲ. ಹಾಗಿದ್ದರೂ ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಯಾರು ಹೇಗೆ ನಿವ೯ಹಿಸುತ್ತಾರೆ. ಅದರ ಹಣಕಾಸು ಯಾರು ನಿಭಾಯಿಸುತ್ತಾರೆ ಗೊತ್ತಿಲ್ಲ.  ಆದರೆ ಅಲ್ಲಿ ಕಾಣುವವರು ದೊಡ್ಡ ದೊಡ್ಡ ಕುಳಗಳೆ! ಅವರಲ್ಲಿ ಕಂಟ್ರ್ಯಾಕ್ಟರುಗಳದ್ದು ಸಿಂಹಪಾಲು. 

ಈ ಆಶ್ರಮಕ್ಕೆ ಬರುವ ಬಹಳಷ್ಟು ಜನರು ಲಿಂಗಾಯತರು. ಆದರೆ ಇದು ಲಿಂಗಾಯತ ಮಠವಲ್ಲ.

ಸ್ವಾಮಿಗಳು ಲಿಂಗಾಯತರು. ಆದರೆ ಅವರು ಲಿಂಗಾಯತದ ಬಗ್ಗೆ, ಬಸವಣ್ಣನವರ ಹಾಗೂ ಶರಣರ ಬಗ್ಗೆ ಮಾತನಾಡಿದ್ದೇ ವಿರಳ. ತದ್ವಿರುದ್ಧವಾಗಿ, ಅವರು ಶರಣರು ಸಾರಾಸಗಟಾಗಿ ತಿರಸ್ಕರಿಸಿದ  ವೇದ, ಶಾಸ್ತ್ರ, ಪುರಾಣ ಮತ್ತು ಉಪನಿಷತ್ತುಗಳು ಅವರ ಜೀವಾಳ. ಭಗವದ್ಗೀತೆಯೇ ಅವರ ಉಸಿರು. ಅವರ ಭಾಷಣಗಳೆಲ್ಲವೂ ಇವೆ ಗೊಡ್ಡುಗಳ ಆಗರಗಳು. 

ಕುತೂಹಲದಿಂದ ನಾನು ಕೂಡಲ ಸಂಗಮ, ಯಕ್ಷಾಂಬಾ, ಬೆಳಗಾವಿ, ಬಸವ ಕಲ್ಯಾಣಗಳಲ್ಲಿನ ಅವರ ಪ್ರವಚನಗಳಲ್ಲಿ ಭಾಗವಹಿಸಿದೆ. ಅವು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ತದ್ವಿರುದ್ಧವಾಗಿ, ಅಂತಹ ವಿಚಿತ್ರ ಪ್ರವಚನಗಳಿಗೆ ಜನರು ಏಕೆ ಅಷ್ಟೊಂದು ಆಕಷಿ೯ತವಾಗುತ್ತಾರೆ ಎನ್ನುವುದೇ ತಿಳಿಯಲಿಲ್ಲ.

ಅವರ ಪ್ರವಚನಗಳಲ್ಲಿ ಪುರಾಣ ಉಪನಿಷತ್ತುಗಳಲ್ಲಿ ಸಾಂದರ್ಭಿಕವಾಗಿ ಬರುವ ಉಪಕತೆಗಳನ್ನು  ಹೇಳಿರುವಂತೆ ಕಟ್ಟುಕತೆಗಳನ್ನು ಹೇಳುತ್ತಾರೆ.

ಅದರಲ್ಲಿ ಕಲ್ಲುಗಳು, ಗುಬ್ಬಿ ಕಾಗೆಗಳು ಮಾತನಾಡುತ್ತವೆ. ಗಿಡಮರಗಳು ಸಂಭಾಷಣೆ ನಡೆಸುತ್ತವೆ. ನದಿ, ಸರೋವರ, ಗುಡ್ಡಬೆಟ್ಟಗಳೂ ಮಾತನಾಡುತ್ತವೆ. ಬ್ರಾಹ್ಮಣರ ಶೈಲಿಯಲ್ಲಿ ಅಂತಹ ಕಾಗವ್ವ ಗುಬ್ಬವ್ವನ ಕತೆಗಳ ಮೂಲಕ ನೀತಿಪಾಠ ಮಾಡುವುದು ಅವರ ಪೇಟೆಂಟ ಶೈಲಿ. ಅವು ಯುವ ಪೀಳಿಗೆಯ ಮೇಲೆ ಯಾವುದೇ ಪರಿಣಾಮ ಬೀರಲಾರವು. ನಿತ್ಯಜೀವನದ ನೈಜ ಉದಾಹರಣೆಗಳನ್ನು ನೀಡಿ ಅದೇ ನೀತಿಪಾಠ ಮಾಡುವುದು ಅವರಿಗೆ ಆಗದು. ಆದ್ದರಿಂದ ನೈಜ ಜೀವನಕ್ಕೆ ದೂರವಾದ ಅವರ ಉಪದೇಶ ವ್ಯರ್ಥವಾದದ್ದು. 

ಅವರ ಗುರಗಳು “ವೇದಾಂತ ಕೇಸರಿ” ಎಂದು ಪ್ರಸಿದ್ಧರಾದವರು. ಇವರಿಗೂ ವೇದಾಂತವೇ ಜೀವಾಳ. ಅದು ಬಹಳ ಜನರಿಗೆ ಅಥವಾಗು ವುದಿಲ್ಲ. “ತಿಳಿಯದವರಿಗೆ ತಿಳಿಯದಂತೆ” ಸಂಸ್ಕ್ರತ ಅಥವಾ ಆಗಾಗ ಇಂಗ್ಲೀಷ ಬೆರೆಸಿ ಹೇಳುವುದು ಅವರಿಗೆ ಕರಗತವಾಗಿದೆ. ಆದ್ದರಿಂದ ಅವರ ಭಾಷಣ ‘ಅಧ್ಭುತ’, ಅವರ ಶೈಲಿ ಅಗಾಧ, ಅವರ ಜ್ಞಾನ ಅಪರಿಮಿತ.

ಇದನ್ನೂ ಓದಿ : ಸಿದ್ದೇಶ್ವರ ಸ್ವಾಮೀಜಿ ಮೋದಿಯನ್ನಲ್ಲದೆ, ಬಸವಣ್ಣನನ್ನ ಹೊಗಳುತ್ತಾರೆಯೇ?!

ಯಾರು ಯಾವ ಗ್ರಂಥಗಳನ್ನು ಓದುತ್ತಾರೆ, ಯಾವ ತತ್ವಗಳನ್ನು ಪಾಲಿಸಿ ಪ್ರಚಾರ ಮಾಡುತ್ತಾರೆ ಅದು ಅವರವರ ವೈಯಕ್ತಿಕ ಹಕ್ಕು.

ಅವರು ಲಿಂಗಧಾರಣೆ ಮಾಡಿಕೊಂಡಿದ್ದಾರೆಯೋ ನನಗೆ ತಿಳಿದಿಲ್ಲ. ತಿಳಿಯುವ ಅಗತ್ಯವೂ ಇಲ್ಲ. ಅವರು ಲಿಂಗಾಯತರಾಗಿ ಹುಟ್ಟಿದ್ದು ಅವರ ತಪ್ಪಲ್ಲ. ಆದರೆ ಅವರು ಲಿಂಗಾಯತ ಧಮ೯ದವರು, ಅದನ್ನು ಅವರು ಭೋಧಿಸುತ್ತಾರೆ ಎಂದು ತಿಳಿದು ಅವರನ್ನು ಬೆಳೆಸಿದ್ದು, ಆರಾಧಿಸಿದ್ದು, ತನುಮನಧನದ ಮೂಲಕ ಅವರ ಸೇವೆ ಮಾಡಿದ್ದು ಲಿಂಗಾಯತರ ತಪ್ಪು. ಆ ರೀತಿಯಲ್ಲಿ ಅವರನ್ನು ಬೆಳೆಸುತ್ತಿರುವ ಕೆಲವು ಲಿಂಗಾಯತ ಮಠಗಳ ತಪ್ಪು.

ದಿನನಿತ್ಯ ಸುಳ್ಳುಗಳನ್ನೇ ಸತ್ಯವೆಂದು ಸಾವಿರ ಸಲ ಹೇಳುತ್ತ, ಸತ್ಯವನ್ನು ಸುಳ್ಳೆಂದು ಭಾಷಣ ಮಾಡುತ್ತ ತಿರುತ್ತಿರುವ ಸೂಲಿಬೆಲೆಯಂತಹವರನ್ನು ಕಟ್ಟಿಕೊಂಡು ಅವರಿಂದ ಭಾಷಣ ಮಾಡಿಸುತ್ತಿರುವ ಸಿದ್ಧೇಶ್ವರ ಸ್ವಾಮಿಗಳ ನಿಜರೂಪವನ್ನು ಲಿಂಗಾಯತರು ಅರಿತಷ್ಟು  ಒಳ್ಳೆಯದು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!