ದ ಪಾಲಿಟಿಕ್

ಅರ್ನಬ್ ಗೆ ಸಿಕ್ಕ ನ್ಯಾಯ ಸಾಮಾನ್ಯರಿಗೂ ಸಿಗಬಾರದೆ?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಅರ್ನಾಬ್ ಗೋಸ್ವಾಮಿಗೆ ಜಾಮೀನು ಸಿಗಬಾರದಿತ್ತು ಎಂಬುದು ನನ್ನ ವಾದವಲ್ಲ. ಅವನ ಮೇಲಿರೋದು ಅಬೆಟ್ ಮೆಂಟ್ ಟು ಸೂಸೈಡ್ ಕೇಸ್. ಅವರ ವಕೀಲರಿಗೆ ತಮ್ಮ ಕಕ್ಷಿದಾರನನ್ನು ರಕ್ಷಿಸಲು ಸಾಕಷ್ಟು ಅವಕಾಶಗಳು ಇದ್ದೇ ಇರುತ್ತವೆ.‌ ಆತ್ಮಹತ್ಯೆ ಪ್ರಚೋದನೆ ಕೇಸುಗಳಲ್ಲಿ ಶಿಕ್ಷೆಯಾಗುವುದು ಕಡಿಮೆ. ಯಾಕೆಂದರೆ ಸತ್ತವನು ಎದ್ದುಬಂದು ಸಾಕ್ಷಿ ಹೇಳಲಾಗದು.

ಅರ್ನಾಬ್ ವಿರುದ್ಧ ಇರುವುದು ಹಳೇ ಕೇಸು. ಹಿಂದೆ ಫಡ್ನವೀಸನ ಸರ್ಕಾರ ಇದ್ದಾಗ ಎ ರಿಪೋರ್ಟ್ ಸಲ್ಲಿಸಲಾಗಿತ್ತು, ಅದನ್ನು ಮತ್ತೆ ತೆರೆಯುವ ಅವಕಾಶ ಪೊಲೀಸರಿಗೆ ಇತ್ತು. ಆದರೆ ಮೊದಲೇ ಹೇಳಿದಂತೆ ಅರ್ನಾಬನ ಕೇಸು ಜಾಮೀನು ಪಡೆಯಲು ಅನರ್ಹವೇನೂ ಆಗಿರಲಿಲ್ಲ.

ಪ್ರಶ್ನೆ ಇರುವುದು ನ್ಯಾಯಾಲಯಗಳನ್ನು ಅರ್ನಾಬ್ ಬಳಸಿಕೊಂಡ ರೀತಿ. ಕೆಳ ನ್ಯಾಯಾಲಯ ಹದಿನೈದು ದಿನದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಮಾರನೇ ದಿನವೇ ಅದೇ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದಿತ್ತು. ಒಂದೆರಡು ದಿನಗಳಲ್ಲಿ ಜಾಮೀನೂ ಸಿಗುತ್ತಿತ್ತೇನೋ? ಯಾಕೆಂದರೆ ನ್ಯಾಯಾಧೀಶರು ಅರ್ನಾಬನ‌ ವಿರುದ್ಧ ಪ್ರೈಮಾಫೇಸಿ ಕೇಸೇ ಇಲ್ಲ ಎಂದು ಹೇಳಿದ್ದರು. ಆದರೆ ಅರ್ನಾಬ್ ಅಲ್ಲಿ ಜಾಮೀನಿಗೆ ಅರ್ಜಿ ಹಾಕಲೇ ಇಲ್ಲ. ಹೈಕೋರ್ಟಿಗೆ ಹೋಗಿ ಹೇಬಿಯಸ್ ಕಾರ್ಪಸ್ ಹೂಡಿದ. ಯಾರನ್ನಾದರೂ ಯಾರಾದರೂ ಅಕ್ರಮ ಬಂಧನದಲ್ಲಿದ್ದರೆ ಹುಡುಕಿ ತಂದು ಕೋರ್ಟಿನ ಮುಂದೆ ಹಾಜರುಪಡಿಸಲು ಹೇಬಿಯಸ್ ಕಾರ್ಪಸ್ ಹೂಡಲಾಗುತ್ತದೆ. ಸ್ವತಃ ನ್ಯಾಯಾಲಯವೇ ಅರ್ನಾಬನನ್ನು ಜೈಲಿಗೆ ಕಳಿಸಿದ್ದರೂ ಹೇಬಿಯಸ್ ಕಾರ್ಪಸ್ ಹಾಕುವ ಉದ್ದೇಶವಾದರೂ ಏನಿತ್ತು?

ಬಾಂಬೆ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ಜತೆ ಅರ್ನಾಬನ ವಿರುದ್ಧ ಇರುವ FIR ವಜಾಗೊಳಿಸಬೇಕು, ಜಾಮೀನು ನೀಡಬೇಕು ಎಂಬ ಅರ್ಜಿಗಳನ್ನು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಕೆಳನ್ಯಾಯಾಲಯದ ಮರಾಠಿ ಆದೇಶವನ್ನು ತಪ್ಪಾಗಿ ತರ್ಜುಮೆ ಮಾಡಿ ಹೈಕೋರ್ಟ್ ಮುಂದೆ ಇಡಲಾಗಿತ್ತು. ಸಾಧಾರಣವಾಗಿ ನ್ಯಾಯಾಧೀಶರು ಆದೇಶಗಳನ್ನು ಬರೆಯುವಾಗ ಇತ್ತಂಡಗಳ ವಾದಗಳನ್ನು ಕೋಟ್ ಮಾಡುವುದು ಸಹಜ. ಅರ್ನಾಬ್ ಗೋಸ್ವಾಮಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅವನ ಪರ ವಕೀಲರು ಹೇಳಿದ್ದನ್ನು ನ್ಯಾಯಾಧೀಶರು ಕೋಟ್ ಮಾಡಿದ್ದರು. ಇದನ್ನು ತಿರುಚಿ ಅರ್ನಾಬನ ಬಂಧನ ಅಕ್ರಮ ಎಂದು ನ್ಯಾಯಾಲಯವೇ ಹೇಳಿದೆ ಎಂದು ಹೈಕೋರ್ಟ್ ಮುಂದೆ ಅವನ ವಕೀಲರು ಹೇಳಿಕೊಂಡರು. ಬಾಂಬೆ ಹೈಕೋರ್ಟ್ ಶನಿವಾರವೂ ಕಾರ್ಯ ನಿರ್ವಹಿಸಿ ಎಲ್ಲ ಪಕ್ಷಗಳ ವಾದ ಆಲಿಸಿದನಂತರ ತೀರ್ಪು ಕಾಯ್ದಿರಿಸಿತ್ತು. ಹೀಗೆ ಆದೇಶ ಕಾಯ್ದಿರಿಸುವಾಗಲೂ ಅರ್ನಾಬ್ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಪಡೆಯಲು ಅವಕಾಶ ಇದ್ದೇ ಇದೆ ಎಂದು ಹೇಳಿತ್ತು.

ಬಾಂಬೆ ಹೈಕೋರ್ಟ್ ನಂತರ ಅರ್ನಾಬನ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಅದರ ಅರ್ಥ ಅವನು ಜಾಮೀನಿಗೆ ಅನರ್ಹ ಎಂದಾಗಿರಲಿಲ್ಲ. ಸೆಷನ್ಸ್ ಕೋರ್ಟ್ ನಲ್ಲೇ ಅವನು ಪರಿಹಾರ ಪಡೆಯಬೇಕಾಗಿರುವುದು ನ್ಯಾಯಾಲಯಗಳು ಪಾಲಿಸಿಕೊಂಡುಬಂದ ಪ್ರೊಟೋಕಾಲ್. ಕೆಳ ನ್ಯಾಯಾಲಯ ಜಾಮೀನು ಕೊಡದೇ ಹೋದಲ್ಲಿ ಮಾತ್ರ ಹೈಕೋರ್ಟ್ ತನ್ನ ಅಧಿಕಾರ ಚಲಾಯಿಸುತ್ತದೆ. ಹೈಕೋರ್ಟ್ ನಲ್ಲಿ ಜಾಮೀನು ಸಿಗುವುದು ಕಷ್ಟವೆಂದು ಗೊತ್ತಾದಮೇಲೆ ಸೆಷನ್ಸ್ ಕೋರ್ಟ್ ನಲ್ಲಿ ಅರ್ನಾಬ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ. ಅಷ್ಟು ಹೊತ್ತಿಗಾಗಲೇ ಮೂರು‌ದಿನಗಳು ಕಳೆದಿದ್ದವು. ಜಾಮೀನು ಅರ್ಜಿ ಸಲ್ಲಿಸಿದ ನಾಲ್ಕು ದಿನಗಳೊಳಗೆ ಆದೇಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಗೆ ಹೇಳಿತ್ತು. ಅದೇ ಪ್ರಕಾರ ಸೆಷನ್ಸ್ ಕೋರ್ಟ್ ಅರ್ಜಿ‌ವಿಚಾರಣೆಯನ್ನೂ ನಡೆಸುತ್ತಿತ್ತು.

ಆದರೆ ಅರ್ನಾಬ್ ಪರ ವಕೀಲರು ಸುಪ್ರೀಂಕೋರ್ಟಿಗೆ ಹೋದರು. ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಮಾರನೇ ದಿನವೇ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಯಿತು. ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ಇಂಥ ಪ್ರಕರಣಗಳನ್ನು ತರಾತುರಿಯಲ್ಲಿ ವಿಚಾರಣೆಗೆ ಅಂಗೀಕರಿಸುವುದು ಕಡಿಮೆ. ದೇಶದಾದ್ಯಂತ ನೂರಾರು ಮಂದಿ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು, ಎನ್ ಆರ್ ಸಿ ವಿರೋಧಿ ಚಳವಳಿಗಾರರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಇವರಿಗೆಲ್ಲ ಸುಪ್ರೀಂಕೋರ್ಟ್ ಬಾಗಿಲು ಯಾವಾಗ ತೆರೆಯುವುದೋ ಗೊತ್ತಿಲ್ಲ. ಆದರೆ ಅರ್ನಾಬನ ಕೇಸು ಮಾತ್ರ ಬೇಗ ವಿಚಾರಣೆಗೆ ಬಂದುಬಿಟ್ಟಿತು. ಕೇವಲ ಇದೊಂದೇ ಕೇಸಲ್ಲ, ಅರ್ನಾಬನಿಗೆ ಸಂಬಂಧಿಸಿದ ಹಲವು ಕೇಸುಗಳಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದೆ. ಪಾಲ್ಗರ್ ಲಿಂಚಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಅರ್ನಾಬ್ ಪ್ರಸಾರ ಮಾಡಿದ ಕೋಮುದ್ವೇಷ ಹಬ್ಬಿಸುವ ಸುಳ್ಳು ಸುದ್ದಿಯ ಕುರಿತು ದೇಶಾದ್ಯಂತ ನೂರಾರು ಎಫ್ ಐ ಆರ್ ಗಳು ದಾಖಲಾಗಿದ್ದವು. ಸುಪ್ರೀಂ ಕೋರ್ಟ್ ನಾಗಪುರದಲ್ಲಿ ದಾಖಲಾದ ಒಂದು ಪ್ರಕರಣವನ್ನು ಹೊರತುಪಡಿಸಿ ಮಿಕ್ಕೆಲ್ಲ ಎಫ್ ಐಆರ್ ಗಳನ್ನು ರದ್ದು ಮಾಡಿತ್ತು.

ಈಗ ಸುಪ್ರೀಂಕೋರ್ಟ್ ಅರ್ನಾಬನಿಗೆ ಜಾಮೀನು ನೀಡಿದೆ. ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗಲೇ ಹೀಗೆ ಉನ್ನತ ನ್ಯಾಯಾಲಯ ಜಾಮೀನು ನೀಡಿದ್ದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದೇ ಪ್ರಕರಣವನ್ನು ಇಟ್ಟುಕೊಂಡು ದೇಶದ ಹೈಕೋರ್ಟ್, ಸುಪ್ರೀಂಕೋರ್ಟ್ ಗಳಲ್ಲಿ ಜಾಮೀನು ಅರ್ಜಿಗಳ ಮಹಾಪೂರವೇ ಹರಿದರೆ ಏನು ಮಾಡುವುದು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅಷ್ಟಕ್ಕೂ ಅರ್ನಾಬ್ ಗೋಸ್ವಾಮಿ ಸಾಮಾನ್ಯ ಮನುಷ್ಯರಿಗಿಂತ ಹೇಗೆ ಭಿನ್ನ? ಉತ್ತರ ಪ್ರದೇಶ, ದೆಹಲಿ ಗಳಲ್ಲಿ ರಾಜಕೀಯ ಕಾರಣಗಳಿಗಾಗಿ ಹಲವಾರು ಹೋರಾಟಗಾರರನ್ನು ಜೈಲಿನಲ್ಲಿಡಲಾಗಿದೆ. ಸುಪ್ರೀಂ ಕೋರ್ಟ್ ಅರ್ನಾಬನ ವಿಷಯದಲ್ಲಿ ಹೇಳಿದ “ಸಿವಿಲ್ ಲಿಬರ್ಟಿ” ಈ ಹೋರಾಟಗಾರರಿಗೆ, ಪತ್ರಕರ್ತರಿಗೆ ಅನ್ವಯಿಸುವುದಿಲ್ಲವೇ?

ಈ ಪ್ರಶ್ನೆಗಳಿಗೆ ಯಾರು ಉತ್ತರಿಸುವವರು?

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!