ಮೊಟ್ಟೆ ಎಂಬುದು ಮಾಂಸಾಹಾರ ಅಲ್ಲ.
ಮಾಂಸಾಹಾರ ಎಂದರೆ ಹಿಂಸೆಯಿಂದ ಪಡೆದ ಆಹಾರವೆಂಬ ಭಾವನೆ ಕೆಲವು ಧಾರ್ಮಿಕ ಪಂಗಡಗಳಲ್ಲಿದೆ. ಸಸ್ಯಗಳಿಗೂ ಜೀವ ಇದೆ; ಅವುಗಳನ್ನು ಕಿತ್ತರೆ, ಕತ್ತರಿಸಿದರೆ ಅದೂ ಹಿಂಸಾಕೃತ್ಯವಾಗುತ್ತದೆ. ಇದು ಚಿಕ್ಕಮಕ್ಕಳಿಗೂ ಗೊತ್ತಿದೆ. ಯಾವ ಜೀವಕ್ಕೂ ಹಿಂಸೆಯನ್ನೇ ಕೊಡದೆ ಬದುಕಬೇಕೆಂದರೆ ಕೇವಲ ಒಣ ಧಾನ್ಯಗಳನ್ನು ಮತ್ತು ಉದುರಿದ ಹಣ್ಣುಗಳನ್ನಷ್ಟೇ ತಿನ್ನಬೇಕು. ಅಲ್ಲೂ ಹಿಂಸೆ ಇದ್ದೇ ಇರುತ್ತದೆ ಏಕೆಂದರೆ ಅವುಗಳ ಮೇಲೂ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ಅಣಬೆ, ಶಿಲೀಂಧ್ರ ಮತ್ತು ಸೂಕ್ಷ್ಮಾಣುಗಳು ಇದ್ದೇ ಇರುತ್ತವೆ.
ಹಾಲು, ಮೊಸರು, ಬೆಣ್ಣೆ-ತುಪ್ಪದ ಉತ್ಪಾದನೆಯಲ್ಲೂ ಹಿಂಸೆ ಇದೆ. ಹಾಗಾಗಿ ಬದುಕುಳಿಯಬೇಕು ಎಂದರೆ ಹಿಂಸೆ ಅನಿವಾರ್ಯವಾಗಿರುತ್ತದೆ . ಜಗತ್ತಿನ ಎಲ್ಲ ಜೀವಿಗಳೂ ಇನ್ನೊಂದು ಜೀವಿಯ ಅಂಗಾಂಶವನ್ನು ತಿಂದೇ ಬದುಕಬೇಕು ಎಂಬುದೇ ವಿಕಾಸದ ನಿಯಮ ಆಗಿರುವಾಗ, ಅದನ್ನು ಕಡೆಗಣಿಸಿ ನಾವು ಸಸ್ಯಾಹಾರವನ್ನೇ ತಿನ್ನುತ್ತೇವೆ ಎಂಬುದು ನಮಗೆ ನಾವೇ ಮಾಡಿಕೊಳ್ಳುವ ವಂಚನೆ, ಬೇರೇನೂ ಅಲ್ಲ.
ವಯಸ್ಸಿಗೆ ಬಂದ ಕೋಳಿಗಳು ಯಾವುದೇ ಹುಂಜದ ಸಂಪರ್ಕ ಇಲ್ಲದೆಯೂ ದಿನಕ್ಕೊಂದು ಮೊಟ್ಟೆ ಇಡುತ್ತವೆ. ಅಂಥ ಮೊಟ್ಟೆಗೆ ಕಾವು ಕೊಟ್ಟರೆ ಅದರಿಂದ ಮರಿಗಳು ಹೊರಬರುವುದಿಲ್ಲ; ಏಕೆಂದರೆ ಅವು ಭ್ರೂಣವಾಗಿರುವುದಿಲ್ಲ. ಗಂಡಿನ ವೀರ್ಯಾಣು ಸೇರಿದರೆ ಮಾತ್ರ ಅವಕ್ಕೆ ಜೀವಂತಿಕೆ ಬರುತ್ತದೆ. ಮಾರಾಟಕ್ಕೆಂದು ಔದ್ಯಮಿಕ ಮಟ್ಟದಲ್ಲಿ ಮೊಟ್ಟೆ ಉತ್ಪಾದನೆ ಮಾಡುವವರು ಹುಂಜವನ್ನು ಬಳಸುವುದೂ ಇಲ್ಲ. ಹಾಗಾಗಿ ಅಂಥ ಮೊಟ್ಟೆಯನ್ನು ಸಸ್ಯಾಹಾರ ಎಂತಲೇ ಪರಿಗಣಿಸಬಹುದು.
ಹಿಂದೊಂದು ಕಾಲದಲ್ಲಿ ಬ್ರಾಹ್ಮಣರು, ಋತ್ವಿಜರೂ ಮಾಂಸಾಹಾರವನ್ನು ಸೇವಿಸುತ್ತಿದ್ದರು. ಕ್ರಮೇಣ ಅದನ್ನು ಬಿಟ್ಟು ಕೇವಲ ಸಸ್ಯಾಹಾರಿಯಾಗಿರಲು ಎರಡು ತಾರ್ಕಿಕ ಕಾರಣಗಳನ್ನು ಮುಂದಿಡಬಹುದು: 1. ಮಾಂಸ ಕೆಟ್ಟುಹೋದರೆ ಅದರ ಸೇವನೆಯಿಂದ ಪ್ರಾಣಾಂತಿಕ ಅಪಾಯ ಬರುವ ಸಂಭವ ಇದೆ. ಸಾಲ್ಮೊನೆಲ್ಲಾ ಮತ್ತು ಅಂಥ್ರಾಕ್ಸ್ ವಿಷಾಣುಗಳು ಕೊಳೆತ ಮಾಂಸದಲ್ಲಿ ಬಹುಬೇಗ ಹರಡುತ್ತವೆ. 2. ತಮಗೆ ಪ್ರಿಯವಾದ ಏನನ್ನಾದರೂ ತ್ಯಾಗ ಮಾಡಿದರೆ ಅವರಿಗೆ ಶ್ರೇಷ್ಠತೆ ತಾನಾಗಿ ಬಂದುಬಿಡುತ್ತದೆ. ಶ್ರೇಷ್ಠತೆಯ ವ್ಯಸನ ಮತ್ತು ವಿಷಾಣುಗಳ ಭಯ ಇವೆರಡರಿಂದಾಗಿ ಕೆಲವು ವರ್ಗದ ಜನರು ಮಾಂಸಾಹಾರದಿಂದ ದೂರವಾಗಿರಬಹುದು.
ಮೊಟ್ಟೆಗಳ ಉತ್ಪಾದನೆ ಮತ್ತು ವಿಲೆವಾರಿಯ ವಿವಿಧ ಹಂತಗಳಲ್ಲಿ ಶೀತಲ ಸರಪಳಿ ಚುರುಕಾಗಿದ್ದರೆ, ಗುಣಮಟ್ಟದ ತಪಾಸಣೆ ನಡೆಯುತ್ತಿದ್ದರೆ ರೋಗಾಣುಗಳ ಭಯ ಇಲ್ಲ. ಬಿಸಿಯೂಟದ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಕೊಳೆತ ಮೊಳಕೆ ಕಾಳುಗಳೂ ಊಟದ ತಾಟಿಗೆ ಬಂದು ಮಕ್ಕಳ ಆರೋಗ್ಯವನ್ನು ಕೆಡಿಸಬಹುದು.
- ನಾಗೇಶ್ ಹೆಗ್ಡೆ