ದ ಪಾಲಿಟಿಕ್

ಪುಡಿಗಾಸಿಗೆ ಜಿಂದಾಲ್‌ಗೆ ಸರಕಾರಿ ಭೂಮಿ ಮಾರಾಟ

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆ ಇನ್ನಷ್ಟು ಕೈಗಾರಿಕೆಗಳು ಬರಬೇಕು. ಇದಕ್ಕೆ ಯಾರ ಆಕ್ಷೇಪವಾಗಲೀ, ತಕರಾರಾಗಲೀ ಇರುವುದಿಲ್ಲ. ಆದರೆ, ಸಕಾರಣವಲ್ಲದ ಕಾರಣಗಳನ್ನು ಮುಂದಿಟ್ಟು ಕೈಗಾರಿಕ ಉದ್ಯಮಿಗಳಿಗೆ ಸರಕಾರಿ ಭೂಮಿಯನ್ನು ಪುಡಿ ಗಾಸಿಗೆ ನೀಡುವುದು ಇದಾವ ನಾಡಿನ ನ್ಯಾಯ ಸ್ವಾಮಿ?  

ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಗೆ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ 3,677 ಎಕರೆ ಸರಕಾರಿ ಭೂಮಿಯನ್ನು ಕೇವಲ ನಲ್ವತ್ತು ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿನ್ನೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಇದು ಸರಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಹಣ ನಷ್ಟ ಉಂಟು ಮಾಡುವ ತೀರ್ಮಾನ ಎಂಬುವುದು ನಿರ್ವಿವಾದ.

ಇಂಥಹ ತೀರ್ಮಾನಗಳ ಹಿಂದೆ ಕೆಲ ಬಲಾಢ್ಯ ರಾಜಕಾರಣಿಗಳ ಹಿತ ಅಡಗಿರುತ್ತದೆ ಮತ್ತು ಅದರಲ್ಲಿಯೂ ಹಲವರ ಪಾಲು ಇರುತ್ತದೆ ಎಂಬುದು ಗುಟ್ಟಾಗೇನು ಉಳಿದಿಲ್ಲ. ಅನೇಕ ಉದಾಹರಣೆಗಳು ಜನರ ಕಣ್ಮುಂದಿವೆ. ಕೆಲವರ ಉದ್ಧಾರಕ್ಕಾಗಿ ರಾಜ್ಯವನ್ನು ಮಾರಾಟ ಮಾಡಲು ಈ ಸರಕಾರವೂ ನಿಂತಿರುವುದು ಆಘಾತಕಾರಿ ಆಗಿದೆ.

2005 ರಲ್ಲಿ ಜೆಡಿಎಸ್‌ – ಬಿಜೆಪಿ ಪಾಲುದಾರಿಕೆ ಸರಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರು ಜಿಂದಾಲ್‌ ಕಂಪನಿಗೆ ಗುತ್ತಿಗೆ ಮತ್ತು ಮಾರಾಟದ [ಲೀಸ್‌ ಕಂ ಸೇಲ್‌] ಆಧಾರದ ಮೇಲೆ ಸರಕಾರಿ ಭೂಮಿ ಮಂಜೂರು ಮಾಡಿದ್ದರು.  2019 ರಲ್ಲಿ ಸೇಲ್‌ ಡೀಡ್‌ ಮಾಡಿಕೋಡಬೇಕೆಂಬ ಒಪ್ಪಂದವೂ ಆಗಿತ್ತು. ಆದರೆ ವಿರೋಧ ಪಕ್ಷಗಳ ಮತ್ತು ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಅದು ಈವರೆಗೆ ನನೆಗುದಿಗೆ ಬಿದ್ದಿತ್ತು.

ಈಗ ಸಚಿವ ಸಂಪುಟದ ಕೆಲ ಸಚಿವರ ವಿರೋಧದ ನಡುವೆಯೂ ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದು ಸರಕಾರವೇ ಜಿಂದಾಲ್‌ ಪರ ಬ್ಯಾಟ್‌ ಬೀಸಲು ಮೈದಾನಕ್ಕೆ ಇಳಿದಿದೆ. ರಾಜ್ಯದ ಸರಕಾರಿ ಆಸ್ತಿ ರಕ್ಷಣೆ ಮಾಡಬೇಕಾದ ಸರಕಾರವೇ ಒಂದು ಖಾಸಗಿ ಕಾರ್ಪೋರೇಟ್‌ ಕಂಪನಿಯ ಏಜೆಂಟ್‌ ಆಗಿ ಕೆಲಸ ಮಾಡಲು ನಿಂತಂತಿದೆ. ಈ ನಿರ್ಣಯ ಈ ಸರಕಾರವಾದರೂ ರಾಜ್ಯಕ್ಕೆ ಒಳಿತು ಮಾಡುತ್ತದೆ ಎಂದು ನಂಬಿದ ಜನರಿಗೆ ಆಘಾತ ತರಿಸುವಂತಿದೆ.

ಈ ʼಉಪಕಾರʼಕ್ಕೆ ಜಿಂದಾಲ್‌ ಕಂಪನಿ ಕೆಲ ಪ್ರಭಾವಿ ಸಚಿವರ ಋಣ ತೀರಿಸಬಹುದು. ಆದರೆ ಸರಕಾರಿ ಖಜಾನೆಗೆ ಆಗುವ ಹಾನಿಯನ್ನು ಭರಿಸುವವರು ಯಾರು? ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಭೂಮಿಯನ್ನು ನೀಡದೆ, ಎಕರೆಗೆ ಜೂಜುಬಿ 1.20 ಲಕ್ಷ ಮತ್ತು 1.50 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಡಿ ಇಟ್ಟಿದೆ. ಇದರಲ್ಲಿ ಸರಕಾರದ ಯಾವ ಸಚಿವರದಾಗಲೀ, ಸರಕಾರದಾಗಲೀ ಹಿತಾಸಕ್ತಿ ಅಡಗಿಲ್ಲ ಎಂದು  ಹೇಳಲು ಯಾರಾದರು ಮುಂದೆ ಬಂದರೆ ಅವರ ತುಟಿ ನಡುಗಬಹುದು.

ಈ ಹಿಂದೆ ಯಡಿಯೂರಪ್ಪ ಸಿ.ಎಂ ಆಗಿದ್ದ ಸಮಯದಲ್ಲಿ ಜಿಂದಾಲ್‌ಗೆ ಮಾರಾಟ ಮಾಡಲು ಅವರು ಮುಂದಾಗಿದ್ದಾಗ ಇದೇ ಕಾಂಗ್ರೆಸ್‌ ಪಕ್ಷ ಅಗ ಸದನದ ಒಳಗೆ ಮತ್ತು ಹೊರಗೆ ವಿರೋಧಿಸಿತ್ತು. ಈಗ ತನ್ನ ನಿಲುವು ದಿಢೀರ್‌ ಬದಲಾಯಿಸಿಕೊಂಡಿದೆ. ಈ ಬದಲಾವಣೆಗೆ ಕಾರಣವೇನೆಂದು ಜನರಿಗೆ ಹೇಳುವ ಜರೂರಿ ಇಲ್ಲವೆಂದು ಸರಕಾರ ತೀರ್ಮಾನಿಸಿ, ಈ ನಡೆ ಅನುಸರಿಸಿದಂತಿದೆ. ಈಗಿನ ಬಹುತೇಕ ಸಚಿವ ಸಂಪುಟ ಸಭೆಗಳು ಗ್ರಾಮ ಪಂಚಾಯತಿ ಸಭೆಗಳಂತಾಗಿವೆ. ಯಾರಿಗೆ ‍ಏನು ಬೇಕೋ ಅದು, ಹೇಗೆ ಬೇಕೋ ಹಾಗೆ ಬರೆಯಲಾಗುತ್ತದೆ. ತೀರ್ಮಾನ ಆಗುತ್ತವೆ. ಇದು ಮತ್ತೊಂದು ತಾಜಾ ನಿದರ್ಶನವಾಗಿದೆ.

ರಾಜ್ಯದಲ್ಲಿ ಯಾವುದೇ ಪಕ್ಷವಿರಲಿ ಅದು ವಿರೋಧ ಪಕ್ಷವಾಗಿದ್ದಾಗ ಭಾರಿ ಜನಪರವಾಗಿ ಮಾತಾಡುತ್ತದೆ ಹಾಗೂ ಹೋರಾಡುತ್ತದೆ. ಅದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ಜನಕಂಟಕ ಆಗುತ್ತದೆ. ಇದು ಕಾಂಗ್ರೆಸ್‌ ಪಕ್ಷದ ಗುಣಧರ್ಮ ಮಾತ್ರವಲ್ಲ. ರಾಜ್ಯದ ಮೂರು ಪಕ್ಷಗಳ ಅಲಿಖಿತ ಆಡಳಿತ ನೀತಿಯಾಗಿದೆ. ಕುಮಾರ್‌ ಸ್ವಾಮಿ ಮುಖ್ಯಮಂತ್ರಿ ಇದ್ದಾಗ ಅವರು ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಲು ಮುಂದಾದಾಗ ಯಡಿಯೂರಪ್ಪ ಅಹೋರಾತ್ರಿ ಧರಣಿ ನಡೆಸಿದರು.

ಮುಂದೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಅವರು ತನ್ನ ಹೋರಾಟ – ಹಾರಾಟ ಮರೆತು ಅದೇ ಜಿಂದಾಲ್‌ಗೆ ಅದೇ ದರದಲ್ಲಿ ಯಥವತ್ತಾಗಿ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಅಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದ್ದು ಇತಿಹಾಸ.  ಇದರ ವಿರುದ್ಧ ನ್ಯಾಯಲಯದಲ್ಲಿ ಖಾಸಗಿ ದೂರು ಸಹ ದಾಖಲಾಗಿತ್ತು.  ಜನರ ಪ್ರತಿರೋಧ, ಪ್ರತಿಪಕ್ಷಗಳ ಅಸಹಕಾರದಿಂದಾಗಿ ಜಿಂದಾಲ್‌ ಈವರೆಗೂ ʼಶುದ್ಧ ಕ್ರಯ ಪತ್ರʼ [ಸೇಲ್ ಡೀಡ್‌] ಮಾಡಿಕೊಡಲು ಸಾಧ್ಯವಾಗಿರಲಿಲ್ಲ.

ಈಗ ಕಾಂಗ್ರೆಸ್‌ ಸರಕಾರದ ಕೆಲ ಪ್ರಭಾವಿ ಸಚಿವರು ಮುಂದೆ ನಿಂತು ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ಭಾರಿ ಕಸರತ್ತು ನಡೆಸಿ ಆರಂಭಿಕ ಜಯ ಸಾಧಿಸಿದ್ದಾರೆ.  ಕಾಂಗ್ರೆಸ್‌ ಪಕ್ಷದವರು ವಿರೋಧ ಪಕ್ಷದಲ್ಲಿದಾಗ ಆಗಿನ ಆಡಳಿತ ಪಕ್ಷಕ್ಕೆ ಭೂಮಿ ನೀಡದಂತೆ ಅಡ್ಡಗಾಲು ಹಾಕಿ ಪ್ರತಿಭಟಿಸಿ, ಈಗ ಅಧಿಕಾರಕ್ಕೆ ಬಂದೊಡನೆ ತಾನು ವಿರೋಧಿಸಿದ್ದನ್ನು ತಾನೇ ಮರೆತಂತೆ ನಟಿಸುತ್ತಿದೆ. ಅಷ್ಟೇ ನಿರ್ಜಜ್ಜತನದಿಂದ ಹಿಂದೆ ನಾವು ವಿರೋಧಿಸಿಯೇ ಇಲ್ಲವೆಂದು ಹೇಳುತ್ತಿದೆ.

ಈ ನೆಲದಲ್ಲಿ ಹಲವರಿಗೆ ಅಂಗೈ ಅಗಲದಷ್ಟು ಸ್ವಂತ ಜಾಗವಾಗಲೀ ಅಥವಾ ಭೂಮಿಯಾಗಲೀ ಇಲ್ಲ. ಇಂಥವರಿಗೆ ಜಮೀನು ನೀಡಲು ಮೀನಮೇಷ ಎಣಿಸುವ ಸರಕಾರ ಉದ್ಯಮಿಗಳಿಗೆ ಧಾರೆ ಎರೆಯಲು ತುದಿಗಾಲಿನಲ್ಲಿ ನಿಂತಿರುತ್ತವೆ. ಇದು ರಾಜಕಾರಣ. ರಾಜಕಾರಣ ಅಂದರೆ ಹೀಗೆ ಇರುತ್ತದೆ. ಜನರು ಎಚ್ಚರವಾಗುವರೆಗೆ ಇದು ಹಾಗೇ ನಡೆಯುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!