ಒಬ್ಬ ಸಾಮಾನ್ಯ ಪಿಂಪ್ (ತಲೆಹಿಡುಕ) ಡಿವೈಎಸ್ಪಿಗೆ ‘ನಾನು ನಿಮಗೆ ಸರ್ ಎನ್ನುತ್ತಿದ್ದೇನೆ. ನೀವು ನನ್ನನ್ನು ಸರ್ ಎಂದು ಕರೆಯುತ್ತಿಲ್ಲ. ನೀವು ನನ್ನನ್ನು ಸರ್ ಎಂದು ಕರೆಯಬೇಕು’ ಎಂದು ಹೇಳುವ ಮಟ್ಟಕ್ಕೆ ಅವನು ಬೆಳೆದದ್ದು ಏನನ್ನು ಸೂಚಿಸುತ್ತಿದೆ? ಈ ನೆಲದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಒಬ್ಬ ಡಿವೈಎಸ್ಪಿ ಲಂಚ್ ಕೊಟ್ಟು, ವರ್ಗಾವಣೆ ಮಾಡಿಸಿಕೊಳ್ಳಲು ಒಬ್ಬ ಪಿಂಪ್ ಎದುರು ಗೋಗರೆದು ಬೇಡಿಕೊಂಡಿದ್ದು ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವ ಸಂಗತಿಯಾಗಿದೆ. ಒಬ್ಬ ಪಿಂಪ್ ಗಳ ಮುಂದೆ ಮಂಡಿಯೂರುವ ಪೊಲೀಸರಿಂದ ಏನಾದರೂ ನಿರೀಕ್ಷಿಸಲು ಸಾಧ್ಯವೇ?
ಇತನ ಎರಡನೇ ಹೆಂಡತಿಯೇ ಇವನ ಮೇಲೆ ಮೈಸೂರಿನ ‘ಒಡನಾಡಿ’ ಸಂಸ್ಥೆಯ ನೆರವಿನಿಂದ ಅತ್ಯಾಚಾರದ ಕೇಸ್ ದಾಖಲಿದ ಮೇಲೆಯೇ ಇತನ ಲೀಲೆ ಜಗಜ್ಜಾಹೀರು ಆಗಿದ್ದು. ಇವನು ‘ನಿನ್ನೆ ಬಿದ್ದ ಮಳೆಗೆ ಇಂದು ಹುಟ್ಟಿದ ಪಾಪಾಸುಕಳ್ಳಿ ಅಲ್ಲ’ ಇತನ ವಿರುದ್ಧ 1995 ರಲ್ಲೇ ದೂರು ದಾಖಲಾಗಿತ್ತು. ಒಂದಲ್ಲ ಎರಡಲ್ಲ ಹತ್ತಾರು ಕೇಸ್ ಗಳು ಇವನ ಮೇಲಿವೆ. ಇವನು ವೇಶ್ಯಾವಾಟಿಕೆ ದಂಧೆ ರಾಜಾರೋಷವಾಗಿ ನಡೆಸುತ್ತಿರುವುದು, ಚಿಕ್ಕ ಚಿಕ್ಕ ಹುಡುಗಿಯರಿಗೆ ಮಂಕುಬೂದಿ ಎರಚಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿರುವುದು, ಸರ್ಕಾರಿ ಅಧಿಕಾರಿಗಳನ್ನ ಬೇಕೆಂದಾಗಲೆಲ್ಲ, ಅವರು ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಮಾಡಿಸುವ ದಂಧೆ ಮಾಡುತ್ತಿರುವುದು, ತನ್ನ ವರ್ಗಾವಣೆ ದಂಧೆಗೆ ಹುಡುಗಿಯರನ್ನು ಬಳಸಿಕೊಳ್ಳುತ್ತಿರುವ ಸಂಗತಿ ಯಾರಿಗೂ ಗೊತ್ತೆ ಇರಲಿಲ್ಲವೇ? ಅದು ವಿಧಾನ ಸೌಧದ ‘ಕುಮಾರ್ ಕೃಪಾ’ದಿಂದಲೇ ಅವನು ಇವೆಲ್ಲವೂ ಡೀಲ್ ಮಾಡುತ್ತಿದ್ದದ್ದು.
ಒಬ್ಬ ಸರ್ಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸಲು ಅವರಿಂದ 50 ಲಕ್ಷ ರೂಪಾಯಿವರೆಗೆ ಪಡೆಯುತ್ತಿದ್ದ ಹಣದಲ್ಲಿ ಯಾರ ಪಾಲುದಾರಿಕೆಯೂ ಇರಲಿಲ್ಲವೇ? ಸರ್ಕಾರದ ಪ್ರಭಾವಿ ಸಚಿವರ, ಅಧಿಕಾರಿಗಳ ಬೆಂಬಲ, ಸಹಕಾರ, ಪಾಲುದಾರಿಕೆ ಇಲ್ಲದೆ ಇವನು ದಂಧೆ ನಡೆಸಲು ಸಾಧ್ಯವೇ? ಈಗ ಒಬ್ಬೊಬ್ಬರಾಗಿ ಸಾಲಾಗಿ ‘ಅವನು ಯಾರೆಂದು ನಮಗೆ ಗೊತ್ತೇ ಇಲ್ಲ’. ಮುಖ್ಯಮಂತ್ರಿಗಳ, ಮಂತ್ರಿಗಳ, ಶಾಸಕರ ಜತೆಗೆ ಯಾರ್ಯಾರೋ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಇವನು ಹಾಗೇ ತೇಗಿಸಿಕೊಂಡಿರಬಹುದು’ ಎಂದು ಸಮಜಾಯಿಷಿ ನೀಡುತ್ತಿರುವುದು ಲಜ್ಜೆಗೇಡಿತನ.ಇಂತಹ ರಾಜಕಾರಣಿಗಳ ಲಜ್ಜೆಗೇಡಿತನದಿಂದಾಗಿಯೇ ಇಂತಹವರು ಅಲ್ಲಲ್ಲಿ ಉತ್ಪನ್ನ ಆಗುವುದು.
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಬಾಂಬೆಗೆ ಹಾರಿದ 17 ಜನ ಶಾಸಕರಿಗೆ ಬೇಕಾಗಿದ್ದೂ,ಬೇಕಿಲ್ಲದ್ದೂ ಅವರಿಗೆ ಪೂರೈಸಿದ್ದು ಇವನೇ ಎಂದು ವಿಶ್ವಾಸನೀಯ ಮೂಲಗಳು ಹೇಳುತ್ತಿವೆ. ಇವರು ಬಾಂಬೆಯಿಂದ ಬಂದ ಮೇಲೆ ‘ಸಿಡಿ’ಗೆ ಹೆದರಿ ನ್ಯಾಯಾಲಯದ ಕದ ತಟ್ಟಿದ್ದೇಕೆಂದು ಈಗ ಜನರಿಗೂ ಮನವರಿಕೆ ಆಗುತ್ತಿದೆ. ಒಂದು ರೀತಿಯಲ್ಲಿ ಈ ಅರ್ಧ ಖರೀದಿತ, ಅರ್ಧ ಚುನಾಯಿತ ಸರ್ಕಾರ ಬರಲು ಈ ಸ್ಯಾಂಟ್ರೋ ರವಿದೂ ಪಾಲಿದೆ?
ಈಗ ಜನರ ಹಾಗೂ ಮಾಧ್ಯಮಗಳ ಕಣ್ಣೆಲ್ಲಾ ಸಿಪ್ಪೆ ತಿಂದವನ ಮೇಲೆಯೇ ಇದೆಯೆ ವಿನಾ ಹಣ್ಣು ತಿಂದವರ ಮೇಲಲ್ಲ. ಪಿಎಸ್ಐ ಹಗರಣದಂತೆ ಇಲ್ಲೂ ಹಣ್ಣು ತಿಂದವರರನ್ನು ಹೊರಗಿಟ್ಟೇ ತನಿಖೆ, ವಿಚಾರಣೆ, ಕೇಸ್, ಬಂಧನ, ಆರೋಪ, ಪ್ರತ್ಯಾರೋಪ ಎಲ್ಲವೂ ನಡೆಯುತ್ತವೆ. ಅದು ನಾಟಕೀಯವಾಗಿ ಅಷ್ಟೇ.