ಇಂತದ್ದೊಂದು ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ದೇವೇಗೌಡರ ಕುಟುಂಬದೊಳಗಿರುವ ರಾಜಕೀಯ ಒಡಕು ಹೊಸದೇನೂ ಅಲ್ಲ. ಕುಮಾರಸ್ವಾಮಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಮುಂಚಿನಿಂದಲೇ ಈ ಬಗ್ಗೆ ಕೊಸರಾಟಗಳು ನಡೆಯುತ್ತಿದ್ದವು. ಇದಕ್ಕೆ ಮುಖ್ಯ ಕಾರಣ, ರೇವಣ್ಣನ ಮಡದಿ ಭವಾನಿಯವರು! ರಾಜಕೀಯವಾಗಿ ಮಹಾತ್ವಾಕಾಂಕ್ಷೆ ಹೊಂದಿರುವ ಈ ಹೆಣ್ಣುಮಗಳನ್ನು ಹಾಸನದ ಸ್ಥಳೀಯ ಜನ ಇವತ್ತಿಗೂ ಗುರುತಿಸುವುದು ತಮಿಳುನಾಡಿನ ಜಯಲಲಿತಾಗೆ ಹೋಲಿಕೆ ಮಾಡಿ. ಅಷ್ಟರಮಟ್ಟಿಗೆ ಭವಾನಿಯವರು ರಾಜಕೀಯ ಮಹದಾಸಕ್ತಿ ಹೊಂದಿದ್ದಾರೆ. ಹಾಗೆ ನೋಡಿದರೆ, ಸ್ವತಃ ರೇವಣ್ಣ ರಾಜಕೀಯದಲ್ಲಿ ತುಸು ಸಪ್ಪೆಯ ಆಸಾಮಿ. ಅವರನ್ನು ಆಕ್ಟಿವ್ ಮಾಡಿ ಇಟ್ಟುಕೊಂಡಿರೋದೆ ಭವಾನಿಯವರ ಮಹಾತ್ವಾಕಾಂಕ್ಷೆಗಳು ಎಂದರೂ ತಪ್ಪಲ್ಲ. ಹಾಸನ ಜಿಲ್ಲೆ ಯಾವ ಕಾರಣಕ್ಕೂ ತಮ್ಮ ಕೈತಪ್ಪಿ ಹೋಗಬಾರದೆನ್ನುವುದು ಭವಾನಿ ರೇವಣ್ಣನವರ ಲೆಕ್ಕಾಚಾರ.
ಇದನ್ನು ಮನಗಂಡೇ ದೇವೇಗೌಡರು ರಾಮನಗರ ಅನ್ನೋ ಹೊಸ ಜಿಲ್ಲೆಯನ್ನೇ ಸೃಷ್ಟಿಸಿ, ಅದರ ಜನಕ ತಾನೇ ಅಂತೇಳಿ ಅಲ್ಲೊಂದು ಪರ್ಯಾಯ ಸಾಮ್ರಾಜ್ಯ ಕಟ್ಟಲು ಮುಂದಾದದ್ದು. ಅವತ್ತಿನಿಂದ ಇವತ್ತಿನವರೆಗೆ ಕುಮಾರಸ್ವಾಮಿಯವರಾಗಲಿ, ಅವರ ಮಡದಿ ಅನಿತಾ ಅವರಾಗಲಿ ಅಥವಾ ಮಗ ನಿಖಿಲ್ ಆಗಲಿ ಕನಕಪುರ, ಸಾತನೂರು, ರಾಮನಗರ, ಮಧುಗಿರಿ, ಚನ್ನಪಟ್ಟಣ, ಮಂಡ್ಯ ಅಂತ ಹಾಸನದ ಹೊರತಾದ ಕ್ಷೇತ್ರಗಳಲ್ಲಿ ಪರದಾಡುತ್ತಿದ್ದಾರೆಯೇ ವಿನಃ ಹಾಸನದೊಳಗಿನ ಯಾವ ಕ್ಷೇತ್ರದಲ್ಲೂ ಅವರಿಗೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಭವಾನಿಯವರ ಬಿಗಿಹಿಡಿತ ಅಂತದ್ದು.
ಗೌಡರಿಗೆ ಮೊದಲಿನಿಂದಲೂ ರೇವಣ್ಣನಿಗಿಂತ, ಕುಮಾರಸ್ವಾಮಿಯ ಬಗ್ಗೆಯೇ ತುಸು ಮಮಕಾರ ಹೆಚ್ಚು. ಆ ನಿಟ್ಟಿನಲ್ಲಿ ರೇವಣ್ಣ ಮತ್ತು ಕುಮಾರಸ್ವಾಮಿಯನ್ನು ಪರಸ್ಪರ ಹೋಲಿಕೆ ಮಾಡಿ ನೋಡಿದರೆ, ಇವತ್ತಿನ ಸಂದರ್ಭಕ್ಕೆ ಬೇಕಾದ ರಾಜಕೀಯ ಕುಶಲತೆಗಳನ್ನು ರೇವಣ್ಣನಿಗಿಂತ ಕುಮಾರಸ್ವಾಮಿಯವರೇ ಹೆಚ್ಚು ಕರಗತ ಮಾಡಿಕೊಂಡಿದ್ದಾರೆ. ಆ ಕಾರಣಕ್ಕೂ ದೇವೇಗೌಡರು, ಕುಮಾರಸ್ವಾಮಿಯವರನ್ನೇ ತನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಆರಿಸಿಕೊಂಡಿರಲೂಬಹುದು. ಇದೇ ಭವಾನಿ ರೇವಣ್ಣ ಅವರ ಬೇಗುದಿಯ ಮೂಲ ಕಾರಣ. ಅಕಸ್ಮಾತ್ ಹಾಸನದ ಪ್ರಾಬಲ್ಯವೂ ಕುಮಾರಸ್ವಾಮಿಯ ಕೈಗೆ ಹೋದರೆ ತನ್ನ ಕುಟುಂಬವು ಸಂಪೂರ್ಣವಾಗಿ ನಿರ್ನಾಮವಾಗಬೇಕಾಗುತ್ತದೆ ಅಂತಲೇ ಭವಾನಿಯವರು ಪಟ್ಟುಹಿಡಿದು ಕುಮಾರಸ್ವಾಮಿಯವರ ಕುಟುಂಬವನ್ನು ಹಾಸನದಿಂದ ಹೊರಗಿಟ್ಟಿದ್ದಾರೆ. ಹಾಸನವನ್ನು ತಮ್ಮ ಕುಟುಂಬಕ್ಕೆ ಖಾತ್ರಿ ಪಡಿಸಿಕೊಳ್ಳುವ ಸಲುವಾಗಿಯೇ ಅವರು 2016ರಲ್ಲಿ ಹೊಳೆನರಸೀಪುರದ ಹಳೇಕೋಟೆ ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದರು. ಆ ಸಲ ಅವರು ಸ್ಪರ್ಧೆಗೆ ಕುಮಾರಸ್ವಾಮಿಯವರ ವಿರೋಧವಿದ್ದರೂ, ದೊಡ್ಡಗೌಡರಿಂದ ಒಪ್ಪಿಗೆ ಪಡೆದು ಸ್ಪರ್ಧಿಸಿ ಗೆಲ್ಲುವಲ್ಲಿ ಭವಾನಿಯವರು ಯಶಸ್ವಿಯಾಗಿದ್ದರು. ಇದು ಗೌಡರ ಕುಟುಂಬದೊಳಗಿನ ರಾಜಕೀಯ ಹಣಾಹಣಿಯ ಸಾರಾಂಶ.
ಕುಮಾರಸ್ವಾಮಿಯವರಿಗೆ ತನ್ನ ಅಣ್ಣ ರೇವಣ್ಣನ ಬಗ್ಗೆ ತಕರಾರುಗಳು ಇಲ್ಲದೆ ಹೋದರೂ, ಅತ್ತಿಗೆ ಭವಾನಿಯವರ ಈ ಪಟ್ಟುಗಳ ಬಗ್ಗೆ ಅಸಮಾಧಾನ ಇದ್ದೇ ಇತ್ತು. ಕುಟುಂಬದ ಈ ಆಂತರಿಕ ಕಲಹ ಜಗಜ್ಜಾಹೀರಾಗದಂತೆ ತಡೆಯುವಲ್ಲಿ ದೇವೇಗೌಡರು ಸಾಕಷ್ಟು ಸಾಹಸ ಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಭವಾನಿಯವರು ಹಾಸನದ ಆಚೆಗೆ, ಮೈಸೂರು ಭಾಗದ ಕೆಲವು ವಿಧಾನಸಭಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಲು ಮುಂದಾದದ್ದು ಈ ಕೌಟುಂಬಿಕ ಕಲಹವನ್ನು ದೊಡ್ಡದು ಮಾಡಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ತನ್ನ ಮಗ ಪ್ರಜ್ವಲ್ ನನ್ನು ಕಣಕ್ಕಿಳಿಸಬೇಕೆಂದು ಭವಾನಿ ಆಸೆ ಪಟ್ಟಿದ್ದರು. ಆದರೆ ಕುಮಾರಸ್ವಾಮಿಯವರು ತಮ್ಮ ಪರಮಾಪ್ತ ಸಾ.ರಾ.ಮಹೇಶ್ ಮೂಲಕ ಅದಕ್ಕೆ ಅಡ್ಡಗಾಲು ಹಾಕಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕೆಲ ದಿನಗಳ ಕಾಲ ಭವಾನಿ ಮತ್ತು ಸಾ.ರಾ ಮಹೇಶ್ ನಡುವೆ ಸಾರ್ವಜನಿಕವಾಗಿಯೇ ವಾಗ್ವಾದಗಳು ನಡೆದದ್ದುಂಟು. ಆನಂತರವೇ ಇದಕ್ಕೊಂದು ಕೊನೆ ಹಾಡಬೇಕೆಂದು ನಿರ್ಧರಿಸಿದ ದೇವೇಗೌಡರು, ತಾವು ಪ್ರತಿನಿಧಿಸುತ್ತಿದ್ದ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟು, ತಾವು ತುಮಕೂರಿನಿಂದ ಸ್ಪರ್ಧಿಸಿ ಸೋತರು.
ಹೀಗೆ ಹಾಸನವನ್ನು ತಮ್ಮ ಕುಟುಂಬಕ್ಕೆ ಸೀಮಿತವಾಗಿಸಿಕೊಳ್ಳುವ ಭವಾನಿಯವರ ಮಹತ್ವಾಕಾಂಕ್ಷೆಯ ಬಗ್ಗೆ ಕುಮಾರಸ್ವಾಮಿಯವರು ಅಸಮಾಧಾನಗೊಂಡಿದ್ದರು. ಆ ಕಾರಣಕ್ಕೇ, 2023ರ ಅಸೆಂಬ್ಲಿ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧಿಸಲು ನಡೆಸಿದ ಯತ್ನಕ್ಕೆ ಅಡ್ಡಗಾಲು ಹಾಕಿದ ಕುಮಾರಸ್ವಾಮಿಯವರು, ಸುತಾರಾಂ ಅವರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು.
ಕುಮಾರಸ್ವಾಮಿಯವರಿಗೆ ಇತ್ತೀಚೆಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ, ತಮ್ಮ ಮಗ ನಿಖಿಲ್ ರಾಜಕೀಯ ಭವಿಷ್ಯದ ಪ್ರಶ್ನೆ. ಆತನ ಸತತ ಸೋಲುಗಳು ತಂದೆಯಾಗಿ ಕುಮಾರಸ್ವಾಮಿಯವರನ್ನು ಚಿಂತೆಗೀಡು ಮಾಡಿವೆ. ಒಕ್ಕಲಿಗರೇ ನಿರ್ಣಾಯಕವಾಗಿರುವ ಮಂಡ್ಯದಲ್ಲೂ ಸೋತ ನಿಖಿಲ್, ಜೆಡಿಎಸ್ ಪಾಲಿನ ಭದ್ರಕೋಟೆ ಎನ್ನಲಾಗುವ ರಾಮನಗರದಲ್ಲೂ ಮುಗ್ಗರಿಸಬೇಕಾಯ್ತು. ತನ್ನ ವರ್ಚಸ್ಸಿನ ಹೊರತಾಗಿಯೂ ಹೀಗೆ ನಿರಂತರವಾಗಿ ಸೋಲುತ್ತಿರುವ ಮಗ, ತನ್ನ ನಂತರದಲ್ಲಿ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬಲ್ಲನೇ ಎಂಬುದು ಅವರ ಆತಂಕ. ಅದು ನಿಜವೂ ಹೌದು. ಈ ಆತಂಕದ ಕಾರಣದಿಂದಲೇ ಈ ಸಲ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ರನ್ನು ಮಂಡ್ಯದ ಲೋಕಸಭಾ ಅಭ್ಯರ್ಥಿಯಾಗಿಸುವ ಧೈರ್ಯ ತೋರದೆ, ತಾವೇ ಕಣಕ್ಕಿಳಿದಿದ್ದಾರೆ. ತೀರಾ ಜಿದ್ದಾಜಿದ್ದಿನ ಈ ಪೈಪೋಟಿಯಲ್ಲಿ ಆತ ಪುನಃ ಸೋತರೆ, ಆತನ ರಾಜಕೀಯ ಜೀವನ ಸಂಪೂರ್ಣ ನಾಶವಾದಂತೆ ಎಂಬುದು ಕುಮಾರಸ್ವಾಮಿಯವರಿಗೆ ತಿಳಿದಿತ್ತು. ಹಾಗಾಗಿಯೇ ಅವರು ರಿಸ್ಕ್ ತೆಗೆದುಕೊಳ್ಳಲಿಲ್ಲ.
ಆದರೆ, ಮುಂದೇನು? ಎಂಬ ಭವಿಷ್ಯ ಅವರನ್ನು ಕಾಡುತ್ತಲೇ ಇತ್ತು. ರಾಜಕೀಯವಾಗಿ ನಿಖಿಲ್ ಛಾಪು ಮೂಡಿಸಬೇಕೆಂದರೆ, ಮುಂದೆ ಆತ ಸ್ಪರ್ಧಿಸುವ ಚುನಾವಣೆಯಲ್ಲಿ ಗೆಲ್ಲಲೇಬೇಕು? ಅಂತಹ ಸೇಫ್ ಕ್ಷೇತ್ರ ಯಾವುದು? ಹಾಸನ ಬಿಟ್ಟರೆ ಮತ್ತೊಂದಿಲ್ಲ. ಆದರೆ, ಕುಮಾರಸ್ವಾಮಿಯವರ ಕುಟುಂಬ ಹಾಸನದ ರಾಜಕೀಯಕ್ಕೆ ಪ್ರವೇಶಿಸಲು ಭವಾನಿ ರೇವಣ್ಣ ಒಪ್ಪುವುದಿಲ್ಲ. ಹಾಸನದ ರಾಜಕಾರಣದ ಮೇಲೆ ರೇವಣ್ಣನ ಕುಟುಂಬದ ಹಿಡಿತವನ್ನು ಸಡಿಲವಾಗಿಸಿದರೆ ಮಾತ್ರ, ತನ್ನ ಮಗನನ್ನು ಅಲ್ಲಿಂದ ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರದ ಭಾಗವಾಗಿಯೇ, ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಹೊರಬರುವಲ್ಲಿ ಕುಮಾರಸ್ವಾಮಿಯವರು ಪರೋಕ್ಷವಾಗಿ ನೆರವಾಗಿದ್ದಾರೆ ಎನ್ನುತ್ತವೆ ಹಾಸನದ ಜೆಡಿಎಸ್ ಮೂಲಗಳು!
ಬಿಜೆಪಿ-ಜೆಡಿಎಸ್ ಮೈತ್ರಿಯ ನಂತರ ಜೆಡಿಎಸ್ ಗೆ ರಾಜ್ಯ ಬಿಜೆಪಿ ನಾಯಕರಿಂದ ಅಂತಹ ಸ್ವಾಗತವೇನೂ ಸಿಗಲಿಲ್ಲ. ನಿರ್ದಿಷ್ಟವಾಗಿ ಹಾಸನದ ಪ್ರೀತಂ ಗೌಡ, ದೇವರಾಜೇಗೌಡ ಮೊದಲಾದವರು ಅಕ್ಷರಶಃ ಪ್ರತಿರೋಧ ತೋರಿದರು. ಇಂಟರೆಸ್ಟಿಂಗ್ ಸಂಗತಿ ಎಂದರೆ, ಹಾಸನದ ಈ ಬಿಜೆಪಿ ನಾಯಕರಿಗೆ ವಿರೋಧ ಇದ್ದದ್ದು ರೇವಣ್ಣ, ಭವಾನಿ ರೇವಣ್ಣನವರ ವಿರುದ್ಧವೇ ಹೊರತು ಕುಮಾರಸ್ವಾಮಿಯ ವಿರುದ್ಧ ಅಲ್ಲ. ಯಾಕೆಂದರೆ ಹಾಸನವನ್ನು ನಿಯಂತ್ರಿಸುತ್ತಿದ್ದುದೆ ರೇವಣ್ಣನ ಕುಟುಂಬ. ಈ ಬಿಜೆಪಿ ನಾಯಕರಿಗೆ ಮುಳ್ಳಾಗಿದ್ದುದೂ ರೇವಣ್ಣನ ಕುಟುಂಬ. ಕುಮಾರಸ್ವಾಮಿ ಯಾವತ್ತೂ ಹಾಸನದ ರಾಜಕಾರಣಕ್ಕೆ ತಲೆ ಹಾಕಲು ಅವಕಾಶವೇ ಇರಲಿಲ್ಲ.
ರೇವಣ್ಣ ಕುಟುಂಬಕ್ಕೆ ಎದುರಾದ ಹಾಸನ ಬಿಜೆಪಿ ನಾಯಕರ ಈ ವಿರೋಧಕ್ಕೆ ಕುಮಾರಸ್ವಾಮಿಯವರ ಸಹಮತವಿತ್ತು ಎನ್ನಲಾಗುತ್ತಿದೆ. ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದಿಗೆ ನೀಡಿದ ಸಂದರ್ಶನವೊಂದರಲ್ಲಿ, ಚುನಾವಣೆಗು ಮೊದಲೇ ಸ್ವತಃ ಕುಮಾರಸ್ವಾಮಿಯವರೇ `ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ನೀಡುವುದು ಬೇಡ ಅಂತ ಬಿಜೆಪಿ ಹೇಳಿತ್ತು, ಆದ್ರೆ ನಮ್ಮ ತಂದೆಯವರೇ ಗೆಲುವಿನ ಭರವಸೆ ನೀಡಿ ಟಿಕೆಟ್ ಕೊಡಿಸಿದ್ದಾರೆ’ ಎಂಬ ಮಾತು ಹೇಳಿದ್ದರು. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಇಂತಹ ಒಡಕು ಮಾತು ಎಂಥಾ ಅಡ್ಡಪರಿಣಾಮ ಉಂಟುಮಾಡಬಲ್ಲದು ಅನ್ನೋದು ಕುಮಾರಸ್ವಾಮಿಯವರಂತಹ ನುರಿತ ರಾಜಕಾರಣಿಗೆ ತಿಳಿಯದ ಸಂಗತಿಯೇನಲ್ಲ. ಹಾಗಾದರೆ ಉದ್ದೇಶಪೂರ್ವಕವಾಗಿಯೇ ಆ ಮಾತು ಹೇಳಿದ್ದರಾ? ಪ್ರಜ್ವಲ್ ರೇವಣ್ಣ ಗೆಲ್ಲುವುದು ಕುಮಾರಸ್ವಾಮಿಯವರಿಗೆ ಬೇಕಾಗಿರಲಿಲ್ಲವೇ? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ.
ಇನ್ನು ಈ ಪೆನ್ ಡ್ರೈವ್ ಸಂಗತಿ ಹೊಸದೇನೂ ಅಲ್ಲ. ಕಳೆದ ಏಳೆಂಟು ತಿಂಗಳಿಂದ ಈ ಸುದ್ದಿ ಹಾಸನದಲ್ಲಿ ಹರಿದಾಡುತ್ತಲೇ ಇದೆ. ಬಿಜೆಪಿಯ ದೇವರಾಜಗೌಡರೇ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ `ಹಾಸನದ ಸರ್ಕಲ್ ನಲ್ಲಿ ಎಲ್ ಇ ಡಿ ಸ್ಕ್ರೀನ್ ಹಾಕಿಸಿ ಇವುಗಳನ್ನು ಪ್ರದರ್ಶನ ಮಾಡಿಸುತ್ತೇನೆ’ ಎಂಬ ಹೇಳಿಕೆಯನ್ನು ಹಿಂದೆ ನೀಡಿದ್ದರು. ಅಲ್ಲದೇ ಡಿಸೆಂಬರ್ ನಲ್ಲಿ ತಮ್ಮ ಪಕ್ಷಕ್ಕೂ ಈ ಕುರಿತು ರಹಸ್ಯ ಪತ್ರ ಬರೆದಿದ್ದರು. ಅಕಸ್ಮಾತ್ ಈ ಪೆನ್ ಡ್ರೈವ್ ಬಹಿರಂಗದಲ್ಲಿ ಕಾಂಗ್ರೆಸ್ ನ ಪಾತ್ರವೇ ಇದ್ದಿದ್ದರೆ, ಅವರು ಚುನಾವಣೆಯ ಕೊನೇ ಕ್ಷಣದಲ್ಲಿ ಇವುಗಳನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಗೆ ದೊಡ್ಡ ಏಟು ಕೊಡುವ ಸಾಧ್ಯತೆ ಇರುವ ಈ ಹಗರಣವನ್ನು ಕಾಂಗ್ರೆಸಿನವರು ಏನಿಲ್ಲವೆಂದರು ಒಂದು ವಾರದ ಹಿಂದೆಯೇ ಬಿಡುಗಡೆ ಮಾಡಿ ಮೈತ್ರಿ ಪಕ್ಷಗಳಿಗೆ ದೊಡ್ಡ ಹಿನ್ನಡೆ ಉಂಟು ಮಾಡುತ್ತಿದ್ದರು. ಯಾಕೆಂದರೆ ಆ ಚುನಾವಣೆಗಳು ನಡೆದದ್ದು ಜೆಡಿಎಸ್ ನ ಓಟ್ ಬ್ಯಾಂಕ್ ಎನ್ನಲಾಗುವ ಒಕ್ಕಲಿಗ ಮತಗಳೇ ನಿರ್ಣಾಯಕವಾದ ಹಳೇ ಮೈಸೂರು ಕ್ಷೇತ್ರಗಳಲ್ಲಿ. ಆದರೆ ಬೇರೆಲ್ಲೂ ಈ ಪೆನ್ ಡ್ರೈವ್ ಬಿಜೆಪಿ-ಜೆಡಿಎಸ್ ಗೆ ಹೆಚ್ಚು ಡ್ಯಾಮೇಜ್ ಮಾಡಲು ಅವಕಾಶ ನೀಡದಂತೆ, ಚುನಾವಣೆ ಇನ್ನೆರಡು ದಿನ ಇದೆ ಎನ್ನುವಾಗ ಇದನ್ನು ಹೊರಗೆ ತಂದಿರೋದು ನೋಡಿದರೆ, ಇದರ ಹಿಂದೆ ಕಾಂಗ್ರೆಸ್ ಗಿಂತ ಬಿಜೆಪಿಯ ಕೈವಾಡ ಇರುವುದೇ ಸ್ಪಷ್ಟವಾಗಿ ಸಾಬೀತಾಗುತ್ತದೆ.
ಹಾಗೆ ನೋಡಿದರೆ, ರೇವಣ್ಣನವರ ಕುಟುಂಬದ ವಿರುದ್ಧ ಕತ್ತಿಮಸೆಯುತ್ತಿದ್ದ ಹಾಸನ ಬಿಜೆಪಿ ನಾಯಕರನ್ನು ತಣ್ಣಗಾಗಿಸುವುದು ಕುಮಾರಸ್ವಾಮಿಯವರಿಗೆ ದೊಡ್ಡ ಸಂಗತಿಯಾಗಿರಲಿಲ್ಲ. ಬಿಜೆಪಿ ಹೈಕಮಾಂಡಿಗೆ ಸುದ್ದಿ ಮುಟ್ಟಿಸಿ ಮೆತ್ತಗಾಗಿಸಬಹುದಿತ್ತು. ಮಂಡ್ಯದಲ್ಲಿ ತನಗೆ ಬಂಡಾಯದ ಸೂಚನೆ ರವಾನಿಸಿದ್ದ ಸುಮಲತಾ ಅವರು ಸಂಪೂರ್ಣವಾಗಿ ತನಗೆ ಬೆಂಬಲಿಸದೆ ಹೋದರೂ, ಅವರು ಕಾಂಗ್ರೆಸ್ ಪಕ್ಷ ಸೇರದಂತೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಬಿಜೆಪಿ ಹೈಕಮಾಂಡ್ ಮೂಲಕ ತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದ್ದ ಕುಮಾರಸ್ವಾಮಿಯವರಿಗೆ ಹಾಸನದ ಬಿಜೆಪಿ ನಾಯಕರನ್ನು ಸುಮ್ಮನಾಗಿಸುವುದು ದೊಡ್ಡ ವಿಚಾರವೇ? ಆದರೆ ಉದ್ದೇಶಪೂರ್ವಕವಾಗಿಯೇ ಅವರು ಈ ಕೆಲಸ ಮಾಡಿಲ್ಲ ಎನ್ನುತ್ತವೆ ಮೂಲಗಳು.
ಪೆನ್ ಡ್ರೈವ್ ಹೊರಬಂದ ನಂತರ ಜೆಡಿಎಸ್ ಪಾಳೆಯದಲ್ಲಿ ನಡೆದ ವಿದ್ಯಮಾನಗಳು ಕುಮಾರಸ್ವಾಮಿಯವರ ಮೇಲಿನ ಈ ಅನುಮಾನವನ್ನು ಇನ್ನಷ್ಟು ದೃಢವಾಗಿಸುತ್ತವೆ. ಮೊದಲನೆಯದಾಗಿ, ಸ್ವತಃ ಅವರೇ “ನಮ್ಮ ಕುಟುಂಬವೇ ಬೇರೆ, ರೇವಣ್ಣನ ಕುಟುಂಬವೇ ಬೇರೆ. ನಮಗೂ ಈ ಪೆನ್ ಡ್ರೈವ್ ಗೂ ಸಂಬಂಧ ಕಲ್ಪಿಸಬೇಡಿ” ಎಂದು ಸ್ಪಷ್ಟ ಮಾತುಗಳಲ್ಲಿ ನುಣುಚಿಕೊಳ್ಳಲು ನೋಡಿದರು. ಸ್ವಂತ ಅಣ್ಣನ ಕುಟುಂಬವನ್ನೇ ಬೇರೆ ಕುಟುಂಬ ಎನ್ನುವುದನ್ನು ಹೇಗೆ ಸ್ವೀಕರಿಸಲು ಸಾಧ್ಯ? ಆನಂತರ, ಪ್ರಜ್ವಲ್ ರೇವಣ್ಣನ ಉಚ್ಛಾಟನೆಗೆ ಪಕ್ಷದ ಶಾಸಕರೇ ಧ್ವನಿ ಎತ್ತಿದರು. ಅವರಲ್ಲಿ ಸಾ ರಾ ಮಹೇಶ್, ಸಮೃದ್ಧಿ ಮಂಜುನಾಥ್ ಮೊದಲಾದ ಕುಮಾರಸ್ವಾಮಿಯವರ ಆಪ್ತರೇ ಮುಂಚೂಣಿಯಲ್ಲಿದ್ದದ್ದು ವಿಶೇಷ.
ಈ ಕೊಂಡಿಗಳನ್ನೆಲ್ಲ ಥಳುಕು ಹಾಕಿ ನೋಡಿದಾಗ, ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಕುಮಾರಸ್ವಾಮಿಯವರು ಸ್ವಂತ ಅಣ್ಣನ ಕುಟುಂಬವನ್ನು ರಾಜಕೀಯವಾಗಿ ಶಿಥಿಲಗೊಳಿಸಲು ಬಿಜೆಪಿಯ ವಿರೋಧಿಗಳೊಟ್ಟಿಗೆ ಪರೋಕ್ಷವಾಗಿ ಕೈಜೋಡಿಸಿದರಾ ಎಂಬ ಅನುಮಾನ ಕಾಡದಿರದು…