ದ ಪಾಲಿಟಿಕ್

ಯಡಿಯೂರಪ್ಪಗೆ ಬಿಸಿ ತುಪ್ಪದಂತಾಯಿತಾ ಬಂಜಾರರ ಬಂಡಾಯ!?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಯ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಮಾಜಿಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ನೇರವಾಗಿ ಸಂಕಷ್ಟ ತಂದಿಟ್ಟಿತಾ? ಹೌದು, ಶಿಕಾರಿಪುರದಲ್ಲಿ ನೆನ್ನೆ ನಡೆದ ಬಂಜಾರ ಸಮುದಾಯದ ಪ್ರತಿಭಟನೆ ಆಕ್ರೋಶಕ್ಕೆ ತಿರುಗಿ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸುವಂತ ಆಘಾತಕಾರಿ ಘಟನಾವಳಿಗಳು ಈ ಮೇಲಿನ ಪ್ರಶ್ನೆಗೆ ಸ್ಪಷ್ಟವಾದ ಉತ್ತರದಂತೆ ಕಾಣುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರರನ್ನು ಶಿಕಾರಿಪುರದಲ್ಲಿ ಉತ್ತರಾಧಿಕಾರಿಯನ್ನಾಗಿಸುವ ಮೂಲಕ ಪುತ್ರನ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಲು ಹೊರಟಿದ್ದ ಯಡಿಯೂರಪ್ಪ ಅವರಿಗೆ ನೆನ್ನೆಯ ಘಟನೆ ಬಿಸಿ ತುಪ್ಪದಂತಾಗಿದೆ.

ತಮ್ಮ ಮನೆಯ ಮೇಲೆ ದಾಳಿ ನಡೆದ ಸುದ್ದಿ ತಿಳಿಯುತ್ತಲೆ ಎಚ್ಚೆತ್ತುಕೊಂಡ ಯಡಿಯೂರಪ್ಪನವರು ‘ಗಲಭೆ ತಪ್ಪ್ಪು ತಿಳುವಳಿಕೆಯಿಂದ ಸಂಭವಿಸಿದೆ. ತಾಂಡಾ ಅಭಿವೃದ್ದಿ ನಿಗಮ, ಸೇವಾಲಾಲ್ ಜನ್ಮ ಸ್ಥಳ ಸೂರಗೊಂಡನಕೊಪ್ಪ ಅಭಿವೃದ್ದಿ ಸೇರಿದಂತೆ ಬಂಜಾರ ಸಮುದಾಯದ ಅಭಿವೃದ್ದಿ ಮಾಡಿದ್ದೇನೆ. ದಾಳಿ ಪ್ರಕರಣದಲ್ಲಿ ಯಾರ ವಿರುದ್ದವೂ ಕ್ರಮ ಬೇಡ ಎಂದು ಪೊಲೀಸ್ ಇಲಾಖೆಗೆ ತಿಳಿಸಿದ್ದೇನೆ’ ಎಂದು ಹೇಳುವ ಮೂಲಕ ಎದುರಾಳಿಗಳು ಇದರ ಲಾಭ ಪಡೆಯುವ ಹುನ್ನಾರಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಅದರೆ ಬಂಜಾರ ಸಮುದಾಯ ಪ್ರತಿಭಟನೆಯನ್ನು ಮುಂದುವರೆಸುವತ್ತ ಹೆಜ್ಜೆ ಹಾಕುತ್ತಿದ್ದು, ಯಡಿಯೂರಪ್ಪ ಅವರತ್ತ ಎದುರುಗಾಳಿಯಂತಾಗಿದೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚಿನ ಮತಬ್ಯಾಂಕ್ ಹೊಂದಿರುವ ಬಂಜಾರ ಸಮುದಾಯ ಯಡಿಯೂರಪ್ಪ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುತ್ತಾ ಎಂತಹುದ್ದೇ ಸಂದರ್ಭದಲ್ಲೂ ಅವರ ಬೆನ್ನಿಗೆ ನಿಂತಿತ್ತು. ಆದರೆ ಈಗ ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ವಿರುದ್ದ ತಿರುಗಿ ಬಿದ್ದಿರುವುದು ಇದರ ಬಿಸಿ ಯಡಿಯೂರಪ್ಪ ಅವರಿಗೆ ತಟ್ಟತೊಡಗಿದೆ. ಈ ಗಲಭೆಯ ಹಿಂದೆ ಕಾಂಗ್ರೇಸ್ಸಿಗರ ಕೈವಾಡವಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆಯಾದರೂ ಇದೊಂದು ರಾಜಕೀಯ ಹೇಳಿಕೆಯಾಗುತ್ತದೆ.

ಈ ಬಗ್ಗೆ ಪೊಲೀಸ್ ಇಲಾಖೆ ಉತ್ತರ ನೀಡಬೇಕು. ಆದರೆ ಈ ಘಟನೆಯ ನಂತರದ ಬೆಳವಣಿಗೆಗಳನ್ನು ಕಾಂಗ್ರೆಸ್ಸಿಗರಷ್ಟೇ ಅಲ್ಲ, ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ಹಿತಶತ್ರುಗಳು ಕೂಡ ಬಳಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ನಿರಾಕರಿಸಲಾಗದು, ಈಗಾಗಲೆ ಪೊಲೀಸರು ಗಲಭೆ ಪ್ರಕರಣದಲ್ಲಿ ನಾಲ್ಕು ಎಫ್ ಐ ಆರ್ ದಾಖಲಿಸಲಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್ ಸೇರಿದಂತೆ ಎಂಟಕ್ಕೂ ಹೆಚ್ಚು ಜನ ಪೊಲೀಸರು ಗಾಯಗೊಂಡಿದ್ದರೆ. ಪ್ರತಿಭಟನೆಯಲ್ಲಿದ್ದವರಲ್ಲಿ ಮಹಿಳೆಯರು ಸೇರಿದಂತೆ ಕೆಲವರು ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿದ್ದಾರೆ.

ಯಾರ ಮೇಲೂ ಕ್ರಮ ಬೇಡ ಎಂದು ಯಡಿಯೂರಪ್ಪ ಅವರೇ ಹೇಳಿದ್ದರೂ ಪೊಲೀಸ್ ಇಲಾಖೆ ತನ್ನ ಕೆಲಸವನ್ನು ತಾನು ಮಾಡಿದೆ. ಸುಮಾರು 22 ಕ್ಕೂ ಹೆಚ್ಚಿನ ಜನರ ವಿರುದ್ದ ಕೇಸು ದಾಖಲಿಸಿದ್ದು ಸದ್ಯ ಹಲವರನ್ನು ಬಂಧಿಸಿದ್ದಾರೆ. ಯಾರ ಮೇಲೂ ಕ್ರಮ ಬೇಡ ಎಂದು ಯಡಿಯೂರಪ್ಪ ಅವರು ಹೇಳಿದ್ದರೂ ಪೊಲೀಸರ ಮೇಲೆ ಹಲ್ಲೆ ನಡೆದಿರುವಾಗ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳುವ ಮೂಲಕ ಕಾನೂನು ತನ್ನ ಕೆಲಸ ತಾನು ಮಾಡುತ್ತದೆ ಎಂಬ ಸೂಚನೆ ಕೊಟ್ಟಿದ್ದಾರೆ. ಗೃಹಸಚಿವರ ಈ ನಡೆ ಯಡಿಯೂರಪ್ಪ ಅವರು ಬಂಜಾರ ಸಮುದಾಯದೊಂದಿಗಿನ ಸಂಧಾನಕ್ಕೆ ಹಿನ್ನಡೆಯಾದಂತಾಗಿದೆ. ಬಂಜಾರ ಸಮುದಾಯದ ಬಿಜೆಪಿ ಮುಖಂಡರುಗಳು ಪ್ರಕರಣವನ್ನು ತಿಳಿಗೊಳಿಸಲು ಹೆಣಗಾಡುತ್ತಿದ್ದರೆ ಇತ್ತ ಗೃಹ ಸಚಿವರ ಹೇಳಿಕೆ ಬಂಜಾರ ಸಮುದಾಯವನ್ನು ಮತ್ತಷ್ಟು ಕೆರಳಿಸುವಂತಿದೆ.

ಈಗಾಗಲೆ ಶಿಕಾರಿಪುರಕ್ಕೆ ಬಿ.ವೈವಿಜಯೇಂದ್ರ ಅಭ್ಯರ್ಥಿಯಾಗುವುದು ನಿರ್ಧಾರವಾಗಿರುವುದಕ್ಕೆ ಬಿಜೆಪಿಯಲ್ಲೆ ಕೆಲವರಿಗೆ ಅಸಮಾಧಾನವಿದೆ. ವಂಶರಾಜಕಾರಣ ವಿರೋಧಿ ಅಸ್ತ್ರವನ್ನೆ ಕಾಂಗ್ರೇಸ್ ಬಳಸಿಕೊಳ್ಳಲು ಹವಣಿಸುತ್ತಿರುವ ಹೊತ್ತಿನಲ್ಲೆ ಯಡಿಯೂರಪ್ಪ ಅವರ ವಿರುದ್ದ ಬಂಜಾರ ಸಮುದಾಯ ತಿರುಗಿ ಬಿದ್ದಿರುವುದು ಬಿಜೆಪಿಗೆ ಪ್ರಬಲ ಓಟ್ ಬ್ಯಾಂಕ್ ಕೈಬಿಟ್ಟಂತಾದರೆ ,ಅದೇ ಕಾಂಗ್ರೇಸ್‍ಗೆ ವರದಾನದಂತಾಗಿದೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಚುನಾವಣೆಯ ಕಾಲಘಟ್ಟದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಕೈಗೊಂಡ ನಿರ್ಧಾರ ಬಿಜೆಪಿಗೆ ತಿರುಗುಮಂತ್ರವಾಗಿದೆ. ಇದು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ಪುತ್ರನ ರಾಜಕೀಯ ಏಳಿಗೆಗೆ ಮಾರಕ ಪರಿಣಾಮ ಕೊಟ್ಟರು ಆಶ್ಚರ್ಯಪಡುವಂತಿಲ್ಲ.

ಸಾಬರು-ಸಾದರು ಕೈ ಬಿಡುತ್ತಾರಾ?

ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಹಿಂದೂತ್ವದಿಂದ ದೂರ ನಿಂತು ತಮ್ಮ ರಾಜಕೀಯ ಏಳಿಗೆಯನ್ನು ಕಂಡವರು, ಅಭಿವೃದ್ದಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಒಲವುಗಳಿಸಿದ್ದರು. ಪ್ರತಿಚುನಾವಣೆಯಲ್ಲೂ ಯಡಿಯೂರಪ್ಪ ಅವರು ಮುಸ್ಲಿಂ ಸಮುದಾಯದ ಕನಿಷ್ಠ ಶೇ.20 ರಷ್ಟು ಮತಗಳನ್ನು ಪಡೆಯುತ್ತಿದ್ದದ್ದು ಅವರ ವ್ಯಕ್ತಿತ್ವಕ್ಕೆ ಸಿಕ್ಕ ಗೌರವವಾಗಿತ್ತು. ಆದರೆ ಸರ್ಕಾರ ಮುಸ್ಲಿಂರಿಗಿದ್ದ ಶೇ. 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಶೇ. 10 ಇಡಬ್ಲ್ಯೂಎಸ್ ಗೆ ಮೀಸಲಾತಿ ಪಟ್ಟಿಗೆ ವರ್ಗಾಯಿಸಿರುವುದು ಮುಸ್ಲಿಂರನ್ನು ಕೆರಳಿಸಿದೆ. ಇದೂ ಕೂಡ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರರ ಓಟಕ್ಕೆ ಬ್ರೇಕ್ ಹಾಕುವ ಸಾಧ್ಯತೆಗಳೂ ಇವೆ.

ಸರ್ಕಾರ ಇದೇ ಒಳಮೀಸಲಾತಿ ಅಂಗೀಕಾರವನ್ನು ಮೂರು ತಿಂಗಳ ಮುಂಚೆಯೇ ಕೈಗೊಂಡಿದ್ದೇ ಅಗಿದ್ದರೆ ಅಸಮಾಧಾನಗೊಳ್ಳುವ ಜಾತಿ ಸಮುದಾಯಗಳನ್ನು ಸಮಾಧಾನಪಡಿಸುವ ಅವಕಾಶಗಳು ಇದ್ದವು. ಚುನಾವಣೆಯ ಘೋಷಣೆಯ ಕೊನೆ ಘಳಿಗೆಯಲ್ಲಿ ಕೈಗೊಂಡಿರುವ ಈ ನಿರ್ಧಾರ ಮೂರ್ಖತನದ್ದಾಗಿದೆ ಎಂಬ ಅಭಿಪ್ರಾಯಗಳು ಬಿಜೆಪಿಯಿಂದಲೇ ಕೇಳಿ ಬರುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒಂದೆಡೆ ಕ್ಷೇತ್ರದಲ್ಲಿ ಬಲಾಢ್ಯ ಮತಶಕ್ತಿ ಹೊಂದಿರುವ ಲಿಂಗಾಯಿತ ಸಮುದಾಯ ಅಸಮಾಧಾನ ಹೊಂದಿರುವುದು ಮತ್ತೊಂದೆಡೆ ಒಳಮೀಸಲಾತಿ ಬೇಗುದಿಯಿಂದ ಬಂಜಾರ ಸಮುದಾಯದ ಈಗಿನ ಬಂಡಾಯವನ್ನು ಶಮನಗೊಳಿಸಿ ವಿಶ್ವಾಸಗಳಿಸುವುದು ಯಡಿಯೂರಪ್ಪನವರಿಗೆ ದೊಡ್ಡ ಸವಾಲು ಆಗಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!