ಭಾರತ ಸ್ವಾತಂತ್ರ್ಯ ಪಡೆದು ೭೫ ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ, ಮಹಿಳೆರ‍್ಯಾಕೆ ಇನ್ನೂ ರಾಜಕೀಯದಿಂದ ಇಷ್ಟೊಂದು ದೂರವಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹಲವು ಮುಖಗಳಿಂದ ವಿಶ್ಲೇಷಿಸುವುದು ಸಮಯೋಚಿತವೆನಿಸುತ್ತದೆ. ಪುರುಷಾಳ್ವಿಕೆಯ ಈ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಚುನಾವಣಾ ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸುವ ಹೆಣ್ಣು ಅನೇಕ ಬಾರಿ, ಪ್ರಬಲ ಶಕ್ತಿಗಳ ಕಾಲಿಗೆ ಸಿಕ್ಕುವ ಪುಟ್ಬಾಲ್ ಆಗಿರುತ್ತಾಳೆ! ಅವಳನ್ನು ಗೋಲು ಬಾರಿಸಲು ಬಳಸಿಕೊಳ್ಳುವುದೂ, ಬೇಕೆಂದ ಕಡೆಗೆ ಒದೆಯುವುದು, ಬೇಡವಾದರೆ ದೂರಕ್ಕೆ ನೂಕುವುದೂ….. ಎಲ್ಲವೂ ಸಮಯ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದಷ್ಟೇ ಎಂಬುದು ತಕ್ಷಣಕ್ಕೆ ಕಣ್ನಿಗೆ ಗೋಚರಿಸುವ ಸತ್ಯ.
ಮಹಿಳೆಯರು ಸಮರ್ಥವಾಗಿ ಅಧಿಕಾರ ನಿಭಾಯಿಸಬಲ್ಲರೆಂಬುದಕ್ಕೆ ಬಹಳಷ್ಟು ಉದಾಹರಣೆಗಳೀಗ ನಮ್ಮ ಮುಂದಿವೆ. ಆದಾಗ್ಯೂ ತಾರತಮ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಕಾಂಗ್ರೆಸ್ಸಿನ ಮಾಜಿ ಸಂಸದ, ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅವರನ್ನು ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ- ಎರಡೂ ಪಕ್ಷಗಳೂ ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಸಿಕೊಂಡ ರೀತಿ ಹಾಗೂ ಕೇಂದ್ರ ಬಿಜೆಪಿಯ ವರಿಷ್ಠ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಆ ಪಕ್ಷ ಲೋಕಸಭಾ ಚುನಾವಣೆಗೆ ಟಿಕೇಟ್ ಕೊಡುವುದಾಗಿ ನಂಬಿಸಿ, ಅವರು ಎಲ್ಲ ಸಿದ್ಧತೆ ಮಾಡಿಕೊಂಡ ನಂತರ ಕೊನೆಯ ಗಳಿಗೆಯಲ್ಲಿ ಕೈಕೊಟ್ಟ ಪರಿ ಇದಕ್ಕೆ ಕೆಲ ತಾಜಾ ಉದಾಹರಣೆಗಳಷ್ಟೇ. ಬಹಳಷ್ಟು ಬಾರಿ ತಮ್ಮ ಪಕ್ಷದ ಪ್ರಬಲ ಅಭ್ಯರ್ಥಿಯ ಸಾವಿನ ಸಂದರ್ಭದಲ್ಲಿ, ಅನುಕಂಪದ ಮತಗಳನ್ನು ಪಡೆಯಲು ದಿವಂಗತರ ಪತ್ನಿಯನ್ನೇ ಚುನಾವಣೆಗೆ ನಿಲ್ಲಿಸಿರುವ ಈ ಎಲ್ಲಾ ಪಕ್ಷಗಳೂ ಸಂದರ್ಭ, ಕಾಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತವೆ. ಅದಕ್ಕೆ ಬಲಿಪಶುವಾಗುವ ಮಹಿಳೆಯರು ಇಂತಹ ಹಲವು ಅಪಮಾನಗಳನ್ನು ದಶಕಗಳಿಂದ ಅನುಭವಿಸುತ್ತಾ ಬಂದಿದ್ದಾರೆ.
ಇವತ್ತಿಗೂ ಮಹಿಳೆ ಸಕ್ರಿಯ ರಾಜಕಾರಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಭಾಗಿಯಾಗಲು ಆಗುತ್ತಿಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಮತ ಚಲಾಯಿಸಲು ಮಾತ್ರ ಮತಬ್ಯಾಂಕ್‌ಗಳ೦ತೆ ಬಳಕೆಯಾಗುತ್ತಿದ್ದಾರೆಯೇ ಹೊರತು, ಸಕ್ರಿಯ ರಾಜಕಾರಣದಲ್ಲಿ ತೊಡಗುವುದು ತೀರಾ ಕಡಿಮೆ. ರಾಜಕೀಯ ಮಹಿಳೆಗೇಕೆ ದೂರ? ಎಂಬ ಪ್ರಶ್ನೆ ಬಂದೊಡನೆ ಅದನ್ನು ಹಿಂಬಾಲಿಸಿಕೊ೦ಡು… ದೂರವಿರಿಸಿದವರಾರು? ಹೇಗೆ ದೂರವಿರಿಸಿದ್ದಾರೆ? ಯಾಕೆ ದೂರವಿರಿಸಿದ್ದಾರೆ? ಅವಳಾಗಿಯೇ ದೂರವಿದ್ದಾಳೆಯೇ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿ ಹಿಂಬಾಲಿಸಿಕೊ೦ಡು ಬಂದುಬಿಡುತ್ತವೆ. ಆದರೆ ಅದಕ್ಕೆ ಉತ್ತರವಿರುವುದು ನಮ್ಮ ಅಸಮಾನ ಸಮಾಜದಲ್ಲಿ! ಅದಕ್ಕೂ ಮುಂಚೆಯೇ ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಕೌಂಟು೦ಬಿಕ…… ವ್ಯವಸ್ಥೆಗಳಲ್ಲಿ ಮಹಿಳೆಯ ಪಾತ್ರವೆಷ್ಟೆಂದೂ, ಅಲ್ಲಿ ಪ್ರಮುಖ ನಿರ್ಧಾರ ನಿರ್ಣಯಗಳನ್ನು ತೆಗೆದುಕೊಳ್ಳಲು ಎಷ್ಟು ಪ್ರಮಾಣದಲ್ಲಿ ಅವಳನ್ನು ಒಳಗೊಳ್ಳಲಾಗುತ್ತಿದೆ ಎಂದು ಮೊದಲು ಯೋಚಿಸಬೇಕಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಮಾನತೆ ಸಾಧ್ಯವಾದರಷ್ಟೇ ಬಹುಶಃ ರಾಜಕೀಯವಾಗಿಯೂ ಅವಳು ಸಮಾನತೆ ಸಾಧಿಸಲು ಸಾಧ್ಯವಾಗುತ್ತದಷ್ಟೇ.
ಭಾರತದಲ್ಲಿ ಪಿತೃಪ್ರಧಾನ ಕುಟುಂಬ ಮೌಲ್ಯಗಳು ಗಟ್ಟಿಯಾಗಿ ಬೇರುಬಿಟ್ಟಿರುವುದರಿಂದಾಗಿಯೇ ಇಲ್ಲಿ ಲಿಂಗತಾರತಮ್ಯ ಅತ್ಯಂತ ಸಹಜಕ್ರಿಯೆ ಎಂಬ೦ತೆ ನಡೆದು, ನಾಯಕತ್ವದ ಗುಣವಿರುವ ಮಹಿಳೆಯರೂ ರಾಜಕೀಯದಿಂದ ದೂರವೇ ಉಳಿಯುವಂತಾಗಿದೆ. ಮಹಿಳೆಯನ್ನು ರಾಜಕೀಯದಲ್ಲಿ ಒಳಗೊಳ್ಳಲು ಇಷ್ಟವಿಲ್ಲದ ಪುರುಷ ಚಕ್ರಾಧಿಪತ್ಯದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ೫೦ ಮೀಸಲಾತಿ ಇತ್ತೀಚೆಗೆ ಸಿಕ್ಕಿದ್ದರೂ ಪ್ರಮುಖ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳುವ ರಾಜ್ಯ- ರಾಷ್ಟ್ರ ರಾಜಕಾರಣದಲ್ಲಿ ಇಂದಿಗೂ ಅಧಿಕಾರ ಮರುಹಂಚಿಕೆಯ ಮೀಸಲಾತಿಯಿಂದ ಮಹಿಳೆ ದೂರವೇ ಉಳಿದಿದ್ದಾಳೆ. ಶೇ೩೩ ರಷ್ಟಾದರೂ ಮೀಸಲಾತಿ ನೀಡಿದರೆ ಅಷ್ಟು ಪ್ರಮಾಣದ ಪುರುಷರು ಅಧಿಕಾರ ಕಳೆದುಕೊಳ್ಳುವ ಭಯದಿಂದಾಗಿ ಮಹಿಳಾ ಮೀಸಲು ವಿಧೇಯಕ ಎಲ್ಲ ಪಕ್ಷದವರಿಂದಲೂ ಉಪೇಕ್ಷೆಗೊಳಪಟ್ಟಿದೆ! ಅಷ್ಟೇ ಅಲ್ಲ ಮಹಿಳಾ ಸಮಾನತೆಯ ಪರವಿರುವ ಕೆಲ ಪ್ರಗತಿಪರ ಪುರುಷರೂ ಜಾತಿ ರಾಜಕಾರಣದ ಲೆಕ್ಕಾಚಾರದಲ್ಲಿ, ಪುರುಷರಿಗೆ ಅವಕಾಶಗಳು ಕಡಿಮೆಯಾಗುತ್ತವೆಂದು ಗುಟ್ಟಾಗಿ ಈ ವಿಧೇಯಕದ ವಿರೋಧಿಗಳಾಗಿದ್ದಾರೆ ಎಂಬುದೂ ಸತ್ಯ!
ಜೊತೆಗೆ ತಾವು ಪ್ರತಿನಿಧಿಸುವ ಕ್ಷೇತ್ರಗಳನ್ನು ತಮ್ಮ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿಕೊಂಡಿರುವ, ವಂಶಪಾರ೦ಪರ್ಯ ಗುತ್ತಿಗೆ ಮಾಡಿಕೊಂಡಿರುವ ಅನೇಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಅಧಿಕಾರ ಮರುಹಂಚಿಕೆಯ ಕಲ್ಪನೆಯೇ ಭಯ ಹುಟ್ಟಿಸುವಂತದ್ದು. ಹಾಗೇ ಎಲ್ಲಾ ಪಕ್ಷಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಮಹಿಳೆಗೆ ಟಿಕೇಟ್ ನೀಡುವ ಪ್ರಮಾಣ ಕೂಡ ಕಡಿಮೆಯೇ! ಇದಕ್ಕೆ ಅಸ್ತಿತ್ವದ ಭಯ ಕಾರಣ. ಒಂದೋ ರಾಜಕಾರಣಿ ಸತ್ತಿದ್ದು, ಅನುಕಂಪಗಿಟ್ಟಿಸಲು ಅವನ ಪತ್ನಿಗೆ, ಕುಟುಂಬದ ರಾಜಕೀಯ ಪುರುಷರ ಬೆಂಬಲವಿರುವವರಿಗೆ ಅಥವಾ ಸೋಲು ಖಚಿತವಾದ ಸ್ಥಳದಲ್ಲಿ ಮಾತ್ರ ಟಿಕೆಟ್ ನೀಡುವುದನ್ನು ಈಗ ಹೆಚ್ಚಾಗಿ ಕಾಣುತ್ತಿದ್ದೇವೆ! ಜೊತೆಗೆ ಇತ್ತೀಚೆಗೆ ಸಿನಿಮಾ ಕ್ಷೇತ್ರದ ಮಹಿಳೆಯರನ್ನು ಕೇವಲ ಅವರ ತಾರಾಮೌಲ್ಯವನ್ನು ಪರಿಗಣಿಸಿ, ಮತ್ಯಾವ ರಾಜಕೀಯ ಅರ್ಹತೆ ಇಲ್ಲದಿದ್ದಾಗಲೂ ರಾಜಕೀಯಕ್ಕೆ ಕರೆ ತರುವ ಕೆಟ್ಟ ಪದ್ಧತಿಯೂ ಚಾಲ್ತಿಗೆ ಬಂದಿದೆ. ಇದು ಕೂಡ ಅಕ್ಷಮ್ಯ.
ರಾಜಕಾರಣದಲ್ಲಿ ಅಪರಾಧ, ಅಪ್ರಮಾಣಿಕತೆ ಮತ್ತು ಭ್ರಷ್ಟತೆ ಮಿತಿಮೀರಿರುವುದು ಮಹಿಳೆ ರಾಜಕೀಯದಿಂದ ದೂರ ಉಳಿಯಲು ಇನ್ನೊಂದು ಕಾರಣ. ಚುನಾವಣೆಗೆ ಸ್ಪರ್ಧಿಸುವುದೆಂದರೆ ಈಗ ಹಲವು ಕೋಟಿಗಳ ವ್ಯವಹಾರ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದೇ ಕಷ್ಟಸಾಧ್ಯ. ಇನ್ನು ಕೋಟಿಗಟ್ಟಲೆ ಹಣವೇ ಮೂಲವಾಗುಳ್ಳ ಈ ಭ್ರಷ್ಟ ಚುನಾವಣಾ ರಾಜಕಾರಣವನ್ನು ಅವಳು ಸಮರ್ಥವಾಗಿ ಎದುರಿಸುವುದು ಹೇಗೆ? ಜೊತೆಗೆ ರಾಜಕೀಯಕ್ಕೆ ಬೇಕಾದ ವಿಸ್ತ್ರತ್ವ ಜನಸಂಪರ್ಕಜಾಲದ ಸಾಧ್ಯತೆಯೂ ಮಹಿಳೆಗೆ ಕಷ್ಟಸಾಧ್ಯ. ಹಾಗೆ ಮತ ಪಡೆಯಲು ಇಲ್ಲಿ ಹಣ-ಹೆಂಡ-ತೋಳ್ಬಲ-ಹಿ೦ಸೆಯ೦ತಹ ಅಡ್ಡಮಾರ್ಗಗಳೇ ಪ್ರಧಾನವಾಗಿರುವಾಗ ಸಭ್ಯ ಹೆಣ್ಣುಮಕ್ಕಳು ರಾಜಕೀಯ ಪ್ರವೇಶಿಸಲೂ ಹೆದರುತ್ತಾರೆ. ಹೀಗಾಗಿ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸುವ ತುರ್ತು ಅನಿವಾರ್ಯತೆ ಇದೆ.
ಈಗಂತೂ ಕೆಲವು ರಾಜಕೀಯ ಪಕ್ಷಗಳಿಗೆ ಮಹಿಳೆಯರದ್ದೇ ನೇತೃತ್ವ ಇದೆ. ಆದರೆ ಸ್ವತಂತ್ರ ಭಾರತದಲ್ಲಿ ೧೯೫೨ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ನಂತರದ ಈ ವರ್ಷಗಳಲ್ಲಿ ಲೋಕಸಭೆಯಲ್ಲಿ ಮಹಿಳೆಯರ ಪ್ರಮಾಣ ಶೇ.೧೦ ದಾಟಲು ಐದು ದಶಕಗಳಿಗೂ ಹೆಚ್ಚು ಕಾಲ ಕಾಯಬೇಕಾಯ್ತು ಎಂಬುದು ರಾಜಕೀಯವಲಯದಲ್ಲಿ ಮಹಿಳೆಗಿರುವ ಸ್ಥಾನಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ೧೫ನೇ ಲೋಕಸಭೆಯಲ್ಲಿ ೫೪೫ ಸದಸ್ಯರ ಪೈಕಿ ೫೯ ಮಹಿಳೆಯರಿದ್ದು, ೨೦೧೪ ರ ೧೬ನೇ ಲೋಕಸಭೆಯಲ್ಲಿ ೬೧ ಮಹಿಳಾ ಎಂ.ಪಿ. ಗಳಿದ್ದರು ಎಂಬುದೇ ದೊಡ್ಡ ಸಮಾಧಾನ! ಸದ್ಯ ಕೇಂದ್ರದಲ್ಲಿ ೬೬ ಸಚಿವರಲ್ಲಿ ೧೧ ಮಂದಿ ಮಹಿಳೆಯರಿದ್ದಾರೆ. ಅಂದರೆ ೧೪% ಮಾತ್ರ ಮಹಿಳೆಯರು. ದೇಶದ ಒಟ್ಟು ೪೧೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ೩೬೪ ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿದ್ದಾರೆ! ಇವೆಲ್ಲವೂ ರಾಜಕೀಯದಲ್ಲಿ ಮಹಿಳೆ ಕ್ರಮಿಸಬೇಕಿರುವ ಅಗಾಧ ದೂರವನ್ನು ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲವಿದು.
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತಕ್ಕಿದೆ. ಆದರೆ ಸಂಸತ್‌ನಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರ ಬಂದಾಗ ೧೮೯ ರಾಷ್ಟ್ರಗಳ ಪೈಕಿ ಭಾರತ ೧೧೧ನೇ ಸ್ಥಾನದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ ಎಂಬುದನ್ನು ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಪ್ರಕಟಿಸಿರುವ ಸಮೀಕ್ಷಾ ವರದಿ ಬಹಿರಂಗಪಡಿಸಿದೆ. ಜಿನಿವಾ ಮೂಲದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ [ಐಪಿಯು] ಸಂಗ್ರಹಿಸಿರುವ ಅಂಕಿ ಅಂಶಗಳ ಪ್ರಕಾರ ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಗಳಿಗಿಂತಲೂ ಭಾರತದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ ಅತ್ಯಂತ ಕಡಿಮೆ! ನಿಜಕ್ಕೂ ಇದು ಭಾರತಕ್ಕೆ ನಾಚಿಕೆಗೇಡಿನ ವಿಚಾರವಾಗಬೇಕಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿ೦ದ ಅಧಿಕಾರ ವಿಕೇಂದ್ರಿಕರಣದ ಬಗೆಗೆ, ಅಧಿಕಾರದ ಮರು ಹಂಚಿಕೆಯ ಬಗೆಗೆ ಮಾತಾಡುತ್ತಲೇ ಬಂದಿದ್ದೇವೆ.
ಆದರೆ ಮಹಿಳೆಯರ ಪಾಲಿಗೆ ಈ ವಿಕೇಂದ್ರಿಕರಣ ಕೇಂದ್ರೀಕೃತವಾಗಿರುವುದು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರವನ್ನು ಪಡೆಯುವ ಮಟ್ಟಿಗೆ ಮಾತ್ರ. ಪಂಚಾಯಿತಿಗಳಲ್ಲಿ, ನಗರ ಪಾಲಿಕೆಗಳಲ್ಲಿ ಈಗ ೫೦%ಗೆ ಮೀಸಲಾತಿ ಏರಿದೆ. ಇಲ್ಲಿ ಇಷ್ಟು ಮೀಸಲಾತಿ ನೀಡಲು ಮುಂದಾದ ಜನಪ್ರತಿನಿಧಿಗಳು ರಾಜ್ಯ-ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರನ್ನು ಸಮನಾಗಿ ಒಳಗೊಳ್ಳುವ ಅಧಿಕಾರದ ಮರು ಹಂಚಿಕೆಗೆ ಮಾತ್ರ ತಯಾರಿಲ್ಲ. ಇದಕ್ಕೆ ಅನೇಕ ನಿಗೂಢ ಕಾರಣಗಳಿವೆ!
ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾದ ಅಧಿಕಾರವನ್ನು ಪಡೆದ ಅನೇಕ ಮಹಿಳೆಯರು ತಮ್ಮ ನಾಯಕತ್ವವನ್ನು ಈಗಾಗಲೇ ಸಾಬೀತು ಮಾಡಿ ತೋರಿಸಿದ್ದಾರೆ. ಇನ್ನೂ ಅನೇಕ ಮಹಿಳೆಯರು ತಮ್ಮ ಕುಟುಂಬದ ಪುರುಷರ ಕೈಗೊಂಬೆಗಳಾಗಿದ್ದಾರೆ ಎಂಬುದೂ ನಿಜ. ಆದರೆ ಇವರೂ ನಿಧಾನಕ್ಕೆ ತಮ್ಮ ಸ್ವಯಂ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಕೂಡ ಇವರಲ್ಲಿ ಆಡಳಿತದ ವಿಷಯಕ್ಕೆ ಪುರುಷ ಹಸ್ತಕ್ಷೇಪವನ್ನು ನಿರಾಕರಿಸುವ ಮನೋಭಾವವನ್ನು ಬೆಳೆಸುವಂತಹ ಕಾರ್ಯ ತುರ್ತಾಗಿ ಆಗಬೇಕಿದೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಹಿನ್ನೆಡೆಗೆ ಕೇವಲ ಪುರುಷರೇ ಜವಾಬ್ದಾರರೇ? ತಮ್ಮ ಹಕ್ಕುಗಳನ್ನು-ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಲ್ಲಿ ಮಹಿಳೆಯರ ಪಾಲೇನು? ರಾಜಕೀಯ ನಾಯಕತ್ವದ ಸ್ಥಾನಗಳನ್ನು ಏರಲು ನಮ್ಮಲ್ಲಿ ಸಮರ್ಥ ಮಹಿಳೆಯರ ಕೊರತೆ ಇದೆಯೇ ಅಥವಾ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದಕ್ಕೆ ನಮ್ಮ ಮಹಿಳೆಯರೇ ಸಿದ್ಧರಿಲ್ಲವೇ? ಪ್ರಗತಿಪರರೂ, ವಿಚಾರಶೀಲರೂ ಸೇರಿ ರೂಪಿಸುತ್ತಿರುವ ಪರ್ಯಾಯ ರಾಜಕೀಯ ಪ್ರಯೋಗಗಳಲ್ಲಿಯಾದರೂ ಮಹಿಳೆಯರನ್ನು ಸಮಾನವಾಗಿ ಒಳಗೊಳ್ಳುವ ಪ್ರಯತ್ನಗಳು ಏಕೆ ಆಗುತ್ತಿಲ್ಲ? ಎಂಬ ಅಂಶಗಳು ತುರ್ತಾಗಿ ಚರ್ಚಿಸಬೇಕಾದ ವಿಷಯಗಳು.
ಪ್ರಜಾತಂತ್ರದಲ್ಲಿ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿಸದೇ ಯೋಜನೆಗಳ ರಚನೆಯಲ್ಲಿ ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಮಾನ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರ ಸಮಾನ ಒಳಗೊಳ್ಳುವಿಕೆಯಿಲ್ಲದ ಯಾವುದೇ ಕ್ಷೇತ್ರ, ಯೋಜನೆ, ವ್ಯವಸ್ಥೆ ಮತ್ತು ಯಾವುದೇ ಸಮಾಜ ಹಾಗೂ ಸರ್ಕಾರ ಖಂಡಿತವಾಗಿಯೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಅದೊಂದು ಬಗೆಯ ಅಂಗವೈಕಲ್ಯತೆಯಿರುವ ಸಮಾಜವೇ ಸೈ. ಇದನ್ನು ಸರಿಪಡಿಸದೆ ಸ್ವಾತಂತ್ರ್ಯವೆ೦ಬುದಕ್ಕೂ ಅರ್ಥವಿಲ್ಲ! ಹೀಗಾಗಿ ಮಹಿಳಾ ಮೀಸಲಾತಿ ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೆ ಬರಬೇಕು. ವೈಜ್ಞಾನಿಕವಾಗಿ ಮೀಸಲಾತಿಯನ್ನು ಜನಸಂಖ್ಯಾಧಾರಿತವಾಗಿ ನೀಡಬೇಕು. ಅಂದರೆ ೫೦%ರಷ್ಟು ಮೀಸಲಾತಿಯನ್ನು ಪಡೆಯಬೇಕಿರುವುದು ಎಲ್ಲ ರೀತಿಯಲ್ಲೂ ಅಪೇಕ್ಷಣೇಯವಾದುದು.
ಆದರೆ ಸಧ್ಯ, ತಕ್ಷಣಕ್ಕೆ ಸರ್ಕಾರಗಳು ಒಪ್ಪಿಕೊಂಡಿರುವ ೩೩% ಆದರೂ ಜಾರಿಯಾಗಲು ಅದೆಷ್ಟು ಅಡೆತಡೆಗಳು! ಜೊತೆಗೆ ಇತ್ತೀಚೆಗಿನ ಕೆಲವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಗೆ ನೀಡುವ ಟಿಕೆಟ್ ಪ್ರಮಾಣ ಕೂಡ ಕಡಿಮೆಯಾಗಿದೆ. ಈ ಎಲ್ಲ ಕಾರಣಕ್ಕಾಗಿ ಮಹಿಳಾ ಮೀಸಲು ಮಸೂದೆ ತಕ್ಷಣಕ್ಕೆ ಜಾರಿಯಾಗಲು ಹೋರಾಟ ರೂಪಿಸಬೇಕಿದೆ. ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಮಹಿಳೆಯರಿಗಿರುವ ಸಾಂವಿಧಾನಿಕ ಹಕ್ಕು ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕಿದೆ.
ಪಕ್ಷದಲ್ಲಿನ ಸಂಘಟನೆಯ ಮಟ್ಟದಲ್ಲೂ ಕೂಡ ಹೆಚ್ಚಿನ ಮಹಿಳಾ ಪದಾಧಿಕಾರಿಗಳು ಇಲ್ಲದಿರುವುದು ಮತ್ತೊಂದು ಕೊರತೆಯಾಗಿ ಕಾಣುತ್ತದೆ. ಮುಖ್ಯವಾಗಿ ಸಹಜ ನಾಯಕತ್ವದ ಗುಣವಿದ್ದು, ಗೆಲ್ಲುವ ಶಕ್ತಿ ಪ್ರದರ್ಶಿಸಿದ ನಂತರ ಕೂಡ ಮಹಿಳೆಯರನ್ನು ರಾಜಕೀಯದಲ್ಲಿ ಒಪ್ಪಿಕೊಳ್ಳಲು ಪುರುಷ ಅಹಂಕಾರವು ಅಡ್ಡಿ ಬರುತ್ತಿರುವುದು ಕೂಡ ವಿಪರ್ಯಾಸ. ಎಲ್ಲಕ್ಕಿಂತಾ ಮುಖ್ಯವಾಗಿ ರಾಜಕೀಯ ಎನ್ನುವುದೇ ಪುರುಷ ಸಂಸ್ಕೃತಿ! ಅದನ್ನು ಮಹಿಳೆ ಹೊರಗಿನಿಂದ, ಉದ್ದೇಶಪೂರ್ವಕವಾಗಿ ಹೇಗಾದರೂ ಸರಿ ಕಲಿತು, ಜಾಣಳಾಗಬೇಕಿದೆ. ಅದಕ್ಕಿಂಥಾ ಹೆಚ್ಚಾಗಿ ರಾಜಕೀಯ ಭಾಗವಹಿಸುವಿಕೆ ಯಾರದೋ ಕೃಪಾಕಟಾಕ್ಷವಲ್ಲ ಅದು ತನ್ನ ಹಕ್ಕು ಎಂಬ ಆತ್ಮವಿಶ್ವಾಸದಿಂದ ರಾಜಕೀಯದ ತರಬೇತಿ ಹಾಗೂ ತಯಾರಿಯನ್ನು ಮೂಲಮಟ್ಟದಿಂದ ಮಾಡಿಕೊಳ್ಳಬೇಕು.
ಇದೆಲ್ಲಕ್ಕಿಂತಾ ಹೆಚ್ಚಾಗಿ ಮಹಿಳಾ ನಾಯಕತ್ವ ತನ್ನಷ್ಟಕ್ಕೇ ಸಹಜವಾಗಿ ಈ ನೆಲದಿಂದ ಹೊಮ್ಮಿದರೆ ರಾಜಕೀಯ ಕ್ಷೇತ್ರದಲ್ಲಿ ಪ್ರಬಲ ಬದಲಾವಣೆಯ ಗಾಳಿ ಖಂಡಿತಾ ಬೀಸುತ್ತದೆ. ಇದಕ್ಕಾಗಿ ಮಹಿಳಾ ಸಂಘಟನೆಗಳು ಮಾತ್ರವಲ್ಲ ಎಲ್ಲಾ ಪಕ್ಷದ ಮಹಿಳಾ ನಾಯಕಿಯರೂ ಒಗ್ಗೂಡಿ ಕಾರ್ಯಯೋಜನೆಗಳನ್ನು ರೂಪಿಸಬೇಕು. ನಾಯಕತ್ವ ಗುಣದ ಮಹಿಳೆಯರಿಗೆ ಸಂಪೂರ್ಣ ಬೆಂಬಲ ನೀಡಿ ಈ ದಿಕ್ಕಿನಲ್ಲಿ ಅವರನ್ನು ಹೆಚ್ಚೆಚ್ಚು ಸಜ್ಜುಗೊಳಿಸುವೆಡೆಗೆ ಇಡೀ ಸಮಾಜ ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಿದೆ. ಎಲ್ಲಕ್ಕಿಂಥ ಮುಖ್ಯವಾಗಿ ಮಹಿಳಾ ಸಮುದಾಯಕ್ಕೆ ನಿಜ ರಾಜಕೀಯ ಪ್ರಜ್ಞೆಯ ಜಾಗೃತಿ ಮೂಡಿಸಿದರೆ, ಮಹಿಳೆ ತನ್ನಷ್ಟಕ್ಕೇ ಒಳಿತು ಕೆಡುಕುಗಳ ವಿವೇಚನೆ ಪಡೆದುಕೊಂಡು ಪ್ರಜಾಪ್ರಭುತ್ವದ ಹಾದಿಯ ಎಡರು ತೊಡರುಗಳನ್ನು ದಾಟಿ ಯಶಸ್ವಿಯಾಗಬಲ್ಲಳು. ಜೊತೆಗೇ ದೇಶವನ್ನು ಸರಿಯಾದ ದಿಕ್ಕಿನೆಡೆಗೆ ಕರೆದೊಯ್ಯುವ ನಾಯಕತ್ವವನ್ನೂ ವಹಿಸಿಕೊಳ್ಳಬಲ್ಲಳು.
-ರೂಪ ಹಾಸನ