ದ ಪಾಲಿಟಿಕ್

ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಆಚಿಚೆ!

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಮನೆಯೊಳಗೆ ಮತ್ತು ಸಮುದಾಯದೊಂದಿಗೆ ಏಕಕಾಲಕ್ಕೆ ಗುದ್ದಾಡಿ, ಹೋರಾಡಿ ಮುಸ್ಲಿಂ ವಿದ್ಯಾರ್ಥಿನಿಯರು  ಹೀಜಾಬ್ ತ್ಯಜಿಸಿ ಕಾಲೇಜಿಗೆ ಬಂದರೆ ಈ ಸಮಸ್ಯೆ ಪರಿಹಾರವಾಗುತ್ತದೆಯೇ? ಈ ನೆಲದಲ್ಲಿ ಮುಸ್ಲಿಂ ದ್ವೇಷ, ಅಸಹನೆ ಶಾಸ್ವತವಾಗಿ ನಿಲುತ್ತದೆಯೇ? ಹಾಗೆ ಅಂದುಕೊಂಡರೆ ಅದು ನಮ್ಮ ಮೂರ್ಖತನವಾಗುತ್ತದೇ ಅಷ್ಟೇ. ಏಕೆಂದರೆ ಈ ದ್ವೇಷ  ರಾಜಕಾರಣವೂ ಮತ್ತೊಂದು ಸಮಸ್ಯೆ ಅಲ್ಲದ ಸಮಸ್ಯೆಯನ್ನು ಖಂಡಿತಾ ಹುಟ್ಟುಹಾಕುತ್ತದೆ.

ಈಗ ‘ಹಿಜಾಬ್’ ವಿವಾದ ಹುಟ್ಟುಹಾಕಿದ್ದೆ ಮುಂದಿನ ಚುನಾವಣೆಯ ತಯಾರಿಗಾಗಿ ಎನ್ನುವುದು ನಿಸ್ಸಂಶಯ. ಹಿಜಾಬ್ ವಿರೋಧದ  ಹಿಂದೆ  ಮುಸ್ಲಿಂ ವಿದ್ಯಾರ್ಥಿನಿಯರ ಕಾಳಜಿ, ಶಿಸ್ತು ಸಮವಸ್ತ್ರ,ಸಮಾನತೆ ಅಲ್ಲವೇ ಅಲ್ಲ.ವಿರೋಧದ ಹಿಂದಿರುವುದು  ಮುಸ್ಲಿಂ ಸಮುದಾಯದ ಮೇಲಿನ ದ್ವೇಷ ಮತ್ತು ಹಿಂದುತ್ವ ರಾಜಕಾರಣ ಅಷ್ಟೇ! ಮುಸ್ಲಿಂ ಸಮುದಾಯದ ಮೇಲೆ ಸಾಮಾನ್ಯ ಹಿಂದೂಗಳನ್ನು ಎತ್ತಿಕಟ್ಟಿ,ಅಲ್ಲಲ್ಲಿ ಕೋಮು ಗಲಭೆಗಳು ಹುಟ್ಟು ಹಾಕುವುದು; ಈ ಮೂಲಕ ಹಿಂದೂ ಮತಗಳ ಧ್ರುವೀಕರಣ ಮಾಡುವುದು; ಮುಖ್ಯವಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿ  ಮೊದಲ ಬಾರಿಗೆ ಮತದಾನ ಮಾಡಲಿರುವ   ಯುವಜನತೆಯ ತಲೆಯಲ್ಲಿ  ಕೋಮು ರಾಜಕಾರಣದ ವಿಷಬೀಜ ಬಿತ್ತುವುದು ಅವರ ಸದ್ಯದ ಹಿಡನ್ ಅಜೆಂಡಾ ಆಗಿದೆ.

ಹಾಗೆಯೇ, ಈ ವಿವಾದದ ಹಿಂದೆ ಅಪ್ಪಟ್ಟ ಕೇಸರಿ ಪ್ರೇಮವೂ ಇದೇ ಎಂದು ನಂಬಿಸಿರುವುದು ಅವರ ಹಿಪಾಕ್ರಸಿ ಅಷ್ಟೇ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ನಾಯಕರ ಒಡೆತನದ ದುಬಾರಿ ಫೀಸು-ಡೊನೇಷನ್ ಪಡೆಯುವ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ.ಈ ಸಂಸ್ಥೆಗಳಲ್ಲಿ ಅವರು ಕೇಸರಿ ಶಾಲು ಮತ್ತು ದುಪ್ಪಟ್ಟವನ್ನೊಳಗೊಂಡ ಯೂನಿಫಾರಂ ಕಡ್ಡಾಯಗೊಳಿಸಿ ತಮ್ಮ ಕೇಸರಿ ಪ್ರೇಮವನ್ನು,ಈ ಮೂಲಕ ದೇಶ ಪ್ರೇಮವನ್ನು ಸಾಬೀತು ಪಡಿಸಿದ ಒಂದೇ ಒಂದು ನಿದರ್ಶನಗಳಿಲ್ಲ.ಈ ದಿಶೆಯಲ್ಲಿ  ಯಾರು ಸಹ ಇಲ್ಲಿಯವರೆಗೆ ಆಲೋಚನೆಯೂ ಮಾಡಿದಂತೆ ಕಂಡು ಬಂದಿಲ್ಲ. 

ಈ ಜಗತ್ತಿನಲ್ಲಿ  ಯುದ್ಧದ ನಂತರ ಕೋಮುವಾದವೇ  ಬಹಳ ದೊಡ್ಡ ಇಂಡಸ್ಟ್ರಿಯಾಗಿದೆ. ಇವರೆಡು ಇಂಡಸ್ಟ್ರಿಗಳೇ  ಇವತ್ತು ಜಗತ್ತಿನ ಬಹುತೇಕರ ಶಾಂತಿ, ನೆಮ್ಮದಿ ಕಿತ್ತುಕೊಂಡಿದೆ. ಜತೆಗೆ ಅಸಂಖ್ಯಾತ ಜನರನ್ನ ಬಡತನದ ಕೂಪಕ್ಕೆ ದೂಡಿದೆ. ಇದರ ಅರಿವಿಲ್ಲದ ಅಮಾಯಕ ಯುವಜನತೆ ಕೇಸರಿ ಶಾಲು,ಹೀಜಾಬ್,.ಬುರ್ಖಾ ಕೋಮುಗಲಭೆ, ಯುದ್ಧದ ಗೆಲುವಿನ ಸಂಭ್ರಮದಲ್ಲಿ ಮುಳುಗಿವೆ.

ಇಂದು ರಾಜ್ಯ ಭಾಜಪ ಅತ್ಯಂತ ಕೆಟ್ಟ ದುಸ್ಥಿತಿಯಲ್ಲಿದೆ.  ಯಡಿಯೂರಪ್ಪ ಸರ್ಕಾರದ ಎರಡು ವರ್ಷದ ಆಡಳಿತದ ಬಗ್ಗೆ, ಬೊಮ್ಮಾಯಿ ಸರ್ಕಾರದ ಆರು ತಿಂಗಳ ಆಡಳಿತದ ಬಗ್ಗೆ ರಾಜ್ಯದ ಜನತೆಗೆ ಮಾತ್ರವಲ್ಲ, ಬಿಜೆಪಿ ಶಾಸಕರಿಗೆ ಅಸಮಾಧಾನ, ಅತೃಪ್ತಿ ಇದೆ.  ಸ್ವತಃ ಬಿಜೆಪಿಯ ಕೆಲ ಶಾಸಕರೆ ಒಂದು ವಾರದ ಹಿಂದೆ ತಮ್ಮ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರು ತಿಂಗಳ ಹಿಂದೆ ರಾಜ್ಯ ಭಾಜಪದಲ್ಲಿ ಏಕೈಕ ಜನನಾಯಕರಾಗಿರುವ ಯಡಿಯೂರಪ್ಪ  ಕಣ್ಣಿರು ಸುರಿಸುತ್ತಿದ್ದರು,ನಿರ್ಧಾಕ್ಷಿಣವಾಗಿ ಸಿಎಂ ಹುದ್ದೆಯಿಂದ ಅವರನ್ನು ಕೆಳಗಿಳಿಸಿದ್ದಾರೆ. ಯಾಕೆ ಕೇಳಗಿಳಿಸಿದ್ದು ಎನ್ನುವುದರ ಬಗ್ಗೆ ಇಲ್ಲಿಯವರೆಗೆ ಭಾಜಪದ ಹೈಕಮಾಂಡ್ ರಾಜ್ಯದ ಜನತೆಗೆ ಸಮಜಾಯಿಷಿ ಬಿಟ್ರೆ, ಸಮಂಜಸವಾದ ಸೂಕ್ತ ಕಾರಣಗಳನ್ನು ತಿಳಿಸಿಲ್ಲ. ಮುಂದೆಯೂ ತಿಳಿಸುವ ಯಾವ ನಿರೀಕ್ಷೆಯೂ ಇಲ್ಲ.

ಚುನಾವಣೆಗೆ  ವರ್ಷವಿರುವಾಗಲೇ ಸಾಮಾನ್ಯವಾಗಿ ಬಿಜೆಪಿ ಮತ ಧ್ರುವೀಕರಣಕ್ಕೆ ಇಳಿಯುತ್ತದೆ. ಈ ಸಲ ಸ್ವಲ್ಪ ಜೋರಾಗಿಯೇ ಸದ್ದು ಮಾಡುತ್ತಿದೆ ಅಷ್ಟೇ. ಪ್ರಸ್ತುತ ಸಂಘಪರಿವಾರ ಮತ್ತು ಅದರ ರಾಜಕೀಯ ಮುಖ ಭಾಜಪ ‘ಹಿಜಾಬ್’ ವನ್ನು ರಾಜಕೀಯ ಅಸ್ತ್ರ ಮಾಡಿಕೊಂಡು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮು ಗಲಭೆಗಳು ಹುಟ್ಟು ಹಾಕುವ ಷಡ್ಯಂತ್ರ  ರೂಪಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದ  ಮುಖ್ಯಮಂತ್ರಿ ಒಳಗೊಂಡಂತೆ, ಶಿಕ್ಷಣ ಮತ್ತು ಗೃಹ ಸಚಿವರು  ಸರ್ಕಾರದ ಪ್ರತಿನಿಧಿಯಂತೇ ಮಾತನಾಡದೆ, ಸಂಘಪರಿವಾರದ ವಕ್ತಾರರಂತೆ ಮಾತಾಡುತ್ತಿರುವುದು  ಅನುಮಾನಕ್ಕೆ ಪುಷ್ಟಿ ನೀಡುವಂತಿದೆ.

ಸರ್ಕಾರಕ್ಕೆ ಈ ವಿವಾದವನ್ನು ಬಗೆಹರಿಸುವುದು ಬೇಕಾಗಿಲ್ಲ. ಹಾಗಾಗಿಯೇ ಇದನ್ನು ಬಗೆಹರಿಸದೇ ಮತ್ತಷ್ಟೂ ಕಗ್ಗಂಟಾಗಿಸಿ ರಾಜ್ಯದುದ್ದಕ್ಕೂ ವ್ಯಾಪಿಸಲು ಅವಕಾಶ ಮಾಡಿಕೊಟ್ಟಿದೆ. ಹಿಜಾಬ್  ವಿವಾದ ಹುಟ್ಟುವ ಮುಂಚೆ ರಾಜ್ಯದಲ್ಲಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿದಿಲ್ಲ;  ಈಗ ಸರ್ಕಾರ ತರಾತುರಿಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ.ಕಡ್ಡಾಯಗೊಳಿಸಿರುವುದು ಕಾನೂನು ಬಾಹಿರವಾಗಿದೆ ಎಂದಿದ್ದಕ್ಕೆ ಪಿಯು ಇಲಾಖೆಯ ನಿರ್ದೇಶಕಿ ‘ಸ್ನೇಹಲ್’ಅವರನ್ನು ದಿಢೀರನೆ ಇಲಾಖೆಯಿಂದ ಎತ್ತಂಗಡಿ ಮಾಡಿದೆ.
ಮುಸ್ಲಿಂ ಸಮುದಾಯದ ಕೆಲ ರಾಜಕೀಯ ಮುಖಂಡರು ತನ್ನ ಪ್ರಚಾರಕ್ಕೋ ಅಥವಾ ತಾಳ್ಮೆ ಕಳೆದುಕೊಂಡು ಭಾವೋದ್ವೇಗಕ್ಕೆ ಒಳಗಾಗಿಯೋ ಅವರು ತೋಡಿರುವ ಖೆಡ್ಡಾದಲ್ಲಿ ಈಗಾಗಲೇ  ಬಿದ್ದಿದ್ದಾರೆ.ಈ ನೆಲದಲ್ಲಿ ಸಂಘಪರಿವಾರ ಈ ಮಟ್ಟಿಗೆ ಬೆಳೆದು ನಿಲ್ಲಬೇಕಾದರೆ ಇಂತಹ ತಲೆಬೇನಿಗಳ ಕೊಡಗೆಯೂ ಸಾಕಷ್ಟಿದೆ.

ಪ್ರಶಕ್ತ ಈಗ ಎದ್ದಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಚೆಂಡು ಹೈಕೋರ್ಟ್ ಅಂಗಳದಲ್ಲಿದೆ. ಎದ್ದಿರುವ ವಿವಾದಕ್ಕೆ ತೆರೆ ಎಳೆಯುವ ಶಕ್ತಿ ಮತ್ತು ಅವಕಾಶ ಇರುವುದು ಸಂವಿಧಾನಕ್ಕೆ ಮಾತ್ರ. ಅದು ನ್ಯಾಯಲಯದ ಮೂಲಕ ಆಗಬೇಕಾಗಿದೆ. ಈಗಾಗಲೇ ನ್ಯಾಯಲಯ ಬಹಳ ತ್ವರಿತವಾಗಿ ಈ ವಿಷಯದಲ್ಲಿ ದಾಖಲಾಗಿರುವ ‘ರಿಟ್ ಅರ್ಜಿ’ಗಳನ್ನು  ಕೈಗೆತ್ತಿಕೊಂಡಿರುವುದು ಆಶಾದಾಯಕ ಬೆಳವಣಿಗೆ ಆಗಿದೆ.

ಮುಸ್ಲಿಂ ಯುವತಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸುವುದು ಅವರ ಸಾಂವಿಧಾನಿಕ ಮೂಲಭೂತ ಹಕ್ಕೋ ಅಥವಾ ಅದೊಂದು ಹೇರಿಕೆಯೋ ಎನ್ನುವುದು ಘನವೆತ್ತ ನ್ಯಾಯಲಯವೇ ತೀರ್ಮಾನಿಸಬೇಕು. ಈ ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕೆಂಬ ಮೂಲಭೂತ ಹಕ್ಕು ನೀಡಿದೆಯೇ ವಿನಾ ಧಾರ್ಮಿಕ ಮೂಲಭೂತವಾದವೆಂಬ ಹಕ್ಕು ನೀಡಿಲ್ಲ.

ಹಿಜಾಬ್  ಬಗ್ಗೆ ನ್ಯಾಯಲಯವೂ ನೀಡುವ ತೀರ್ಪಿಗೂ ಮುನ್ನ, ಸರ್ಕಾರವೂ ಹಿಂದೂ ಮಹಿಳೆಯ ಹಣೆಯ ಕುಂಕುಮ, ಕೊರಳಲ್ಲಿನ ತಾಳಿ ಮತ್ತು ಕಾಲುಂಗುರ ಧರಿಸುವುದು ಮೂಲಭೂತವಾದವೋ? ಅಥವಾ ಸಾಂವಿಧಾನಿಕ ಹಕ್ಕೋ?  ಎನ್ನುವುದನ್ನು  ಜನತೆಗೆ ಉತ್ತರಿಸುವುದೇ? ಕುಂಕುಮ, ಬಳೆ,ತಾಳಿ, ಕಾಲುಂಗುರ ಅಲಂಕಾರಿಕ ವಸ್ತುಗಳೋ? ಅಥವಾ ಇವೆಲ್ಲವೂ ಹಿಂದೂ ಧರ್ಮದ ಧಾರ್ಮಿಕ ಕಟ್ಟಳೆಯ ಆಚರಣೆಯ ಭಾಗಗಳಾಗಿವೆಯೋ? ಎನ್ನುವುದು ಉತ್ತರಿಸುವುದೇ?

ಜತೆಗೆ, ಸರ್ಕಾರಿ-ಖಾಸಗಿ-ಅನುದಾನಿತ ಶಾಲೆಗಳಲ್ಲಿ, ಸರ್ಕಾರಿ ಕಛೇರಿಯಲ್ಲಿ, ಬಸ್ಸಿನಲ್ಲಿ ಹಿಂದೂ ದೇವತೆ – ದೇವರುಗಳ ಫೋಟೊ ಇಡುವುದು; ಅವುಗಳ ಪೂಜೆ ಮಾಡುವುದು; ವರ್ಷಕ್ಕೊಮ್ಮೆ ಗಣೇಶ್ ಕೂಡಿಸುವುದು; ಶಾರದೆ ಪೂಜೆ  ಮಾಡುವುದು; ಕೃಷ್ಣ ವೇಷಧಾರಿಗಳ ಸ್ಪರ್ಧೆ ನಡೆಸುವುದು ಸಹ ಏನೆಂದು ಉತ್ತರಿಸುವುದೇ?

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!