ದ ಪಾಲಿಟಿಕ್

ಭಾಗ 2 | ಭಾರತದ ಜರ್ನಲಿಸಂನಲ್ಲಿ ಕರಾಳ ಯುಗ : ರವೀಶ್ ಕುಮಾರ್

ದ ಪಾಲಿಟಿಕ್

ದ ಪಾಲಿಟಿಕ್

ನೀವು ನನ್ನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿದ್ದೀರಿ. ನಿಮ್ಮ ಮನೆಗಳಲ್ಲಿ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ನನಗಾಗಿ “ನ್ಯೂಸ್ ರೂಂ” ನಿರ್ಮಿಸಿದ್ದೀರಿ. ಪ್ರಪಂಚದಾದ್ಯಂತ ವೀಕ್ಷಕರು ನನಗೆ ಸಹಾಯ ಮಾಡಲು ಮುಂದೆ ಬಂದರು. ನೀವು ನನ್ನ ಬಳಿ ಹಣ ಕೇಳಲಿಲ್ಲ. ನಿಮಗಾಗಿ ಏನಾದರೂ ಮಾಡಿ ಎಂದೂ ಕೇಳಲಿಲ್ಲ. ಅನೇಕರು ನನ್ನ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ನನ್ನ ಸಂಶೋಧನೆಗೆ ಕೊಡುಗೆ ನೀಡಿದ್ದಾರೆ. ನನ್ನ ಪ್ರತಿಯೊಂದು ಕಾರ್ಯಕ್ರಮವೂ ನಿಮ್ಮ ಸಹಕಾರದ ಅಭಿವ್ಯಕ್ತಿಯಾಗಿದೆ. ನೀವು ನನಗೆ ತಿಳಿಸಿದ್ದೀರಿ, ನನ್ನ ತಪ್ಪುಗಳನ್ನು ಖಂಡಿಸಿದ್ದೀರಿ ಮತ್ತು ನನ್ನ ಕಾರ್ಯಕ್ರಮಗಳ ಭಾಗವಾಗಿದ್ದೀರಿ.

ವೃತ್ತಿಪರರು, ವಿದ್ಯಾರ್ಥಿಗಳು, ಪ್ರವಾಸಿಗರು, ಭಾರತೀಯರು ಎಲ್ಲರೂ ಪ್ರೇಕ್ಷಕರೇ. ಆದರೆ ನನ್ನ ಸಹ ಪ್ರಯಾಣಿಕರು ಸ್ವತಃ ಪತ್ರಕರ್ತರಾದರು. ಹೀಗಾಗಿ ಅವರು ಜರ್ನಲಿಸಂ ಎಂಬ ಪುಟ್ಟ ದ್ವೀಪವನ್ನು ರಕ್ಷಿಸಿದರು. ಆ ಅರ್ಥದಲ್ಲಿ ನಾನು ಟಿವಿ ವೀಕ್ಷಕರ ಸಮುದಾಯ ತಯಾರಾಗಿದ್ದನ್ನೂ ಕಂಡಿದ್ದೇನೆ. ಮತ್ತು ಅದು ಸಂಪೂರ್ಣವಾಗಿ ವಿಭಜನೆಯಾಗಿದ್ದನ್ನೂ ನಾನು ನೋಡಿದ್ದೇನೆ. ಈಗ, ಆ ಸಂಕೀರ್ಣವು ಒಂದು ವ್ಯವಸ್ಥೆಯಾಗಿ ಎದ್ದು ನಿಲ್ಲುವುದನ್ನು ನಾನು ನೋಡುತ್ತಿದ್ದೇನೆ.

ನನ್ನ ಕೃತಿಯನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿದ್ದೀರಿ. ನನಗೆ ಅಗತ್ಯವಿರುವ ಸಂಪನ್ಮೂಲಗಳು ಯಾವಾಗಲೂ ಲಭ್ಯವಿರುವುದಿಲ್ಲ, ಆದರೆ ನೀವು ಅವುಗಳನ್ನು ನನಗೆ ಲಭ್ಯವಾಗುವಂತೆ ಮಾಡಿದ್ದೀರಿ. ವಾಸ್ತವವಾಗಿ ನಾನು ಹೋಸ್ಟ್ ಮಾಡಿದ ಶೋ ಪ್ರೈಮ್ ಟೈಮ್ ನಿಮ್ಮ ಪ್ರೈಮ್ ಟೈಮ್ ಆಗಿತ್ತು. ಆ ಕಾರ್ಯಕ್ರಮದಲ್ಲಿ ಲೋಪವಾದಾಗಲೆಲ್ಲ ತಕ್ಷಣ ನಿಮ್ಮ ಅಸಂತೃಪ್ತಿಯನ್ನು ತೋರಿಸುತ್ತಿದ್ದಿರಿ. ವೀಕ್ಷಕರೇ ಯಾವಾಗಲೂ ನನ್ನ ಸಂಪಾದಕರು. ಮನುಷ್ಯರೆಂದರೆ ತನ್ನ ಸುತ್ತಲಿನ ಜನರ ಮೊತ್ತ ಎಂದು ನಾನು ಯಾವಾಗಲೂ ಹೇಳುತ್ತೇನೆ. ವೀಕ್ಷಕರಾಗಿ ನೀವು ಇದ್ದುದರಿಂದಲೇ ರವೀಶ್ ಕುಮಾರ್ ಇಂದು ಇಲ್ಲಿ ನಿಂತಿದ್ದಾರೆ.

ನಿಮ್ಮ ಬೆಂಬಲದಿಂದಾಗಿಯೇ ಅನೇಕ ಪತ್ರಕರ್ತರು ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಇರಲು ಸಾಧ್ಯವಾಗಿದೆ. ನೀವು ವೆಬ್‌ಸೈಟ್‌ಗಳಿಗೆ ಚಂದಾದಾರರಾಗಿದ್ದರೆ, ನೀವು ಅವುಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಿದ್ದೀರಿ ಎಂದರ್ಥ.

ಜರ್ನಲಿಸ್ಟ್ ಗಳಿಗೆ ವೀಕ್ಷಕರು ಹೇಗೆ ಸಹಕರಿಸುತ್ತಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಗಳು ದುರ್ಬಲಗೊಂಡಾಗ ಮತ್ತು ನ್ಯಾಯಾಲಯಗಳೂ ಕೂಡಾ ದುರ್ಬಲಗೊಂಡಂತೆ ತೋರುತ್ತಿರುವಾಗ ಗಟ್ಟಿಯಾಗಿ ನಿಂತವರು ನೀವು. ಇಂದಿನ ದಿನಗಳಲ್ಲಿ ಪತ್ರಿಕೋದ್ಯಮದ ಅತಿ ದೊಡ್ಡ ವ್ಯವಸ್ಥೆ ನೀವೇ. ಜರ್ನಲಿಸಂ ಇಂದು ವಿವೇಚನಾಶೀಲ ವೀಕ್ಷಕರಲ್ಲೇ ಜೀವಿಸುತ್ತಿದೆ. ಭವ್ಯವಾದ ಕಟ್ಟಡಗಳು ಮತ್ತು ಸಂಸ್ಥೆಗಳಲ್ಲಿ ಅಲ್ಲ. ಈ ದಿನಗಳಲ್ಲಿ ನೀವು ಮಾಡುತ್ತಿರುವ ದೊಡ್ಡ ಸಹಾಯವೆಂದರೆ ಕಠಿಣ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರ ಪಕ್ಕದಲ್ಲಿ ನಿಲ್ಲುವುದು.

ಜನರ ಕತ್ತು ಹಿಸುಕುವ ಶಕ್ತಿಗಳು ಇರಬಹುದು. ಜನರ ಧ್ವನಿಯಲ್ಲಿ ಧಾರ್ಮಿಕ ದ್ವೇಷ ತುಂಬಿ ಪ್ರಜಾಪ್ರಭುತ್ವವನ್ನು ಕೊಂದು ಹಾಕುವ ಶಕ್ತಿಗಳೂ ಇರಬಹುದು. ಆದರೆ ನಿಮ್ಮಲ್ಲಿ ಕೆಲವರು ನನಗೆ ಭರವಸೆ ನೀಡುತ್ತೀರಿ. ಏಕೆಂದರೆ, ಪ್ರಜಾಪ್ರಭುತ್ವ ಸತ್ತುಹೋದರೂ, ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಬಯಕೆ ಉಳಿದಿದೆ. ಇದೆಲ್ಲಾ ನಿಮ್ಮಂತಹ ಜವಾಬ್ದಾರಿಯುತ ವೀಕ್ಷಕರಿಂದಲೇ ಸಾಧ್ಯವಾಗಿದೆ.

ಈ ಕಷ್ಟದ ಸಮಯದಲ್ಲಿ, ನನ್ನ ಕೆನ್ನೆಯನ್ನು ಪ್ರೀತಿಯಿಂದ ಹಿಂಡಿದ ವೃದ್ಧ ಮಹಿಳೆಯನ್ನು ನಾನು ಕೃತಜ್ಞತೆಯಿಂದ ಭಾವಿಸುತ್ತೇನೆ. ನನಗೆ ಗಿಡದ ಕುಂಡಗಳನ್ನು ಉಡುಗೊರೆಯಾಗಿ ನೀಡಿದವರಿಗೆ ಮತ್ತು ನನ್ನನ್ನು ಆರೋಗ್ಯವಾಗಿಡಲು ಬಲವರ್ಧನೆಯ ಆಹಾರವನ್ನು ನೀಡಿದವರಿಗೆ ನಾನು ಕೃತಜ್ಞತೆಯನ್ನು ಕೋರುತ್ತೇನೆ. ಸುಡುವ ಟೆಂಟಿನಲ್ಲಿ ಕೆಲಸ ಮಾಡುವಾಗ ನನಗೆ ನೆರಳು ಕೊಡಲು ಕೊಡೆ ಹಿಡಿದವರು ಇದ್ದಾರೆ. ದುಡ್ಡಿನ ಬದಲು ದುಬಾರಿ ಕನಸುಗಳನ್ನು ನನ್ನ ಜೇಬಿಗೆ ಹಾಕಿದವರೂ ಇದ್ದಾರೆ.

ಆದ್ದರಿಂದಲೇ ನಾನು ಇಂದು ನಿಮ್ಮೆಲ್ಲರನ್ನೂ ನೆನಪಿಸಿಕೊಳ್ಳಬೇಕೆನಿಸಿದೆ. ನೀವೆಲ್ಲರೂ ಇಲ್ಲದೆ ಹೋಗಿದ್ದರೆ ನಾನು ನಾನಾಗಿರುತ್ತಿರಲಿಲ್ಲ. ನೀವೆಲ್ಲರೂ ನನಗೆ ಹೆಮ್ಮೆ ತಂದಿರಿ. ನಾನು ನನಗೆ ಕೆಲಸ ಕೊಟ್ಟ ಸಂಸ್ಥೆಯ ಪ್ರತಿನಿಧಿಯಲ್ಲ, ನಿಮ್ಮ ಪ್ರತಿನಿಧಿ ಎಂದು ಹಲವು ಬಾರಿ ಅನಿಸುತ್ತಿತ್ತು. ನನಗೆ ಕೆಲಸ ಮಾಡಲು ಅಪರಿಮಿತ ಸ್ವಾತಂತ್ರ್ಯವಿದೆ. ನನ್ನ ಜೀವನವು ಅದರ ಮೇಲೆ ಅವಲಂಬಿತವಾಗಿದೆ ಎಂಬಂತೆ ನಾನು ನನ್ನ ಸ್ವಾತಂತ್ರ್ಯವನ್ನು ಕಾಪಾಡಿದೆ. ಬುದ್ಧಿವಂತ ವೀಕ್ಷಕರೇ, ಆ ಸಮಯದಲ್ಲಿ ನೀವು ನನ್ನನ್ನು ಪರೀಕ್ಷಿಸುತ್ತಿರುವಿರಿ ಎಂದು ನನಗೆ ತಿಳಿದಿದೆ.

ಯಾವುದೇ ತಪ್ಪು ಆಗದಂತೆ, ಅಹಂಕಾರಿಯಾಗದಂತೆ ಎಚ್ಚರ ವಹಿಸಿದ್ದೇನೆ. ಅಹಂಕಾರ ಬಂದರೆ ನಾನು ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇನೆ ಎಂದು ನನಗೆ ತಿಳಿದಿದೆ. ನನ್ನ ಕಣ್ಣೆದುರೇ ಜಗತ್ತು ಬದಲಾದಾಗ, ನಾನು ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ನಂತೆ ಸಾಲಿನಲ್ಲಿ ನಿಂತಿದ್ದೇನೆ. ಆದರೆ ಇದ್ದಕ್ಕಿದ್ದಂತೆ ಯಾರೋ ಮೂಲ ಪಂದ್ಯವನ್ನು ಕೊನೆಗೊಳಿಸಿದರು ಮತ್ತು ಆಟದ ನಿಯಮಗಳನ್ನು ಬದಲಾಯಿಸಿದರು.

ಪ್ರತಿಯೊಂದು ದೇಶದಲ್ಲೂ ಪ್ರೇಕ್ಷಕರ ಇಚ್ಛೆಯ ಮೇಲೆ ಸವಾರಿ ಮಾಡುವವರು ಇದ್ದಾರೆ. ಭಾರತದಲ್ಲಿಯೂ ಸಹ. ಅವರು ನಿಮಗೆ ಸತ್ಯವನ್ನು ಹೇಳುತ್ತಿರುವಂತೆ ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ ಎಂದರೆ, ಅವರು ಡಾಲರ್ಗಳನ್ನು ಜೇಬಿಗಿಳಿಸುತ್ತಿದ್ದಾರೆ ಮತ್ತು ನಿಮ್ಮ ಮೇಲೆ ಚಿಲ್ಲರೆಯನ್ನು ಎಸೆಯುತ್ತಿದ್ದಾರೆ ಎಂದು ಅರ್ಥ. ಪತ್ರಕರ್ತರು ಅಥವಾ ಸುದ್ದಿ ಸಂಸ್ಥೆಗಳು ತಮ್ಮ ತಪ್ಪುಗಳನ್ನು ಬಹಿರಂಗಪಡಿಸಲು ಪ್ರಯತ್ನಿಸಿದರೆ, ಅವರ ವಿರುದ್ಧ ಲೆಕ್ಕವಿಲ್ಲದಷ್ಟು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಮತ್ತೆ ಅವರೇ ಅರ್ಥಪೂರ್ಣ ಪತ್ರಿಕೋದ್ಯಮದಲ್ಲಿ ನಮಗೆ ಆಸಕ್ತಿ ಇದೆ ಎಂದು ಗಂಭೀರವಾಗಿ ಹೇಳುತ್ತಾರೆ.

ಹಿಂದಿ ಪತ್ರಿಕೋದ್ಯಮ ಅಗತ್ಯ..

ಹಿಂದಿಯಲ್ಲಿ ಕೆಲಸ ಮಾಡುವ ಎಷ್ಟೋ ಅದ್ಭುತ ಜರ್ನಲಿಸ್ಟ್ ಗಳು ತಮ್ಮ ಅಭಿಪ್ರಾಯಗಳನ್ನು ಪ್ರಪಂಚದೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲ? ಅವರ ಜ್ಞಾನ ಎಷ್ಟು ಆಳವಾಗಿದೆ ಎಂದು ನನಗೆ ಆಶ್ಚರ್ಯವಾಯಿತು. ಆದರೆ ಅವರಿಗೆ ಸಿಗಬೇಕಾದ ಸ್ಥಾನ ಸಿಗಲೇ ಇಲ್ಲ. ಭಾರತದಲ್ಲಿ ಅತ್ಯಂತ ಗೌರವಾನ್ವಿತ ಪತ್ರಕರ್ತರು ಇಂಗ್ಲಿಷ್ ಮಾಧ್ಯಮದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹಾಗಾಗಿಯೇ ಹಿಂದಿ ಪತ್ರಿಕೋದ್ಯಮಕ್ಕೆ ಗೌರವ ತರುವ ಪ್ರಯತ್ನ ಮಾಡಿದ್ದೇನೆ. ಈ ಭಾಷೆಯಲ್ಲಿ ಪತ್ರಿಕೋದ್ಯಮವೂ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ದೇಶದೆಲ್ಲೆಡೆ ಜನರು ನನ್ನ ಹಿಂದಿಯನ್ನು ಪ್ರೀತಿಸುವಂತೆ ಮಾಡಲು ನಾನು ಪ್ರಯತ್ನಿಸಿದೆ. ನಿಜವಾಗಿ ನನ್ನ ಮಾತೃಭಾಷೆ ಹಿಂದಿಯಲ್ಲ ಭೋಜ್ ಪುರಿ. ನಾನು ನನ್ನ ಕುಗ್ರಾಮವಾದ ಭೋಜ್‌ಪುರಿಯಿಂದ ಈ ಹಿಂದಿ ಮಹಾನಗರಕ್ಕೆ ನಡೆದುಕೊಂಡೇ ಬಂದೆ.

ಇದನ್ನೂ ಓದಿ : ಭಾರತದ ಜರ್ನಲಿಸಂನಲ್ಲಿ ಕರಾಳ ಯುಗ : ರವೀಶ್ ಕುಮಾರ್

ನನ್ನ ಹಿಂದಿಯನ್ನು ಶ್ರೀಮಂತಗೊಳಿಸಿದ ದೇಶದ ಎಲ್ಲಾ ಹಿಂದಿಯೇತರ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಕೃತಿಗಳನ್ನು ಅವರ ಭಾಷೆಗೆ ಅನುವಾದಿಸಿದರು. ಅವರ ಕೃತಿಗಳನ್ನು ನನಗಾಗಿ ಹಿಂದಿಗೆ ಅನುವಾದಿಸಿದ್ದಾರೆ! ನಾನೊಂದು ಬಿದರೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ನನಗೆ ಆಗಾಗ್ಗೆ ಅನಿಸುತ್ತದೆ ಮತ್ತು ಈ ಪ್ರಯಾಣದಲ್ಲಿ ಅನೇಕ ಜನರು ನನ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಡೆದಿದ್ದಾರೆ. ಇದು ಹಿಂದಿ ಮತ್ತು ಇಂಗ್ಲಿಷ್ ಜರ್ನಲಿಸ್ಟುಗಳ ನಡುವಿನ ಕುಸ್ತಿ ಪಂದ್ಯವಾಗಿ ಮಾರ್ಪಡಬೇಕೆಂದು ನಾನು ಭಾವಿಸುತ್ತಿಲ್ಲ. ಆದ್ದರಿಂದ, ನನ್ನ ಜೀವನದಲ್ಲಿ ಇಂಗ್ಲಿಷ್ ಭಾಷಾ ಜರ್ನಲಿಸ್ಟ್ ಗಳು ನೀಡಿದ ಸಹಕಾರವನ್ನು ಕೂಡ ನಾನು ನೆನಪಿಸಿಕೊಳ್ಳುತ್ತೇನೆ.

ಜರ್ನಲಿಸ್ಟ್ ಗಳು ಏನು ಮಾಡಬೇಕಿದೆ…

ವೀಕ್ಷಕರೊಂದಿಗೆ ಸಮಯವನ್ನು ಹಂಚಿಕೊಂಡಾಗಲೆಲ್ಲಾ, ಜರ್ನಲಿಸ್ಟ್ ಗಳ ಬಗ್ಗೆ ನಿಮ್ಮ ವಿಶ್ವಾಸವನ್ನು, ಸಮಸ್ಯೆಗಳ ಬಗ್ಗೆ ನಿಮ್ಮ ಆಳವಾದ ಗ್ರಹಿಕೆಯನ್ನು ಕಂಡು ನಾನು ಪ್ರಭಾವಿತನಾಗಿದ್ದೇನೆ. ನಿಮ್ಮ ಬಳಿ ಹೇಳಲು ಬಹಳಷ್ಟು ಇದೆ. ವಾಸ್ತವವಾಗಿ ಅದೆಲ್ಲವನ್ನೂ ಆಲಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ನಿಮ್ಮ ಧ್ವನಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಾಧ್ಯಮವಾಗುವುದು ಪತ್ರಕರ್ತರು ಮಾಡಬೇಕಾದ ಕೆಲಸ. ನಾನು ಯಾವಾಗಲೂ ಈ ದೇಶವನ್ನು ನಿಮ್ಮ ಕಣ್ಣುಗಳಿಂದಲೇ ನೋಡಲು ಪ್ರಯತ್ನಿಸಿದೆ. ನಿಮ್ಮ ಕ್ರಿಯಾಶೀಲತೆಯೇ ಭಾರತದ ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುತ್ತದೆ. ಶಾಹೀನ್ ಬಾಗ್, ರೈತರ ಆಂದೋಲನವು ನಿಮ್ಮ ಮೇಲಿನ ನನ್ನ ನಂಬಿಕೆಯನ್ನು ಬಲಪಡಿಸಿದೆ. ನೀವು ಜವಾಬ್ದಾರಿಯುತ ನಾಗರಿಕರಾಗಿ ಬದಲಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ನೀವು ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಬಲ್ಲಿರಿ.

ಇಂದು ಕೆಲವರು ಸಮಾಜದ ಎಲ್ಲಾ ಕ್ಷೇತ್ರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಎಂದು ಭಾವಿಸುತ್ತಾರೆ. ನಾಗರಿಕರನ್ನು ಹುಲ್ಲುಕಡ್ಡಿಗಳಂತೆ ಕಿತ್ತು ಹಾಕಬಹುದೆಂದು ಲೆಕ್ಕಾಚಾರವಿಲ್ಲದೇ ನಡೆಸಿಕೊಳ್ಳತ್ತಿದ್ದಾರೆ. ಪ್ರಚಾರ ಮಾಧ್ಯಮ ಎಂಬವುಗಳು ಸತ್ತು ಹೋಗಿದೆ. ರಾಜಕೀಯ ವಿರೋಧ ಪಕ್ಷಗಳು ಹೋರಾಟ ನಡೆಸುತ್ತಿವೆ. ಅದೆಲ್ಲ ನಿಜ. ಆದರೆ ಇಂತಹ ಸ್ಥಿತಿ ಶಾಶ್ವತವಲ್ಲ. ಒಂದು ದಿನ ಜನರು ತಮ್ಮ ದ್ವೇಷವನ್ನು ಜಯಿಸುತ್ತಾರೆ. ಅವರು ಹೊಸ ಸಮಾಜ ನಿರ್ಮಾಣದ ಬಗ್ಗೆ ಯೋಚಿಸುತ್ತಾರೆ. ನಂತರ ಅವರು ಜರ್ನಲಿಸಂ ಬಗ್ಗೆ ಯೋಚಿಸುತ್ತಾರೆ. ನಾನು ಓದುವುದು, ಮಾತನಾಡುವುದು ಮತ್ತು ಬರೆಯುವುದನ್ನು ಎನ್‌ಡಿಟಿವಿಯಿಂದ ಕಲಿತಿದ್ದೇನೆ. ಚೆನ್ನಾಗಿ ಡ್ರೆಸ್ ಮಾಡುವುದು ಹೇಗೆ, ಟೈ ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಎನ್ ಡಿ ಟಿವಿಯಿಂದಲೇ ಕಲಿತೆ. ನನಗೆ ಬಿಡುವಿಲ್ಲದ ಕಾರಣ ನನಗೆ ನೃತ್ಯ ಕಲಿಯಲು ಮಾತ್ರ ಸಾಧ್ಯವಾಗಲಿಲ್ಲ.

ಮಹಿಳಾ ಪತ್ರಕರ್ತರಿಂದ ಕಲಿತ ಪಾಠ..

ನಾನು ವಿಶೇಷವಾಗಿ ನನ್ನ ಮಹಿಳಾ ಸಹೋದ್ಯೋಗಿಗಳ ಬಗ್ಗೆ ಯೋಚಿಸಲು ಬಯಸುತ್ತೇನೆ. ಅವರು ನನಗೆ ಪ್ರಾಮಾಣಿಕ, ಕಠಿಣ ಪರಿಶ್ರಮ ಮತ್ತು ನೈತಿಕತೆಯನ್ನು ಕಲಿಸಿದರು. ಅವರು ಸಾಮಾಜಿಕ ಸಮಸ್ಯೆಗಳ ಬಗ್ಗೆ ನನ್ನ ತಿಳುವಳಿಕೆಯನ್ನು ವಿಸ್ತರಿಸಿದರು. ಅನೇಕ ಮಹಿಳೆಯರು ಮತ್ತು ಬಾಲಕಿಯರ ಅನುಭವಗಳನ್ನು ನನ್ನ ಪ್ರಯಾಣದಲ್ಲಿ ಬೆರೆತುಹೋಗಿದೆ. ನನ್ನ ಸಂಗಾತಿ, ನನ್ನ ಮಗಳು, ನನ್ನ ತಾಯಿ ನನ್ನನ್ನು ಬೆಂಬಲಿಸಿದರು. ಪತ್ರಿಕೋದ್ಯಮದಲ್ಲಿ ಪುರುಷರ ರಾಜ್ಯ ಮತ್ತು ಪುರುಷಾಧಿಪತ್ಯವೇ ನಡೆಯುತ್ತದೆ. ಅವರ ಆಕ್ರಮಣಶೀಲತೆ ಸಮಸ್ಯೆಯಾಗಿರುತ್ತಿತ್ತು. ಅಂತಹ ಆಕ್ರಮಣಶೀಲತೆಯೂ ಸೃಜನಶೀಲತೆ ಮತ್ತು ಚಿಂತನೆಯನ್ನು ಕೊಲ್ಲುತ್ತದೆ. ಅಂತಹ ಆಕ್ರಮಣಶೀಲತೆಗೆ ಗುರಿಯಾಗದಂತೆ ನನ್ನ ಮಹಿಳಾ ಸಹೋದ್ಯೋಗಿಗಳೇ ನನ್ನನ್ನು ರಕ್ಷಿಸಿದರು.

ನೀವು ಈ ಪತ್ರಿಕೋದ್ಯಮ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದರೆ, ನಿಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಯಾವಾಗಲೂ ದಯೆ ತೋರಬೇಕು ಎಂಬುದು ನನ್ನ ಸಲಹೆ. ಅವರ ಸಾಮರ್ಥ್ಯಗಳನ್ನು ಸ್ವೀಕರಿಸಿ ಮತ್ತು ಗೌರವಿಸಿ. ಅವರನ್ನು ಪ್ರಶಂಸಿಸಿ. ನಾನು ಪ್ರೈಮ್ ಟೈಮ್ ಆ್ಯಂಕರ್ ಆಗಿದ್ದ ದಿನಗಳಲ್ಲಿ, ನನ್ನ ಇಡೀ ಜೀವನ ಆ ಕಾರ್ಯಕ್ರಮದೊಂದಿಗೆ ನಂಟು ಹೊಂದಿತ್ತು. ನಾನು ಟಿವಿ ಸುದ್ದಿಗಳನ್ನು ಪ್ರೀತಿಸುತ್ತಿದ್ದೆ. ಬಹುಶಃ ಅದಕ್ಕಾಗಿಯೇ ನನ್ನ ಹೃದಯ ಇಂದು ಮಿಡಿಯುತ್ತಿದೆ. NDTVಯ ಕೆಂಪು ಮೈಕ್ರೊಫೋನ್ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತದೆ.

ನಾನು ನಿಮ್ಮ ದಿನಚರಿಯ ಭಾಗವಾಗಿದ್ದೇನೆ ಎಂದು ನೀವು ನನ್ನ ಬಗ್ಗೆ ಯೋಚಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಜಕ್ಕೂ, ನಾನು ಶಾಂತವಾಗಿ ಹೋಗಲು ಬಯಸಿದ್ದೆ. ಅದಕ್ಕಾಗಿಯೇ ಕಳೆದ ಕೆಲವು ದಿನಗಳಿಂದ ನಾನು ಪ್ರೈಮ್ ಟೈಮ್ ನಿಂದ ದೂರವಿದ್ದೆ. ನಿಮ್ಮ ದಿನಚರಿಯಿಂದ ನನ್ನನ್ನು ಅಳಿಸಿ ಹಾಕಬೇಕೆಂದು ಬಯಸುತ್ತೇನೆ. ನೀವು ನನ್ನನ್ನು ಮರೆಯಬೇಕೆಂದು ನಾನು ಬಯಸುತ್ತೇನೆ. ಆದರೆ ನೀವು ನನಗೆ ಹಾಗೆ ಮಾಡಲು ಬಿಡಲಿಲ್ಲ. ನಾನು ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳಿದ್ದೀರಿ, ನನಗೆ ಏನಾದರೂ ಸಂಭವಿಸಿದೆಯೇ, ನನ್ನ ಆರೋಗ್ಯ ಹೇಗಿದೆ ಎಂದು ಕೇಳಿದೀರಿ.

ಭಾರತದ ಮಾಧ್ಯಮ ಕ್ಷೇತ್ರ ಬದಲಾಗಿದೆ. ಪತ್ರಕರ್ತರಾಗಬೇಕೆಂಬ ಹಂಬಲದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದುತ್ತಿರುವ ಭಾರತೀಯ ಯುವಕರನ್ನು ನೆನೆದರೆ ನನ್ನ ಹೃದಯ ಚಡಪಡಿಸುತ್ತದೆ. ಏಕೆಂದರೆ ಅವರು ಅಂತಿಮವಾಗಿ ಭಾರತೀಯ ರಾಜ್ಯದ ಸೇವಕರಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರಾಮಾಣಿಕ ಪತ್ರಕರ್ತರಿಗೆ ಕೆಲಸ ಮಾಡಲು ಒಂದೇ ಒಂದು ಸಂಸ್ಥೆಯೂ ಉಳಿದಿಲ್ಲ.

ಇಂದು ಎಲ್ಲಾ ಪತ್ರಕರ್ತರು ಉಸಿರುಗಟ್ಟುವಂತಹ ಸ್ಥಿತಿಯಲ್ಲಿ ಇದ್ದಾರೆ. ಅಥವಾ ವೃತ್ತಿಯನ್ನು ತೊರೆದಿದ್ದಾರೆ. ಪತ್ರಿಕೋದ್ಯಮವು ಮಾಸಿಕ ಸಂಬಳ ಪಡೆಯುವ ವೃತ್ತಿಯೇ ಹೊರತು ಬೇರೇನೂ ಅಲ್ಲ ಎಂದು ಹಲವರು ನನಗೆ ಹೇಳಿದ್ದಾರೆ. ಪತ್ರಿಕೋದ್ಯಮದಲ್ಲಿ ಸಂಬಳವನ್ನು ಹೊರತುಪಡಿಸಿ ಯಾವುದೇ ಪ್ರೋತ್ಸಾಹವಿಲ್ಲ.

ನಿಷ್ಠಾವಂತ ಜರ್ನಲಿಸ್ಟ್ ಸತ್ತ ನಾಗರಿಕ ಪ್ರಜಾತಾಂತ್ರಕ್ಕೆ ಹೊಣೆಗಾರರಾಗಬೇಕು. ಆದ್ದರಿಂದ ನಿರ್ಭಯವಾಗಿ ಮಾತನಾಡಿ. ಬರಿಗಾಲಲ್ಲಿ ನಡೆದು ಅತ್ಯಂತ ಬಲಿಷ್ಠ ಬ್ರಿಟಿಷರ ಆಡಳಿತ ಯಂತ್ರಾಂಗವನ್ನು ನೆಲಸಮ ಮಾಡಿದ ದೇಶದ ಪ್ರಜೆಗಳು ನೀವು. ನಿಮ್ಮನ್ನು ನಂಬದಿರಲು ಯಾವುದೇ ಕಾರಣವಿಲ್ಲ. ಅನೈತಿಕವಾದ ಮಾಧ್ಯಮ ಸುದ್ದಿಗಳ ಸಂಕೋಲೆಯನ್ನು ನೀವು ಮುರಿಯಬಹುದು. ಅದಕ್ಕಾಗಿ ನೀವು ಹೋರಾಡಬೇಕು. ನೀವು ಜಗಳವಾಡದಿದ್ದರೆ ಎದ್ದು ನಡೆಯಲು ಅವಕಾಶವೇ ಇರುವುದಿಲ್ಲ.

ನೀವು ಆ ಹೋರಾಟವನ್ನು ಮಾಡದಿದ್ದರೆ, ನೀವು ಸ್ವತಂತ್ರ ದೇಶದ ನಾಗರಿಕರಾಗುತ್ತೀರಿ ಆದರೆ ಮಾರಾಟವಾದ ಮಾಧ್ಯಮದ ಗುಲಾಮರಾಗಿ ಉಳಿಯುತ್ತೀರಿ. ಅಂತಹ ಪರಿಸ್ಥಿತಿ ಬರಬಹುದು. ಎಚ್ಚರಿಕೆ ಅಗತ್ಯ. ಕಾನೂನುಬಾಹಿರವಾದುದೆಲ್ಲವನ್ನೂ ಕಾನೂನುಬದ್ಧವೆಂದು ತೋರಲು ಕಾನೂನಿನ ಹೆಸರಿನಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ.

ಈ ಕ್ಷಣದಲ್ಲಿ ನನ್ನ ಭವಿಷ್ಯ ಅನಿಶ್ಚಿತವಾಗಿದೆ. ಖಚಿತವಾಗಿರುವುದೊಂದೇ ಆಶಯ.

ಅನುವಾದ : ರೇಣುಕಾ ಭಾರತಿ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!