ದ ಪಾಲಿಟಿಕ್

ಆಪರೇಶನ್ ಟಿಕೆಟ್ : ಬಲಿಪೀಠದ ಬಾಗಿಲಲ್ಲಿ ಸೋಮಣ್ಣ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕಳೆದ ಆರು ತಿಂಗಳಿಂದ ವಿ. ಸೋಮಣ್ಣ ಬಿಜೆಪಿಯ ಬಾಗಿಲಿನಿಂದ ಒಂದು ಕಾಲು ಹೊರಗೆ ಇಟ್ಟು ಪಕ್ಷದಿಂದ ಅಂತರ ಕಾಪಾಡಿಕೊಂಡೇ ಇದ್ದರು. ಏತನ್ಮಧ್ಯೆ ಕಾಂಗ್ರೆಸ್ ಸೇರುತ್ತೇನೆಂಬ ಸುದ್ದಿಯೂ ತೇಲಿ ಬಿಟ್ಟಿದರು. ಬಿಜೆಪಿ ವರಿಷ್ಠರು ಮಗನನ್ನು ಪಕ್ಷದ ತುಮಕೂರು ಜಿಲ್ಲೆಯ ಉಪಾಧ್ಯಕ್ಷನಾಗಿ ಮಾಡಿ, ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ ಮೇಲೆ ತಮ್ಮ ಪಕ್ಷಾಂತರದ ಬಾವುಟ ಕೆಳಗೆ ಇಳಿಸಿದರು. ಇವರ ಈ ಬ್ಲಾಕ್ ಮೇಲ್ ನಡೆ ಸಂತೋಷ ಹಾಗೂ ಟೀಂಗೆ ಅಸಮಾಧಾನ ತಂದದ್ದು ಸುಳ್ಳಲ್ಲ.

ಸೋಮಣ್ಣ ಜನತಾ ಪರಿವಾರದಿಂದ ಬಂದವರು. ನೇರವಾಗಿ ಆರೆಸ್ಸೆಸ್ ಅಂಗಳದಿಂದ ಬಂದವರಲ್ಲ. ಹಾಗಾಗಿ ಸಂಘಪರಿವಾರದ ಭಾಷೆಯಲ್ಲಿ ಅವರೆಂದೂ ಮಾತನಾಡಿದವರಲ್ಲ. ಆದರೆ,    ಒಂದು ರಾಜಕೀಯ ಸಿದ್ಧಾಂತವನ್ನು ನಂಬಿ, ಅದರೊಟ್ಟಿಗೆ ನಡೆಯದೇ ಪಕ್ಕಾ ಅವಕಾಶವಾದಿ ರಾಜಕಾರಣಿಯಾಗಿ ರಾಜಕೀಯ ಮಾಡಿದವರು. ತನ್ನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದವರು. ಬಿಜೆಪಿಗೆ ಬಂದಮೇಲೆ ಒಳ್ಳೆಯ ನೇಮ್ ಹಾಗೂ ಫೇಮ್ ಬೆಳೆಸಿಕೊಂಡು ಬಂದಿದ್ದರು. 

ಇತ್ತೀಚೆಗೆ ಯಡಿಯೂರಪ್ಪನವರ ಜತೆಗೆ ವೈಮನಸ್ಸು ಬೆಳೆಸಿಕೊಂಡು ಅವರ ವಿರುದ್ಧ ಪಿತೂರಿ ನಡೆಸಿದರು. ಇದು ವಿಜೇಂದ್ರ –  ಯಡಿಯೂರಪ್ಪ ಇಬ್ಬರಿಗೂ ಕೆರಳಿಸಿತು. ಜತೆಗೆ ವಿಜೇಂದ್ರ ವಿರುದ್ಧ ಮಗ ಅರುಣ್ ಸೋಮಣ್ಣ ಬಹಿರಂಗವಾಗಿಯೇ ಕ್ಯಾತೆ ತೆಗೆದಿದ್ದು ಹಾಗೂ ಮುನಿಸಿಕೊಂಡು ಪಕ್ಷಾಂತರದ ಬಾವುಟ ಕೈಯಲ್ಲಿ ಹಿಡಿದಿದ್ದರ ಫಲವಾಗಿ ಇವತ್ತು ವಿ. ಸೋಮಣ್ಣ ಬಲಿಪೀಠದ ಬಾಗಿಲಲ್ಲಿ ನಿಂತಿದ್ದಾರೆಂದೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ. 

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರ ಸಿದ್ದರಾಮಯ್ಯನವರು ರಾಜ್ಯಾದಾದ್ಯಂತ ಸುತ್ತಾಡದಂತೆ ಅವರ ಕ್ಷೇತ್ರದಲ್ಲೇ ಅವರನ್ನು ಕಟ್ಟಿಹಾಕಬೇಕೆನ್ನುವುದು ಬಿಜೆಪಿ ಹೈಕಮಾಂಡ್ ಆಲೋಚಿಸಿ, ವಿಜೇಂದ್ರನನ್ನ ಸಿದ್ರಾಮಯ್ಯನ ವಿರುದ್ಧ ನಿಲ್ಲಿಸುವ ಯೋಜನೆಯನ್ನು ರೂಪಿಸಿತ್ತು. ವಿಜೇಂದ್ರನೂ ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ಆದರೆ, ಹೈಕಮಾಂಡಿನ ಕುಟಿಲತೆ ಅರಿತು ತಕ್ಷಣ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ ಯಾವುದೇ ಕಾರಣಕ್ಕೂ ವಿಜೇಂದ್ರ ವರುಣಾದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅವರು ಶಿಕಾರಿಪುರದಲ್ಲೇ ನಿಲ್ಲುತ್ತಾರೆ ಎಂದು ಮಾಧ್ಯಮದವರನ್ನು ಕರೆಯಿಸಿ ಖಡಕ್ ಆಗಿಯೇ ಹೇಳುವ ಮೂಲಕ ಹೈಕಮಾಂಡಿಗೆ ಸೆಡ್ಡು ಹೊಡೆದರು. 

ಜತೆಗೆ, ಹೈಕಮಾಂಡ್ ಮುಂದೆ  ಸುತ್ತೂರು ಮಠದ ಜತೆ ಸೋಮಣ್ಣನಿಗೆ ಆಪ್ತ ಸಂಬಂಧವಿದೆ ಅವರೇ ‘ವರುಣಾ’ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ವ್ಯಕ್ತಿ ಅವರನ್ನೇ ನಿಲ್ಲಿಸೋಣ ಎಂಬ ಪ್ರಸ್ತಾಪ ಇಟ್ಟರು. ಈ ತಂತ್ರ ಸ್ವತಃ ಸೋಮಣ್ಣ ಸಹ ನಿರೀಕ್ಷೆ ಮಾಡಿರಲಿಲ್ಲ. ಪ್ರಸಕ್ತ ಹೈಕಮಾಂಡ್ ಸಹ ಯಡಿಯೂರಪ್ಪನ ಮಾತು ತೆಗೆದುಹಾಕುವ ಸ್ಥಿತಿಯಲ್ಲಿ ಇಲ್ಲ.   ಮನಸ್ಸಿಲ್ಲದಿದ್ದರೂ ಅವರು ವರುಣಾದಲ್ಲಿ ಸ್ಪರ್ಧೆ ಮಾಡಲೇಬೇಕಾದ ಪರಿಸ್ಥಿತಿ ಸೃಷ್ಟಿಸುವಲ್ಲಿ ಯಡಿಯೂರಪ್ಪ ಯಶಸ್ಸು ಆಗುವ ಮೂಲಕ ಸೋಮಣ್ಣನಿಗೆ ಬಲಿಪೀಠದ ಬಾಗಿಲಲ್ಲಿ ತಂದು ನಿಲ್ಲಿಸಿದ್ದಾರೆ‌

ಗೋವಿಂದರಾಜ್ ನಗರ  ವಿ. ಸೋಮಣ್ಣ ಅನಾಯಾಸವಾಗಿ ಗೆಲ್ಲಬಹುದಾದ ಕ್ಷೇತ್ರ. ಈ  ಕ್ಷೇತ್ರದಿಂದಲೇ ಈ ಬಾರಿಯೂ ನಿಲ್ಲಲು ಸಿದ್ಧತೆಯಲ್ಲಿ ತೊಡಗಿದರು. ಆದರೆ, ಹೈಕಮಾಂಡ್ ಇವರ ಸಿದ್ಧತೆಗೆ ಎಳ್ಳುನೀರು ಬಿಟ್ಟಿದೆ.  ಆ ಕಡೆ ಗೋವಿಂದರಾಜ್ ನಗರವೂ ಉಳಿಯಲಿಲ್ಲ, ಈ ಕಡೆ ಟಿಕೆಟ್ ಸಿಕ್ಕ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಷ್ಟೊಂದು ಸುಲಭವೂ ಅಲ್ಲ. ಒಂದಾದರೂ ಕ್ಷೇತ್ರದಲ್ಲಿ ಗೆಲುವು ದಕ್ಕಲಿಸಿಕೊಳ್ಳಲು ಅಲ್ಲಿಯೇ ಸಂಪೂರ್ಣ ಸಮಯ ನೀಡಬೇಕು.ಈಗವರ ಹತ್ತಿರ ಸಮಯವೂ ಇಲ್ಲ. ಬರೀ ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆದಾಡುವ ಸ್ಥಿತಿ ಬಂದಿದೆ. 

ಅವರಿನ್ನೂ  ವರುಣಾದಲ್ಲಿ ಸಿದ್ರಾಮಯ್ಯನವರ ವಿರುದ್ಧ ನಿಂತು, ಅವರ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದು  ಅವರ ವಿರುದ್ಧ ಗೆಲ್ಲಲು ಮಾನಸಿಕವಾಗಿ ಸಿದ್ದವಾಗಿಯೇ ಇಲ್ಲ. ಅವರೀಗ ಒಲ್ಲದ ಮನಸ್ಸಿನಿಂದಲೆಯೇ ವರುಣಾ ಕ್ಷೇತ್ರದ ಅಖಾಡಕ್ಕೆ ಇಳಿಯಬೇಕು. ಇಲ್ಲಿ ಇವರ ಸ್ಪರ್ಧೆ ಜೆಡಿಎಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಲಾಭ ತಂದುಕೊಡಬಹುದು ಅಷ್ಟೇ‌. ‌  ಇನ್ನೂ ಚಾಮರಾಜನಗರದಲ್ಲಿ ಸ್ಥಳೀಯ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪನ ಆಪ್ತ ರುದ್ರೇಶ್ ಬಹಿರಂಗವಾಗಿವೇ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸ್ಥಳೀಯ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟರು ಆಡಳಿತ ವಿರೋಧಿ ಅಲೆಯನ್ನೂ ಎದುರಿಸುತ್ತಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಉಳಿಸಿಕೊಂಡು ಬಂದಿದ್ದಾರೆ. 

ಸೋಮಣ್ಣ,  ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಅವರಿಗೆ ಜಯಂಟ್ ಕಿಲ್ಲರ್ ಪಟ್ಟ, ಸೋತರೆ ರಾಜಕೀಯ ವನವಾಸ ತಪ್ಪಿದಲ್ಲ! ಇನ್ನೂ ಅವರ ಮಗನಿಗೆ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ, ಬಿಡುಗಡೆಯಾದ  ಎರಡು ಪಟ್ಟಿಯಲ್ಲಿಯೂ ಮಗನ ಹೆಸರಿಲ್ಲದ್ದು ಸೋಮಣ್ಣನವರಿಗೆ ಮತ್ತಷ್ಟು ಆತಂಕಕ್ಕೆ ದೂಡಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!