ದ ಪಾಲಿಟಿಕ್

ಆಪರೇಶನ್ ಟಿಕೆಟ್ : ಜೋಷಿ ದಾರಿಗೆ ಶೆಟ್ಟರ್ ಬಲಿ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

‘ನಿಮಗೆ ಈ ಸಲ ಟಿಕೆಟ್ ನೀಡುತ್ತಿಲ್ಲ, ಹೊಸಬರಿಗೆ ಅವಕಾಶ ನೀಡಿ’ ಎಂದು ಪಕ್ಷದ ಹೈಕಮಾಂಡ್ ತನಗೆ ತಾಕೀತು ಮಾಡುತ್ತದೆ ಎಂದು ಪ್ರಾಯಶಃ ಜಗದೀಶ್ ಶೆಟ್ಟರ್ ಕನಸಿನಲ್ಲಿಯೂ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶೆಟ್ಟರ್ ತಬ್ಬಿಬ್ಬಾಗಿ ಪಕ್ಷದ ವಿರುದ್ಧ ಬಂಡಾಯದ ಬಾವುಟ ಕೈಯಲ್ಲಿ ಹಿಡಿದು, ‘ಟಿಕೆಟ್ ನೀಡಿದರೂ ನೀಡದಿದ್ದರೂ ಚುನಾವಣೆಯಲ್ಲಿ ನಿಲ್ಲುವುದು ಶತಸಿದ್ಧ’ ಎಂದು ಹೂಂಕರಿಸಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಇವರಿಗೆ ಕ್ಯಾರೇ ಎನ್ನುತ್ತಿಲ್ಲ.  

2021ರಲ್ಲಿ ಯಡಿಯೂರಪ್ಪನವರಿಗೂ ಕಾರಣವೂ ಹೇಳದೆ ಅವಮಾನಕರವಾಗಿ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಸಿದರು. ಈಗ ಜಗದೀಶ್ ಶೆಟ್ಟರ್ ವಿಷಯದಲ್ಲೂ ಅದೇ ಆಗುತ್ತಿದೆ. ಇವರಿಗೂ ಟಿಕೆಟ್ ಯಾಕೆ ನೀಡುತ್ತಿಲ್ಲವೆಂದು ಸಕಾರಣವೂ ನೀಡುತ್ತಿಲ್ಲ. ಮತೀಯ ಧ್ರುವೀಕರಣ ಹಾಗೂ ಜನರು ಎದುರುಗಡೆ ಸಿಕ್ಕಾಗ ಅವರ ಹೆಗಲಿನ ಮೇಲೆ ಕೈಹಾಕಿ ಆಪ್ತವಾಗಿ ಮಾತನಾಡುವ ನಡೆಯಿಂದಾಗಿ ಅನಾಯಾಸವಾಗಿ ಹುಬ್ಬಳ್ಳಿ ಗ್ರಾಮಾಂತರ ಮತಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಅಷ್ಟೇನೂ ಹೆಸರನ್ನು ಕೆಡಿಸಿಕೊಂಡವರಲ್ಲ. ಪಕ್ಷ ಈಗ ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲೂ ಇವರು ಗೆಲ್ಲುತ್ತಾರೆಂದೇ ಹೇಳುತ್ತಿವೆ. ಆದರೂ ಈಗ ಬಿಡುಗಡೆಯಾಗಿರುವ ಎರಡು ಪಟ್ಟಿಯಲ್ಲಿಯೂ ಇವರ ‌ಹೆಸರಿಲ್ಲ. 

ಜಗದೀಶ್ ಶೆಟ್ಟರು ಆರೆಸ್ಸೆಸ್ ಹಾಗೂ ಭಾಜಪಗೆ ನಿಷ್ಠೆಯಿಂದ ಇದ್ದ ಮನುಷ್ಯ, ಪಕ್ಷದಿಂದ ಪಕ್ಷಕ್ಕೆ ಜಿಗಿದವರು ಅಲ್ಲ. ಹೀಗಿದ್ದರೂ ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಏನೇನೋ ಸಬೂಬು ಹೇಳುತ್ತಿದೆ. 72 ವಯಸ್ಸಿನ ವಿ. ಸೋಮಣ್ಣನವರಿಗೆ ಎರಡೆರಡು ಕಡೆ ಟಿಕೆಟ್ ನೀಡಿದ್ದಾರೆ. ಆದರೆ, 67 ವಯಸ್ಸಿನ ಶೆಟ್ಟರಿಗೆ ಮಾತ್ರ ಟಿಕೆಟ್ ಇಲ್ಲ; ಗೆಲ್ಲಲು ಸಾಧ್ಯವೇ ಇಲ್ಲದ ಅಭ್ಯರ್ಥಿಗಳಿಗೂ ಟಿಕೆಟ್ ನೀಡಿದ್ದಾರೆ. ಆದರೆ, ಅನಾಯಾಸವಾಗಿ ಗೆಲ್ಲುವ ಶೆಟ್ಟರಿಗೆ ಮಾತ್ರ ಟಿಕೆಟ್ ಇಲ್ಲ; ಚಿತ್ತಾಪುರದಲ್ಲಿ ರೌಡಿ ಶೀಟರ್ ಗೆ ಟಿಕೆಟ್ ನೀಡಿದ್ದಾರೆ. ಆದರೆ ಇವರಿಗೆ ಮಾತ್ರ ಟಿಕೆಟ್ ಇಲ್ಲ. 

ಇದಕ್ಕೆ ಕಾರಣ ಸ್ಪಷ್ಟ. ಈ ಸಲವೂ ತಮ್ಮ ಪಕ್ಷ ನ್ಯಾಯಯುತವಾಗಿ ಗೆದ್ದಾದರೂ ಸರಿ, ಗೆದ್ದ ಬೇರೆ ಪಕ್ಷದ ಶಾಸಕರನ್ನು ಖರೀದಿಸಾದರೂ ಸರಿ ಹೇಗಾದರೂ ಮಾಡಿ ಶತಾಯಗತಾಯವಾಗಿ ಸರ್ಕಾರ ರಚನೆ ಮಾಡಲೇಬೇಕು. ಬ್ರಾಹ್ಮಣ ಸಮುದಾಯದ ಜೋಷಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಬೇಕು.

ಇದನ್ನೂ ಓದಿ : ಆಪರೇಶನ್ ಟಿಕೆಟ್ : ಬಲಿಪೀಠದ ಬಾಗಿಲಲ್ಲಿ ಸೋಮಣ್ಣ?

ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಪಟ್ಟಕ್ಕೆ ಅಡ್ಡಿಯಾಗಬಹುದು. ಈಗಾಗಲೇ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿಯುವ ಸಾಧ್ಯತೆ ಇಲ್ಲ. ಆ ಸಾಮರ್ಥ್ಯವೂ ಅವರಿಗಿಲ್ಲ. ಪಟ್ಟು ಹಿಡಿದರೆ ಇವರ ನೇತೃತ್ವದ ಸರ್ಕಾರದ ಅವಾಂತರಗಳನ್ನು ಅವರ ಎದುರುಗಿಟ್ಟು ಅವರನ್ನು ಸುಮ್ಮನಾಗಿಸಬಹುದು. ಆದರೆ ಜಗದೀಶ್ ಶೆಟ್ಟರ್ ಅವರನ್ನು ಬದಿಗೆ ಸರಿಸುವುದು ಅಷ್ಟೊಂದು ಸುಲಭವಲ್ಲ. ಬದಿಗೆ ಸರಿಸಿದರೆ ಈಗಾಗಲೇ ಯಡಿಯೂರಪ್ಪನವರಿಗೆ ಮಾಡಿರುವ ಅವಮಾನದಿಂದ ಒಂದು ಕಾಲು ಹೊರಗೆ ಇಟ್ಟಿರುವ ಲಿಂಗಾಯತರು, ಶೆಟ್ಟರ್ ವಿಷಯದಲ್ಲೂ ಪುನರಾವರ್ತನೆ ಆದರೆ ಲಿಂಗಾಯತರು ಸಂಪೂರ್ಣವಾಗಿ ಬಿಜೆಪಿಯಿಂದ ದೂರ ಆಗಬಹದು. 

ಆದರಿಂದ ಇವರಿಗೆ ಮೊದಲೇ ಟಿಕೆಟ್ ನೀಡದೆ ಸೈಡಿಗೆ ಮಾಡಬೇಕೆಂದು ಆಲೋಚಿಸಿ ಟಿಕೆಟ್ ತಪ್ಪಿಸುತ್ತಿದ್ದಾರೆ. ಹೆಚ್ಚೆಂದರೆ ನಿಮಗೆ ರಾಜ್ಯಪಾಲ ಮಾಡುತ್ತೇವೆ ಎಂದೋ ಅಥವಾ ಏನೇನೋ ಸಮಜಾಯಿಷಿ ನೀಡಿ ಇವರ ಬಂಡಾಯವೂ ಶಮನ ಮಾಡುವ ಸಾಧ್ಯತೆಯೂ ಇದೆ‌.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!