ದ ಪಾಲಿಟಿಕ್

ಕತ್ತಲೆಗೆ ನೂಕಲ್ಪಟ್ಟ ಮಕ್ಕಳ ಪಾಲಿನ ಬೆಳಕು ‘ಒಡನಾಡಿ ಸಂಸ್ದೆ’ : ಶ್ರಮಕುಮಾರ್

ದ ಪಾಲಿಟಿಕ್

ದ ಪಾಲಿಟಿಕ್

ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ಧ ಅಪ್ರಾಪ್ತ ಬಾಲಕಿಯರಿಬ್ಬರು ‘ನಿರಂತರವಾಗಿ ಮೂರು ವರ್ಷಗಳಿಂದ ಸ್ವಾಮೀಜಿ ತಮಗೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆಂದು’ ದೂರು ನೀಡಿರುವ ಬೆನ್ನಲ್ಲೇ, ಶೋಷಣೆಗೆ ಒಳಗಾಗಿದ್ದ ಮಕ್ಕಳಿಗೆ ರಕ್ಷಣೆ ನೀಡಿ, ಈ ಪ್ರಕರಣ ಬೆಳಕಿಗೆ ಬರಲು ಪ್ರಮುಖವಾಗಿ ಕಾರಣರಾಗಿದ್ದಂತಹ ಒಡನಾಡಿ ಸಂಸ್ಥೆಯ ಮೇಲೆ ಈಗಾಗಲೇ ಪೋಕ್ಸೊ ಪ್ರಕರಣದ ಆರೋಪಿಯಾಗಿ ಪೋಲೀಸರ ವಶದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ಆಪ್ತರು ಎಂದು ಹೇಳಿಕೊಳ್ಳುವ ಕೆಲವರು, ಸೋಶಿಯಲ್ ಮಿಡಿಯಾಗಳಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 

ಒಡನಾಡಿ ಸಂಸ್ಥೆಯೂ ಕಳೆದ ಮೂವತ್ತು ವರ್ಷದ ಹಿಂದಿನಿಂದಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿ ಪುನರ್ವಸತಿಯನ್ನೂ ರೂಪಿಸುವುದರ ಜೊತೆ ಜೊತೆಗೆ ಶಿಕ್ಷಣದಿಂದ ವಂಚಿತರಾದ ಅವರೆಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಲೇ ಬಂದಿದೆ. ಇದುವರೆಗೂ 13,000 ಕ್ಕೂ ಮೀರಿ ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವುದರ ಬೆನ್ನಲ್ಲೇ 1400ಕ್ಕೂ ಹೆಚ್ಚು ಕಾಣೆಯಾಗಿದ್ದ ಮಕ್ಕಳನ್ನು ಮರಳಿ ಪೋಷಕರಿಗೆ ತಲುಪಿಸಿದ್ದಾರೆ.

ಅದಷ್ಟೇ ಅಲ್ಲದೇ ಮಾನವ ಕಳ್ಳಸಾಗಣೆ ಮಾಡುವವರ ವಿರುದ್ಧವೂ ನಿರಂತರವಾಗಿ ಹೋರಾಡುತ್ತ ಬಂದಿರುವ ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪನ ಸದಸ್ಯರಾಗಿರುವ ಕೆ.ವಿ ಸ್ಟ್ಯಾನ್ಲಿ ಹಾಗೂ ಎಂ.ಎಲ್ ಪರಶುರಾಮರಿಗೆ ಆಗಾಗ್ಗೆ ಜೀವ ಬೆದರಿಕೆಯ ಕರೆಗಳೂ ಕೂಡ ಬರುತ್ತಲೇ ಇವೆ. ಆದರೆ ಮುರುಘಾ ಮಠದ ಪ್ರಕರಣದಲ್ಲಿ ಸಂತ್ರಸ್ತ ಮಕ್ಕಳ ಪರ ಒಡನಾಡಿಗಳು ನಿಂತಾಗಿನಿಂದಲಂತೂ ಅದು ಇನ್ನೂ ಹೆಚ್ಚಾಗಿದೆ. ನ್ಯಾಯದ ಪರ ನಿಂತವರಿಗೆ ಈ ಬೆದರಿಕೆ ಕರೆಗಳು ಹೆಚ್ಚಾಗಿರುವುದು ನಮ್ಮ ವ್ಯವಸ್ಥೆಯಲ್ಲಿ ಹುಳುಕೆಷ್ಟಿದೆ ಎಂಬುದನ್ನು ತೋರುತ್ತಿದೆ.

ಇದನ್ನೂ ಓದಿ : ಮುರುಘಾ ಶ್ರೀ ವಿರುದ್ಧದ ಪ್ರಕರಣ ನ್ಯಾಯಾಂಗ ತನಿಖೆಯೇ ಏಕಾಗಬೇಕು?

ಶಿವಮೂರ್ತಿ ಮರುಘಾ ಶ್ರೀ ಬೆಂಬಲಿಗರು ಮೈಸೂರಿನ ಒಡನಾಡಿ ಸಂಸ್ಥೆಯ ಮೇಲೆ ಸುಖಾಸುಮ್ಮನೆ ಹೊರಿಸುತ್ತಿರುವ ಆರೋಪಗಳೆಂದರೆ ಒಡನಾಡಿ ಸಂಸ್ಥೆಯು ‘ಒಂದು ಧರ್ಮಕ್ಕೆ ಸೀಮಿತವಾಗಿದೆ, ಅದು ಕ್ರಿಶ್ಚಿಯನ್ ಮಿಷನರಿಗಳ ಕೈಯಲ್ಲಿದೆ. ಅಲ್ಲದೆ ಇದು ಬ್ಲಾಕ್ ಮೇಲ್ ಮಾಡುವ ಸಂಸ್ಥೆ. ಇದನ್ನು ಸ್ಥಾಪಿಸಿರುವ ಸ್ಟ್ಯಾನ್ಲಿ ಹಾಗು ಪರಶುರಾಮರ ಉದ್ದೇಶ ಕೇವಲ ದುಡ್ಡು ಮಾಡುವುದು ಮಾತ್ರವೇ ಆಗಿದೆ’. ಎಂದು ಪುಂಕಾನುಪುಂಕವಾಗಿ ಸೋಶಿಯಲ್ ಮೀಡಿಯಾಗಳ ಮುಂದೆ ನೇರಾತಿನೇರವಾಗಿ ನಿಂದಿಸುತ್ತಲೇ ಬರುತ್ತಿದ್ದಾರೆ‌.

ಈ ಬಗ್ಗೆ ಸಂಸ್ಥೆಯ ಪರಶುರಾಮ್ ಮತ್ತು ಸ್ಟ್ಯಾನ್ಲಿ ಅವರ ಜತೆಗೆ ಇಂದು ದಿ ಪೊಲಿಟಿಕ್ ಮಾತನಾಡಿದಾಗ “ಅವರ ಉದ್ದೇಶ ಆರೋಪಿಯನ್ನು ರಕ್ಷಿಸುವುದೇ ಆಗಿದೆ. ಹಾಗಾಗಿ ಹೀಗೆಲ್ಲ ಹೇಳುತ್ತಿದ್ದಾರೆ. ಈ ವಿಷಯ ಚರ್ಚಿಸಬೇಕಾದ ವಿಷಯವೇ ಅಲ್ಲ. ತಬ್ಬಲಿಗಳಾಗಿರುವುದು ಮಕ್ಕಳು. ಆ ಮಕ್ಕಳನ್ನು ತಬ್ಬಲಿಗಳಾಗಲು ಬಿಡದೆ ಅವರ ಪರವಾಗಿ ಮಾನವೀಯತೆ ಇರುವವರೆಲ್ಲರೂ ನಿಂತುಕೊಳ್ಳಬೇಕಿದೆ. ಹಾಗೆಯೇ ಒಡನಾಡಿ ಸಂಸ್ಥೆ ರಾಜಕಾರಣದಿಂದ ಮುಕ್ತವಾಗಿದೆ. ಎಲ್ಲಾ ರೀತಿಯ ಧರ್ಮಗಳಿಂದ ಮುಕ್ತವಾಗಿದೆ. ಈಗಿರುವಾಗ ಕೆಲವು ಕೆಟ್ಟ ಮನಸ್ಥಿತಿ ಉಳ್ಳವರ ಮಾತಿಗೆಲ್ಲ ಕಿವಿಗೊಡುವ ಅವಶ್ಯಕತೆ ಇಲ್ಲ. ನಮ್ಮ ಉದ್ದೇಶ ಒಂದೆ ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ವರ್ಗದ, ಎಲ್ಲಾ ಧರ್ಮದ, ಎಲ್ಲಾ ರಾಜ್ಯದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದೇ ನಮ್ಮ ಬಹುಮುಖ್ಯ ಗುರಿ. ಆ ನಿಟ್ಟಿನಲ್ಲಿ 1984ರಲ್ಲಿ ಪ್ರಾರಂಭವಾದ ಸಂಸ್ಥೆಯನ್ನು 1992 ರಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಸಿ, ಅವತ್ತಿನಿಂದ ಇವತ್ತಿನ ವರೆಗೂ ದೌರ್ಜನ್ಯಕ್ಕೊಳಗಾದ ನಿರಾಶ್ರಿತರ ಪರವಾಗಿ ದುಡಿಯುತ್ತಲೇ ಬಂದಿದ್ದೇವೆ. ಮುಂದೆಯೂ ದುಡಿಯುತ್ತೇವೆ. ಹಾಗೆಯೇ ಈ ಮಕ್ಕಳಿಗೆ ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ ” ಎಂದು ತಿಳಿಸಿದರು. 

ಪ್ರಕರಣವನ್ನು ಹಳಿತಪ್ಪಿಸಲು ಸರ್ಕಾರ ಎಷ್ಟೇ ಹೊಂಚು ಹಾಕಿದರು, ಪ್ರಬುದ್ಧ ಮನಸ್ಸುಗಳು ಅದಕ್ಕೆ ಅವಕಾಶ ಕಲ್ಪಿಸದೇ ಈಗಾಗಲೇ ವಿವಿಧ ಪ್ರಗತಿಪರ, ಮಹಿಳಾ, ವಿದ್ಯಾರ್ಥಿ, ಯುವಜನ ಸಂಘಟನೆಗಳು ಮುರುಘ ಶ್ರೀಗಳ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಪೋಕ್ಸೋ ಮತ್ತು SC/ST ದೌರ್ಜನ್ಯ ತಡೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ತನಿಖೆ ವಿಳಂಭವಾದದ್ದು ಏನನ್ನು ಸೂಚಿಸುತ್ತಿದೆ? ಎಂದು ರಾಜ್ಯದ ಜನರೆಲ್ಲರಿಗೂ ಈಗಾಗಲೆ ಮನವರಿಕೆಯಾಗಿದ್ದು. ಮುಂದಿನ ತನಿಖೆ ದಾರಿ ತಪ್ಪದೆ ಸರಿ ದಾರಿಯಲ್ಲಿ ಹೋಗಬೇಕೆಂದು ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳ ಪರವಾಗಿ ನಾವಿದ್ದೇವೆಂದು, ಮನಮುಟ್ಟಿ ಸಾರಲು ರಾಜ್ಯದ ಮೂಲೆ ಮೂಲೆಯಿಂದಲೂ ಸಮಾನ ಮನಸ್ಕರರೆಲ್ಲರೂ ಕೂಡಿ, ಸೆಪ್ಟೆಂಬರ್ 10ರಂದು ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲು ಈಗಾಗಲೇ ಸಿದ್ಧತೆಯಲ್ಲಿದ್ದಾರೆ. 

ಇದನ್ನೂ ಓದಿ : ಪಿ ಸಾಯಿನಾಥ್ ರಿಂದ ಬಸವಶ್ರೀ ಪ್ರಶಸ್ತಿ ವಾಪಸ್

ಏನೇ ನ್ಯಾಯದ ಪರ – ವಿರುದ್ಧವಾಗಿ ಹೋರಾಟಗಳಾದರೂ ಏನೇ ಚರ್ಚೆಗಳೆದ್ದರೂ ಪೋಲೀಸರು ತನಿಖೆಯನ್ನು ಅವರದ್ದೆ ಶೈಲಿಯಲ್ಲಿ ಮಾಡುತ್ತಾರೆಂಬುದು ಎಲ್ಲರಿಗೂ ತಿಳಿದಿರುವುದೆ. ಹಾಗಾಗಿ ಮುಂದಿನದ್ದನ್ನು ಕಾದು ನೋಡಬೇಕಷ್ಟೇ. ಹಾಗೆಯೇ ಕಾನೂನು ಯಾರ ಮುಲಾಜಿಗೂ ಸಿಕ್ಕಿ ಬೀಳದೆ ಈ ಪ್ರಕರಣವು ನಿಷ್ಪಕ್ಷಪಾತವಾದ ಉನ್ನತ ತನಿಖೆಯಾಗುವಂತೆ ಗಮನಹರಿಸಿ ದೌರ್ಜನ್ಯಕ್ಕೊಳಗಾಗಿ ನಿರಾಶ್ರಿತರಾಗಿರುವ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿಯನ್ನು ಸರ್ಕಾರವೇ ಭರಿಸಲಿ ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. 

ಕೊನೆಗೊಂದು ಮಾತು : ಒಡನಾಡಿ ಸಂಸ್ಥೆಯ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದವರಿಗೆ ಮತ್ತು ಅದರ ಸೇವೆಯನ್ನ ಹತ್ತಿರದಿಂದ ನೋಡಿದವರಿಗೆ ಅದು ಬ್ಲಾಕ್ ಮೇಲ್ ಸಂಸ್ಥೆಯಲ್ಲ, ಕತ್ತಲೆಗೆ ನೂಕಲ್ಪಟ್ಟ ಮಕ್ಕಳ, ಮಹಿಳೆಯರ ಪಾಲಿನ ಬೆಳಕು ಎಂದು ಮನದಟ್ಟಾಗುತ್ತದೆ. ಇವರ ಬದ್ಧತೆ, ಪ್ರಾಮಾಣಿಕತೆ, ಶೋಷಿತ ಮಕ್ಕಳ – ಮಹಿಳೆಯರ ಮೇಲೆ ಅವರಿಗಿರುವ ಕಾಳಜಿ ಅವರಿಗೆ ಅವರೇ ಸರಿಸಾಟಿ.  

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!