ದ ಪಾಲಿಟಿಕ್

ನಾನು Rssನಿಂದ ದೂರವಾದದ್ದೇಕೆ ಮತ್ತು ಇತರ ವ್ಯಥೆಗಳು : ಶಿವಕುಮಾರ್ ಉಪ್ಪಿನ

ದ ಪಾಲಿಟಿಕ್

ದ ಪಾಲಿಟಿಕ್

ಕೇಶವ ಕೃಪಾದಿಂದ – ಬಸವ ಕೃಪಾದೆಡೆಗೆ ಬಂದವರ ಕಥನ – 1

ಬಿಜಾಪುರ ಜಿಲ್ಲೆಯ ನಮ್ಮೂರಿನ ವಿಶ್ವೇಶ್ವರ ಗುಡಿಗೆ ಯಾರೋ ಬಂದಾರ ಏನೊ ಹೇಳಿ ಕೊಡ್ತಾರ ಅನ್ನೋದರಿಂದ ನಮಗೆ ಮೊದಲ ಬಾರಿ RSSನ ಹೆಸರು ಬಡಿದದ್ದು.ನಾವಿನ್ನೂ ಚಿಕ್ಕವರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರಬೇಕು ಆಗ. ಓಣಿ ಹುಡುಗರ ಜತೆ ನಾವೂ ಹುಡುಗರು ಗುಡಿಗೆ ಹೋದಾಗ ಅಲ್ಲಿ ಖಾಕಿ ಚಡ್ಡಿ, ಕರಿ ಟೊಪ್ಪಿಗೆಯವರು ಒಂದಿಬ್ಬರು ಕಂಡರು. ಅವರು ಬಾಗಲಕೋಟದಿಂದ ಬಂದಿದ್ದಾರೆ ಅಂತ ಗೊತ್ತಾಯಿತು. ಅವರು ಏನೇನೊ ಹೇಳುತ್ತಿದ್ದರು. ಮೊದಲು ಸಾಲಾಗಿ ನಿಂತು ‘ನಮಸ್ತೇ ಸದಾ ವಸ್ತಲೇ..’ಯಿಂದ ಶುರುವಾಗುತ್ತಿತ್ತು‌ ಪಾಠ. ದೇಶದ ಕಾಳಜಿ, ದೇಶ ಪ್ರೇಮ, ನಮ್ಮ ಧರ್ಮದ ಬಗ್ಗೆ ವಿವರಿಸಿ ಹೇಳುತ್ತಿದ್ದರು. ‘ನಮಗೆ ನಾವು ಧೈರ್ಯಶಾಲಿಗಳಾಗಬೇಕು, ರಕ್ಷಿಸಿಕೊಳ್ಳಬೇಕು, ದೇಶ ಕಾಯಬೇಕು..’ ಅಂತ ಹೇಳೋರು. ಬೇರೆಯವರು ನೋಡಿ ಅವರು ಹೇಗೆ ಒಗ್ಗಟ್ಟಾಗಿದ್ದಾರೆ, ನಾವೂ ನಮ್ಮತನ ಕಾಪಾಡಿಕೊಳ್ಳಬೇಕು ಅಂತೆಲ್ಲ ತಿಳಿಸೋರು. ಲಾಠಿ ತಿರುಗಿಸುವುದು ಕಲಿಸೋರು.‌ ಆಗ ಎಲ್ಲರ ಮನೆಗಳಲ್ಲಿ ಶ್ರೀಶೈಲದಿಂದ ತಂದಿರುತ್ತಿದ್ದ ಬೆತ್ತ ಇರುತ್ತಿದ್ದವು. ಅವೇ ತಗೋಂಡು ಹೋಗಿ ತಿರುಗಿಸೋರು ನಾವು.

ನಾವೆಲ್ಲ ಚಿಕ್ಕವರೇ.. ನಮಗಿಂತ ಜರ ದೊಡ್ಡವರೂ ಇದ್ದರು. ಕೆಲ ದಿನಗಳಲ್ಲಿ ಒಂದು ಕರಿ ಟೊಪ್ಪಿಗೆಯೂ ಕೊಟ್ಟರೆನ್ನಿ. ಅದನ್ನು ಮನೇಲಿ ಇಟ್ಟಿದ್ದೇ ಬಂತು ಹಾಕೊಳ್ಳಲಿಲ್ಲ. ಹೀಗೆ ನಾವು ಜಾಸ್ತಿನೂ ಹೋಗುತ್ತಿರಲಿಲ್ಲ. ಬಾಗಲಕೋಟದಿಂದ ಬಂದಿದ್ದ ಆ ಕಲಿಸುವವರು ನಮಗೆ ಅದೇನೊ ಒಂಥರ ಬೇರೆನೆ ಆಗಿ ಕಾಣುತ್ತಿದ್ದರು, ಏನೋ ಯಾರದೋ ಸಂದೇಶ ತಂದವರಂತೆ. ನಮಗೆ ಇದು ಒಗ್ಗೋದಲ್ಲ ಬಿಡು ಅಂತ ಅನಿಸುತ್ತಿತ್ತು. ನಮ್ಮ ಓಣಿ ಗೆಳೆಯರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಒಂದು ಸಲ ಕಿರಿಕಿರಿಯಾಗಿದ್ದು ಬಿಟ್ಟರೆ ಇವತ್ತಿಗೂ ನಮ್ಮೂರು ಸೌಹಾರ್ದಯುತವಾಗೇ ಇದೆ. ಆಗ ನಮ್ಮ ಮನೆಗೆ ‘ಲಂಕೇಶ್ ಪತ್ರಿಕೆ’ ಬರುತ್ತಿತ್ತು. ಅದರಲ್ಲಿ ಎ.ಕೆ.ಸುಬ್ಬಯ್ಯ ಅವರು ಈ ಸಂಘದ ಬಗ್ಗೆ ಎಳೆಎಳೆಯಾಗಿ ಬರೆಯಲು ಶುರು ಮಾಡಿದ್ದರು. ನಾವೂ ಹೈಸ್ಕೂಲ್ ಮೆಟ್ಟಿಲು ಕೆಳಗಿಳಿವ ಹಂತದಲ್ಲಿದ್ದೆವು.

ಆಗ ಈ RSS ಅಂದರೆ ಏನಂತ ಚಿಂತಿಸಲು ಶುರು ಮಾಡಿದೆವು. ನಾವು ತಲೆಗೆ ಏನೂ ತುಂಬಿಕೊಂಡಿದ್ದಿಲ್ಲ, ನಾವು ಬೆಳೆದ ಪರಿಸರವೂ ಹಾಗೇ ಇತ್ತು. ನಾವು ಲಿಬರಲ್ಲಾಗಿದ್ದೆವು. ಬರಬರುತ್ತ ಸಂಘದ ಒಳ ಸುಳಿಗಳು, ಅದಲ್ಲಿನ ದೊಡ್ಡವರು ಅರ್ಥವಾಗತೊಡಗಿದರು. ಹೀಗೆ ಲಿಂಗಾಯತ ಹುಡುಗರೇ ಸಂಘದ ಬೆನ್ನಿಗಿರೋದು ಈಗಲೂ. ಮತ್ತೆ ಉಳಿದೆಲ್ಲ ದುಡಿವ ವರ್ಗ ದೇಶ ಪ್ರೇಮದ ನಂಬಿಕೆಯಿಂದ ಬೆನ್ನು ಹತ್ತಿದ್ದಾರೆ. ಆದರೆ ಅದರ ಮುಖ್ಯಸ್ಥರು‌ ಅಧಿಕಾರದ, ತಮಗೆ ಬೇಕಿರುವ ‘ಬದಲಾವಣೆ’, ಅಧಿಕಾರದ ಲೆಕ್ಕಾಚಾರದಲ್ಲಿ ಇರುತ್ತಾರೆ. ಇದನ್ನೇ ಈಗ ದೇವನೂರು ಮಹಾದೇವ ಅವರು ಅದರ “ಆಳ-ಅಗಲ” ಬಿಡಿಸಿಟ್ಟಿದ್ದಾರೆ.

ಲಿಂಗಾಯತ ಹುಡುಗರೇ ಅತಿ ಹೆಚ್ಚು Rssನ ಒಳೇಟು ಏನಂತ ಗೊತ್ತಾಗದೇ ಬಹಳ ಆಕರ್ಷಿತರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅದನ್ನು ಬೆಳೆಸಲು ಪ್ರಮುಖ ಪಾತ್ರ ವಹಿದ್ದಾರೆ, ಅಧಿಕಾರವನ್ನೂ ನೀಡಿದ್ದಾರೆ. ನಮಗೆ ಸಂಘದ ದೇಶ ಪ್ರೇಮದ ಬಗ್ಗೆ ಯಾವ ತಕರಾರಿಲ್ಲ. ಅದು ಸೇವೆ ಸಲ್ಲಿಸಿದ್ದರೆ ಒಳ್ಳೆಯದೇ. ಅದಕ್ಕೂ ಗೌರವ ಇದೆ. ಆದರೆ, ಕೆಲ ಉತ್ತರ ಸಿಗದ ಪ್ರಶ್ನೆಗಳು- ನೋವುಗಳು ಬೇರೆಯೇ ಇವೆ.

ಕಲ್ಯಾಣ ಕ್ರಾಂತಿ ಆಗಲು ಯಾರು ಕಾರಣ? RSSನಲ್ಲಿ ಬರೀ ಯಾರ ಕೃಪಾ ಪೋಷಣೆಯಾಗುತ್ತಿದೆ? ‘ಅವರೇ’ ಯಾಕೆ ಸರ ಸಂಚಾಲಕರಾಗುತ್ತಾರೆ? ದಲಿತರೊಬ್ಬರು ಇಲ್ಲಿಯ ತನಕ ಆ ಹುದ್ದೆಗೇರಿಲ್ಲ ಏಕೆ? ಇವೆಲ್ಲ ಪ್ರಶ್ನೆಗಳಿವೆ. ಬಸವಣ್ಣನವರು ಗಡಿಪಾರು ಆಗಲು, ಶರಣರ ಹತ್ಯೆಯಾಗಲು ಯಾರು ಕಾರಣ ಎನ್ನುವುದರ ಕಾರಣಕ್ಕೆ ನಾನಿಲ್ಲಿ ಲಿಂಗಾಯತ ಧರ್ಮವನ್ನು ಪ್ರಸ್ತಾಪಿಸಿದ್ದೇನೆ. ಜಾತಿಯ ಕಾರಣಕ್ಕೆ ಖಂಡಿತ ಅಲ್ಲ.

ಮುಗ್ಧ, ಸರಳ, ಸಂಭಾವಿತ, ‘ದುಡ್ಡಿರುವ ವ್ಯಾಪರಿ ಲಿಂಗಾಯತರನ್ನು’ ಯಾರು ಹ್ಯಾಗೆ ಬಳಸಿಕೊಂಡಿದ್ದಾರೆ ಅಂತ ಈ ನಾಡಿಗೆ ಗೊತ್ತು. ಬಸವಾದಿ ಶರಣರು ಯಾಕೆ ತಮ್ಮ ಜೀವದ ಖಬರು ಇರದೇ ಹೋರಾಡಿದರು ಅಂತ ಇನ್ನಾದರೂ ನಾವೆಲ್ಲ ಅರಿಯಬೇಕಿದೆ. ಈಗ ನಮ್ಮ ಎದೆಯನ್ನು ಮುಟ್ಟಿಕೊಂಡು ಲಿಂಗಾಯತರಾದ ನಾವುಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು. ನಿಜವಾದ ದೇಶ ಪ್ರೇಮಿಗಳಾಗುವ ಸದಾವಕಾಶ ಈಗಿನದು. ಸತ್ಯದ ಆಳ, ಅಗಲದ ಪರದೆ ಮೇಲೆ ಎಲ್ಲ ಚರ್ಚೆ ಶುರುವಾಹಿದೆ. ಆ ಕಡೆ ನಾವು ಚಿಂತಿಸೋಣ.. ಅಲ್ಲವೇ?

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!