ದ ಪಾಲಿಟಿಕ್

ನಾನೇಕೆ ಆರೆಸ್ಸೆಸ್ ತೊರೆದೆ?!

ದ ಪಾಲಿಟಿಕ್

ದ ಪಾಲಿಟಿಕ್

ನಾನು ಆರೆಸ್ಸೆಸ್‌ಗೆ ಸೇರಿದ್ದು ನನ್ನ ಹನ್ನೊಂದನೇ ವಯಸ್ಸಿನಲ್ಲಿ. ನಾನಾಗ ಆರನೇ ತರಗತಿ. ನನ್ನ ಮಾಮಾ ‘ಆರೆಸ್ಸೆಸ್ ಎಂಥಾ ದೇಶಪ್ರೇಮಿ ಸಂಘಟನೆ, ಎಂತಹ ಶಿಸ್ತು ಅವರದ್ದು’ ಅಂತ ಒಮ್ಮೆ ಅಂದಿದ್ದೇ ನಾನು ‘ಸಂಘ’ವನ್ನು ಸೇರಲು ಪ್ರೇರಣೆಯಾಯಿತು. ಶಾಖೆಗೆ ಹೋಗಲು ಶುರು ಮಾಡಿದ ಒಂದೆರಡು ವರ್ಷಗಳ ಒಳಗೆ ನನ್ನಲ್ಲಿ ಆದ ಬದಲಾವಣೆ ಏನು ? ಆರೆಸ್ಸೆಸ್ ನನ್ನ ಮೇಲೆ ಬೀರಿದ ಪ್ರಭಾವವೇನು ಎಂಬ ವಿವರಗಳು ಇಲ್ಲಿವೆ.

ಅಧ್ಯಾಯ-೪
‘ಸಂಘ’ ತಂದ ಪರಿವರ್ತನೆ – ದುಷ್ಕೃತ್ಯಗಳಿಗೆ ಪ್ರೇರಣೆ
“ಮುಂದೆ ನುಗ್ಗು ವೀರ ದೇಶ ಕರೆದಿದೆ,
ಪಡೆಯ ಕಟ್ಟು ವೀರ ಸಮರ ಕಾದಿದೆ.
ರಣ ಕಹಳೆಯ ಝೇಂಕಾರದ ಸದ್ದು ಮೊರೆದಿದೆ.
ರಕ್ತ ಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ’’
ಎಂಬ೦ತಹ ಹಾಡುಗಳು, ಸಂಘದ ವಿಚಾರಗಳು ನನ್ನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ಅದರಲ್ಲೂ ` ರಣ ಕಹಳೆಯ ಝೇಂಕಾರದ ಸದ್ದು ಮೊರೆದಿದೆ, ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ’ ಎಂಬ ಸಾಲುಗಳನ್ನು ನಾನು ಆಗಾಗ್ಗೆ ನೆನಪಿಸಿಕೊಂಡು ಗುನುಗಿಕೊಳ್ಳುತ್ತಿದ್ದೆ. ಪರಿಣಾಮವಾಗಿ ನನ್ನ ಮನೋಭಾವ ಮತ್ತು ವರ್ತನೆಯಲ್ಲೂ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡವು ಎಂದು ನಾನು ಈಗ ಖಚಿತವಾಗಿ ಊಹಿಸಬಲ್ಲೆ.

ನಾನು ಓದಿದ್ದು ಚಾಮರಾಜಪೇಟೆಯ ಮಾದರಿ ಶಾಲೆಯಲ್ಲಿ. ೪ ನೇ ಮುಖ್ಯರಸ್ತೆಯ ರಾಮೇಶ್ವರ ಗುಡಿಯ ಪಕ್ಕದಲ್ಲಿರುವ ಮಾದರಿ ಪ್ರಾಥಮಿಕ ಶಾಲೆಯು ಅಲ್ಲಿಯವರೆಗೆ ನನ್ನ ಮನೋಭೂಮಿಕೆಯನ್ನು, ನನ್ನ ಸ್ವಭಾವವನ್ನು ರೂಪಿಸುವಲ್ಲಿ ತುಂಬಾ ಪ್ರಭಾವ ಬೀರಿತ್ತು ಅನಿಸುತ್ತದೆ. ಮೂರನೇ ತರಗತಿಯಲ್ಲಿ ನಮಗೆ `ಅರುಳ್‌ಮಣಿ’ ಎಂಬ ಒಬ್ಬ ಶಿಕ್ಷಕಿ ಇದ್ದರು. ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರು. ಮೊದಲನೇ ತರಗತಿಯ ಚಂಪಕ ಮೇಡಂ, ಎರಡನೇ ತರಗತಿಯ ಮಂಜುಳ ಟೀಚರ್, ನಾಲ್ಕನೇ ತರಗತಿಯ ನಾಗರತ್ನ ಮೇಡಂ ಇವರೆಲ್ಲರೂ ಉತ್ತಮ ಶಿಕ್ಷಕಿಯರೇ ಆಗಿದ್ದರು. ಆದರೆ `ಅರುಳ್ ಮಣಿ’ಯವರು ವಿದ್ಯಾರ್ಥಿಗಳ ಮೇಲೆ ತುಂಬಾ ಪ್ರಭಾವ ಬೀರಿದವರಾಗಿದ್ದರು. ಯಾವ ಮಕ್ಕಳನ್ನೂ ನೋಯಿಸಲು ಬಯಸದ ಕೋಮಲ ಸ್ವಭಾವದ ಅವರು ನನಗಂತೂ ಅಚ್ಚುಮಚ್ಚಿನ ಶಿಕ್ಷಕಿಯಾಗಿದ್ದರು. ಇಂತಹ ಪ್ರಭಾವ, ಕಾರಣಗಳಿಂದಲೋ ಏನೋ, ನನಗೆ ಯಾರನ್ನಾದರೂ ಸ್ವಲ್ಪವೂ ನೋಯಿಸುವುದೆಂದರೆ ಆಗುತ್ತಿರಲಿಲ್ಲ. ನನ್ನ ತಂದೆತಾಯಿಯರು ಮಕ್ಕಳಾದ ನಮಗೆ ಕಲಿಸಿದ ಬದುಕಿನ ಪಾಠವೂ ಹೀಗೇ ಇತ್ತು.

ಒಮ್ಮೆ ಒಂದು ಭಾನುವಾರದ ರಜೆಯ ದಿನ ನಾನು ನನ್ನ ಮನೆಯ ಬಳಿ ಗೆಳೆಯ ಮಲ್ಲೇಶನ ಜೊತೆ ಬುಗುರಿ ಆಟ ಆಡುತ್ತಿದ್ದೆ. ಬುಗುರಿ, ಗೋಲಿ, ಚಿನ್ನುದಾಂಡು ಸೇರಿದಂತೆ ಯಾವ ಆಟಗಳಿಗೂ ಮಕ್ಕಳಾದ ನಮ್ಮ ಮೇಲೆ ನಮ್ಮ ತಂದೆ ತಾಯಿಯರ ನಿರ್ಬಂಧವಿರಲಿಲ್ಲ. ಯಾರೊಂದಿಗಾದರೂ, ಎಷ್ಟಾದರೂ ಆಡಿ, ಅದರೆ ಅವರು ಆಡುವ ಕೆಟ್ಟ ಮಾತುಗಳನ್ನು ಕಲಿತುಕೊಂಡು ಬರಬೇಡಿ. ಕಾಸು ಕಟ್ಟಿ ಜೂಜಾಡುವುದನ್ನು ಕಲಿಯಬೇಡಿ ಎಂಬುದಷ್ಟೆ ನನ್ನ ಅಪ್ಪ ಅಮ್ಮ ನಮಗೆ ಹೇಳುತ್ತಿದ್ದುದು. ಒಂದು ಹಂತದಲ್ಲಿ ಮಲ್ಲೇಶ ಆಟದಲ್ಲಿ ಸೋತ. ನಾನು ನಮ್ಮ ಆಟದ ಕ್ರಮದಂತೆ ಮಲ್ಲೇಶನ ಕಾಲಿಗೆ ಬಗುರಿಯ ಚಾವಟಿಯಿಂದ ಏಟು ಹೊಡೆದೆ. ಚಾವಟಿ ಏಟು ಜೋರಾಗಿಯೇ ತಾಗಿರಬೇಕು. ಮಲ್ಲೇಶ ಜೋರಾಗಿ ಚೀರಿಕೊಂಡ. ಪಕ್ಕದಲ್ಲೇ ಬೇಲಿಯ ಹಿಂದೆ ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ ಬಂದರು, ಬಂದವರೇ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ನನ್ನ ಅಪ್ಪ ಸಿಟ್ಟಿಗೇಳುವುದು ಅಪರೂಪ. ಆದರೆ ಒಮ್ಮೆ ಸಿಟ್ಟಿಗೆದ್ದು ಹೊಡೆಯಲು ಶುರು ಮಾಡಿದರೆ ನಾಲ್ಕು ಜನ ಗಟ್ಟಿ ಆಳುಗಳು ಹಿಡಿದುಕೊಂಡರೂ ಬಿಡಿಸಿಕೊಳ್ಳುವುದು ಕಷ್ಟವಿತ್ತು. `ಆಯ್ತು, ಇನ್ನು ನನಗೆ ಏಟುಗಳು ಬೀಳುವುದು ಖಾತರಿ’ ಎಂದುಕೊ೦ಡು ನಾನು ಬೆದರಿ ಹೋಗಿದ್ದೆ. ಆದರೆ ಅವತ್ತು ತಂದೆ ನನಗೆ ಹೊಡೆಯಲಿಲ್ಲ. ಆದರೆ ಜೋರಾಗಿ ಗದರಿಸಿ, ಇನ್ನೊಮ್ಮೆ ಯಾರ ಜೊತೆಗೂ ಇಂತಹ ಹೊಡೆಯುವ, ಹಿಂಸೆ ಮಾಡುವ ಆಟ ಆಡಕೂಡದು ಎಂದು ತಾಕೀತು ಮಾಡಿದರು. ಘಟನೆ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅಲ್ಲಿಂದಾಚೆಗೆ ನನ್ನ ಆಟಗಳಲ್ಲಿ ಸೋತವರಿಗೆ ಹೊಡೆಯುವ ಒಪ್ಪಂದಗಳು ರದ್ದಾದವು.

ಅನಕ್ಷರಸ್ತರಾದ ನನ್ನ ತಾಯಿ, ಅರೆಶಿಕ್ಷಿತರಾದ ನನ್ನ ತಂದೆ ಹೀಗೆ ನಮಗೆ ಉತ್ತಮ ಸಂಸ್ಕಾರವನ್ನೇ ಕಲಿಸಿದರು. ಹೀಗಾಗಿ ನಮ್ಮ ಸ್ನೇಹಿತರಲ್ಲಿ ಯಾರೇ ಜಗಳವಾಡಿಕೊಳ್ಳಲು ಮುಂದಾದರೂ ನಾನು ಅದನ್ನು ತಪ್ಪಿಸಲು ಮುಂದಾಗುತ್ತಿದ್ದೆ. ಇಂತಹ ಕಾರಣಕ್ಕಾಗಿ ನನಗೆ ೬-೭ ನೇ ತರಗತಿಯ ಹೊತ್ತಿಗೆ ನನಗೆ `ಗಾಂಧಿ’ ಎನ್ನುವ ಬಿರುದನ್ನು ಸ್ನೇಹಿತರು ದಯಪಾಲಿಸಿದ್ದರು.

ಮೊದಲು ದಾಸರಹಳ್ಳಿಯ ಗ್ರಾಮಠಾಣಾದಲ್ಲಿದ್ದ ನಮ್ಮ ಮನೆ, ನಾನು ೪ ನೇ ತರಗತಿಗೆ ಬರುವ ಹೊತ್ತಿಗೆ ಸ್ವಲ್ಪ ಊರ ಹೊರವಲಯದ ಸ್ವಂತ ಮನೆಗೆ ಬದಲಾಗಿತ್ತು. ಮೊದಲಿನ ವಠಾರದೊಳಗಿನ ಮನೆಯ ಬದಲಿಗೆ ಮನೆಯ ಸುತ್ತ ಮುತ್ತ ಗಿಡ ಮರ ಬೇಲಿ ಇದ್ದ ಸ್ವಂತದ್ದಾದ, ಮಂಗಳೂರು ಹೆಂಚಿನ ಮನೆ ಇದಾಗಿತ್ತು.
ಸಂಘದ ವಿಚಾರಗಳು ನನ್ನ ಮನಸ್ಸಿನಲ್ಲಿ ಹೆಚ್ಚು ಹೆಚ್ಚು ಇಳಿಯುತ್ತಾ ಹೋದಂತೆ `ಗಾಂಧಿ’ ಎಂದು ಕರೆಸಿಕೊಳ್ಳುತ್ತಿದ್ದ ನನ್ನ ಮನಸ್ಸಿನಲ್ಲಿ ಮತ್ತೊಂದು ಬಗೆಯ ಆಲೋಚನೆ, ಪ್ರವೃತ್ತಿಗಳು ತಲೆ ಎತ್ತಿದವು. ರವೀಂದ್ರನಾಥ ಠಾಗೂರರಿಗಿದ್ದಂತಹ ಬಿಳಿ ಗಡ್ಡ ಬಿಳಿ ದಾಡಿಯ ಒಬ್ಬ ವಯಸ್ಸಾದ ಮುಸ್ಲಿಂ ತಾತ ಒಬ್ಬರು ನಮ್ಮ ಮನೆಯ ಹತ್ತಿರ ಹಳೆಯ ಸೈಕಲ್ಲನ್ನು ತಳ್ಳಿಕೊಂಡು `ಹಳೇ ಕಬ್ಣ, ಖಾಲಿ ಸೀಸ’ ಎಂದು ಕೂಗುತ್ತಾ ಬರುತ್ತಿದ್ದರು. ನಾವು ಮಕ್ಕಳು ನಮ್ಮ ಮನೆಯಲ್ಲಿದ್ದ ಬೇಡವಾದ ಹಳೇ ಸೀಸ, ಖಾಲಿ ಡಬ್ಬ, ಹಳೇ ಕಬ್ಬಿಣ ಇತ್ಯಾದಿ ಕೊಟ್ಟು ಗಡ್ಡದ ತಾತ ಕೊಡುವ `ಪಾಕಂ ಪಾಕಂ’ ತಿಂಡಿಯನ್ನು ಪಡೆದು ತಿನ್ನುತ್ತಿದ್ದೆವು. `ಪಾಕಂ ಪಾಕಂ’ ಎಂದರೆ ಬೆಲ್ಲ ಮತ್ತು ಕಡಲೆ ಬೀಜ ಇತ್ಯಾದಿಗಳನ್ನು ಹಾಕಿ ಮಾಡಿದ ಒಂದು ಭರ್ಫಿಯಂತಹ ಸಿಹಿ ತಿನಿಸು.

ಹೀಗಿರುವಾಗ ಒಂದು ದಿನ ನಾನು ನಮ್ಮ ಮನೆಯ ಮುಂದೆ ಸೈಕಲ್ ತಳ್ಳಿಕೊಂಡು ಹಾದು ಹೋಗುತ್ತಿದ್ದ ಬಿಳಿಗಡ್ಡದ ತಾತನಿಗೆ ಹಿಂದಿನಿ೦ದ ಒಂದು ಕಲ್ಲು ಬೀಸಿ ಒಗೆದೆ. ಕಲ್ಲು ಗುರಿ ತಪ್ಪಲಿಲ್ಲ. ಅದು ಹೋಗಿ ತಾತನ ಮೈ ಮೇಲೆ ಬಿತ್ತು. ಪೆಟ್ಟು ತಾಗಿದ ತಾತ ಹೊಡೆದದ್ದು ಯಾರೆಂದು ತಿರುಗಿ ನೋಡುವಷ್ಟರಲ್ಲಿ ನಾನು ನಮ್ಮ ಮನೆಯ ಬೇಲಿಯ ಮರೆಯಲ್ಲಿ ಅವಿತುಕೊಂಡೆ. ವಿಷಯ ನನ್ನ ತಂದೆ ತಾಯಿಗಳಿಗೆ ಗೊತ್ತಾಗಿದ್ದಿದ್ದರೆ ನಾನು ಚೆನ್ನಾಗಿಯೆ `ಕಜ್ಜಾಯ’ ತಿನ್ನಬೇಕಾಗುತ್ತಿತ್ತು. ಆದರೆ ಗೊತ್ತಾಗಲಿಲ್ಲ. `ಪಾಕಂ ಪಾಕಂ ತಾತ’ನಿಗೆ ನಾನೇ ಹೊಡೆದದ್ದು ಎಂದು ಗೊತ್ತಾಗಿದ್ದಿದ್ದರೆ ಏನಾಗುತ್ತಿತ್ತೋ ನಾನು ಹೇಳಲಾರೆ.

ಮತ್ತೊಂದು ದಿನ ನಾನು ನನ್ನ ಶಾಲೆಗೆ ಹೋಗುವ ದಾರಿಯಲ್ಲಿ ಚಾಮರಾಜ ಪೇಟೆಯ ೫ ನೇ ಮುಖ್ಯರಸ್ತೆಯಲ್ಲಿ ಒಂದಿಬ್ಬರು ಬುರ್ಕಾ ತೊಟ್ಟ ಮುಸ್ಲಿಂ ಮಹಿಳೆಯರು “ಟಿ.ಅರ್. ಮಿಲ್‌ಗೆ ಯಾವ ಕಡೆ ಹೋಗಬೇಕು ?’’ ಅಂತ ಕೇಳಿದರು. ನಾನು ಅವರಿಗೆ ಟಿ.ಆರ್. ಮಿಲ್ ಕಡೆಗೆ ಹೋಗುವ ದಾರಿ ತೋರಿಸುವ ಬದಲು ಅದಕ್ಕೆ ವಿರುದ್ದ ದಿಕ್ಕಿನ ಕಡೆಗೆ, ಅಂದರೆ ಮಕ್ಕಳ ಕೂಟದ ಕಡೆಗೆ ಕಳುಹಿಸಿದೆ.

ಅದೇ ೫ ನೇ ಮುಖ್ಯರಸ್ತೆಯಲ್ಲಿ ಈಗ `ವಿಜಯವಾಣಿ’ ಪತ್ರಿಕೆಯ ಕಛೇರಿ ಇರುವ ಜಾಗಕ್ಕೆ ಹತ್ತಿರದಲ್ಲೇ ರಂಗರಾವ್ ರಸ್ತೆ ಮತ್ತು ೫ ನೇ ಮುಖ್ಯರಸ್ತೆ ಕೂಡುವ ಮೂಲೆಯಲ್ಲಿ ಒಂದು ಮನೆ ಇತ್ತು. ಆ ಮನೆಯ ಮುಂದೆ ಮುಖ್ಯರಸ್ತೆಗೆ ಆತುಕೊಂಡ೦ತೆ ಕಾಂಪೌ೦ಡಿನೊಳಗೆ ಎರಡು `ಕ್ರಿಸ್‌ಮಸ್ ಟ್ರೀ’ ಎಂದು ಕರೆಯುವ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದವು. ನನಗೊಬ್ಬ ರಮೇಶ ಎನ್ನುವ ಸಹಪಾಠಿಯಿದ್ದ. ಗವಿಪುರಂ ಗುಟ್ಟಹಳ್ಳಿಯ ಒಳಭಾಗದಲ್ಲಿ ಕೆಂಪಾಬುದಿ ಕೆರೆಯ ಅಂಚಿನಲ್ಲಿ ಅವನ ಮನೆ. ಆರೆಸ್ಸೆಸ್‌ನಲ್ಲಿ ಆತನು ನನಗಿಂತ ಅನುಭವಿ ಆಗಿದ್ದ. ಆತ ತನ್ನ ಮನೆಯ ಬಳಿ `ಸಾಯಂ ಶಾಖೆ’ಗೆ ಅಂದರೆ ಸಂಜೆ ಶಾಖೆಗೆ ಹೋಗುತ್ತಿದ್ದ. ಈಗ ಗವಿಪುರಂ ಗುಟ್ಟಹಳ್ಳಿಯಲ್ಲಿ ಆರೆಸ್ಸೆಸ್‌ನ `ಕೇಶವ ಶಿಲ್ಪ’ ಬಹುಮಹಡಿ ಕಟ್ಟಡ ಇರುವ ಜಾಗದಲ್ಲಿ ಮೊದಲಿಗೆ ಒಂದು ಸಿಲ್ಕ್ ಫ್ಯಾಕ್ಟರಿ ಇತ್ತು. ಆ ಜಾಗದಲ್ಲಿ ಬೃಹತ್ತಾದ ಆರೆಸ್ಸೆಸ್ ಕಟ್ಟಡ ಬರುತ್ತದೆ ಎಂದು ನನಗೆ ಮೊದಲು ಹೇಳಿದವನು ಅವನೇ. ನಾವು ಆ ಕ್ರಿಸ್‌ಮಸ್ ಮರಗಳ ಬಳಿ ಸಾಗಿ ಹೋಗುವಾಗ, `ಹೆಂಗಾದ್ರೂ ಮಾಡಿ ರಾತ್ರಿ ಹೊತ್ತಿನಲ್ಲಿ ಬಂದು ಈ ಮರಗಳನ್ನ ಕತ್ತರಿಸಿ ಹಾಕಿಬಿಡಬೇಕು’’ ಎಂದು ರಮೇಶ ಹೇಳುತ್ತಿದ್ದ. ನನಗೂ ಸಹ ಅಗ ಹಾಗೇ ಮಾಡಬೇಕೆಂದು ಅನಿಸುತ್ತಿತ್ತು. ಆದರೆ ಅಂತಹ ಸಾಹಸವನ್ನೇನೂ ನಾವು ಮಾಡಲು ಪ್ರಯತ್ನಿಸಲಿಲ್ಲ. ಕಿತ್ತು ಹಾಕಲು, ಕಡಿದು ಹಾಕಲು ಅವೇನು ಸಣ್ಣ ಗಿಡಗಳು ಅಥವಾ ಪುಟ್ಟ ಮರಗಳಾಗಿರಲಿಲ್ಲ. ದೈತ್ಯಾಕಾರದ್ದಾಗಿದ್ದವು. ಒಂದು ಪಕ್ಷ ಅವು ಸಣ್ಣ ಗಿಡಗಳಾಗಿದ್ದಿದ್ದರೆ ಆ ಸಾಹಸವನ್ನೂ ನಾವು ಮಾಡುತ್ತಿದ್ದೆವೋ ಏನೋ.
ಯೇಸು ಕ್ರಿಸ್ತ ಮತ್ತು ನಾನು ಬರೆದ ಮೊದಲ ಕವನ
ನನ್ನ ಸಾಹಸ ಕಾರ್ಯಗಳು ಗಡ್ಡದ ಮುಸ್ಲಿಂ ತಾತನಿಗೆ ಹಿಂದಿನಿ೦ದ `ಕಲ್ಲು ಹೊಡೆಯುವುದು’, `ವಿಳಾಸ ಕೇಳಿದ ಬುರ್ಕಾ ಮಹಿಳೆಯರ ದಾರಿ ತಪ್ಪಿಸುವುದು’ ಇದರಲ್ಲಿ ಮಾತ್ರವೇ ಅಲ್ಲ, ಸಾಹಿತ್ಯ ರೂಪದಲ್ಲಿಯೂ ಕಾಣಿಸಿಕೊಳ್ಳತೊಡಗಿದವು.

ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಶಾಲಾ ದಿನಗಳಲ್ಲಿ ನಾನು ಓದಿನಲ್ಲಿ ಮುಂಚೂಣಿಯಲ್ಲೇನು ಇದ್ದವನಲ್ಲ. ಒಬ್ಬ ಸಾಮಾನ್ಯ ವಿದ್ಯಾರ್ಥಿ ಎನಿಸಿಕೊಂಡಿದ್ದೆ. ಐದನೇ ತರಗತಿಯಿಂದ ಆರಂಭವಾದ ಇಂಗ್ಲೀಷ್ ನನಗೆ ಕಷ್ಟವೇ ಆಗಿತ್ತು. ಗಣಿತವೂ ಅಷ್ಟೆ. ಆದರೆ ಕನ್ನಡ ಮತ್ತು ಸಮಾಜ, ವಿಜ್ಞಾನದಲ್ಲಿ ಜೀವಶಾಸ್ತ್ರ ನನ್ನ ಆಸಕ್ತಿಯ ವಿಷಯಗಳಾಗಿದ್ದವು.
ನಮ್ಮದು ಖಾಸಗಿ ಅನುದಾನಿತ ಶಾಲೆ. ೫ ರಿಂದ ೭ ರವರೆಗಿನ ಮಾದರಿ ಮಾಧ್ಯಮಿಕ ಶಾಲೆಯು ಚಾಮರಾಜಪೇಟೆಯಲ್ಲಿ ಉಮಾ ಥಿಯೇಟರ್ ಎದುರಿಗಿನ ಒಂದು ಹಳೇ ಕಾಲದ ದೊಡ್ಡ ಬಂಗಲೆಯಲ್ಲಿ ನಡೆಯುತ್ತಿತ್ತು. ನಾನು ಮಾಧ್ಯಮಿಕ ಶಾಲೆ ಸೇರಿದ ಮೇಲೂ ಪ್ರಾಥಮಿಕ ಶಾಲೆಯ ನನ್ನ ಟೀಚರ್‌ಗಳನ್ನು ನಿರಂತರವಾಗಿ ಭೇಟಿಯಾಗ ಬೇಕಾಗುತ್ತಿತ್ತು. ನನ್ನ ಅಜ್ಜಿ(ತಾಯಿಯ ತಾಯಿ ಚೆನ್ನಮ್ಮ) ಪ್ರಾಥಮಿಕ ಶಾಲೆಯಲ್ಲಿ ನೌಕರ(ಜವಾನೆ)ರಾಗಿದ್ದರು. ಆ ಕಾರಣದಿಂದಲೇ ನಾವು ಹಲವಾರು ಜನ ಮೊಮ್ಮಕ್ಕಳು, ನಮ್ಮೂರಿಗೆ ಶಾಲೆ ಸಾಕಷ್ಟು ದೂರವಿದ್ದರೂ ಈ ಶಾಲೆಗೆ ಸೇರಿದ್ದದ್ದು.

ನಾನು ಶಾಲೆ ಬಿಟ್ಟ ಕೂಡಲೇ ಅಜ್ಜಿಯ ಜೊತೆ ಮನೆಗೆ ಬರುವ ಸಲುವಾಗಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆ. ಆ ಹೊತ್ತಿನಲ್ಲಿ ಶಾಲೆಯ ಹೆಚ್.ಎಂ. ಚಂಪಕ ಮೇಡಂ ಅವರಿನ್ನೂ ಶಾಲೆಯಲ್ಲಿ ಇರುತ್ತಿದ್ದರು. ನನ್ನಜ್ಜಿ ಶಾಲೆಯ ಕಸಗುಡಿಸಿ ಸ್ವಚ್ಛಮಾಡಿ ನಂತರ ಶಾಲೆ ಬಂದ್ ಮಾಡಬೇಕಿತ್ತು. ಚಂಪಕ ಮೇಡಂ `ಚೆನ್ನಮ್ಮ, ನಾನು ಹೊರಟಿದ್ದೀನಿ. `ದೀಪ’ ಆರಿಸೋದು ಮರೀಬೇಡ. ಬೀಗ ಸರಿಯಾಗಿ ಹಾಕು. ಜೋಪಾನ’’ ಎಂದು ಹೇಳುತ್ತಿದ್ದ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ಹಾಗೇ ಗುಯ್‌ಗುಡುವಂತಿದೆ.
ನಮಗೆಲ್ಲಾ ಆಗ `ದೀಪ’ ಎಂದರೆ ಸೀಮೆ ಎಣ್ಣೆ ದೀಪ ಅಥವಾ ಮಣ್ಣಿನ ದೀಪ. ನಮ್ಮ ಮನೆಯಲ್ಲೂ ರಾತ್ರಿ ಉರಿಯತ್ತಿದ್ದುದ್ದು ಸೀಮೇ ಎಣ್ಣೆ ದೀಪ. ನಮ್ಮ ಪ್ರಕಾರ ಕರೆಂಟ್‌ನಿ೦ದ ಉರಿಯುವುದು `ಲೈಟ್’. ನಾವು `ಲೈಟ್’ ಅನ್ನುತ್ತಿದ್ದುದಕ್ಕೆ ಚಂಪಕ ಮೇಡಂ `ದೀಪ’ ಅನ್ನುತ್ತಿದ್ದರು. ಅವರ ಸ್ವಚ್ಛವಾದ ಭಾಷೆ, ಸುಂದರ ಕನ್ನಡವನ್ನು ಕೇಳಲು ತುಂಬಾ ಸಂತೋಷವಾಗುತ್ತಿತ್ತು. ನನ್ನಲ್ಲಿ ಕನ್ನಡ ಪ್ರೇಮದ ದೀಪವನ್ನು ಹೊತ್ತಿಸಿದ ವಿಚಾರಗಳಲ್ಲಿ ಚಂಪಕ ಮೇಡಂ ಅವರ ಸ್ವಚ್ಛ ಕನ್ನಡವೂ ಒಂದು ಎಂದು ನನಗನಿಸುತ್ತದೆ.
ನನ್ನ ತಾಯಿ ಶಾಲೆಗೆ ಹೋದವರಲ್ಲ. ಅನಕ್ಷರಸ್ತರು. ತಂದೆ ಅರೆ ಶಿಕ್ಷಿತರು. ಆದರೂ ತಂದೆ ಸ್ವಂತ ಶ್ರಮದಿಂದ ಕನ್ನಡವನ್ನು ಚೆನ್ನಾಗಿ ಓದಲು ಬರೆಯಲು ಕಲಿತಿದ್ದರು. ಅಧಿಕೃತ ದಾಖಲೆಗಳ ಪ್ರಕಾರ ನನಗೀಗ ೫೧ ವರ್ಷ. ನನಗಿಂತ ೫ ವರ್ಷ ದೊಡ್ಡವರಾದ ನನ್ನ ಅಣ್ಣನಿಗೆ ಮತ್ತು ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮ ಮನೆಗೆ `ಪ್ರಜಾವಾಣಿ’ ಪತ್ರಿಕೆಯನ್ನು ತರಿಸಲಾಗುತ್ತಿತ್ತು. ನಮ್ಮ ಕುಟುಂಬಕ್ಕೂ `ಪ್ರಜಾವಾಣಿ’ ಪತ್ರಿಕೆಗೂ ಸುಮಾರು ೫೦ ವರ್ಷಕ್ಕೂ ಮಿಕ್ಕಿದ ನಂಟು. ನಾನು ಯಾವ ಹಂತದಲ್ಲಿ ಪತ್ರಿಕೆ ಓದಲು ಶುರುಮಾಡಿದೆನೋ ನೆನಪಿಲ್ಲ. ಆದರೆ ನಾನು ಸಣ್ಣ ಬಾಲ್ಯದಲ್ಲೇ ಪತ್ರಿಕೆಯ ಖಾಯಂ ಓದುಗನಾಗಿದ್ದೆ.

ನನ್ನ ಮಾಮಾ ಆಗ `ಪ್ರಜಾಮತ’ ಎಂಬ ಕನ್ನಡ ವಾರಪತ್ರಿಕೆಯಲ್ಲಿ ನೌಕರರರಾಗಿದ್ದರು. ಗಾಂಧಿ ಬಜಾರ್‌ನಲ್ಲಿ `ಲಂಕೇಶ್ ಪ್ರತಿಕೆ’ ಕಚೇರಿ ಇರುವ ಜಾಗಕ್ಕೆ ಹತ್ತಿರದಲ್ಲೇ `ಪ್ರಜಾಮತ’ ವಾರಪತ್ರಿಕೆಯ ಕಾರ್ಯಾಲಯ ಇತ್ತು. ನನ್ನ ಮಾಮಾ ಸಂಪಾದಕೀಯ ವಿಭಾಗದಲ್ಲಿ ಇರಲಿಲ್ಲವಾದರೂ ಅವರಿಗೆ ಹಲವು ಪತ್ರಕರ್ತರು, ಸಾಹಿತಿಗಳು, ಕಲಾವಿದರ ಜೊತೆ ಸಂಪರ್ಕವಿತ್ತು. ಈ ಹಿನ್ನೆಲೆಯಲ್ಲೇ ಅವರು ನಮ್ಮ ಬಡಾವಣೆಯಲ್ಲೆಲ್ಲಾ `ಪ್ರಜಾಮತ ವೆಂಕಟೇಶ್’ ಅಂತಲೇ ಹೆಸರಾಗಿದ್ದರು. ನಮ್ಮ ಅಜ್ಜಿ ಮನೆಯಲ್ಲಿ ನನ್ನ ಮಾಮಾ ತಂದಿರಿಸಿದ ಪುಸ್ತಕಗಳ ಒಂದು ಪುಟ್ಟ `ಗ್ರಂಥಾಲಯ’ವೇ ಇತ್ತು. ವೈವಿಧ್ಯಮಯವಾದ ಸಾಕಷ್ಟು ಪುಸ್ತಕಗಳಿದ್ದವು. ಯೋಗದ ಕುರಿತ `ಬ್ರಹ್ಮಚರ್ಯವೇ ಜೀವನ’, ಸಾವರ್‌ಕರ್ ಅವರ ಆತ್ಮಕಥೆ `ಆತ್ಮಾಹುತಿ’, ಸ್ವಾಮಿ ಜಗದಾತ್ಮಾನಂದರ `ಬದುಕಲು ಕಲಿಯಿರಿ’, ನವಕರ್ನಾಟಕ ಪ್ರಕಾಶನದ `ಮನರಂಜನೆಗಾಗಿ ಭೌತಶಾಸ್ತç’, ಎಚ್.ಎಲ್.ನಾಗೇಗೌಡರ `ಪ್ರವಾಸಿ ಕಂಡ ಇಂಡಿಯಾ’, `ಮಕ್ಕಳ ರಾಮಾಯಣ’, `ಮಹಾಭಾರತ’, `ಪಂಚತ೦ತ್ರದ ಕಥೆಗಳು’, `ಏಕೆ ಈ ವಿಯೆಟ್ನಾಂ ಯುದ್ದ ?’, ಎಸ್.ಎಲ್. ಭೈರಪ್ಪನವರ `ದೂರ ಸರಿದರು’ ಕಾದಂಬರಿ, ಪೂರ್ಣ ಚಂದ್ರ ತೇಜಸ್ವಿಯವರ `ಕರ್ವಾಲೋ’ ಕಾದಂಬರಿ, ಎಂ.ಎನ್. ರಾಯ್ ಅವರ `ನವ ಮಾನವತಾವಾದ’, ಜಿಡ್ಡು ಕೃಷ್ಣಮೂರ್ತಿಯವರ ತತ್ವಗಳ ಕುರಿತ ಪುಸ್ತಕಗಳು.. ನನಗೆ ಈಗಲೂ ನೆನಪಿರುವ ಕೆಲವು ಪುಸ್ತಕಗಳು. ಪ್ರಜಾಮತ, ಸುಧಾ, ಮಯೂರ, ತುಷಾರ, ಕಸ್ತೂರಿ, ಉತ್ಥಾನ ಅಲ್ಲದೇ ಚಂದಮಾಮ, ಬಾಲಮಿತ್ರ ಮುಂತಾದ ಹಲವಾರು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು, ನಿಯತಕಾಲಿಕಗಳನ್ನೂ ಮಾಮ ನಿರಂತರವಾಗಿ ಮನೆಗೆ ತರುತ್ತಿದ್ದರು. ಒಂದು ಹಂತದ ನಂತರ ಅವರು ಕೆಲಸ ಮಾಡುತ್ತಿದ್ದ `ಪ್ರಜಾಮತ’ ಬಿಕ್ಕಟ್ಟಿಗೆ ಸಿಲುಕಿತು. ನಂತರ ಪತ್ರಿಕೆ ನಿಂತೂ ಹೋಯಿತು. ಈ ನಡುವೆ ೧೯೮೩ ರಲ್ಲಿ ಸಂತೋಷ ಕುಮಾರ್ ಗುಲ್ವಾಡಿಯವರ ಸಂಪಾದಕತ್ವದಲ್ಲಿ `ತರಂಗ’ ವಾರಪತ್ರಿಕೆ ಆರಂಭಗೊ೦ಡು ತುಂಬಾ ಜನಪ್ರಿಯವಾಯಿತು.

ನನಗೆ ಪುಸ್ತಕಗಳು ಮತ್ತು ಪತ್ರಿಕೆಗಳ ಓದಿನ ರುಚಿ ಹತ್ತಿತ್ತು. ಹಂತ ಹಂತವಾಗಿ ಬೆಳೆಯುತ್ತಾ ಬಂದ ಈ ಓದಿನ `ಚಟ’ ಅಳಿಸಲಾರದ ನೆರಳಿನಂತೆ ನನಗೆ ಅಂಟಿಕೊ೦ಡಿತು.
ಮೊದಮೊದಲು ಪ್ರಜಾವಾಣಿಯಲ್ಲಿ `ಪ್ರೇಂ ಕುಮಾರ್’ ಬರೆಯುತ್ತಿದ್ದ ವ್ಯಂಗ್ಯಚಿತ್ರ `ಚಿನಕುರಳಿ’, ಮೊದ್ದುಮಣಿ, `ಪ್ಯಾಂಟಮ್’ ಭಾನುವಾರದ ಕಾರ್ಟೂನ್ `ರಾಮನ್’ಗಳ ಓದುಗನಾಗಿದ್ದ ನಾನು, ಕ್ರಮೇಣ `ಕಿರಿಯರಿಗೆ ವಿಜ್ಞಾನ’, ಮಕ್ಕಳ ಪದ್ಯಗಳು ಸೇರಿದಂತೆ ಬೇರೆ ಬೇರೆ ಲೇಖನ-ಬರಹಗಳ ಕಡೆಗೂ ಹೊರಳಿದೆ.

ಆರನೇ ತರಗತಿಯಲ್ಲಿ ನಾನು ಕೆಲವು ಚುಟುಕುಗಳನ್ನು ಬರೆದಿದ್ದೆ. ಒಂದು, ತಾಯಿಯ ಮಹಿಮೆಯನ್ನು ಹೊಗಳುವಂತದ್ದು. ಮತ್ತೊಂದು ಕುವೆಂಪು ಅವರನ್ನು ಹೊಗಳುವಂತದ್ದು. ನಾನು ಆಗ ಕುವೆಂಪು ಅವರ ವಿಚಾರಗಳ ಕಡೆ ಆಕರ್ಷಿತನಾಗಿದ್ದೆನೆಂದು ಹೇಳಿದರೆ, ಅದು ತಪ್ಪಾಗುತ್ತದೆ. ಆದರೆ ನಾನು ಕುವೆಂಪು ಕುರಿತ ಹೊಗಳಿಕೆಗಳಿಂದ ಪ್ರಭಾವಿತವಾಗಿದ್ದೆ. ಕನ್ನಡ….ಕುವೆಂಪು, ಇಂಪು, ತಂಪು…. ಇಂತಹ ಪ್ರಾಸಪದಗಳಿಂದ ಕೊನೆಯಾಗುವ ನಾಲ್ಕು ಸಾಲಿನ ಚುಟುಕವೊಂದನ್ನು ಬರೆದಿದ್ದೆ.

ಏಳನೆ ತರಗತಿಯಲ್ಲಿ ಮಧುಸೂದನ ಎಂಬ ನನ್ನ ಸಹಪಾಠಿ ಇದ್ದ. ಅವನು ಅದೇ ಶಾಲೆಯ ಹಿಂದಿ ಟೀಚರ್ `ಬಿ.ಎಸ್.’ ಅವರ ಮಗ. ನಾನು ಬರೆದದ್ದನ್ನು ಅವನಿಗೆ ತೋರಿಸುತ್ತಿದ್ದೆ. ಅವನಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಅವನು ಬರೆದಿದ್ದ ಚಿತ್ರಗಳನ್ನು ನನಗೆ ತೋರಿಸುತ್ತಿದ್ದ. ಚಿತ್ರಕಲೆಯ ಬಗೆಗೆ ನನಗೂ ಒಂದಷ್ಟು ಆಸಕ್ತಿಯಿತ್ತು. `ಪ್ರಜಾಮತ’ದಲ್ಲಿ ಬರುತ್ತಿದ್ದ `ಹೆಬ್ಲೀಕರ್’ ಅವರ `ಚಿಂಗಾರಿ’ ಮುಂತಾದ ವ್ಯಂಗ್ಯಚಿತ್ರದ ಅಂಕಣ ನನ್ನ ಗಮನ ಸೆಳೆದಿದ್ದವು. ನಾನು ಅಂತಹವುಗಳಲ್ಲಿ ಕೆಲವನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ಈ ನಡುವೆ ನನ್ನಲ್ಲಿ ಕನ್ನಡದ ಗಾದೆಗಳು ಮತ್ತು ಒಗಟುಗಳನ್ನು ಸಂಗ್ರಹಿಸುವ ಆಸಕ್ತಿ ಮೂಡಿತು. ಮೈಸೂರು, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ ಮುಂತಾದ ಜಿಲ್ಲೆಗಳ ನಾನಾ ತಾಲ್ಲೂಕುಗಳ ಹಲವಾರು ಹಳ್ಳಿಗಳಲ್ಲಿ ನಮ್ಮ ಸಂಬAಧಿಗಳಿದ್ದಾರೆ. ಆ ನಮ್ಮ ಸಂಬAಧಿಕರು ನಮ್ಮ ಮನೆಗಳಿಗೆ ಬಂದಾಗ ಆಡುವ ಹಳ್ಳಿಗಾಡಿನ ಭಾಷೆಯ ವಿಶಿಷ್ಟ ಸೊಗಡು ನನ್ನ ಗಮನ ಸೆಳೆಯುತ್ತಿತ್ತು. ಸ್ವತಃ ನನ್ನ ತಾಯಿ ಮಾತನಾಡುವಾಗ ಬಳಸುವ ಗಾದೆಗಳ ಮಾತಿನ ಸೌಂದರ್ಯ, ಭಾಷೆಯ ಅದ್ಭುತ ಕಸುವು ನನ್ನ ಮನಸ್ಸನ್ನು ತಟ್ಟಿತ್ತು.

ಸಂಘದಲ್ಲಿ ಸಕ್ರಿಯನಾದ ಮೇಲೆ ನಾನು ಏಳನೇ ತರಗತಿಯಲ್ಲಿದ್ದಾಗ ಒಂದು ಕವನ ಬರೆದೆ. ಅದು ಏಸುಕ್ರಿಸ್ತನನ್ನು ಅವಹೇಳನ ಮಾಡುವ ಕವನ. ಕವನದ ಸಾರಾಂಶ ಮತ್ತು ಹಲವು ಸಾಲುಗಳು ನನಗೆ ಈಗಲೂ ಚೆನ್ನಾಗಿ ನೆನಪಿನಲ್ಲಿವೆ. ಏಸು ಕ್ರಿಸ್ತನು ಒಮ್ಮೆ ಬೆಂಗಳೂರಿಗೆ ಬಂದು, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೋಟೆಲ್‌ನಲ್ಲಿ ಊಟಮಾಡಿ ದುಡ್ಡುಕೊಡದೇ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಬುದ್ಧಿವಂತನಾದ ಹೋಟೆಲ್ ಮಾಣಿಯೊಬ್ಬನು ಯೇಸುವನ್ನು ಹಿಡಿದು ಹೊಟೇಲಿನಲ್ಲಿ ಅಕ್ಕಿ ರುಬ್ಬುವ ಕೆಲಸಕ್ಕೆ ಹಚ್ಚುವ ಕತೆ ಅದು. ಈ ಕತೆ ಕವನ ರೂಪದಲ್ಲಿತ್ತು. ನನಗೆ ನೆನಪಿದ್ದಂತೆ ಇದೇ ನಾನು ಬರೆದ ಮೊತ್ತ ಮೊದಲ ದೊಡ್ಡ ಕವನ.

ಕವನ ಬರೆದವನು ನಾನು ಸುಮ್ಮನಿರಲಿಲ್ಲ. ನನ್ನ ಚಿಕ್ಕಮ್ಮನ ಮನೆಯ ವಠಾರದಲ್ಲಿ ಒಂದು ಕ್ರಿಶ್ಚಿಯನ್ ಕುಟುಂಬ ಬಾಡಿಗೆಗೆ ಇತ್ತು. ಮಣಿ-ಮೇರಿಯಮ್ಮ ದಂಪತಿಗಳು ಅವರು. ಅವರ ಮಗ ಹೆಚ್ಚು ಕಡಿಮೆ ನನ್ನದೇ ವಯಸ್ಸಿನವ, ಯೇಸು ಅಂತ. ಅವನೊಂದಿಗೆ ನಾನು ಆಗೀಗ ಆಟಗಳನ್ನೂ ಆಡುತ್ತಿದ್ದೆ. ಅವನ ತಂದೆ ಮಣಿ ಬೆಂಗಳೂರು ನಗರ ಸಾರಿಗೆ (ಬಿಟಿಎಸ್)ನಲ್ಲಿ ಡ್ರೆöÊವರ್ ಆಗಿದ್ದರು. ಒಮ್ಮೆ ನಾನು ಸುಮ್ಮನಿರದೇ ಯೇಸು ಕುರಿತ ಕವನ ಇದ್ದ ಹಾಳೆಯೊಂದನ್ನು ಆತನಿಗೆ ಓದಲು ಕೊಟ್ಟೆ. ಅವನು ಬಹುಶಃ ಒಂದರ್ಧ ಕವನ ಓದಿರಬಹುದು. ಆ ಕವನವನ್ನು ನೋಡಿ ಅವನಿಗೆ ಏನನಿಸಿತೋ ನಾನು ಹೇಳಲಾರೆ. ಅವನ ಮುಖ ಕಪ್ಪಿಟ್ಟಿತು. ಆತ ಹಾಳೆಯನ್ನು ವಾಪಸ್ಸು ಕೊಟ್ಟು ಮುಖ ಚಿಕ್ಕದು ಮಾಡಿಕೊಂಡು ಬೇರೆ ಕಡೆಗೆ ಹೊರಟು ಬಿಟ್ಟ. ಕವನವನ್ನು ಪೂರ್ತಿ ಓದಲೂ ಇಲ್ಲ. ನನ್ನ ಮತ್ತು ಅವನ ಸ್ನೇಹದ ನಡುವೇ ಹೀಗೆ ನಾನೇ ಮುಜುಗರದ ಪರಿಸ್ಥಿತಿ ಸೃಷ್ಟಿಸಿಕೊಂಡೆ. ಅವನು ಬಹುಶಃ ಈ ವಿಷಯವನ್ನು ದೊಡ್ಡವರಿಗೆ ಹೇಳಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಯಾವುದೇ ರಂಪ ರಾಮಾಯಣ ಆಗಲಿಲ್ಲ. ಈ ನನ್ನ ಘನಾಂದಾರಿ ಕೆಲಸದ ಪರಿಣಾಮದಿಂದ ಹೆಚ್ಚಿಗೆ ಏನು ಅನಾಹುತ ಆಗದೇ ಅದು ಅಷ್ಟರಲ್ಲೇ ಮುಗಿಯಿತು ಅನ್ನುವುದು ನನ್ನ ಅದೃಷ್ಟ.

ಆರ್.ರಾಮಕೃಷ್ಣ.(ಗವಿಪುರಂ) ದಾಸರಹಳ್ಳಿ.
ಪತ್ರಕರ್ತ, ಬೆಂಗಳೂರು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!