ಸಮಾಜದ ಸಮಸ್ತ ಕ್ಷೇತ್ರಗಳ ಕಸುಬುಗಳ ಮತ್ತು ಕಾಯಕಗಳ ಶ್ರಮಜೀವಿಗಳನ್ನು ಕರೆದು ಅವರ ಬದುಕಿನ ಸುಖ-ದುಃಖಗಳನ್ನು ಕೇಳಿ ಅವರನ್ನು ಎದೆಗಪ್ಪಿಕೊಂಡು ಅವರ ಬದುಕಿನ ವಾಸ್ತವಗಳ ಹಿಂದಿನ ಕಾರಣವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಅವರನ್ನೆಲ್ಲ ಒಟ್ಟಾಗಿಯೇ ಹೊಸ ಮಾರ್ಗದಲ್ಲಿ ನಡೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು.
ಸತ್ಕಾರಣವಾಗಿ ಹತ್ತಾರು ವರ್ಷಗಳಲ್ಲಿಯೆ ಸಾವಿರ ಸಾವಿರ ಸಂಖ್ಯೆಯ ಶ್ರಮಜೀವಿಗಳು ಬಸವಣ್ಣನವರ ಸುತ್ತ ಅಣಿ ನೆರದಿದ್ದು ಜಾಗತಿಕ ಮಾನವ ನಾಗರಿಕತೆಯ ಚರಿತ್ರೆಯಲ್ಲೆಯೇ ಅಪೂರ್ವವಾದದ್ದು ಮತ್ತು ಅನನ್ಯವಾದುದು. ಹೀಗೆ ಹೊಸ ಮಾರ್ಗಾನುಯಾಯಿಗಳಾಗಿ ನವ ಸಮಾಜದ ನಿರ್ಮಾಣದ ಅಭಿಲಾಷೆಗಳಾಗಿ ಕಲ್ಯಾಣದಲ್ಲಿ ಸಮಾವೇಶಗೊಂಡ ವಿವಿಧ ಕಾಯಕಜೀವಿಗಳು ಶೋಷಣೆ ರಹಿತವಾದ ಸಮಸಮಾಜದ ಕನಸು ಕಂಡು ಅದನ್ನು ಆಗುಮಾಡಲು ಪ್ರತಿದಿನ ಸಾಯಂಕಾಲ ತಮ್ಮ ತಮ್ಮ ದಿನದ ಕಾಯಕಗಳನ್ನು ಪೂರೈಸಿ ಬಸವಣ್ಣನವರ ಮನೆಯಲ್ಲೋ ಅಥವಾ ಇತರ ಶರಣರ ಅಂಗಳದಲ್ಲಿಯೋ ತಾತ್ವಿಕ ಚರ್ಚೆಗಾಗಿ ಒಂದೇಡೆ ಸೇರುತ್ತಿದ್ದರು.
ಹೀಗೆ ಸೇರುತ್ತಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಕ್ರಮೇಣ ಹೆಚ್ಚಾಗಿದ್ದುದ್ದರ ಕಾರಣದಿಂದಾಗಿ ಅವರು ತಮ್ಮ ಸಾಯಂಕಾಲದ ಚರ್ಚೆಗೆ ಎಲ್ಲರಿಗೂ ಅನುಕೂಲಕರವಾದ ಎಲ್ಲಿವೋ ಒಂದು ಪ್ರಶಸ್ತವಾದ ಸ್ಥಳ ಹುಡುಕಿಕೊಂಡು ಅಲ್ಲಿಯೇ ಒಂದು ವಿಶಾಲವಾದ ಚಪ್ಪರ ಹಾಕಿ ಅದರ ಕೆಳಗೆ ಒಂದು ಕಡೆ ಪುಟ್ಟ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಅಂದಿನ ಚರ್ಚಾ ಸಮಾವೇಶದ ಅಧ್ಯಕ್ಷತೆ ವಹಿಸುವರಿಗೆ ಅಲ್ಲಿ ಅವಕಾಶ ಕಲ್ಪಿಸಲಾಗುತ್ತಿತ್ತು.
ಅಲ್ಲಮಪ್ರಭುನಂತಹ ವಿರಳ ಜ್ಞಾನಿ ಆನುಭವಿಕ ಚರಮಸ್ಥಿತಿಗೆ ಮುಟ್ಟಿದ ದಾರ್ಶನಿಕ ಕಲ್ಯಾಣಕ್ಕೆ ಬಂದನಂತರ ಅವರಿಗೆ ಖಾಯಂ ಅಧ್ಯಕ್ಷರನ್ನಾಗಿ ಮಾಡಿ. ಅದಕ್ಕೆ ಅನುಭವ ಮಂಟಪ ಎಂಬ ಹೆಸರಿಟ್ಟು ಕರೆಯತೋಡಗಿದರು.ಅಲ್ಲಿ ಸಮಾವೇಶಗೊಳ್ಳುತ್ತಿದ್ದ ಕಾಯಕಜೀವಿಗಳ ಬದುಕಿನ ಜ್ವಲಂತ ಅನುಭವಗಳ ಮಥನ ನಡೆಸಿ ಅದು ಅವರವರ ವಚನಗಳಲ್ಲಿ ರೂಪಗೊಳ್ಳುವಂತೆ ಅನುವು ಮಾಡಿಕೊಟ್ಟರು. ಅಲ್ಲಿನ ಚರ್ಚೆಯ ಮೂಲಕ ಹೊರ ಹೊಮ್ಮಿದ ಚಿಂತನೆಗಳು ಸಕಲ ಶರಣರ ಸನ್ಮಾರ್ಗದರ್ಶನದ ಅನುಭಾವವಾಗಿ ಮಾರ್ಪಟ್ಟಿದ್ದಕ್ಕೆ ಅನೇಕರ ವಚನಗಳಲ್ಲಿಯೇ ನಮಗೆ ಸಾಕ್ಷಾಧಾರಗಳು ದೊರೆಯುತ್ತವೆ.
ಶರಣರು ಕಾಯಕಜೀವಿಗಳು,ಅವರು ಸ್ಥಾವರ ನಿರಾಕರಿಸಿ ಜಂಗಮಕ್ಕೆ ಆದ್ಯತೆ ನೀಡಿದವರು. ಅವರು ಒಂದು ಸಾಧಾರಣ ಚಪ್ಪರದ ಕೆಳಗೆ ಕೂತು ಚರ್ಚೆ ನಡೆಸುತ್ತಿದ್ದರು ವಿನಹಃ ಸುಸಜ್ಜಿತವಾಗಿ ಭವ್ಯವಾದ ಕಟ್ಟಣ ಕಟ್ಟಲು ಅಸಾಧ್ಯ.ಅನುಭವ ಮಂಟಪದ ಭವ್ಯ ಕಲ್ಪನೆ 15ನೆಯ ಶತಮಾನದ ಶೂನ್ಯ ಸಂಪಾದನೆಕಾರರ ಸೃಷ್ಟಿಯೆಂಬುದು ನಿರ್ವಿವಾದ.
ಅನುಭವ ಮಂಟಪದ ನಿರ್ಮಾಪಕರಾದ ಬಸವಾದಿಗರು ಸಾಮಾನ್ಯ ಕಾಯಕದಲ್ಲಿ ನಿರತರಾಗಿದ್ದವರು.ಒಂದು ಭವ್ಯವಾದ ಕಟ್ಟಡ ಕಟ್ಟಲು ವಾಸ್ತವವಾಗಿ ಅವರಿಂದ ಅಸಾಧ್ಯದ ಕೆಲಸ.ಮೇಲಾಗಿ ಅವರು ಸ್ಥಾವರ ಕಟ್ಟಡಗಳಲ್ಲಿ ನಂಬಿಕೆ ಇಟ್ಟವರಲ್ಲ.ಅನುಕೂಲಕ್ಕೆಂದು ನಿರ್ಮಿಸಿಕೊಂಡಿದ್ದ ಸಾಧಾರಣ ಚಪ್ಪರಕ್ಕೂ ಪ್ರತಿಕ್ರಾಂತಿಕಾರರ ಅಂದರೆ ಶರಣಕ್ರಾಂತಿಯ ವಿರೋಧಿಗಳಾದ ವೈದಿಕರ ಕೈ ಮೇಲಾದಾಗ ಬಸವಾದಿಗರ ತಾತ್ವಿಕ, ವೈಚಾರಿಕ ಮತ್ತು ಸಂಘರ್ಷದ ಸಂಕೇತವಾಗಿದ್ದ ಆ ಚಪ್ಪರಕ್ಕೂ ಕೊಳ್ಳಿ ಇಟ್ಟು ಬೂದಿ ಮಾಡಿದರು.
ಬಸವಾದಿಗರ ಲಕ್ಷಾಂತರ ವಚನಗಳನ್ನು ಸುಟ್ಟು,ಬರ್ಬರವಾಗಿ ಸಾವಿರಾರು ಶರಣರನ್ನ ಹತ್ಯಾಕಾಂಡ ಮಾಡಿದ ಮತ್ತು ಚಪ್ಪರದ ಅನುಭವ ಮಂಟಪವನ್ನು ಬೆಂಕಿಗೆ ಆಹುತಿ ಮಾಡಿದ ಅಂದಿನ ವೈದಿಕರ ಚಿಂತನೆಗಳನ್ನು ಇಂದು ಬಳುವಳಿ ಮಾಡಿಕೊಂಡಿರುವ ವೀರಶೈವವಾದಿಗಳು ತಮ್ಮ ಅಳಿವು-ಉಳಿವಿಗಾಗಿ ಬಸವಣ್ಣನವರಿಗೆ ಗಂಟುಬಿದ್ದು, ಖಾಸಗಿ ವ್ಯಕ್ತಿಯ ಒಡೆತನದಲ್ಲಿರುವ ಇಂದಿನ ಪೀರ್ ಪಾಷಾ ಬಂಗಲೆಯೇ ಅಂದಿನ ಮೂಲ ಅನುಭವ ಮಂಟಪ ಎಂಬ ಕಪೋಲಕಲ್ಪಿತ ಸಂಗತಿಯನ್ನು ತೇಲಿಬಿಟ್ಟು, ಕಲ್ಯಾಣದ ನೆಲದಲ್ಲಿ ಕೋಮುವಾದದ ಬೀಜ ಬಿತ್ತಿ,ಸಮಾಜದ ಸೌಹಾರ್ದತೆ ಹಾಳು ಮಾಡುವುದಕ್ಕಾಗಿಯೇ ಈ ‘ ವೀರಶೈವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎನ್ನುವ ನಡಿಗೆ!
ಅರ್ಧ ವೀರಶೈವವಾದಿಗಳಾದ ಕೆಲ ಹಾಫ್ ಲಿಂಗಾಯತರು ವೀರಶೈವರ ಕುತಂತ್ರಕ್ಕೆ ಬಲಿಯಾಗಿ ಕಲ್ಯಾಣದ ಪೀರ್ ಪಾಷಾ ಬಂಗಲೆಯೇ ವಶಪಡಿಸಿಕೊಂಡು ಅದನ್ನು ಕೆಡವಿ ಆ ಸ್ಥಳದಲ್ಲೇ ಭವ್ಯವಾದ ನೂತನ ಅನುಭವ ಮಂಟಪ ಕಟ್ಟಬೇಕು ಅಥವಾ ಇದು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅಧಿನ ಪಡೆದು ಇದೆ ಪ್ರಾಚ್ಯ ಅನುಭವ ಮಂಟಪವೆಂದು ಪ್ರವಾಸೋದ್ಯಮಿಗಳಿಗೆ ತೋರಿಸಲಾದರೂ ಇದನ್ನು ವಶಪಡಿಸಿಕೊಳ್ಳಬೇಕು ಎಂದು ವಿತಂಡವಾದ ಮಾಡುತ್ತಿರುವ ಹಾಸ್ಯಾಸ್ಪದವಾಗಿದೆ.ಇವರಿಗೂ ಮತ್ತು ತಮ್ಮ ರಾಜಕೀಯ ಹಿಡನ್ ಅಜೆಂಡಾವನ್ನು ಸಾಕಾರಗೊಳಿಸಲು ಅಯೋಧ್ಯೆಯಲ್ಲಿ ಮಸೀದಿ ಧ್ವಂಸ ಮಾಡಿ, ಆ ಸ್ಥಳದಲ್ಲಿ ಕಾಲ್ಪನಿಕ, ಪೌರಾಣಿಕ ವ್ಯಕ್ತಿಯ ಮಂದಿರ ಕಟ್ಟುತ್ತಿರುವ ಸಂಘಪರಿವಾರದವರಿಗೂ ವ್ಯತ್ಯಾಸವೇನು ಉಳಿಯುತ್ತದೆ? ಅಷ್ಟಕ್ಕೂ ಈಗಿನ ಪೀರ್ ಪಾಷಾ ಬಂಗಲೆಯೇ ಮೂಲ ಅನುಭವ ಮಂಟಪ ಎಂದು ವಾದಿಸಲು ವೀರಶೈವರ ಕಪೋಲಕಲ್ಪಿತ ಗಾಳಿ ಸುದ್ದಿಯ ಮಾತುಗಳು ಹೊರತು ಪಡಿಸಿದರೆ, ಇದೆ ಸ್ಥಳದಲ್ಲಿ ಮೂಲ ಅನುಭವ ಮಂಟಪ ಇತ್ತೆಂದು ಸಿದ್ದಮಾಡಿ ತೋರಿಸಿದ ಅಧ್ಯಯನ-ಸಂಶೋಧನಾ ವರದಿಗಳು ಮತ್ತು ಇತರೆ ದಾಖಲೆಗಳು ಏನಾದರೂ ಇವೆಯೇ? ಏನು ಇಲ್ಲ.
ಆದರಿಂದ ಈಗ ನಾವು ಅನುಭವ ಮಂಟಪದ ಮೂಲ ಸ್ಥಳ ಹುಡುಕುವುದು ನಿರರ್ಥಕ. ಅದು ಬಸವಾದಿಗರ ಜಂಗಮ ಪರಿಕಲ್ಪನೆಗೆ ವಿರುದ್ಧವಾದ ನಡೆ.ಜತೆಗೆ ಶರಣರು ನಿರ್ಮಿಸಿದ ನೀಜವಾದ ಅನುಭವ ಮಂಟಪ ಸಹಸ್ರ ಮುಖಿಯಾಗಿ ಪ್ರತಿಯೊಬ್ಬ ಶರಣರ ಹೃನ್ಮನಗಳಲ್ಲಿತ್ತು.ಶರಣ ತತ್ವ-ಚಿಂತನೆ ನಿಂತ ನೀರಲ್ಲ.ಸ್ಥಗಿತಗೊಂಡ ಪ್ರವಾಹವಲ್ಲ.ಅದು ನಿರಂತರ ಚಲನಶೀಲವಾದದ್ದು. ಆದರಿಂದ ಅದರ ಸ್ಪೂರ್ತಿಯ ಪ್ರಭಾವದ ಅಡಿಯಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದೇವರ ನೇತೃತ್ವದಲ್ಲಿ ಇಂದು ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಗೊರುಚ ನೇತೃತ್ವದ ಅಧ್ಯಯನ ತಂಡ ಗೊತ್ತು ಪಡಿಸಿದ ಸ್ಥಳ ಪ್ರಶಸ್ತವಾಗಿದೆ.
ಈ ಸ್ಥಳದಲ್ಲೇ ಭವ್ಯವಾದ ಅನುಭವ ಮಂಟಪ ನಿರ್ಮಿಸುತ್ತಿರುವದು ಸ್ವಾಗತಾರ್ಹವಾಗಿದೆ.ಪ್ರಸ್ತುತ ಕಲ್ಯಾಣದಲ್ಲಿರುವ ಅನುಭವ ಮಂಟಪ ನಿರ್ಮಿಸಲು ಭಾಲ್ಕಿಯ ಚನ್ನಬಸವ ಪಟ್ಟದೇವರು ತಮ್ಮ ಬೆವರು ಸುರಿಸಿ ಸ್ವತಃ ಕಲ್ಲು ಮಣ್ಣು ಗಾರೆಹೊತ್ತು ಕಟ್ಟಿದ್ದು ಇತಿಹಾಸ. ಅದೆ ಪರಿಸರದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪ ಸಮಾನತೆ ಮತ್ತು ಸೌಹಾರ್ದತೆಯ ಸಂಕೇತವಾಗಲಿ.
ಕೊನೆ ಮಾತು: ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎನ್ನುವ ಕಪಟ ಘೋಷಣೆಯೊಂದಿಗೆ ಜೂನ್ 12 ಕ್ಕೆ ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ವೀರಶೈವ ಸ್ವಾಮೀಜಿಗಳ ಮೂಲ ಉದ್ದೇಶ ಲಿಂಗಾಯತ ಯುವಕರನ್ನು ದಾರಿ ತಪ್ಪಿಸಿ, ಅವರನ್ನು ಕೋಮುವಾದದ ಬಲೆಗೆ ಸಿಕ್ಕಿಸುವುದು ಇವರ ಹಿಡನ್ ಅಜೆಂಡಾವಾಗಿದೆ. ಜತೆಗೆ ಬಸವಕಲ್ಯಾಣದಲ್ಲಿ ಭವ್ಯವಾದ ಅನುಭವ ಮಂಟಪ ಕಟ್ಟಡ ಆರಂಭವಾಗುವ ಹಂತದಲ್ಲಿದೆ, ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎನ್ನುವುದೇ ಇವರ ಹಾರಾಟ-ಚೀರಾಟದ ಹಿಂದಿರುವ ಮೂಲ ಉದ್ದೇಶವಾಗಿದೆ ಅಷ್ಟೇ,ಇದರ ಹೊರತಾಗಿ ಅನುಭವ ಮಂಟಪದ ಬಗ್ಗೆ ಯಾವುದೇ ಕಾಳಜಿ, ಮಣ್ಣು-ಮಸಿ ಯಾವುದು ಇಲ್ಲ!
ಇದ್ದಕ್ಕಿದ್ದಂತೆ ಈ ‘ವೀರಶೈವ ಲಿಂಗಾಯತ ಸಂಘಟನಾ ವೇದಿಕೆ’ ಹುಟ್ಟು ಹಾಕಿದ್ದೇಕೆ? ಬಸವಾದಿ ಶರಣರ ಬಗ್ಗೆ, ಅನುಭವ ಮಂಟಪದ ಬಗ್ಗೆ ಮತ್ತು ಇಡೀ ಶರಣರ ಸ್ಮಾರಕಗಳ ಬಗ್ಗೆ ವೀರಶೈವ ಸ್ವಾಮೀಜಿಗಳಿಗೆ ಎಂದು ಇಲ್ಲದ ಕಾಳಜಿ ಇಂದೇಕೆ?
ಎಂ.ಎಂ.ಕಲಬುರ್ಗಿ ಹತ್ಯಕಾಂಡ ಆದಾಗ ಇವರೆಲ್ಲರೂ ಯಾವ ಹುತ್ತದಲ್ಲಿ ಅಡಗಿದರು? ಎನ್ನುವುದನ್ನು ಇಂದು ಪ್ರತಿಯೊಬ್ಬ ಲಿಂಗಾಯತನು ಇವರನ್ನು ಕೇಳಬೇಕು.
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ದೊಡ್ಡ ತಡೆಗೋಡೆ ಆಗಿ ಇವತ್ತು ಬುದ್ಕನೆ ಅನುಭವ ಮಂಪಟದ ಜಪ ಮಾಡುತ್ತಿರುವುದರ ಹಿಂದೆ ಕುತಂತ್ರ ಅಡಗಿದೆ ಅಷ್ಟೇ. ಪೀರ್ ಬಾಷಾ ಬಂಗಲೆಗೆ ದುರ್ಬೀನ ಹಾಕಿ ಹುಡುಕಿದರೂ ಮೂಲ ಅನುಭವ ಮಂಟಪದ ಒಂದೇ ಒಂದು ಸಣ್ಣ ಕುರುಹು ಸೀಗುವುದಿಲ್ಲ!