ದ ಪಾಲಿಟಿಕ್

ಮಾತೆ ರಮಾಬಾಯಿಯವರನ್ನು ನೆನೆಯುತ್ತಾ

ದ ಪಾಲಿಟಿಕ್

ದ ಪಾಲಿಟಿಕ್

ಚಿಂತಕಿ ಶರ್ಮಿಳಾ ರೇಗೆ ಅಂಬೇಡ್ಕರ್ ಅವರ ‘Against the Madness of Manu’ ಕೃತಿಗೆ ಬರೆದಿರುವ ದೀರ್ಘ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರ ಕುರಿತು ಮೇಲ್ಜಾತಿಯ ಸ್ತ್ರೀವಾದಿಗಳು ಹೊಂದಿರುವ ಅಸಡ್ಡೆ ಎಂತಹದ್ದು ಎನ್ನುವುದಕ್ಕೆ ಒಂದು ಉದಾಹರಣೆ ನೀಡುತ್ತಾರೆ. ಖ್ಯಾತ ಮರಾಠಿ ಲೇಖಕಿ ಊರ್ಮಿಳಾ ಪವಾರ್ ಭಾಗವಹಿಸಿದ್ದ ಒಂದು ಸಭೆಯಲ್ಲಿ ಮೇಲ್ಜಾತಿಯ ಸ್ತ್ರೀವಾದಿಯೊಬ್ಬರು ಅಂಬೇಡ್ಕರ್ ಅವರು ತಮ್ಮ ಹೆಂಡತಿಯನ್ನು ಶಿಕ್ಷಿತಳನ್ನಾಗಿ ಮಾಡಲಿಲ್ಲ ಇನ್ನು ಸ್ತ್ರೀವಾದಕ್ಕೆ ಏನು ಕೊಡುಗೆ ನೀಡಬಲ್ಲರು ಎಂದು ತಮಾಷೆ ಮಾಡುತ್ತಾರೆ. ಇದರ ಬಗ್ಗೆ ತಕರಾರು ಎತ್ತುವ ಊರ್ಮಿಳಾ ಪವಾರ್ ಅವರನ್ನು ಗೇಲಿ ಮಾಡುತ್ತಾರೆ. ಅಂಬೇಡ್ಕರ್ ಅವರನ್ನು ಗಾಂಧಿ, ನೆಹರು ಅಂತವರ ಜೊತೆ ಹೋಲಿಸಿ ಅವರ ಪತ್ನಿಯರಂತೆಯೇ ಅಂಬೇಡ್ಕರ್ ರಮಾಬಾಯಿಯವರನ್ನು ಶಿಕ್ಷಿತರನ್ನಾಗಿ ಮಾಡಬಹುದಿತ್ತು, ಸಾರ್ವಜನಿಕ ಬದುಕಿಗೆ ತರಬಹುದಿತ್ತು ಎನ್ನುವ ಪ್ರಶ್ನೆಯನ್ನು ಅಂಬೇಡ್ಕರ್ ಅವರನ್ನು ಟೀಕಿಸುವವರು ಎತ್ತುತ್ತಾರೆ.

ಗಾಂಧಿ, ನೆಹರು ಅವರಿಗಿದ್ದಂತಹ privileged ಹಿನ್ನಲೆಗೂ ಅಂಬೇಡ್ಕರ್ ಅವರಿಗಿದ್ದ ಸಾಮಾಜಿಕ ಮತ್ತು ಆರ್ಥಿಕ ಹಿನ್ನಲೆಗೂ ಇದ್ದ ವ್ಯತ್ಯಾಸ ಗುರುತಿಸಲು ಸಾಧ್ಯವಾಗದೆ ಹೋದಾಗ ಈ ರೀತಿಯ ಬಿಡು ಬೀಸಾದ ಹೇಳಿಕೆ ಕೊಡಲು ಸಾಧ್ಯ. ರಮಾಬಾಯಿಯವರು ಶಿಕ್ಷಿತರಾಗುವುದಕ್ಕೆ ಸಾಧ್ಯವಾಗದಿರಬಹುದು ಆದರೆ ಅಂಬೇಡ್ಕರ್ ಅವರು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡಿ ಪದವಿಗಳನ್ನು ಪಡೆದಿದ್ದರ ಹಿಂದೆ, ಅವರ ಓದಿನ ಜ್ಞಾನ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟಿದ್ದರ ಹಿಂದೆ ರಮಾಬಾಯಿಯವರ ತ್ಯಾಗ, ಪರಿಶ್ರಮ ಇದೆ.

ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅಪಾರ ಕಷ್ಟಗಳ ನಡುವೆ ಬೆಳೆದ ರಮಾಬಾಯಿ ಅಂಬೇಡ್ಕರ್ ಅವರನ್ನು ವಿವಾಹವಾದ ನಂತರವೂ ಕಷ್ಟಗಳಿಂದ ವಿಮುಕ್ತರಾಗುವುದಿಲ್ಲ. ಅಂಬೇಡ್ಕರ್ ಅವರು ಉನ್ನತ ವ್ಯಾಸಾಂಗಕ್ಕಾಗಿ ವಿದೇಶಗಳಿಗೆ ಹೋದಾಗ ತಾವು ಕಷ್ಟಪಟ್ಟು ದುಡಿದು ಸಂಸಾರ ನಡೆಸುವುದರ ಜೊತೆಗೆ ಅಂಬೇಡ್ಕರ್ ಅವರ ಓದಿಗೆ ಹಣ ಕಳಿಸುತ್ತಾರೆ. ಆರಂಭದಲ್ಲಿ ಅಂಬೇಡ್ಕರ್ ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ಹೋಗುವುದು ತಮ್ಮ ಸಂಸಾರವನ್ನು ಕಷ್ಟಕ್ಕೆ ತಳ್ಳುತ್ತದೆ ಎಂದು ಚಿಂತೆಗೀಡಾಗುವ ರಮಾಬಾಯಿ ಅಂಬೇಡ್ಕರ್ ಅವರು ಉನ್ನತ ವ್ಯಾಸಂಗ ಮಾಡಬೇಕಾದ ಅಗತ್ಯವನ್ನು ಅರ್ಥ ಮಾಡಿಕೊಂಡು ಅವರ ಬೆನ್ನಿಗೆ ನಿಲ್ಲುತ್ತಾರೆ.

ಅಂಬೇಡ್ಕರ್ ಅವರ ಓದಿಗಾಗಿ ರಮಾಬಾಯಿಯವರು ಪಟ್ಟ ಪರಿಶ್ರಮ ಅವರಿಬ್ಬರ ವೈಯುಕ್ತಿಕ ಬದುಕಿಗೆ ಯಾವುದೇ ದೊಡ್ಡ ಲಾಭವನ್ನು ಕೊಡಲಿಲ್ಲ. ಯಾಕೆಂದರೆ ಅಂಬೇಡ್ಕರ್ ಉನ್ನತ ವ್ಯಾಸಂಗ ಪಡೆದು ಭಾರತಕ್ಕೆ ವಾಪಸ್ಸಾಗಿ ಸರ್ಕಾರದ ಕೆಲಸ ಹಿಡಿಯದೆ ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡರು. ಉನ್ನತ ಶಿಕ್ಷಣ ಪಡೆದರೆ ದೊಡ್ಡ ಹುದ್ದೆ ಪಡೆದು ಸುಖಕರ ಜೀವನ ನಡೆಸಬಹುದು ಅನ್ನುವುದಕ್ಕಾಗಿ ಅಂಬೇಡ್ಕರ್ ಓದಿದವರೂ ಅಲ್ಲ. ಅಂಬೇಡ್ಕರ್ ತಮ್ಮ ಸರ್ವಸ್ವವನ್ನೂ ಈ ದೇಶದ‌ ದಲಿತ ದಮನಿತರಿಗಾಗಿ ಮುಡಿಪಾಗಿಟ್ಟವರು. ರಮಾಬಾಯಿಯವರಂತಹ ಪತ್ನಿ ಸಿಗದಿದ್ದರೆ ಅಂಬೇಡ್ಕರ್ ವಿದೇಶದಲ್ಲಿ ಓದುವುದಕ್ಕಾಗಲೀ ಅಷ್ಟು ದೊಡ್ಡ ಸಾಮಾಜಿಕ ಹೋರಾಟ ರೂಪಿಸುವುದಕ್ಕಗಾಲಿ ಸಾಧ್ಯವಿತ್ತೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. 
ರಮಾಬಾಯಿ ಶಾಲೆಗೆ ಹೋಗದಿದ್ದರೂ ಓದು , ಬರಹ ಕಲಿತಿದ್ದರು.

ಅಂಬೇಡ್ಕರ್ ತಾವು ಸಂಘಟಿಸುತ್ತಿದ್ದ ಹೋರಾಟಗಳಲ್ಲಿ ಮಹಿಳೆಯರನ್ನು ಮುನ್ನಡೆಸುವಂತೆ ರಮಾಬಾಯಿಯವರನ್ನು ಕೇಳಿಕೊಂಡರೂ ಅವರು ಮುನ್ನಲೆಗೆ ಬರಲಿಲ್ಲ. ಬದಲಾಗಿ ಸಾಮಾನ್ಯ ಕಾರ್ಯಕರ್ತೆಯಾಗಿ ಹೋರಾಟಗಳಲ್ಲಿ ಜೊತೆಯಾಗುತ್ತಿದ್ದರು. ಅಂಬೇಡ್ಕರ್ ಅವರಷ್ಟು ಶಿಕ್ಷಿತೆಯಲ್ಲದಿದ್ದದ್ದು ಅವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಕೊರತೆಯಾಗಿರಲಿಲ್ಲ‌. ಅಂಬೇಡ್ಕರ್ ಮತ್ತು ರಮಾಬಾಯಿಯರ ಸಂಬಂಧ ಪರಸ್ಪರ ಗೌರವ, ಘನತೆ ಮತ್ತು ಪ್ರೀತಿ ತುಂಬಿದ್ದ ಅರ್ಥಪೂರ್ಣವಾದ ಸಂಬಂಧ‌. 

ಬಾಲ್ಯದಿಂದ ಕಷ್ಟಗಳಲ್ಲೆ ಬೆಳೆದಿದ್ದರಿಂದ ಸೊರಗಿದ್ದ ರಮಾಬಾಯಿ ಅನಾರೋಗ್ಯಕ್ಕೆ ಒಳಗಾದರು. ಜೊತೆಗೆ ತಮ್ಮ ನಾಲ್ಕು ಮಕ್ಕಳ ಸಾವು ರಮಾಬಾಯಿಯವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಅವರ ಕಡೆಯ ದಿನಗಳಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಧಾರವಾಡದಲ್ಲಿ ಕೆಲದಿನ ತಂಗಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾದ ರಮಾಬಾಯಿಯವರಿಗೆ ನೀಡಿದ ಯಾವ ಚಿಕಿತ್ಸೆಯೂ ಫಲಕಾರಿಯಾಗದೆ 1935ರ  ಮೇ 27 ರಂದು ತೀರಿಕೊಳ್ಳುತ್ತಾರೆ.ರಮಾಬಾಯಿಯವರು ತೀರಿಕೊಂಡಾಗ ಅಂಬೇಡ್ಕರ್ ವಾರಗಟ್ಟಲೆ ಮಗುವಿನಂತೆ ಅತ್ತಿದ್ದನ್ನು ದನಂಜಯ್ ಕೀರ್ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

 ಅಂಬೇಡ್ಕರ್ ಅವರ ಹೋರಾಟ ಈ ದೇಶದ ದಮನಿತರ ಬದುಕಿಗೆ ಎಷ್ಟು ಅಗತ್ಯ ಎನ್ನುವುದನ್ನು ಅರ್ಥ ಮಾಡಿಕೊಂಡ ರಮಾಬಾಯಿ ತಮ್ಮ ಇಡಿ ಬದುಕನ್ನು ಅಂಬೇಡ್ಕರ್ ಅವರಿಗೆ ಹೆಗಲಾಗುವುದಕ್ಕೆ ಮೀಸಲಿಟ್ಟರು. ಅಂಬೇಡ್ಕರ್ ಕಂಡ ಸಮಾನತೆಯ ಕನಸಿನಲ್ಲಿ ಪಾಲುದಾರರಾಗಿ ಬದಲಾದರು.ಅಂಬೇಡ್ಕರ್ ಅವರ ಬದುಕಿನಲ್ಲಿ ದೊಡ್ಡ ಪಾತ್ರ ವಹಿಸಿದ್ದರಿಂದಲೇ ಅವರನ್ನು ದಲಿತ ಸಮುದಾಯದ ತಾಯಿಯ ಸ್ಥಾನಕ್ಕೆ ಏರಿಸಿತು. ಅವರ ತ್ಯಾಗ, ಪರಿಶ್ರಮ ಮತ್ತು ಸಮುದಾಯದ ಕುರಿತ ಕಾಳಜಿ ಹಾಡು, ಲಾವಣಿಗಳಾಗಿ ಮಹಾರಾಷ್ಟ್ರದ ಜನಪದದ ಭಾಗವಾಗಿದೆ.

ಮಹಾರಾಷ್ಟ್ರದ ಯಾವುದೋ ಒಂದು ಬಡಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು ದೇಶಕ್ಕೆ ಅಂಬೇಡ್ಕರ್ ಅಂತಹ ದೊಡ್ಡ ವಿಮೋಚಕನನ್ನು ರೂಪಿಸಿಕೊಟ್ಟು ಭಾರತದ ಸಮಾಜದಲ್ಲಿ ದೊಡ್ಡ ಚಲನೆ ತಂದು ಕೊಟ್ಟು ದೇಶದ ದಲಿತ ಸಮುದಾಯದ ತಾಯಿಯಾದರು.
ಇವರ ತ್ಯಾಗ, ಪರಿಶ್ರಮ, ಬದ್ಧತೆಗೆ ದೇಶದ ದಲಿತ ದಮನಿತ ಸಮುದಾಯ ಯಾವತ್ತೂ ಋಣಿಯಾಗಿರುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!