ದ ಪಾಲಿಟಿಕ್

ಲಿಂಗಾಯತರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿದೆಯೇ? ಬಿಜೆಪಿ ತಲೆಮೇಲೆ ಹೊತ್ತು ಮೆರೆಸಿದೆಯೇ?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ರಾಜ್ಯದ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಶಿವಮೊಗ್ಗೆಯ ಬಹಿರಂಗಸಭೆಯಲ್ಲಿ ಹೇಳಿ ಹೋದರು.ಹೌದೇ, ಲಿಂಗಾಯತರನ್ನು ಕಾಂಗ್ರೆಸ್ ನಿಜವಾಗಿಯೂ ಕೆಟ್ಟದಾಗಿ ನಡೆಸಿಕೊಂಡಿದೆಯೇ? ಪ್ರತಿಯಾಗಿ ಬಿಜೆಪಿ ಲಿಂಗಾಯತರನ್ನು ಸಕಲ ಮರ್ಯಾದೆಗಳೊಂದಿಗೆ ಸತತ ಅಧಿಕಾರ ಗದ್ದುಗೆಯಲ್ಲಿ ಕುಳ್ಳಿರಿಸಿ ಮೆರೆಸಿದೆಯೇ? ವಾಸ್ತವಾಂಶಗಳು ಏನು ಹೇಳುತ್ತವೆ?

ಮುಖ್ಯವಾಗಿ ಮುಖ್ಯಮಂತ್ರಿ ಸ್ಥಾನದ ಅವಧಿಯ ಲೆಕ್ಕ ಹಿಡಿಯುವುದಾದರೆ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಈ ಹುದ್ದೆ ದಕ್ಕಿರುವ ಒಟ್ಟು ಅವಧಿ ಹದಿನೈದು ವರ್ಷಗಳು. ರಾಜ್ಯದಲ್ಲಿ ಅಧಿಕಾರ ಹಿಡಿಯಲು 2008ರ ತನಕ ಕಾಯಬೇಕಾದ ಬಿಜೆಪಿಯಲ್ಲಿ ಲಿಂಗಾಯತರು ಏಳು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ.

ಲಿಂಗಾಯತ ಧರ್ಮಕ್ಕೆ ಸೇರಿದ ಅತಿ ಎತ್ತರದ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ. ಮೈಸೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.ಪ್ರಜಾಪ್ರತಿನಿಧಿ ಸಭೆಯಲ್ಲಿದ್ದರು. ಮೂರು ಸಲ ಮುಖ್ಯಮಂತ್ರಿಯಾಗಿದ್ದರು. ಒಮ್ಮೆ ಚುನಾವಣೆಯಲ್ಲಿ ಸೋತ ನಂತರ ಮೂರೇ ತಿಂಗಳಲ್ಲಿ ಮತ್ತೊಂದು ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಿಸಿ ತಂದು ಮುಖ್ಯಮಂತ್ರಿ ಹುದ್ದೆ ನೀಡಲಾಯಿತು ಕಾಂಗ್ರೆಸ್ ಪಕ್ಷದ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯಾದ ಸಿ.ಡಬ್ಲೂ.ಸಿ. ಸದಸ್ಯರಾಗಿದ್ದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಇಂದಿರಾಗಾಂಧೀ ಅವರೊಂದಿಗೆ ಭಿನ್ನಮತ ಏರ್ಪಟ್ಟು ಕಾಂಗ್ರೆಸ್ ಹೋಳಾದಾಗ ಆಕೆಯ ಬಣ ಸೇರಲು ಇಚ್ಚಿಸದೆ ಸಿಂಡಿಕೇಟ್ ಕಾಂಗ್ರೆಸ್ ನಲ್ಲಿ ಉಳಿದರು. ಕ್ರಮೇಣ ಸಕ್ರಿಯಾ ರಾಜಕೀಯ ಮತ್ತು ಪ್ರಚಾರದ ಮುಂಬೆಳಕಿನಿಂದ ಮರೆಯಾದರು. ಈ ಇಡೀ ವಿದ್ಯಮಾನದಲ್ಲಿ ಕಾಂಗ್ರೆಸ್ ಪಕ್ಷ ನಿಜಲಿಂಗಪ್ಪನವರನ್ನು ಕೆಟ್ಟದಾಗಿ ನಡೆಸಿಕೊಂಡದ್ದು ಎಷ್ಟು?

ಬಸಪ್ಪ ದಾನಪ್ಪ ಜತ್ತಿ ನಿಜಲಿಂಗಪ್ಪನವರ ಎದುರಾಳಿಯಾಗಿದ್ದ ಲಿಂಗಾಯತ ಕಾಂಗ್ರೆಸ್ಸಿಗ. ಅವರೂ ಮುಖ್ಯಮಂತ್ರಿಯಾಗಿದ್ದವರು. ಉಪರಾಷ್ಟ್ರಪತಿ ಸ್ಥಾನಕ್ಕೆ ಏರಿದವರು.

ಮುಖ್ಯಮಂತ್ರಿ ಹುದ್ದೆಗೆ ಏರಿದ ರಾಜ್ಯದ ಮತ್ತೊಬ್ಬ ಲಿಂಗಾಯತ ತಲೆಯಾಳು ವೀರೇಂದ್ರ ಪಾಟೀಲರು. ನಿಜಲಿಂಗಪ್ಪನವರ ಶಿಷ್ಯ. ತಮ್ಮ ಗುರುವಿನೊಂದಿಗೆ ಸಿಂಡಿಕೇಟ್ ಕಾಂಗ್ರೆಸ್ ನಲ್ಲೇ ಉಳಿದು ಮರೆಗೆ ಸರಿದಿದ್ದವರು ಮತ್ತೆ ಗಮನ ಸೆಳೆದದ್ದು ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ವಿರುದ್ಧ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೇ. ಇಂದಿರಾ ವಿರುದ್ಧ ಸೋತರು. ಆನಂತರ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಲೋಕಸಭಾ ಚುನಾವಣೆ ಟಿಕೆಟ್ ನೀಡಿ ಗೆದ್ದ ನಂತರ ತಮ್ಮ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವ ಹುದ್ದೆ ನೀಡಿದವರು ಇಂದಿರಾಗಾಂಧೀ. ಆನಂತರ ಅವರನ್ನು ಸಂಪುಟದಿಂದ ಕೈ ಬಿಟ್ಟದ್ದು ಹೌದು. ಅದು ಅವಹೇಳನ ಇದ್ದೀತು.

ಆನಂತರ 1989ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರು ಪಾಟೀಲರು. ಲಿಂಗಾಯತ ಸಮುದಾಯವೂ ಮನತೆರೆದು ಬೆಂಬಲಿಸಿದ ಕಾರಣ ಕಾಂಗ್ರೆಸ್ ಪಕ್ಷ ಭಾರೀ ಬಹುಮತದಿಂದ ಗೆದ್ದಿತು. ಮುಖ್ಯಮಂತ್ರಿ ಹುದ್ದೆ ಅವರಿಗೇ ಒಲಿಯಿತು. ಹನ್ನೊಂದು ತಿಂಗಳ ನಂತರ ಅನಾರೋಗ್ಯ ಮತ್ತು ಅವರ ಆಡಳಿತದಲ್ಲಿ ಕೋಮುಗಲಭೆಗಳು ಸಾಲುಸಾಲು ಘಟಿಸಿದ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯಲಾಯಿತು. ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಜೀವಗಾಂಧೀ ಹೀಗೆ ಅವರ ಬದಲಾವಣೆಯ ವಿಷಯವನ್ನು ಬೆಂಗಳೂರು ವಿಮಾನನಿಲ್ದಾಣದಲ್ಲಿ ಪತ್ರಕರ್ತರ ಮುಂದೆ ಘೋಷಿಸಿದ್ದು ಘನತೆಯ ನಡೆಯೆಂದು ಒಪ್ಪುವುದು ಕಷ್ಟ.

ಅಂದು ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್ ಲಿಂಗಾಯತರ ಕೈತಪ್ಪಿತು. ಕಾಂಗ್ರೆಸ್ ಮತ್ತು ಲಿಂಗಾಯತರ ದಾರಿಗಳು ಎಲ್ಲ ಕಾಲಕ್ಕೂ ಕವಲೊಡೆದ ಘಟ್ಟವದು. ಈ ವಿದ್ಯಮಾನ ಪಾಟೀಲರನ್ನು ಕಾಂಗ್ರೆಸ್ ಅವಮಾನಗೊಳಿಸಿದ್ದು ಎಂದು ಹೇಳಬಹುದೇ? ಹಾಗಾದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರವೂ ಅವರಿಗೆ ಸ್ವತಂತ್ರ ನಿರ್ವಹಣೆ ಅವಕಾಶ ನೀಡಿದೆ ಹತ್ತು ಹಲವು ನಿರ್ಬಂಧಗಳಲ್ಲಿ ಕಟ್ಟಿ ಹಾಕಿದ್ದು ಅಪಮಾನ ಅಲ್ಲವೇ?  ಅವರಿಂದ ‘ಆಪರೇಷನ್ ಲೋಟಸ್ ಕಾರ್ಯಚರಣೆ’ಯಂತಹ ಅನೈತಿಕ ಕೆಲಸ ಮಾಡಿಸಿ ಕರ್ನಾಟಕದಲ್ಲಿ ಅಧಿಕಾರ ಗಳಿಸಿತ್ತು ಬಿಜೆಪಿ. ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಅವಮಾನಿಸಿ ಮನೆಗೆ ಕಳಿಸಿದ್ದು ಸನ್ಮಾನವೇ ಅಥವಾ ಅವಮಾನವೇ?  ಅದು ಸನ್ಮಾನವೇ ಆಗಿದ್ದಲ್ಲಿ ಯಡಿಯೂರಪ್ಪ ಸಿಟ್ಟಿಗೆದ್ದು ಮತ್ತೆಂದೂ ಬಿಜೆಪಿಯತ್ತ ತಲೆಹಾಕುವುದಿಲ್ಲವೆಂದು ಶಪಥ ಮಾಡಿ ಮತ್ತೊಂದು ಪಕ್ಷವನ್ನು ಸ್ಥಾಪಿಸುತ್ತಿದ್ದರೇ?

ಚುನಾವಣೆಯಲ್ಲಿ ಶೇ.10ರಷ್ಟು ಬಿಜೆಪಿ ಮತಗಳನ್ನು ಕಿತ್ತ ನಂತರವೇ ಯಡಿಯೂರಪ್ಪ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲು ಕಮಲ ಪಾಳೆಯ ತುದಿಗಾಲಲ್ಲಿ ನಿಂತದ್ದು ಯಾಕಾಗಿ?  ಬಿಜೆಪಿಯ ಅತ್ಯುನ್ನತ ಅಧಿಕಾರವಲಯಕ್ಕೆ ತಡವಾಗಿ ಪ್ರವೇಶ ಪಡೆದ ನರೇಂದ್ರ ಮೋದಿಯವರು ತಮ್ಮ ಹಿಂದು ಮುಂದಿನ ರಾಜಕೀಯ ಚರಿತ್ರೆಯನ್ನು ಗಮನವಿಟ್ಟು ಅವಲೋಕಿಸುವುದು ಒಳಿತು ಎನ್ನುತ್ತಾರೆ ರಾಜಕೀಯ ವೀಕ್ಷಕರು.

1956 ಕರ್ನಾಟಕ ಏಕೀಕರಣದ ನಂತರ 1969ರಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗುವ ತನಕ ಈ ಪಕ್ಷದಲ್ಲಿ ಪ್ರಬಲರಾಗಿದ್ದವರು ಲಿಂಗಾಯತರು. 1956ರಿಂದ 1971ರ ತನಕ ಒಕ್ಕಲಿಗರು ಮತ್ತು ಲಿಂಗಾಯತರೇ ಕಾಂಗ್ರೆಸ್ ಪಾರ್ಟಿಯ ರಂಗಮಧ್ಯವನ್ನು ಆಕ್ರಮಿಸಿ ಕರ್ನಾಟಕದ ರಾಜಕಾರಣವನ್ನು ಆಳಿದ್ದುಂಟು. ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್ ಕಂಠಿ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿ ಆಳಿದರು.

ಎಸ್.ನಿಜಲಿಂಗಪ್ಪ ಒಟ್ಟು ಎಂಟು ವರ್ಷಗಳ ಕಾಲ ಎರಡು ಸಲ (1956-58 ಮತ್ತು 1962-68) ಕಾಂಗ್ರೆಸ್ ಸರ್ಕಾರಗಳ ಮುಖ್ಯಮಂತ್ರಿಯಾಗಿದ್ದರು. 1956ರಲ್ಲಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ. ಅದಕ್ಕೆ ಮೊದಲು ಮೈಸೂರು ಕಾಂಗ್ರೆಸ್ ಅಧ್ಯಕ್ಷರು. 1946ರಿಂದ ನಾಲ್ಕು ವರ್ಷಗಳ ಕಾಲ ಪ್ರಜಾಪ್ತತಿನಿಧಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು. 1952ರಲ್ಲಿ ಚಿತ್ರದುರ್ಗದಿಂದ ಮೊದಲ ಲೋಕಸಭೆಗೆ ಆಯ್ಕೆಯಾದದ್ದು ಅವಿಭಜಿತ ಕಾಂಗ್ರೆಸ್ ಪಕ್ಷದಿಂದ. ಕಾಂಗ್ರೆಸ್ಸಿನ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯೆನಿಸಿದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸದ್ಯರಾಗುತ್ತಾರೆ. ಕಡೆಗೆ ಅವಿಭಜಿತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹುದ್ದೆ ಅಲಂಕರಿಸುತ್ತಾರೆ.

1958ರಲ್ಲಿ  ನಿಜಲಿಂಗಪ್ಪನವರ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಬಂದವರು ಅವರ ರಾಜಕೀಯ ವೈರಿಯೂ ಆದ ಮತ್ತೊಬ್ಬ ಲಿಂಗಾಯತ ಬಿ.ಡಿ.ಜತ್ತಿ. ಅವರು ನಾಲ್ಕು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಜತ್ತಿಯವರ ನಂತರ ಮೂರೇ ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆ ಸಂಭಾಳಿಸಿದವರೂ ಲಿಂಗಾಯತರೇ ಆಗಿದ್ದ ಎಸ್.ಆರ್. ಕಂಠಿ. 1962ರಲ್ಲಿ ಹೊಸದುರ್ಗ ಕ್ಷೇತ್ರದಲ್ಲಿ  ಪ್ರಜಾ ಸೋಶಲಿಸ್ಟ್ ಪಾರ್ಟಿಯ ಜಿ.ಟಿ.ರಂಗಪ್ಪನವರಿಂದ ಸೋಲುತ್ತಾರೆ ನಿಜಲಿಂಗಪ್ಪ. ಆದರೆ ಮೂರೇ ತಿಂಗಳ ನಂತರ ಬಾಗಲಕೋಟೆಯಲ್ಲಿ ಚುನಾವಣೆಗೆ ಇಳಿಸಿ ಅವಿರೋಧವಾಗಿ ಗೆಲ್ಲಿಸಲಾಗುತ್ತದೆ. ಮೂರು ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಕಂಠಿ ಕೆಳಗಿಳಿಯುತ್ತಾರೆ. ನಿಜಲಿಂಗಪ್ಪ ಪುನಃ ಮುಖ್ಯಮಂತ್ರಿಯಾಗುತ್ತಾರೆ.

1967ರಲ್ಲಿ ಮತ್ತೊಂದು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 1968ರ ತನಕ ಮೂರನೆಯ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ. ಅವಿಭಜಿತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಮುಖ್ಯಮಂತ್ರಿ ಪದವಿ ತೊರೆಯುತ್ತಾರೆ. 1969ರಲ್ಲಿ ಕಾಂಗ್ರೆಸ್ ಹೋಳಾದ ನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುತ್ತಾರೆ.

ಅವರ ಜಾಗದಲ್ಲಿ 1968ರಿಂದ 1971ರ ತನಕ ಲಿಂಗಾಯತರಾದ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ.   ಸತತ ಹದಿನೈದು ವರ್ಷಗಳ ಕಾಲ ಮುಖ್ಯಮಂತ್ರಿಗಳಾದ ಇವರೆಲ್ಲ ಲಿಂಗಾಯತರು ಮತ್ತು ಕಾಂಗ್ರೆಸ್ ಪಕ್ಷದವರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. 1969ರಲ್ಲಿ ಇಂದಿರಾಗಾಂಧೀ ಅವರ ಕಾಂಗ್ರೆಸ್ ಬಣಕ್ಕೆ ಸೇರಲು ವೀರೇಂದ್ರ ಪಾಟೀಲ್ ನಿರಾಕರಿಸುತ್ತಾರೆ. ನಿಜಲಿಂಗಪ್ಪ ನೇತೃತ್ವದ ಸಿಂಡಿಕೇಟ್ ಕಾಂಗ್ರೆಸ್ಸಿನಲ್ಲೇ ಉಳಿಯುತ್ತಾರೆ. 1971ರ ತನಕ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. 1972ರ ವಿಧಾನಸಭಾ ಚುನಾವಣೆಗಳಲ್ಲಿ ಇಂದಿರಾ ಕಾಂಗ್ರೆಸ್ ಎದುರು ಸಿಂಡಿಕೇಟ್ ಕಾಂಗ್ರೆಸ್ ಶೋಚನೀಯವಾಗಿ ಸೋಲುತ್ತದೆ. ಒಂದು ವೇಳೆ ಲಿಂಗಾಯತ ವೀರೇಂದ್ರ ಪಾಟೀಲರು ಇಂದಿರಾ ಕಾಂಗ್ರೆಸ್ ಸೇರಿಕೊಂಡಿದ್ದರೆ ಕರ್ನಾಟಕ ಮತ್ತು ಲಿಂಗಾಯತ ರಾಜಕಾರಣ ಬೇರೆಯದೇ ತಿರುವು ಪಡೆಯುತ್ತಿತ್ತು. ಮುಖ್ಯಮಂತ್ರಿ ಕುರ್ಚಿಗಾಗಿ ಲಿಂಗಾಯತರು ಪ್ರಾಯಶಃ ಹತ್ತೊಂಬತ್ತು ವರ್ಷಗಳ ಕಾಲ ಕಾಯಬೇಕಿರಲಿಲ್ಲವೇನೋ. ದೇವರಾಜ ಅರಸು ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ರಾಜಕಾರಣದ ಹೊಸ ಶಕೆಗೆ ನಾಂದಿ ಹಾಡುತ್ತಾರೆ.

ಈ ಹತ್ತೊಂಬತ್ತು ವರ್ಷಗಳ ನಡುವೆ ವಿಚಿತ್ರ ವಿದ್ಯಮಾನವೊಂದು ಜರುಗುತ್ತದೆ. ವೀರೇಂದ್ರ ಪಾಟೀಲರು ಕಾಂಗ್ರೆಸ್ ಸೇರಿ ಲೋಕಸಭೆಗೆ ಆರಿಸಿ ಬರುತ್ತಾರೆ. ತುರ್ತುಪರಿಸ್ಥಿತಿಯ ನಂತರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಸೆಣೆಸಿದ್ದ ಪಾಟೀಲರನ್ನು ಕೇಂದ್ರ ಪೆಟ್ರೋಲಿಯಂ ಮಂತ್ರಿ ಮಾಡುತ್ತಾರೆ ಇಂದಿರಾಗಾಂಧೀ. ಸಂಪುಟದಿಂದ ಕೈಬಿಡುತ್ತಾರೆ ಕೂಡ. 1984ರಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗುತ್ತಾರೆ. 1989ರ ವಿಧಾನಸಭಾ ಚುನಾವಣೆಗಳಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರಿಂದ ಭಾರೀ ಬೆಂಬಲ ದೊರೆಯುತ್ತದೆ. ಮುಖ್ಯಮಂತ್ರಿಯಾಗುತ್ತಾರೆ. ಹನ್ನೊಂದೇ ತಿಂಗಳು ಉರುಳುವಷ್ಟರಲ್ಲೇ ಕೋಮುಗಲಭೆಗಳು ಮತ್ತು ಅನಾರೋಗ್ಯದ ಕಾರಣ ಅವರನ್ನು ಅವಮಾನಕರವಾಗಿ ಕೆಳಗಿಳಿಸಲಾಗುತ್ತದೆ. ಬಂಗಾರಪ್ಪ ಮತ್ತು ಮೊಯ್ಲಿ ಆ ಅವಧಿಯನ್ನು ಪೂರೈಸುತ್ತಾರೆ.

1971ರ ನಂತರ 1989ರ ತನಕ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಕಾಂಗ್ರೆಸ್ಸಿನ ಲಿಂಗಾಯತರಿಗೆ ಮುಖ್ಯಮಂತ್ರಿ ಹುದ್ದೆ ದಕ್ಕುವುದಿಲ್ಲ. ಆದರೆ ಈ ಅವಧಿಯಲ್ಲಿ ಸುಮಾರು ಎರಡು ವರ್ಷ ರಾಷ್ಟ್ರಪತಿ ಆಳ್ವಿಕೆ, ಆರು ವರ್ಷ ಜನತಾ ಸರ್ಕಾರಗಳ ಆಳ್ವಿಕೆಯನ್ನು ಕಾಣುತ್ತದೆ ಕರ್ನಾಟಕ.

 ಇತ್ತ ಬಿಜೆಪಿಯಲ್ಲಿ ಲಿಂಗಾಯತರು ಅಧಿಕಾರ ಅನುಭವಿಸಿದ ಕತೆಯನ್ನು ನೋಡೋಣ.

ಲಿಂಗಾಯತ ನಾಯಕ ಬಿ.ಬಿ.ಶಿವಪ್ಪ ನೇತೃತ್ವದ ನಂತರ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ 2008ರಿಂದ 2011ರ ತನಕ ಮುಖ್ಯಮಂತ್ರಿಯಾಗಿದ್ದರು. ಭ್ರಷ್ಟಾಚಾರದ ಆಪಾದನೆ ಹೊತ್ತ ಅವರನ್ನು ಬಿಜೆಪಿ ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಿತು. ಡಿ.ವಿ.ಸದಾನಂದ ಗೌಡರ ನಂತರ ಹನ್ನೊಂದು ತಿಂಗಳ ಕಾಲ ಮತ್ತೊಬ್ಬ ಲಿಂಗಾಯತ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ.

ಈ ನಡುವೆ  ಹೈಕಮಾಂಡ್ ಹೇರಿದ ಅಪಮಾನವನ್ನು ಪ್ರತಿಭಟಿಸಿ ಬಿಜೆಪಿ ತೊರೆದ ಯಡಿಯೂರಪ್ಪ 2014ರಲ್ಲಿ ಪುನಃ ಬಿಜೆಪಿ ಸೇರಿ ಲೋಕಸಭೆಗೆ ಆಯ್ಕೆಯಾಗುತ್ತಾರೆ. ಕೇಂದ್ರ ಮಂತ್ರಿಯಾಗಬೇಕೆಂಬ ಅವರ ಆಸೆಯ ಮೇಲೆ ಮೋದಿ ತಣ್ಣೀರು ಎರಚುತ್ತಾರೆ.  2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಹುಮತ ಸಾಬೀತು ಮಾಡಲಾಗದೆ ಎರಡೇ ದಿನದಲ್ಲಿ ರಾಜೀನಾಮೆ ನೀಡಿದರು.

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಮಾಡುತ್ತಾರೆ. ಮೂರು ವರ್ಷಗಳ ನಂತರ ಮೋದಿ-ಶಾ ಅವರು ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸುತ್ತಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆ. ಹೀಗೆ ಬಿಜೆಪಿ ಹಯಾಮಿನಲ್ಲಿ ಲಿಂಗಾಯತರು ಈವರೆಗೆ ಮುಖ್ಯಮಂತ್ರಿ ಹುದ್ದೆ ಅನುಭವಿಸಿದ ಅವಧಿ ಸುಮಾರು ಏಳು ವರ್ಷಗಳು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!