ಲಿಂಗಾಯತ ಸಮುದಾಯದ ‘ಬಸವ ಧರ್ಮ ಪೀಠ’ದಲ್ಲಿ ಇತ್ತಿಚಿಗೆ ಯಾರು ನಿರೀಕ್ಷಿಸದ ಅಹಿತಕರ ಬೆಳವಣಿಗೆ ನಡೆಯುತ್ತಿವೆ. ಈ ಕುರಿತು ಬಸವ ಧರ್ಮ ಪೀಠ ಕಟ್ಟಿ ಬೆಳೆಸಲು ತನ್ನದೇ ಆದ ಕೊಡುಗೆ ನೀಡಿದ, ಎಂತಹ ಕಷ್ಟದ ಸಂದರ್ಭದಲ್ಲೂ ಬಂಡೆಗಲ್ಲಿನಂತೆ ಸಂಸ್ಥೆ ಜತೆಗೆ ನಿಂತಿದ್ದ, ಈಗ ಕೇಂದ್ರ ಬಿಂದುವಾಗಿರುವ ಸಂಸ್ಥೆಯ ಪ್ರಮುಖರಾದ ಶಿವರಾಜ್ ಪಾಟೀಲ್ ಅತಿವಾಳ ಅವರ ಜತೆಗೆ ‘ದಿ ಪಾಲಿಟಿಕ್’ ಪತ್ರಿಕೆಯ ಸಂಪಾದಕ ಸಿದ್ದಪ್ಪ ಮೂಲಗೆ ನಡೆಸಿರುವ ಸಂದರ್ಶನ.
ಸಿ.ಮೂಲಗೆ : ಸುಪ್ರೀಂ ಕೋರ್ಟ್ ಆದೇಶದನ್ವಯ ಡಾ. ಗಂಗಾದೇವಿ ಅವರು ‘ಲಿಂಗದೇವ’ ವಾಪಾಸ್ ಪಡದಿದ್ದಾರೆ, ಅದರಲ್ಲಿ ತಪ್ಪೇನಿದೆ?
ಶಿ.ಪಾಟೀಲ್ : ನೋಡಿ ಸುಪ್ರೀಂ ಕೋರ್ಟ್ ಆದೇಶ ಬಂದಿದ್ದು ಈಗಲ್ಲ, ಲಿಂಗೈಕ್ಯ ಮಾತಾಜೀ ಬದುಕಿರುವಾಗಲೇ ಬಂದಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ನಾನು ಗೌರವಿಸುತ್ತೇನೆಂದು ಸ್ವತಃ ದೊಡ್ಡ ಮಾತಾಜಿಯವರೇ ಗುಲ್ಬರ್ಗಾ ಸಮಾವೇಶದಲ್ಲಿ ಹೇಳಿದರು. ಈಗ ಮತ್ತೆ ಹಿಂಪಡೆಯುವ ಅವಶ್ಯಕತೆ ಇದ್ದಿಲ್ದ.
ಸಿ.ಮೂಲಗೆ: ಯಾವುದೇ ತರಹದ ನಿರ್ಣಯ ತೆಗೆದುಕೊಳ್ಳುವ ಹಕ್ಕು ಅವರಿಗಿಲ್ಲವೇ?
ಶಿ.ಪಾಟೀಲ್: ಖಂಡಿತಾ ಇದೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಬಸವ ಧರ್ಮ ಪೀಠದ ಎಲ್ಲಾ ಗಣನಾಯಕ-ಗಣನಾಯಕಿಯರ ಜತೆಗೆ, ಎಲ್ಲಾ ಜಂಗಮ ಮೂರ್ತಿಗಳ ಜತೆಗೆ ಚರ್ಚಿಸಿ ಮುಂದಡಿ ಇಡಬೇಕಾಗಿತ್ತು.ಆದರೆ, ಅವರು ಯಾರದೋ ಒತ್ತಡಕ್ಕೆ ಒಳಗಾಗಿದ್ದರು ಎನಿಸುತ್ತಿದೆ. ಇಲ್ಲದಿದ್ದರೆ, ಬಾಗಲಕೋಟೆಯ ನವಲಗುಂದದ ಫುಟ್ ಬಾತ್ ನಲ್ಲಿ ನಿಂತು ಪ್ರೆಸ್ ಮೀಟ್ ಮಾಡುವ ಅಂತಹ ಅವಸರ ಏನಿತ್ತು?
ಸಿಮೂ: ನಿನ್ನೆ ನಿಮ್ಮ ಸಂಘಟನೆಯವರು ಮಾತಾಜೀ ಅವರದ್ದು ಸಂಶಯಾಸ್ಪದ ಸಾವಾಗಿದ್ದು, ಅದರ ತನಿಖೆ ಆಗಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೀರಿ, ಆದರೆ ಅವರು ಕೊನೆಯುಸಿರೆಳಿದಿದ್ದು ಆಸ್ಪತ್ರೆಯಲ್ಲಿ ಅಲ್ಲವೇ?
ಶಿಪಾ: ಹೌದು ಆಸ್ಪತ್ರೆಯಲ್ಲಿಯೇ! ಆದರೆ ಮಾತಾಜೀಯವರು ಕೊನೆಯ ಎರಡು ತಿಂಗಳ ಕಳೆದಿದ್ದು ಕೂಡಲಸಂಗಮದಲ್ಲಿ. ಲಿಂಗಾಯತ ಧರ್ಮ ಗ್ರಂಥ ಬರೆಯಲು ಅಲ್ಲೇ ಮುಖಂ ಹೂಡಿದರು, ಈ ಸಮಯದಲ್ಲೇ ಅವರ ಆರೋಗ್ಯ ಹದಗೆಟ್ಟಿತು. ಆಸ್ಪತ್ರೆಯಲ್ಲಿ ಮಾತಾಜೀಯವರ ತಲೆದಿಂಬಿನ ಕೆಳಗಡೆ ನಿಂಬೆಕಾಯಿ, ತಾಯತ, ಅವರ ಕಾಲಿಗೆ ಕರಿದಾರ ಇತ್ತು. ಇವೆಲ್ಲವೂ ಎಲ್ಲಿಂದ ಬಂದವು, ಯಾರಿಟ್ಟಿದ್ದು ಎಂಬುದು ಸಮಾಜಕ್ಕೆ ಗೊತ್ತಾಗಬೇಕು. ಅದಕ್ಕೆ ನಾವು ಮನವಿ ಸಲ್ಲಿಸಿದ್ದೇವೆ.
ಸಿಮೂ: ಈ ನೆಲದ ಸಂವಿಧಾನ ಮತ್ತು ನ್ಯಾಯಲಯದ ಮೇಲೆ ನಿಮಗೆ ನಂಬಿಕೆ-ಗೌರವ ಇದೆಯಾ?
ಶಿಪಾ: ಇದೆ. ನ್ಯಾಯಾಲಯ ಹಾಗೂ ಸಂವಿಧಾನಕ್ಕೆ ನಾವು ತಲೆಬಾಗಿ ಗೌರವಿಸುತ್ತೇವೆ.
ಸಿಮೂ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಂಘಟನೆಯ ಕೆಲವರು ಕೂಡಲಸಂಗಮದ ಮಹಾದೇಶ್ವರ ಸ್ವಾಮೀಜಿ ಒಬ್ಬ ಸಲಿಂಗಕಾಮಿ ಇದ್ದಾರೆ; ಬಸವಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ ಒಬ್ಬ ಸ್ತ್ರೀಪೀಡಿಕ; ಜೊತೆಗೆ ತಮ್ಮ ಆಶ್ರಮದಲ್ಲಿದ್ದ ಬೋರ್ಗಿ ಗ್ರಾಮದ ಸಂಜು ಎಂಬ ಅನಾಥ ಮಗುವಿಗೆ ಹೊಡೆದು ಸಾಯಿಸಿ ಹರಳಯ್ಯ ಕುಂಡದಲ್ಲಿ ಬಿಸಾಡಿದ್ದಾರೆ; ಅವರ ಕಾಮದಾಟಕ್ಕೆ ಸಾಕಷ್ಟು ಮಹಿಳೆಯರು ಬಲಿಯಾಗಿದ್ದಾರೆ; ಬಸವಯೋಗಿ ಸ್ವಾಮಿ ಒಬ್ಬ ಹುಡ್ಗಿ ಬಾಳಲ್ಲಿ ಆಟವಾಡಿ ಅವಳಿಗೆ ಮೋಸ ಮಾಡಿದ್ದಾರೆ; ಕಾವಿ ಹಾಕಿದ ಮೇಲೆ ತನ್ನ ಪೂರ್ವಾಶ್ರಮದವರಿಗೆ ಸಂಸ್ಥೆಯ ಹಣದಿಂದ ಮನೆ ಕಟ್ಟಿಸಿಕೊಟ್ಟಿದ್ದಾರೆ; ಅವರು ಸರಾಯಿ ಕುಡದದ್ದು ನೋಡಿದ್ದೇವೆ….ಇತ್ಯಾದಿ ಇತ್ಯಾದಿ ಬಹಿರಂಗವಾಗಿಯೇ ಕೆಲವರು ಅನಾಮಧೇಯವಾಗಿ ಯಾರೋ ಬರೆಯುತ್ತಿದ್ದಾರೆ, ಯಾರ ಬರೆಯುತ್ತಿದ್ದಾರೆ ಗೌಡ್ರೇ? ನನ್ನ ಪ್ರಕಾರ ನಿಮ್ಮ ತಂಡದ ಪ್ರಮುಖರಿಗೆ ಯಾರ ಬರೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಇದೆ. ಏಕೆಂದರೆ ಸಂಘಟಿತ ತಂಡದಿಂದ ಮಾತ್ರ ಇಂತಹ ಬರಹ ಹೊರಗೆ ಬರಲು ಸಾಧ್ಯ.
ಶಿಪಾ: ಅವು ಯಾರ ಬರೆದಾರೋ ನನಗೂ ಗೊತ್ತಿಲ್ಲ.ನಾನು ಓದಿದ್ದೇನೆ ಅಷ್ಟೇ.ನಮ್ಮ ಸಂಘಟನೆ ಐದು ರಾಜ್ಯದಲ್ಲಿದೆ, ಯಾರ ಬರೆದದ್ದು ನಮಗೆ ಹೇಗೆ ಗೊತ್ತಾಗುತ್ತದೆ.
ಸಿಮೂ: ಅದರಲ್ಲಿ ಏನಾದರೂ ಸತ್ಯಾಂಶವಿದೆಯೇ?
ಶಿಪಾ: ಅದು ಸರಿ ಇರಬಹುದೇನೋ ಅಂತ ನನಗನಿಸುತ್ತಿದೆ. ಮೇಲಾಗಿ ಶಿವಶರಣಪ್ಪ ಪಾಟೀಲರು ಸಿದ್ರಾಮೇಶ್ವರ ಸ್ವಾಮೀಜಿ ಬಗ್ಗೆ ಬರೆದ ಬರವಣಿಗೆಗೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಬೇಕಾದ ಸಾಕ್ಷಿ ಪುರಾವೆಗಳು ಒದಗಿಸುತ್ತೇನೆ ಎನ್ನುತ್ತಿದ್ದಾರೆ.
ಸಿಮೂ: ನಿಮಗೆ ಹೇಳಿದ್ದಾರೆಯೇ?
ಶಿಪಾ: ಹಾ ಹೇಳಿದ್ದಾರೆ.
ಸಿಮೂ: ಸರಿಯಿರಬಹುದೆಂದು ನಿಮಗ ಯಾಕ ಅನಿಸುತ್ತಿದೆ?
ಶಿಪಾ: ಕೆಲವರ ಹಾವಭಾವ, ವರ್ತನೆ, ಅವರ ಹಿನ್ನಲೆ ನೋಡಿದರೆ ನಮಗೂ ಸರಿ ಇರಬಹುದೇನೋ ಅಂತ ಅನಿಸುತ್ತಿದೆ.
ಸಿಮೂ: ಹಾಗಾದರೆ ನಿಮ್ಮ ಬಸವ ಧರ್ಮ ಪೀಠವೇ ಸರಿ ಇಲ್ಲಂತ ಆಯ್ತು?
ಶಿಪಾ: ಎಲ್ಲರೂ ಹಾಗಿಲ್ಲ, ತುಂಬಾ ಜನ ತ್ಯಾಗಿಗಳು, ಬಸವನಿಷ್ಠರು, ನೈತಿಕತೆ ಉಳ್ಳವರು ಇದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಸವಕಲ್ಯಾಣದ ಸಿದ್ರಾಮೇಶ್ವರ ಸ್ವಾಮೀಜಿಯವರ ವಿರುದ್ಧ ಕೊಲೆ, ಸ್ತ್ರೀಪೀಡನೆ,ಕಾಮುಕತೆ…ಇತ್ಯಾದಿ ಇತ್ಯಾದಿ ಗಂಭೀರ ಆರೋಪವನ್ನು ಶಿವಶರಣಪ್ಪ ಪಾಟೀಲ್ ಬೀದರ ಅವರು ಮಾಡಿದ್ದಾರೆ. ಈ ಕುರಿತು ಮಾತನಾಡಲು ಅವರನ್ನು ಪತ್ರಿಕೆ ಸಂಪರ್ಕಿಸಿದಾಗ “ಅದು ನಾನೇ ಬರೆದದ್ದು, ನಾನು ಸಿದ್ರಾಮೇಶ್ವರ ಸ್ವಾಮೀಜಿಯವರ ಬಗ್ಗೆ ಬರೆದಿರುವ ಬರೆಹಕ್ಕೆ, ಮಾಡಿರುವ ಎಲ್ಲಾ ಆರೋಪಕ್ಕೂ ನಾನು ಈಗಲೂ ಬದ್ಧನಾಗಿದ್ದೇನೆ. ಅವಶ್ಯಕತೆ ಬಿದ್ದರೆ ಅದಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷಿ, ಪುರಾವೆಗಳು ಒದಗಿಸುತ್ತೇನೆ” ಎಂದು ‘ದಿ ಪೊಲಿಟಿಕ್’ ಗೆ ಪ್ರತಿಕ್ರಿಯಿಸಿದ್ದಾರೆ.
ಸಿಮೂ: ಅವರು ನಿನ್ನೆ ಸೈಬರ್ ಕ್ರೈಮ್ ನಲ್ಲಿ ದೂರು ಸಲ್ಲಿಸಿದ್ದಾರೆ. ನಿಮಗೆ ಗೊತ್ತೆ?
ಶಿಪಾ: ಅದೇನು ಗೊತ್ತಿಲ್ಲ . ಕೋಡಲಿ.
ಸಿಮೂ: ಈ ನಿಮ್ಮ ಪ್ರತಿರೋಧ, ಹಾರಾಟ, ಚೀರಾಟ ‘ಲಿಂಗದೇವ’ ಕ್ಕಾಗಿ ಅಲ್ಲ. ಗಂಗಾ ಮಾತಾಜಿ ಅಸಮರ್ಥರೆಂದು ಬಿಂಬಿಸಿ ಅವರನ್ನು ಪೀಠದಿಂದ ಕೆಳಗಿಳಿಸಿ, ಚನ್ನಬಸವಾನಂದ ಸ್ವಾಮೀಜಿಗೆ ಆ ಸ್ಥಾನದಲ್ಲಿ ಕೂಡಿಸಬೇಕೆಂಬ ಒಂದು ಹಿಡನ್ ಅಜೆಂಡಾ ಇದೆಯೆಂದು ಸಮಾಜದಲ್ಲಿ ಗುಸುಗುಸು ಮಾತಾಡ್ತಾ ಇದಾರೆ.
ಶಿಪಾ: ಇಲ್ಲ ಇಲ್ಲ. ಅಂಥ ಉದ್ದೇಶವಾಗಲಿ, ಆ ರೀತಿಯಾದ ಆಲೋಚನೆಯಾಗಲಿ ನಮ್ಮ ಹತ್ತಿರ ಇಲ್ಲವೇ ಇಲ್ಲ. ಏಕೆಂದರೆ ಈಗಾಗಲೇ ಮಾತಾಜಿಯವರು ಉಯಿಲು ಬರೆದಿಟ್ಟಿದ್ದಾರೆ. ನಮ್ಮ ಉದ್ದೇಶ ದೊಡ್ಡ ಮಾತಾಜಿಯವರ ಪರಿಶ್ರಮ-ತ್ಯಾಗ ವ್ಯರ್ಥ ಆಗಬಾರದು ಮತ್ತು ಅವರು ಕಷ್ಟ ಪಟ್ಟು ಕಟ್ಟಿದ ಸಂಸ್ಥೆಯನ್ನು ಉಳಸಿಕೊಳ್ಳಬೇಕೆಂದಿದೆ ಅಷ್ಟೇ.
ಸಿಮೂ: ಉಳಸಿಕೊಳ್ಳಬೇಕೇ? ಯಾರಿಂದ ?
ಶಿಪಾ: ಹೌದು. ಧನ್ನೂರ ಮತ್ತು ಅವರ ತಂಡದಿಂದ.
ಸಿಮೂ: ನನಗೆ ಅರ್ಥ ಆಗಲಿಲ್ಲ!
ಶಿಪಾ: ಸಂಸ್ಥೆಯನ್ನು ಕೆಲವರು ವಾಣಿಜ್ಯಕರಣ ಮಾಡಲು ಹೊಂಚು ಹಾಕಿದ್ದಾರೆ.
ಸಿಮೂ: ವಾಣಿಜ್ಯಕರಣ ಎಂದರೆ ಹೇಗೆ?
ಶಿಪಾ: ಬಲ್ಲ ಮಾಹಿತಿ ಪ್ರಕಾರ ಇದೊಂದು ವಾಣಿಜ್ಯಕರಣ ಸಂಸ್ಥೆ ಮಾಡಬೇಕು ಅಂತಿದ್ದಾರೆ. ಸಂಸ್ಥೆಯ ಅಡಿಯಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ತೆಗೆಯಬೇಕೆಂದು ಸಿದ್ರಾಮೇಶ್ವರ ಸ್ವಾಮೀಜಿ, ಮಾದೇಶ್ವರ ಸ್ವಾಮೀಜಿ, ಬಸವರಾಜ ಧನ್ನೂರ,ಶಂಕ್ರೇಪ್ಪ ಪಾಟೀಲ್ ನಾಲ್ಕೈದು ಜನ ಸೇರಿಕೊಂಡು ಪ್ಲಾನ್ ಮಾಡ್ಯಾರ.
ಸಿಮೂ: ಇದು ಗಂಗಾ ಮಾತಾಜಿಯವರಿಗೆ ಗೊತ್ತಿಲ್ಲವೇ?
ಶಿಪಾ: ಇಲ್ಲ ಗೊತ್ತಿಲ್ಲ. ಅವರ ಬೆನ್ನಹಿಂದೆ ಇವೆಲ್ಲವೂ ನಡೆಯುತ್ತಿವೆ.
ಸಿಮೂ: ಅಲ್ಲಾ ಗೌಡ್ರೇ ಲಿಂಗದೇವ ವಾಪಸ್ಸು ಪಡೆದದ್ದು ಡಾ.ಗಂಗಾದೇವಿಯವರು,ಆದರೆ ನೀವು ಮುಗಿಬಿದ್ದದ್ದು ಬಸವರಾಜ ಧನ್ನೂರ ಮೇಲೇಕೆ?
ಶಿಪಾ: ಲಿಂಗದೇವ, ಕೂಡಲಸಂಗಮದೇವ ಮುಗಿದು ಹೋದ ಅಧ್ಯಾಯ ಅದಾ.ಧನ್ನೂರ ಆಡಳಿತಾತ್ಮಕವಾಗಿ ಇಡೀ ಈ ಸಂಸ್ಥೆ ತನ್ನ ಅದೀನದಲ್ಲಿ ಪಡೆಯಬೇಕು ಅಂತ ಹೊಂಚು ಹಾಕಿದ್ದಾರೆ.. ಅವರಿಂದ ಈ ಸಂಸ್ಥೆ ಉಳಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಮ್ಮ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ . ತನ್ನ ಮಾತಿನ ಮೋಡಿಯಿಂದ ಗಂಗಾ ಮಾತಾಜಿಯವರಿಗೆ ಫುಲ್ ಕಂಟ್ರೋಲ್ ತಕೊಂಡಿದ್ದಾನೆ..ಈ ಸಂಸ್ಥೆ ಒಂದು ಬ್ಯುಸಿನೆಸ್ ಸೇಂಟರ್ ಮಾಡಬೇಕು, ಇಡೀ ಸಂಸ್ಥೆ ತನ್ನ ಅಧೀನದಲ್ಲಿ ತಕೊಂಡು ಹುಕುಂ ನಡೆಸಬೇಕು ಅಂತಾ ಪ್ಲಾನ್ ಇದೆ ಆ ಮನುಷ್ಯನದ್ದು.ಇದಕ್ಕಾಗಿ ಬೀದರಿನ ಕೆಲವು ಪ್ರತಿಷ್ಠಿತ ಜನರನ್ನು ತಕೊಂಡು ಇವೆಲ್ಲವೂ ಮಾಡಬೇಕೆಂದು ಯೋಜನೆ ರೂಪಿಸಿದ್ದಾನೆ.
ಸಿಮೂ: ಅಲ್ಲಾ ಗೌಡ್ರೇ ಅದೇನೋ ಅಂತಾರಲ್ಲ ‘ನಮಾಜ್ ಮಾಡಲು ಹೋಗಿ ಮಸೀದಿ ಮೇಲೆ ಹಾಕೊಂಡಿದ್ದ ಅಂತ’ ಪಾಪ ಧನ್ನೂರ ಈ ಸಂಸ್ಥೆಯ ಮೂಲಕ ಬಸವ ಸೇವೆ ಸಲ್ಲಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಇಲ್ಲಿ ಉಳದಿದ್ದಾರೆ. ನೀವು ಕೆಲವು ಬೆರಳೆಣಿಕೆಯಷ್ಟು ಜನರು ಆ ಮನುಷ್ಯನ ಮೇಲೆ ವಿನಾಕಾರಣ ಕಿಡಿಕಾರುತ್ತಿದ್ದೀರಿ!
ಶಿಪಾ: ಏನ ಪಾಪರಿ, ಇವತ್ತು ಇಡೀ ನಮ್ಮ ಸಂಸ್ಥೆ ಹಾಳಾಗುತ್ತಿರುವುದಕ್ಕೆ ಅವನೇ ಮೂಲ ಕಾರಣ. ಅವನಲ್ಲಿ “ಬರಿ ಪ್ರಚಾರ, ನಾನು,ಎಲ್ಲಾ ನನ್ನಿಂದಲೇ ಎನ್ನುವ ಅಹಮಿಕೆಯಿದೆ”. ಇವನು ಬಂದಮೇಲೆಯೇ ನಮ್ಮ ಸಂಸ್ಥೆಯಲ್ಲಿ ಗುಂಪುಗಾರಿಕೆ ಆರಂಭವಾಗಿದ್ದು. ಅಷ್ಟಕ್ಕೂ ಬಸವ ಧರ್ಮ ಪೀಠಕ್ಕೆ ಈ ಮನುಷ್ಯನ ಕೊಡುಗೆ ಏನಿದೆ ಹೇಳಿ? ನಾನು 53 ವರ್ಷಗಳಿಂದ ಈ ಸಂಸ್ಥೆಗಾಗಿ ದುಡಿಯುತ್ತಿದ್ದೇನೆ..ಇದರ ಕಷ್ಟ-ಸುಖದ ಜತೆಗೆ ನಿಂತಿದ್ದೇನೆ. ಇವನದ್ದು ಏನ ಕೊಡುಗೆ ಇದೇ ಹೇಳಿ?
ಸಿಮೂ: ಅವರು ಬಂದೇ ಮೂರು ವರ್ಷ ಆಯಿತು, ಬಂದಾಗಿನಿಂದ ಅವರನ್ನು ಕೆಲಸ ಮಾಡಲು ನಿಮ್ಮವರು ಬಿಟ್ಟೆ ಇಲ್ಲ. ಜೊತೆಗೆ ಈಗ ಬೆರಳೆಣೆಕೆಯಷ್ಟು ಜನ ಮಾತ್ರ ವಿರೋಧ ಮಾಡುತ್ತಿರುವುದು.
ಶಿಪಾ: ಇಲ್ಲ ನಿಮಗೆ ತಪ್ಪು ಮಾಹಿತಿ ಇದೆ. ಸಂಸ್ಥೆಯ ಶೇಕಡಾ 90 ಪ್ರತಿಶತ ಜನರು ಅವನ ವಿರೋಧ ಇದ್ದಾರೆ. ಈಗ ಮತ್ತ ಎಲ್ಲಾ ಕಡೆ ವಿರೋಧ ಬಹಳ ಆಗಲತ್ತುದ.
ಸಿಮೂ: ಅವರು ನಿಮ್ಮ ‘ರಾಬದ’ ಅಧ್ಯಕ್ಷ ಇದಾರೆ, ಗೌರವಿತವಾಗಿ …
ಶಿಪಾ: ತಡೀರಿ ತಡೀರಿ… ಈಗ ಆತ ನಮ್ಮ ಅಧ್ಯಕ್ಷ ಇಲ್ಲ.. ಅವಿನಾಶ್ ಬೊಸನಿಕರ್ ನಮ್ಮ ಅಧ್ಯಕ್ಷ ಇದಾರೆ. ಅವರನ್ನು ಈಗಾಗಲೇ ಉಚ್ಚಾಟನೆ ಮಾಡಿದ್ದೇವೆ.
ಸಿಮೂ: ಸಂಬಂಧವೆಯಿಲ್ಲದ ನೀವು ನಾಲ್ಕು ಜನ ಸೇರಿಕೊಂಡು ಉಚ್ಚಾಟನೆ ಮಾಡಿದರೆ ಅದು ಉಚ್ಚಾಟನೆ ಆಡುತ್ತದೆಯೇ?
ಶಿಪಾ: ‘ರಾಬದ’ ಸ್ವತಂತ್ರವಾಗಿ ಟ್ರಸ್ಟ್ ಅಡಿಯಲ್ಲಿ ನೋಂದಣಿ ಆಗಿರುವ ಸಂಸ್ಥೆಯಾಗಿದೆ.ಈ ಸಂಸ್ಥೆಗೆ ಒಂದು ಕೇಂದ್ರ ಸಮಿತಿಯಿದೆ,ಅದಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಇದಾರೆ.. ಇವರೆಲ್ಲರೂ ಸೇರಿಕೊಂಡೆ ಕಾನೂನಾತ್ಮಕವಾಗಿಯೇ ಅವರನ್ನು ತೆಗದಿದ್ದಾರೆ.
ಸಿಮೂ: ಕೇಂದ್ರ ಸಮಿತಿಗೆ ಕಾನೂನಾತ್ಮಕವಾಗಿ ತೆಗೆಯುವ ಹಕ್ಕಿದೆಯೇ?
ಶಿಪಾ: ಹಾಂ,ಇದೆ.
ಸಿಮೂ: ನೀವು ಕೆಲವು ದಿನಗಳಿಂದ ಅವರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದೀರಿ.. ಇದು ತಪ್ಪಲ್ಲವೇ?
ಶಿಪಾ: ಇದ್ದಿಂದ ಹೇಳಿದ್ದೇವೆ. ಸತ್ಯ ಹೇಳುವುದು ತಪ್ಪೇ?
ಸಿಮೂ: ಇತ್ತಿಚೆಗೆ ನಿಮ್ಮ ತಂಡ ಗಂಗಾ ಮಾತಾಜಿಯವರ ಜತೆಗೆ ಮಾತಾಡಿದ್ದೇಯೇ?
ಶಿಪಾ: ಇಲ್ಲ. ಮಾತಾಡಲು ಈ ಧನ್ನೂರ ಅವರಿಗೆ(ಮಾತಾಜಿಗೆ) ಬಿಡುತ್ತಿಲ್ಲ. ನಮ್ಮ ಮತ್ತು ಮಾತಾಜಿಯವರ ಮಧ್ಯೆ ತಡೆಗೊಡೆಯಾಗಿ ನಿಂತಿದ್ದಾನೆ.ನಮ್ಮ ಜತೆಗೆ ಫೋನ್ ನಲ್ಲಿ ಮಾತಾಡಲು ಸಹ ಅವರಿಗೆ ಬೀಡುತ್ತಿಲ್ಲ.
ಸಿಮೂ: ನೀವೆಲ್ಲರೂ ಚನ್ನಬಸವಾನಂದ ಸ್ವಾಮೀಜಿಗೆ ತೆಗದಿದ್ದಕ್ಕೆ ಇಷ್ಟೊಂದು ಪ್ರಬಲವಾಗಿ ವಿರೋಧ ಮಾಡ್ತಾ ಇದೀರಿ,ಆದರೆ ಅವತ್ತು ಬಸವಪ್ರಭು ಸ್ವಾಮೀಜಿ ಅವರಿಗೆ ತೆಗೆದಾಗ ಇಷ್ಟೊಂದು ಪ್ರಬಲ ವಿರೋಧ ವ್ಯಕ್ತವಾಗಲಿಲ್ಲವಲ್ಲ ಏಕೆ?
ಶಿಪಾ: ಇಲ್ಲ ಅವರನ್ನು ಯಾರು ತೇಗದಿಲ್ಲ.ಅವರು ಹೆಚ್ಚಿನ ಅಧ್ಯಯನ ಮಾಡಲು ಸ್ವಲ್ಪ ದಿನ ದೂರ ಉಳದಿದ್ದಾರೆ ಅಷ್ಟೇ. ಬಸವ ಪ್ರಭು ಸ್ವಾಮೀಜಿ ನಮ್ಮ ಪೀಠಕ್ಕೆ/ಸಂಸ್ಥೆಗೆ ಹರಳಾ ಇದ್ದಪ್ಪಲೇ ಇದಾರೆ. ಕಾನೂನಾತ್ಮಕವಾಗಿ ಅವರು ಈಗಲೂ ನಮ್ಮ ಸಂಸ್ಥೆಯಲ್ಲಿ ಇದಾರೆ. ಬಸವಕಲ್ಯಾಣದ ಅಲ್ಲಮ ಪ್ರಭು ಪೀಠದ ಮುಂದಿನ ಉತ್ತರಾಧಿಕಾರಿ ಅವರೇ ಇದಾರೆ.
ಸಿಮೂ: ನಿಮ್ಮ ಸಂಸ್ಥೆ/ಸಂಘಟನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದೆಯೇ?
ಶಿಪಾ : ಇದೆ. ಖಂಡಿತಾ ಇದೆ.
ಸಿಮೂ: ಮತ್ತೇಕೆ ಯಾರಾದರೂ ನಿಮ್ಮ ಸಂಸ್ಥೆ/ಸಂಘಟನೆ ಬಗ್ಗೆ ಬರೆದರೆ, ಮಾತಾಡಿದರೆ ಅವರ ಮೇಲೆ ಮುಗಿ ಬೀಳುತ್ತಿದ್ದೀರಿ? ಉದಾ: ಮೊನ್ನೆ ಭಾಲ್ಕಿಯ ಕೆಲವರು ಚನ್ನಬಸವಾನಂದ ಸ್ವಾಮೀಜಿಗೆ ತೆಗೆದದ್ದು ಸರಿಯಿದೆ ಎಂದಿದ್ದಕ್ಕೆ,ಅವರ ಮೇಲೆ ಮುಗಿ ಬಿಳದಲ್ಲದೆ ನೀವು ಭಾಲ್ಕಿ ಮಠದ ಚೇಲಾ ಇದೀರಿ ಎಂದು ಅವರ ವಿರುದ್ಧ ದಾಳಿ ಮಾಡಿದ್ದೇಕೆ ?
ಶಿಪಾ: ಅವರಿಗೆ ನಮ್ಮ ಸಂಸ್ಥೆಯ ಈ ಜಗಳದ ಬಗ್ಗೆ ಏನು ಗೊತ್ತಿಲ್ಲ, ಗೊತ್ತಿಲ್ಲದೇ ಅವರು ಮಾತಾಡಿದ್ದು ತಪ್ಪು. ಮತ್ತ ಕೆಲವರು ನಮ್ಮ ಸಂಸ್ಥೆ ದುರ್ಬಲ ಮಾಡಲು ಪ್ರಯತ್ನಿಸುತ್ತಿದ್ದಾರೆ.ಯಾರೋ ಹೇಳಿದ್ದು ಕೇಳಿ, ಪ್ರಚೋದನೆಗೆ ಒಳಗಾಗಿ ಹೇಳಿಕೆ ಕೋಡುವುದು ತಪ್ಪದ.
ಸಿಮೂ: ನಿಮ್ಮ ಸಂಸ್ಥೆಯ ವಿರುದ್ಧ ಯಾರಾದರೂ ಬರೆದರೆ ಬಹುತೇಕರು ಪುಡಿ ರೌಡಿಗಳ ತರಹ ವರ್ತನೆ ಮಾಡುತ್ತಾರೆ, ನೀವೇನು ಪ್ರಶ್ನಾತೀತರೆ?
ಶಿಪಾ: ಇಲ್ಲ. ಇಲ್ಲಿ ಯಾರು ಸಹ ಪ್ರಶ್ನಾತೀತರಲ್ಲ. ನಮ್ಮ ತಪ್ಪು ಇದ್ರೇ ತಿದ್ಕೋತ್ತೇವೆ.
ಸಿಮೂ: ಈಗ ನಿಮ್ಮ ಮುಂದಿನ ನಡೆ ಏನಿದೆ ಗೌಡ್ರೇ?
ಶಿಪಾ: ಧನ್ನೂರ ಲಿಂಗದೇವ ಗುಮ್ಮ ತೋರಿಸಿ ಸಂಸ್ಥೆ ಹೈಜಾಕ್ ಮಾಡಲು ಪ್ಲಾನ್ ಮಾಡಿದ್ದಾನೆ.. ‘ಬಧಪಿ’ದ ಈ ಅಹಿತಕರ ಬೆಳವಣಿಗೆಗೆ ‘ಲಿಂಗದೇವ’ ಅಲ್ಲ; ಧನ್ನೂರ ಮೂಲ ಕಾರಣ. ಮೊದಲು ಅವನಿಂದ ನಮ್ಮ ಸಂಸ್ಥೆ ಉಳಸಿಕೊಳ್ಳಬೇಕು ಮತ್ತು ಗಂಗಾ ಮಾತಾಜಿರವರಿಗೂ ಉಳಸಿಕೊಳ್ಳಬೇಕು.. ಇವೆರಡೂ ನಮ್ಮ ಫಸ್ಟ್ ಆದ್ಯತೆ ಅವಾ.
ಸಿಮೂ: ಗಂಗಾ ಮಾತಾಜಿರವರಿಗೂ ಉಳಸಿಕೊಳ್ಳಬೇಕೆ?
ಶಿಪಾ: ಹೌದು. ಅವರ ಜೀವಕ್ಕೂ ಧೋಖಾ ಇದೆ.ಅವರು ಮುಗ್ದರು. ದೊಡ್ಡ ಮಾತಾಜಿಯವರನ್ನೇ ಇವ್ರು ಬಿಟ್ಟಿಲ್ಲ. ಇನ್ನು ಇವರನ್ನು ಬಿಡುತ್ತಾರೆಯೇ.
ಸಿಮೂ:ಅವರಿಗೆ ಯಾರಿಂದ ಧೋಖಾ ಇದೆ?
ಶಿಪಾ: ಎಲ್ಲವೂ ಕಣ್ಣೆದುರೇ ಅದಾ ಅಲಾ.
ಸಿಮೂ: ಈ ಜಗಳಕ್ಕೆ ಕೊನೆಯೇ ಇಲ್ಲವೇ?
ಶಿಪಾ: ಅದಾ ಯಾಕಿಲ್ಲ.. ಧನ್ನೂರ ಒಬ್ಬ ಇಲ್ಲಿಂದ ಹೊರಗೆ ಹೋದರೆ ನಮ್ಮ ಎಲ್ಲಾ ಸಮಸ್ಯೆಗಳು ಮುಗಿದಂತೆ. ಈಗ ಮೂರ್ನಾಲ್ಕು ದಿನದಲ್ಲಿ ಗಂಗಾ ಮಾತಾಜಿ, ನಾವು,ಚನ್ನಬಸವಾನಂದ ಸ್ವಾಮೀಜಿ ಮತ್ತು ಹೈದರಾಬಾದ್ ಶರಣರು ಎಲ್ಲಾ ಹೈದರಾಬಾದ್ ನಲ್ಲಿ ಸೆರುತ್ತಿದ್ದೇವೆ.ಅವತ್ತು ಎಲ್ಲವೂ ಸುಖಾಂತ್ಯವಾಗುತ್ತದೆ ಎನ್ನುವ ವಿಶ್ವಾಸ ನಮಗಿದೆ.
ಸಿಮೂ: ಗಂಗಾ ಮಾತಾಜಿ ಸಮಯ ಕೊಟ್ಟಿದ್ದಾರಯೇ?
ಶಿಪಾ: ಹಾಂ, ಕೊಟ್ಟಿದ್ದಾರೆ. ಹೈದರಾಬಾದ್ ಶರಣರು ಎಲ್ಲರನ್ನೂ ಮುಖಾಮುಖಿ ಕೂಡಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಎರಡ್ಮೂರು ದಿನದಲ್ಲಿ ಕೂಡುತ್ತೇವೆ.
ಸಿಮೂ: ಇಲ್ಲಿಯವರೆಗೆ ನಮ್ಮ ಜೊತೆಗೆ ಮಾತಾಡಿದಕ್ಕೆ ಧನ್ಯವಾದಗಳು ತಮಗೆ!
ಶಿಪಾ: ನಮಸ್ಕಾರ. ತಮಗೂ ಧನ್ಯವಾದಗಳು.