ದ ಪಾಲಿಟಿಕ್

ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧ ಒಂದೇ ಸಮನೆ ದಾಳಿ ಮಾಡುತ್ತಿರುವುದೇಕೆ ?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಾಏಕಿ ಸಂಘಪರಿವಾರದ ವಿರುದ್ಧ ಉಗ್ರವಾಗಿ ಮುಗಿಬಿಳುತ್ತಿರುವುದು ಬಹುತೇಕರಿಗೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೇಶದಾದ್ಯಂತ ಆರೆಸ್ಸೆಸ್ ವಿರುದ್ಧ ಬಹಿರಂಗವಾಗಿ ಚರ್ಚೆ, ಟೀಕೆ ಶುರುವಾಗಿದ್ದು ಒಂದು ಸಮಾಧಾನಕರ ಸಂಗತಿಯಾಗಿದೆ. ಅದರ ಭಾಗವಾಗಿಯೇ ಕುಮಾರಸ್ವಾಮಿ ಮಾತಾಡುತ್ತಿದ್ದಾರೆಯೇ? ಉಹೂಂ, ಇಲ್ಲವೇ ಇಲ್ಲ.

ಒಂದು ಹಿಡನ್ ಅಜೆಂಡಾ ಇಟ್ಟುಕೊಳ್ಳದೆ,ಈ ರೀತಿಯಾಗಿ ಮುಗಿಬಿಳುವ ಆಸಾಮಿ ಅವರಂತು ಖಂಡಿತಾ ಅಲ್ಲ.ಅವರ ರಾಜಕೀಯ ಹೆಜ್ಜೆ ಗುರುತುಗಳೆ ಇದಕ್ಕೆ ಸಾಕ್ಷಿ ಎಂಬಂತೆ ಇವೆ. ಮೊನ್ನೆ ಆರೆಸ್ಸೆಸ್ ಬಗ್ಗೆ ದಿನೇಶ್ ನಾರಾಯಣ ಅವರು ಬರೆದಿರುವ ‘ದಿ ಆರೆಸ್ಸೆಸ್: ಯ್ಯಾಂಡ್ ಮೇಕಿಂಗ್ ಆಫ್ ದಿ ಡೀಪ್ ನೇಷನ್’ ( the RSS: And the making of the deep nation) ಎಂಬ ಪುಸ್ತಕ ಓದಿದ ಮೇಲೆಯೇ ಅವರಿಗೆ ಅದರ ಹೂರಣ ಗೊತ್ತಾಗಿದೆಯೇ? ಅದಕ್ಕೂ ಮೊದಲು ಆ ಸಂಘಟನೆಯ ಬಗ್ಗೆ ಏನೇನು ಗೊತ್ತಿರಲಿಲ್ಲವೆ?! ಎಲ್ಲವೂ ಗೊತ್ತಿದೆ.(ಸಂಘಪರಿವಾರದ ವಿಸ್ತೃತ ಜಾಲದ ಬಗ್ಗೆ ವಿವರವಾಗಿ ಅರಿವುಳ್ಳ ಎಚ್ ಡಿ ದೇವೇಗೌಡರು ಸಹ ಇಡೀ ತನ್ನ ರಾಜಕೀಯ ಚರಿತ್ರೆಯಲ್ಲಿ ಎಂದೂ ಸಹ ಗಟ್ಟಿಯಾಗಿ ಅದರ ವಿರುದ್ಧ ಧ್ವನಿ ಎತ್ತಿದ ನಿದರ್ಶನಗಳಿಲ್ಲ)

ಗೊತ್ತಿದ್ದೂ ಸಹ ಈ ಸಂದರ್ಭದಲ್ಲೇಕೆ ಮಾತಾಡುತ್ತಿದ್ದಾರೆ? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಉಪಚುನಾವಣೆ ಕಾರಣವಿರಬಹುದೇ? ಸ್ವಲ್ಪ ಮಟ್ಟಿಗೆ ಇರಬಹುದು. ಆದರೆ, ಅವರ ಮುಖ್ಯ ಗುರಿ ಕೇವಲ ಉಪಚುನಾವಣೆ ಮಾತ್ರವಲ್ಲ. ಅವರ ಪೂರ್ಣ ಗಮನವಿರುವುದು ಒಂದುವರೆ ವರ್ಷದ ನಂತರ ಬರುವ ವಿಧಾನಸಭಾ ಚುನಾವಣೆಯ ಮೇಲೆ.ಅದನ್ನು ಗಮನವಿಟ್ಟುಕೊಂಡೆ ಅವರು ಈಗಿನಿಂದಲೇ ಬಿಜೆಪಿ ಕೈಬಲಪಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಒಂದುಕಡೆ,ಮುಖ್ಯ ಭೂಮಿಕೆಯಿಂದ ಬಿಜೆಪಿಯ ಅಧಿಪತಿಗಳು ಯಡಿಯೂರಪ್ಪನನ್ನ ಬದಿಗೆ ಸರಿಸಿದ ನಂತರ ನಿಸ್ಸಂದೇಹವಾಗಿ ಕರ್ನಾಟದಲ್ಲಿ ಭಾಜಪದ ಶಕ್ತಿ ಕುಂದಿದೆ. ಕಳೆದ ವಿಧಾನಸಭಾ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೆ ಎದುರಿಸಿದರು ಬಿಜೆಪಿಗೆ ನೂರಾ ನಾಲ್ಕು ಸ್ದಾನಗಳು ಮಾತ್ರ ಬಂದಿವೆ.ಈಗ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಗೆ ಹೋದರೆ ಅಬ್ಬಬ್ಬಾ ಅಂದರೆ ಎಂಭತ್ತು ಸ್ಥಾನಗಳ ಮಾತ್ರ ಬರಬಹುದು ಎನ್ನುವ ಲೆಕ್ಕಚಾರ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಮತ್ತೊಂದೆಡೆ, ರಾಜಕೀಯ ಬೆಳವಣೆಗೆಯಿಂದಾಗಿ ಈಗಾಗಲೇ ಜೆಡಿಎಸ್ ಪಕ್ಷದ ಕೆಲವು ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.ಜೆಡಿಎಸ್ ಪಕ್ಷವು ಕಳೆದ 2018 ರಲ್ಲಿ ಭಾಜಪ ಜತೆಗೆ
ಒಳಒಪ್ಪಂದ ಮಾಡಿಕೊಂಡು ಬೆವರು ಸುರಿಸಿದರು ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಪಡೆಯಲಾಗಲಿಲ್ಲ.ಆದರೆ, ಇವರ ಒಳಒಪ್ಪಂದದಿಂದ ಕೆಲವು ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ ಆಗಿದೆ.ಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳಿಗೂ ಮತ್ತೆ ಒಳಒಪ್ಪಂದ ಮಾಡಿಕೊಳ್ಳುವ ದರ್ದಿದೆ.

ಏಕೆಂದರೆ, ಒಂದು ವೇಳೆ ಬಿಜೆಪಿ 80 ರ ಆಸುಪಾಸು ಬರದಿದ್ದರೆ, ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹತ್ತಬಹುದು ಎನ್ನುವ ಚಿಂತೆ ಕುಮಾರಸ್ವಾಮಿ ಮತ್ತು ಬಿಜೆಪಿಯ ಮುಖಂಡರಿಗೆ ಕಾಡುತ್ತಿದೆ.ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎನ್ನುವುದೇ ಕುಮಾರಸ್ವಾಮಿ ಅವರ ಹಿಡನ್ ಅಜೆಂಡಾವಾಗಿದೆ. ಅದರ ಭಾಗವಾಗಿಯೇ ಇತ್ತೀಚೆಗೆ ಅವರು ಸಂಘಪರಿವಾರದ ಮೇಲೆ ಒಮ್ಮೆಲೇ ಮುಗಿಬಿಳುತ್ತಿರುವದು.ಇವರು ಆರೆಸ್ಸೆಸ್ ಮೇಲೆ ಉಗ್ರವಾಗಿ ದಾಳಿ ಮಾಡಿದಷ್ಟು ಹಿಂದೂ ಮತಗಳು ಧ್ರುವೀಕರಣಗೊಂಡು ಅದರ ರಾಜಕೀಯ ಕೂಸಾದ ಬಿಜೆಪಿಗೆ ಲಾಭವಾಗುತ್ತದೆ ಎನ್ನುವ ಸ್ಪಷ್ಟ ರಾಜಕೀಯ ಪ್ರಜ್ಞೆ ಅವರಿಗಿದೆ.

ಹೆಚ್ಚೆಚ್ಚು ದಾಳಿ ಮಾಡಿದರೆ ಕಾಂಗ್ರೆಸ್ ಜತೆಗಿರುವ ಮುಸ್ಲಿಂ ಮತ ಬ್ಯಾಂಕಿನ ಹತ್ತಿಪ್ಪತ್ತು ಅಥವಾ ಸ್ವಲ್ಪ ಷೇರುಗಳನ್ನಾದರೂ ಜೆಡಿಎಸ್ ಪಕ್ಷದ ಕಡೆಗೆ ಸೆಳೆಯಬಹುದು ಎನ್ನುವ ಆಲೋಚನೆಯಲ್ಲಿದ್ದಾರೆ. ಮುಸ್ಲಿಂ ಮತಬ್ಯಾಂಕ್ ಒಡೆದಾಗ ಮಾತ್ರ ಕಾಂಗ್ರೆಸ್ ಪಕ್ಷದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬಹುದು ಎಂಬ ರಾಜಕೀಯ ಲೆಕ್ಕಚಾರದಲ್ಲಿ ಮುಳುಗಿದ್ದಾರೆ.

ಒಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವುದೇ ನೆಲೆಯಿಲ್ಲದ ಕೆಲವು ಕ್ಷೇತ್ರದಲ್ಲಿ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕು ಎನ್ನುವುದೇ ಅವರ ತುರ್ತು ಹಿಡನ್ ಅಜೆಂಡಾವಾಗಿದೆ.ಆಗ ಮಾತ್ರ ಭಾಜಪ 80ರ ಆಚೀಚೆ ಬರಬಹುದು ಎಂದು ಭಾವಿಸಿದ್ದಾರೆ. ಒಂದುವೇಳೆ ಬಿಜೆಪಿಯ ಗಳಿಕೆ 50- 60 ಕ್ಕೆ ಸೀಮಿತವಾದರೆ, ಆ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಕಷ್ಟವಾಗಬಹುದು ಎನ್ನುವ ಭೀತಿಯೂ ಸಂಘಪರಿವಾರದ ಮೇಲೆ ಮುಗಿಬಿಳಲು ಮೂಲಕಾರಣವಾಗಿದೆ ವಿನಹಃ ಯಾವುದೇ ಸೈದ್ಧಾಂತಿಕ ಕಾರಣವಿಲ್ಲ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!