ದ ಪಾಲಿಟಿಕ್

ಖರ್ಗೆ ಕಾಂಗ್ರೆಸ್ಸಿನ ಜೆ ಪಿ ನಡ್ಡಾ ಆಗದಿರಲಿ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

137 ವರ್ಷಗಳ ಸುದೀರ್ಘ – ವರ್ಣರಂಜಿತ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆರನೇ ಬಾರಿ ನಡೆದ ಚುನಾವಣೆ ಇದಾಗಿದೆ. ಉಳಿದ ಸಂದರ್ಭದಲ್ಲೆಲ್ಲ ಒಮ್ಮತದ ಮೂಲಕವೇ ಅಧ್ಯಕ್ಷರನ್ನ ಆಯ್ಕೆ ಮಾಡಿದ್ದಾರೆ. ಇದುವರೆಗೆ ಆಗಿರುವ ಅಧ್ಯಕ್ಷರಗಳಲ್ಲಿ ನೆಹರೂ – ಗಾಂಧಿ ಕುಟುಂಬದ್ದೆ ಸಿಂಹಪಾಲು. ಮೋತಿಲಾಲ್ ನೆಹರೂ ಅವರಿಂದ ರಾಹುಲ್ ಗಾಂಧಿಯವರಿಗೆ ಗಾಂಧಿ ಕುಟುಂಬದಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದವರ ಸಂಖ್ಯೆ ಆರು. ಗಾಂಧಿ ಕುಟುಂಬದ ಒಪ್ಪಿಗೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲಾಡುವುದಿಲ್ಲ. 

ರಾಹುಲ್ ಗಾಂಧಿ ಯಾ ಗಾಂಧಿ ಕುಟುಂಬದ ವ್ಯಕ್ತಿಯ ಹೊರತು ಪಡಿಸಿ ಯಾರೇ ಪಕ್ಷದ ಅಧ್ಯಕ್ಷರಾದರು ಸಹ ಅವರು ಡಮ್ಮಿ ಆಗಿರುತ್ತಾರೆ ಎನ್ನುವುದು ನಿರ್ವಿವಾದ. ಪ್ರಸಕ್ತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸಹ ಇದರಿಂದ ಹೊರತಲ್ಲ. ಖರ್ಗೆ ಅವರ ಹಿರಿತನ, ಪಕ್ಷ ನಿಷ್ಠೆ, ಬದ್ಧತೆ ಇವೆಲ್ಲದರ ಜತೆಗೆ ಪರೋಕ್ಷವಾಗಿ ಇವರು ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ಎಂಬ ಸಂಗತಿ ಎಲ್ಲೆಡೆ ಹರಡಿದ್ದು ಸಹ ಇವರು ಚುನಾವಣೆಯಲ್ಲಿ ಇಷ್ಟೊಂದು ಅಂತರದಲ್ಲಿ ಗೆಲುವಿಗೆ ರಹದಾರಿ ಆಗಿದ್ದು ಸುಳ್ಳಲ್ಲ. 

ಚುನಾವಣೆ ಪೂರ್ವದಲ್ಲಿ ಖರ್ಗೆ ಗೆಲ್ಲುತ್ತಾರೆಂದು ಖಚಿತವಾಗಿದ್ದು ಸಹ ಇವರು ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿ ಎನ್ನುವ ಕಾರಣಕ್ಕೆ‌. ರಾಹುಲ್ ಗಾಂಧಿ ಆದಿಯಾಗಿ ಯಾರೇನೇ ಹೇಳಿದರು ಈಗಲೂ ಪಕ್ಷದ ಮುಖವಾಣಿಯಾಗಿ ಪಕ್ಷದ ಕೇಂದ್ರ ಸ್ಥಾನದಲ್ಲಿ ರಾಹುಲ್ ಗಾಂಧಿಯೇ ಇರುತ್ತಾರೆ. ಇದರಿಂದ ಕಾಂಗ್ರೆಸ್ ನಲ್ಲಿ ಎರಡು ಪವರ್ ಸೆಂಟರ್ ಸೃಷ್ಟಿ ಆಗುತ್ತವೆ. ಕಾಂಗ್ರೆಸ್ನಲ್ಲಿ ಗಾಂಧಿಯೇತರ ಕುಟುಂಬದ ವ್ಯಕ್ತಿ ಅಧ್ಯಕ್ಷ ಆದಾಗಲೆಲ್ಲ, ಗಾಂಧಿ ಕುಟುಂಬದ್ದೆ ಪರಮಾಧಿಕಾರ ಇತ್ತೇ ವಿನಾ ಅಧ್ಯಕ್ಷರದಲ್ಲ ಎನ್ನುವುದು ಕಾಂಗ್ರೆಸ್ ಪಕ್ಷದ ಚರಿತ್ರೆಯೇ ಹೇಳುತ್ತದೆ. 

ಕಾಂಗ್ರೆಸ್ ಪಕ್ಷಕ್ಕೆ ಶಶಿ ತರೂರ್ ಗಿಂತಲೂ ಖರ್ಗೆಯವರೇ ಹೆಚ್ಚು ಸೂಕ್ತವಾದ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಖರ್ಗೆಯವರು ವಿವಾದಿತ ವ್ಯಕ್ತಿ ಅಲ್ಲ. ಜತೆಗೆ ಕಾಂಗ್ರೆಸ್ ಪಕ್ಷದೊಳಗಿನ ವಿವಿಧ ಬಣಗಳನ್ನು ಮತ್ತು ಕಾಂಗ್ರೆಸ್ನ ಮಿತ್ರ ಪಕ್ಷಗಳನ್ನು ಜೊತೆಗೂಡಿ ಕರೆದುಕೊಂಡು ಹೋಗುವ ಚಾಕುಚಕ್ಯತೆ ಖರ್ಗೆಯವರಿಗಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷದ G – 23 ಬಣದ ನಾಯಕರು ಸಹ ಶಶಿ ತರೂರ್ ಚುನಾವಣಾ ಕಣದಲ್ಲಿ ಇದ್ದರೂ ಬಹಿರಂಗವಾಗಿ ಖರ್ಗೆ ಪರವಾಗಿ ಬ್ಯಾಟಿಂಗ್ ಬೀಸಿದ್ದು. 

ಭಾಜಪದಲ್ಲಿ ಯಾರೇ ಅಧ್ಯಕ್ಷರಾದರೂ, ಪಕ್ಷದ ವ್ಯಕ್ತಿ ಪ್ರಧಾನ ಮಂತ್ರಿಯಾದರೂ ಸಂಘಪರಿವಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಾರೆ. ಸಂಘದ ಕೆಂಗಣ್ಣಿಗೆ ಗುರಿಯಾದವರು ಅವರೆಷ್ಟೆ ಪ್ರಭಾವಶಾಲಿ ಆಗಿದ್ದರೂ ಅವರು ಮೂಲೆಗುಂಪು ಆಗುತ್ತಾರೆ ಎನ್ನುವುದಕ್ಕೆ ಅಡ್ವಾಣಿಯವರ ನಿದರ್ಶನವೇ ನಮ್ಮ ಕಣ್ಣೆದುರಿಗಿದೆ. ಬಿಜೆಪಿಯ ಹೈಕಮಾಂಡ್ ಹೇಗೆ ಸಂಘಪರಿವಾರ ಇದೆಯೋ, ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬವೇ ಹೈಕಮಾಂಡ್ ಆಗಿದೆ. ಈ ಕುಟುಂಬದ ಬಗ್ಗೆ ಕಾರ್ಯಕರ್ತರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಗಾಂಧಿ ಕುಟುಂಬ ಕಾಂಗ್ರೆಸ್ ಪಕ್ಷದ ಶಕ್ತಿಯೂ ಹೌದು ಮಿತಿಯೂ ಹೌದು. 

ಖರ್ಗೆಯವರು ಗಾಂಧಿ ಕುಟುಂಬದ ನೆರಳಿನಲ್ಲೇ ಕಾರ್ಯನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಜೆ ಪಿ ನಡ್ಡಾ ಆಗುತ್ತಾರೋ ಅಥವಾ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಕಾಂಗ್ರೆಸಿನ ಈ ಕಾಲದ ಸುಭಾಷ್ ಚಂದ್ರ ಬೋಸ್ ಆಗುತ್ತಾರೋ ಎನ್ನುವುದು ಕಾಲವೇ ನಿರ್ಧರಿಸುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!