ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಯಲ್ಲಿ ಜಾರಿ ನಿರ್ದೇಶನಾಲಯ [ಇ.ಡಿ] ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತು. ಚುನಾವಣಾ ಸಂದರ್ಭದಲ್ಲಿ ತನ್ನ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಹೈಕೋರ್ಟ್ ಕದ ತಟ್ಟಿದರು. ನ್ಯಾಯಲಯ ಅವರ ಜಾಮೀನು ರದ್ದು ಪಡಿಸಿತು. ಅನಿವಾರ್ಯವಾಗಿ ಅವರು ಸುಪ್ರೀಂ ಕೋರ್ಟ್ ಮೊರೆ ಹೊಗಿದ್ದರು. ಚುನಾವಣಾ ಸಂದರ್ಭದಲ್ಲೇಕೆ ಅವರನ್ನು ಬಂಧಿಸಿದಿರಿ ಎಂದು ʼಇ.ಡಿʼಗೆ ಕೋರ್ಟ್ ಕೇಳಿದಾಗ ಅಧಿಕಾರಿಗಳು ಉತ್ತರಿಸಲು ತಡಬಡಿಸಿದರು.
ಇಂದು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಜೂನ್ ಒಂದರವರೆಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಕೊನೆಯ ಹಂತದ ಚುನಾವಣಾ ಪ್ರಚಾರ [ಜೂನ್ 01] ಮುಗಿಸಿಕೊಂಡು ಜೂನ್ ಎರಡರಂದು ನ್ಯಾಯಲಯಕ್ಕೆ ಹಾಜರಾಗಬೇಕೆಂದು ತಾಕೀತು ಮಾಡಿದೆ.
ಜಾಮೀನು ದೊರೆತರೂ ಕೇಜ್ರಿವಾಲ್ ಮುಖ್ಯಮಂತ್ರಿ ಕಛೇರಿಗೆ ಹಾಗೂ ಸಚಿವಾಲಯಕ್ಕೆ ಹೋಗಬಾರದು. ಕಡತಗಳಿಗೆ ಸಹಿ ಹಾಕಬಾರದು. ಅಬಕಾರಿ ನೀತಿ ಹಗರಣದಲ್ಲಿ ತನ್ನ ಪಾತ್ರದ ಬಗ್ಗೆ ಹೇಳಿಕೆ ನೀಡಬಾರದು. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳಿಗೆ ಭೇಟಿ ಆಗಬಾರದು ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ಕಡತಗಳನ್ನು ನೋಡಬಾರದೆಂದು ತಿಳಿಸಿದೆ.
ಇದೇ ಹಗರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಸಚಿವ ಸತ್ಯೆಂದ್ರ ಜೈನ್ ಬಂಧನವಾಗಿ ಜೈಲಿನಲ್ಲಿದ್ದಾರೆ. ಎಎಪಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೋವಾ, ದೆಹಲಿ, ಗುಜರಾತ್, ಹರಿಯಾಣ ಮತ್ತು ಚಂಡೀಗಢ – ರಾಜ್ಯದಲ್ಲಿ ಸ್ಪರ್ಧಿಸುತ್ತಿದೆ. ದೆಹಲಿ ಹೊರತು ಪಡಿಸಿ ಉಳಿದ ಕಡೆ ಸ್ವತಂತ್ರವಾಗಿಯೇ ಸ್ಪರ್ಧಿಸುತ್ತಿದೆ. ತಾರಾ ಪ್ರಚಾರಕರಿಲ್ಲದೆ ʼಎಎಪಿʼ ಕಳೆ ಗುಂದಿತ್ತು.
ಚುನಾವಣೆ ಸಂದರ್ಭದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು ʼಎಎಪಿʼ ಮತ್ತು ʼಇಂಡಿ ಒಕ್ಕೂಟʼಕ್ಕೆ ಬಲ ಬಂದಂತ್ತಾಗಿದೆ. ಎದುರಾಳಿಗಳು ಅಬಕಾರಿ ಹಗರಣವನ್ನೇ ಚುನಾವಣಾ ವಿಷಯ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಪಕ್ಷ ಕಟ್ಟುವ ಮುಂಚೆ ಭ್ರಷ್ಟಾಚಾರದ ವಿರುದ್ದ ಹೋರಾಡಿ, ಪಕ್ಷ ಕಟ್ಟಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದಲ್ಲಿ ಮುಳಿಗಿದ್ದಾರೆ ಎಂದು ಹಾದಿಬೀದಿಯಲ್ಲಿ ಹೇಳುತ್ತಿದ್ದಾರೆ. ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಏನೇನು ಹೇಳಬಾರದೆಂದು ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ. ತನ್ನ ಮೇಲೆ, ತಮ್ಮ ಸಹದ್ಯೋಗಿಗಳ ಮೇಲೆ ಬಂದಿರುವ ಈ ಆರೋಪಕ್ಕೆ ಚುನಾವಣಾ ಸಂದರ್ಭದಲ್ಲಿ ಕೇಜ್ರಿವಾಲ್ ಹೇಗೆ ಉತ್ತರಿಸುತ್ತಾರೆ ಎಂಬುವುದು ಕುತೂಹಲಕಾರಿಯಾಗಿದೆ.