ದ ಪಾಲಿಟಿಕ್

ನೇಗಿನಾಳ ಶ್ರೀಗಳ ಸಾವಿಗೆ ನ್ಯಾಯ ಸಿಗಲಿ! 

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಒಂದು ಹುಸಿ ಆಡಿಯೋದಿಂದ ನೇಗಿನಾಳ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಶುದ್ಧ ತಪ್ಪು! ಆರೋಪ ಬಂದವರೆಲ್ಲರೂ ಆತ್ಮಹತ್ಯೆಯ ದಾರಿ ತುಳಿದರೆ, ಈ ಜಗತ್ತೇ ಸ್ಮಶಾನವಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರ ಮೇಲೂ ಆರೋಪ ತಪ್ಪಿದ್ದಲ್ಲ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಇದ್ದವರ ಮೇಲಂತೂ ಆರೋಪ, ಪ್ರತ್ಯಾರೋಪಗಳು, ಟೀಕೆ, ಟಿಪ್ಪಣಿಗಳು ಬರುವುದು ಸಹಜ.  

ನೇಗಿನಾಳ ಶ್ರೀಗಳ ಬಗ್ಗೆ ಕಿತ್ತೂರ ಕರ್ನಾಟಕ ಭಾಗದ ಜನರಲ್ಲಿ ಎಲ್ಲಿಲ್ಲದ ಗೌರವ, ಅಭಿಮಾನ ಮತ್ತು ಅಪಾರ ಪ್ರೀತಿ ಇತ್ತು. ಅವರು ನಡೆನುಡಿ ಒಂದಾಗಿಸಿಕೊಂಡು ಬದುಕಿದವರು. ಮುಖವಾಡ ಧರಿಸದೆ, ನೇರವಾಗಿ ಬದುಕಿದ ಅಪರೂಪದ ಸ್ವಾಮೀಜಿ ಆಗಿದ್ದರು. ಇಂತಹ ಸ್ವಾಮೀಜಿ ಇವತ್ತು ಇಲ್ಲವೆಂದರೆ ನೀಜಕ್ಕೂ ನಂಬಲು ಆಗುತ್ತಿಲ್ಲ. ಅವರು ಬೆಳ್ಳಂಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು ಕೇಳಿ ಅವರ ಭಕ್ತವಲಯ ಮತ್ತು ಇಡೀ ಲಿಂಗಾಯತರು ಬೆಚ್ಚಿಬಿದ್ದಿದ್ದರು.

ನೇಗಿನಾಳ ಶ್ರೀಗಳು ತತ್ವವನ್ನು ಕಠೋರವಾಗಿ ಹೇಳುತ್ತಿದ್ದರು. ಅಷ್ಟೇ ಸೂಕ್ಷ್ಮ ಮನಸ್ಸಿನವರಾಗಿದ್ದರು. ಎಂದು ಯಾವತ್ತೂ ಯಾರಿಗೂ ಉದ್ದೇಶಪೂರ್ವಕವಾಗಿ ನೋವು ಮಾಡಿದವರಲ್ಲ. ಸಮಾಜದ ನೋವು, ದುಃಖ ಕಂಡು ಮಮ್ಮಲ ಮರುಗಿತ್ತಿದ್ದ ತಾಯಿ ಹೃದಯ ಅವರದಾಗಿತ್ತು. ಯಾರಿಂದಲೂ ಸಹ ನಯಾಪೈಸೆ ಹಣ ಪಡಿಯದೆ ತನ್ನ ಕೃಷಿ ಕಾಯಕದಿಂದಲೇ ಮಠವನ್ನು ಮುನ್ನಡೆಸಿದವರು. ಐಷಾರಾಮಿ ಕಾರು ನನಗೆ ಬೇಡವೆಂದು ಅದನ್ನು ಮಾರಿ, ಬಂದ ಹಣದಿಂದ ಟ್ರ್ಯಾಕ್ಟರ್ ತೆಗೆದುಕೊಂಡ ಸ್ವಾಮೀಜಿ ಸ್ವತಃ ಹೊಲದಲ್ಲಿ ಉಳುಮೆ ಮಾಡುತ್ತಿದ್ದರು. ತನ್ನ ಸುತ್ತಲಿನ ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿತ್ತ ಅಪರೂಪದ ಸ್ವಾಮೀಜಿ ಅವರಾಗಿದ್ದರು.

ಈ ಕುರಿತು ಶ್ರೀಗಳ ಆಪ್ತರಾಗಿದ್ದ ಬೆಳಗಾವಿಯ ಶಂಕರ ಗುಡಾಸ ಅವರ ಜೊತೆಗೆ ‘ದಿ ಪೊಲಿಟಿಕ್’ ಮಾತನಾಡಿದಾಗ ‘ಶ್ರೀಗಳು ಒಳ್ಳೆಯ ಬಸವತತ್ವ ಪ್ರಚಾರಕರಾಗಿದ್ದರು. ಅವರು ಎಷ್ಟು ಕಠೋರವಾಗಿ ಬಸವ ತತ್ವ ಹೇಳುತ್ತಿದ್ದರೋ ಅಷ್ಟೇ ಮೃದುವಾಗಿದ್ದರು. ಜತೆಗೆ ತುಂಬಾ ಸೂಕ್ಷ್ಮ ಮನಸ್ಸಿನವರಾಗಿದ್ದರು. ಅವರ ಸಾವಿಗೆ ಆ ಆಡಿಯೋನೇ ಕಾರಣವಾಗಿದೆ. ಈಗಾಗಲೇ ನಿನ್ನೆ ಆ ಇಬ್ಬರು ಮಹಿಳೆಯರ ಮೇಲೆ ಎಫ್ಐಆರ್ ದಾಖಲಾಗಿಸಿದ್ದೇವೆ. ಸರಿಯಾದ ತನಿಖೆಯಾಗಿ ಮಾಡಿ, ಅವರಿಬ್ಬರಿಗೂ ಸರ್ಕಾರ ತಕ್ಕ  ಶಿಕ್ಷೆ ಕೊಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ನೇಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅವರ ಮೇಲೆ ಇಟ್ಟಿರುವ ಗೌರವ, ಪ್ರೀತಿ ಮತ್ತು ಭಕ್ತಿ ನೋಡಿ ನಾನೇ ಕೆಲವು ಸಲ ಅವಕ್ಕಾಗಿದ್ದೆ. ಲಿಂಗಾಯತ ಹೋರಾಟದ ಸಂದರ್ಭದಲ್ಲಿ ಬೆಳಗಾಂ ಸಮಾವೇಶದ ಯಶಸ್ಸಿಗೆ ಇವರು ಪಟ್ಟ ಶ್ರಮ ಹೇಳತ್ತಿರದು. ಆ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲಿರುಳು ಓಡಾಟ ನಡೆಸಿದ್ದು ಈಗಲೂ ನಮ್ಮ ಕಣ್ಮುಂದಿದೆ.

ಇಂತಹ ಸ್ವಾಮೀಜಿ ‘ಇಂದಿಲ್ಲ’ ಎನ್ನುವುದು ನಂಬಲಾಗುತ್ತಿಲ್ಲ. ಇವರ ಸಾವಿಗೆ ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ ಆ ಆಡಿಯೋನೇ ಕಾರಣ ಎನ್ನಲಾಗುತ್ತಿದೆ‌. ಅದು ಮೇಲ್ನೋಟಕ್ಕೆ ನೀಜವೇ ಅನಿಸುತ್ತಿದೆ. ಕಳೆದೆರಡು ದಿನಗಳಿಂದ ಅವರು ತುಂಬಾ ನೊಂದು ಕೊಂಡು, ಮಠದಿಂದ ಆಚೆಗೆ ಬಂದಿರಲಿಲ್ಲವಂತೆ, ಊಟ, ನಿದ್ರೆಯೂ ಸರಿಯಾಗಿ ಮಾಡದೆ, ತನ್ನ ಪಾಡಿಗೆ ತಾನಿದ್ದರಂತೆ. 

ಯಾರೇ ಆಗಿರಲಿ ಫೋನ್ ನಲ್ಲಿ ಮಾತಾಡುವಾಗ ಎದುರಿನವರ ಅರ್ಥಾತ್ ನಾವು ಮಾತನಾಡುತ್ತಿರುವ ವ್ಯಕ್ತಿಯ ಪರವಾನಗಿ ಇಲ್ಲದೆ ಅಥವಾ ಅವರ ಗಮನಕ್ಕೆ ತರದೆ ಕಾಲ್ ರಿಕಾರ್ಡ್ ಮಾಡಿಕೊಳ್ಳುವುದು ಅಕ್ಷಮ್ಯ ಅಪರಾಧ. ರೀಕಾರ್ಡ್ ಮಾಡಿಕೊಳ್ಳುವದಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ವಿಕೃತ ಮನಸ್ಥಿತಿಯ ದ್ಯೋತಕ. ಯಾರೋ ನಮ್ಮ ಮೇಲಿರುವ ನಂಬಿಕೆಯಿಂದ ಲೋಕಾಭಿರಾಮವಾಗಿ ಮಾತನಾಡುವಾಗ ‘ಅಪಥ್ಯ’ ವಾದ ಕೆಲವು ಮಾತುಗಳನ್ನೂ ಆಡಬಹುದು, ಹಾಗಂತ ಅದನ್ನು ನಾವು ರೀಕಾರ್ಡ್ ಮಾಡಿಕೊಂಡು , ಹೊರಗೆ ಹರಿಬಿಡುತ್ತಾ ಹೊದರೆ ಈ ಜಗತ್ತಿನಲ್ಲಿ ‘ನಂಬಿಕೆ’ ಎನ್ನುವ ಪದಕ್ಕೆ ಯಾವುದೇ ಅರ್ಥ ಇರುವುದಿಲ್ಲ. 

ಹೋಗಲಿ ಆ ಮಾತಿನಲ್ಲಿ ಏನಾದರೂ ಸತ್ಯಾಂಶವಾದರೂ ಇದೆಯೇ. ಅದರಲ್ಲಿ ಏಳೆಂಟು ಜನ ಸ್ವಾಮೀಜಿಗಳ ಹೆಸರು ಉಲ್ಲೇಖ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆ ಏಳು ಜನ ಸ್ವಾಮೀಜಿಗಳು ಫೋನ್ ನಲ್ಲಿ ‘ಮಾತಾಡಿಕೊಂಡ’ ಅವರಿಬ್ಬರಿಗೂ ಪರಿಚಯಸ್ಥರೇ ಅಲ್ಲವಂತೆ. ನೋಡ್ದೆ, ಕೆಳ್ದೇ ಸುಖಾಸುಮ್ಮನೆ ಹುಸಿ ಮಾತುಗಳನ್ನಾಡಿ ಅದನ್ನು ಹರಿಬಿಟ್ಟದ್ದು ತಪ್ಪೇ.

ಎಲ್ಲರೂ ದಪ್ಪ ಚರ್ಮದವರೆ ಆಗಿರುವುದಿಲ್ಲ. ನೇಗಿನಾಳ ಸ್ವಾಮೀಜಿಯಂತಹ ಮುಗ್ಧ ಮಗುವಿನಂತ ಮನಸ್ಸಿನವರು ಇರುತ್ತಾರೆ‌ ಎನ್ನುವುದು ಸುಳ್ಳಲ್ಲ. ಈಗ ಶ್ರೀಗಳು ನಮ್ಮೊಂದಿಗಿಲ್ಲ. ಅವರ ಸಾವಿಗಾದರೂ ನ್ಯಾಯ ಸಿಗಲಿ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!