ಇಂದಿಗೆ [೦6ನೇ ಆಗಸ್ಟ್] ಭಾಲ್ಕಿಯ ಕಿರಿಯ ಸ್ವಾಮಿಜಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭುವಿಗೆ ಬಂದು 42 ವರ್ಷ ಆಯಿತು. ತನ್ನ ಹನ್ನೊಂದನೇ ವಯಸ್ಸಿನಲ್ಲಿ ಭಾಲ್ಕಿ ಮಠಕ್ಕೆ ಓದಲೆಂದು ಬಂದ ʼರಾಜಕುಮಾರ ಮೂಲಗೆʼ ಎಂಬ ಹುಡುಗ ಮುಂದೆ ಅದೇ ಮಠಕ್ಕೆ ಉತ್ತರಾಧಿಕಾರಿ ಆಗುತ್ತಾನೆಂದು ಯಾರೂ ಸಹ ಕನಸು – ಮನಸ್ಸಿನಲ್ಲಿಯೂ ಆಲೋಚನೆ ಮಾಡಿರಲಿಕ್ಕಿಲ್ಲ. ಹಾಗೇನಾದರು ಅವರ ಪೂರ್ವಾಶ್ರಮದ ತಂದೆ – ತಾಯಿಗಳಿಗೆ ಮುನ್ಸೂಚನೆ ಸಿಕ್ಕಿದ್ದರೇ ಅವರು ಖಂಡಿತಾ ಮಠಕ್ಕೆ ಓದಲು ಕಳುಹಿಸುತ್ತಿರಲ್ಲಿಲ್ಲ.
ಬಾಲಕ ರಾಜಕುಮಾರ ಮಠಕ್ಕೆ ಕಾಲಿಟ್ಟ ದಿನದಿಂದ ʼಶಾಲಾ ಶಿಕ್ಷಣʼ ಕಡೆಗೆ ಜಾಸ್ತಿ ಗಮನಹರಿಸದೆ, ʼಮಠದ ಸೇವೆʼಗೆ ತನ್ನ ಗಮನ ಹರಿಸಿದ ಫಲವಾಗಿ ಇಂದು ಮಠದ ಉತ್ತರಾಧಿಕಾರಿ ಆಗಿದ್ದಾರೆ. ಎಳೆಯ ಹುಡುಗನ ದಣಿವರಿಯದ ದುಡಿಮೆ, ನಿಷ್ಠೆ, ಬದ್ಧತೆಯನ್ನು ಕಂಡು ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಈ ಹುಡುಗನನ್ನು ತಮ್ಮ ಉತ್ತರಾಧಿಕಾರಿ ಮಾಡಿಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಸೂಕ್ತ ಸಮಯ ನೋಡಿ ತನ್ನ ಮನದಿಂಗಿತವನ್ನು ರಾಜಕುಮಾರನ ಎದುರಿಗೆ ಇಡುತ್ತಾರೆ. ಅವರ ಮಾತು ಕೇಳಿ ಕಕ್ಕಾಬಿಕ್ಕಿಯಾಗಿ ʼನಿಮ್ಮ ಮಾತು ಎಲ್ಲವೂ ಶಿರಸಾವಹಿಸಿ ಪಾಲಿಸುವೆ. ಆದರೆ ಯಾವುದೇ ಕಾರಣಕ್ಕೂ ಕಾವಿಯೂ ಧರಿಸುವುದಿಲ್ಲ, ತಮ್ಮ ಉತ್ತರಾಧಿಕಾರಿಯೂ ಆಗುವುದಿಲ್ಲವೆಂದುʼ ಎಂದು ನೇರವಾಗಿ ಹೇಳುತ್ತಾರೆ.
ಆದರೆ ಬಸವಲಿಂಗ ಪಟ್ಟದೇವರು ಮಾತ್ರ ಮೇಲಿಂದ ಮೇಲೆ ನಿರಂತರವಾಗಿ ಇವರ ಮನಸ್ಸು ಬದಲಾಯಿಸಲು ಯತ್ನಿಸುತ್ತಲೇ ಇರುತ್ತಾರೆ. ತಾವಷ್ಟೇ ಪ್ರಯತ್ನಿಸದೆ ಗದಗಿನ ಲಿಂಗೈಕ್ಯ ತೋಂಟದಾರ್ಯ ಶ್ರೀಗಳಿಂದಲೂ ಹೇಳಿಸುತ್ತಾರೆ. ಗದಗಿನ ಶ್ರೀಗಳಂತೂ ಮಠಕ್ಕೆ ಬಂದಾಗಲೊಮ್ಮೆ, ಭೇಟಿ ಆದಾಗಲೆಲ್ಲ ಇದೇ ವಿಷಯ ಪ್ರಸ್ತಾಪಿಸಿ ಇವರ ಮನವಲಿಸುವ ಯತ್ನ ಮಾಡುತ್ತಲೇ ಇರುತ್ತಾರೆ. ಕೊನೆಗೊಂದು ದಿನ ಬಸವಲಿಂಗ ಪಟ್ಟದೇವರ ಪ್ರೀತಿಗೆ ಕಟ್ಟು ಬಿದ್ದು ಕಾವಿ ಧರಿಸಲು ಸಿದ್ಧರಾಗುತ್ತಾರೆ. ತಡಮಾಡದೇ ಪಟ್ಟದೇವರು ಸಡಗರದಿಂದ 2016 ರಲ್ಲಿ ಪಟ್ಟಾಧಿಕಾರ ಮಹೋತ್ಸವ ಮಾಡಿ, ರಾಜಕುಮಾರನನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಿಕೊಂಡು ಅವರನ್ನು ಪೂಜ್ಯ ಶ್ರೀ ಗುರುಬಸವ ಪಟ್ಟದೇವರನ್ನಾಗಿಸುತ್ತಾರೆ.
ಮಠ ಅಂದಮೇಲೆ ಉತ್ತರಾಧಿಕಾರಿ ಆಯ್ಕೆ ಮಾಡಿಕೊಳ್ಳುವುದು ಸಹಜ ಎಂದೇನಿಸಬಹುದು. ಆದರೆ, ಇಲ್ಲಿ ಮೂರು ವಿಶೇಷ ಬೆಳವಣಿಗೆಯನ್ನು ಕಾಣಬಹುದು. ಒಂದನೆಯದಾಗಿ, ಬಸವಲಿಂಗ ಪಟ್ಟದೇವರು ಜಂಗಮೇತರ ವ್ಯಕ್ತಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಆರಿಸಿಕೊಂಡದ್ದು. ಇದೊಂದು ಅಸಾಮಾನ್ಯ ನಡೆ. ಈ ಸಮಾಜದಲ್ಲಿ ಈಗಲೂ ಜಂಗಮರನ್ನೇ ಮಠಕ್ಕೆ ಮರಿ ಮಾಡಬೇಕು ಎಂಬ ನಿಯಮ ಅಘೋಷಿತವಾಗಿ – ಅಲಿಖಿತವಾಗಿ ಸಮಾಜದಲ್ಲಿ ಉಪಜಾತಿ ಶ್ರೀಗಳು ಚಾಲ್ತಿಯಲ್ಲಿಟ್ಟಿದ್ದಾರೆ.
ಅದಕ್ಕಾಗಿಯೇ ಈ ಹಿಂದೆ ʼಶಿವಯೋಗ ಮಂದಿರʼ ಸ್ಥಾಪಿಸಿದ್ದಾರೆ. ಅಪ್ಪಿತಪ್ಪಿ ಯಾರಾದರೂ ಜಂಗಮೇತರರನ್ನು ಮಠಕ್ಕೆ ಮಾಡಿದ್ದರೆ ಮರಿಗೆ ವಿಷಪ್ರಾಷನ ಮಾಡಿಸುತ್ತಾರೆ ಇಲ್ಲವೇ ವ್ಯವಸ್ಥಿತವಾಗಿ ಕಿರುಕುಳ ಕೊಟ್ಟು ಅವರನ್ನು ಮಠ ಬಿಟ್ಟು ಓಡಿಸುವಂತ ವಾತಾವರಣ ಸೃಷ್ಟಿಸುತ್ತಾರೆ.
ಈಗಿನ ಇಳಕಲ್ ಗುರುಮಹಾಂತ್ ಸ್ವಾಮಿಗಳು ಅನುಭವಿಸಿದ ಯಾತನೆ ನಮ್ಮ ಕಣ್ಮುಂದೆ ಇದೆ. ಇದೊಂದೇ ಇಲ್ಲ ಇಂತಹ ಹತ್ತಾರು ಉದಾರಿಸಬಹದು. ಹಾಗಾಗಿಯೇ ಇಂದು ರಾಜ್ಯದಲ್ಲಿ ಒಂದೇ ಜಾತಿ\ಉಪಜಾತಿಯ ಸ್ವಾಮಿಗಳು ಮಠದಲ್ಲಿ ವಿರಾಜಮಾನರಾಗಿದ್ದು ಕಾಣುತ್ತೇವೆ. ಬೆರಳಲ್ಲಿ ಎಣಿಸುವಷ್ಟು ಮಠಗಳಲ್ಲಿ ಮಾತ್ರ ಜಂಗಮೇತರ ಸ್ವಾಮಿಗಳನ್ನು ನಾವು ಕಾಣಬಹುದು.
ಎರಡನೆಯದಾಗಿ, ಇಂದು ಬಹುತೇಕ ಸ್ವಾಮೀಜಿಗಳು ಈಗೋ ಅಗೋ ಎಂಬಂತೆ ಸಾವಿನ ಸನಿಹಕ್ಕೆ ಬಂದರೂ ತಮ್ಮ ಉತ್ತರಾಧಿಕಾರಿಯನ್ನಾಗಿ ಯಾರನ್ನೂ ನೇಮಿಸಿಕೊಳ್ಳುವುದಿಲ್ಲ. ಅಧಿಕಾರದ – ಕುರ್ಚಿಯ ವ್ಯಾಮೋಹ ಮತ್ತು ಅಭದ್ರತೆಯ ಭಯ ಅವರನ್ನು ತಡೆಯುತ್ತದೆ. ಆದರೆ ತಾನಿನ್ನು ಗಟ್ಟಿಮುಟ್ಟಾಗಿರುವಾಗಲೇ ತನ್ನ ಉತ್ತರಾಧಿಕಾರಿ ಮಾಡಿಕೊಂಡದಲ್ಲದೇ, ಅವರಿಗೆ ತಮ್ಮ ಕರ್ತವ್ಯಮಾತ್ರ ತಿಳಿಸದೇ, ಮಠದ ತಮ್ಮೆಲ್ಲ ಹಕ್ಕು – ಜವಾಬ್ದಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಇಂತಹ ಹೆಜ್ಜೆಗಳು ಪ್ರಾಯಶಃ ಬಸವನಿಷ್ಠ ಬಸವಲಿಂಗ ಪಟ್ಟದೇವರಂತವರು ಮಾತ್ರ ಇಡಲು ಸಾಧ್ಯ.
ಮೂರನೆಯದಾಗಿ, ಇಂದು ಬಹುತೇಕ ಮಠದಲ್ಲಿ ತಮ್ಮ ರಕ್ತ ಸಂಬಂಧಿಗಳನ್ನು ತನ್ನ ಉತ್ತರಾಧಿಕಾರಿ ಮಾಡಿಕೊಳ್ಳುವುದು ಪರಂಪರೆಯಾಗಿ ಬೆಳೆದುಬಂದಿದೆ. ಈ ವಿಷಯದಲ್ಲಿ ಮಾತ್ರ ಗುರು ಪರಂಪರೆ ಮತ್ತು ವಿರಕ್ತ ಸ್ವಾಮಿಜಿಗಳು ಒಂದಾಗಿದ್ದಾರೆ. ವಂಶಾವಳಿ ತೆಗೆಸಲು ಸುಲಭವಾಗುತ್ತದೆ ಎಂಬ ಕಾರಣಕಾಗಿ ತಮ್ಮ ರಕ್ತ ಸಂಬಂಧಿಗಳನ್ನೇ ತನ್ನ ಉತ್ತರಾಧಿಕಾರಿ ಮಾಡಿಕೊಳ್ಳುವುದಿಲ್ಲ. ತಮ್ಮಲ್ಲಿ ಸುಪ್ತವಾಗಿರುವ ತನ್ನ ಪೂರ್ವಶ್ರಮದ ಜಾತಿ ಮತ್ತು ಕುಟುಂಬ ಪ್ರೇಮ ಅವರನ್ನು ಹಾಗೇ ಮಾಡಿಸುತ್ತದೆ. ಆದರೆ, ಬಸವಲಿಂಗ ಪಟ್ಟದೇವರು ತಮ್ಮ ರಕ್ತ ಸಂಬಂಧಿಯನ್ನಾಗಲಿ ಅಥವಾ ತಮ್ಮ ದೂರದ ನೆಂಟನನ್ನಾಗಲಿ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳದೇ ಒಂದು ಮಾದರಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಈ ಬೆಳವಣೆಗೆಗಳು ಬಸವಲಿಂಗ ಪಟ್ಟದೇವರಲ್ಲಿರುವ ಬಸವ ಪ್ರೇಮ- ಬದ್ಧತೆ ಹಾಗೂ ಜಾತ್ಯತೀತ ಮನೋಭಾವ ತೋರಿಸುತ್ತದೆ. ಇಂದಿನ ಕಾಲದಲ್ಲಿ ಇಂತಹ ʼಗುರುʼ ಸೀಗುವುದು ದುರ್ಲಬ. ನಿಜಕ್ಕೂ ಗುರುಬಸವ ಪಟ್ಟದೇವರು ಅದೃಷ್ಟವಂತರು.
ಸಾಣೇಹಳ್ಳಿಯ ಪೂಜ್ಯರು ʼಈ ಕಾಲದಲ್ಲಿ ಬಸವಲಿಂಗ ಪಟ್ಟದೇವರಂತಹ ಗುರು ಮತು ಗುರುಬಸವ ಪಟ್ಟದೇವರಂತಹ ಶಿಷ್ಯ ಕಾಣುವುದು ಬಹಳ ಅಪರೂಪʼ ಎಂದಿದ್ದು ಉತ್ಪ್ರೇಕ್ಷೆಯನಲ್ಲ. ಏಕೆಂದರೆ ಇವತ್ತು ಬಹುತೇಕ ಮಠಗಳಲ್ಲಿ ಹಿರಿ – ಕಿರಿಯ ಸ್ವಾಮಿಗಳ ಮಧ್ಯೆ ಭಿನ್ನಮತ ಸ್ಫೋಟಗೊಂಡು, ಅದು ಹಾದಿಬೀದಿಗೆ ಬರುತ್ತಿರುವುದು ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತಿದ್ದೇವೆ. ಆದರಿಲ್ಲಿ ಗುರು – ಶಿಷ್ಯರು ಜೀವಕ್ಕೆ ಜೀವವಾಗಿ ಬದುಕುತ್ತಿದ್ದಾರೆ. ಯಾರಾದರೂ ಹಿರಿಯ ಸ್ವಾಮಿಗಳು ಮಠಕ್ಕೆ ಬಂದಾಗ, ಬಸವಲಿಂಗ ಪಟ್ಟದೇವರು ಅವರೆದುರು ಗುರುಬಸವ ಪಟ್ಟದೇವರ ಬಗ್ಗೆ ಸಾಮಾನ್ಯವಾಗಿ ಒಂದು ದೂರು ಹೇಳುತ್ತಾರೆ ʼಇವರು ಯಾವಾಗಲೂ ಕೆಲಸ ಕೆಲಸ ಎಂದೇ ಬಡಿದಾಡುತ್ತಾರೆ. ಸಮಯಕ್ಕೆ ಸರಿಯಾಗಿ ಊಟ – ನಿದ್ದೆ ಮಾಡುವುದಿಲ್ಲ. ತಾವಾದರೂ ಇವರಿಗೆ ಸ್ವಲ್ವ ಬುದ್ದಿಮಾತು ಹೇಳಿʼ ಎಂದು ಮಗುವಿನಂತೆ ಕೇಳಿಕೊಳ್ಳುತ್ತಾರೆ. ಇವರಿಬ್ಬರನ್ನೂ ಸನಿಹದಿಂದ ಗಮನಿಸಿದ ಬೈಲೂರಿನ ಪೂಜ್ಯ ನಿಜಗುಣಾನಂದರು ʼಇಂತಹ ಅಪರೂಪದ ಗುರು – ಶಿಷ್ಯರ ಜೋಡಿ ಶತಮಾನಕ್ಕೊಮ್ಮೆ ನಮಗೆ ಕಾಣಲು ಸಿಗುತ್ತದೆʼ ಎಂದು ಉದ್ಗಾರ ತೆಗೆಯುತ್ತಾರೆ. ಅಲ್ಲದೇ ಊರುರಿಗೆ ಕೈಯಲ್ಲಿ ʼಚೆನ್ನ ಜೋಳಿಗೆʼ ಹಿಡಿದು ಯುವಕರ ದುಶ್ಚಟಗಳನ್ನು ಬಿಡಿಸಲು ಶ್ರಮಿಸುತ್ತಿರುವ ಗುರುಬಸವ ಪಟ್ಟದೇವರನ್ನು ಕಂಡು ʼಗುರುಬಸವ ಪಟ್ಟದೇವರ ಜೋಳಿಗೆ, ಬಸವಾನುಯಾಯಿಗಳಿಗೆಲ್ಲ ಹೋಳಿಗೆʼ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ಗುರುಬಸವ ಪಟ್ಟದೇವರ ತಾಳ್ಮೆ,, ಚುರುಕುತನ ಜೀವನೋತ್ಸಾಹ, ದುಡಿಮೆ, ಮಠದ ಮೇಲಿರುವ ಕಾಳಜಿ, ತಮ್ಮ ಗುರುವಿನ ಮೇಲಿಟ್ಟಿರುವ ಪ್ರೇಮ ಅವರಿಗೆ ಅವರೇ ಸರಿಸಾಟಿ. ಕಾವಿ ಧರಿಸಿ ಮಠದಲ್ಲಿ ಜಡವಾಗಿ ಕೂರದೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮಠದ ಜತೆಗೆ ಸಮಾಜದ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಮೇಲೆ ಗುರುತರವಾದ ಜವಾಬ್ದಾರಿಗಳಿವೆ. ತಮ್ಮ ಗುರುಗಳ ಕನಸಿಗೆ, ಶ್ರಮಕ್ಕೆ ಅಗೌರವ ತರದೆ ಮತ್ತು ಬಸವನ ಆಶಯಕ್ಕೆ ಚ್ಯುತಿ ತರದೆ ಮುಂದೆ ಸಾಗುತ್ತಿದ್ದಾರೆ. ಹೀಗೆ ಸಾಂಗವಾಗಿ ನೂರ್ಕಾಲ ಸಾಗಲೆಂದು ಪ್ರಾರ್ಥಿಸೋಣ.
ಹುಟ್ದಬ್ಬದ ಮನದುಂಬಿ ಶುಭಾಷಯಗಳು ಸ್ವಾಮೀಜಿ!