ದ ಪಾಲಿಟಿಕ್

ಜನಪರ ರಾಜಕಾರಣದ ಕನಸು : ಬಂಜಗೆರೆ ಜಯಪ್ರಕಾಶ

ದ ಪಾಲಿಟಿಕ್

ದ ಪಾಲಿಟಿಕ್

ಚುನಾವಣೆ, ಮತದಾನ,  ಸರ್ಕಾರ ರಚನೆ ಮುಂತಾದ ಪ್ರಶ್ನೆ ಬಂದಾಗ ನಮ್ಮ ಕಣ್ಣ ಮುಂದೆ ಕಾಂಗ್ರೆಸ್, ಬಿಜೆಪಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಮೂರು ಬಿಂದುಗಳಂತೆ ಕಾಣುತ್ತವೆ. ಅಖಿಲ ಭಾರತ ಮಟ್ಟದಲ್ಲಿ ಹುಡುಕಾಡಿದಾಗ ಕಂಡುಬರುವ ಆಯ್ಕೆಗಳಿವು. ಪ್ರಾದೇಶಿಕ ಮಟ್ಟದಲ್ಲಿ ಇನ್ನೂ ಕೆಲವು ಪಕ್ಷಗಳಿದ್ದು ಅವು ನಮ್ಮ ರಾಜ್ಯಕ್ಕೆ ಬಂದು ರಾಜಕಾರಣ ಮಾಡುತ್ತವೆಂದು ಆಲೋಚಿಸುವುದು ಕಷ್ಟಕರ.  ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಕೆಲವು ಸಮರ್ಥ ನಾಯಕರಿದ್ದಾರೆ. ಆದರೆ ನಾವು ಈಗ ಆಲೋಚನೆ ಮಾಡಬೇಕಿರುವುದು ರಾಜ್ಯವನ್ನೂ ಲೆಕ್ಕಕ್ಕಿಟ್ಟುಕೊಂಡು.

ನಮ್ಮ ಎದುರಿಗೆ ಹಲವು ಪ್ರಶ್ನೆಗಳಿವೆ. ನಿರುದ್ಯೋಗ ಸಮಸ್ಯೆ ಎಂಬುದು ದಶಕದಿಂದ ದಶಕಕ್ಕೆ ಬೆಳೆಯುತ್ತಲೇ ಬರುತ್ತಿದೆ. ವಿದ್ಯಾರ್ಥಿಗಳಾಗಿದ್ದಾಗ ನಮ್ಮನ್ನು ಕಾಡುತ್ತಿದ್ದ ನಿರಾಶಾದಾಯಕ ಪರಿಸ್ಥಿತಿಯೇ ಇಂದಿನ ಯುವಜನತೆಯ ಮುಂದೂ ಇದೆ. ಬಡತನದ ಪ್ರಮಾಣ ಹೆಚ್ಚುತ್ತಲೇ ಇದೆ. ಇವೆಲ್ಲವುಗಳ ಜೊತೆಗೆ ಆರ್ಥಿಕ ಬಿಕ್ಕಟ್ಟು, ವಿದೇಶಿ ಸಾಲದ ಹೊರೆ ಕೂಡ ದೇಶವನ್ನು ಕಂಗೆಡಿಸಿವೆ. ವಿದೇಶಿ ಬ್ಯಾಂಕ್ ಗಳಲ್ಲಿ ಇರುವ, ದೇಶದಲ್ಲಿ ಚಲಾವಣೆಯಲ್ಲಿರುವ ಕಪ್ಪು ಹಣದ ಪ್ರಮಾಣ ಕೂಡ ತೀರ ಹೆಚ್ಚಿದೆ. ಎಲ್ಲವುಗಳ ನಡುವೆ ಆರ್ಥಿಕ ಮತ್ತು ಸಾಮಾಜಿಕ ಮುನ್ನಡೆಯನ್ನು, ಜನಸಾಮಾನ್ಯರ ಹಿತವನ್ನು ಕಾಪಾಡುವ ವಿಧಾನದಲ್ಲಿ ಸರ್ಕಾರ ನಡೆಸುವ ಪಕ್ಷಕ್ಕಾಗಿ ಎದುರು ನೋಡುತ್ತಲೇ ಇದ್ದೇವೆ. ರಾಜಕಾರಣದಲ್ಲಿ ಅಕ್ರಮ ಹಣದ ಕಾರುಬಾರು ಹೆಚ್ಚಿದೆ ಎನ್ನುವುದು ಈ ಎರಡು ಮೂರು ದಶಕಗಳಲ್ಲಿ ಡಾಳಾಗಿ ಎದ್ದು ಕಾಣುತ್ತಿದೆ. ಮೊದಲೆಲ್ಲಾ ಕಪ್ಪು ಹಣ ಇದ್ದವರು ಚುನಾವಣೆಗಳಲ್ಲಿ ರಾಜಕಾರಣಿಗಳಿಗೆ ಹಣವನ್ನು ಕೊಟ್ಟು, ಅವರನ್ನು ಗೆಲ್ಲಿಸಿಕೊಂಡು, ತಮಗೆ ಬೇಕಾದಂತೆ ನೀತಿ ಮಾಡಿಸಿಕೊಳ್ಳುತ್ತಿದ್ದರು. ಈಗ ಕಪ್ಪು ಹಣವುಳ್ಳವರು ರಾಜಕಾರಣಕ್ಕೆ ನೇರವಾಗಿ ಇಳಿಯತೊಡಗಿದ್ದಾರೆ. ಅವರಿಗಿರುವ ಕಪ್ಪುಹಣವೇ ಅವರ ಮತ ಗಳಿಸುವ ಶಕ್ತಿಯಾಗಿ ನಿಂತಿದೆ.

ಹಣ ಬಲದ ಮೇಲೆ ಚುನಾವಣೆ ಗೆದ್ದವರು, ಗೆದ್ದ ನಂತರ ಜನಬಲವನ್ನು ಕ್ರೋಢೀಕರಿಸಲು ಮತ್ತೆ ಹಣ ಗಳಿಸತೊಡಗುತ್ತಾರೆ. ಅದಕ್ಕಾಗಿ ಅಡ್ಡ ದಾರಿಗಳಲ್ಲಿ ತೊಡಗಿ ಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕಮ್ಯುನಿಸ್ಟ್ ಪಕ್ಷಗಳನ್ನು, ಕೆಲವು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಹೊರತುಪಡಿಸಿದರೆ ಹೆಚ್ಚುಕಡಿಮೆ ಎಲ್ಲ ಪಕ್ಷಗಳಲ್ಲೂ ಅಕ್ರಮ ಹಣವೇ ತನ್ನ ಹೆಚ್ಚುಗಾರಿಕೆಯನ್ನು ಸ್ಥಾಪಿಸಿಕೊಂಡಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಕಮ್ಯುನಿಸ್ಟ್ ಎಂಬ ಮೂರು ರಾಜಕೀಯ ಬಿಂದುಗಳು ನಮ್ಮೆದುರಿಗಿವೆ ಎಂದು ಆರಂಭದಲ್ಲಿ ನಾನು ಹೇಳಿದೆ. ಇದರಲ್ಲಿ ಕಮ್ಯುನಿಸ್ಟರು ಸಧ್ಯಕ್ಕೆ ಅಖಿಲ ಭಾರತ ಮಟ್ಟದಲ್ಲಿ ರಾಜಕೀಯ ಧ್ರುವೀಕರಣದ ಮುಂದಾಳತ್ವದಲ್ಲಿ ನಿಲ್ಲುತ್ತಾರೆನ್ನುವುದು ಒಂದು ಮಟ್ಟಿಗೆ ಕಷ್ಟ. ಬಿಜೆಪಿ ಮತ್ತು ಕಾಂಗ್ರೆಸ್ ಗಳು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂವಿಧಾನ ಬದ್ಧವಾಗಿದ್ದೇವೆ ಎನ್ನುತ್ತಾರೆ. ಆದರೆ ಬಿಜೆಪಿಯಲ್ಲಿ ಇದು ಬರೀ ಬಾಯಲ್ಲಿ ಹೇಳುವ ಮಾತು ಎಂದು ಕಂಡುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ಸ್ವಲ್ಪ ಪರವಾಗಿಲ್ಲ.

ಧರ್ಮಾಧಾರಿತವಾಗಿ ಸಮಾಜದ ಮನಃಸ್ಥಿತಿಯನ್ನು ವಿಂಗಡಿಸುವುದು, ಕೋಮುಭಾವನೆಗಳ ಆಧಾರದಲ್ಲಿ ಜನರನ್ನು ಸಂಘಟಿಸುವುದು ಎನ್ನುವ ಮಾದರಿಗೆ ಜೋತು ಬಿದ್ದಿರುವ ಅದು ಸಂವಿಧಾನದಲ್ಲಿರುವ  ಹಲವಾರು ಅಂಶಗಳ ಬಗ್ಗೆ ಪೂರ್ಣ ಸಹಮತವನ್ನು ಹೊಂದಿಲ್ಲ. ಅದರ ನೀತಿಗಳನ್ನು ನಿಯಂತ್ರಿಸುವ ಸಂಘಪರಿವಾರಕ್ಕೆ,  ಅದರ ಮುಂಚೂಣಿಯಲ್ಲಿರುವ ಹಲವು ನಾಯಕರಿಗೆ ಸಂವಿಧಾನದ ಬಗ್ಗೆ ಇರುವ ಒಳ ತೀರ್ಮಾನವೇ ಬೇರೆ ಇದ್ದಂತಿದೆ.

ಸಾಮಾಜಿಕ ನ್ಯಾಯವನ್ನು ಒದಗಿಸಲು ಕೊಡಮಾಡಿರುವ ಮೀಸಲಾತಿ ಅವಕಾಶಗಳ ಬಗ್ಗೆ, ಎಲ್ಲ ಧರ್ಮೀಯರಿಗೆ ಒದಗಿಸಿರುವ ಸಮಾನ ಹಕ್ಕುಗಳ ಬಗ್ಗೆ, ಮಹಿಳೆಯರ ಸಮಾನತೆಯ ಬಗ್ಗೆ ಬಿಜೆಪಿ ಪಕ್ಷಕ್ಕೆ ಸಹನೆ ಇಲ್ಲ. ಒಂದು ಪಕ್ಷವಾಗಿ ಇದನ್ನು ಬಹಿರಂಗವಾಗಿ ಹೇಳದಿದ್ದರೂ ಅದರ ಧೋರಣೆಗಳು ಸಂವಿಧಾನಕ್ಕೆ ಬದ್ಧವಾಗಿಲ್ಲ ಎಂಬುದು ಗೋಚರವಾಗುತ್ತದೆ. ಪ್ರಜಾಪ್ರಭುತ್ವವನ್ನು ಈಗಿರುವ ಪದ್ಧತಿಗೆ ಬದಲಿಯಾಗಿ ಮತ್ತೊಂದು ರೀತಿಯಲ್ಲಿ ಮಾರ್ಪಡಿಸಬೇಕು ಎಂಬ ಆಶಯಗಳು ಕೂಡ ಆ ಪಕ್ಷದಲ್ಲಿ ಅಡಗಿಕೊಂಡಿರುವಂತಿವೆ.

ಪ್ರಾದೇಶಿಕ ಭಾಷೆಗಳ ಬಗ್ಗೆ , ರಾಜ್ಯಗಳಿಗೆ ಇರುವ ಅಧಿಕಾರದ ಬಗ್ಗೆ ಅದಕ್ಕೆ ಸಮಾಧಾನವಿಲ್ಲ. ಇಂತಹ ಸಮಯದಲ್ಲಿ ನಮಗೆ ಮೂರು ಮುಖ್ಯವಾದ ಸಮಸ್ಯೆಗಳನ್ನು ಎದುರಿಸಲು ಪರ್ಯಾಯ ರಾಜಕಾರಣದ ಅವಶ್ಯಕತೆ ಎದ್ದು ಕಾಣುತ್ತಿದೆ. ಇದನ್ನು ಸಾಕಾರಗೊಳಿಸಿಕೊಳ್ಳುವ ಬಗೆ ಹೇಗೆ? ಕರ್ನಾಟಕದಲ್ಲಿ ರಚನೆಗೊಂಡಿದ್ದ ಸರ್ವೋದಯ ಕರ್ನಾಟಕ ಕಡೆಗೆ ಫಲಕಾರಿಯಾಗದೆ ಹೋಗಿದೆ. ರೈತ ಚಳುವಳಿ ಕಟ್ಟಿದ್ದ ರಾಜಕೀಯ ಪಕ್ಷವೂ ನೆನಪಿನಿಂದ ಮಾಸಿಹೋಗಿದೆ. ಸ್ವರಾಜ್ ಇಂಡಿಯಾ ಒಂದು ಪರ್ಯಾಯ ರಾಜಕಾರಣದ ವೇದಿಕೆಯಾಗಿದ್ದು ಅದರ ರಾಜಕೀಯ ಶಕ್ತಿಯನ್ನು ಬಹಳ ಎಂದು ಕಲ್ಪಿಸಿಕೊಳ್ಳುವಂತಿಲ್ಲ. ದಲಿತ ಸಂಘರ್ಷ ಸಮಿತಿ ಹೋರಾಟದ ವೇದಿಕೆಯಾಗಿ ನೆಲೆ ಕಂಡುಕೊಂಡಿದೆ ಹೊರತು ಅದಕ್ಕೆ ಚುನಾವಣೆಯಲ್ಲಿ ಭಾಗವಹಿಸಿ ಗೆಲ್ಲುವ ಶಕ್ತಿ ಬಂದಿದೆಯೆಂದು ಭಾವಿಸುವುದು ಕಷ್ಟಕರವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿಗಳು ಸಾಂಸ್ಕೃತಿಕ ಮತ್ತು ಸಾಮಾಜಿಕವಾದ ವಿಷಯಗಳಲ್ಲಿ ಭಿನ್ನ ನಿಲುವುಗಳನ್ನು ತಳೆದರೂ ಆರ್ಥಿಕ ವಿಷಯಗಳಲ್ಲಿ ಅವುಗಳ ನಿಲುವು ಹೆಚ್ಚು ಭಿನ್ನವಾಗಿಲ್ಲ. ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣಗಳ ಕಡೆ ಅವೆರಡಕ್ಕೂ ಒಲವಿರುವುದರ ಬಗ್ಗೆ ಅನುಮಾನವಿಲ್ಲ. ಹೆಚ್ಚೆಂದರೆ ಅದರ ಪ್ರಮಾಣದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಗುಣಾತ್ಮಕವಾಗಿ ಭಿನ್ನವಿಲ್ಲ.

ಜನಸಾಮಾನ್ಯರಿಗೆ ಅಗತ್ಯವಾಗಿರುವ ಬದುಕಿನ ಭದ್ರತೆ, ಮುನ್ನಡೆಯ ಅವಕಾಶ, ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಘನತೆಯ ಖಾತ್ರಿಯನ್ನು ಕೊಡಬಲ್ಲ ರಾಜಕಾರಣವೊಂದು ಈಗ ಬಹಳ ಅಗತ್ಯವಾಗಿದೆ. ನಾವೀಗ ತುರ್ತಿನ ಕನಿಷ್ಠ ಕಾರ್ಯಕ್ರಮವೆಂದು ಕೆಲವನ್ನು ಭಾವಿಸಬೇಕಾಗಿದೆ. ಅವುಗಳಲ್ಲಿ ಮೊದಲನೆಯದು ಪ್ರಜಾಪ್ರಭುತ್ವದ ರಕ್ಷಣೆ. ಸಂವಿಧಾನದ ನಿಯಮಗಳನುಸಾರ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು; ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ, ಭ್ರಷ್ಟಾಚಾರ ರಹಿತವಾಗಿ ಸಂಘಟಿಸುವುದು. ಎರಡನೆಯದು ಆರ್ಥಿಕ ಅಂಶ.  ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮಗಳನ್ನು ಬಲಪಡಿಸುವುದು; ಉದ್ಯೋಗದಲ್ಲಿರುವವರಿಗೆ ಉದ್ಯೋಗ ಭದ್ರತೆ, ನಿವೃತ್ತರಾದವರಿಗೆ ಹಾಗೂ ನಿರುದ್ಯೋಗಿಗಳಿಗೆ ಸಾಮಾಜಿಕ ಭದ್ರತೆ, ದುರ್ಬಲ ವಿಭಾಗಗಳಿಗೆ ಸಂಕ್ಷೇಮ ಕಾರ್ಯಕ್ರಮ, ತೀವ್ರವಾಗಿ ಬಿಕ್ಕಟ್ಟಿಗೆ ಗುರಿಯಾಗಿರುವ ಆರ್ಥಿಕತೆಯನ್ನು  ಸುಧಾರಿಸುವ ಕಾರ್ಯಕ್ರಮ. ಮೂರನೆಯದಾಗಿ ಸಾಮಾಜಿಕವಾಗಿ ಎಲ್ಲ ಜಾತಿ ಧರ್ಮಗಳ ಪ್ರಾತಿನಿಧ್ಯ ಮತ್ತು ಪಾಲುದಾರಿಕೆಯನ್ನು ಖಾತ್ರಿಗೊಳಿಸುವ ಸಾಮಾಜಿಕ ನ್ಯಾಯ; ಸಾಂಸ್ಕೃತಿಕವಾಗಿ ಸರ್ವ ಧರ್ಮ ಸಮಾನ ನೀತಿ, ಬಹುಸಂಸ್ಕೃತಿ, ಬಹುಭಾಷೆಗಳ ಬಗ್ಗೆ ಗೌರವ; ಲೈಂಗಿಕ ಅಲ್ಪಸಂಖ್ಯಾತರಿಗೆ, ಸಮಾಜದ ಇತರ ವಿಶಿಷ್ಟ ವರ್ಗಗಳಿಗೆ ಜೀವನಾಧಾರ ಒದಗಿಸುವುದು.  ಇದನ್ನು ಸಾಧ್ಯವಾಗಿಸಲು ಪರ್ಯಾಯ ರಾಜಕಾರಣಕ್ಕೆ ಮುಂದಾಗಬೇಕಿದೆ. ಇದನ್ನು ನಿಜಗೊಳಿಸಲು ಮಾಡಬೇಕಾದ ಪ್ರಯತ್ನಕ್ಕೆ ಎಲ್ಲ ಬಗೆಯ ಜನಪರ ಚಳುವಳಿಗಳು ಮುಂದಾಗಬೇಕು.

ರೈತ, ದಲಿತ ಕಾರ್ಮಿಕ, ಮಹಿಳೆ, ಭಾಷೆ ಈ ಬಗೆಯ ನೆಲೆಗಳಲ್ಲಿ ಕಾರ್ಯನಿರತವಾಗಿರುವ ಎಲ್ಲರೂ ಸೇರಿ ಒಂದು ಹೋರಾಟ ವೇದಿಕೆಯನ್ನು ಮಾಡಿಕೊಳ್ಳುವುದು ಸಾಧ್ಯವಾಗುವುದಾದರೆ, ಅದು ಕ್ರಿಯಾಶೀಲವಾಗಿ ಮುನ್ನಡೆಯುವುದಾದರೆ, ಈ ಕನಸು ನೆಲದ ಮೇಲೆ ಕಾಲೂರಿ ನಿಲ್ಲುತ್ತದೆ. ಇದಕ್ಕೆ ಕಮ್ಯೂನಿಷ್ಟ್ ಪಕ್ಷಗಳನ್ನು, ಸಮಾಜವಾದಿ ಪಕ್ಷಗಳನ್ನು,  ಕೋಮುವಾದ- ಭಾಷಾಂಧವಾದ- ಸಂಕುಚಿತ ದೃಷ್ಟಿಕೋನಗಳಿಲ್ಲದ ಪ್ರಾದೇಶಿಕ ಪಕ್ಷಗಳನ್ನೂ ಸೇರಿಸಿಕೊಳ್ಳಬಹುದು.  ಜೊತೆಗೆ ಸ್ವರಾಜ್ ಇಂಡಿಯಾ, ಸರ್ವೋದಯ ಕರ್ನಾಟಕ ಮುಂತಾಗಿ ಕರ್ನಾಟಕದಲ್ಲಿ ಪರಿಚಯವಿರುವ ಕೆಲವು ವೇದಿಕೆಗಳು, ಅವುಗಳ ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿ ರೈತ ದಲಿತ ಪರಿಸರ ಭಾಷಾ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಕೊಂಡಿರುವವರು ಅಥವಾ  ವೇದಿಕೆಗಳು ಕೈಜೋಡಿಸಿ ಬಂದರೆ ಪರ್ಯಾಯ ರಾಜಕಾರಣದ ಕನಸು ಮತ್ತಷ್ಟು ಗಟ್ಟಿಯಾಗುತ್ತದೆ. ಇದನ್ನ ಸಾಧ್ಯವಾಗಿಸಬೇಕೆಂದರೆ, ಈಗ ಸಕ್ರಿಯವಾಗಿರುವ ಹಲವಾರು ಸಂಘಟನೆಗಳ ಕಾರ್ಯಕರ್ತರು ಮತ್ತೊಂದು ಸಲ ಪೂರ್ಣ ಚೈತನ್ಯದಿಂದ ಹಳ್ಳಿಹಳ್ಳಿಗಳ ಕೇರಿಗಳಿಗೆ, ನಗರಗಳ ಬೀದಿಗಳಿಗೆ, ಕೊಳೆಗೇರಿಗಳ ಓಣಿಗಳಿಗೆ, ಕಾರ್ಮಿಕರ ಕಾಲೋನಿಗಳಿಗೆ ಓಡಾಡಬೇಕು. ಜನರನ್ನು ಜಾಗೃತಗೊಳಿಸಿ ಸಂಘಟನಾ ಶಕ್ತಿಯನ್ನು ತುಂಬಬೇಕು.ರೈತ, ದಲಿತ ಕಾರ್ಮಿಕ, ಮಹಿಳೆ, ಭಾಷೆ ಈ ಬಗೆಯ ನೆಲೆಗಳಲ್ಲಿ ಕಾರ್ಯನಿರತವಾಗಿರುವ ಎಲ್ಲರೂ ಸೇರಿ ಒಂದು ಹೋರಾಟ ವೇದಿಕೆಯನ್ನು ಮಾಡಿಕೊಳ್ಳುವುದು ಸಾಧ್ಯವಾಗುವುದಾದರೆ, ಅದು ಕ್ರಿಯಾಶೀಲವಾಗಿ ಮುನ್ನಡೆಯುವುದಾದರೆ, ಈ ಕನಸು ನೆಲದ ಮೇಲೆ ಕಾಲೂರಿ ನಿಲ್ಲುತ್ತದೆ. ಇದಕ್ಕೆ ಕಮ್ಯೂನಿಷ್ಟ್ ಪಕ್ಷಗಳನ್ನು, ಸಮಾಜವಾದಿ ಪಕ್ಷಗಳನ್ನು,  ಕೋಮುವಾದ- ಭಾಷಾಂಧವಾದ- ಸಂಕುಚಿತ ದೃಷ್ಟಿಕೋನಗಳಿಲ್ಲದ ಪ್ರಾದೇಶಿಕ ಪಕ್ಷಗಳನ್ನೂ ಸೇರಿಸಿಕೊಳ್ಳಬಹುದು.  ಜೊತೆಗೆ ಸ್ವರಾಜ್ ಇಂಡಿಯಾ, ಸರ್ವೋದಯ ಕರ್ನಾಟಕ ಮುಂತಾಗಿ ಕರ್ನಾಟಕದಲ್ಲಿ ಪರಿಚಯವಿರುವ ಕೆಲವು ವೇದಿಕೆಗಳು, ಅವುಗಳ ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿ ರೈತ ದಲಿತ ಪರಿಸರ ಭಾಷಾ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಕೊಂಡಿರುವವರು ಅಥವಾ  ವೇದಿಕೆಗಳು ಕೈಜೋಡಿಸಿ ಬಂದರೆ ಪರ್ಯಾಯ ರಾಜಕಾರಣದ ಕನಸು ಮತ್ತಷ್ಟು ಗಟ್ಟಿಯಾಗುತ್ತದೆ. ಇದನ್ನ ಸಾಧ್ಯವಾಗಿಸಬೇಕೆಂದರೆ, ಈಗ ಸಕ್ರಿಯವಾಗಿರುವ ಹಲವಾರು ಸಂಘಟನೆಗಳ ಕಾರ್ಯಕರ್ತರು ಮತ್ತೊಂದು ಸಲ ಪೂರ್ಣ ಚೈತನ್ಯದಿಂದ ಹಳ್ಳಿಹಳ್ಳಿಗಳ ಕೇರಿಗಳಿಗೆ, ನಗರಗಳ ಬೀದಿಗಳಿಗೆ, ಕೊಳೆಗೇರಿಗಳ ಓಣಿಗಳಿಗೆ, ಕಾರ್ಮಿಕರ ಕಾಲೋನಿಗಳಿಗೆ ಓಡಾಡಬೇಕು. ಜನರನ್ನು ಜಾಗೃತಗೊಳಿಸಿ ಸಂಘಟನಾ ಶಕ್ತಿಯನ್ನು ತುಂಬಬೇಕು.

ಪರ್ಯಾಯ ರಾಜಕಾರಣವನ್ನು ಅಗು ಮಾಡುವವರು ಜನಸಾಮಾನ್ಯರು. ಭಾರತದ ಚುನಾವಣಾ ರಾಜಕೀಯದಲ್ಲಿ ಅದಕ್ಕಾಗಿ ಅವರು ತಡಕಾಡಿದ್ದಾರೆ.  ಕಾಂಗ್ರೆಸ್,  ಬಿಜೆಪಿ ಕಮ್ಯುನಿಸ್ಟ್, ಪ್ರಾದೇಶಿಕ ಪಕ್ಷಗಳು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಮತದಾನ ಮಾಡುವಾಗ ತಮ್ಮ ಆಸೆಗಳಿಗೊಂದು ಆಸರೆ ಹುಡುಕಿದ್ದಾರೆ. ಅದೇ ಪ್ರಮಾಣದಲ್ಲಿ ನಿರಾಶರಾಗಿದ್ದಾರೆ. ದಿನದಿಂದ ದಿನಕ್ಕೆ ಮೂಲಭೂತ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಆಲೊಚನೆ- ಆಚರಣೆ ಸ್ವಾತಂತ್ರ್ಯ ಗಿಡ್ಡವಾಗುತ್ತಿವೆ. ರಾಷ್ಟ್ರಾಭಿಮಾನದ ಹೆಸರಲ್ಲಿ ಅಂಧಾಭಿಮಾನವನ್ನು, ಧರ್ಮಾಭಿಮಾನದ ಹೆಸರಲ್ಲಿ ಸನಾತನವಾದವನ್ನು ಜನತೆಯ ಮೇಲೆ ವ್ಯವಸ್ಥಿತವಾಗಿ ಹೇರಲಾಗುತ್ತಿದೆ. ಸರ್ವಾಧಿಕಾರಿ ಧೋರಣೆ ವ್ಯಕ್ತಪಡಿಸುವ ನಾಯಕನೇ ತಮ್ಮ ಸಂರಕ್ಷಕನೆಂಬಂತೆ ಮಾಧ್ಯಮಗಳ ಮುಖಾಂತರ ಬಿಂಬಿಸಲಾಗುತ್ತಿದೆ. ಬಂಡವಾಳಶಾಹಿಗಳ- ಪಟ್ಟಭದ್ರ ಹಿತಾಸಕ್ತಿಗಳ ತಲೆ ಕಾಯಲು ಆಡಳಿತ ಯಂತ್ರಾಂಗ ಟೊಂಕ ಕಟ್ಟಿದೆ.  ಜನರ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ, ಜನರ ಹಕ್ಕುಗಳನ್ನು ದಮನಿಸುವ ಸಲುವಾಗಿ,  ಜನರ ಹಣವನ್ನು ಲೂಟಿ ಹೊಡೆಯುವ ಸಲುವಾಗಿ ಕೊರೋನಾದಂತಹ ಖಾಯಿಲೆಯನ್ನೂ ಬಳಸಿಕೊಳ್ಳುವಂತಹ ಶೋಚನೀಯ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಸಂಸತ್ತಿನಲ್ಲಿ ಚರ್ಚೆಗೊಳ್ಳದೆ ಸುಗ್ರೀವಾಜ್ಞೆಗಳೇ ಶಾಸನಗಳಾದರೂ ಅಸಹಾಯಕರಾಗಿ ನೋಡುವ ದುರ್ಬಲ ಮನಸ್ಥಿತಿಗೆ ಜನ ಈಡಾಗಿದ್ದಾರೆ. ಇಂತಹ ದುರ್ಬಲ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣವೆಂಬುದು ಜನರ ಮುನ್ನಡೆಯಾಗಿರುತ್ತದೆ.

ಈಗ ವಿವೇಚನಾಶೀಲರಾದ ನಾಯಕರೆಲ್ಲಾ ಒಂದಾಗಬೇಕು. ಹೊಸ ನಾಯಕತ್ವವನ್ನು ಯುವಕರಲ್ಲಿ ರೂಪಿಸಬೇಕು. ಈ ನಡೆಗೆ ಧಾರ್ಮಿಕ ಮತಿಗೆ ಬುದ್ಧ, ಬಸವರೂ, ಆಧ್ಯಾತ್ಮಿಕ ಉನ್ನತಿಗೆ ಗಾಂಧಿಯೂ, ಸಾಮಾಜಿಕ ರಾಜಕೀಯ ನಡೆಗೆ ಅಂಬೇಡ್ಕರೂ, ಆರ್ಥಿಕ ಸುಸ್ಥಿತಿಗೆ ಮಾರ್ಕ್ಸ್ ಲೋಹಿಯಾರೂ ನಮಗೆ ಬೆಳಕಾಗಿ ನಿಂತಿರುತ್ತಾರಲ್ಲವೇ?

ಲೇಖಕರು – ಬಂಜಗೆರೆ ಜಯಪ್ರಕಾಶ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!