ದ ಪಾಲಿಟಿಕ್

‘ಜಾಗತಿಕ ಲಿಂಗಾಯತ ಮಹಾಸಭಾ’ ಸಮಸ್ತ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಜಾಗತಿಕ ಲಿಂಗಾಯತ ಮಹಾಸಭೆಯವರು ತಮ್ಮದು ಒಂದು ಸಂಘಟನೆಯೋ ಅಥವಾ ಒಂದು ಸಂಸ್ಥೆಯೋ ಎನ್ನುವುದು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಅದರ ಮುಂದಾಳುಗಳು ಮಾತೆತ್ತಿದರೆ ಇದು ‘ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ’ ಎನ್ನುತ್ತಿರುತ್ತಾರೆ. ಒಂದು ಸಂಸ್ಥೆ ಹೇಗೆ ಇಡೀ ಸಮುದಾಯವನ್ನು ಪ್ರತಿನಿಧಿಸಲು ಸಾಧ್ಯ? ಒಂದು ಕ್ಷಣಕ್ಕೆ ಇದು ಸಂಘಟನೆಯೂ ಹೌದು, ಸಂಸ್ಥೆಯೂ ಹೌದು ಎಂದು ಒಪ್ಪೋಣ. ಒಂದು ಸಂಘಟನೆಯ ನಲಮಂಡಲವೆ ಅದರ ರಾಜ್ಯ ಮತ್ತು ಕೇಂದ್ರ ಪದಾಧಿಕಾರಿಗಳು. ಈ ಸಂಘಟನೆಯ ಕೇಂದ್ರ – ರಾಜ್ಯ ಸಮಿತಿಯಲ್ಲಿ ಸಮುದಾಯದ ತಳವರ್ಗಗಳಿಗೆ ಎಷ್ಟು ಪ್ರಾತಿನಿಧ್ಯತೆ ಸಿಕ್ಕಿದೆ?

ಸಮುದಾಯದಲ್ಲಿ ನೂರೆಂಟು ಜಾತಿ ಪಂಗಡಗಳಿವೆ. ಅವರೆಲ್ಲರನ್ನೂ ಒಳಗೊಳ್ಳದೆ ಇದು ಹೇಗೆ ಇಡೀ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾಗುತ್ತದೆ? ಈ ಸಂಸ್ಥೆ ಉದಯಿಸಿ ಐದು ವರ್ಷ ಆಯಿತು. ಸಮುದಾಯದ ಎಲ್ಲಾ ಜಾತಿಯ ಜನರನ್ನು ಸಂಪರ್ಕಿಸಿ, ಅವರಲ್ಲಿ ವಿಶ್ವಾಸ ಮೂಡಿಸಿ, ಅವರನ್ನೂ ಒಳಗೊಳ್ಳುವ ಪ್ರಯತ್ನ ನಡೆಸಿದ್ದು ಈವರೆಗೂ ಕಂಡುಬಂದಿಲ್ಲ.

ಈ ಸಂಘಟನೆಗೆ ಒಂದು ಸ್ಪಷ್ಟ ರಾಜಕೀಯ ನಿಲುವು ಇಲ್ಲ. ನಾಗರಿಕ ಸಮಾಜದಲ್ಲಿ ರಾಜಕೀಯ ಬಿಟ್ಟು ಏನೂ ಇಲ್ಲ. ‘Everything is political in nature’ ಎಂಬ ಮಾತು ಈ ಸಂಘಟನೆ ಮರೆತಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಬಿಟ್ಟು ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ನಮ್ಮೆಲ್ಲಾ ಆಗುಹೋಗುಗಳ ಹಿಂದೆ ರಾಜಕೀಯವೆ ಇರುತ್ತದೆ. ನಾವು ಊಟ ಮಾಡುವಾಗ ನಮ್ಮ ತಟ್ಟೆಯಲ್ಲಿರುವ ಅನ್ನದಲ್ಲಿ ಕಲ್ಲು ಬಂದರೆ ಅದಕ್ಕೂ ರಾಜಕೀಯವೆ ಕಾರಣ. ಈ ಸಂಘಟನೆಯ ಬಹುತೇಕ ಜಿಲ್ಲಾ ಮುಂದಾಳುಗಳ ರಾಜಕೀಯ ನಿಲುವು ಲಿಂಗಾಯತ ತತ್ವಕ್ಕೆ ಮಾರಕವಾಗಿದೆ. ಹೀಗಿದ್ದರೂ ‘ನಮ್ಮದು ಸಾಂಸ್ಕೃತಿಕ ಸಂಘಟನೆ’ ಮತ್ತು ‘ನಾವು ಆ ಕಡೆಗೂ ಇಲ್ಲ, ಈಕಡೆಗೂ ಇಲ್ಲ’ ಎಂಬ ಸಂಘಟನೆಯ ಹೇಳಿಕೆ ಹಾಗೂ ಚುನಾವಣೆಯ ಹೊಸ್ತಿಲಲ್ಲಿ ಅಧಿವೇಶನ ನಡೆಸುತ್ತಿರುವುದು ವಿರೋಧಾಭಾಸದಿಂದ ಕೂಡಿದೆ. 

ಲಿಂಗಾನಂದ ಸ್ವಾಮೀಜಿಯವರ ಕಾಲದಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಯಾಗಿ ‘ರಾಷ್ಟ್ರೀಯ ಬಸವ ದಳ’ ಇತ್ತು. ಅವರ ಹಠಾತ್ತನೇ ನಿರ್ಗಮನದಿಂದ ಆ ಸಂಘಟನೆಯೂ ತನ್ನ ಚಲನೆಯನ್ನು ಕಳೆದುಕೊಂಡು ಜಡವಾಯಿತು. ಅಲ್ಲಿಂದೀಚೆಗೆ ಲಿಂಗಾಯತರಿಗೆ ಇಡೀ ಸಮುದಾಯವನ್ನು ಪ್ರತಿನಿಧಿಸುವ ಒಂದು ಸಂಘಟನೆಯೇ ಇಲ್ಲ. ಈಗಿರುವ ಸಂಘಟನೆಗಳೆಲ್ಲವೂ ಒಂದೋ ಜಾತಿ – ಉಪಜಾತಿ ಸಂಘಟನೆಗಳಾಗಿವೆ,ಇಲ್ಲವೇ ಮೂಲಭೂತವಾದಿ ಸಂಘಟನೆಗಳಾಗಿವೆ.

www.thepolitic.in

ಇಡೀ ರಾಜ್ಯದಲ್ಲಿ ಹಣದ ರಾಜಕೀಯ ನಡೆದರೆ, ಕರಾವಳಿಯ ಮಂಗಳೂರು – ಉಡುಪಿಯಲ್ಲಿ ಹೆಣದ ರಾಜಕೀಯ ನಡೆಯುತ್ತಿದೆ. ಇದಕ್ಕೆ ಕಾರಣ ಅಲ್ಲೊಂದು ಒಳ್ಳೆಯ ಪತ್ರಿಕೆ ಇಲ್ಲದ್ದು. ಲಿಂಗಾಯತರಿಗೆ ತನ್ನದೇ ಆದ ಒಂದು ಸಾಂಸ್ಕೃತಿಕ ಹಿನ್ನೆಲೆಯಿದೆ. ಆದರೂ ಇವತ್ತು ಲಿಂಗಾಯತರು ಸಾಂಸ್ಕೃತಿಕವಾಗಿ ಬಡಕಲಾಗಿದ್ದಾರೆ. ಇದಕ್ಕೆ ಕಾರಣ ಲಿಂಗಾಯತರಿಗೊಂದು ಪ್ರಾತಿನಿಧಿಕ ಸಂಸ್ಥೆ ಇಲ್ಲದ್ದು. ಇದ್ದಿದ್ದೇ ಆಗಿದ್ದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಲಿಂಗಾಯತರು ಇಷ್ಟೊಂದು ಬಡಕಲು ಆಗುತ್ತಿರಲಿಲ್ಲ. ಜಾತಿಯತೆ ಇಲ್ಲಿ ವಿಜೃಂಭಿಸುತ್ತಿರಲಿಲ್ಲ; ‘ಜಾತಿ ಶ್ರೇಷ್ಠತೆಯ ವ್ಯಸನ’ಕ್ಕೆ ಸಮುದಾಯ ಬಲಿಯಾಗುತ್ತಿರಲಿಲ್ಲ; ಸಮುದಾಯವೂ ಇಷ್ಟೊಂದು ರಾಜಕೀಯ ಅಜ್ಞಾನದಲ್ಲಿ ಇರುತ್ತಿರಲಿಲ್ಲ. ರಾಜಕೀಯ ನಡೆಯೂ ತಪ್ಪು ಹೆಜ್ಜೆಯಿಂದ ಕೂಡಿರುತ್ತಿರಲಿಲ್ಲ; ಮಠಗಳೂ ಉದ್ಯಮ ಕೇಂದ್ರಗಳಾಗುತ್ತಿರಲಿಲ್ಲ.

ಯಾವುದೇ ಒಂದು ಸಂಘಟನೆ ಬೆಳೆಯಬೇಕಾದರೆ ಅದಕ್ಕೊಂದು ಗಟ್ಟಿ ಸಿದ್ಧಾಂತ, ಸ್ಪಷ್ಟ ರಾಜಕೀಯ ನಿಲುವು, ಅದಕ್ಕೊಂದು ಗುರಿ, ಅದಕ್ಕೊಬ್ಬ ಬದ್ಧತೆಯ ನಾಯಕ ಮತ್ತು ತ್ಯಾಗಿಗಳಿಂದ ಕೂಡಿದ ಕಾರ್ಯಕರ್ತರ ಪಡೆ ಬೇಕು. ಆಗ ಮಾತ್ರ ಅದಕ್ಕೆ ವಿಶಾಲ ಜನಸಮುದಾಯದ ಬೆಂಬಲವೂ ಸಿಗುತ್ತದೆ. ಅದು ತನ್ನ ಗುರಿಯು ತಲುಪುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ಸಂಘಟನೆಗೆ ಅಕಾಲಿಕ ಮುಪ್ಪು ಆವಾರಿಸುತ್ತದೆ. ಮೂರು ಹೆಜ್ಜೆಯೂ ಮುಂದೆ ಹೋಗದೆ ಅದರ ಉಸಿರು ತನ್ನಿಂತಾನೇ ನಿಲ್ಲಿಸುತ್ತದೆ. ಅದರ ಕಳೆಬರಹ ಹೊತ್ತುಕೊಂಡು ಅದರ ನಾಯಕ ಅಥವಾ ಕಾರ್ಯಕರ್ತರಾದರೂ ಎಷ್ಟು ದಿನ ನಡೆದಾರು.   

ಇಡೀ ನಾಡಿನ – ಲಿಂಗಾಯತರ ಹಿತದೃಷ್ಟಿಯಿಂದ ಲಿಂಗಾಯತ ಸಮುದಾಯಕ್ಕೊಂದು ಪ್ರಾತಿನಿಧಿಕ ಸಂಘಟನೆಯ ಅವಶ್ಯಕತೆ ಇದೆ. ಜಾಗತಿಕ ಲಿಂಗಾಯತ ಮಹಾಸಭೆ ತನ್ನ ಪೊರೆಯನ್ನು ಕಳಚಿಕೊಂಡು, ಪಥವನ್ನು ಬದಲಾಯಿಸಿ ಇಡೀ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಯಾಗಿ ಇದು ಬೆಳೆಯುವುದೋ ಅಥವಾ ಮೂರು ಮುಕ್ಕಾಲು ವೇದಿಕೆ ಪ್ರಿಯ ವೈಟ್ ಕಾಲರ್ ಮೇಲ್ಜಾತಿ ಜನರಿಂದ ಕೂಡಿರುವ ಸಂಸ್ಥೆಯಾಗಿಯೇ ಉಳಿಯುವುದೋ ಕಾಲವೇ ನಿರ್ಧರಿಸುತ್ತದೆ. 

ಈ ಸಂಸ್ಥೆಯು ಒಳ್ಳೊಳ್ಳೆಯ ಪುಸ್ತಕಗಳನ್ನು ಪ್ರಕಟಿಸಿದ್ದು, ಇದರ ಮುಖಂಡ ಜಾಮದಾರ್ ಸಂದರ್ಭಕ್ಕೆ ಅನುಗುಣವಾಗಿ ಜಾತಿ ಮೀರಿ ಜಾತ್ಯಾತೀತವಾಗಿ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಸಂಘಟನೆಗೆ ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ ಅನಿವಾರ್ಯ ಆಗದಿರಲಿ.ಸಮುದಾಯದ ಎಲ್ಲಾ ಜಾತಿ – ಉಪಜಾತಿಯ ಜನರೇ ಇದರ ರಕ್ತ, ಮಾಂಸ, ಮೂಳೆ, ಎಲುಬು ಆಗಬೇಕು. ಆಗ ಮಾತ್ರ ಈ ಹೋರಾಟದ ರಥ ದಡಕ್ಕೆ ಸೇರಬಹುದು. ಬಹುತೇಕ ಲಿಂಗಾಯತರು ನಂಬಿ, ಆಶೆಗಣ್ಣಿನಿಂದ ಈ ಸಂಘಟನೆ ಕಡೆ ನೋಡುತ್ತಿದ್ದಾರೆ. ಜನರ ನಂಬಿಕೆಯೂ ಹುಸಿಯಾಗುವುದಿಲ್ಲ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!