ದ ಪಾಲಿಟಿಕ್

ಇದು ಹಗರಣ ಇಲ್ಲದ ಹಗರಣದ ವಿರುದ್ಧದ ಪಾದಯಾತ್ರೆ!

ದ ಪಾಲಿಟಿಕ್

ದ ಪಾಲಿಟಿಕ್

ತಮ್ಮ ನಾಲ್ಕು ದಶಕದ ರಾಜಕೀಯ ಬದುಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಿ ಜಮೀನು ಕಬಳಿಸಿಲ್ಲ, ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಿಲ್ಲ, ಸಾರ್ವಜನಿಕರ ಹಣ ಲೂಟಿ ಹೊಡೆದಿಲ್ಲ, ನೂರಾರು ಎಕರೆ ಜಮೀಲು ಖರೀದಿ ಮಾಡಿಲ್ಲ, ಸಾವಿರಾರು ಕೋಟಿ ಹಣ ಮಾಡಿಲ್ಲ. ಆದಾಗ್ಯೂ ಅವರನ್ನು ಸ್ವಜನಪಕ್ಷಪಾತಿ, ಮಹಾ ಭ್ರಷ್ಟ ಎಂದು ಬಿಂಬಿಸಲು ಬಿಜೆಪಿಯ ದೆಹಲಿ ಸರಕಾರ ಸರ್ಕಸ್‌ ಮಾಡುತ್ತಿದೆ. ರಾಜಕೀಯ ಸಂದ್ಯಾಕಾಲದಲ್ಲಿ ಅವರ ಮೇಲೆ ಕಪ್ಪು ಚುಕ್ಕೆ ಅಂಟಿಸಲು ಇನ್ನಿಲ್ಲದೇ ಯತ್ನಿಸುತ್ತಿದ್ದಾರೆ.

ಈ ಪಾದಯಾತ್ರೆಯ ರೂವಾರಿಗಳೆ ಮೋದಿ – ಶಾ ಎಂದು ಜನರು ಹಾದಿಬೀದಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ʼಸಿದ್ದರಾಮಯ್ಯ ಭ್ರಷ್ಟರಲ್ಲ. ಅವರು ಹಣದ ಹಿಂದೆ ಬಿದ್ದಿದ್ದರೆ ಅವರ ಬಳಿ ಸಾವಿರಾರು ಕೋಟಿ ಹಣ ಬಿದ್ದಿರುತ್ತಿತ್ತು. ಇಂತಹ ಹತ್ತಾರು ಬಡಾವಣೆಗಳು ಅವರೇ ಮಾಡುತ್ತಿದ್ದರುʼ ಎಂಬ ಮಾತು ಜೆಡಿಎಸ್‌ ಮತ್ತು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿವೆ.

ಸಿದ್ದರಾಮಯ್ಯ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿರುವ ಕುಮಾರಸ್ವಾಮಿ ಮತ್ತವರ ಕುಟುಂಬದ ವಿರುದ್ಧ ಚುನಾವಣೆ ಮುನ್ನ ಇದೇ ಬಿಜೆಪಿಯವರು ʼಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟʼ ಎಂಬ ತಲೆಬರಹ ಕೊಟ್ಟು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಮುಡಾದಲ್ಲಿ ಆ ಕುಟುಂಬ ಅಕ್ರಮವಾಗಿ ಹೊಡೆದುಕೊಂಡಿದ್ದ ನಿವೇಶನಗಳ ಬಗ್ಗೆ ಹಾಗೂ ಕುಮಾರಸ್ವಾಮಿ ಅವರು ಸಲ್ಲಿಸಿದ ಅರ್ಜಿ ಸಮೇತ ಪ್ರಕಟಣೆ ಮಾಡಿದ್ದರು. ಇಂದು ಅದೆಲ್ಲವೂ ಮರೆತ ಕುಮಾರಸ್ವಾಮಿ ದೆಹಲಿ ರಾಜಕಾರಣದ ಆದೇಶದಂತೆ ಸಿದ್ದರಾಮಯ್ಯನವರ ವರ್ಚಸ್ಸು ಮಸುಕಾಗಿಸಬೇಕೆಂಬ ಏಕೈಕ ಕಾರಣದಿಂದ ಬಿಜೆಪಿಗರ ಕೈಕೈಹಿಡಿದು ಹಗರಣ ಇಲ್ಲದ ಹಗರಣದ ವಿರುದ್ಧ  ʼಮೈಸೂರು ಚಲೇʼ ಪಾದಯಾತ್ರೆ ಮಾಡುತ್ತಿದ್ದಾರೆ.

ಸರಕಾರ ಹಳಿ ತಪ್ಪಿದಾಗ ಅಥವಾ ಭ್ರಷ್ಟಾಚಾರದಲ್ಲಿ ಮುಳುಗಿದಾಗ ಸರಕಾರದ ವಿರುದ್ಧ, ಮುಖ್ಯಮಂತ್ರಿ ವಿರುದ್ಧ ಒಂದು ಜವಾಬ್ದಾರಿಯುತ ವಿರೋಧ ಪಕ್ಷ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದು, ಅಹೋರಾತ್ರಿ ಧರಣಿ ನಡೆಸುವುದು, ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದು, ಜತೆಗೆ ಪಾದಯಾತ್ರೆ ಮಾಡಿ ಜನಾಭಿಪ್ರಾಯ ರೂಪಿಸುವುದ ಮತ್ತು ಸರಕಾರವನ್ನು ಸರಿದಾರಿಗೆ ತರಲು ಏನೇನು ಮಾಡಬೇಕು ಅದೆಲ್ಲವೂ ಮಾಡುವುದು ವಿರೋಧ ಪಕ್ಷದ ಕರ್ತ್ಯವ್ಯವಾಗಿದೆ.

ಅದು ಭ್ರಷ್ಟಾಚಾರ ನಡೆದಾಗ. ಆಡಳಿತ ಪಕ್ಷ ಹಳಿ ತಪ್ಪಿದಾಗ. ಆದರೆ ಈ ಮುಡಾ ಪ್ರಕರಣದಲ್ಲಿ ಯಾವ ಕೋನದಿಂದ ನೋಡಿದರೂ ಭ್ರಷ್ಟಾಚಾರ ನಡೆದಿದ್ದಾಗಲಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾಗಲಿ ಅಥವಾ ಸ್ವಜನಪಕ್ಷಪಾತ ಎಸಗಿದ್ದಾಗಲಿ ಮೇಲ್ನೋಟಕ್ಕಾಗಲಿ, ಒಳನೋಟಕ್ಕಾಗಲಿ ಏಲ್ಲಿಯೂ ‍ಏನೇನು ಕಾಣುಬರುತ್ತಿಲ್ಲ.

ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿ ಅವರಿಗೆ ಅವರ ತವರು ಮನೆಯವರು ದಾನಪತ್ರದ ಮೂಲಕ ೨೦೧೦ ರಲ್ಲಿ ಕೆಸರೆ ಗ್ರಾಮದ ಸ.ನಂ. 464 ರಲ್ಲಿ 03 ಎಕರೆ 16 ಗುಂಟೆ ಜಮೀನು ನೀಡಿದ್ದಾರೆ. ಅ ಜಮೀನನ್ನು ಮುಡಾದವರು ಪಾರ್ವತಿ ಅವರ ಗಮನಕ್ಕಾಗಲಿ ಅಥವಾ ಅವರ ಕುಟುಂಬದವರ ಗಮನಕ್ಕಾಗಲಿ ತರದೆ ಕಾನೂನುಬಾಹಿರವಾಗಿ ವಶಪಡಿಸಿಕೊಂಡು ಅಲ್ಲಿ  ʼದೇವನೂರುʼ ಎಂಬ ಬಡಾವಣೆ ನಿರ್ಮಿಸಿದೆ. ಇದು ಪಾರ್ವವತಿ ಅವರ ಗಮನಕ್ಕೆ ಬಂದು 2014 ಮತ್ತು 2021 ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಬದಲಿ ನಿವೇಶನ ನೀಡಬೇಕೆಂದು ʼಮುಡಾʼಕ್ಕೆ ಎರಡು ಬಾರಿ ಅವರು ಅರ್ಜಿ ಸಲ್ಲಿಸಿದ್ದಾರೆ. ಅವರು ಬದಲಿ ನಿವೇಶನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು ವಿನಾ ಯಾವ ಬಡಾವಣೆಯಲ್ಲಿ ನೀಡಬೇಕು ಅಥವಾ ಇಂತಹದ್ದೇ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂದು ಅವರೇನು ಅರ್ಜಿಯಲ್ಲಿ ಕೇಳಿಕೊಂಡಿಲ್ಲ.

ಅವರ ಅರ್ಜಿಯನ್ನು ಪರಿಗಣಿಸಿ ಮುಡಾ ಆಡಳಿತ ಮಂಡಳಿ 2021 ರಲ್ಲಿ  ಬಿಜಿಪಿ ಸರಕಾರವಿದ್ದಾಗಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರವಧಿಯಲ್ಲಿ ʼವಿಜಯನಗರ ಬಡಾವಣೆʼಯಲ್ಲಿ 14 ನಿವೇಶನಗಳು ನೀಡಿದೆ. ಆಗ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದರು. ಅಂದಮೇಲೆ ಇಲ್ಲಿ ಸ್ವಜನಪಕ್ಷಪಾತದ ಮಾತು, ಅಧಿಕಾರ ದುರ್ಬಳಿಕೆಯ ಪ್ರಶ್ನೆ ಎಲ್ಲಿಂದ ಬರುತ್ತದೆ? ಅವರು ಮುಡಾ ಅಧಿಕಾರಿಗಳಿಗೆ ʼನಮಗೆ ವಿಜಯನಗರ ಬಡಾವಣೆಯಲ್ಲೇ ನಿವೇಶನ ನೀಡಿʼ ಎಂದು ಅವರು ಆದೇಶ ಮಾಡಿದ್ದಾರೆಯೇ? ಅಥವಾ ಮೌಖಿಕವಾಗಿ ತಾಕೀತು ಮಾಡಿದ್ದಾರೆಯೇ? ಎಲ್ಲಿಯಾದರೂ ಸಹಿ ಹಾಕಿದ್ದಾರಾ? ಒಂದಾದರೂ ಯಾವುದಾದರೂ ಸಾಕ್ಷಿಯಾಗಲಿ, ಸಾಕ್ಷ್ಯವಾಗಲಿ ಇವೆಯೇ? ಏನು ಇಲ್ಲ. ಆದರೂ ಸಿದ್ದರಾಮಯ್ಯನವರು ಪರಮ ಭ್ರಷ್ಟರು ಎಂದು ಹಾದಿಬೀದಿಯಲ್ಲಿ ತಮಟೆ ಭಾರಿಸುತ್ತಾ ಸಾರುತ್ತಿದ್ದಾರೆ.

ಇವರ ಪ್ರಕಾರ 2010 ರಿಂದ ಸಿದ್ದರಾಮಯ್ಯ ಮತ್ತವರ ಕುಟುಂಬದವರು ಈ ಹದಿನಾಲ್ಕು ನಿವೇಶನ ಪಡೆಯಲು 11 ವರ್ಷಗಳ ಕಾಲ ಹೊಂಚುಹಾಕಿ ಕೂತಿದ್ದಾರೆ! ಅದು 20 -30 ಕೋಟಿ ಮೌಲ್ಯದ ನಿವೇಶನಗಳಿಗಾಗಿ ಜಾತಕ ಪಕ್ಷಿಯಂತೆ ಕಾಯ್ದಿದ್ದಾರೆ. ಈ ಮಾತು ಹೇಳಿದರೆ ಜನ ನಗುತ್ತಾರೆ. ವಾಸ್ತವ ಸತ್ಯ ಬಚ್ಚಿಟ್ಟು, ಸುಳ್ಳನ್ನು ತಲೆಮೇಲೆ ಹೊತ್ತುಕೊಂಡು ನಡೆಸುತ್ತಿರುವ ಈ ಹೋರಾಟ – ಹಾರಾಟ ಕಾನುನಿನದಾಗಲಿ ಅಥವಾ ನೈತಿಕ ಬಲ ಇದೆಯೇ? ನಗೆಪಾಟಲಿಗೆ ಗುರಿಯಾಗಿ ಅದು ಠುಸ್‌ ಅನ್ನುತ್ತಿದೆ.  ಇದೊಂದು ರಾಜಕೀಯ ಪ್ರಹಸನ ಅಷ್ಟೇ.

ಈ ಹಿಂದೆ ಇದೇ ಟೀಂ ಯಡಿಯೂರಪ್ಪ ವಿರುದ್ಧ ಮಸಲತ್ತು ನಡೆಸಿ ಅವರನ್ನು ಅಧಿಕಾರದಿಂದ ಕೇಳಗೆ ಇಳಿಸಿತು. ಆಗಾದರೂ ಅವರ ವಿರುದ್ಧ 17 ಆರೋಪಗಳು, ಎಲ್ಲಕ್ಕಿಂತ ಹೆಚ್ಚಾಗಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ʼಲೋಕಾಯುಕ್ತ ವರದಿʼ ಇತ್ತು. ಆದರೀಗ ಯಾವುದೇ ತನಿಖಾ ಸಂಸ್ಥೆಗಳ ವರದಿಯಾಗಲಿ, ಪೊಲೀಸ್‌ ರಿಪೋರ್ಟ್‌ ಆಗಲಿ ಅಥವಾ ಬಲವಾದ ಸಾಕ್ಷ್ಯವಾಗಲಿ ಇಲ್ಲ. ಬರೀ ಗುಮಾನಿಗಳ ಆಧಾರದಲ್ಲಿ ಒಂದು ಖಾಸಗಿ ದೂರನ್ನು ಆಧರಿಸಿ ಕೇಂದ್ರದ ಕೈಗೊಂಬೆಯಾಗಿ, ಬಿಜಿಪಿ ಪ್ರತಿನಿಧಿಯಂತೆ ವರ್ತಿಸುತ್ತಿರುವ ರಾಜ್ಯಪಾಲರು ʼನಿಮ್ಮ ವಿರುದ್ಧ ಕ್ರೀಮಿನಲ್‌ ಪ್ರಕರಣ ದಾಖಲಿಸಲು ]ಪ್ರಾಸಿಕ್ಯೂಶನ್‌ಗೆ] ಯಾಕೆ ಅನುಮತಿ ನೀಡಬಾರದುʼ ಎಂದು ಕಾರಣ ಕೇಳಿ, ಉತ್ತರಕ್ಕಾಗಿ ಏಳು ದಿನದ ಗಡುವು ನೀಡಿ ಒಂದು ಚುನಾಯಿತ ಸರಕಾರದ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ನೀಡುತ್ತಾರೆ. ಅದು ಖಾಸಗಿ ದೂರು ಬಂದ ಮಾರನೇ ದಿನವೆ!

ಈಗಾಗಲೇ ಕರ್ನಾಟಕ ಸರಕಾರ ಈ ಪ್ರಕರಣದವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ.  ನಿವೃತ್ತ ನ್ಯಾಯಮೂರ್ತಿ ಪಿ ಎನ್‌ ದೇಸಾಯಿ ಅವರ ನೇತೃತ್ವದ ‍ಏಕಸದ್ಯಸ ವಿಚಾರಣಾ ಆಯೋಗ ರಚನೆ ಮಾಡಿ, ಆರು ತಿಂಗಳಲ್ಲಿ ವರದಿ ಸಲ್ಲಿಸಲು ಕಾಲಮೀತಿ ನಿಗದಿಪಡಿಸಿದೆ. ಆದಾಗ್ಯೂ ರಾಜ್ಯಪಾಲ ಥಾಮರ್‌ ಚಂದ್‌ ಗೆಹ್ಲೋಟ್‌ ಅವರು ಇಷ್ಟೊಂದು ತರಾತುರಿ ಯಾಕೆ ಮಾಡುತ್ತಿದ್ದಾರೆ? ಅವರಿಗೆ ಇಷ್ಟೊಂದು ಅವಸರ ಯಾಕಿದೆ? ಮಾನ್ಯ ರಾಜ್ಯಪಾಲರಿಗೆ ನ್ಯಾಯಾಂಗ ತನಿಖೆಯ ಮೇಲೂ ನಂಬಿಕೆ ಇಲ್ಲವೇ?

ದೆಹಲಿ ಸರಕಾರ ರಾಜ್ಯಪಾಲರನ್ನು ದಾಳವಾಗಿ ಬಳಸಿಕೊಂಡು ಬಿಜೆಪಿಯೇತರ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜ್ಯ ಸರಕಾರಗಳ  ಜನಪ್ರಿಯ ಮುಖ್ಯಮಂತ್ರಿಗಳ ವಿರುದ್ಧ ಮಸಲತ್ತು – ಷಡ್ಯಂತ್ರ್ಯ ನಡೆಸುತ್ತಿರುವ ಸಂಗತಿ ಗುಟ್ಟಾಗೇನು ಉಳಿದಿಲ್ಲ. ಅದು ಈಗಾಗಲೇ ಜಗಜ್ಜಾಹೀರಾಗಿದೆ. ಅದರ ಮುಂದುವರೆದ ಭಾಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಯುತ್ತಿದೆ.

ಈ ಹಿಂದೆ ದೆಹಲಿಯ ಯಜಮಾನಿಕೆ ರಾಜಕಾರಣ 1980 ರಲ್ಲಿ ದೇವರಾಜ ಅರಸರನ್ನು ಹಾಗೂ 1992 ಎಸ್‌ ಬಂಗಾರಪ್ಪ ಅವರನ್ನು ಮಸಲತ್ತು ಮಾಡಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಅವರ ರಾಜಕೀಯ ಬದುಕು ಮಸುಕಾಗಿಸಿ ಅವರನ್ನು ರಾಜಕಾರಣದಿಂದ ಗೇಟ್‌ ಪಾಸ್‌ ನೀಡಿತು. ಆಗ ಸ್ವಪಕ್ಷದ ದಿಲ್ಲಿ ದೊರೆಗಳು ತಮ್ಮ ಕೈಚಳಕ ತೋರಿಸಿದರಿ.  ಈಗ ಯಜಮಾನಿಕೆಯ ರಾಜಕಾರಣದ ವಾರಸುದಾರರಾದ ವಿರೋಧ ಪಕ್ಷದವರು ಕುತಂತ್ರ ಹೆಣೆದಿದ್ದಾರೆ. ಸೂತ್ರದಾರರು ಬೇರೆ ಬೇರೆ ಇರಬಹುದು. ಉದ್ದೇಶ – ಯೋಚನೆ ಒಂದೇ ಇವೆ.  

ಈ ದೇಶದಲ್ಲಿ ದಲಿತ – ಹಿಂದುಳಿದ ಸಮುದಾಯದ ರಾಜಕಾರಣಿಗಳು ಅಧಿಕಾರದ ಗದ್ದುಗೆ ಹತ್ತಬಾರದು. ಹತ್ತಿದ್ದರು ತಮ್ಮ ಅಣತಿಯಂತೆ ಆಳ್ವಿಕೆ ನಡೆಸಬೇಕು ಎಂಬ ಮನಸ್ಥಿತಿ ಬದಲಾಗಲೇ ಇಲ್ಲ. ಈಗಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಜಾರ್ಖಂಡ್‌ ಸಿಎಂ ಹೇಮಂತ ಸೋರೆನ್‌ ಅವರ ವಿರುದ್ಧ ಪಿತೂರಿ ಮಾಡಿ ಅವರನ್ನು ಜೈಲಿಗೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಜಮಾನಿಕೆ ರಾಜಕಾರಣಕ್ಕೆ ತಡೆವೊಡ್ಡದಿದ್ದರೇ ಈ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಗೆ ಅಪಾಯ ತಪ್ಪಿದಲ್ಲ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!