ದ ಪಾಲಿಟಿಕ್

ಯತ್ನಾಳ್ ಬಿಜೆಪಿ ಪಕ್ಷದ ಮಿತ್ರನೋ?, ಶತ್ರುವೋ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಮಾತೆತ್ತಿದರೆ ನಮ್ಮದು ಬಹು ಶಿಸ್ತಿನ ಪಕ್ಷ. ವ್ಯಕ್ತಿಗಿಂತ ಪಕ್ಷಮುಖ್ಯ, ಪಕ್ಷಕ್ಕಿಂತ ಸಿದ್ಧಾಂತ ಮುಖ್ಯವೆಂದು ಬಡಬಡಿಸುವ ಭಾಜಪದ್ದು ಬರೀ ಬಾಯುಪಚಾರದ ಮಾತು. ಕೆ.ಎಸ್. ಈಶ್ವರಪ್ಪ ‘ನನಗೆ ಮತ್ತೆ ಮಂತ್ರಿ ಪದವಿ ನೀಡದಕ್ಕೆ, ನಾನು ಬೆಳಗಾವಿಯ ಸದನದ ಕಲಾಪದಿಂದ ದೂರ ಇರ್ತೀನಿ’ ಎಂದು ಬಹಿರಂಗವಾಗಿ ಹೇಳುತ್ತಾರೆ. ಸದನಕ್ಕೆ ಗೈರು ಹಾಜರಿ ಹಾಕುವ ಮೂಲಕ ಇದೇ ಸಂದೇಶ ಮುಖ್ಯಮಂತ್ರಿಗಳಿಗೆ ರಮೇಶ್ ಜಾರಕಿಹೊಳಿ ಸಹ ಕಳುಹಿಸುತ್ತಿದ್ದಾರೆ. ಇವರ ಮೇಲೆ ಒಂದು ನೋಟೀಸ್ ಸಹ ಜಾರಿ ಮಾಡುವ ದಮ್ಮು, ತಾಕತ್ತು ಪಕ್ಷಕ್ಕೂ ಇಲ್ಲ, ಪಕ್ಷದ ಮೂಲ ಮಠಕ್ಕೂ (ಸಂಘಪರಿವಾರ) ಇಲ್ಲ. 

ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ, ಮುಖ್ಯಮಂತ್ರಿಯ ಪ್ರಬಲ ಆಕಾಂಕ್ಷಿ ಯತ್ನಾಳ್ ಬೆಳಿಗ್ಗೆಯಿಂದ ಸಂಜೆಯವರೆಗೆ ಯಡ್ಡಿಯೂರಪ್ಪ, ಅವರ ಕುಟುಂಬ ಹಾಗೂ ಅವರ ಟೀಂ ಮೇಲೆ ಮುಗಿಬೀಳುವುದಕ್ಕೆ ಪಾರ್ಟಿ ಹೈಕಮಾಂಡ್ ಸಪೋರ್ಟ್ ಇದೆ. ಪಕ್ಷದ – ಸಂಘದ ಬೆಂಬಲ ಇಲ್ಲದೆ ಯಃಕಶ್ಚಿತ್ ಯತ್ನಾಳ್ ಯಡ್ಡಿಯೂರಪ್ಪ ಮೇಲೆ ಬೆಂಬಿಡದೆ ಮುಗಿಬೀಳಲು ಅಸಾಧ್ಯ. ಇದು ಯಡಿಯೂರಪ್ಪಗೂ ಗೊತ್ತು, ರಾಜಕೀಯ ವ್ಯಾಕರಣ ಗೊತ್ತಿರುವ ಎಲ್ಲರಿಗೂ ಗೊತ್ತು. 

ಈಗ ಯಡಿಯೂರಪ್ಪ ಮೇಲಷ್ಟೇ ಮುಗಿಬೀಳದೆ ಎಲ್ಲೆಲ್ಲೂ ಬಾಯಿಹಾಕುತ್ತಿದ್ದಾರೆ. ಇವರನ್ನು ತಡೆಯುವ ಗೋಜಿಗೆ ಮಾತ್ರ ಯಾರೂ ಮುಂದಾಗುತ್ತಿಲ್ಲ. ಇವರ ಉಡಾಫೆಯ ಮಾತುಗಳು ಕೆಲಸಲ ಹೈಕಮಾಂಡಿಗೆ ಮುಜುಗರಕ್ಕೆ ದೂಡಿದೆ. ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ಹೊರತು ಪಡಿಸಿ ಇವರು ಯಾರ ಮೇಲಾದರೂ ಯಾವಾಗ ಬೇಕಾದರೂ ಮುಗಿಬೀಳಬಹುದೆಂದು ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಅದು ನಿಜವೂ ಇರಬಹುದು. ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ಮೇಲೆ ಅಗತ್ಯಕ್ಕಿಂತ ತುಸು ಜಾಸ್ತಿಯೇ ಪ್ರೀತಿಯಿದೆ. ಇವರಿಬ್ಬರ ಬಗ್ಗೆ ಬಹಿರಂಗವಾಗಿ ಹಗುರವಾಗಿ ಮಾತನಾಡಿದ್ದು ತೀರಾ ಕಡಿಮೆ. ಇಲ್ಲವೇ ಇಲ್ಲ ಎನ್ನಬಹುದು. 

www.thepolitic.in

ಯತ್ನಾಳ್ ಉಡಾಫೆಯ ಮಾತುಗಳು ಪಕ್ಷಕ್ಕೆ ಅನೇಕಾನೇಕ ಸಲ ಮುಜುಗರ – ಸಂಕಷ್ಟಕ್ಕೆ ಸಿಲುಕಿಸಿದೆ. ಆದರೂ ಏನೂ ಮಾಡದ ಸ್ಥಿತಿಯಲ್ಲಿ ಪಕ್ಷವಿದೆ. ಅದಕ್ಕೆ ಕಾರಣ : ಒಂದು, ಯತ್ನಾಳ್ ಪಂಚಮಸಾಲಿ ಲಿಂಗಾಯತ ಸಮಾಜದ ನಾಯಕ. ಈಗ ಪಂಚಮಸಾಲಿ ಸಮುದಾಯ ಮಿಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಂಡರೆ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಶತಸಿದ್ಧ ಎನ್ನುವ ಪಕ್ಷದ ರಾಜಕೀಯ ಲೆಕ್ಕಾಚಾರ. ಮತ್ತೊಂದು, ಪಕ್ಷದಿಂದ ಅವಮಾನ – ಅನ್ಯಾಯಕ್ಕೆ ಒಳಗಾಗಿ ಸಿಟ್ಟಿನಿಂದ ಧಗಧಗನೆ ಉರಿಯುತ್ತಿರುವ ಯಡಿಯೂರಪ್ಪ ಪಕ್ಷದ ಮೇಲೆ ಭುಸುಗುಟ್ಟುವ ಸೂಚನೆ ಸಿಕ್ಕಾಗ ಅಥವಾ ಭುಸುಗುಟ್ಟಿದಾಗಲೆಲ್ಲ ಯತ್ನಾಳರನ್ನು ಯಡಿಯೂರಪ್ಪ ಮೇಲೆ ದಾಳಿಗೆ ಇಳಿಸುವುದು. ಈ ಕಾರಣಕ್ಕಾಗಿಯೇ ಯತ್ನಾಳರನ್ನು ಪಕ್ಷದಿಂದ ಗೇಟ್ ಪಾಸ್ ನೀಡದೆ, ಸೂಕ್ತ ಸಂದರ್ಭಕ್ಕಾಗಿ ಕಾದು ನೋಡುತ್ತಿದೆ. ಇವರನ್ನು ಪಕ್ಷದಿಂದ ಗೇಟ್ ಪಾಸ್ ನೀಡಲು ಅಸಾಧ್ಯ. ಇವರನ್ನು ಹಿಂದುತ್ವದ ಬ್ರಾಂಡ್ ಅಂಬಾಸಿಡರಾಗಿ ಬೆಳೆಸಿ ಮುಂದೆ ಮುಖ್ಯಮಂತ್ರಿ ಮಾಡುತ್ತಾರೆಂದು ಯಾರಾದರೂ ನಂಬಿದರೆ ಅದು ಅವರ ಮುಗ್ಧತೆ ಎಂದು ಹೇಳಬೇಕಾಗುತ್ತದೆ. 

ಪಂಚಾಮಸಾಲಿ ಸಮುದಾಯ ಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮಣೆ ಹಾಕುತ್ತದೆ ಎನ್ನುವುದರ ಮೇಲೆ ಯತ್ನಾಳ್ ಬಿಜೆಪಿಯ ಮಿತ್ರನೋ ಅಥವಾ ಶತ್ರುವೋ ಎನ್ನುವುದು ನಿರ್ಧಾರ ಆಗುತ್ತದೆ‌. ಚುನಾವಣೆ ಫಲಿತಾಂಶ ಏನೇ ಬರಲಿ ಪಕ್ಷಕ್ಕೆ ತಲೆನೋವಾಗಿರುವ ಯತ್ನಾಳ್ ತಮ್ಮ ಮಾತಿಗೆ ಲಗಾಮು ಹಾಕದಿದ್ದರೆ ಪಕ್ಷ ಗೇಟ್ ಪಾಸ್ ನೀಡುವುದು ಶತಸಿದ್ಧ. ಇದರಿಂದ ಪಕ್ಷಕ್ಕೂ, ಯತ್ನಾಳಿಗೂ ಇಬ್ಬರಿಗೂ ಹಾನಿಯಿದೆ‌. ಆದರೂ ಪಕ್ಷ ಈ ತೀರ್ಮಾನ ಕೈಗೊಳ್ಳುತ್ತದೆ. ದೊಡ್ಡ ದನಿಯಲ್ಲಿ ಮಾತನಾಡುವವರಿಗೆ ಅಲ್ಲಿ ಯಾವುದೇ ಜಾಗವಿಲ್ಲ. ಅಲ್ಲಿ ನೆಲೆಯಿರುವುದು ಜೀಹುಜೂರ್ ಸಂಸ್ಕೃತಿಗೆ ಹೊಂದಿಕೊಂಡವರಿಗೆ ಮಾತ್ರ. ಯಡಿಯೂರಪ್ಪಗೆ ಮನೆದಾರಿ ತೋರಿಸಿರುವ ಭಾಜಪದ ಹೈಕಮಾಂಡಿಗೆ ಯತ್ನಾಳ್ ಯಾವ ಲೆಕ್ಕ!

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!